ಬ್ಯಾಸಗಿ ರಜಾ ಮುಗಿದು ಮತ್ತ ಶಾಲಿ ಶುರುವಾದ್ವು. ಇಷ್ಟು ದಿನದ ರಜೆಯ ಮಜಾ ಅನುಭವಿಸಿದ ಮಕ್ಕಳಿಗೆ ಶಾಲೆಗೆ ಹೋಗಲಿಕ್ಕೆ ಎನೊ ಒಂದು ಹುರುಪು ಇರ್ತದ. ಹೊಸಾ ಪುಸ್ತಕ, ಹೊಸಾ ಬ್ಯಾಗು, ಮತ್ತ ಇಷ್ಟು ದಿನ ಬಿಟ್ಟ ಇದ್ದ ಗೆಳೆಯ/ಗೆಳತಿಯರನ್ನ ನೋಡೊ ಕಾತುರ, ಸೂಟಿಯೊಳಗ ತಾವು ಏನೆನೆಲ್ಲ ನೋಡಿದ್ದು, ಆಟ ಆಡಿದ್ದು ಎಲ್ಲ ಸುದ್ದಿಯನ್ನು ಸ್ನೇಹಿತರ ಮುಂದ ಹೇಳ್ಕೊಳ್ಳೊ ಕಾತುರ ಇರ್ತದ.
ಆದ್ರ ಈಗಿನ ಮಕ್ಕಳಿಗೆ ರಜೆನು ಸಜೆ ಹಂಗಿರ್ತದ ಅಂತ ನಂಗ ಅನಿಸ್ತದ. ನಾ ಭಾಳ ಕಡೆ ನೋಡೆನಿ. ರಜಾ ಬಂತಂದ್ರ ಮಕ್ಕಳು ಹಿಂದ ಕಲಿತದ್ದ ಎಲ್ಲ ಮರೆತು ಬಿಡ್ತಾವ ಅಂತ, ಇಲ್ಲಾ ಬಿಸಲಾಗ ಹೊರಗ ಆಟಾ ಆಡ್ತಾವ ಅಂತ, ಅಥವಾ ಮುಂದಿನ ವರ್ಷದ್ದ ಸಿಲ್ಯಾಬಸ್ ಗೆ ಈಗಿಂದ ಟ್ಯೂಷನ್ ಕೊಡಿಸಿದ್ರ ಶಾಲ್ಯಾಗ ಎಲ್ಲಾರಕಿಂತ ಹೆಚ್ಚಿಗಿ ಮಾರ್ಕ್ಸ ತಗಿಬಹುದು ಅಂತ ಮಕ್ಕಳುನ್ನ ೨ ತಿಂಗಳ ಸೂಟಿಯೊಳಗ ಮತ್ತ ಒಯ್ದು ಕೋಚಿಂಗ್ ಕ್ಲಾಸಿಗೆನ ತುರುಕತಾರ. ಇದರಿಂದ ಮಕ್ಕಳ ಸಂವಹನಶೀಲತೆ ಮತ್ತ ಮಾನಸಿಕ ವಿಕಾಸಕ್ಕ ಧಕ್ಕೆ ಉಂಟಾಗ್ತದ. ಮಕ್ಕಳು ಹೂವಿನಂಗ ಇರ್ತಾರ, ಅವರಿಗೆ ಒಂದು ಮುಕ್ತವಾದ, ಆರೋಗ್ಯಕರವಾದ ವಾತಾವರಣವನ್ನ ಕಲ್ಪಿಸಿ ಅರಳಲಿಕ್ಕೆ ಅನೂಕೂಲ ಮಾಡಿಕೊಡಬೇಕೆ ಹೊರತು ಒತ್ತಡ ಹೇರಿ ಮುದುಡಲಿಕ್ಕೆ ಬಿಡಬಾರದು. ಇಗಿನ ತಂದಿ-ತಾಯಿಗೊಳು ಇಂಥಾ ಕಠೋರ ನಿರ್ಧಾರ ಯಾಕ ತಗೊತಾರೊ ಗೊತ್ತಿಲ್ಲ. ಎಲ್ಲ ಮಕ್ಕಳಿಗೂ ತಮ್ಮದೇ ಆದ ಒಂದು ಭೌಧ್ಧಿಕ ಮಟ್ಟ ಇರ್ತದ. ಅದನ್ನ ಮೀರಿ ನಾವು ಅವರಿಗೆ ಓದು ಬರೆ, ಅತೀ ಹೆಚ್ಚು ಮಾರ್ಕ್ಸ ತಗೊ ಅಂತ ಒತ್ತಡ ಹಾಕಿದ್ರ ಇದ್ದಷ್ಟು ಬುದ್ಧಿಯನ್ನ, ಆತ್ಮವಿಶ್ವಾಸವನ್ನ ಕಳಕೊಂಡು ಮಾನಸಿಕ ರೋಗಿಗಳಾಗೊ ಸಾಧ್ಯತೆನ ಜಾಸ್ತಿ ಇರ್ತದ. ಈ ಕಾರಣಕ್ಕಾಗಿನ ವಿದ್ಯಾರ್ಥಿಗಳ ಆತ್ಮಹತ್ಯೆಯ ಪ್ರಕರಣಗೊಳು ನಡಿತಾನ ಇರ್ತಾವ. ಇದಕ್ಕೆ ಹೆತ್ತವರು ಮತ್ತ ಮನಿಯೊಳಗ ನಾವು ಮಕ್ಕಳಿಗೆ ಕಲ್ಪಿಸಿಕೊಡೊ ವಾತಾವರಣನ ಜವಾಬ್ದಾರಿ ಆಗಿರ್ತದ.
ಇಲ್ಲೆ ಹೆತ್ತವರು ತಾವು ತಮ್ಮ ಮಕ್ಕಳನ್ನ ಬುದ್ಧಿವಂತರನ್ನಾಗಿ ಮಾಡುವ ಆಸೆ ತಪ್ಪು ಅಂತ ಹೇಳಲಿಕತ್ತಿಲ್ಲ. ಆದ್ರ ಅದಕ್ಕಾಗಿ ಅನುಸರಿಸೊ ಪ್ರಯತ್ನಗಳು ಎಷ್ಟರ ಮಟ್ಟಿಗೆ ತಮ್ಮ ಮಕ್ಕಳ ಗುಣಧರ್ಮಕ್ಕ ಸಮರ್ಪಕವಾಗಿ ಕೆಲಸ ಮಾಡ್ತದ ಅನ್ನೊದು ಮುಖ್ಯವಾಗಿ ಗಮನಿಸಬೇಕು.
ನಾವು ಸಣ್ಣವರಿದ್ದಾಗ ಈ ಬ್ಯಾಸಿಗೆ ರಜಾನ ಭಾಳ ಛಂದ ಅನುಭವಿಸ್ತಿದ್ವಿ. ಸೂಟಿಗೆಂತ ಬಂದಿದ್ದ ಆಜುಬಾಜು ಮನಿಯೊಳಗಿನ ಹುಡುಗುರೆಲ್ಲ ಸೇರಿ ಮಸ್ತ ಧಾಂದಲೆ ಹಾಕತಿದ್ವಿ. ಮಧ್ಯಾಹ್ನ ಎಲ್ಲಾರು ಮಲ್ಕೊಂಡಾಗ ಕಂಪೌಂಡ ಕಂಪೌಂಡ ಅಡ್ಯಾಡಿ ಮಾವಿನ ಕಾಯಿ ಕಳು ಮಾಡಿ ಉಪ್ಪು ಖಾರಪೂಡಿ ಹಚ್ಚಿ ತಿನ್ನೊ ಮಜಾ ಅಂತು ಮಸ್ತ ಇರ್ತಿತ್ತು. ನಮ್ಮಜ್ಜಿ ಊರೊಳಗ ಪ್ರತಿವರ್ಷ ಬ್ಯಾಸಿಗಿ ರಜಾ ಬಂತಂದ್ರ ಶೀಬಿರ ನಡೆಸ್ತಿದ್ರು. ಅಲ್ಲೆ ನಮಗೆಲ್ಲ ಯಾವುದರೊಳಗ ಆಸಕ್ತಿ ಅದನೊ ಅದನ್ನ ಮಾಡಲಿಕ್ಕೆ ಮುಕ್ತವಾದ ಅವಕಾಶ ಇರ್ತಿತ್ತು. ಇದನ್ನೆ ಮಾಡಬೇಕು, ಅದನ್ನೆ ಮಾಡಬೇಕು ಅನ್ನೊ ಯಾವ ನಿಭಂಧನೆ ಇರ್ತಿದ್ದಿಲ್ಲ. ಆ ಶೀಬಿರದೊಳಗ ಅನೇಕ ವಿಭಾಗಗೊಳು ಇರ್ತಿದ್ವು. ಅಂದ್ರ ಚಿತ್ರಕಲೆ, ನಿಭಂಧ ಲೇಖನ, ಸಂಗೀತ, ಕರಕುಶಲ ಕಲೆ, ಬಣ್ಣದ ಹಾಳೆಗಳಿಂದ ವಿಧವಿಧ ವಿನ್ಯಾಸದ ಡಿಸೈನ್ ಮಾಡೊದು, ಮಣ್ಣಿನಿಂದ ಗೊಂಬೆ ಮತ್ತ ಆಟಿಗೆ ಸಾಮಾನು ತಯಾರ ಮಾಡಿ ಬಣ್ಣ ಹಚ್ಚೊದು, ಕಸೂತಿ ಕಲೆ, ಒಳಾಂಗಣ, ಮತ್ತ ಹೊರಾಂಗಣ ಆಟಗೊಳು, ನೃತ್ಯ ಕಲೆ, ನಾಟಕ, ಓದುವ ಆಸಕ್ತಿ ಇದ್ದವರಿಗೆ ಪುಟ್ಟದೊಂದು ಲೈಬ್ರರಿ, ಕಥೆಗಳನ್ನ ಹೇಳುವ ಕೇಳುವ ವಿಭಾಗ, ಮತ್ತ ಬ್ಯಾರೆ ಬ್ಯಾರೆ ಬೀಜಗಳನ್ನ ತಂದು ಮಣ್ಣಿನ ಮಡುಗಳನ್ನ ಮಾಡಿ ಬಿತ್ತಿ ಸಸಿಗಳನ್ನ ಬೆಳೆಸೊದು, ಹೂವಿನ ಗಿಡಗಳನ್ನ ಬೆಳೆಸಿ ತೋಟಗಾರಿಕೆ ಮಾಡೊದು, ಪೇಂಟಿಂಗ್ ಮಾಡುವುದು, ಅಥವಾ ಓದಿನಲ್ಲೆ ಆಸಕ್ತಿ ಇದ್ದ ಮಕ್ಕಳಿಗೆ ಮುಂದಿನ ವರ್ಷದ ಪಾಠಗಳನ್ನ ತಿಳಿಸಿಕೊಡೊದು ಹಿಂಗ ಹತ್ತು ಹಲವಾರು ಚಟುವಟಿಕೆಗೊಳು ಇರ್ತಿದ್ವು. ಯಾರಿಗು ಯಾವ ಪ್ರಕಾರದ ಒತ್ತಾಯದ ಹೇರುವಿಕೆ ಇರ್ತಿದ್ದಿಲ್ಲ. ನಮಗ ಆಸಕ್ತಿ ಇದ್ದ ವಿಭಾದೊಳಗ ನಾವು ಹೋಗಿ ನಮಗಿಷ್ಟವಾದ ಚಟುವಟಿಯೊಳಗ ಭಾಗವಹಿಸಬಹುದಿತ್ತು. ಇಡಿ ದಿನ ಹೆಂಗ ಕಳಿತಿತ್ತೊ ಗೊತ್ತಾಗ್ತಿದ್ದಿಲ್ಲ. ಇವೆಲ್ಲಾದರ ಜೊತಿಗೆ ನಮಗ ಒಳ್ಳೆಯ ನಡತೆ, ಪರಸ್ಪರ ಗೌರವಾದರಗಳಿಂದ ನಡಕೊಳ್ಳೊದು, ಹಿರಿಯರಲ್ಲಿ ಗೌರವ, ಕಿರಿಯರೊಂದಿಗೆ ಪ್ರೀತಿ ಅಂತಃಕರಣದಿಂದ ನಡೆದುಕೊಳ್ಳುವ, ಪರಸ್ಪರ ಸಹಾಯ, ಸಹಕಾರವನ್ನ ಬೆಳೆಸಿಕೊಳ್ಳುವ ಬಗ್ಗೆ ನೀತಿ ಪಾಠಗಳನ್ನ ಕಥೆಗಳ ಮೂಲಕ ಹೇಳಿಕೊಡ್ತಿದ್ರು. ಆಟದೊಳಗನ ಪಾಟವನ್ನು ಕಲಿಸೊ ವ್ಯವಸ್ಥೆ ಆ ಶೀಬಿರದೊಳಗಿತ್ತು. ಶೀಬಿರ ಕೊನೆಗೊಳ್ಳೊ ಹೊತ್ತಿನ್ಯಾಗ ಎಲ್ಲರನ್ನು ಯಾವುದಾದರೊಂದು ಪ್ರವಾಸಿ ಸ್ಥಳಕ್ಕ ಕರೆದೊಯ್ಯತಿದ್ರು. ಈಗ ಮರೆತು ಹೋಗಿರುವ ಆಟಗಳಾದ ಹಾಡಿನ ಬಂಡಿ (ಅಂತ್ಯಾಕ್ಷರಿ), ಮತ್ತ ಲಡ್ಡು ಲಡ್ಡು ತಿಮ್ಮಯ್ಯ ಗಿಡ ಮಂಗ್ಯಾ ಆಟಗಳನ್ನ ಆಡಿ ನಕ್ಕು ನಲಿತಿದ್ವಿ.
ಶಿಬಿರ ಮುಗಿಯೊ ಮುಂದ ಅಷ್ಟು ದಿನ ನಾವು ಏನೇನ ಕಲಿತಿದ್ವಿ ಅದರ ಪ್ರತಿಭಾ ಪ್ರದರ್ಶನ ಇಡ್ತಿದ್ರು. ಯಾರಿಗು ಮೊದಲ, ದ್ವೀತಿಯ ಬಹುಮಾನಗಳೇನು ಇರ್ತಿದ್ದಿಲ್ಲ. ಎಲ್ಲರಿಗೂ ಸರಿ ಸಮಾನವಾಗಿ ಉಡುಗೊರೆ ಸಿಗ್ತಿದ್ವು. ಈಗಿನ ಮಕ್ಕಳೊಳಗ ಕಂಪ್ಯೂಟರ ನಾಲೇಜ ಒಂದಿದ್ದರ ಸಾಕು ಇಡಿ ಲೋಕ ಗೆಲ್ಲಬಹುದು ಅನ್ನೊ ಹುಚ್ಚು ಕಲ್ಪನೆ ಪಾಲಕರೊಳಗದ. ಆದ್ರ ಮಕ್ಕಳಿಗೆ ವರ್ಷಕ್ಕ ಒಂದ ಸಲನಾದ್ರು ಇಂಥಾ ಶೀಬಿರಗಳಿಗೆ ಕಳಿಸ್ಬೇಕು. ಅದರಿಂದ ಮಕ್ಕಳು ಆರೊಗ್ಯಕರವಾಗಿ, ಸಾಮಾಜೀಕವಾಗಿ, ಬೌದ್ಧಿಕವಾಗಿ ವಿಕಾಸ ಹೊಂದಲಿಕ್ಕೆ ಸಹಾಯ ಆಗ್ತದ. ಎಲ್ಲಾ ಕಡೆ ತಂತ್ರಜ್ಞಾನದ ಲಹರಿ ಬಂದು ಇಂಥಾ ಶೀಬಿರಗಳನ್ನೊ ಚಟುವಟಿಕೆಗೊಳು ಮರೆಯಾಗಿ ಹೋಗ್ಯಾವ. ಲಗೂ ಲಗೂನ ಬೆಳಿಲಿ, ದೊಡ್ಡದಾಗಿ ಬೆಳಿಲಿ ಅಂತ ಸಣ್ಣ ಸಸಿಗೆ ಹೆಚ್ಚೆಚ್ಚು ಗೊಬ್ಬರ ನೀರು ಹಗಲೆಲ್ಲ ಹಾಕಿ ಬೆಳೆಸಿದ್ರ ಅದು ಕಮರಿ ಸುಟ್ಟು ಹೋಗ್ತದ. ಹಂಗನ ಮಕ್ಕಳ ಜೀವನ. ಹಿತಮಿತವಾದ ಬುದ್ಧಿವಾದ, ಪ್ರೀತಿ ಅಂತಃಕರಣ ಅನ್ನೊ ಆರೋಗ್ಯಕರವಾದ ವಾತವರಣ, ಯೋಗ್ಯ ಮಾರ್ಗದರ್ಶನ, ಸಮಾಧಾನದಿಂದ ಕೂಡಿದ ಪೋಷಣೆಯನ್ನ ಕೊಟ್ಟು ಬೆಳೆಸಿದ್ರ ಒಂದು ಸುಂದರ, ಹೂವಾಗಿ ಅರಳ್ತಾವ.
******
ಈಗಿನ ತಂದೆ-ತಾಯ್ಗಳು ಮಕ್ಕಳನ್ನ
ಮಶೀನು ಅಂತ ತಿಳಿದಾರ. ಇದಕ ಮತ್ತೊಂದು
ಮಗ್ಗಲೂ ಅದ. ಈಗಿನ ಮಕ್ಕಳು ಒಂದಾ ಟಿ.ವಿ
ಮುಂದ, ಇಲ್ಲಾ ಕಂಪ್ಯೂಟರ್ ಎದ್ರ, ಅಥವಾ
ಮೊಬೈಲ್ ತಗೊಂಡು ಕೂತಿರ್ತಾರ.
ನೋಡಲಾರದ ತಂದೆ-ತಾಯಿ
ಟ್ಯೂಷನ್ ಕ್ಲಾಸಿಗೆ ಸೇರಿಸ್ತಾರ. ಮಕ್ಕಳ
ಸಂತೋಷಕ್ಕೆ ಕಲ್ಲು ಹಾಕ್ತಾರ.
ಉತ್ತಮ ಬರಹ.
ಹಳೆಯ ಸಂಗತಿ ಆದರಶೈಲಿ ಛಲೋ ಅನಿಸ್ತು.
ಮಗಳು ಈ ಸಲ ಅನೇಕ ಹೊಸ ಪ್ರಯೋಗ ಮಾಡಿದಳು..
ಕ್ವಿಲಿಂಗ್ ಪೇಪರ್ ಕಲೆ, ಗ್ಲಾಸ ಪೇಂಟಿಂಗ್ , ಮತ್ತು ಪೇಂಟಿಂಗ್ ಗಳಲ್ಲಿ ಮುಳಗಿ ಎದ್ದಳು.
ಅವಳಿಗೆ ಅವಳದೇ ಲೋಕ..ರಜೆ ಸಜೆಯಂತೂ ಆಗಲೇ ಇಲ್ಲ..