ಬೆಳಗಾಗಿ ಏಳುವುದರೊಳಗೆ, ಹೆಸರೇ ಇಲ್ಲದ ಬೇಸರಗಳು..ಇಷ್ಟದ ಗೆಳತಿಯೇ ಫೋನ್ ಮಾಡಲಿ, ಹತ್ತಿರದವರೇ ವಿಶ್ ಮಾಡಲಿ ಪ್ರತಿಕ್ರಿಯೆ ಸರಿಯಾಗಿ ಕೊಡಲು ಮನಸ್ಸಿಲ್ಲದ ಮನಸು.. ದಿನವೇ ಬೇಸರವಾ? ಅಥವಾ ನಾನೇ ನನಗೆ ಬೇಸರವಾಗಿಬಿಟ್ಟಿದ್ದೇನಾ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಎಲ್ಲಿ ಎಂದು ಯೋಚಿಸಬೇಕಷ್ಟೆ..ಯಾವುದೋ ಖುಷಿಯ ವಿಷಯಕ್ಕೂ ಮನಸ್ಸು ಹಗುರವಾಗದ ಸ್ಥಿತಿಯೋ, ಇಷ್ಟದ ಹಾಡಿಗೆ ಮನಸೋಲದೇ ಇರುವ ಬೇಸರವೋ ಅರಿಯದ ಸ್ಥಿತಿಗೆ ಒಂದಷ್ಟು ಬೇಡದೇ ಇರುವ ಆಲೋಚನೆಗಳು.. ದಿನವೂ ಏಳುತ್ತಲೇ ಖುಷಿಯಾಗಿಯೇ ಏಳಬೇಕು ಎನ್ನುವವನಿಗೆ ಇವತ್ತೇನಾಗಿದೆ ಎಂದು ಕೇಳುವುದು ಯಾರನ್ನು.ನಮ್ಮ ಪರಿಸ್ಥಿತಿ ನಮಗೇ ಅರ್ಥವಾಗದೇ ಇರುವಾಗ ಇನ್ನೇನು ಹೇಳಬೇಕೋ ತಿಳಿಯದ ಬೇಸರ..
ಉರಿಯುವ ಬಿಸಿಲಿನಲ್ಲಿ ಚಾ ಮಾಡಿ ನಾಲ್ಕು ರೂಪಾಯಿಗೆ ಮಾರುವ ಅಂಗಡಿಯವನೂ ಸಹ ಖುಷಿಯಾಗಿದ್ದಾನೆ, ಅದೇ ಮನೆ ಕೆಲಸ ಮಾಡುವ ಒಂಟಿ ಹೆಂಗಸಿನ ಅಪ್ಪವಿಲ್ಲದ ಮಗುವೂ ಜಗದ ಪರಿವೆಯಿಲ್ಲದೇ, ನನ್ನಷ್ಟು ಸುಖಿಗಳು ಯಾರೂ ಇಲ್ಲವೆಂದು ದೊಡ್ಡದಾಗಿ ಹಾಳಾಗಿರುವ ಹಲ್ಲುಗಳನ್ನೇ ತೋರಿಸಿ ಮುಗ್ಧವಾಗಿ ನಗುತ್ತಿದೆ.. ಬೇಕು ಬೇಡಗಳ ಸ್ಥಿತಿಗೆ, ಏನೂ ತೋಚದೇ ಇರುವ ಮನಸಿನ ರೀತಿಗೆ ಆ ದಿನದ ಬೇಸರಕ್ಕೆ ಕಾರಣವೇ ಇಲ್ಲವಲ್ಲ..ಮೂಡ್ ಇಲ್ಲವೆಂಬ ಹಣೆಪಟ್ಟಿಯ ಕೆಳಗೆ ತೂರಾಡುತ್ತಿರುವ ಈ ಬೇಸರಗಳು ಕಾರಣವಿಲ್ಲದೇ ಹುಟ್ಟಿಕೊಳ್ಳುವುದು ನಮ್ಮಲ್ಲಿಯೇನಾ? ಯಾರೋ ಏನೋ ಹೇಳಿದರೆಂದೋ, ಇನ್ಯಾರೋ ಅರ್ಥ ಮಾಡಿಕೊಂಡಿಲ್ಲವೆಂದೋ ಇನ್ನೂ ಕೆಲವೊಂದಿಷ್ಟು ಸಲ ಬೇಸರಗಳು.. ಅಳಲೂ ಆಗದೇ ನಗಲೂ ಆಗದೆ ಇರುವ ಂದಿಗ್ಧ ಸ್ಥಿತಿಯಲ್ಲಿ ಭಾವನೆಗಳ ಹೊರಳಾಟ..
ಖುಷಿಯಾಗಿರುವುದಕ್ಕೆ ಇರುವ ಸಾವಿರ ಕಾರಣಗಳನ್ನು ಮರೆತು, ಬೇಸರ ಪಟ್ಟಿಕೊಳ್ಳಲು ಇಲ್ಲದೇ ಇರುವ ಕಾರಣವನ್ನು ಸೃಷ್ಟಿಸಿಕೊಳ್ಳುವ ಅಗತ್ಯ ಮತ್ತು ಅನಿವಾರ್‍ಯತೆ ಎರಡೂ ಇಲ್ಲದಿದ್ದರೂ ಎಲ್ಲ ಖುಷಿಗಳು ಮರೆತಂತೆ ಭಾಸವಾಗುತ್ತದೆ.. ನೂರು ಚಿಕ್ಕ ಪುಟ್ಟ ಗೆಲುವಿನಲ್ಲಿ ಮನಸ್ಸನ್ನು ಸಂತೈಸಿಕೊಳ್ಳದ ಖುಷಿಗಳು, ಒಂದು ಚಿಕ್ಕ ವಿಷಯಕ್ಕಾಗಿ ಬೇಸರದ ದಾರಿ ಹಿಡಿಯುತ್ತ ಇರುವ ಖುಷಿಗಳನ್ನೂ ಒಮ್ಮೆಲೇ ಮೆಟ್ಟಿ ನಿಂತು ಬಿಡುತ್ತದೆ..ಚೀಯರ್ಸ್ ಎಂದು ಹೇಳುವ ಮನಸ್ಸಿನ ಒಂದು ಮೂಲೆಯಾದರೂ ಸಿಕ್ಕಿದ್ದರೆ ಇರುವ ಬೇಸರವೆಲ್ಲ ನರಳಿ ಹೋಗುತ್ತಿದ್ದವೇನೋ..ಆದರೆಲ್ಲಿ ಬಿಡುತ್ತೆ ಈ ಹೇಳಲಾಗದ ಬೇಸರಗಳು..
ಸರಸರನೇ ಸರಿದು ಹೋಗುವ ದಿನಗಳಿಗೂ ಒಮ್ಮೆಲೇ ಸ್ಟಾಫ್ ಆಗಿ ಹೆಸರೇ ಇಲ್ಲದ ಊರಿನ ಬಸ್‌ಸ್ಟ್ಯಾಂಡಿನಲ್ಲಿ ನಿಲ್ಲುವುದೋ, ಅಥವಾ ಮುಂದೆಂನೋ ನಮ್ಮೂರೇ ಬರುತ್ತೆ ಎನ್ನುವ ಆಶಾವಾದದೊಂದಿಗೆ ಮುನ್ನಡೆಯುವುದೋ ತಿಳಿಯದ ಗೊಂದಲ. ಎಲ್ಲ ಬೇಸರದ ನಡುವೆಯೂ ಬೇಸರಕ್ಕಾಗಿ ಹುಡುಕುವ ಕಾರಣಗಳು, ಎಂದಿನ ಲವಲವಿಕೆ ಇಂದಿಲ್ಲವಲ್ಲ, ಇಂದಿಲ್ಲವೆಂದರೆ ಮುಂದೆಲ್ಲಿರುತ್ತೆ..ಇಂದಿಗೇ ನಮ್ಮನ್ನು ನಾವು ಅರಿಯದಿದ್ದರೆ, ಮುಂದೆಂದೋ ಬರುವ ಭವಿಷ್ಯತ್ತಿನ ಬಗೆಗೆ ಕುರುಡು ಆಶಾವಾದವೇಕೆ..ನಮ್ಮೆಲ್ಲ ಬೇಸರಗಳಿಗೆ ನಾವೇ ಕಾರಣ. ನಮ್ಮ ಮನಸ್ಸು ಅದನ್ನು ರಿಸೀವ್ ಮಾಡುವ ರೀತಿಯೇ ಕಾರಣ..
ಯಾರನ್ನೋ ಶಪಿಸುತ್ತ, ಇನ್ಯಾರನ್ನೋ ಬೈದುಕೊಳ್ಳುತ್ತಾ, ಇಲ್ಲದೇ ಇರುವ ಹೊಸತೊಂದು ಕಾರಣವನ್ನು ಸೃಷ್ಟಿಸಿಕೊಳ್ಳುತ್ತ, ನಮ್ಮ ಕೈಲಾಗದ ಪರಿಸ್ಥಿತಿಗೆ ಬೇರೆಯವರ ಹೆಸರನ್ನು ನಮ್ಮ ಬೇಸರಕ್ಕಾಗಿ ಹುಡುಕುವುದೇ ಬೇಸರಕ್ಕೆ ಕಾರಣವೇನಾ..? ನಮ್ಮದೇ ಸಮಯಕ್ಕೋ, ತಿಳಿಯದೇ ಇರುವ ಪ್ರಬುದ್ಧತೆಗೋ, ಹುಚ್ಚನಂತೆ ನಗಿಸುವ ಜೋಕುಗಳಿದ್ದರೂ ನಗದೇ ಇರುವ ಮನಸ್ಥಿತಿಗೋ ತಿಳಿಯದ ಒಂದಷ್ಟು ಮತ್ತೆ ಅದೇ ಗೊಂದಲ. ನಡುವೆ ಬೇಸರದ ಎಳೆಗಳು ಒಂದಾದರ ಮೇಲೊಂದು ಹರಿದು ಬಿಡುತ್ತ , ದಿನಗಳನ್ನು ಕಳೆಯುವುದೇ ದೊಡ್ಡ ವಿಷಯವಾಗಿ ಬಿಡುತ್ತೆ, ಜೀವನದಲ್ಲಿ ಏನೂ ಇಲ್ಲವಲ್ಲ ಎನ್ನುವಷ್ಟು ನಿರಾಸೆ ಒಂದು ದಿನದ ಬೇಸರವೂ ಸೃಷ್ಟಿಸಿಬಿಡುತ್ತೆ..
ನಮ್ಮೊಳಗೇ ಇರುವ ಬೇಸರವನ್ನೆಲ್ಲ ಹೊಡೆದೋಡಿಸಿ ಖುಷಿಯಿಂದ ಇರಲು ಪ್ರಯತ್ನಿಸಬೇಕು. ಎಲ್ಲಕ್ಕೂ ನಮ್ಮ ಮನಸ್ಥಿತಿಯನ್ನು ಸದಾ ಖುಷಿಯಿಂದಿರುವಂತೆ ಎಚ್ಚರವಹಿಸಬೇಕು. ನಮ್ಮೊಳಗಿನ ಬೇಸರವು ನಮ್ಮದೇ ವ್ಯಕ್ತಿತ್ವಕ್ಕೆ ಮಾರಕವಾಗಿಬಿಡುತ್ತದೆ. ಬಿಟ್ಟುಬಿಡಿ ಎಲ್ಲ ಬೇಸರವನ್ನು. ನಗುತ್ತಿರಿ ದವಡೆಯ ಮೂಲೆಯಲ್ಲಿರುವ ಹಾಳಾದ ಹಲ್ಲೂ ಕಾಣುವಂತೆ..
****
Chennagide!