ಬೇಯದಿರು ಬೆಂಗಳೂರೇ..: ವಿನಾಯಕ ಅರಳಸುರಳಿ,

ಇದೆಂಥಹಾ ದಿನಗಳು ಬಂದುಬಿಟ್ಟವು?

ಎಲ್ಲವೂ ಸರಿಯಾಗಿದ್ದರೆ ಅದೆಷ್ಟೋ ಲಕ್ಷ ಜನರೀಗ ಬೆಂಗಳೂರಿನಲ್ಲಿರುತ್ತಿದ್ದರು. ಬೀದಿ ಬದಿಯ ತಳ್ಳುಗಾಡಿಯಿಂದ ಹಿಡಿದು ಬಹುರಾಷ್ಟ್ರೀಯ ಕಂಪನಿಯ ತನಕ ನೂರಾರು ವಿಧದಲ್ಲಿ ಅಲ್ಲಿ ಜೀವನೋಪಾಯ ಸಾಗುತ್ತಿತ್ತು. ಅಲ್ಲಿ ಗಳಿಸಿದ ಸಂಬಳ ಕೇರಳದ ಆಳದಿಂದ ಹಿಡಿದು ಬಿಹಾರದ ತುದಿಯವರೆಗಿನ ಅದೆಷ್ಟೋ ಜನರ ಬದುಕ ಸಲಹುತ್ತಿತ್ತು. ಚಲನೆಯೇ ಬದುಕೆಂಬ ಮೂಲ ಮಂತ್ರವ ಜಪಿಸುತ್ತಾ ಕೋಟಿ ಜನಸಂಖ್ಯೆಯ ಆ ಪಟ್ಟಣ ಜಗತ್ತಿನ ಖ್ಯಾತ ನಗರಿಗಳ ಪಟ್ಟಿಯಲ್ಲಿ ತಾನೂ ಒಂದಾಗಿ ಮುನ್ನಡೆಯುತ್ತಿತ್ತು.

ಬೆಂಗಳೂರೆಂದರೆ ಬರೀ ಕಾಯಕದ ಪಟ್ಟಣವೊಂದೇ ಆಗಿರಲಿಲ್ಲ. ಯಾಂತ್ರಿಕತೆಯ ನಡುವೆಯೂ ಅಲ್ಲೊಂದು ಜೀವಂತಿಕೆಯಿತ್ತು. ಬಸ್ಸಿನಲ್ಲಿ ಪಕ್ಕದ ಸೀಟಿನ ಅಪರಿಚಿತನೊಂದಿಗೆ ಹರಟಿದ ಸ್ವಾರಸ್ಯಕರ ಘಟನೆಯಿತ್ತು. ಆಫೀಸಿನಲ್ಲಿ ಕೊಲೀಗುಗಳೊಂದಿಗೆ ಸೇರಿ ಯಶಸ್ವಿಯಾಗಿ ಮುಗಿಸಿದ ಪ್ರಾಜೆಕ್ಟಿನ ಸಂಭ್ರಮವಿತ್ತು. ಉಗ್ರಪ್ರತಾಪಿ ಬಾಸಿನ ಮುಖದಲ್ಲೂ ಚಿಮ್ಮಿದ ಆತ್ಮೀಯ ನಗುವಿತ್ತು. ಗೆಳೆಯರೊಂದಿಗೆ ಹೋಗಿ ಬಂದ ವೀಕೆಂಡಿನ ಪ್ರವಾಸವಿತ್ತು. ರೂಮ್ ಮೆಟ್ ನೊಂದಿಗೆ ಹೇಳಿಕೊಂಡು ಹಗುರಾದ ತೀರದ ದುಃಖವಿತ್ತು. ಬೆಳದಿಂಗಳ ರಾತ್ರೆಗಳಲ್ಲಿ ತನ್ನ ಮೇಲೆ ಮಲಗಿಸಿಕೊಂಡು ರಮಿಸಿದ ರೂಮಿನೆದುರಿನ ಟೆರಾಸಿತ್ತು. ಅವಳ್ಯಾರೋ ಹಸಿರು ಚೂಡಿದಾರದ ಹುಡುಗಿ ಎಸೆದು ಹೋದ ಅಮರ ಪ್ರೇಮದ ನೆನಪಿತ್ತು. ಪಾರ್ಕಿನಲ್ಲಿ ಬೀಸಿದ ತಣ್ಣನೆಯ ಗಾಳಿಯಿತ್ತು. ರಜೆಯಿಲ್ಲದೆ ಊರಿಗೆ ಹೋಗದಾದ ಚೌತಿ ಹಬ್ಬದಂದು ರೂಮಿನ ಓನರ್ ಕೊಟ್ಟ, ಅಮ್ಮನ ಕೈರುಚಿಯ ನೆನಪಿಸಿದ ಮೋದಕ, ಚಕ್ಕುಲಿಯಿತ್ತು. ಕೆಳಗಿನ ಮನೆಯ ನಾರ್ಥೀ ಹುಡುಗ ಹೇಳಿ ನಗಿಸಿದ್ದ ಪೋಲೀ ಜೋಕಿತ್ತು. ಅಕ್ಕನಂಥಹಾ ಸಹೋದ್ಯೋಗಿಯೊಬ್ಬಳ ನಿಷ್ಕಲ್ಮಶ ಅಕ್ಕರೆಯಿತ್ತು. ತಿಂಗಳಿಗೊಮ್ಮೆ ಹೋಗುವ ಮತ್ತೀಕೆರೆ ಮನೆಯ ಚಿಕ್ಕಮ್ಮನ ಕಣ್ಣಲ್ಲಿ ತುಳುಕಿದ ಮಮತೆಯಿತ್ತು. ಎಂಜೀರೋಡಿನ ಅಗಣಿತ ಜನಸಮೂಹದಲ್ಲಿ ಕಳೆದು ಹೋಗುವ ಸಂಭ್ರಮವಿತ್ತು. ಮಡಿವಾಳ ಕೆರೆ ಬದಿಯ ಮರದಲ್ಲರಳಿದ ಹೂವಿನ ಅನಾಮಿಕ ಗಂಧವಿತ್ತು. ವಾರಾಂತ್ಯದಲ್ಲಿ ಅದ್ಯಾವುದೋ ಸಭಾ ಮಂಟಪದಲ್ಲಿ ಏರ್ಪಡಿಸಿದ್ದ ಕವಿ ಸಮ್ಮೇಳನವಿತ್ತು.

ಏನೇನೂ ಇಲ್ಲವೆನಿಸುವ ಅಲ್ಲಿ ಎಲ್ಲವೂ ಇತ್ತು.

ಇದ್ದಕ್ಕಿದ್ದಂತೆ ಅದೇನಾಗಿಹೋಯಿತು? ಅಂಥಹಾ ಬೆಂಗಳೂರನ್ನೀಗ ಕೊನೆಯೇ ಇಲ್ಲದಂತೆ ಹಿಡಿದಿದೆ ಕೊರೋನಾ.‌ ರಸ್ತೆಯ ಮೇಲೆ ಜನರಿದ್ದಾರಾದರೂ ಅವರ ಕಣ್ಣಲ್ಲಿರುವುದೀಗ ಅಪ್ಪಟ ಭಯ. “ನೀವೇಕೆ ಬೆಂಗಳೂರು ಬಿಡುತ್ತಿದ್ದೀರಾ? ಮರಳಿ ಬರುತ್ತೀರೋ ಇಲ್ಲವೋ?” ವೀಕೆಂಡಿನಲ್ಲಿ ಟೋಲ್ ಗೇಟ್ ಬಳಿ ನೆರೆದ ಜನಸಮೂಹವನ್ನು ಟಿವಿ ಆ್ಯಂಕರೊಬ್ಬಳು ಪ್ರಶ್ನಿಸುತ್ತಿದ್ದಾಳೆ. ಮೋಜು, ಪಾರ್ಟಿ, ಹಾಸ್ಯ, ಗೆಟ್ ಟುಗೆದರ್, ಔತಣಗಳಂದ ಕೂಡಿದ್ದ ವೀಕೆಂಡುಗಳೀಗ ಲಾಕ್ ಡೌನಾಗಿವೆ. ಆಫೀಸಿರುವ ಇಡೀ ಏರಿಯಾವೇ ಸೀಲ್ ಡೌನಾಗಿದೆ. ಐಟಿಬಿಟಿ ಪ್ರಪಂಚವೇ ಬೆಂಗಳೂರು ತೊರೆದು ನೂರೆಂಟು ಊರುಗಳಲ್ಲಿ ಚದುರಿಹೋಗಿದೆ. ಅದೆಷ್ಟೋ ಆಫೀಸುಗಳು ತೆರೆಯುವುದೇ ಕಷ್ಟವೆಂಬಂತೆ ಬಾಗಿಲು ಮುಚ್ಚಿವೆ. ತೆರೆದ ಆಫೀಸುಗಳೂ ತನ್ನ ಅರ್ಧಂಬರ್ಧ ಉದ್ಯೋಗಿಗಳನ್ನಾಗಲೇ ಮನೆಗೆ ಕಳಿಸಿವೆ. ಉಳಿದ ಎಂಪ್ಲಾಯಿಗಳಾದರೂ ಅರ್ಧ ಸಂಬಳಕ್ಕಾಗಿ ಆತಂಕ ತುಂಬಿದ ಮುಖದಲ್ಲಿ ಮನೆ-ಆಫೀಸುಗಳ ಮಧ್ಯೆ ಅಲೆದಾಡುತ್ತಿದ್ದಾರೆ. ಅದೆಷ್ಟೋ ರೂಮು, ಪಿಜಿಗಳೀಗಾಗಲೇ ಖಾಲಿಯಾಗಿ ಊರು ಸೇರಿಕೊಂಡಿವೆ. ಸಂಭ್ರಮದ ಕೇಕೆ, ನಗೆಗಳಿಂದ ತುಂಬಿದ್ದ ಪಾರ್ಕು, ಥಿಯೇಟರ್, ಮಾಲ್ ಗಳೆಲ್ಲಾ ನಿಶ್ಯಬ್ದ ಕತ್ತಲಲ್ಲಿ ಕತ್ತಲಾಗಿ ನಿಂತಿವೆ.‌

ಬೆಂಗಳೂರು ಮೌನವಾಗಿ ನರಳುತ್ತಿದೆ.

ಇದೇನು ಮಾನವ ಜನ್ಮಕ್ಕೆ ಹಿಡಿದ ಶಾಪವೇ? ಒಳಗಿದ್ದರೆ ಹಸಿವಿನ ಭಯ. ಹೊರಹೋದರೆ ಕೊರೋನಾದ ಭೀತಿ. ಜೇಬಲ್ಲಿ ಕಾಸಿಲ್ಲದೆ ಉಸಿರಾಡಲೂ ಆಗದ ನಗರಿಯಿದು. ಈಗ ಆ ಜೇಬೇ ಕಳಚಿ ನೇತಾಡುತ್ತಿದೆ. ಒಂದು ಸಣ್ಣ ಸುಳಿವೂ ಇಲ್ಲದೆ ಅದೆಲ್ಲಿಂದ ಬಂದೆರಗಿಬಿಟ್ಟಿತು ಈ ಪರಿಯ ಆಪತ್ತು? ಜೀವದ ಗೆಳೆಯನಾಗಿದ್ದ ಸಹೋದ್ಯೋಗಿಯ ಮತ್ತೆ ನೋಡುವುದಾದರೂ ಯಾವಾಗ? ಇನ್ನೇನು ಪ್ರಮೋಶನ್ ಪಡೆದು ಮದುವೆಯಾಗುವೆನೆಂದಿದ್ದ ಗೆಳೆಯನ ಕಥೆಯಿನ್ನೇನು? ಲಕ್ಷ ಸಾಲವ ಹೆಗಲ ಮೇಲಿಟ್ಟುಕೊಂಡು ಹೊಸ ಬದುಕಿನ ದಾರಿಯ ಹುಡುಕುತ್ತಾ ಮೆಜಸ್ಟಿಕ್ಕಿಗೆ ಬಂದಿಳಿಯುತ್ತಿದ್ದ ಯುವಕರ ಕಥೆಯಿನ್ನೇನು? ಇನ್ನಾರು ತಿಂಗಳಲ್ಲಿ ಮಗಳ ಮದುವೆ ಮಾಡುವೆನೆಂದ ರಸ್ತೆ ಬದಿಯ ತಳ್ಳುಗಾಡಿಯ ವ್ಯಾಪಾರಿಯೇನಾದ? ಸಿಗ್ನಲ್ಲಿನಲ್ಲಿ ಎರೆಡು ರೂಪಾಯಿಯ ಪೆನ್ನು ಕೊಳ್ಳುವಂತೆ ಅಂಗಲಾಚುತ್ತಿದ್ದ ಹರಕು ಲಂಗದ ಬಾಲಕಿಯೆಲ್ಲಿ ಹೋದಳು? ಲಕ್ಷಾನುಲಕ್ಷ ಸಾಲ ಮಾಡಿ ಹೊಸ ಅಂಗಡಿಯ ತೆರೆದವರ ಕಥೆಯೇನು? ಅವನು ಈ ಪರೀಕ್ಷೆಯ ನಂತರ ಕೊಡಿಸುವೆನೆಂದು ಮಗನಿಗೆ ಮಾತುಕೊಟ್ಟಿದ್ದ ಗೇರು ಸೈಕಲ್ಲು ಇನ್ನೆಲ್ಲಿ?

ಕೋಟಿ ಜನರ ಬದುಕಿಗೆ ತುತ್ತು ಹಂಚುತ್ತಿದ್ದ ಮಹಾನಗರಿಯೀಗ ಅಪಾಯಕ್ಕೆ ಸಿಲುಕಿದೆ. ನಮ್ಮದೇ ಬೀದಿಯ ಆಚೆ ತುದಿಯೊಳಗೆ ಕೊರೋನಾ ಕಳ್ಳ ಹೆಜ್ಜೆಯಿಟ್ಟಿದೆ.‌ ಇಡೀ ಪ್ರಪಂಚದ ಭೂಪಟದ ಯಾವೊಂದು ದೇಶದಲ್ಲೂ ಮದ್ದಿಲ್ಲದ ಈ ಖಾಯಿಲೆಗೆ ತುತ್ತಾಗಿರುವ ನಮ್ಮ‌ನಗರಿಯನ್ನು ಉಳಿಸುವ ಬಾಧ್ಯತೆಯೀಗ ನಮ್ಮ ಹೆಗಲಿಗೇ ಬಿದ್ದಿದೆ. ನಮ್ಮನ್ನು ಸಲಹಿದ ನಗರಿಯನ್ನೀಗ ನಾವೇ ಉಳಿಸಬೇಕಿದೆ. ಮಾಡಬೇಕಿರುವುದು ಮಹಾ ಯಜ್ಞವೇನೂ ಅಲ್ಲ. ನಮ್ಮನ್ನು ನಾವು ಉಳಿಸಿಕೊಂಡರೆ ಸಾಕು. ನಮ್ಮ ಉಳಿವಿನೊಳಗೆ ಮಹಾನಗರಿಯದ್ದೂ ಸೇರಿಕೊಂಡಿದೆ.

ವಿನಾಯಕ ಅರಳಸುರಳಿ,


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ka.la.raghu
ka.la.raghu
4 years ago

jeevanada naija paristhithiyannu tilisuva lekhana.
chennagide kavi mitrare

1
0
Would love your thoughts, please comment.x
()
x