ಬೇಂದ್ರೆಯವರ ಸಿರಿವಂತಳೆನಿಸುವ ‘ ನಾನು ಬಡವಿ ‘ !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಯುಗದ ಕವಿ ಜಗದ ಕವಿ ಶಬ್ದ ಗಾರುಡಿಗ ನಾದಬ್ರಹ್ಮ ನಾಕು ತಂತಿಯಿಂದ ಜ್ಞಾನಪೀಠಕ್ಕೇರಿದವರೂ ಆದ ಡಾ. ದ ರಾ ಬೇಂದ್ರೆಯವರ ‘ ನಾನು ಬಡವಿ ‘ ಎಂಬ ಪ್ರೀತಿಯ ಮಹತ್ವ ಸಾರುವ ಒಲವಿನ ಗೀತೆ ನನ್ನ ಮಿತಿಯೊಳಗೆ ನಾನು ಕಂಡಂತೆ! ಈ ಗೀತೆಯನ್ನು ಕವಿ ಬಡವಿಯ ಮೂಲಕ ತನ್ನ ಒಲವಿನ ದಾಂಪತ್ಯದ ವರ್ಣನೆ ಮಾಡುತ್ತಿರುವಂತೆ ರಚಿಸಿದ್ದಾರೆ. ಬಡವಿಯ ಸ್ವಗತದಂತಿದೆ.

ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು.

ಹತ್ತಿರಿರಲಿ ದೂರವಿರಲಿ
ಅವನೆ ರಂಗ ಸಾಲೆ
ಕಣ್ಣುಕಟ್ಟುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬಟ್ಟೆ.

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂಧಿ
ಕೆನ್ನೆ ತುಂಬ ಮುತ್ತು.

ಕುಂದುಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಹಾಲು ಜೇನು.

‘ನಾನು ಬಡವಿ’ ಎಂಬುದು ಸರಳ, ಸುಂದರ ಭಾವಗೀತೆ. ಇದರ ಒಳ ಹೊಕ್ಕಾಗ ಇದು ಸರಳ ಅನಿಸದಿದ್ದರೂ ಸುಂದರ ಅನಿಸುವುದಂತೂ ಸತ್ಯ! ‘ ನಾನು ಬಡವಿ ಆತ ಬಡವ .. ‘ ಅಂತನೆ ಮೊದಲಾಗುವ ಈ ಗೀತೆ ಓದಿದ ನಂತರ ನಾನು ಬಡವಿ ಎಂಬ ವಾಚ್ಯಾರ್ಥ ಇಲ್ಲವಾಗಿ ನಾನು ಸಿರಿವಂತಳೆಂಬ ಧ್ವನ್ಯಾರ್ಥ ಹಾಗೆ ಆತ ಬಡವ ಎಂಬ ವಾಚ್ಯಾರ್ಥ ಸಹ ಇಲ್ಲವಾಗಿ ಆತನೂ ಸಿರಿವಂತನೆಂಬ ಧ್ವನ್ಯಾರ್ಥ ಬರುವುದು ಈ ಗೀತೆಯ ವೈಶಿಷ್ಟ್ಯ!

ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು

ಈ ಮೇಲಿನ ಸಾಲುಗಳು ಈ ಕವನಕ್ಕೆ ಪೀಠಿಕೆಯಂತಿವೆ. ಅಷ್ಟೇ ಅಲ್ಲ ಈ ಗೀತೆಯಲ್ಲಿ ಬರುವ ಬಡವಿ ಬಡವರ ದಾಂಪತ್ಯ ಅರಂಭಕ್ಕೆ ಮಂಚದಂತಿವೆ! ಜತೆಗೆ ಈ ಸಾಲುಗಳಲ್ಲಿ ಅವರ ಅನ್ಯೋನ್ಯ ಯಶಸ್ವಿ ದಾಂಪತ್ಯದ ಗುಟ್ಟಿನ ಅನಾವರಣವಾಗಿದೆ! ಆ ಅನ್ಯೋನ್ಯ ದಾಂಪತ್ಯದ ಗುಟ್ಟು ” ಒಲವು ” ! ಒಲವೆ ನಮ್ಮ ಬದುಕು ಎಂಬಲ್ಲಿ ವ್ಯಕ್ತವಾಗಿದೆ. ಬಡವಿ ಬಡವ ಇವರು ಈ ಗೀತೆಯಲ್ಲಿ ನಾಯಕಿ ನಾಯಕರಾದರೂ ಇವರು ಪ್ರೇಮಿಗಳೋ ಸಂಗಾತಿಯರೋ ದಂಪತಿಗಳೋ ಎಂಬ ಪ್ರಶ್ನೆಗೆ ಉತ್ತರ ನೇರವಾಗಿ ದೊರೆಯದಿದ್ದರು ಅವರ ನಡುವಿನ ಭಾಂಧವ್ಯ ಉತ್ತರ ಒದಗಿಸಿದೆ! ಬಡವಿ ತನ್ನ ಮತ್ತು ತನ್ನ ಪ್ರಿಯಕರನ ನಡುವಿನ ಮಧುರ ಬಾಂಧವ್ಯದ ವರ್ಣನೆಯನ್ನು ನಿರ್ಬಿಡೆಯಿಂದ ಮಾಡಿರುವುದು ಅವರು ದಂಪತಿಗಳೆಂಬುದರಲ್ಲಿ ಸಂಶಯ ಉಳಿಯದಂತೆ ಮಾಡಿದೆ. ಏಕೆಂದರೆ ಸಮಾಜ ಮಾನ್ಯ ಮಾಡುವ ಸಂಬಂಧವನ್ನು ಮಾತ್ರ ಹೆಣ್ಣೊಬ್ಬಳು ನಿರ್ಭಿಡೆಯಿಂದ ಹೇಳಲೋ ವರ್ಣಿಸಲೋ ಸಾಧ್ಯ! ಬಡವಿ ತನ್ನ ಒಲವಿನ ವರ್ಣನೆಯನ್ನು ನಿರ್ಭಿಡೆಯಿಂದ ವರ್ಣನೆ ಮಾಡಿರುವುದರಿಂದ ಅವರು ದಂಪತಿಗಳು ಎಂಬುದರಲ್ಲಿ ಸಂಶಯವಿಲ್ಲ! ಆದ್ದರಿಂದ ಅವರ ಮಧುರ ದಾಂಪತ್ಯ ಈ ಗೀತೆಯ ವಸ್ತು! ‘ ನಾನು ಬಡವಿ ಆತ ಬಡವ ‘ ಎಂದು ಈ ಗೀತೆ ಆರಂಭವಾಗುವುದರಿಂದ ಅವರ ದಾಂಪತ್ಯದ ವರ್ಣನೆಯನ್ನು ಬಡವಿಯೇ ಮಾಡುತ್ತಿರುವಳೆಂದು ತಿಳಿಯುವುದು! ಇದು ಅವಳ ಸ್ವಗತ! ನಾನು ಬಡವಿ ಆತ ಸಹ ಬಡವ ನಮ್ಮದು ಒಲವಿನ ಬದುಕು. ಅದನ್ನೇ ಎಲ್ಲದಕ್ಕೂ ಬಳಸಿಕೊಂಡಿವಿ – ಎಂದು ಬಡವಿ ಹೇಳುತ್ತಾಳೆ. ದಾಂಪತ್ಯ ಮಧುರವಾಗಿರಲು ಏನೇನು ಬೇಕೋ ಅದನ್ನೆಲ್ಲಾ ಪಡೆದುಕೊಳ್ಳಲು ಒಲವನ್ನೇ ಬಳಸಿಕೊಂಡಿವಿ ಎಂದು ಹೇಳಿ ಒಲವಿನ ಮಹತ್ವ ಸಾರಿದ್ದಾಳೆ. ಹಣ ವಸ್ತು ಒಡವೆ ಈಡೇರಿಸಬಹುದಾದುದ್ದನ್ನೆಲ್ಲಾ ಒಲವು ಇದ್ದರೆ ಅದರಿಂದ ಈಡೇರಿಸಿಕೊಳ್ಳಬಹುದೆಂದು ಸಾರಿದ್ದಾಳೆ! ‘ ಒಲವೆ ನಮ್ಮ ಬದುಕು ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು ‘ ಎಂದು ಹೇಳುವಲ್ಲಿ ಅದನ್ನು ಗುರುತಿಸಬಹುದು. ಹಾಗೂ ಅದಕು ಇದಕು ಎದಕು ಎಂಬ ಶಬ್ದಗಳ ಬಳಸಿ ಶಬ್ದ ಗಾರುಡಿಗ ತನ್ನ ಶಬ್ದ ಗಾರುಡಿ ಮೆರೆದಿದ್ದಾನೆ. ತಮ್ಮ ದಾಂಪತ್ಯವನ್ನು ಮಧುರವಾಗಿಸಲು ಒಲವನ್ನು ಬಳಸಿಕೊಂಡುದರ ವರ್ಣನೆ ಮುಂದಿನ ಸಾಲುಗಳಲ್ಲಿ ಕಾಣಬಹುದು.

ಹತ್ತಿರಿರಲಿ ದೂರವಿರಲಿ
ಅವನೆ ರಂಗ ಸಾಲೆ
ಕಣ್ಣುಕಟ್ಟುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಈ ಮೇಲಿನ ಸಾಲುಗಳಿಂದ ಅವರು ಹೇಗೆ ಒಲವನ್ನು ಬಳಸಿಕೊಂಡು ತಮ್ಮ ದಾಂಪತ್ಯ ಸುಮಧುರವಾಗಿಸಿಕೊಂಡರು ಎಂಬುದರ ವರ್ಣನೆ ಆರಂಭವಾಗುತ್ತದೆ. ಅವನು ಸನಿಹ ಅಥವಾ ದೂರವಿದ್ದಾಗಲೂ ಅವನೆ ರಂಗಸಾಲೆ. ಇವಳ ಬದುಕಿನ ವೇದಿಕೆ. ಅವಳು ನಟಿಸಲು ಅವನೇ ರಂಗ! ‘ ರಂಗಸಾಲೆ ‘ ಎಂದರೆ ನಾಟ್ಯಾಭ್ಯಾಸ ಸ್ಥಳ! ಆತ ನಾಟ್ಯಾಭ್ಯಾಸದ ವೇದಿಕೆಯಾಗುವುದರಿಂದ ಬಡವಿಗೆ ಅವನು ನವರಸದೌತಣ ನೀಡುವ ರಸಿಕ! ಅವನು ಸ್ಫುರದ್ರೂಪಿ. ಅವನು ತುಂಬಾ ಪ್ರಿಯ ಆದುದರಿಂದ ಅವನ ರೂಪ ಕಣ್ಣಿನಲ್ಲೆ ಇರುವಂತಹದ್ದು. ಕಿವಿಗೆ ಹಿತವಾಗುವಂತೆ ಉಲಿಯುವ. ಅವನೆ ಒಲವಿನ ಮಾತು, ಅವನೆ ಒಲವಿನ ಪತ್ರ! ಮಾಯಾ ಮಂತ್ರಜಾಲದಿಂದ ಹೊಸಲೋಕ ಸೃಷ್ಟಿಸುವುದು ‘ ಕಣ್ಣುಕಟ್ಟು ‘ ಎಂಬ ವಿದ್ಯೆ! ಸಂಗಾತಿ ಸುಖವಾಗಿರಲಿ ಎಂದು ಪ್ರಿಯತಮ ಅಂತಹ ಮಾಯಾ ಲೋಕವನ್ನೇ ಸೃಷ್ಟಿಸಿ ಅವಳನ್ನು ಸಂತಸದಿಂದಿರಿಸಿರುವ. ದೇವರ ಶಿಲ್ಪಗಳಿಗೆ ಮೂರ್ತಿ ಎನ್ನುವರು. ಅವನು ಸಾಮಾನ್ಯನಲ್ಲ ಅವಳ ಸಂತೋಷಕ್ಕಾಗಿ ಎಂತಹ ಲೋಕವನ್ನು ಬೇಕಾದರೂ ಸೃಜಿಸಬಲ್ಲ ದೈವ ಎಂಬುದನ್ನು ‘ ಕಣ್ಣುಕಟ್ಟುವಂಥ ಮೂರ್ತಿ ‘ ಎಂಬ ಅಭಿವ್ಯಕ್ತಿಯಿಂದ ತಿಳಿಯಬಹುದು. ಆತ ಕಿವಿಗೆ ಮೆಚ್ಚಿನೋಲೆ. ‘ ಓಲೆ ‘ ಎಂದರೆ ಪತ್ರ, ಕಿವಿಯ ಆಭರಣ ಎಂಬ ಅರ್ಥಗಳು ಇರುವುದರಿಂದ ಅವನ ಅಪ್ಯಾಯಮಾನವಾದ ಮಾತುಗಳು ಅವಳ ಕಿವಿಗೆ ಇಷ್ಟವಾದ ಪತ್ರ, ಒಲವಿನ ಓಲೆ! ಇನ್ನೊಂದು ಅರ್ಥದಲ್ಲಿ ಕಿವಿ ಆಭರಣ! ಮೇಲಿನ ಸಾಲುಗಳು ನಯನಾ ಮತ್ತು ಕರ್ಣಕ್ಕೆ ಹಿತವೆನಿಸುವ ಅನುಭವ ನೀಡುವಂತಹವಾಗಿವೆ.

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬಟ್ಟೆ.

ಈ ಮೇಲಿನ ಸಾಲಿನಲ್ಲಿ ಸಹ ತಮ್ಮ ದಾಂಪತ್ಯ ಅನ್ಯೋನ್ಯವಾಗಿಸಲು ಒಲವನ್ನು ಹೇಗೆ ಬಳಸಿಕೊಂಡರೆಂಬ ವರ್ಣನೆ ಮುಂದುವರೆದಿದೆ. ಬೆಳೆದಿದೆ. ಆ ನಾಲ್ಕು ಸಾಲುಗಳಲ್ಲಿ ಅವಳಿಗೆ ನಯನ ಮತ್ತು ಕರ್ಣಾನಂದವಾದರೆ ಈ ನಾಲ್ಕು ಸಾಲುಗಳಲ್ಲಿ ಒಲವಿನ ಸ್ಪರ್ಷಾನಂದವಾಗುವುದು. ಕಣ್ಣುಕಟ್ಟುವಂತಹ ಮೂರ್ತಿಯನ್ನು ಸ್ಪರ್ಷಿಸಿದರೆ ಸಾಕು ರೋಮಾಂಚನವಾಗಿ ಚಳಿಯಲ್ಲಿ ಬೆಚ್ಚನೆ ಬೇಸಿಗೆಯಲ್ಲಿ ತಂಪನೆ ಅನಭವ ನೀಡುವ ಮೃದುವಾದ ಬಟ್ಟೆಯಾಗುವುದು ಅವನ ಮೈ. ಒಲವಿನ ಸ್ಪರ್ಷವೆ ಚಳಿಗಾಲಕ್ಕೂ ಬೇಸಿಗೆ ಕಾಲಕ್ಕೂ ಹಿತ ನೀಡುವ ಬಟ್ಟೆಯಾಗುವುದು. ಅಲ್ಲಿ ಕಿವಿಯ ಓಲೆ, ಇಲ್ಲಿ ಬಟ್ಟೆ ಭೌತಿಕ ವಸ್ತುಗಳು.

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂಧಿ
ಕೆನ್ನೆ ತುಂಬ ಮುತ್ತು.

ಈ ಮೇಲಿನ ಸಾಲಿನಲ್ಲಿ ತಮ್ಮ ದಾಂಪತ್ಯ ಪರಾಕಾಷ್ಠೆಗೇರಲು ಒಲವನ್ನು ಬಳಸಿಕೊಂಡುದರ ವರ್ಣನೆಯಿದೆ. ಆತ ತೋಳುಗಳಿಗೆ ತೋಳ ಬಂಧಿ, ಕೆನ್ನೆ ತುಂಬ ಮುತ್ತು ಇನ್ನೂ ಏನೇನೋ ವಸ್ತು ಒಡವೆಗಳ ಕೊಟ್ಟ. ಕೆಲವು ವಸ್ತು ಒಡವೆ ಅವರಿಬ್ಬರಿಗೆ ಸಂಬಂಧಿಸಿದವು. ಅವು ಅವರಿಬ್ಬರಿಗೆ ಮಾತ್ರ ಗೊತ್ತಿರುವಂತಹವು. ಅವು ಗೌಪ್ಯ! ದಾಂಪತ್ಯದಲ್ಲಿ ಇದೆಲ್ಲಾ ಸಹಜ. ಆತ ಬಡವ. ಅವನಿಂದ ತೋಳಬಂಧಿ, ಕೆನ್ನೆ ತುಂಬ ಮುತ್ತುಗಳ ಹೇಗೆ ಕೊಡಲು ಸಾಧ್ಯ? ಅಂದರೆ ಅವರ ಮಧ್ಯದ ಒಲವೆ ಆ ಒಡವೆಗಳಾಗಿ ಪರಿಭಾವಿಸುವಂತಾಯಿತು. ಅವನು ಒಲವಿನಿಂದ ಎರಡು ಕೈಚಾಚಿ ಅವಳನ್ನು ಮನಸಾರೆ ಅಪ್ಪಿಕೊಂಡು ತೋಳಿನಲ್ಲಿ ಬಂಧಿಯಾಗಿಸುವುದು ಅದೇ ತೋಳಬಂದಿ ಎಂಬ ಆಭರಣವಾಯಿತು. ಅವನು ಒಲವಿನಿಂದ ಕೆನ್ನೆಗೆ ಕೊಟ್ಟ ಮುತ್ತುಗಳು ಭೌತಿಕ ಒಡವೆಗಳಲ್ಲವಾದರೂ ಭೌತಿಕ ಒಡವೆಗಳೆಂದು ಪರಿಭಾವಿಸುವಂತೆ ಒಲವು ಮಾಡಿತು! ಹೀಗೆ ಅವರ ದಾಂಪತ್ಯ ಅನ್ಯೋನ್ಯವಾಗಿರಲು ಅವರಿಗೆ ಬೇಕಾದುದ ಒಲವು ಒದಗಿಸಿತು. ಈ ಮೇಲಿನ ಸಾಲುಗಳಲ್ಲಿ ದಾಂಪತ್ಯದ ಒಲವು ಪರಾಕಾಷ್ಠೆಗೇರಿದ ತೋಳ ಬಂಧನ, ಚುಂಬನದ ಒಲವಿನ ಬಂದನದ ಸ್ಪರ್ಷಾನಂದವಿದೆ!

ಕುಂದುಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಹಾಲು ಜೇನು

ಈ ಮೇಲಿನ ಸಾಲು ಬಡವಿಯ ದಾಂಪತ್ಯದ ಪರಾಕಾಷ್ಠೆಯ ಚಿತ್ರಣ! ಸಂತೃಪ್ತ ದಾಂಪತ್ಯದ ವರ್ಣನೆ. ತುಟಿಗೆ ಸವಿಯಾದ ಹಾಲುಜೇನು ಕೊಟ್ಟು ಹೊಟ್ಟೆಗೆ ಜೀವ ಫಲವನ್ನು ಕೊಟ್ಟು ಕುಂದು ಕೊರತೆ ತೋರಲಿಲ್ಲ ಇನ್ನು ಹೆಚ್ಚಿಗೆ ಏನು ಬೇಕು? ಎನ್ನುವಲ್ಲಿ ದಾಂಪತ್ಯ ಸುಖದ ಪರಾಕಾಷ್ಠೆ ಅಭಿವ್ಯಕ್ತವಾಗಿದೆ. ಬಟ್ಟೆ ಒಡವೆಯಲ್ಲವಾದರೂ ಮೈಗೆ ಹಿತವಾಗಿ ತನ್ನ ಸುಂದರಗೊಳಿಸಿದರೆ ಮುತ್ತು, ಓಲೆ, ತೋಳಬಂದಿ – ಇವೆಲ್ಲ ಬಹಿರಂಗದ ಒಡವೆಗಳಾದರೆ ಜೀವ ಫಲ ಬೆಲೆ ಕಟ್ಟದ ಅಂತರಂಗಕ್ಕೆ ಸಂಬಂಧಿಸಿದ ಒಲವಿನ ಫಲ! ಒಲವಿನ ಒಡವೆ! ಅದರಕ್ಕೆ ಹಿತವೆನಿಸುವ ಹಾಲು-ಜೇನು ಸಹ ದೇಹದ ಒಳಗಿನ ಉದರವನ್ನು ಸೇರುವಂತಹ ಹಿತವೆನಿಸುವ ಆಹಾರ ಪದಾರ್ಥಗಳು. ಇಲ್ಲಿ ದೇಹದ ಒಳಗನ್ನು ಒಲವು ತೃಪ್ತಿಪಡಿಸಿದುದರ, ಶೋಭೆ ಹೆಚ್ಚಿಸಿದುದರ ಚಿತ್ರಣವಿದೆ. ಇವು ದಾಂಪತ್ಯ ಸುಖ ಪರಿಪಕ್ವಗೊಂಡುದನ್ನು ಅಭಿವ್ಯಕ್ತಿಸುವ ಈ ಗೀತೆಯ ಕೊನೆಯ ಸಾಲುಗಳು!

ಬಡವನೊಂದಿಗೆ ಬಡವಿಯ ಮಧುರ ದಾಂಪತ್ಯದ ವರ್ಣನೆ ಆದಿಯಿಂದ ಅಂತ್ಯದವರೆಗೆ ಸೊಗಸಾಗಿ ಮೂಡಿದೆ. ಈ ಗೀತೆ ಬೆಳೆದಂತೆ ಒಲವು ಪರಿಪಕ್ವವಾಗುತ್ತಾ ಹೋಗುವುದು. ಸಂಸಾರ ಸುಖಸಾಗರವಾಗಲು ಬದುಕಿನಲ್ಲಿ ಸಿರಿ ಸಂಪತ್ತು ವಸ್ತು ಒಡವೆಗಳು ತುಂಬಿ ತುಳುಕಬೇಕಾಗಿಲ್ಲ! ಸಂಸಾರ ಆನಂದಸಾಗರವಾಗಲು ಪರಸ್ಪರರಲ್ಲಿ ಮುಖ್ಯವಾಗಿ ಇರಬೇಕಾದುದು ಒಲವು ಎಂಬುದನ್ನು ಈ ಗೀತೆ ಸಾರುತ್ತದೆ. ‘ ನಾನು ಬಡವಿ ‘ ಎಂದು ಹೇಳುವಳಾಗಲಿ ಎಲ್ಲೂ ಬಡತನದ ಭಾವವನ್ನು ವ್ಯಕ್ತಪಡಿಸದೆ ಒಲವಿನ ಸಿರಿತನ ಅನಾವರಣಗೊಳಿಸುವಳು. ಇಂದು ಸಂಸಾರ ಸಾಗಿಸಲು ಹಣವೇ ಮುಖ್ಯ ಎಂಬಂತಾಗಿದೆ. ಕೆಲವರಿಗೆ ಸಾಕಷ್ಟು ಸಂಪತ್ತಿರುತ್ತದಾದರೂ ಸಂಸಾರದಲ್ಲಿ ಸಮರಸವೇ ಇರುವುದಿಲ್ಲ. ಅದ್ದರಿಂದ ಸಂತಸ ತುಂಬಿದ ದಾಂಪತ್ಯವೇ ನಿಜವಾಗಿ ಸಿರಿವಂತ ದಾಂಪತ್ಯ!

ಒಲವೊಂದಿದ್ದರೆ ಸಾಕು ಸಂತೋಷದಿಂದ ಬದುಕಬಹುದು ಎಂದು ಈ ಗೀತೆ ಸಾರುವುದರಿಂದ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ಗೀತೆಯ ಎಲ್ಲಾ ಹಂತಗಳಲ್ಲೂ ಒಲವಿನ ರಸ ಹೊಮ್ಮಿದೆ. ಈ ಕವನದಲ್ಲಿ ಸ್ವತಃ ಬಡವಿ ತನ್ನ ಸುಮಧುರ ದಾಂಪತ್ಯದ ಸವಿಯನ್ನು ಉಣಬಡಿಸುಸುತ್ತಾ ಸಾಗಿ ಸಂತೃಪ್ತಿಯಲ್ಲಿ ವಿರಮಿಸುವ ಚಿತ್ರಣ ಒಲವಿನ ಮಹತ್ವವನ್ನು ಸಾರುತ್ತದೆ. ಹಾಗೆ ದಾಂಪತ್ಯದಲ್ಲಿ ಸಂತೃಪ್ತಿ ಹೊಂದಿದ ಹೆಣ್ಣಿನ ಸಂತೃಪ್ತ ಭಾವವಿದೆ! ತನ್ನ ಸಂಗಾತಿ ದಾಂಪತ್ಯದಲ್ಲಿ ತನ್ನನ್ನು ಹೇಗೆ ತೃಪ್ತಿಗೊಳಿಸಿದ ಎಂದು ಅವಳೇ ವರ್ಣಿಸುತ್ತಿರುವುದಿದೆ!

ಓಲೆ, ತೋಳಬಂಧಿ, ಮುತ್ತು ಇವು ಒಡವೆಗಳಾದರೂ ಈ ಗೀತೆಯಲ್ಲಿ ಅವು ಭೌತಿಕ ಒಡವೆಗಳಾಗದೆ ಒಲವಿನ ಒಡವೆಗಳಾಗಿವೆ! ಅವನ ಹಿತವಾದ ಒಲವಿನ ಮಾತುಗಳೇ ಕಿವಿಗೆ ಮೆಚ್ಚಿನೋಲೆಯಾಗಿರುವುದು, ಅವನು ಒಲವಿನಿಂದ ಮನದನ್ನೆಯನ್ನು ಮನಸಾರೆ ಅಪ್ಪಿಕೊಂಡು ತೋಳಬಂಧಿಯಾಗಿಸುವುದೇ ತೋಳಬಂದಿಯಾಗಿ, ಒಲವಿನಿಂದ ಮುತ್ತುಗಳ ಕೊಡುವುದೇ ಮುತ್ತುಗಳಾಗಿ ಭಾವಿಸಿರುವುದು ಭೌತಿಕ ಒಡವೆಗಳ ಕೊರತೆಯನ್ನು ಒಲವಿನ ಒಡವೆಗಳಿಂದ ತುಂಬಿಕೊಳ್ಳುವುದಾಗಿದೆ. ಬದುಕಿನಲ್ಲಿ ಒಲವೇ ತುಂಬಿರಲು ಭೌತಿಕ ಒಡವೆಗಳ ಅವಶ್ಯಕವಿಲ್ಲವೆಂಬುದರ ಅಥವಾ ಅವುಗಳ ಒಲವಿನಿಂದ ಹೀಗೆ ಪೂರೈಸಿಕೊಂಡು ತೃಪ್ತಿಯಿಂದಿರಬಹುದು ಎಂಬುದರ ಸಂಕೇತವಾಗಿದೆ. ಭೌತಿಕ ಒಡವೆಗಳು ಶಾಶ್ವತವಲ್ಲ! ಇಂದು ಇರಬಹುದು ನಾಳೆ ಇಲ್ಲವಾಗಬಹುದು. ಆದರೆ ಒಲವು ಶಾಶ್ವತ! ಒಲವಿನ ಒಡವೆಗಳು ಶಾಶ್ವತ ಎಂಬ ಭಾವವೇ ಮಿಗಿಲೆನಿಸುತ್ತದೆ. ಶಾಶ್ವತವಾದ ಒಡವೆಗಳನ್ನು ಅವನು ಕೊಟ್ಟುದರಿಂದ ನಮ್ಮದು ಒಲವಿನ ಸೊಗಸಾದ ಸಂಸಾರ! ಹಾಗೂ ಕುಂದು ಕೊರತೆ ತೋರಲಿಲ್ಲ ಎಂಬಲ್ಲಿ ಅವನ ಒಲವಿನ ಸಿರಿವಂತಿಕೆ, ಅವರಲ್ಲಿನ ಅನ್ಯೋನ್ಯತೆ ವ್ಯಕ್ತವಾಗುತ್ತದೆ. ಬೇಕು ಹೆಚ್ಚಿಗೇನು? ಎಂಬ ಪ್ರಶ್ನೆ, ಹೊಟ್ಟೆಗಿತ್ತ ಜೀವಫಲವ ಎಂಬುದು ಸಂತೃಪ್ತಭಾವ ತೋರುತ್ತಿರುವುದಾಗಿದೆ!

ಅನೇಕರು ಹಣ ಆಸ್ತಿ ಒಡವೆ ವಸ್ತು ಸುಖ ಸಂತಸ ನೀಡುತ್ತವೆಂದು ಭಾವಿಸುವರು. ಅಂದರೆ ಸಂತಸವಾದ ಬದುಕು ಮುಖ್ಯ! ಸುಖ ಸಂತಸದ ಬದುಕು ಯಾವುದೋ ಅದು ಉತ್ತಮವಾದ ಶ್ರೀಮಂತ ಬದುಕು ಎಂಬುದು ಅದರ ಅರ್ಥವಲ್ಲವೆ? ಕೆಲವರಿಗೆ ಸಂತಸವನ್ನು ಹಣ ಆಸ್ತಿ ಒಡವೆ ನೀಡಿದರೆ ಮತ್ತೆ ಕೆಲವರಿಗೆ ಮತ್ತಾವುದೋ ನೀಡಬಹುದು. ಈ ಗೀತೆಯಲ್ಲಿ ಒಲವು ಅಂತಹ ಸುಖ-ಸಂತೋಷವನ್ನು ನೀಡಿರುವುದರಿಂದ ಇವರು ಬಡವರು ಹೇಗೆ ಆಗುವರು? ಇವರು ನಿಜವಾಗಿ ಸಿರಿವಂತರಲ್ಲವೇ? ಹೌದು! ಒಲವೇ ಇದಕ್ಕೆ ಕಾರಣ! ಎಲ್ಲರೂ ಒಲವಿನಿಂದ ಬದುಕಿದಾಗ ಜೀವನ ನಂದನ !

ಈ ಗೀತೆಯ ಶಿಲ್ಪ ಸುಂದರವಾಗಿದೆ. ಒಂದು ಪದ ತೆಗೆದರೆ ಸಾಕು ಏನೋ ಇಲ್ಲಿ ಇರಬೇಕಿತ್ತು ಇಲ್ಲವಾಗಿದೆ ಅನಿಸುವಷ್ಟರಮಟ್ಟಿಗೆ ಬಿಗಿಯಾಗಿದೆ. ಈ ಗೀತೆಯ ಎಲ್ಲಾ ಸಾಲುಗಳನ್ನು ಗದ್ಯರೀತಿಯಲ್ಲಿ ಉದ್ದನೆಯ ಸಾಲುಗಳಾಗಿ ಜೋಡಿಸಿದರೆ ಐದು ಸಾಲುಗಳಾಗಬಹುದು! ಐದು ಸಾಲುಗಳು ಇಷ್ಟೊಂದು ವಿವರಣೆ ಬಯಸಿದುದು ಕವನ ಯಾ ಕಾವ್ಯದ ಸಾಧ್ಯತೆಗಳ ಮತ್ತು ಕವಿಯ ಪ್ರತಿಭೆಯ ಅನಾವರಣ! ಈಗ ಹೇಳಿ ಇದು ಸರಳ ಕವನ ಹೇಗೆ ಆದೀತು ?

ಕೆ ಟಿ ಸೋಮಶೇಖರ ಹೊಳಲ್ಕೆರೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x