ಬೆಸುಗೆ: ವೇದಾವತಿ ಹೆಚ್.ಎಸ್.

ಪಡುವಣದಂಚಿನಲ್ಲಿ ದಿನಕರನು ಮುಳುಗುತ್ತಿರುವ ಸಮಯದಲ್ಲಿ ಕಟಕಿಯಿಂದ ದೂರಾಚೆಯ ಗಿರಿ ಶಿಖರವನ್ನು ದಿಟ್ಟಿಸಿ ನೋಡುತ್ತಿದ್ದಾಗ ರಾಷ್ಟ್ರಕವಿ ಶಿವರುದ್ರಪ್ಪನವರ ಕವಿತೆ ನೆನಪಾಗುತ್ತದೆ.

“ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ”

ಎಷ್ಟೊಂದು ಅರ್ಥವಿದೆ. ಇಲ್ಲೋಬ್ಬರು ನಮ್ಮಲ್ಲಿ ಕೇಳುತ್ತಿದ್ದರು. “ಎಷ್ಟು ವರ್ಷವಾಯಿತು ಕಾರು ತೆಗೆದುಕೊಂಡು?ಇನ್ನೂ ಹೊಸದಾಗಿ ತೆಗೆದುಕೊಂಡು ಬಂದ ಹಾಗೆ ಇದೆಯಲ್ಲ?ವರ್ಷಕ್ಕೆ ಎಷ್ಟು ಬಾರಿ ಸರ್ವೀಸ್ ಮಾಡುತ್ತೀರಾ? ನಮ್ಮ ಕಾರು ನೋಡಿ ಹೇಗಿದೆಯೆಂದು. ಕಂಪನಿ ಚೆನ್ನಾಗಿಲ್ಲ. ಲಕ್ಷಗಟ್ಟಲೆ ಹಣ ಕೊಟ್ಟು ತೆಗೆದುಕೊಂಡು ಬಂದರೂ ಕಳಪೆ ಗುಣಮಟ್ಟದ ಕಂಪನಿಯ ಕಾರಾಗಿದೆ. ಯೋಚಿಸದೆ ತೆಗೆದುಕೊಂಡು ಈಗ ಮಾರಬೇಕೆಂದರೆ ಕಡಿಮೆ ಬೆಲೆ ಬರುತ್ತದೆ. ಅದ್ದರಿಂದ ಸ್ವಲ್ಪ ಸಮಯ ಅದನ್ನೇ ಉಪಯೋಗಿಸಿ ನಂತರ ಮಾರಾಟ ಮಾಡೋಣವೆಂದು ಯೋಚಿಸಿದ್ದೇನೆ”.

ಹೀಗೆ ಮನೆಯಲ್ಲಿರುವ ನಿರ್ಜೀವ ವಸ್ತುಗಳ ಬಗ್ಗೆ ಯೋಚಿಸುವ ಜನ ತಮ್ಮ ಸ್ವಂತ ಪ್ರೀತಿ ಪಾತ್ರರನ್ನು ಮರೆತಿರುತ್ತಾರೆ. ಮನೆಯಲ್ಲಿರುವ ವಸ್ತುಗಳ ಬೆಲೆ ಕಟ್ಟುವ ಮಂದಿ ಪಕ್ಕದಲ್ಲಿರುವ ತಮ್ಮನ್ನು ಇಷ್ಟಪಡುವ ಮಂದಿಯನ್ನು ಮರೆತು ತಾವು ನಿರ್ಜೀವಿ ವಸ್ತುಗಳಂತೆ ಬಾಳುತ್ತಾರೆ. ಮನೆಯಲ್ಲಿ ಎಲ್ಲಾ ವಸ್ತುಗಳನ್ನು ಹಣ ಕೊಟ್ಟು ಕೊಂಡುಕೊಳ್ಳುವ ಜನ ತನ್ನವರ ಬೆಲೆಕಟ್ಟಲಾಗದ ಸಂಬಂಧವನ್ನು ಮರೆತಿರುತ್ತಾನೆ. ತನ್ನವರಿಗೆಂದು ದಿನದ ಅಮೂಲ್ಯ ಸಮಯ ಮೀಸಲಿಡುವುದು ಮರೆತು ಹತ್ತಿರವಾಗಬೇಕಾದ ಸಂಬಂಧ ಇನ್ನೂ ದೂರವಾಗಿ ಬಿರುಕು ಹೆಚ್ಚುತ್ತಾ ಹೋಗುತ್ತದೆ.

ವಾಷಿಂಗ್ ಮಿಷನ್, ರೆಫ್ರೀಜರೇಟರ್, ಮನೆಯಲ್ಲಿ ದಿನ ಬಳಕೆಯ ಗ್ಯಾಸ್ ಸ್ಟವ್, ಕಾರು, ಬೈಕ್, ಮೊಬೈಲ್ ಮುಂತಾದ ವಸ್ತುಗಳಿಗೆ ಕಾಲ ಕಾಲಕ್ಕೆ ಸರ್ವೀಸ್ ಮಾಡಿಸಿ ಅವುಗಳ ಅಂದ ಚಂದ ಹೊಗಳುವ ಜನ ತನ್ನ ಬಂಧು ಬಳಗದವರನ್ನೇ ಮರೆತು ಅವರನ್ನು ಇದೇ ರೀತಿಯಲ್ಲಿ ಸಂಬಂಧ ಮುರಿಯದಂತೆ ಇಟ್ಟು ಕೊಳ್ಳಬೇಕೆಂಬುದು ಮರೆತು ಹೋಗಿ ಅವರಿಂದ ದೂರವಾಗಿರುತ್ತಾನೆ.

ಸಂಬಂಧಗಳು ಸಹ ಆಗಾಗ ತಪ್ಪು ಸರಿ ತಿದ್ದಿಕೊಂಡು ಎಲ್ಲಾ ವಸ್ತುಗಳನ್ನು ಪುನರ್ಬಳಕೆ ಮಾಡಿದ ರೀತಿಯಲ್ಲಿ ಸರಿಯಾದ ಮಾರ್ಗದಲ್ಲಿ ಮುನ್ನೆಡೆಸಿದರೆ ಅದು ಗಟ್ಟಿಯಾಗಿ ಕೊನೆಯವರೆಗೂ ನಿಲ್ಲುವುದರಲ್ಲಿ ಸಂದೇಹವಿಲ್ಲ. ಮರೆತು ಹೋದ ಬಂಧು ಬಳಗವನ್ನು ಸಮಯದ ಅಭಾವದ ನೆಪವೊಡ್ಡಿ ದೂರ ಮಾಡುವ ಬದಲು, ಇರುವ ಸಮಯದಲ್ಲಿ ಭೇಟಿಯಾಗಿ ಒಳ್ಳೆಯ ಮಾತುಕತೆಗಳನ್ನಾಡಿ ಕಳಚಿ ಹೋದ ಸಂಬಂಧವನ್ನು ಪುನರ್ಬಳಕೆ ಮಾಡಿ ಕೊಂಡರೆ ಶಾಶ್ವತವಾಗಿ ತಮ್ಮಿಂದ ದೂರವಾಗುವುದು ತಪ್ಪುತ್ತದೆ.

ಯಾವುದೋ ಸಣ್ಣಪುಟ್ಟ ವಿಷಯಕ್ಕೆ ಮನಃಸ್ತಾಪ ಮಾಡಿ ಕೊಂಡು ದೂರವಾದ ಸಂಬಂಧ ಬೇಕಾದಷ್ಟು ಇರುತ್ತದೆ. ಆದರೆ ಅವುಗಳನ್ನು ನೆನಪು ಮಾಡಲು ಮರೆತು ಹೋಗಿರುತ್ತಾರೆ. ಅವಶ್ಯಕತೆಗೆ ಬಳಕೆ ಮಾಡುವ ಬದಲು ಎಲ್ಲಾ ನಿರ್ಜೀವ ವಸ್ತುಗಳಿಗೆ ಕೊಡುವ ಗೌರವ ಅವರಿಗೆ ಕೊಟ್ಟರೆ ಶಾಶ್ವತವಾಗಿ ನಮ್ಮಲ್ಲಿ ನಮ್ಮ ಮನಸ್ಸಿನಲ್ಲಿ ನೆಲೆ ನಿಲ್ಲುತ್ತಾರೆ. ಅದಕ್ಕೆ ಹಿರಿಯರು ಹೇಳುತ್ತಿದ್ದ ಕಿವಿಮಾತುಗಳು ನೆನಪಿಗೆ ಬರುತ್ತದೆ. ಸಂಕ್ರಾಂತಿ ಹಬ್ಬದ ಸಡಗರದಲ್ಲಿ ಕಾರಣಾಂತರಗಳಿಂದ ಮಾತುಕತೆ ಬಿಟ್ಟ ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಿಗೆ ಹೋಗಿ ಎಳ್ಳನ್ನು ಬೀರಿ, ನಾಲ್ಕು ಒಳ್ಳೆಯ ಮಾತುಗಳನ್ನಾಡಿ ಬಂದರೆ ಸಂಬಂಧಗಳು ಪುನಶ್ಚೇತನಗೊಳ್ಳುವುದರಲ್ಲಿ ಸಂಶಯವಿಲ್ಲವೆಂದು.

ನಮ್ಮ ಪ್ರೀತಿ ಪಾತ್ರರಾಗಿದ್ದವರು ಯಾವುದೋ ಕಾರಣದಿಂದ ವೈಮನಸ್ಸು ಬಂದು ದೂರವಾದಾಗ ಅವರನ್ನು ಒಮ್ಮೆ ನೆನಪು ಮಾಡಿಕೊಂಡು ಅವರಿಂದ ನಮಗಾದ ಅನುಕೂಲ ಬಗ್ಗೆ ಮೆಲಕು ಹಾಕಿದರೆ ಪುನಃ ಸಂಬಂಧಗಳನ್ನು ಗಟ್ಟಿಗೊಳಿಸಲು ಸಾಧ್ಯ. ಚಿಕ್ಕ ಪುಟ್ಟ ವಿಚಾರಗಳನ್ನು ದೊಡ್ಡದಾಗಿ ರಾಡಿ ಮಾಡುವ ಬದಲು ಅದನ್ನು ಉಳಿಸಿ ಬೆಳೆಸುವ ಬಗ್ಗೆ ಯೋಚನೆ ಮಾಡಬೇಕು. ಇಂತಹ ಸಂದರ್ಭದಲ್ಲಿ ಅಹಂ ಬಿಟ್ಟು ಸಂಬಂಧವನ್ನು ಬೆಸೆಯಲು ಸಹಕರಿಸಬೇಕು.

ಒಂಟಿತನ ಎಂಬುದು ಜೀವನದಲ್ಲಿ ನಮಗೆ ನಾವೇ ತಂದು ಕೊಳ್ಳುವ ಸೆರೆಮನೆವಾಸವೆನ್ನಬಹುದು. ಒಂಟಿತನದಿಂದ ದುಃಖ ಹೆಚ್ಚಾಗಿ ಮನೋರೋಗಕ್ಕೆ ಹೋಗುತ್ತೇವೆಯೇ ಹೊರತು ಅದರಿಂದ ನೆಮ್ಮದಿ ಖಂಡಿತಾ ಇಲ್ಲ. ಸುಖ ಸಂತೋಷ ಹೇಳಿ ಕೊಳ್ಳಲು ನನ್ನವರೆಂದು ಇದ್ದರೆ ಅದಕ್ಕಿಂತ ಹೆಚ್ಚಿನ ಭಾಗ್ಯ ಯಾವುದು ಬೇಡ. ಕಷ್ಟ ಬಂದಾಗ ಮೇಲೆತ್ತಿ ಕಷ್ಟದ ಕಾಲದಲ್ಲಿ ಜೊತೆಯಲ್ಲಿ ನಮ್ಮೊಂದಿಗೆ ಜೀವನದ ಹೆಜ್ಜೆ ಹಾಕುವವರು ಬೇಕಾಗುತ್ತಾರೆ. ಒಳ್ಳೆಯ ಕಾರ್ಯದಲ್ಲಿ ಬೆನ್ನು ತಟ್ಟುವ ಮಂದಿಯು ನಮ್ಮೊಂದಿಗೆ ಇದ್ದರೆ ಇನ್ನೂ ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯ.

ಸಂಬಂಧಗಳಲ್ಲಿ ಬಿರುಕು ಉಂಟಾದಾಗ ಅವರಿಂದ ದೂರವಾಗಲು ಪ್ರಯತ್ನಿಸುತ್ತೇವೆ. ಅದರ ಬದಲು ಅಂತಹ ಸಂದರ್ಭ ಬರಲು ಕಾರಣವೆನೆಂದು ತಿಳಿದರೆ ಅದರಿಂದ ಹೊರಬರಲು ಸಾಧ್ಯ. ಜೀವನ ಪರ್ಯಂತ ಬೆಸೆಯಬೇಕಾದ ಸಂಬಂಧವನ್ನು ನಮ್ಮ ಕೈಯಾರೆ ಸಣ್ಣಪುಟ್ಟ ತಪ್ಪುಗಳನ್ನು ಮಾಡಿ ದೂರ ಮಾಡಿ ಕೊಳ್ಳುವುದು ವಿಷಾದ. ಒಬ್ಬರನ್ನೊಬ್ಬರು ದೂರುವ ಬದಲು ತಪ್ಪುಗಳನ್ನು ನೇರವಾದ ಮಾತುಗಳಿಂದ ಬಗೆಹರಿಸಿದರೆ ಬರ ಬಹುದಾದ ಮನಸ್ತಾಪ ದೂರವಾಗಿ ಹೋಗುವುದು ಖಂಡಿತ.

ಈಗಿನ ಕಾಲದಲ್ಲಿ ಎಲ್ಲರೂ ವಿಧ್ಯಾವಂತರೇ. ಪ್ರತಿಯೊಬ್ಬರೂ ಹೆಣ್ಣು ಗಂಡು ಎಂಬ ಭೇದ ಭಾವ ಇಲ್ಲದೆ ಬಾಳುವ ಕಾಲ ಇದಾಗಿದೆ. ಅದರೂ ಅಹಂನಿಂದ ದೂರವಾಗಿ ಹೋಗುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಈಗಿನ ರೀತಿಯ ತಂತ್ರಜ್ಞಾನದ ಬಳಕೆ ಕಡಿಮೆಯಿತ್ತು. ಅದರೂ ಹೊಂದಾಣಿಕೆ ಕಾಣಬಹುದಾಗಿತ್ತು. ಈಗಿನ ಕಾಲದಲ್ಲಿ ಮಕ್ಕಳಿಂದ ದೊಡ್ಡವರವರೆಗೂ ಮೊಬೈಲ್ ಫೋನ್ ಇದ್ದರೂ ತನ್ನವರಿಗೆ ಕರೆಮಾಡಿ ಕಷ್ಟಸುಖ ಕೇಳಲು ಕಷ್ಟವಾಗಿ ಹೋಗಿದೆ ಎನ್ನಬಹುದು. ಹಿಂದೆ ತಿಂಗಳಿಗೊಮ್ಮೆ ಅದರೂ ಸಂಬಂಧಿಕರನ್ನು ಭೇಟಿಯಾಗಿ ಕಷ್ಟಸುಖ ಹಂಚಿ ಕೊಳ್ಳುವ ಮತ್ತು ಯೋಗಕ್ಷೇಮ ಸಮಾಚಾರವನ್ನು ಪತ್ರ ಮೂಲಕ ಹಂಚಿ ಕೊಳ್ಳುತ್ತಿದ್ದ ಕಾಲವಾಗಿತ್ತು. ತಂತ್ರಜ್ಞಾನ ಮುಂದುವರಿದಷ್ಟು ಸಂಬಂಧದ ಬೆಲೆ ಇನ್ನಷ್ಟು ದೂರ ಸರಿಯುತ್ತಿದೆಯೆಂದರೆ ತಪ್ಪಾಗಲಾರದು.

ಹೆತ್ತವರನ್ನು ತಮ್ಮನ್ನು ಸಾಕಿ ಸಲುಹಿದವರನ್ನು ನೋಡಿ ಕೊಳ್ಳುವುದು ಇಂದಿನ ಪೀಳಿಗೆಗೆ ಕಷ್ಟಕರವಾಗಿರುವುದು ಖೇದಕರ ಎನ್ನಬಹುದು. ಎಲ್ಲಾ ತಂತ್ರಜ್ಞಾನದ ಬಳಕೆಯಿದ್ದರೂ ಸಂತೋಷ ಕ್ಷಣಗಳನ್ನು ಮರೆಯುತ್ತಿದ್ದಾರೆ. ಅಪ್ಪ ಅಮ್ಮನ ಕಷ್ಟಸುಖವಾಗಲಿ, ಮನೆಯಲ್ಲಿರುವ ಹೆಂಡತಿಯ ಯೋಗಕ್ಷೇಮವಾಗಲಿ, ಮದುವೆ ವಾರ್ಷಿಕೋತ್ಸವ, ಹುಟ್ಟಿದ ದಿನ ಮುಂತಾದ ಮುಖ್ಯವಾದ ದಿನಗಳನ್ನು ಮರೆತು ಪೇಚಿಗೆ ಸಿಗುವುದಕ್ಕಿಂತ ತನ್ನವರೆಗೆಂದು ದಿನಗಳಲ್ಲಿ ಸ್ವಲ್ಪ ಸಮಯ ಮೀಸಲಿಡುವುದು ಒಳಿತು. ಕಳೆದು ಹೋದ ಸಮಯವೆಂದು ಮರುಕಳಿಸುವುದಿಲ್ಲ. ನಮ್ಮೆದುರಿಗೆ ಜೀವಂತವಾಗಿರುವ ವಸ್ತುಗಳಿಗೆ ಬೆಲೆ ಕೊಡುವುದರ ಬದಲು ನಿರ್ಜೀವ ವಸ್ತುಗಳಿಗೆ ಆಸೆ ಪಟ್ಟರೆ ಏನು ಪ್ರಯೋಜನ. ನಾನು ನನ್ನದು ಎನ್ನುವುದಕ್ಕಿಂತ ನಾವು ನಮ್ಮವರೆಂದು ಜೀವನ ಸಾಗಿಸಿದರೆ ಎಲ್ಲಾರ ಬದುಕು ಸಾರ್ಥಕವಾಗುತ್ತದೆ.

-ವೇದಾವತಿ ಹೆಚ್.ಎಸ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x