ವಿಜ್ಞಾನ-ಪರಿಸರ

ಬೆವರಿಳಿಸಿದ ಸುಂಗ!!!: ಅಖಿಲೇಶ್ ಚಿಪ್ಪಳಿ

akhilesh
ಅಪ್ಪ ದೇಹದಾನ ಮಾಡಿದ ಬಗ್ಗೆ ಒಂದಿಷ್ಟು ಜನ ಅಸಮಧಾನ ವ್ಯಕ್ತಪಡಿಸಿದರು. ಇರಲಿ ಅವರವರ ಭಾವಕ್ಕೆ ತಕ್ಕಂತೆ ಎಂದು ಸುಮ್ಮನಾದೆ. ಧಾರ್ಮಿಕ ವಿಧಿ-ವಿಧಾನಗಳನ್ನು ಮಾಡಬೇಕಲ್ಲ. ಕಾಶಿಗಿಂತ ಪವಿತ್ರವಾದ ಸ್ಥಳ ಗೋಕರ್ಣ ಎಂದು ಬಲ್ಲವರು ಹೇಳಿದರು. ಸರಿ ಎಂದು ಸಕುಟುಂಬ ಸಮೇತನಾಗಿ ಗೋಕರ್ಣಕ್ಕೆ ಹೊರಟಾಯಿತು. ಹೋದ ಕೂಡಲೇ ಮೊಟ್ಟ ಮೊದಲ ಕೆಲಸವೆಂದರೆ, ತಲೆ ಬೋಳಿಸಿಕೊಂಡಿದ್ದು. ಕನ್ನಡಿಯಲ್ಲಿ ಒಂದು ಕ್ಷಣ ಗುರುತೇ ಸಿಗದಂತೆ ಆಗಿತ್ತು. ಸ್ನಾನ ಮಾಡಿಬಂದವನು ಮೊದಲು ಹುಡುಕಿದ್ದು ಬಾಚಣಿಕೆಯನ್ನು. ಅಭ್ಯಾಸ ಬಲದಂತೆ ತಲೆ ಬಾಚಲು ಹೋದರೆ ಅಲ್ಲಿ ಕೂದಲೇ ಇಲ್ಲ. ಮದ್ಯಾಹ್ನದ ಒಳಗೆ ಒಂದನೇ ದಿನದ ಕಾರ್ಯಕ್ರಮ ಮುಗಿಯಿತು. ಮಾರನೇ ದಿನದ ವರೆಗೆ ಫ್ರೀ!. ಓಂದಷ್ಟು ಹೊತ್ತು ವಿಶ್ರಾಂತಿ ಪಡೆದು, ಸಂಜೆಯ ವೇಳೆಗೆ ಕಡಲತಡಿಗೆ ಸಮಯ ಕಳೆಯುವುದೆಂದು ಎಲ್ಲರೂ ಹೊರಟೆವು.

ಬೋರ್‍ಗುಟ್ಟುವ ಸಮುದ್ರ, ಅಲೆಗಳಲ್ಲಿ ಕೇಕೆ ಹಾಕುವ ಮಕ್ಕಳು. ಡಿಸೆಂಬರ್ ತಿಂಗಳಾದ್ದರಿಂದ, ಹೊರಗಡೆಯಿಂದ ಶಾಲಾ ಪ್ರವಾಸಕ್ಕೆ ಬಂದ ಮಕ್ಕಳೇ ಹೆಚ್ಚಿದ್ದರು. ಎಲ್ಲರೂ ನೀರಿನ ಸೆಳೆತಕ್ಕೆ ಸಿಲುಕಿದವರೇ ಆಗಿದ್ದರು. ಮರಳ ಮೇಲೆ ನಿಂತ ಒಂಟೆಗಳೆರೆಡು ತಮ್ಮ ಬೆನ್ನ ಮೇಲೆ ಹೊತ್ತೊಯ್ಯಲು ಪ್ರವಾಸಿಗರಿಗಾಗಿ ಕಾದು ನಿಂತಿದ್ದವು. ನೀರಿನ ಮೇಲೆ ಚಲಿಸುವ ಬೈಕಿನಂತಹ ಯಾಂತ್ರಿಕೃತ ದೋಣಿಗೆ ಗಿರಾಕಿಗಳು ಬಹಳಿದ್ದವು. ಮೊಬೈಲ್ ಕ್ಯಾಮೆರಾದ ಕಣ್ಣಿಗೆ ಆ ದಿನದ ಸೂರ್ಯ ಅಷ್ಟೇನೂ ಅಪ್ಯಾಯಮಾನವಾಗಿ ತೋರಲಿಲ್ಲ. ಹಾಗೆಯೇ ಮರಳಿನ ಮೇಲೆ ಹೆಜ್ಜೆ ಹಾಕುತ್ತಾ ಹೋದೆವು. ಅಕ್ಕನ ಮಗಳು ಇನ್ನೂ ಚಿಕ್ಕವಳು. ಅವಳೊಂದಿಷ್ಟು ಹೊತ್ತು ಕುಣಿದು ಕುಪ್ಪಳಿಸಿಯಾಯಿತು. ಕಡಲಿನಿಂದ ತೇಲಿ ಬರುವ ಮೀನಿನ ಅವಶೇಷಗಳನ್ನು ತಿನ್ನುತ್ತಿರುವ ಕಾಗೆಗಳಿಗೆ ಒಂದಿಷ್ಟು ಕಾಟ ಕೊಟ್ಟೆವು. ಕಾಗೆಗಳು ಬಹಳ ಹುಷಾರಿಯಾದ ಪಕ್ಷಿಗಳು. ಅವುಗಳ ಹಿಂದೆ ಓಡಿ ನಾವು ಅವುಗಳಿಗೆ ಕಾಟ ಕೊಟ್ಟೆವೆಂದು ತಿಳಿದುಕೊಂಡೆವು. ಆದರೆ ವಾಸ್ತವವಾಗಿ ನಮ್ಮನ್ನು ಬೇಕಾ ಬಿಟ್ಟಿ ಓಡಿಸಿ ನಮಗೇ ಅವು ಸುಸ್ತು ಮಾಡಿದ್ದವು.

ನಮ್ಮ ಈ ಮಳ್ಳಾಟವನ್ನು ಬೀಚಿನಲ್ಲಿದ್ದವರೂ ಸೇರಿದಂತೆ ಕುಟುಂಬದವರೂ ವಿಚಿತ್ರವಾಗಿ ನೋಡಿದರು. ಕತ್ತಲಾಗುತ್ತಿತ್ತು. ಕುಟುಂಬದ ಸದಸ್ಯರು ವಾಪಾಸು ಹೊರಟರು. ಒಬ್ಬನೇ ಹಾಗೆಯೇ ನಡೆಯುತ್ತಲೇ ಇದ್ದೆ. ಮಬ್ಬುಗತ್ತಲು ಆವರಿಸುತ್ತಿತ್ತು. ಕಾಲಬುಡದಲ್ಲಿ ಮಿಂಚಿನ ವೇಗದಲ್ಲಿ ಓಡುತ್ತಿದ್ದ ಚಿಕ್ಕ-ಚಿಕ್ಕ ಏಡಿಗಳು. ಹಗಲಿನಲ್ಲಿ ಮರಳಿನಡಿಯಲ್ಲಿ ಮುಂಗೈಯಷ್ಟು ಆಳದ ತಳದಲ್ಲಿ ವಿಶ್ರಾಂತಿ ಪಡೆಯುವ ಈ ಏಡಿಗಳು ಮನುಷ್ಯರನ್ನು ಕಂಡರೆ, ಅಪಾರ ವೇಗದಲ್ಲಿ ಚಲಿಸಿ, ತಾವೆ ತೆಗೆದುಕೊಂಡಿರುವ ಕುಳಿಯೊಳಕ್ಕೆ ನುಸುಳಿ ಹೋಗುತ್ತವೆ. ನಮ್ಮ ತೋಟದ ಏಡಿಯಷ್ಟು ದೊಡ್ಡದೂ ಅಲ್ಲ ಮತ್ತು ನಿಧಾನವೂ ಅವಕ್ಕೆ ಸಲ್ಲ. ಅತಿ ವೇಗ. ಇವುಗಳನ್ನು ಹಿಡಿದು ಸತಾಯಿಸಬೇಕು ಎಂಬ ಒಂದು ಹುಂಬ ಆಲೋಚನೆ ಬಂತು. ಒಂದು ಕುಳಿಯ ಬದಿ ನಿಶ್ಯಬ್ಧವಾಗಿ ಕುಳಿತೆ. ಹೊರಗೆ ಬಂದ ಸುಂಗನಿಗೆ ನನ್ನಿರಿವು ತಿಳಿಯಲಿಲ್ಲ. ದಬಕ್ಕನೆ ಕುಳಿಯನ್ನು ಮುಚ್ಚಿ ಶೀಘ್ರವಾಗಿ ಕುಳಿ ಸೇರುವ ಅದರ ಯೋಜನೆಯನ್ನು ವಿಫಲಗೊಳಿಸಿದೆ. ಕಕ್ಕಾಬಿಕ್ಕಿಯಾದ ಸುಂಗನಿಗೆ ಏನು ಮಾಡುವುದು ಎಂದು ತೋಚಲಿಲ್ಲ. ನನ್ನ ಕಾಲಡಿಯ ಕತ್ತಲಿನಲ್ಲೇ ಅಡಗುವ ಪ್ರಯತ್ನ ಮಾಡಿತು. ನಿಧಾನಕ್ಕೆ ಹಿಡಿಯಲು ಹೋದರೆ ಬೀಚಿನ ತುಂಬಾ ಓಡಿಸಿತು. ನಾನು ಹಠ ತೊಟ್ಟವನಂತೆ ಅದಕ್ಕೆ ಯಾವ ಕುಳಿಯನ್ನು ಹೊಕ್ಕಲು ಬಿಡಲಿಲ್ಲ. ಅಂತೂ ಇಂತೂ ಹಿಡಿದೆ. ಅದರ ಒಂದು ಫೋಟೊ ತೆಗೆದು ವಾಪಾಸು ಬಿಡುವುದು ನನ್ನ ಕಾರ್ಯಯೋಜನೆ. ನೋಡಿದರೆ ಮೊಬೈಲ್ ಇಲ್ಲ. ಇದ್ದರೂ ಅತಿವೇಗದ ಸುಂಗನ ಫೋಟೊ ತೆಗೆಯುವುದು ಸಾಧ್ಯವಾಗುತ್ತಿರಲಿಲ್ಲ. ಅದನ್ನು ಎಷ್ಟು ಹೊತ್ತು ಕೈಯಲ್ಲಿ ಹಿಡಿದು ಕೊಂಡೇ ಇರುವುದು. ಸ್ವಲ್ಪ ಕೈ ಸಡಿಲಿಸಿದೆ. ಸುಂಗ ಜೀವ ಉಳಿಯಿತೆಂದು ಓಡಿ ಬೇರೆ ಯಾವುದೋ ಸುಂಗನ ಕುಳಿಯಲ್ಲಿ ಅಡಗಿತು. ಇಷ್ಟೆಲ್ಲಾ ಮಾಡುವ ಹೊತ್ತಿಗೆ ಮೈಯೆಲ್ಲಾ ಜಲ-ಜಲ ಬೆವರು. ಬರೀ 2 ಸೆಂಟೀಮೀಟರ್ ಸೈಜಿನ ಸುಂಗ ಬರೋಬ್ಬರಿ 80 ಕೆ.ಜಿ. ತೂಗುವ ನನ್ನನ್ನು ಹೈರಾಣು ಮಾಡಿ ಹಾಕಿತು. 

ಸ್ಥಳೀಯವಾಗಿ ಆ ಜೀವಿಗೆ ಏನು ಹೇಳುತ್ತಾರೆ ಎಂದು ಗೊತ್ತಿರಲಿಲ್ಲ. ಒಂದಿಪ್ಪತ್ತು ಯಾಂತ್ರೀಕೃತ ದೋಣಿಗಳು ಅಲ್ಲಿದ್ದವು. ಅಂಬಿಗರು ಮಾರನೇ ದಿನ ಮೀನು ಹಿಡಿಯುವ ಪೂರ್ವ ತಯಾರಿಯಾಗಿ ಬಲೆಗಳನ್ನು ಬಿಡಿಸಿ ಜೋಡಿಸಿಕೊಳ್ಳುತ್ತಿದ್ದರು. ಸುಮಾರು 60 ವರ್ಷದ ವ್ಯಕ್ತಿಯ ದೋಣಿಯ ಬಳಿ ಸಾಗಿ, ಒಂದು ನಿಮಿಷ ಮಾತನಾಡಲು ಪುರುಸೊತ್ತು ಇದೆಯಾ? ಕೇಳಿದೆ. ಬನ್ನಿ ಎಂದರು. ತನ್ನ ಬಲೆ ಬಿಡಿಸುವ ಕೆಲಸದ ಮಧ್ಯೆಯೇ ಏನು ಎಂದು ಕೇಳಿದರು. ಇಲ್ಲಿ ಮರಳಿನಲ್ಲಿ ಏಡಿಯ ತರಹದ್ದು ವೇಗವಾಗಿ ಓಡಿ, ಕುಳಿಯೊಳಕ್ಕೆ ಸೇರಿಕೊಳ್ಳುತ್ತಲ್ಲ, ಅದರ ಹೆಸರೇನು ಎಂದು ಕೇಳಿದೆ. ಅದಾ! ಸುಂಗ!!! ಎಂದರು. ಬೆಳಗಿನ ಹೊತ್ತಿನಲ್ಲಿ ಮರಳಿನಡಿಯಲ್ಲಿರುವ ಸುಂಗಗಳು, ಸಂಜೆಯಾಗುತ್ತಿದ್ದಂತೆ, ಮೇಲೆ ಬಂದು ಸಮುದ್ರಕ್ಕೆ ಇಳಿಯುತ್ತವೆ. ಮೀನಿನ ಅವಶೇಷಗಳು, ನೀರಿನಲ್ಲಿರುವ ಚಿಕ್ಕ-ಪುಟ್ಟ ಕ್ರಿಮಿಗಳನ್ನು ತಿನ್ನುತ್ತವೆ. ಬೆಳಗಾಗುವ ಹೊತ್ತಿಗೆ ಮರಳಿ ಮರಳಿಗೆ ಬಂದು ಸೇರುತ್ತವೆ. ಅಷ್ಟೇನು ಕುತೂಹಲಕಾರಿಯಲ್ಲದ ಈ ಮಾಹಿತಿಯನ್ನು ಸ್ವಲ್ಪ ತಾತ್ಸಾರದಿಂದಲೇ ಹೇಳಿದರು. ಮಾತು ಸುಂಗನಿಂದ ಅಂಬಿಗರ ಬದುಕಿನತ್ತ ತಿರುಗಿತು.

ಗೋಕರ್ಣದ ದೇವಸ್ಥಾನದ ಪಕ್ಕದಲ್ಲೇ ಈ ಅಂಬಿಗರ 64 ಮನೆಗಳಿವೆ. ನಾನು ಮಾತನಾಡಿಸಿದ “ಮಂಕಾಳಿ”ಯೇ ಅವರ ಆ ಪುಟ್ಟ ಸಮುದಾಯದ ಮುಖ್ಯಸ್ಥ. ಬೆಳಗ್ಗೆ 4 ಗಂಟೆಗೆ ಎದ್ದು ಯಾಂತ್ರಿಕೃತ ದೋಣಿಯನ್ನು ತೆಗೆದುಕೊಂಡು, ಸಮುದ್ರದಲ್ಲಿ ಹೋಗುವುದು. ಸುಮಾರು 10-11 ಗಂಟೆಯ ಹೊತ್ತಿಗೆ ವಾಪಾಸು ಬರುವುದು ಇವರ ನಿತ್ಯದ ಕಾಯಕ. ಒಂದೊಂದು ಸಾರಿ ಮೀನು ಭರಪೂರ ಸಿಗುತ್ತದೆ. ಕೆಲವೊಂದು ಬಾರಿ ಹೋದ ದಾರಿಗೆ ಸುಂಕವಿಲ್ಲದಂತೆ ವಾಪಾಸು ಬರಬೇಕಾಗುತ್ತದೆ. ಹೀಗಿದೆ ಅವರ ಅನಿಶ್ಚಿತ ಬದುಕು. ಸಮುದ್ರದಲ್ಲಿ ಎಷ್ಟು ದೂರ ಹೋಗುತ್ತೀರಿ ಎನ್ನುವ ಪ್ರಶ್ನೆಗೆ, 5 ಆಳು, 10 ಆಳು ಕೆಲವೊಂದು ಬಾರಿ 15 ಆಳು ದೂರದವರೆಗೂ ಹೋಗುತ್ತೇವೆ ಎಂದರು. ಇಲ್ಲಿ ಲೆಕ್ಕಾಚಾರ ಸ್ವಲ್ಪ ಗೊಂದಲವಿದೆ. 5 ಆಳು ಎಂದರೆ, 5 ಜನ ಲಂಬವಾಗಿ ಮುಳುಗುವಷ್ಟು ಆಳ ಅಂದರೆ 6 ಅಡಿ ಮನುಷ್ಯ ಮುಳುಗುವಷ್ಟು ಆಳವೆಂದರೆ, ಒಂದು ಆಳು ಅಂತಾಗಬೇಕು. 

ಕಷ್ಟಸಹಿಷ್ಣುಗಳಾದ ಅಲ್ಲಿನ ಬೆಸ್ತರು (ಅಂಬಿಗರು) ತಾವು ಗಂಗೆಯ ಮಕ್ಕಳು ಎಂದು ಕರೆದುಕೊಳ್ಳುತ್ತಾರೆ. ಅಂಬಿಗರು ಗಂಗೆಯ ಮಕ್ಕಳಾದರೆ, ಮೊಗವೀರ, ಹರಿಕಂತ್ರ ಇತ್ಯಾದಿಯವರು ಗೌರಿಯ ಮಕ್ಕಳು ಎಂದು ನಂಬಲಾಗುತ್ತದೆ. ಏನೇ ಆದರೂ ಕೆಲಸ ಮಾತ್ರ ಬೆಸ್ತರದೇ ಆಗಿದೆ. ಅಲ್ಲಿನ ಸಾಮಾಜಿಕ ಜೀವನದ ಮೇಲೆ ತುಸು ಬೆಳಕು ಚೆಲ್ಲುವಂತಹ ಮಾತುಗಳು ಹರಿದು ಬಂದವು. ತಲೆತಲಾಂತರದಿಂದ ಸಮುದ್ರ ತಟದಲ್ಲೇ ವಾಸ ಮಾಡುತ್ತಿದ್ದರೂ, ಅವರಲ್ಲಿ ಕೆಲವರಿಗೆ ಅಂದರೆ 24 ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಹಕ್ಕುಪತ್ರವಿಲ್ಲದೇ ಯಾವ ಬ್ಯಾಂಕು ಸಾಲ ನೀಡುವುದಿಲ್ಲ. ಇದರಿಂದ ಅವರ ಬದುಕು ಆರಕ್ಕೇರದೇ ಹಾಗೆಯೇ ಇದೆ. ಪ್ರತಿ ಚುನಾವಣೆ ಬಂದಾಗಲೂ ಓಟು ಕೇಳಲು ಬರುವವರು, ಈ ಬಾರಿ ನಿಮಗೆ ಗ್ಯಾರೆಂಟಿಯಾಗಿ ಹಕ್ಕು ಪತ್ರ ಕೊಡಿಸುತ್ತೇವೆ ಎಂಬ ಭರಪೂರ ಆಶ್ವಾಸನೆಯನ್ನು ನೀಡಿ ಓಟು ಪಡೆಯುತ್ತಾರೆ. ಆದರೆ ಇದುವರೆಗೂ ಅವರ ವಾಸದ ಮನೆಗೆ ಹಕ್ಕು ಪತ್ರ ಸಿಕ್ಕಿಲ್ಲ ಎಂಬುದು ಪರಮಸತ್ಯ.

ಅದೇ ಮಂಕಾಳಿಯೊಂದಿಗೆ ಮಾತಿಗಿಳಿದು, ಮಕ್ಕಳೆಷ್ಟು ಕೇಳಿದೆ. ಎರಡು ಗಂಡು ಹಾಗೂ ಎರಡು ಹೆಣ್ಣು ಎಂದರು. ಹೆಣ್ಣು ಮಕ್ಕಳಿಗೆ ಮದುವೆ ಆಗಿದೆಯಾ ಎಂದಾಗ, ಒಂದು ಮದುವೆ ಮಾಡಬೇಕೆಂದರೆ ಕನಿಷ್ಟ ಹತ್ತು ತೊಲ ಬಂಗಾರವನ್ನು ಹುಡುಗನ ಮನೆಯವರಿಗೆ ಕೊಡಬೇಕು. ಅಷ್ಟು ದುಡ್ಡು ನಮ್ಮಲ್ಲಿ ಇಲ್ಲ, ಹಾಗಾಗಿ ಮದುವೆ ಮಾಡಿಲ್ಲ ಎಂದರು. ನಮ್ಮ ಹವ್ಯಕ ಜನಾಂಗದಲ್ಲಿ ಗಂಡುಗಳಿಗೆ ಹೆಣ್ಣು ಸಿಗದೇ ಕಡ್ಡಾಯವಾಗಿ ಮದುವೆರಹಿತ ಗಂಡುಗಳಾಗಿದ್ದು ಎದುರಿಗೆ ರಾಚಿತು. ಅದನ್ನೇ ಅವರಿಗೆ ಹೇಳಿದೆ. ವಿಷಾದದಿಂದ ನಕ್ಕರು. ಮಂಕಾಳಿಯ ಜೊತೆ ಅವರ ಮಗ ಗಣಪತಿ ಬಹುಷ: 18-20 ವಯಸ್ಸು ಇರಬೇಕು. ಅವನಿಗೆ ಮೊಬೈಲ್ ನೀಡಿ ನನ್ನ ಹಾಗೂ ಮಂಕಾಳಿಯ ಫೋಟೋ ತೆಗೆಯಲು ಹೇಳಿದೆ. ಆತನೂ ಅಪ್ಪನ ಕಸುಬನ್ನೇ ನೆಚ್ಚಿಕೊಂಡಿದ್ದಾನೆ. ಮನೆಯಲ್ಲಿರುವ ಗಂಡು ಮಕ್ಕಳಿಗೆ ಹೆಣ್ಣು ತರಬೇಕು ಆಮೇಲೆ ಹೆಣ್ಣುಮಕ್ಕಳ ಮದುವೆ ಮಾಡಬೇಕು. ಈ ಪರಿಸ್ಥಿತಿ ಆ ಜನಾಂಗದಲ್ಲಿ ಇದೆ. ಇಷ್ಟರಲ್ಲೇ 8 ಗಂಟೆ ಆಗಿತ್ತು. ಮಾತಿನ ಭಂಡಾರ ಖಾಲಿಯಾಗಿರಲಿಲ್ಲ. ಮಧ್ಯದಲ್ಲೇ ಎಲೆ ಅಡುಕೆ ಹಾಕುತ್ತೀರ, ತರಿಸಲಾ ಎಂದು ಮಂಕಾಳಿ ಕೇಳಿದರು. ಬೇಡ ಎಂದೆ. ಕಷ್ಟಜೀವಿಗಳ ಕಷ್ಟ ನೋಡಿ ಮನ ಮರುಕಿತು. ಕುಳಿತುಕೊಳ್ಳಲು ನೀಡಿದ್ದ ಮಣೆಯನ್ನು ಎತ್ತಿ ದೋಣಿಯ ಮೇಲೆ ಇಟ್ಟು ಸಿಗುವ ಎಂದು ಹೇಳಿ ಬಂದೆ.

1

11

111

ಮಾರನೇ ದಿನ ಮದ್ಯಾಹ್ನ ಜಗತ್ಪ್ರಸಿದ್ಧ ಓಂ ಬೀಚಿಗೆ ಹೋದೆವು. ಅಲ್ಲೂ ನಿನ್ನೆಯ ಹಾಗೆಯೇ ಜನರ ಕಲರವ ಇತ್ತು. ವಿದೇಶಿ ಜೋಡಿಗಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುವುದು ಕಂಡು ಬಂತು. ಬೀಚಿನ್ನು ಗಲೀಜು ಮಾಡಬಾರದು, ಮಧ್ಯ-ಗಾಂಜ ಇತ್ಯಾದಿಗಳನ್ನು ನಿಷೇಧಿಸಲಾಗಿದೆ ಎಂಬ ಫಲಕ ಕಣ್ಣು ಕುಕ್ಕಿತು. ಈ ದಿನ ಸೂರ್ಯಾಸ್ತ ಮನೋಹರವಾಗಿತ್ತು.  ಒಂದೆರಡು ಫೋಟೊ ತೆಗೆದೆ. ನೀರಿನಲ್ಲಿ ಕೆಲವರು ನೀರ್ಬಾಲ್ ಆಡುತ್ತಿದ್ದರು. ಕೆಲವರು ಬೀಚಿನಲ್ಲಿ ವಾಲಿಬಾಲ್ ಆಟವಾಡುತ್ತಿದ್ದರು. ವಾಪಾಸು ಬರುವಾಗ ಒಂದು ಚಿಕ್ಕ ಕೂಸು ಮಗ್ಗಿನಲ್ಲೊಂದು ಕಲ್ಲು ಹಾಕಿಕೊಂಡು ಕಟ-ಕಟ ಎಂದು ಶಬ್ಧ ಮಾಡುತ್ತಿತ್ತು. ಬಹಳ ಮುದ್ದಾಗಿತ್ತು. ಲುಕ್ ಹಿಯರ್ ಎಂದೆ. ತಿರುಗಿ ನೋಡಿತು. ಅವರ ಅಮ್ಮ ಅವಳಿಗೆ ಇಂಗ್ಲೀಷ್ ಬರುವುದಿಲ್ಲ ಎಂಬುದನ್ನು ಇಂಗ್ಲೀಷ್‍ನಲ್ಲೇ ಹೇಳಿದರು. ಗಂಡ ಮುಗುಳ್ನಕ್ಕ. ಅವರಿಬ್ಬರೂ ಫ್ರೆಂಚ್ ದಂಪತಿಗಳು. ಅವರಿಗೆ ಇಂಗ್ಲೀಷ್ ಬರುತ್ತದೆ. ಮಗಳಿಗೆ ಇನ್ನೂ ಕಲಿಸಿಲ್ಲ. ನನಗೆ ಫ್ರೆಂಚ್ ಬರುವುದಿಲ್ಲ. ಸಂಹವನಕ್ಕೆ ಭಾಷೆಯೇಕೆ ಬೇಕು. ಕೂಸಿನ ಅಪ್ಪನ ಹತ್ತಿರ ಒಂದು ಫೋಟೊ ತೆಗೆದುಕೊಳ್ಳಲಾ ಎಂದು ಕೇಳಿದೆ. ಸಂತೋಷದಿಂದ ಒಕೆ ಎಂದರು. ಬರುವಾಗ ಮಗು ಬೈ ಹೇಳಿತು.

ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿಯ ಜನ ಒತ್ತಡದಿಂದ ಗಲೀಜು ಒಟ್ಟಾಗುವುದು ಗೋಕರ್ಣದಲ್ಲೂ ಇದೆ. ಗಂಗೆಯಂತಹ ಗಂಗೆಯನ್ನೇ ಮಲಿನಗೊಳಿಸಿ, ಸ್ನಾನಕ್ಕೂ ಯೋಗ್ಯವಲ್ಲದ ಹಾಗೆ ಮಾಡಿಟ್ಟ ದೇಶ ನಮ್ಮದು. ಕೋಟಿ ತೀರ್ಥದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಮುಗಿಸಿ ಅನ್ನದ ಪಿಂಡವನ್ನು ನೀರಿಗೆ ಹಾಕುತ್ತಾರೆ. ನೀರಿನಲ್ಲಿರುವ ಮೀನುಗಳು ಅನ್ನವನ್ನು ತಿಂದು ಬದುಕುತ್ತವೆ. ಕೋಟಿ ತೀರ್ಥವನ್ನು ಸ್ವಚ್ಛ ಮಾಡಲಾಗಿದೆ ಎಂದು ಅಲ್ಲಿಯವರು ಹೇಳಿದರು. ನನಗೇನು ಅದು ಸ್ವಚ್ಛ ಇರುವಂತೆ ತೋರಲಿಲ್ಲ. ಕೋಟಿ ತೀರ್ಥದಲ್ಲಿ ಒಂದೈದಾರು ಮುಳುಗು ಬಾತುಗಳು ಇದ್ದವು. ಅಲ್ಲಿನ ಪುರೋಹಿತರಿಗೆ ಈ ಬಾತು ಒಂದು ಸಮಸ್ಯೆಯಾಗಿ ತೋರಿದೆ. ತಿಮಿಂಗಿಲಗಳನ್ನೇ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡುತ್ತಾರೆ. ಇದೊಂದು ಬಾತುಕೋಳಿಯನ್ನು ಹಿಡಿದು ಸಾಗಿಸಲು ಇನ್ನೂ ಆಗಿಲ್ಲವೆಂದು ಅಸಮಧಾನವನ್ನು ಹೊರಹಾಕಿದರು. ಅವರ ಚಿಂತೆಯೆಂದರೆ, ಆ ಬಾತುಕೋಳಿಗಳು ಪಿಂಡದನ್ನ ತಿನ್ನುವ ಮೀನುಗಳನ್ನು ತ್ವರಿತವಾಗಿ ತಿಂದು ಹಾಕುತ್ತವೆ. ಮೀನು ಇಲ್ಲದ ನೀರು ಹೆಚ್ಚು ಬೇಗ ಗಲೀಜು ಆಗುತ್ತದೆ. ಮತ್ತೆ ಅವರಿಗೆ ಜೀವಜಾಲದ ಪಾಠ ಮಾಡಲು ಹೋಗುವುದು ಆ ಸಂದರ್ಭದಲ್ಲಿ ಅಷ್ಟು ಸಭ್ಯತೆಯೆಂದು ನನಗೂ ಅನಿಸಲಿಲ್ಲ. ಆದ್ದರಿಂದ ಬಾಯಿಮುಚ್ಚಿಕೊಂಡು ಅವರು ಹೇಳಿದ ತಂತ್ರಗಳನ್ನಷ್ಟೇ ಅನುಸರಿಸಿದೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *