ವಾಸುಕಿ ಕಾಲಂ

ಬೆಳ್ಳಿಮೋಡ: ವಾಸುಕಿ ರಾಘವನ್

 

ನಾನು ಪುಟ್ಟಣ್ಣ ಕಣಗಾಲ್ ಅವರ ಸಾಕಷ್ಟು ಚಿತ್ರಗಳನ್ನ ನೋಡಿಲ್ಲ. ನೋಡಿರುವ ಬಹಳಷ್ಟು ಚಿತ್ರಗಳು ಚಿಕ್ಕವನಾಗಿದ್ದಾಗ, ದೂರದರ್ಶನದಲ್ಲಿ ಪ್ರಸಾರ ಆಗ್ತಿದ್ದ ಕಾಲದಲ್ಲಿ, ಜಾಹೀರಾತುಗಳ ನಡುವೆ. ಚಲನಚಿತ್ರ ಒಂದು ಕಲೆ ಎಂಬ ಗ್ರಹಿಕೆ ಶುರು ಆದಮೇಲೆ ನೋಡಿರೋ ಚಿತ್ರಗಳಲ್ಲಿ ಕಾರಣಾಂತರಗಳಿಂದ ಕನ್ನಡ ಚಿತ್ರಗಳ ಸಂಖ್ಯೆ ಕಮ್ಮಿ ಅಂತಾನೆ ಹೇಳ್ಬೇಕು. ಈ ವಿಷಯದ ಬಗ್ಗೆ ನನಗೆ ಬೇಸರ ಇದೆ ಕೂಡ.   ಇದನ್ನು ಬದಲಿಸೋ ಪ್ರಯತ್ನ ಮಾಡ್ತಿದೀನಿ ಇತ್ತೀಚಿಗೆ. ಈ ಪಯಣದಲ್ಲಿ ನನಗೆ ಸಿಕ್ಕ ಪುಟ್ಟಣ್ಣರ ಚಿತ್ರ “ಬೆಳ್ಳಿಮೋಡ”.

1966ರಲ್ಲಿ ಬಿಡುಗಡೆಯಾದ ತ್ರಿವೇಣಿ ಅವರ ಕಾದಂಬರಿ ಆಧರಿಸಿದ ಬೆಳ್ಳಿಮೋಡ ಪುಟ್ಟಣ್ಣರ ಮೊದಲ ಚಿತ್ರ. ಕಲ್ಪನಾ ಅವರಿಗೆ ಖ್ಯಾತಿ ತಂದ ಮೊದಲ ಚಿತ್ರಗಳಲ್ಲಿ ಇದೂ ಒಂದು. ಕಲ್ಯಾಣ್ ಕುಮಾರ್, ಕೆ.ಎಸ್.ಅಶ್ವಥ್, ಪಂಡರಿಬಾಯಿ, ಬಾಲಕೃಷ್ಣ, ದ್ವಾರಕೀಶ್ ಕೂಡ ಅಭಿನಯಿಸಿದ್ದಾರೆ. ವಿಜಯಭಾಸ್ಕರ್ ಸಂಗೀತದ ಸೊಗಸಾದ ಹಾಡುಗಳು ಇಂದಿಗೂ ಅಷ್ಟೇ ಜನಪ್ರಿಯತೆ ಉಳಿಸಿಕೊಂಡಿವೆ.

 

ಚಿತ್ರದ ಕಥೆ ಹೀಗಿದೆ. ಇಂದಿರಾ ದೊಡ್ಡ ಎಸ್ಟೇಟ್ ಓನರ್ ನ ಏಕಮಾತ್ರ ಪುತ್ರಿ. ಪರಿಚಯದ ಹುಡುಗ ಮೋಹನ್ ಅನ್ನು ಮನೆಯವರೆಲ್ಲರೂ ಮೆಚ್ಚಿಕೊಳ್ಳುತ್ತಾರೆ, ಇಂದಿರಾಗೂ ಅವನ ಮೇಲೆ ಪ್ರೀತಿ ಉಂಟಾಗುತ್ತದೆ. ಮೋಹನ್ ಗೆ ಹೊರದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡುವ ಅಭಿಲಾಷೆ, ಇದಕ್ಕೆ ಇಂದಿರಾ ತಂದೆಯೇ ಸಹಾಯ ಮಾಡುತ್ತಾರೆ. ತಿರುಗಿ ಬಂದಮೇಲೆ ಮದುವೆ ಅಂತ ನಿಶ್ಚಯ ಆಗಿರುತ್ತೆ. ಆದರೆ ಮೋಹನ್ ಹೊರದೇಶದಲ್ಲಿರುವಾಗ ಇಂದಿರಾಳ ಅಮ್ಮನಿಗೆ ಗಂಡುಮಗು ಹುಟ್ಟುತ್ತದೆ. ವಾಪಸ್ಸು ಬಂದಮೇಲೆ ಮೋಹನ್ ಇವಳನ್ನು ಮಾಡುವೆ ಆಗಲು ನಿರಾಕರಿಸುತ್ತಾನೆ. ಆಗ ಇಂದಿರಾಳಿಗೆ ಗೊತ್ತಾಗುತ್ತದೆ ಮೋಹನ್ ಮದುವೆಯಾಗಲು ಒಪ್ಪಿದ್ದು ತನ್ನೆಲ್ಲಾ ಪಿತ್ರಾರ್ಜಿತ ಆಸ್ತಿಯ ಆಸೆಗೋಸ್ಕರ, ಮತ್ತು ಹೊಸ ವಾರಸುದಾರನ ಆಗಮನದಿಂದ ನಿರಾಶೆ ಹೊಂದಿದ್ದಾನೆ ಎಂದು. ಕಥೆ ಮುಂದುವರಿದಂತೆ ಮೋಹನ್ ಬದಲಾಗುತ್ತಾನೆ, ಇಂದಿರಾ ಬಗ್ಗೆ ತನಗೆ ನಿಜವಾದ ಒಲವಿದೆ ಅಂತ ಮನವರಿಕೆ ಆಗುತ್ತೆ, ಅವಳನ್ನು ಮದುವೆಗೆ ಒಪ್ಪಿಸಲು ಶತಪ್ರಯತ್ನ ಮಾಡುತ್ತಾನೆ.

ತುಂಬಾ ಜನ ಈ ಚಿತ್ರವನ್ನ “ಗ್ರೇಟ್” ಅಂತ ಕರಿತಾರೆ. “ಗ್ರೇಟ್” ಅನ್ನೋ ಪದಕ್ಕೆ ತುಂಬಾ ತೂಕ ಇದೆ. ಅದನ್ನ ಅಷ್ಟು ಲಘುವಾಗಿ ಬಳಸುವುದನ್ನು ನೋಡಿದಾಗ ನನಗೆ ತುಂಬಾ ಮುಜುಗರವಾಗುತ್ತೆ. ನನ್ನ ಪ್ರಕಾರ ಈ ಚಿತ್ರ “ಗ್ರೇಟ್” ಅಲ್ಲ, ಯಾಕೆ ಅಂತ ಹೇಳ್ತೀನಿ. ಇಂದಿರಾ ಮೋಹನ್ ಅವರ ಪ್ರೇಮ ಸನ್ನಿವೇಶಗಳು ಎಷ್ಟು ಬಾಲಿಶವಾಗಿವೆ ಅಂದರೆ ಇಬ್ಬರೂ ಗ್ರೀಟಿಂಗ್ ಕಾರ್ಡ್ ಮೇಲಿನ ಕ್ಲೀಶೇಡ್ ಲೈನುಗಳನ್ನು ಓದುತ್ತಿದ್ದಾರೆ ಅನ್ನಿಸುತ್ತದೆ. ಆಮೇಲೆ ಎಷ್ಟೊಂದು ಸನ್ನಿವೇಶಗಳಲ್ಲಿ ಸಹಜವಾದ ಸಂಭಾಷಣೆಯಂತೆ ಇರುವ ಭಾಷೆ ದಿಢೀರನೆ ನಾಟಕೀಯವಾದ, ಅಸಹಜವಾದ, ಪಠ್ಯಕ್ಕೆ ತಿರುಗಿಕೊಳ್ಳುತ್ತೆ. ಹಾಡುಗಳು ಬಹಳ ಇಂಪಾಗಿದ್ದರೂ ನಿರೂಪಣೆಗೆ ಪೂರಕವಲ್ಲದೆ ಧುತ್ತೆಂದು ಅಲ್ಲಲ್ಲಿ ಪ್ರತ್ಯಕ್ಷ ಆಗುತ್ತವೆ.

ಇಷ್ಟವಾಗದೆ ಇರೋದಕ್ಕೆ ಇನ್ನೊಂದು ಮುಖ್ಯ ಕಾರಣ ಇದೆ. ಅದು ಈ ಚಿತ್ರದಲ್ಲಿ ಬರುವ ಬಾಲಕೃಷ್ಣ, ದ್ವಾರಕೀಶ್ ಅವರ ಕಾಮಿಡಿ ಸೀಕ್ವೆನ್ಸ್. ಬಹುಶಃ ಒಂದು ಇಪ್ಪತ್ತು ನಿಮಿಷ ಸಮಯದಷ್ಟು ಇದೆ. ಈ ಇಡೀ ಸನ್ನಿವೇಶಕ್ಕೂ ಚಿತ್ರದ ಕಥೆಗೂ ಒಂದು ನಯಾಪೈಸದಷ್ಟು ಸಂಬಂಧ ಇಲ್ಲ. ಈ ಸೀನುಗಳನ್ನು ತೆಗೆದುಬಿಟ್ಟರೂ, ಅಥವಾ ಇನ್ಯಾವುದೋ ಚಿತ್ರದ ಕಾಮಿಡಿ ಸೀನುಗಳನ್ನ ಇಲ್ಲಿ ತುರುಕಿದರೂ ಏನೂ ವ್ಯತ್ಯಾಸ ಆಗಲ್ಲ. ಚಿತ್ರಗಳಲ್ಲಿ ಸಂಬಂಧವಿಲ್ಲದ “ಕಂಪಲ್ಸರಿ ಕಾಮಿಡಿ ಟ್ರ್ಯಾಕ್” ಅನ್ನು ಸಮರ್ಥಿಸಿಕೊಳ್ಳೋ ಎಷ್ಟೋ ಜನ ನನಗೆ ಗೊತ್ತು. ಅವರ ಪ್ರಕಾರ ಕಾಮಿಡಿ ಟ್ರ್ಯಾಕ್ ಇದ್ದರೆ ಅದು ಮೂಡನ್ನು ತಿಳಿಗೊಳಿಸುತ್ತೆ ಅಂತ. ನನಗೆ ಅದೇ ಕಾರಣಕ್ಕೆ ಅವು ಇಷ್ಟ ಆಗೋದಿಲ್ಲ. ಒಂದು ಟ್ರಾಜಿಡಿ ಚಿತ್ರ ನೋಡಬೇಕಾದ್ರೆ ಮನಸ್ಸು ಭಾರವಾಗಬೇಕು, ಒಂದು ಆಕ್ಷನ್ ಚಿತ್ರ ನೋಡುವಾಗ ಉಸಿರುಗಟ್ಟಬೇಕು, ಒಂದು ಪ್ರೇಮಚಿತ್ರ ನೋಡುವಾಗ ಪ್ರೀತಿಯ ನಶೆಯ ಅಮಲಿನಲ್ಲಿ ಸಂಪೂರ್ಣವಾಗಿ ತೇಲಬೇಕು. ಈ ಭಾವತೇವ್ರತೆಗಳನ್ನು ಅನುಭವಿಸಲು ಅಲ್ಲವೇ ಫಿಲಂ ನೋಡೋದು? ಅದು ಬಿಟ್ಟು ಖಾರವಾಗಿರೋ ಗೋಬಿ ಮಂಚೂರಿ ತಿನ್ನೋವಾಗ ರವೆ ಉಂಡೆ ಜೊತೆಗಿರಲಿ ಅನ್ನೋರಿಗೆ ಏನು ಹೇಳಣ?

ಆದರೆ ಚಿತ್ರ ಸಾಕಷ್ಟು ಕಾರಣಗಳಿಗೆ ಇಷ್ಟ ಆಯ್ತು ಕೂಡ. ಮೊದಲನೆಯದು ಅಶ್ವಥ್ ಅವರ ನಟನೆ. ಇವತ್ತಿಗೂ ನೋಡಿ, ಅವರ ನಟನೆ ಎಲ್ಲೂ ಔಟ್ ಡೇಟೆಡ್ ಅನ್ನಿಸೋಲ್ಲ, ಅತ್ಯಂತ ಸರಳವಾದ ಪಾತ್ರಕ್ಕೂ ಒಂದು “ಟಚ್” ಕೊಡ್ತಾರಲ್ಲ, ಅದು ಬಹಳ ಇಷ್ಟ ಆಗುತ್ತೆ. ಎರಡನೆಯದು, ಸಿಕ್ಕಾಪಟ್ಟೆ ಒಳ್ಳೆಯ ನಿರ್ದೇಶಕರ ಮೊದಲ ಚಿತ್ರಗಳನ್ನು ನೋಡುವುದೇ ಒಂದು ಕುತೂಹಲಕಾರಿ ಅನುಭವ. ಮೊದಲ ಚಿತ್ರಗಳು ಗ್ರೇಟ್ ಅಲ್ಲದಿದ್ದರೂ, ಅವುಗಳಲ್ಲಿ ಮುಂಬರುವ ಗ್ರೇಟ್ ಚಿತ್ರಗಳ ಬ್ರಿಲಿಯನ್ಸಿನ ಪುಟ್ಟ ಪುಟ್ಟ ಝಲಕ್ ಗಳು ನಮಗೆ ಕಾಣಸಿಗುತ್ತವೆ. “ಬೆಳ್ಳಿಮೋಡ” ಚಿತ್ರದ ಹಾಡುಗಳನ್ನು ಚಿತ್ರಿಸಿರುವ ರೀತಿ ನೋಡಿ – ಅದರಲ್ಲೂ “ಮೂಡಲ ಮನೆಯ ಮುತ್ತಿನ ನೀರಿನ” – ಪುಟ್ಟಣ್ಣರ ಅದ್ಭುತ ವಿಶುಯಲ್ ಸೆನ್ಸ್ ಬಗ್ಗೆ ನಿದರ್ಶನ ಸಿಗುತ್ತೆ. ಹಾಗೆಯೇ ಸೂರ್ಯೋದಯ, ಸೂರ್ಯಾಸ್ತ, ಬೆಟ್ಟದ ಮೇಲಿನ ಶಾಟ್ ಗಳನ್ನು ಚಿತ್ರಿಸಿರುವ ರೀತಿ, ಫ್ರೀಜ್ ಫ್ರೇಮ್ ಬಳಸಿರುವುದು ರೀತಿ ನಿಜಕ್ಕೂ ಸೂಪರ್. ಹಾಗೆಯೇ ಕನ್ನಡಿ, ಮರ, ಮೋಡ – ಹೀಗೆ ಹಲವಾರು “ಸಿಂಬಲಿಸಂ” ಅನ್ನು ಉಪಯೋಗಿಸಿರುವ ಪುಟ್ಟಣ್ಣರ ಸಾಮರ್ಥ್ಯದ ಪರಿಚಯ ಆಗುತ್ತೆ. ಮತ್ತು ಇವೆಲ್ಲಾ ಅಂಶಗಳೂ ಇನ್ನೂ ಪಕ್ವವಾದ ರೀತಿಯಲ್ಲಿ ನಮಗೆ ನಾಗರಹಾವು, ರಂಗನಾಯಕಿ, ಮಾನಸಸರೋವರ ಚಿತ್ರಗಳಲ್ಲಿ ಕಾಣಸಿಗುತ್ತವೆ.

ಈ ಚಿತ್ರದ ಅತೀ ದೊಡ್ಡ ಗೆಲುವು ಅಂದರೆ ಇಂದಿರಾ ಪಾತ್ರ ಕಡೆಯಲ್ಲಿ ತಾಳುವ ನಿಲುವು. ಗಂಡು ಎಷ್ಟೇ ತಪ್ಪು ಮಾಡಿರಲೀ, ಹೆಣ್ಣು ಅದನ್ನ ಕ್ಷಮಿಸಬೇಕು; ಗಂಡಿಲ್ಲದೆ ಹೆಣ್ಣಿಗೆ ಅಸ್ತಿತ್ವ ಇಲ್ಲ; ಹೆಣ್ಣು ತನಗಾಗಿರೋ ನೋವುಗಳನ್ನೆಲ್ಲಾ ಮರೆತುಬಿಡಬೇಕು – ಈ ರೀತಿಯ  ಮೌಲ್ಯಗಳನ್ನು ಸಾರುತ್ತಿದ್ದ ಕಾಲದಲ್ಲಿ ಇಂದಿರಾಳನ್ನು ಒಂದು ಕ್ಯಾರಿಕೇಚರ್ ಮಾಡದೇ, ಆ ಪಾತ್ರಕ್ಕೊಂದು ಮಾನವೀಯ ಟಚ್ ಕೊಟ್ಟಿರುವುದು ಮೆಚ್ಚಬೇಕಾದ ವಿಷಯ. ಘಾಸಿಯಾಗಿರೋ ಇಂದಿರಾ ಮನಸ್ಸು ರಾಜಿಗೆ ಒಪ್ಪಲು ಸಾಧ್ಯವಾಗೋದಿಲ್ಲ. ಹಾಗಂತ ಬದುಕುವ ಆಸೆಯನ್ನೇನೂ ಕಳೆದುಕೊಳ್ಳಲ್ಲ. ಈ ಚಿತ್ರ ನೋಡಿದ ಕ್ಷಣದಲ್ಲಿ ರಿಯಲೈಜ್ ಆಗಿದ್ದು – ಮುಕ್ತ ಧಾರಾವಾಹಿಯಲ್ಲಿ ಟಿ.ಎನ್.ಸೀತಾರಾಮ್ ಅವರು “ಹೆಣ್ಣಿನ ಭಾವಲೋಕವನ್ನು ಚಿತ್ರಿಸುವ ಬಗೆಯನ್ನು ಹೇಳಿಕೊಟ್ಟ ಪುಟ್ಟಣ್ಣ ಅವರಿಗೆ” ಅಂತ ಯಾಕೆ ಅರ್ಪಿಸಿದ್ದರು ಅಂತ!

 

~ವಾಸುಕಿ ರಾಘವನ್

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಬೆಳ್ಳಿಮೋಡ: ವಾಸುಕಿ ರಾಘವನ್

  1. ಪುಟ್ಟಣ್ಣ ಕಣಗಾಲ್ ಚಿತ್ರದ ಬಗ್ಗೆ ಇಂತಹದ್ದೊಂದು ಪೂರ್ವಾಗ್ರಹ ಪೀಡಿತವಲ್ಲದ ಲೇಖನ ನೋಡಿ ಸಂತಸವಾಯಿತು.  ನೀವು ಗಮನಿಸಿರುವ ಸೂಕ್ಷ ವಿಚಾರಗಳ ಬಗ್ಗೆ ಮೆಚ್ಚುಗೆಯಾಯ್ತು.  ಮುಂದೊಂದು ದಿನ ನೀವು ಪುಟ್ಟಣ್ಣನವರ ಎಲ್ಲ ಚಿತ್ರಗಳನ್ನು ನೋಡಿ ಅವರ ನಿರ್ದೇಶನದ ಕುರಿತು ಮತ್ತು ಕನ್ನಡ ಚಿತ್ರರಂಗಕ್ಕೆ ಅವರ ಕಾಣಿಕೆಯ ಕುರಿತು ಬರೆಯುವುದಕ್ಕಾಗಿ ಕಾಯ್ತೀನಿ.

  2. ಪುಟ್ಟಣ್ಣರವರ ಪ್ರತೀ ಚಿತ್ರದಲ್ಲೂ ಅತೀ ಭಾವುಕತನ ಕಾಣುತ್ತದೆ. ಕೆಲವೊಮ್ಮೆ ಅಭಿನಯ ಕೃತ್ರಿಮ ಅನಿಸುತ್ತದೆ. (ಹಾಗೆಯೇ ಅಪವಾದಗಳೂ ಇವೆ). ಆದರೂ ಅವರ ಚಿತ್ರಗಳನ್ನು ಮೆಚ್ಚುತ್ತೇನೆ. ಬೆಳ್ಳಿ ಮೋಡ ಇನ್ನೂ ನೋಡಿಲ್ಲ. ಅದರಲ್ಲಿನ ಬೇಂದ್ರೆಯವರ ಹಾಡು ಬಹು ಚೆನ್ನಾಗಿದೆ.

Leave a Reply

Your email address will not be published. Required fields are marked *