ಲೇಖನ

ಬೆಳೆಸುವ ಸಿರಿ ಮೊಳಕೆಯಲ್ಲೇ?: ಕೊಟ್ರೇಶ್ ಕೊಟ್ಟೂರು


ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವ ಗಾದೆಯನ್ನು ನಾವು ಕೇಳಿದ್ದೇವೆ ಆದರೆ ಇದು ಬೆಳೆಯುವ ಸಿರಿ ಮೊಳಕೆಯಲ್ಲೇ ಅಲ್ಲ, ಬದಲಾಗಿ ಬೆಳೆಸುವ ಸಿರಿ ಮೊಳಕೆಯಲ್ಲೇ ಎನ್ನುವುದು. ಯಾವುದೇ ಒಂದು ಮಗು ಬೆಳೆಯುವುದು ಬಿಡುವುದು ಅವರವರ ಇಚ್ಛೆ. ಆದರೆ ಈ ಮಗುವನ್ನು ಬೆಳೆಸುವುದರಲ್ಲಿ ಆ ಮಗುವಿನ ತಾಯಿ ಹೇಗೆ ಬೆಳೆಸಿ ಪೋಷಿಸುತ್ತಿರುವಳು ಎನ್ನುವುದು ನನಗಂತೂ ಆಶ್ಚರ್ಯ ಮತ್ತು ಅಗಾಧ. ಆ ಮಗುವಿಗೆ ಬದುಕುವ ಛಲವನ್ನು ಹೇಗೆಲ್ಲಾ ತುಂಬಬಹುದು ಎಂಬುದಕ್ಕೆ ಜೀವಂತ ನಿದರ್ಶನ ಅಮೃತಳ ಆ ನನ್ನ ತಾಯಿ. ನಾನೀಗ ಹೇಳುತ್ತಿರುವುದು ಸಣ್ಣ ವಯಸ್ಸಿನಲ್ಲೇ ಚಿತ್ರಕಲೆಯಲ್ಲಿ ಬಹುದೊಡ್ಡ ಸಾಧನೆ ಮಾಡಿ ಮುನ್ನುಗ್ಗುತ್ತಿರುವ ಆಶಾಜ್ಯೋತಿ ಅಮೃತ ಎನ್ನುವ 10 ವಯಸ್ಸಿನ ಈ ಪುಟ್ಟ ಮಗು.

ಬೆಂಗಳೂರು ಎಂಬ ತಂತ್ರಜ್ಞಾನ ನಗರಿಯಲ್ಲಿ ನನಗೆ ಬಹು ವಿಶಿಷ್ಟವಾಗಿ ಮತ್ತು ವಿಭಿನ್ನವಾಗಿ ಕಂಡದ್ದು ಅಮೃತ. ಚಿತ್ರಕಲೆ, ಕರಾಟೆ ಮತ್ತು ಇತರೆ ಪ್ರತಿಭೆಗಳಲ್ಲಿ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿರುವ ಅಮೃತ ನಿಜಕ್ಕೂ ಪುಟ್ಟ ಮಕ್ಕಳಿಗೆ ಒಂದು ಆದರ್ಶ ಎಂದರೆ ತಪ್ಪಾಗಲಾರದು. ಈ ಮಗು ಚಿತ್ರಕಲೆಯಲ್ಲಿ ತನ್ನದೇ ಆದ ಛಾಪನ್ನು ಒತ್ತಿ ಚಿತ್ರಕಲೆಗೆ ಒಂದು ಅದ್ಭುತವಾದ ಮೆರಗನ್ನು ನೀಡುತ್ತಿದ್ದಾಳೆ. ನನಗೆ ಈ ಮಗು ಪರಿಚಿತವಾದದ್ದು ಫೇಸ್ಬುಕ್ ನಲ್ಲಿ. ನಿಜಕ್ಕೂ ಆ ಮಗುವಿನ ಅಕೌಂಟ್ ನೋಡಿದಾಗ ನನಗಂತೂ ಆಶ್ಚರ್ಯ ಕಾದಿತ್ತು. ಆಶ್ಚರ್ಯಕ್ಕಿಂತಲೂ ನನ್ನನ್ನು ಕಾಡಿದ್ದು, ಈ ಮಗುವಿಗೆ ನಾನು ಕಂಡದ್ದು. ಇವಳ ಅಕೌಂಟ್ ಗಮನಿಸಿದಾಗ ಅತ್ಯದ್ಭುತ ಪೇಂಟಿಂಗ್ ಗಳು, ಭರತನಾಟ್ಯದ ಭಂಗಿಗಳು ಮತ್ತು ಜೀವನವನ್ನು ಸುಖಮಯವಾಗಿ ಎಂಜಾಯ್ ಮಾಡುವ ಮನಸ್ಥಿತಿ. ಇವನ್ನು ನೋಡಿ ನಾನು ನಿಜಕ್ಕೂ ಬೆರಗಾದೆ. ಮತ್ತು ಈ ಮಗುವಿಗೆ ಇರುವ ಅಂತಃಕರಣ, ಪ್ರೀತಿ ಮತ್ತು ಭಾವುಕತೆ ನನ್ನನ್ನು ಮಂತ್ರಮುಗ್ಧನನ್ನಾಗಿಸಿದೆ. ಈ ಹೊತ್ತಿನಲ್ಲೂ ಕೂಡ ಭಾವನಾತ್ಮಕತೆಗೆ ಜೀವವಿದೆ ಎಂದು ತೋರಿಸಿಕೊಟ್ಟಿದ್ದೇ ಈ ಮಗು. ಮೂಲತಃ ನಾನು ತುಂಭಾ ಭಾವುಕ. ಈ ಮಗುವನ್ನು ಗಮನಿಸಿದಾಗ ನನ್ನನ್ನೇ ನಾನು ಕನ್ನಡಿಯಲ್ಲಿ ನೋಡಿಕೊಂಡ ಅನುಭವ. ಈ ಮಗುವಿನ ಚಿತ್ರಗಳನ್ನು ನೋಡುತ್ತಾ ನೋಡುತ್ತಾ ನನ್ನಲ್ಲೇ ಹೆಚ್ಚೆಚ್ಚು ಆತ್ಮವಿಶ್ವಾಸ ಬಂದದ್ದು ಸುಳ್ಳಲ್ಲ.

ಈ ಮಗು ಹೀಗೆ ಬೆಳೆಯುವುದರಲ್ಲಿ ಬರೀ ಆ ಮಗುವಿನ ಪಾತ್ರವಷ್ಟೇ ಇಲ್ಲ ಎಂದು ನನಗನ್ನಿಸುತ್ತದೆ ಏಕೆಂದರೆ ಮನೆಯಲ್ಲಿ ಆ ರೀತಿಯ ಪ್ರೋತ್ಸಾಹ ಮತ್ತು ಆ ಮಗುವಿಗೆ ಪೂರಕವಾದ ವಾತಾವರಣ ಸೃಷ್ಟಿ ಮಾಡುವುದರಲ್ಲಿ ತಂದೆಗಿಂತ ತಾಯಿಯ ಪಾತ್ರ ಬಹಳ ಮುಖ್ಯವಾಗಿದೆ. ಅದರಲ್ಲೂ ಈ ಸಂದರ್ಭದಲ್ಲಿ ಮಕ್ಕಳನ್ನು ಹೇಗೆ ಬೆಳೆಸಬೇಕು ? ಹೇಗೆ ಅವರಿಗೆ ಬೆಳೆಯುವ ವಾತಾವರಣ ಸೃಷ್ಟಿಸಬೇಕು ಎನ್ನುವ ಸವಾಲನ್ನು ದಿಟ್ಟವಾಗಿ ಎದುರಿಸಿ ನಿಲ್ಲುವವರು ಅಮೃತಳ ತಾಯಿ. ಆ ತಾಯಿ ಈ ಮಗುವನ್ನು ಬೆಳೆಸುವುದರಲ್ಲಿ ಪಟ್ಟ ಕಷ್ಟಗಳು ಎಷ್ಟಿರಬಹುದೆಂದು ಊಹಿಸಲು ನನಗೆ ಅಸಾಧ್ಯ. ನಿಜಕ್ಕೂ ಆ ಮಗುವನ್ನು ಬೆಳೆಸಿದ ತಾಯಿಗೆ ಅಭಿನಂದನೆಗಳು ಸಲ್ಲಲೇಬೇಕು.

ಈಗ ತಾನೇ ಬೆಳೆಯುತ್ತಿರುವ ಅಮೃತಳ ಸಾಧನೆ ಮೆಚ್ಚುವಂತದ್ದು, ಬೆಂಗಳೂರಿನಲ್ಲಿ 10 ವರ್ಷದೊಳಗಿನ ಮಕ್ಕಳ ಯಾವುದೇ ಚಿತ್ರಕಲೆ, ನೃತ್ಯ, ಕರಾಟೆ ಮತ್ತು ಇನ್ನಿತರೆ ಯಾವುದೇ ಸ್ಪರ್ಧೆಗಳಿರಲಿ ಈ ಮಗು ಸ್ಪರ್ಧಿಸುವುದು ಖಚಿತ. ಸೋಲು ಗೆಲುವು ಎರಡನೇ ಮಾತು, ಮೊದಲು ಸ್ಪರ್ಧೆ ಮುಖ್ಯ ಎನ್ನುವುದನ್ನು ತನ್ನ ಜೀವನದಲ್ಲಿ ಈಗಾಗಲೇ ಅವಳಡಿಸಿಕೊಂಡಿರುವವಳು ಅಮೃತ. ಗೆದ್ದರೆ ಖುಷಿಯಾಗದ ಮತ್ತು ಸೋತರೆ ಖಿನ್ನವಾಗದ ಮಗು, ಸಂತೋಷಕ್ಕೆ ಹಿಗ್ಗದೆ ಕಷ್ಟಕ್ಕೆ ಹೆದರದೇ ಸಮಚಿತ್ತದಿಂದ ಬದುಕುವನ್ನು ರೂಢಿಸಿಕೊಳ್ಳಬೇಕು ಎನ್ನುವ ಮನಸ್ಥಿತಿ ನಿಜಕ್ಕೂ ನನಗೆ ಆಶ್ಚರ್ಯ. ಈ ವಯಸ್ಸಿನಲ್ಲಿ ಇಷ್ಟು ದೊಡ್ಡ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಮಗುವಿನ ಬೆಳವಣಿಗೆಗೆ ಪೂರಕವಾಗಿರುವ ಆ ಅಮ್ಮ ನಿಜಕ್ಕೂ ಮಾದರಿ. ಬದುಕಿನಲ್ಲಿ ಗುರಿಗಳು ತುಂಬಾ ಮುಖ್ಯ ?ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಎನ್ನುವ ಗಾದೆಗನುಗುಣವಾಗಿ ಒಂದು ಪಕ್ಷ ಹಿಂದೆ ಗುರು ಇಲ್ಲದೇ ಹೋದಲ್ಲಿ ನಮಗೆ ನಾವೇ ಗುರುವೂ ಆಗಬೇಕು ಗುರಿಯನ್ನೂ ಮುಟ್ಟಬೇಕು. ಜೀವನದಲ್ಲಿ ಆತ್ಮವಿಶ್ವಾಸ ಬಹಳ ಮುಖ್ಯ ಎನ್ನುವುದನ್ನೂ ಈ ಮಗುವಿನಿಂದ ನಾವೂ ಕಲಿಯುವುದು ತುಂಬಾ ಇದೆ.

ಈಗಾಗಲೇ ಜಿಲ್ಲಾ, ರಾಜ್ಯ, ಅಂತರಾಜ್ಯ, ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಹಲವಾರು ಪ್ರಶಸ್ತಿಗಳನ್ನು, ಪದಕಗಳನ್ನು ಗಳಿಸಿರುವ ಅಮೃತ ಇನ್ನಷ್ಟು ಆಗಸದೆತ್ತರಕ್ಕೆ ಬೆಳೆದು ಭಾರತ ಮಾತೆಯ ಕಿರೀಟವನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸುವಂತಾಗಲಿ ಎನ್ನುವುದೊಂದೇ ನನ್ನ ಆಶಯ.
ಒಳಿತಾಗಲಿ ಪುಟ್ಟ ಭಾರತ ಮಾತೆಯ ಹೆಮ್ಮೆಯ ಕಂದ ನೀನಾಗು ಎನ್ನುವ ಆಶಾಭಾವನೆಯೊಂದಿಗೆ?

-ಕೊಟ್ರೇಶ್ ಕೊಟ್ಟೂರು


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *