ಬೆಳೆದಿದೆ ನೋಡಾ ಬೆಂಗಳೂರು ನಗರ!!!: ಅಖಿಲೇಶ್ ಚಿಪ್ಪಳಿ


ಹಿಂದಿನ ಭಾನುವಾರ ಸಾಗರದಲ್ಲಿನ ಸ್ವಸಹಾಯ ಗುಂಪಿನ ವಾರ್ಷಿಕ ಸಭೆ ಕರೆದಿದ್ದರು. ಪೇಟೆಯಲ್ಲಿ ತರಕಾರಿ ಬೆಳೆಯುವ ಬಗ್ಗೆ ಮಾಹಿತಿ ನೀಡಿ ಎಂಬುದು ಅವರ ಕೋರಿಕೆ. ವಾಯುಭಾರ ಕುಸಿತದಿಂದಾಗಿ ಅಂದು ಜೋರು ಮಳೆಯಿತ್ತು, ಕರೆಂಟು ಇರಲಿಲ್ಲ. ಅದೊಂದು ಸುಮಾರು 50-60 ಜನರಿರುವ ಚಿಕ್ಕ ಸಭೆ.  ಸಭೆಯ ವಿಧಿ-ವಿಧಾನಗಳು ಮುಗಿದ ಮೇಲೆ ಮಾತಿಗೆ ಶುರುವಿಟ್ಟುಕೊಂಡಿದ್ದಾಯಿತು. ಆ ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಮೂಲತ: ಕೃಷಿ-ಕುಟುಂಬದವರೇ ಆಗಿದ್ದರು. ನಿಮ್ಮ ವಂಶವಾಹಿನಿಯಲ್ಲೇ ಕೃಷಿ-ತೋಟಗಾರಿಕೆಗೆ ಬೇಕಾಗುವ ಅಂಶವಿದೆ ಆದ್ದರಿಂದ ತರಕಾರಿ ಬೆಳೆಯುವ ಬಗ್ಗೆ ಆಮೇಲೆ ಮಾತನಾಡೋಣ ಎಂದು, ನನಗೆ ಕಾಣಿಕೆ ನೀಡಿದ ಬಗೆಯನ್ನು ಪ್ರಸ್ತಾಪಿಸಿದೆ. ಪ್ಲಾಸ್ಟಿಕ್ ಚೀಲದಲ್ಲಿ ಮಾವಿನ ಹಣ್ಣು ಹಾಕಿ ಕೊಟ್ಟಿದ್ದರು. ಪ್ಲಾಸ್ಟಿಕ್ ಕೊಟ್ಟೆಯ ಬದಲು ಬಟ್ಟೆ ಚೀಲ ನೀಡಿದ್ದರೆ ಇನ್ನೂ ಒಳ್ಳೆಯದಿತ್ತು ಎಂದೆ. ಸ್ವಸಹಾಯ ಗುಂಪುಗಳೇ ಸೇರಿ ಮನೆಯಲ್ಲಿ ಉಪಯೋಗಿಸಿದ ಬಟ್ಟೆಯನ್ನೇ ಬಳಸಿ ಚೀಲ ತಯಾರಿಸಬಹುದು. ಸ್ವಲ್ಪ ಆಕರ್ಷಕವಾಗಿ ವಿನ್ಯಾಸ ಮಾಡಿದರೆ, ವಾಣಿಜ್ಯ ರೂಪವನ್ನೂ ಕೊಡಬಹುದು ಎಂದ್ದಿದ್ದಕ್ಕೆ, ಎಲ್ಲರೂ ಮುಂದಿನ ಬಾರಿ ಬಟ್ಟೆ ಚೀಲವನ್ನೇ ಬಳಸುತ್ತೇವೆ ಎಂದು ಭರವಸೆ ನೀಡಿದರು.

ಮೊನ್ನೆ ಕೆಲಸದ ಮೇಲೆ ಒಂದು ದಿನದ ಮಟ್ಟಿಗೆ ಬೆಂಗಳೂರಿಗೆ ಹೋಗಿದ್ದೆ. ಹೊಸದಾಗಿ ಗೆಳೆಯರಾದ ಅನೇಕರನ್ನು ಕಂಡು ಮಾತನಾಡುವ ಮನಸ್ಸಿದ್ದರೂ, ಕೆಲಸದ ಒತ್ತಡದ ಮಧ್ಯೆ ಸಾಧ್ಯವಾಗಲಿಲ್ಲ. ಆಟೋದಲ್ಲಿ ಹೋಗುವಾಗ ಬೆಂಗಳೂರು ಮಹಾಕೊಳಕು ನಗರ ಪಾಲಿಕೆ ಎಂದು ಗೊಣಗಿದ್ದು, ಆಟೋ ಡ್ರೈವರಿಗೆ ಕೇಳಿಸಿತು. ನೀವು ಹೇಳಿದ್ದು ನಿಜ ಸಾರ್! ಇಲ್ಲಿ ಯಾರಿಗೂ ಎನೂ ಸಂಬಂಧವಿಲ್ಲ. ಎಲ್ಲರೂ ಹಣಕ್ಕಾಗಿ ಬಾಯಿಬಿಡೋರೆ ಆಗಿದ್ದಾರೆ ಎಂದು ಆಯ್ಕೆಯಾದ ಕಾರ್ಪೊರೇಷನ್ ಸದಸ್ಯರನ್ನು ಕುರಿತು ಹೇಳಿದ. ರಸ್ತೆಯ ಇಕ್ಕೆಲಗಳಲ್ಲೂ ಪ್ಲಾಸ್ಟಿಕ್ ಕೊಟ್ಟೆಗಳು ರಾರಾಜಿಸುತ್ತಿದ್ದವು. ಆನೆ ಗಾತ್ರದ ಹೈಬ್ರೀಡ್ ದನಗಳು ಪ್ಲಾಸ್ಟಿಕ್ ಕೊಟ್ಟೆಗಳನ್ನು ಜಗಿಯುತ್ತಿದ್ದವು. ತೋಳಗಾತ್ರದ ನಾಯಿಗಳು ಸಂದಿಯಲ್ಲಿ ಗಲೀಜಿನಲ್ಲಿ ಬಾಯಿಹಾಕಿದ್ದವು. ಇಡೀ ರಸ್ತೆಯ ಇಕ್ಕೆಲಗಳನ್ನು ಚೊಕ್ಕಟ ಮಾಡುವ ಪಣ ತೊಟ್ಟಂತೆ ಗುಡಿಸುತ್ತಿರುವ ಮಹಾಪಾಲಿಕೆಯ ಕಾರ್ಮಿಕಳ ಶ್ರಮ ಹೊಳೆಯಲ್ಲಿ ಹುಣಿಸೆ ತೊಳೆದಂತೆ ತೋರುತ್ತಿತ್ತು. ಮೆಟ್ರೋ ರೈಲಿಗಾಗಿ 190 ಮರಗಳನ್ನು ಕಡಿಯುವ ಹರಾಜು ಪ್ರಕ್ರಿಯೆ ಜಾಹಿರಾತು ಪೇಪರ್‍ನ ಮೂಲೆಯಲ್ಲಿತ್ತು. ಬದಲೀ ಮರಗಳನ್ನು ನೆಡದೇ 190 ಮರಗಳನ್ನು ಕಡಿಯುವ ಅರಣ್ಯ ಇಲಾಖೆಯ ನಿರ್ಧಾರವನ್ನು ಪ್ರತಿಭಟಿಸಲು ಕರೆ ನೀಡಿದ್ದು ಇದೇ ಪತ್ರಿಕೆ ಮುಖ್ಯ ಪುಟದಲ್ಲಿತ್ತು. ಬೆಂಗಳೂರಿನ ಹೊರವಲಯದಲ್ಲಿ ಕ್ವಾರಿಯ ಹೊಂಡವನ್ನು ಪ್ಲಾಸ್ಟಿಕ್ ತ್ಯಾಜ್ಯಗಳೇ ಮುಚ್ಚಿ ಹಾಕಿದ ಸುದ್ದಿಯೂ ಇತ್ತು. 5000 ಟನ್ ಕಸದ ರಾಶಿ ಅಲ್ಲಿ ಸೃಷ್ಟಿಯಾಗಿತ್ತು.

 

ಇದು ಬೆಂಗಳೂರಿನ ಕತೆಯಾದರೆ, ಪ್ರಪಂಚದ ಕತೆ ಏನು ಎಂಬುದನ್ನು ನೋಡೋಣ. 6.4 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಪ್ರತಿವರ್ಷ ಸಮುದ್ರ ಸೇರುತ್ತದೆ. ಅಂದರೆ 1988 ಟ್ರಕ್‍ಗಳಲ್ಲಿ ತುಂಬುವಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳು. ಇಡೀ ಆಫ್ರಿಕಾ ಖಂಡದಲ್ಲಿ ಬಳಸುವ ಪ್ರಮಾಣದಷ್ಟು ಪೆಟ್ರೋಲಿಯಂ ಉತ್ಪನ್ನವನ್ನು ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸಲಾಗುತ್ತಿದೆ ಅಂದರೆ,  ಒಟ್ಟೂ ಪ್ರೆಟ್ರೋಲಿಯಂ ಉತ್ಪನ್ನದ ಶೇ.8ರಷ್ಟು. ಒಂದು ನೀರಿನ ಬಾಟಲಿಯನ್ನು ತಯಾರು ಮಾಡಲು ಕಾಲು ಲೀಟರ್  ತೈಲ ಬೇಕಾಗುತ್ತದೆ. ಜಗತ್ತಿನಲ್ಲಿ 5 ಲಕ್ಷ ಕೋಟಿ ಪ್ಲಾಸ್ಟಿಕ್ ಚೀಲಗಳನ್ನು ಪ್ರತಿವರ್ಷ ಬಳಸಲಾಗುತ್ತದೆ. ಅಂದರೆ, ಒಂದು ನಿಮಿಷಕ್ಕೆ 1 ಲಕ್ಷ ಪ್ಲಾಸ್ಟಿಕ್ ಚೀಲ ಬಳಸಲಾಗುತ್ತಿದೆ. ಪ್ರತೀ ವ್ಯಕ್ತಿಯ ತಲಾವಾರು ಬಳಕೆ 150 ಪ್ಲಾಸ್ಟಿಕ್ ಕೊಟ್ಟೆಗಳು ಪ್ರತಿವರ್ಷಕ್ಕೆ. ಇಷ್ಟು ಚೀಲಗಳನ್ನು ಒಂದಕ್ಕೊಂದು ಸೇರಿಸಿ ಒಂದೇ ಚೀಲವನ್ನು ಮಾಡಿದರೆ ಈ ಭೂಮಿಯನ್ನು ತುಂಬುವ ಅಥವಾ ಹಿಡಿಸುವ 4200 ಚೀಲಗಳು ತಯಾರಾಗುತ್ತವೆ. ಒಂದು ಪ್ಲಾಸ್ಟಿಕ್ ಚೀಲದ ಸರಾಸರಿ ಆಯಸ್ಸು 15 ನಿಮಿಷ ಮಾತ್ರ. 5 ನೀರಿನ ಬಾಟಲಿನಲ್ಲಿ 1 ಬಾಟಲಿ ಮಾತ್ರ ಮರುಬಳಕೆಯಾಗುತ್ತದೆ. 35 ಕೋಟಿ ನೀರಿನ ಬಾಟಲಿಗಳನ್ನು ಅಮೇರಿಕದ ಜನತೆ ಪ್ರತಿವರ್ಷ ತ್ಯಾಜ್ಯ ರೂಪದಲ್ಲಿ ಬಿಸಾಡುತ್ತಾರೆ. ಸುಮಾರು 10 ಲಕ್ಷ ಹಕ್ಕಿಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸೇವಿಸಿ ಪ್ರತಿವರ್ಷ ಸಾಯುತ್ತವೆ. ಸಮುದ್ರದ 31 ಪ್ರಾಣಿಪ್ರಭೇದಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಂಡು ಬಂದಿದೆ. ಪ್ರಪಂಚದಲ್ಲಿ ತಯಾರಾಗುವ ಒಟ್ಟೂ ಪ್ಲಾಸ್ಟಿಕ್ ಉತ್ಪನ್ನಗಳ ಅರ್ಧದಷ್ಟು ಪ್ಲಾಸ್ಟಿಕ್ ಒಂದೇ ಬಾರಿ ಬಳಕೆಯಾಗುತ್ತದೆ.

ಮುಕ್ಕಾಲು ಭಾಗ ಸಮುದ್ರದಿಂದ ಕೂಡಿದ ಭೂಮಿಯಲ್ಲಿ, ಮನುಷ್ಯ ಸಂಚಾರವಿರದಿದ್ದ ಸ್ಥಳಗಳಲ್ಲೂ ಪ್ಲಾಸ್ಟಿಕ್ ರಾರಾಜಿಸುತ್ತಿದೆ. ಪ್ಲಾಸ್ಟಿಕ್ ತಿಂದ ಮೀನು ಸತ್ತ ನಂತರದಲ್ಲಿ ಅದೇ ಪ್ಲಾಸ್ಟಿಕ್ ಇನ್ನೊಂದು ಮೀನಿನ ಅಥವಾ ಜಲಚರದ ಸಾವಿಗೆ ಕಾರಣವಾಗುತ್ತದೆ. ಸಮುದ್ರದ ಯಾವ ಭಾಗವೂ ಪ್ಲಾಸ್ಟಿಕ್ ತ್ಯಾಜ್ಯದಿಂದ ಹೊರತಾಗಿಲ್ಲ. ನೀರಿನಲ್ಲಿ ಕಡೆ-ಕಡೆದು, ಚೂರುಗಳಾಗಿ, ಚಿಕ್ಕ ಚೂರುಗಳಾಗಿ, ಬರೀಗಣ್ಣಿಗೆ ಗೋಚರಿಸದಿರುವಷ್ಟು ವಿಘಟನೆಯಾಗಿ, ಮೀನುಗಳ ಹೊಟ್ಟೆಯನ್ನು ಸೇರಿ, ಮೀನಾಹಾರಿಗಳ ಹೊಟ್ಟೆಯನ್ನು ಸೇರುತ್ತವೆ. 

ಈಗೀಗ ಜೈವಿಕ ರೂಪದ ಪ್ಲಾಸ್ಟಿಕ್ ಬಳಕೆ ಪ್ರಾರಂಭವಾಗಿದೆ. ಕೃಷಿತ್ಯಾಜ್ಯಗಳನ್ನು, ಆಹಾರದ ಉಪಉತ್ಪನ್ನಗಳನ್ನು ಬಳಸಿಕೊಂಡು ಜೈವಿಕ ಚೀಲಗಳನ್ನು ತಯಾರಿಸಿಲಾಗುತ್ತಿದೆ. ಇದೂ ಕೂಡಾ ವಿಘಟನೆಯಾಗಿ ಮಣ್ಣಿಗೆ ಸೇರಲು 10-15 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಪ್ಲಾಸ್ಟಿಕ್ ಎಂಬ ಮಹಾಮಾರಿಯಿಂದ ಬಚಾವಾಗುವುದು ಅಷ್ಟು ಸುಲಭದ ಕೆಲಸವಲ್ಲ. ನಮ್ಮ ತಲಾವಾರು ಬಳಕೆಯನ್ನು ಕಡಿಮೆ ಮಾಡಿಕೊಳ್ಳುವುದೊಂದೆ ಇರುವ ದಾರಿ. ಪೇಟೆಗೆ ಹೋಗುವಾಗ ಬಟ್ಟೆ ಚೀಲ ತೆಗೆದುಕೊಂಡು ಹೋದಲ್ಲಿ ಪ್ಲಾಸ್ಟಿಕ್ ಚೀಲ ಮನೆಗೆ ತರುವುದನ್ನು ತಪ್ಪಿಸಬಹುದು. ಐರ್ಲೆಂಡ್ ಸರ್ಕಾರ ಪ್ಲಾಸ್ಟಿಕ್ ಬಳಕೆಯ ಮೇಲೆ ತೆರಿಗೆಯನ್ನು ವಿಧಿಸಿತು. ಇದರಿಂದಾಗಿ ಈಗ ಆ ದೇಶದಲ್ಲಿ 90% ಪ್ಲಾಸ್ಟಿಕ್ ಬಳಕೆ ಒಂದೇ ವರ್ಷದಲ್ಲಿ ಕಡಿಮೆಯಾಗಿದೆ. 1988 ಹಾಗೂ 1998ರಲ್ಲಿ ಬಾಂಗ್ಲಾದೇಶದಲ್ಲಿ ಆದ ನೆರೆಹಾನಿಗೆ ಬಹುತೇಕ ಪ್ಲಾಸ್ಟಿಕ್ ಚೀಲಗಳೇ ಕಾರಣವಾಗಿದ್ದವು. ನೀರು ಬಸಿದು ಹೋಗುವ ಎಲ್ಲಾ ಜಾಗಗಳನ್ನೂ ಪ್ಲಾಸ್ಟಿಕ್ ಕೊಟ್ಟೆಗಳೂ ಆಕ್ರಮಿಸಿಕೊಂಡಿದ್ದವು. ಅಲ್ಲಿನ ಸರ್ಕಾರ 1998ರ ನಂತರದಲ್ಲಿ ಪ್ಲಾಸ್ಟಿಕ್ ಕೊಟ್ಟೆ ಬಳಸುವುದನ್ನು ನಿಷೇಧಿಸಿದೆ.

ಇದೀಗ ಬಂದ ಸುದ್ಧಿ. ಪ್ಲಾಸ್ಟಿಕ್ ಬಳಸಿದ ಚೀಲ-ಡಬ್ಬಗಳಲ್ಲಿರುವ ಆಹಾರ ಸೇವನೆಯಿಂದ ಗಂಡಸು ಹಾಗೂ ಮಹಿಳೆಯರಲ್ಲೂ ಲೈಂಗಿಕ ಸಾಮಥ್ರ್ಯ ಕಡಿಮೆಯಾಗುತ್ತದೆ ಎಂದು ನ್ಯೂಯಾರ್ಕ್‍ನ ರೋಸ್ಟರ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಸಂಶೋಧಕ ಡಾ:ಎಮಿಲಿ ಬ್ಯಾರೆಟ್ ಹೇಳಿದ್ದಾರೆ.

ಬೆಂಗಳೂರು ಬೆಳೆಯುತ್ತಲೇ ಇದೆ. ಇನ್ನಷ್ಟು-ಮತ್ತಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊತ್ತು. ಕಿವಿ-ಕಣ್ಣು ಇಲ್ಲದ ಸರ್ಕಾರಗಳು ಇತ್ತ ತಮ್ಮ ಚಿತ್ತ ಹರಿಸುತ್ತವೋ. ಐರ್ಲೆಂಡಿನಲ್ಲಿ ತೆರಿಗೆ ವಿಧಿಸಿದ ಹಾಗೆ ನಮ್ಮಲ್ಲೂ ತೆರಿಗೆ ವಿಧಿಸಿ, ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಕಡಿವಾಣ ಹಾಕಬೇಕಿದೆ. ಜನಜಾಗೃತಿಯೂ ಆಗಬೇಕಿದೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Soory Hardalli
Soory Hardalli
8 years ago

Our fututre is in very danger.

1
0
Would love your thoughts, please comment.x
()
x