೧.
ಪ್ರತೀ ದಿನದಂತೆ, ಕೋರಮಂಗಲದ ನಮ್ಮ ಮನೆಯಿಂದ ಬನಶಂಕರಿಯ ಕಾಲೇಜಿಗೆ ಹೊರಟವನು ಹಾಗೇ JP ನಗರದ ವೈಷ್ಣವಿಯ ಮನೆಯ ಕಡೆಗೆ ಗಾಡಿಯನ್ನು ತಿರುಗಿಸಿದೆ, ಅದೇನೂ ಕಾಲೇಜಿಗೆ ಹೋಗುವ ದಾರಿಯಲ್ಲಿ ಇಲ್ಲದಿದ್ದರೂ, ವೈಷ್ಣವಿ ಇಷ್ಟು ಹೊತ್ತಿಗೆ ಕಾಲೇಜು ಬಸ್ ನ್ನು ಹಿಡಿಯಲು ಮನೆಯಿಂದ ಹೊರಟಾಗಿರುತ್ತದೆ ಎಂದು ತಿಳಿದಿದ್ದರೂ. ಪ್ರೀತಿಸಿದ ವ್ಯಕ್ತಿ ಇದ್ದ ಜಾಗ ಎಂಬ ವಿಷಯ ಇದೆಯಲ್ಲಾ, ಅವಳು ನಡೆದ ದಾರಿಯ ಘಮ ಇಲ್ಲೇ ಹಬ್ಬಿದೆ ಎಂಬ ಭ್ರಮಾಭರಿತ ಸೊಗಸು ಮಾತಿನ ಅಗತ್ಯವಿಲ್ಲದೇ, ಕಾಲದೇಶಗಳ ಹಂಗಿಲ್ಲದೇ, ವ್ಯಕ್ತವಾಗುವ ಕಿಂಚಿತ್ ಪ್ರಯತ್ನವನ್ನೇ ಮಾಡದೇ ಇರುವ ಸ್ಥಿತಿಯಿದೆಯಲ್ಲಾ, ಅದು ಕೊಡುವ ಆನಂದವನ್ನು ಸಾಕ್ಷಾತ್ ಸಾನಿಧ್ಯವೂ ನೀಡಲಾರದು. ಅಂತಹ ಖುಷಿಯನ್ನು ಬಯಸಿ ಎಷ್ಟು ಸಲವೋ ಹೀಗೇ ಅವಳ ಮನೆಯ ಎದುರಿನ ರಸ್ತೆಯಲ್ಲಿ ನೆಲಕ್ಕೆ ಬೇರುಬಿಟ್ಟವನಂತೆ ನಿಂತುಬಿಟ್ಟಿದ್ದೇನೆ, ಎಷ್ಟೋ ಸಲ ಅದೇ ತಿರುವುಗಳಲ್ಲಿ ಹುಚ್ಚು ಹುಚ್ಚಾಗಿ ಅಲೆದಾಡಿದ್ದೇನೆ. ಏನೇ ಇರಲಿ, ವೈಷ್ಣವಿ ಎಂದರೆ ನನ್ನ ಪರಮಾಪ್ತ ಗೆಳತಿ, ಅಷ್ಟೆಯೇ? ಆಕೆ ನನ್ನ ಜೀವದ ಜೀವ, ಪ್ರಾಣದ ಪ್ರಾಣ, ಸರಳವಾಗಿ ಹೇಳಬೇಕೆಂದರೆ ನನ್ನ girlfriend, ಅಧಿಕೃತವಾಗಿಯೂ. ನಮ್ಮದೇ ಕ್ಲಾಸು. ಅಂದ ಹಾಗೆ ನನ್ನ ಹೆಸರು ಹೃಷೀಕೇಷ. ಇದು ಇಂಜಿನಿಯರಿಂಗ್ ನ ಕೊನೆಯ ವರ್ಷ, ಎಂದರೆ ನಾನು ವೈಷ್ಣವಿಯನ್ನು ಭೇಟಿಯಾಗಿ ಮೂರು ವರ್ಷಗಳು ತುಂಬಿವೆ, ಪ್ರಪೋಸ್ ಮಾಡಿ- ಅವಳು ಒಪ್ಪಿಕೊಂಡು ಎಲ್ಲ ಆಗಿಯೇ ಎರಡು ವರ್ಷವಾಗುತ್ತದೆ. ಕೆಲವೊಮ್ಮೆ ನನಗೇ ತಿಳಿಯದೇ ಈ ಐದು ಫೂಟಿನ ಹುಡುಗಿ ಏನು ಮೋಡಿ ಮಾಡಿಬಿಟ್ಟಳು ಎನಿಸುತ್ತದೆ. ಪ್ರೀತಿ ಎಂದರೆ ಹಾಗೇ, ಗೊತ್ತಿದ್ದೇ, ಇಷ್ಟವಿದ್ದೇ, ಬಾವಿಗೆ ಬೀಳುವ ಹುಚ್ಚುತನ, ಅದನ್ನೇ ಪರಮಾನಂದ ಎಂದು ತಿಳಿದುಕೊಂಡು ಖುಷಿಯಾಗಿರುವ ಪ್ರೌಢಿಮೆ. ಎಷ್ಟು ವೇಗವಾಗಿ, ಎಷ್ಟು ಸುಂದರವಾಗಿ ಈ ಎರಡು ವರ್ಷಗಳು ಕಳೆದು ಹೋದವು ಎನ್ನಿಸಿತು. ಕಾಲು ಗಂಟೆಯಾದ ಮೇಲೆ, ಇನ್ನು ಸಾಕು ಎನ್ನಿಸಿ ಕಾಲೇಜಿನ ಕಡೆ ಗಾಡಿಯನ್ನು ತಿರುಗಿಸಿದೆ. ಈ ಎರಡು ವರ್ಷಗಳಲ್ಲಿ ಎಂದಾದರೂ ನನ್ನ ಪ್ರೀತಿಯ ತೀವ್ರತೆ, ಅದರ ಸಾಂದ್ರತೆ ಕಡಿಮೆಯಾಗಿತ್ತೇ? ಎಂಬ ಪ್ರಶ್ನೆ ಏಕೋ ಮೂಡಿತ್ತು, ಆದರೆ ಅದು ಎಂದಾದರೂ ನಿನ್ನ ಹೃದಯಬಡಿತ ನಿಲ್ಲಿಸಿತ್ತೇ ಎಂಬ ಪ್ರಶ್ನೆಯಷ್ಟೇ ಮೂರ್ಖವಾಗಿ ಕಂಡುಬಂದು ತಲೆಕೊಡವಿಕೊಂಡೆ. ಅವಳದ್ದು? ಸಾಧ್ಯವೇ ಇಲ್ಲ, ಅವಳ ಪ್ರತಿ ಹೃದಯಬಡಿತ, ಮನಸ್ಸಿನ ಪ್ರತೀ ತುಡಿತ ನನಗೆ ಗೊತ್ತು. ಯೋಚನೆ ಹೀಗೇ ಸಾಗಿತ್ತು. ಎದುರಿದ್ದ ಟೆಂಪೋ ಟ್ರಾವೆಲರ್ ಏಕೋ ಸಡನ್ ಆಗಿ ನಿತ್ತಿತ್ತು. ನಾನು ಬ್ರೇಕ್ ಹಾಕುವುದರೊಳಗೆ ಬೈಕ್ ಹೋಗಿ ಅದಕ್ಕೆ ಗುದ್ದಿ ಆಗಿತ್ತು. ಅಂಗಾತ ಬಿದ್ದಿದ್ದೆ, ಹಿಂದಿಂದ ಬರುತ್ತಿದ್ದ ಲಾರಿ ಕಾಲ ಮೇಲೆ ಹರಿದು ಹೋಗಿತ್ತು . ನೋವೆಲ್ಲ ಸಮೀಕರಿಸಿ ತಲೆಗೆ ನುಗ್ಗಿ ನರಮಂಡಲ ಧೀಂ ಎಂದಿತ್ತು. ಅದಕ್ಕೆ ಪರಿಹಾರ ಎಂಬಂತೆ ಪ್ರಜ್ಞೆ ತಪ್ಪಿತ್ತು. ಎಚ್ಚರ ತಪ್ಪುವಾಗ ಎದೆಯೊಳಗಿದ್ದ ವೈಷ್ಣವಿ, ಎಚ್ಚರವಾದಾಗ ಎದುರಿದ್ದಳು, ಆಸ್ಪತ್ರೆಯ ಬೆಡ್ ನ ಪಕ್ಕದಲ್ಲಿ.
೨.
ಆ ಘಟನೆ ಆಗಿ ತಿಂಗಳಾಗಿದೆ. ನನ್ನ ಬಲಕಾಲು ಪೂರ್ಣವಾಗಿ ಜಜ್ಜಿ ಹೋಗಿದ್ದರಿಂದ ಆಪರೇಶನ್ ಮಾಡಿ ಕಾಲನ್ನು ತೆಗೆಯಬೇಕಾಯಿತು. ತಿಂಗಳಾಗುತ್ತ ಬಂದಿದೆ, ಕಾಲೇಜಿನ ಕಡೆ ಮುಖ ಹಾಕದೇ. ಕಾಲೇಜಿಗೆ ಹೋಗುವುದಕ್ಕೆ ಮೂಲಕಾರಣವೇ ನಾನಿರುವಲ್ಲಿಗೇ ದಿನವೂ ಬರುತ್ತದೆ ಎಂದರೆ, ಯಾರು ತಾನೇ ಕಾಲೇಜನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಬೇಜಾರು ಮಾಡಿಕೊಳ್ಳುತ್ತಾರೆ? ಮೊದಲ ಒಂದು ವಾರವಿಡೀ ಅವಳೂ ಕಾಲೇಜಿಗೆ ಹೋಗಿರಲಿಲ್ಲ. ದಿನವಿಡೀ ನನ್ನ ಅಮ್ಮನೂ, ಅವಳೂ ಆಸ್ಪತ್ರೆಯಲ್ಲಿಯೇ ಇರುತ್ತಿದ್ದರು. ಇಬ್ಬರ ಮನೆಯಲ್ಲಿಯೂ ನಮ್ಮ ಬಗ್ಗೆ ಗೊತ್ತಿದ್ದರಿಂದ, ಅದೆನೂ ಆಶ್ಚರ್ಯಕಾರಿ ಸಂಗತಿಯಲ್ಲ. ಮೊದಲೆರಡು ದಿನ ಅಮ್ಮನೂ ಪ್ರಜ್ಞೆ ಇಲ್ಲದಿದ್ದವಳ ಹಾಗೆ ಕುಳಿತಾಗ, ಇವಳೇ ಮನೆಯಿಂದ ಅಡಿಗೆ ಮಾಡಿಸಿಕೊಂಡು ತರುತ್ತಿದ್ದಳು. ನನಗೂ, ಅಮ್ಮನಿಗೂ ಆ ಸಮಯದಲ್ಲಿ ಒಂದು ದಿಕ್ಕಾಗಿದ್ದು ಅವಳೇ. ಒಂದು ವಾರದ ನಂತರ ಕಾಲೇಜಿಗೆ ಹೋಗಲು ಪ್ರಾರಂಭಿಸಿದಳಾದರೂ, ಮುಗಿಸಿ ಬಂದವಳು ನನ್ನ ಪಕ್ಕ ಬಂದು ಕೂತರೆ ,ಆಸ್ಪತ್ರೆಯನ್ನು ಬಿಟ್ಟು ಹೋಗಲೇ ತಯಾರಿರುತ್ತಿರಲಿಲ್ಲ. ಸಂಜೆಯಾಗಿ ಅವಳನ್ನು ಕಳಿಸಬೇಕಾದರೆ ಅಮ್ಮ, ನಾನು ನಮ್ಮ ಬುದ್ಧಿಶಕ್ತಿಯನ್ನೆಲ್ಲ ಖರ್ಚು ಮಾಡಬೇಕಾಗುತ್ತಿತ್ತು, ಕೆಲವೊಮ್ಮೆ ಅಮ್ಮ ಸುಳ್ಳು ಸುಳ್ಳೇ ಸಿಟ್ಟು ಮಾಡಿಕೊಂಡಿದ್ದೂ ಇದೆ, ಕೆಲವೊಮ್ಮೆ ಅಮ್ಮ ಮರೆಯಲ್ಲಿ ಖುಷಿಯಿಂದ ಕಣ್ಣನ್ನು ಒರೆಸಿಕೊಂಡಿದ್ದೂ ಇದೆ. ಒಂದೆರಡು ವಾರದ ನಂತರ, ನಾನು ದೊಡ್ಡ ತ್ಯಾಗಿಯ ಹಾಗೆ "ಈಗಲೂ, ಹೀಗೆ ನನ್ನ ಕಾಲು ಹೋದ ಮೇಲೂ ನೀನು ನನ್ನನ್ನು ಪ್ರೀತಿಸುತ್ತೀಯಾ ?, ನೀನು ನನ್ನನ್ನು ಮರೆತುಬಿಡುವುದು ಒಳ್ಳೆಯದೇನೋ" ಎಂದೆ ಯಾವುದೋ ಒಂದು ಗೊಂದಲದಲ್ಲಿ. "ಛಟೀರ್!"ಬಿದ್ದಿತ್ತು ನನ್ನ ಕೆನ್ನೆಯ ಮೇಲೊಂದು ಪೆಟ್ಟು. "ಮೂರ್ಖ, ನೀನು ಇಷ್ಟು ಚಿಲ್ಲರೆಯಾಗಿ ಯೋಚಿಸುತ್ತೀಯಾ ಎಂದು ನನಗೆ ತಿಳಿದಿರಲಿಲ್ಲ. ಅಷ್ಟಕ್ಕೂ ನಾನು ಪ್ರೀತಿಸಿದ್ದು ಹೃಷೀಕೇಷ ಎಂಬ ವ್ಯಕ್ತಿಯನ್ನು, ಅವನ ಕಾಲನ್ನಲ್ಲ" ಕಣ್ಣ ತುಂಬ ನೀರನ್ನು ತುಂಬಿಕೊಂಡು ಹೇಳಿದಳು. ಅವಳ ಪ್ರತಿಕ್ರೀಯೆ ನನ್ನ ಬಗ್ಗೆ ನನಗೇ ಅಸಹ್ಯವಾದ ಹೇಸಿಕೆ ಹುಟ್ಟಿತು. ಅವಳ ಬಗ್ಗೆ ಮನದಲ್ಲಿದ್ದ ಒಂದು ಹೆಮ್ಮೆ ಮತ್ತಿಷ್ಟು ಬಲಿತಿತ್ತು. ಹೀಗೆ ಇವಳು ದಿನವೂ ನನ್ನ ಪಕ್ಕ ಬಂದು ಕೂರುವುದಾದರೆ ಜೀವನ ಪೂರ್ತಿ ಹೀಗೇ ಆಸ್ಪತ್ರೆಯಲ್ಲಿರಲು ನಾನು ತಯಾರಿದ್ದೆ. ಜೀವನದಲ್ಲಿ ಮತ್ತೇನು ಬೇಕು, ಜೀವಕೊಟ್ಟ ಅಮ್ಮ ಮತ್ತು ಜೀವಕೊಡಲು ತಯಾರಿರುವ ಹುಡುಗಿಯ ಸಂಪೂರ್ಣ ಸಾನಿಧ್ಯ ಬಿಟ್ಟು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಹೊತ್ತಿಗೆ ನನ್ನ ಒಂದು ಕಾಲು ಇಲ್ಲದೆಯೇ, ಕುಂಟು ಹಾಕಿಕೊಂಡಿರಬೇಕಾದ ಮುಂದಿನ ಜೀವನಕ್ಕೆ ತಯಾರಾಗಿದ್ದೆ.
೩.
ಇದಾಗಿ ಮತ್ತೊಂದು ತಿಂಗಳು ಕಳೆದಿತ್ತು. ಅವಳ ಮಾವನ ಮಗ ಸಿಂಧೂರ ಅಮೇರಿಕಾದಿಂದ ಬಂದಿದ್ದ. ಅವಳೊಂದಿಗೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಒಡನಾಡತೊಡಗಿದ. ಬೈಕಿನಲ್ಲಿ ಕೂರಲು ಹಿಂಜರಿಯುತ್ತಿದ್ದವಳಿಗೆ ದಿನವೂ ಅವನೇ ಡ್ರಾಪ್ ಕೊಡತೊಡಗಿದಾಗ, ಹಾಗಾದರೂ ಅವಳಿಗೆ ಅನುಕೂಲವಾಗುತ್ತದಲ್ಲ ಎಂದು ಸುಮ್ಮನೇ ಇದ್ದೆ, ಮಧ್ಯದ ಬ್ರೇಕ್ ಗಳಲ್ಲಿ ಅವನು ಸುಮ್ಮಸುಮ್ಮನೇ ಕಾಲೇಜಿಗೆ ಬಂದು ಅವಳನ್ನು ಮಾತನಾಡಿಸತೊಡಗಿದರೂ ಏನೋ ಸಂಬಂಧಿಕರು ಎಂದು ಸುಮ್ಮನಿದ್ದೆ, ನನ್ನ ಯೋಗಕ್ಷೇಮದ ಬಗ್ಗೆ ಅವಳು ವಿಚಾರಿಸುವುದನ್ನು ಕಡಿಮೆಮಾಡಿದಾಗಲೂ ಸಿಂಪತಿಯನ್ನು ಅಪೇಕ್ಷಿಸಿತೇ ಮನ ಎಂದು ನನ್ನ ಮನಸ್ಸಿಗೇ ಬೈದುಕೊಂಡು ಸುಮ್ಮನಿದ್ದೆ, ಆದರೆ ನನಗೆ ಬರುತ್ತಿದ್ದ ಮೆಸೇಜು, ಕಾಲುಗಳು ಬತ್ತಿಹೋಗಿ, ನಾನು ಮಾಡಿದ ಮೆಸೆಜುಗಳಿಗೂ ಉತ್ತರ ಬರದೇ ನನ್ನ ಬಗ್ಗೆ ನಿರ್ಲಕ್ಷ್ಯ ತೋರಲಾರಂಭಿಸಿದಾಗ ಮಾತ್ರ ಚಡಪಡಿಸಿಹೋದೆ. ಮುಖಕ್ಕೆ ಮುಖ ಕೊಟ್ಟು ದಿಟ್ಟಿಸಲೂ ಅವಳು ಹಿಂಜರಿದು ತಲೆ ಬಗ್ಗಿಸಿಕೊಂಡು ಹೋದಾಗ ನಾನು ಪಾತಾಳಕ್ಕೆ ಕುಗ್ಗಿಹೋದೆ. "ಏಕೆ ಹೀಗೆ ಮಾಡುತ್ತಿರುವೆ? ನನ್ನ ಕಾಲು ಮುರಿದು ಹೋಗಿದೆ ಎಂಬ ಒಂದೇ ಕಾರಣಕ್ಕಾಗಿಯೇ?" ಎಂದಾಗ "ಇರಬಹುದು,ಈಗ ನಾನು ನಿನ್ನನ್ನಂತೂ ಪ್ರೀತಿಸುತ್ತಿಲ್ಲ " ಎಂದು ಮುಖಕ್ಕೆ ಹೊಡೆದಂತೆ ಅವಳು ಹೇಳಿದಾಗ ಮೊದಲ ಬಾರಿಗೆ ನಾನು ಅಂಗವಿಕಲ ಎನ್ನಿಸಿತು. "ಹಾಗಾದರೆ ಆಸ್ಪತ್ರೆಯಲ್ಲಿ ಹೇಳಿದ್ದೆಲ್ಲಾ?" ಎಂದಿದ್ದಕ್ಕೆ ಮೌನವೇ ಉತ್ತರ. ಮತ್ತೂ ಒತ್ತಾಯಪಡಿಸಿದರೆ "ಆಗಲಾದರೂ ನಾನು ನಿನಗೆ ಮಾನಸಿಕ ಬೆಂಬಲ ಇತ್ತೆನಲ್ಲಾ ಎಂದು ಖುಷಿಪಡು. ಆಗ ನಾನು ಮಾಡಿದ ಸಹಾಯಕ್ಕೆ ಕೃತಜ್ಞನಾಗಿರು" ಎಂದು ಮತ್ತೂ ನಿಷ್ಠುರವಾಗಿ ಹೇಳಿದ್ದು ನನಗೆ ಅವಮಾನಕಾರಿಯಾಗಿ ಕಂಡುಬರಲೆಂದೆಯೇ ಅವಳು ಅಗತ್ಯಕ್ಕಿಂತ ಖಾರವಾಗಿ ಮಾತನಾಡುತ್ತಿದ್ದಾಳೆ ಎಂದು ಒಳಮನಸ್ಸಿಗೆ ಎನ್ನಿಸಿತು, ಆದರೆ ಬುದ್ಧಿ ಅದನ್ನು ತಿರಸ್ಕಾರ ಎಂದೇ ಗಣಿಸಿ, ಅವಳ ಬಗ್ಗೆ ಮತ್ತಿಷ್ಟು ಅಸಹ್ಯಿಸಿಕೊಂಡಿತು. ಹಾಗೆ ನಮ್ಮಿಬ್ಬರ ಸಂಬಂಧ ಮತ್ತೆಂದಿಗೂ ಸರಿಪಡಿಸಲಾರದ ಮಟ್ಟಿಗೆ ಹಾಳಾಯಿತು. ನನಗೇ ಇಂದು ಇಲ್ಲಿ ಬರೆಯಲು ಇಷ್ಟ ಪಡದ ಶಬ್ದಗಳನ್ನೆಲ್ಲಾ ಉಪಯೋಗಿಸಿಕೊಂಡು ಬಯ್ದುಬಿಟ್ಟೆ. ಗೆಳೆಯರ ಬಳಗದಲ್ಲೆಲ್ಲಾ ಅವಳ ಬಗ್ಗೆ ಒಂತರಾ ಕೆಟ್ಟ ಇಮೇಜನ್ನು ಹುಟ್ಟಿಸಿಬಿಟ್ಟೆ. ಇದರ ಮಧ್ಯೆ ಒಂದೆರಡು ಸಲ ಅವಳ ಕಸಿನ್ ನನ್ನ ಬಳಿ ಮಾತನಾಡಲು ನೋಡಿದನಾದರೂ ನಾನು ಅವಕಾಶ ಕೊಡದೇ ತಪ್ಪಿಸಿಕೊಂಡು ಬಿಟ್ಟೆ.
೪.
ಒಂದು ತಿಂಗಳು ಕಳೆದಿತ್ತೇ? ಲೆಕ್ಕ ಇಟ್ಟವರಾರು? ಭಾವ ಕರಗಿ, ಕೊರಗು ಮೂಡಿ, ದುಃಖ ತಿರುತಿರುಗಿ ಉಮ್ಮಳಿಸಿ ಬಂದು ಮಾತು ಕಟ್ಟಿಹೋದಂತಾದಾಗ ದಿನದ ಲೆಕ್ಕ ಇಡುವ ವ್ಯವಧಾನ ಯಾರಿಗಾದರೂ ಇದ್ದೀತು. ಒಂದು ಸಂಜೆ ಹೀಗೆ ಕಾಲೇಜಿನ ಕಟ್ಟೆಯ ಮೇಲೆ ಕೂತು ಅವಳ ಬಗ್ಗೆಯೇ ಏನೋ ಒಂದು ಮಾತನಾಡುತ್ತಿರಬೇಕಾದರೆ ಸಿಂಧೂರ ಎಲ್ಲಿಲ್ಲದ ಗಡಿಬಿಡಿಯಿಂದ ಓಡಿಬಂದಾಗಲೇ ಮನಸ್ಸು ಏನೋ ಕೇಡನ್ನು ಸಂಶಯಿಸಿತ್ತು.ಬಂದವನೇ ಹಿಂದೆ ಮುಂದೆ ನೋಡದೇ, ನನ್ನನ್ನು ಒಂದು ಮಾತ್ರ ಮಾತನ್ನೂ ಕೇಳದೇ"ಆಸ್ಪತ್ರೆಗೆ ಹೋಗೋಣ ಬನ್ನಿ" ಎಂದು ಬೈಕಿನಲ್ಲಿ ಕೂರುವಂತೆ ಹೇಳಿ ಸ್ಟಾರ್ಟ್ ಮಾಡಿದ. ಏನಕ್ಕೆ ಎಂಬ ಪ್ರಶ್ನೆಗೆ ಮೌನವೇ ಉತ್ತರ. ಬಹಳೇ ಕಿರಿಕ್ ಮಾಡಿ, ಇನ್ನು ಹೇಳದಿದ್ದರೆ ಓಡುತ್ತಿರುವ ಗಾಡಿಯಿಂದ ಇಳಿದು ಬಿಡುತ್ತೇನೆ ಎಂದು ಬೆದರಿಕೆ ಹಾಕಿದಾಗ, "ನಿಮ್ಮ ಅದೃಷ್ಟ ಸರಿಯಾಗಿದ್ದರೆ ವೈಷ್ಣವಿಯನ್ನು ಜೀವಂತವಾಗಿ ನೋಡಬಹುದು" ಎಂದಷ್ಟೇ ಹೇಳಿ ಇನ್ನು ಹಾರುವುದಾದರೆ ಹಾರಿ ಎಂಬ ಧಾಟಿಯಲ್ಲಿ ಬೈಕನ್ನು ಯಮವೇಗದಲ್ಲಿ ಹೊಡೆಯತೊಡಗಿದ. ಯಾವ ವೇಗದಲ್ಲಿ ಹೋದರೇನು, ಜೀವ ಕಾದಿರಲಿಲ್ಲ. ಬದುಕಿದ್ದಾಗ ಇದ್ದ ಅದೇ ತುಂಟನಗೆಯನ್ನು ಸತ್ತ ಮೇಲೂ ಇರಿಸಿಕೊಳ್ಳಲು ಸಾಧ್ಯವೇ ಎಂದು ಅಚ್ಚರಿಗೊಳ್ಳುವಷ್ಟು ನಿರಾಳವಾಗಿ ಮಲಗಿಕೊಂಡಿದ್ದಳು ಆಸ್ಪತ್ರೆಯ ಮಂಚದ ಮೇಲೆ. ನನಗ್ಯಾಕೋ ನಂಬಲಾಗಲಿಲ್ಲ, ನಂಬಬೇಕು ಎಂದು ಕೂಡ ಎನ್ನಿಸಲಿಲ್ಲ. ನಾವೆಷ್ಟೇ ಸುಳ್ಳು ಸುಳ್ಳಾಗಿ ದ್ವೇಷಿಸಿದಂತೆ ತೋರಿಸಿಕೊಂಡರೂ ಒಮ್ಮೆ ಪ್ರೀತಿಸಿದ ಮೇಲೆ ಆ ವ್ಯಕ್ತಿಯ ಬಗ್ಗೆ ಬೇರಾವ ಭಾವವೂ ಮೂಡಲೂ ಸಾಧ್ಯವಿಲ್ಲ. ಪ್ರೀತಿ ಎಂಬ ಒಂದು ಭಾವನೆ ಎದೆಯಲ್ಲಿ ಬೇರು ಬಿಟ್ಟು ಕೂತ ಮೇಲೆ ಬೇರೆ ಭಾವಗಳಿಗೆ ಜಾಗವಾದರೂ ಎಲ್ಲಿಂದ ಸಿಕ್ಕೀತು. ಆ ವ್ಯಕ್ತಿಯ ಬಗ್ಗೆ ಇರಬಹುದಾದದ್ದು ಮತ್ತೇನೂ ಅಲ್ಲ, ಕೇವಲ ಪ್ರೀತಿ. ಈ ಪ್ರೀತಿ ಎಂಬುದು ಜೀವನದಲ್ಲಿ ಒಮ್ಮೆ ಮಾತ್ರ ಆಗುವುದೆಂದೂ, ನಮ್ಮ ಬಳಿ ಇರುವ ವ್ಯಕ್ತಿಯ ಮಹತ್ವ ಅವರಿಂದ ದೂರವಾದ ಮೇಲೆ ಮಾತ್ರ ತಿಳಿಯುತ್ತದೆಯೆಂದೂ ತಿಳಿದುಕೊಳ್ಳಲು ನಾನು ಜೀವನದಲ್ಲಿ ಇಷ್ಟು ದೊಡ್ಡ ಬೆಲೆಯನ್ನು ತೆರಬೇಕಾಯಿತೇ?
೫.
ನನಗಾದ ಶಾಕ್ಅನ್ನೂ , ಆ ದುಃಖವನ್ನೂ ಮತ್ತಾರು ಅರ್ಥ ಮಾಡಿಕೊಂಡರೋ ಇಲ್ಲವೋ ಗೊತ್ತಿಲ್ಲ ಸಿಂಧೂರ ಮಾತ್ರ ಚೆನ್ನಾಗಿ ಅರ್ಥೈಸಿಕೊಂಡ " ಇಲ್ಲೇ ಹೊರಗೆ ಹೋಗಿ ಬರೋಣ" ಎಂದು ಆಸ್ಪತ್ರೆಯಿಂದ ಸ್ವಲ್ಪ ಹೊರಗೆ ಕರೆದುಕೊಂಡು ಬಂದವನು ಮೊದಲೆ ನಿರ್ಧರಿಸಿಕೊಂಡಿದ್ದಂತೆ ಮಾತನಾಡತೊಡಗಿದನು, "ರಿಷಿ, ನೀನು ವೈಷ್ಣವಿಯ ಬಗ್ಗೆ ಏನು ತಿಳಿದುಕೊಂಡಿದ್ದೆಯೋ, ಈಗ ಏನನ್ನು ಭಾವಿಸಿರುವೆಯೋ ನನಗೆ ಗೊತ್ತಿಲ್ಲ. ಅವಳ ಬಗ್ಗೆ ನಿನ್ನಲ್ಲಿರುವ ಸಂದೇಹಗಳೆಲ್ಲ ಊಹೆಗಳಷ್ಟೇ! ನಾನು ಅರ್ಥ ಮಾಡಿಕೊಳ್ಳಬಲ್ಲೆ, ನಿನ್ನ ಯೋಚನಾಲಹರಿ ಹೇಗೆ ಸಾಗಿರಬಹುದು ಎಂದು. ಆದರೆ ಒಂದಂತೂ ನಿಜ. ಅವಳು ಪುಟಕ್ಕಿಟ್ಟ ವಜ್ರ.ಅಂತಹ ಹುಡುಗಿ ಎಲ್ಲರಿಗೂ ಸಿಗಲಾರಳು. ಎಲ್ಲಿಯೂ…" ಅವನೇ ಸ್ವಲ್ಪ ಹೊತ್ತು ಬಿಟ್ಟು ಮುಂದುವರಿಸಿದ. "ಅವಳು ಬೆಳದಿಂಗಳಂತ ಹುಡುಗಿ. ಬಿಸಿಯಾಗಿರದ ಸುಡದ ತಣ್ಣನೆಯ ಬೆಳಕು ಅವಳು. ನಿನಗೇ ಗೊತ್ತಲ್ಲ, ಮಾತನಾಡಿದರೆ ಮುತ್ತು ಉದುರಿದಂತ ಇಂಪು. ನಡೆದರೆ ಭೂಮಿ ಹಸಿರಾದೀತು ಎಂಬ ಆಸೆ, ಅಂತಹವಳು. ನಾನು ಅವಳೂ ಚಿಕ್ಕಂದಿನಿಂದಲೂ ಆಡಿ ಬೆಳೆದವರು. ಸಿಂಧೂರಣ್ಣ ಎನ್ನುತ್ತಿದ್ದಳು, ಪ್ರೀತಿಯಿಂದ ಸಿಂಧೂ ಎಂದಷ್ಟೇ ಕರೆದುಬಿಡುತ್ತಿದ್ದುದೂ ಇತ್ತು. ನನಗೆ ಸ್ವಂತ ತಂಗಿಯಿದ್ದರೂ ಇಷ್ಟು ದುಃಖಿಸುತ್ತಿರಲಿಲ್ಲವೇನೋ, ಅಂತಹ ಹುಡುಗಿ. ನಾನು MBBS ಮುಗಿಸಿ ಅಮೇರಿಕಾಕ್ಕೆ ಉನ್ನತ ಶಿಕ್ಷಣಕ್ಕೆ ಹೋದ ಮೇಲೂ ಆವಾಗಾವಾಗ ಫೋನ್ ಮಾಡುತ್ತಿದ್ದಳು, ತಪ್ಪದೇ ಕಾಗದ ಬರೆಯುತ್ತಿದ್ದಳು. ನಿನ್ನ ಬಗ್ಗೆ ನೀನು ಪ್ರಪೋಸ್ ಮಾಡಿದಂದೇ ಹೇಳಿದ್ದಳು. ನಿನ್ನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದಳು, ಕೊನೆಯವರೆಗೂ ಪ್ರೀತಿಸಿದಳು, ಪ್ರೀತಿಸುತ್ತಲೇ ಕೊನೆಯುಸಿರೆಳೆದಳು." ನನಗಿಂತ ಹೆಚ್ಚಾಗಿ ಅವನು ಬಿಕ್ಕಳಿಸಿದನೇ, ಅದಕ್ಕೋಸ್ಕರವೇ ಮುಖವನ್ನು ಮತ್ತೊಂದೆಡೆಗೆ ತಿರುಗಿಸಿದನೇ, ನಾನು ಹುಡುಕಲು ಹೋಗಲಿಲ್ಲ. "ನನಗೆ ನಿನ್ನ ಕೋಪವೂ ಅರ್ಥವಾಗುತ್ತದೆ. ಹೌದು ಅದಕ್ಕೂ ಅರ್ಥವಿದೆ. ನಿನ್ನ ಜಾಗದಲ್ಲಿ ನಾನಿದ್ದರೂ ನಾನು ಹಾಗೇ ತಿಳಿಯುತ್ತಿದ್ದೆನೇನೋ. ಆದರೆ ಅವಳ ಮನಸ್ಸು ನಮ್ಮ ಕಲ್ಪನೆಗೆ ಸಿಗದಷ್ಟು ದೊಡ್ಡದು. ನಿನಗೆ ಆ ದಿನ ಅಪಘಾತ ಆಗಿ ಕಾಲು ಕತ್ತರಿಸಿದರಲ್ಲ, ಅದಾಗಿ ಒಂದಿಷ್ಟು ದಿನ ಇವಳು ನಿನ್ನೊಂದಿಗೆ ಸರಿಯಾಗೆಯೇ ಇದ್ದಳು ನಿನಗೆ ನೆನಪಿರಬಹುದು. ಸುಮಾರು ಒಂದು ತಿಂಗಳಾದ ಮೇಲೆ ಒಂದು ದಿನ ವಿಪರೀತ ಹೊಟ್ಟೆ ನೋವು ಬಂದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಳು. ಆಗ ಪರೀಕ್ಷೆ ಮಾಡಿದಾಗ ತಿಳಿದಿದ್ದು, ಈ ಬೆಳದಿಂಗಳ ಹುಡುಗಿಗೆ ಆ ’ಬೆಳದಿಂಗಳ ಬಾಲೆ(ಸುನಿಲ ಕುಮಾರ್ ದೇಸಾಯಿಯವರ ಚಲನಚಿತ್ರ)’ಗೆ ಇದ್ದ ಖಾಯಿಲೆಯೇ ಬಂದಿದ್ದು ಎಂದು. ಕೊನೆಯವರೆಗೂ ಬಾಹ್ಯಲಕ್ಷಣಗಳನ್ನು ತೋರಿಸದೇ ಸುಪ್ತವಾಗಿ ಉಳಿದುಬಿಡುವ ಮದ್ದಿಲ್ಲದ ಖಾಯಿಲೆಯದು. ಈ ವಿಷಯ ತಿಳಿದಿದ್ದುದು ಅವಳಿಗೆ, ನನಗೆ ಹಾಗೂ ಅವಳ ತಂದೆಯವರಿಗೆ ಮಾತ್ರ. ನನಗೆ ತಿಳಿದಾಕ್ಷಣ ನಾನು ಸ್ಟೇಟ್ಸ್ ನಿಂದ ಬಂದೆ. ನಿನಗೆ ಹೇಳಲೇಬಾರದು ಎಂದು ಖಡಾಖಂಡಿತವಾಗಿ ಹೇಳಿದ್ದಳು ಆಣೆ ತೆಗೆದುಕೊಂಡಿದ್ದಳು. ಯಾಕೆ ಎಂದರೆ "ಅವನು ಅದನ್ನು ತಡೆದುಕೊಳ್ಳಲಾರನೋ, ವಿಷಯ ಗೊತ್ತಾದರೆ ನನಗಿಂತ ಮೊದಲೇ ಅವನು ಸಾಯಬಹುದು" ಅವಳ ಧ್ವನಿ ಏನನ್ನೂ ವೈಭವೀಕರಿಸಿದ ಹಾಗೆ ಕೇಳುತ್ತಿರಲಿಲ್ಲ, ಸತ್ಯವನ್ನು ಹೇಳುವ ನಿಷ್ಟುರವಿದ್ದಂತಿತ್ತು. ನಿನ್ನ ಪ್ರೀತಿಯ ಆಳ, ಆ ಪೊಸೆಸಿವ್ ನೆಸ್ ಗಳ ಬಗ್ಗೆ ಅವಳಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೇ ಅವಳು ಹೆದರಿಕೊಂಡಿದ್ದುದು, ಎಲ್ಲಿ ನೀನೇನಾದರೂ ಭಾನಗಡಿ ಮಾಡಿಕೊಂಡುಬಿಡುತ್ತೀಯೇನೋ ಎಂದು. ಪರಿಹಾರವೇನು, ನಿನ್ನ ದೃಷ್ಟಿಯಲ್ಲಿ ಅವಳು ಕೆಟ್ಟವಳಾದರೆ ಮಾತ್ರ ಅವಳ ದುರ್ವಾರ್ತೆಯನ್ನು ಅರಗಿಸಕೊಳ್ಳಬಲ್ಲ ಶಕ್ತಿ ನಿನಗೆ ಸಿಗಬಹುದು ಎಂದು ನಿನ್ನಿಂದ ದೂರವಾಗಬೇಕೆಂದುಕೊಂಡಳು, ಅದಕ್ಕಾಗಿ ಕೆಟ್ಟವಳೆಂಬ ಪಟ್ಟವನ್ನು ಹೊರಲೂ ಸಿದ್ಧವಾದಳು. ಹೊತ್ತಳೂ ಕೂಡ. ಅವಳಿಗೆ ಇದ್ದಿದ್ದು ಒಂದೇ ಆಸೆ, ನೀನು ಸುಖವಾಗಿರಬೇಕೆಂದು. ಅದಕ್ಕಾಗಿ, ಅವಳ ನೆನಪಿನಲ್ಲಿ ನೀನು ಕೊರಗಬಾರದೆಂದು ಅವಳು ನಿನ್ನಿಂದ ದೂರವಾಗಲು ನೋಡಿದಳೇ ವಿನಃ ನಿನ್ನ ಕಾಲಿಗಾದ ಅಪಘಾತದಿಂದಲ್ಲ" ನನ್ನ ಪ್ರತಿಕ್ರಿಯೆ, ಭೂಮಿ ಬಾಯ್ಬಿಡಬಾರದೇ ಎನ್ನಿಸುವಂತಿತ್ತು. ಉತ್ತರ ಕೊಡಲು ಯಾವ ಮುಖವಿಲ್ಲದೇ, ಅದಕ್ಕೆ ಬೇಕಾದ ಶಕ್ತಿ, ಇಚ್ಛೆಗಳಿಲ್ಲದೇ, ನಾನು ಸುಮ್ಮನೇ ಥೇಟು ’ಬೆಳದಿಂಗಳ ಬಾಲೆ’ಯ ಕೊನೆಯಲ್ಲಿ ಅನಂತನಾಗ್ ಬರುವ ಹಾಗೆ ಸಾವಿನ ಮನೆಯಿಂದ ದುಃಖದ ಮೂಟೆಯನ್ನು ಮನದಲ್ಲಿ ಹೊತ್ತು ಗುರಿ-ದಿಕ್ಕುಗಳ ಹಂಗಿಲ್ಲದೇ ಅಲ್ಲಿಂದ ಸುಮ್ಮನೇ ಹೊರಬಿದ್ದೆ.
******
ಬೆಳದಿಂಗಳ ಬಾಲೆ….ನೆನಪಾದಳು ! ಕಥೆ ಚೆನ್ನಾಗಿದೆ !
Thumba chenaagidhe
ಚೆನ್ನಾಗಿದೆ. ಸುಮ್ಮನೆ ಬೆಳದಿಂಗಳ ಬಾಲೆ ಚಿತ್ರ ಕಣ್ಣು ಮುಂದೆ ಹಾದು ಹೋಯಿತು. ಚಿತ್ರದಲ್ಲಿ ಕೊನೆಗೆ ಅನಂತ್ ನಾಗ್ ಕಾರಿನ ಒಳಗಡೆ ತೇವಗೊಂಡ ಕಣ್ಣ ತೆರೆದು ಕೈಲಿದ್ದ ಕೊನೆ ಪತ್ರ ಓದುವಾಗಿನ ಒದ್ದೆ ಮನಸ್ಸು. ಹೊರಗಡೆ ಜೋರು ಮಳೆ. ಕಾರಿನ ಗ್ಲಾಸಿಗಾದರೆ ವೈಪರ್ ಇರುತ್ತೆ. ಕಣ್ಣಿನ ಹನಿಗಳ ತಡೆಗೆ ಇದ್ದ ಎರಡು ಕೈಗಳಿಗೆ ಸೋತ ಭಾವ.. ದು:ಖದ ಲಹರಿಯಲ್ಲಿ ತೇಲುತ್ತಾ ಉಲಿಯುವ ಬಾಲೆಯ ಪತ್ರದ ಸಾಲುಗಳು ಎಲ್ಲಾ ಎಲ್ಲಾ ನೆನಪಾಯಿತು….. ನಿಮ್ಮ ಬರಹದೊಂದಿಗೆ… ಈಗಿಲ್ಲಿ ಹೊರಗೆ ಧೋ ಮಳೆ. ಒಳಗೆ ನಾನು.. ಬಾಲೆ… ಮತ್ತು ಮುದ್ದೆ ಮನಸ್ಸು…..
!!!!!!!!!!!!! chenda iddo ..
ಚೆನ್ನಾಗಿದೆ
ಕಥೆ ಚೆನ್ನಾಗಿದೆ !
ಈ ಕಥೆಯ ಪ್ರತೀ ಸಾಲಿನಲ್ಲೂ ಪವಿತ್ರ ಪ್ರೇಮದ ಆಳವನ್ನು ಕಂಡೆ. ಆದರೆ ನಾಯಕ ತನ್ನ ಪ್ರೇಮಿಕೆಯನ್ನು ಅಷ್ಟು ಕೆಟ್ಟದಾಗಿ ಬೈಯುವುದನ್ನು ನಂಬಲಾರೆ, ಯಾಕೆಂದರೆ ಆತ ಆಕೆಯನ್ನು ಅಷ್ಟೊಂದು ಪ್ರೀತಿಸುತ್ತಾನೆ.
ಹೆಗಡೆಯವರೆ ಚೆನ್ನಾಗಿ ಕಥೆ ಹೆಣೆದಿದ್ದೀರಿ. ವಾಖ್ಯಗಳನ್ನು ಸ್ವಲ್ಪ ಚಿಕ್ಕದು ಮಾಡಿದ್ದರೆ, ಇನ್ನೂ ಈ ಕಥೆಯ "ರಂಗೇ"ರುತ್ತಿತ್ತು.
ದುರಂತ ಕಥೆಯಾದುದರಿಂದ, ಬಹಳ ಕಾಲ ಮನಸ್ಸಿನಲ್ಲಿ ಉಳಿಯಬಹುದು.
ಇನ್ನೂ ನಿಮ್ಮಿಂದ ಉತ್ತಮ ಕಥೆಗಳು ಬರಲಿ. ಶುಭವಾಗಲಿ.