ಬೆಳದಿಂಗಳ ನೋಡ: ಉಮೇಶ್ ದೇಸಾಯಿ

:೧:

ಕಮಲಾಬಾಯಿ ನಿರಾಳವಾದರು ಎರಡು ದಿನಗಳಿಂದ ಬಹಳ ತಳಮಳಿಸಿದ್ದರು. ತಾವು ನೋಡಿದ ವಿಷಯ ಮೊದಲು ಯಜಮಾನರಿಗೆ ತಿಳಿಸಿದ್ದರು. ಅವರ ನೀರನ ಪ್ರತಿಕ್ರಿಯೆ ಅವರನ್ನು ನಿರುತ್ಸಾಹಗೊಳಿಸಿದರಲಿಲ್ಲ. ತಪ್ಪು ನಡೆಯುತ್ತಿದೆ ಎಂದು ಗೊತ್ತಿದ್ದೂ ನೋಡುತ್ತ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ಅವರದಲ್ಲ. ಅದರಲ್ಲೂ ತಮ್ಮ ಪ್ರೀತಿಯ ಮಂಗಲಾಳ ಮಗಳು ತಪ್ಪು ಹಾದಿ ತುಳಿಯುತ್ತಿದ್ದಾಳೆ. ಇದರ ಬಗ್ಗೆ ಮಂಗಲಾಳಿಗೆ ಹೇಳಲೇಬೇಕು ಎಂದು ನಿರ್ಧರಿಸಿದರು.

ಆಗಿದ್ದಿಷ್ಟೆ… ಎರಡು ದಿನದ ಹಿಂದಿನ ಮಧ್ಯಾಹ್ನ ಕಮಲಾಬಾಯಿ ಅಪಾರ್ಟಮೆಂಟಿನ ಮುಂದಿನ ಲಾನ್‌ನಲ್ಲಿ ಕುಳಿತಾಗ, ಮುಖ್ಯ ರಸ್ತೆಯ ತಿರುವಿಗೆ ಬೈಕ್ ನಿಂತ ಶಬ್ದಕ್ಕೆ ತಲೆ ಎತ್ತಿ ನೋಡಿದರು. ಕುಳಿತವನನ್ನು ಅಪ್ಪಿ ಹಿಡಿದು ಕುಳಿತಿದ್ದ ಯುವತಿ ಮನಸ್ಸಿಲ್ಲದೇ ಕೆಳಗಿಳಿದಂತಿತ್ತು. ಬೈಕ್ ಸವಾರ ನೀಡಿದ ಗಾಳಿ ಮುತ್ತಿಗೆ ಇವಳೂ ತನ್ನ ತುಟಿಗೆ ಕೈ ಸೋಕಿಸಿ ’ಉಫ್’ ಎಂದು ಊದಿದಳು. ತಾನಿರುವುದು ರಸ್ತೆಯಲ್ಲಿ  ಎಂಬ ಅರಿವೂ ಅವಳಿಗೆ  ಇರಲಿಲ್ಲ. ಕುಣಿಯುತ್ತಲ್ಲೇ ಅಪಾರ್ಟಮೆಂಟು ಪ್ರವೇಶಿಸಿದವಳು ತಮ್ಮ ಮಂಗಲಾಳ ಮಗಳು ರಶ್ಮಿ ಎಂಬುದು ಕಮಲಾಬಾಯಿಗೆ ಗಾಬರಿ ಮಾಡಿತು.

***
ಕಮಲಾಬಾಯಿ ಅವರದು ಸಂತೃಪ್ತ ಕುಟುಂಬ ಎರಡು ಬೆಡ್‌ರೂಮಿನ ಮನೆ. ಮಗಳು ಬೆಂಗಳೂರಿನಲ್ಲಿ ಗಂಡ, ಸಂಸಾರ ಎಂದು ಹಾಯಾಗಿದ್ದಾಳೆ. ಮಗ ಅಮೆರಿಕ ಸೇರಿಕೊಂಡಿದ್ದಾನೆ. ದಿನದ ಬಹುಪಾಲು ವೇಳೆ ಕಮಲಾಬಾಯಿ ಜಪ, ಧ್ಯಾನಗಳಲ್ಲಿ ಕಳೆಯುತ್ತಾರೆ. ದೇವರ ಪೂಜೆ ಆಗದೇ ಒಂದು ಹನಿ ನೀರು ಸಹ ಅವರು ಕುಡಿಯುತ್ತಿರಲಿಲ್ಲ. ರಾಮರಾಯರು ಅಂದರೆ ಕಮಲಾಬಾಯಿ ಅವರ ಗಂಡ ಹೆಂಡತಿಯ ಈ ಅತಿ ಮಡಿವಂತಿಕೆ ಸೇರುತ್ತಿರಲಿಲ್ಲ. ಆಗಾಗ ಗಂಡ, ಹೆಂಡತಿ ನಡುವೆ ಈ ಬಗ್ಗೆ ವಾದ ಆಗುತ್ತಿದ್ದವು.

ಕಮಲಾಬಾಯಿ ಅವರ ಎದುರಿನ ಫ್ಲಾಟ್‌ನಲ್ಲಿ ಮಂಗಲಾ ವಾಸವಾಗಿದ್ದಾಳೆ. ಗಂಡ ಶ್ರೀಪತಿ ಬ್ಯಾಂಕ್‌ನಲ್ಲಿ ಆಫೀಸರ್ ಒಬ್ಬಳೇ ಮಗಳು ರಶ್ಮಿ. ಇಂಜಿನಿಯರಿಂಗ್ ಮೊದಲ ವರ್ಷದಲ್ಲಿದ್ದಾಳೆ ಮಂಗಲಾಳಿಗೆ ತಾಯಿ ಇಲ್ಲ. ಆದರೆ ಕಮಲಾಬಾಯಿ ಅವರ ಜತೆ ಒಡನಾಟ ಬೆಳದಾಗಿನಿಂದ ಮಂಗಲಾಳಿಗೆ ಆ ಕೊರತೆ ಕಾಡಿರಲಿಲ್ಲ. ಕಮಲಾಬಾಯಿ ಮಂಗಲಾ ಜೊತೆಗೆ ಗುಡಿ, ಕಾಯಿಪಲ್ಯೆ ತರಲು ಮಾರ್ಕೆಟ್ ಹೀಗೆ ಜೊತೆಯಾಗಿ ಹೋಗುವುದಿತ್ತು. ಆಗಾಗ ಮಂಗಲಾ ಕಮಲಾಬಾಯಿ ಅವರ ಕಡೆ ಬಂದು ತಿಳಿಯದ ವಿಷಯಗಳ ಬಗ್ಗೆ ಸಲಹೆ ಕೇಳುತ್ತಾಳೆ. ಕಮಲಾ ಅವರು ತನಗೆ ತಿಳಿದ ರೀತಿಯಲ್ಲಿ ಸಮಾಧಾನ ಹೇಳಿದರು. ಶ್ರೀಪತಿ ಮಾತು ಕಡಿಮೆ ಆದರೂ ಸಮಾಧಾನಿ. ಹೆಂಡತಿ ಹಾಗೂ ಕಮಲಾಬಾಯಿ ಅವರ ಸಾಂಗತ್ಯ ಅವನಿಗೂ ಹಿಡಿಸಿರುತ್ತದೆ.
***

ಮಂಗಲಾಳಿಗೆ ಸುದ್ದಿ ಹೇಗೆ ತಿಳಿಸುವುದು ಎಂಬ ಗೊಂದಲದಲ್ಲಿ ಕಮಲಾಬಾಯಿ ಎರಡು ದಿನ ಕಳೆದರು. ಕಣ್ಣಮುಂದೆ ಮತ್ತೆ ಮತ್ತೆ ತೇಲಿ ಬರುತ್ತಿದ್ದ ರಶ್ಮಿಯ ’ಗಾಳಿ ಚುಂಬನ’ ದ ದೃಶ್ಯ ಅವರನ್ನು ಕಾಡುತ್ತಿತ್ತು. ಅಲ್ಲ ಈ ಹುಡುಗಿ ಅದೇಕೆ ಹೀಗೆ… ಮಂಗಲಾ ಮಗಳಿಗೆ ಅತಿಯಾದ ಸ್ವಾತಂತ್ರ್ಯ ಕೊಟ್ಟಿದ್ದಾಳೆ… ಅವಳು ಇದರ ದುರಪಯೋಗ ತೆಗೆದುಕೊಳ್ಳುತ್ತಿದ್ದಾಳೆ. ಮಗಳು ಹೀಗೆ ಎಂದು ಅವಳಿಗೆ ಗೊತ್ತಿಲ್ಲ. ತಾನೇ ಹೇಳಬೇಕು.
***
ಮರುದಿನ ಮಧ್ಯಾಹ್ನ ಮಂಗಲಾಳ ಬಳಿ ಎಲ್ಲ ಹೇಳಿದರು. ತಾವು ನೋಡಿದನ್ನು ಬೇರೆಯವರೂ ನೋಡಿರಬಹುದು. ರಾದ್ಧಾಂತ ಆಗುವ ಮೊದಲೇ ತಿದ್ದಿಕೊಳ್ಳಲು ತಿಳಿಸಿದರು. ಸುದ್ದಿ ಕೇಳಿದ ಮಂಗಲಾ ಅಳಲು ಮುಂದಾದಾಗ ಸಮಾಧಾನ ಹೇಳಿದರು. ರಶ್ಮಿಯ ವರ್ತನೆ ತಿದ್ದಲು ಆಪ್ತ ಸೂಚನೆ ನೀಡಿದರು.
***
ತಮ್ಮ ಮಾತು ಮಂಗಲಾಳ ಮನೆಯಲ್ಲಿ ಯಾವ ಪರಿಣಾಮ ಬೀರಿರಬಹುದು ಇದು ಕಮಲಾಬಾಯಿ ಅವರಲ್ಲಿ ಕುತೂಹಲದ ವಿಷಯವಾಗಿತ್ತು. ರಾಮರಾಯರಿಗೆ ಪತ್ನಿಯ ಈ ’ಕಾರಭಾರ’ ಸೇರಿರಲಿಲ್ಲ. ನೇರವಾಗಿ ಪತ್ನಿಗೆ ಹೇಳಿದರು ಕೂಡ. ಕಮಲಾಬಾಯಿ ಅವರದು ಒಂದೇ ವಾದ ತಮ್ಮ ಮಾತಿನಿಂದ ಶ್ರೀಪತಿ ಹಾಗೂ ಮಂಗಲಾರ ಕಣ್ಣು ತೆರೆಯಲಿ ರಶ್ಮಿಯ ಬಾಳು ಹಸನಾದರೆ ಸಾಕು ಇದು ಅವರ ನಿಲುವಾಗಿತ್ತು. ದಿನವೂ ಬರುವ ಮಂಗಲಾ ಎರಡು ದಿನಗಳಾದರೂ ಮನೆಗೆ ಬರದಿದ್ದುದು ಅವರಿಗೆ ಚಿಂತೆಯ ವಿಷಯವಾಗಿತ್ತು. ಮಧ್ಯಾಹ್ನ ಹೊತ್ತು ಬಾಗಿಲು ಬಡಿದಾಗ ತೆರೆದವಳು ಮಂಗಲಾಳೇ. ಮುಖ ಸಪ್ಪಗಾಗಿತ್ತು. ಕೋಣೆಯ ಬಾಗಿಲು ಮುಚ್ಚಿದ್ದು ರಶ್ಮಿ ಹಟ ಹಿಡಿದು ಕುಳಿತಿದ್ದು, ಶ್ರೀಪತಿ. ಮಗಳಿಗೆ ಗದರಿಸಿದ್ದು ಹೊಡೆದದ್ದು ಎಲ್ಲ ಮಂಗಲಾ ಹೇಳಿಕೊಂಡಳು. ಶ್ರೀಪತಿಯೂ ರಜೆ ಹಾಕಿ ಮನೆಯಲ್ಲಿದ್ದ ಕಮಲಾಬಾಯಿ ಅವರ ಜೊತೆ ಅವನೂ ಮಾತನಾಡಿದ. ಸಕಾಲದಲ್ಲಿ ಎಚ್ಚರಿಸಿದ್ದಕ್ಕೆ ಧನ್ಯವಾದ ಹೇಳಿದ. ಬೇಗ ಈ ಸಮಸ್ಯಗೆ ಪರಿಹಾರ ಕಂಡುಕೊಳ್ಳುವ ವಿಚಾರ ಮುಂದಿಟ್ಟ.

***
ಶ್ರೀಪತಿ ಗೊಂದಲದಲ್ಲಿದ್ದ ಪಿಯುಸಿಯಲ್ಲಿ ಮಗಳು ಮಾರ್ಕು ಚೆನ್ನಾಗಿ ತೆಗೆದರೂ ದೂರ ಕಳಿಸುವುದು ಬೇಡ ಎಂದು ಹುಬ್ಬಳ್ಳಿಯಲ್ಲಿಯೇ ಪೇಮೆಂಟ್ ಸೀಟಿಗಾಗಿ ಪ್ರಯತ್ನಿಸಿದ್ದ ಅದರಲ್ಲಿ ಯಶಸ್ವಿಯೂ ಆಗಿದ್ದ. ಚೆನ್ನಾಗಿ ಓದುತ್ತಿದ್ದ ಮಗಳು ಹೀಗೆ ಮಾಡಿದ್ದು ಅವನಿಗೆ ಶಾಕ್ ಆಗಿತ್ತು. ತನ್ನ ಕೆಲಸದ ಒತ್ತಡದಲ್ಲಿ ಫ್ಯಾಮಿಲಿಯ ಬಗ್ಗೆ ಸಾಕಷ್ಟು ಗಮನ ಹರಿಸಲಾಗಿಲ್ಲ. ಇದು ಅವನಿಗೆ ವೇದ್ಯವಾದ ಮಾತೇ. ಆದರೆ ಇಷ್ಟು ದೊಡ್ಡ ಶುಲ್ಕ ಅವನು ಕೊಡುತ್ತಿರುವುದು ವಯಸ್ಸಾದ ಮಗಳ ಮೈ ಮೇಲೆ ಕೈ ಮಾಡುವುದು ಅವನಿಗೂ ಸರಿ ಅನಿಸಿರಲಿಲ್ಲ. ಹುಡುಗ ಚಿಕ್ಕಮಗಳೂರು ಕಡೆಯವನಂತೆ… ಬರೀ ಸ್ನೇಹ ಮಾತ್ರ ಎಂದು ಮಗಳು ಗೋಗರೆದಿದ್ದಳು. ಆದರೆ ಅವಳ ಮಾತು ನಿಜವೇ ಈ ಸಂಶಯ ಅವನಲ್ಲಿ. ಒಂದು ವೇಳೆ ಕಮಲಾಬಾಯಿ ಮುತುವರ್ಜಿ ವಹಿಸಿ ವಿಷಯ ತಿಳಿಸಲಿಲ್ಲವಾದರೆ ಈ ಸಂಗತಿ ತನಗೇ ಗೊತ್ತೇ ಆಗುತ್ತಿರಲಿಲ್ಲ. ಈ ವಿಷಯ ಅವನಿಗೆ ನೋವುಂಟು ಮಾಡಿತ್ತು. ಅದಕ್ಕೆ ಮನೆಯಲ್ಲಿ ಹಿರಿ ತಲೆ ಬೇಕು ಅಂಬೋದು. ಕಮಲಾಬಾಯಿ ಅವರೇನೋ ಸರಿ. ಆದರೆ ಅವರ ಯಜಮಾನರದು ವಿಚಿತ್ರ ಸ್ವಭಾವ. ಹಿರಿಯರು ಎಂದು ಗೌರವಿಸಿ ಅವರ ಸಲಹೆ ಕೇಳಲು ಹೋದರೆ ಅವರ ವರ್ತನೆ ವಿಚಿತ್ರವಾಗಿತ್ತು. ನಿಮ್ಮ ಮನೆತನದ ವಿಷಯದಲ್ಲಿ ತಲೆ ಹಾಕುವುದಿಲ್ಲ ಎಂದು ನೇರವಾಗಿ ಹೇಳಿದನಲ್ಲ ಮಾರಾಯ… ಕಮಲಾಬಾಯಿ ಅವರು ಮಗಳಿಗೆ ಗಂಡು ನೋಡಲು ಸಲಹೆ ನೀಡಿದರು… ಆದರೆ ಇಷ್ಟು ಬೇಗ… ಈ ಗೊಂದಲದಲ್ಲಿ ಶ್ರೀಪತಿ ಮುಳುಗಿದ್ದ. ಬಗೆಹರಿಯದ ಸಮಸ್ಯೆ ಆಗಿತ್ತು ಅವನಿಗೆ. ಕಮಲಾಬಾಯಿ ಮಾತ್ರ ಖುಷಿಯಾದರು. ಅವರು ಆಡಿದ ಮಾತು ಅದರ ಪ್ರಭಾವ ಹೀಗೆ ಆಗಿದ್ದು ನೋಡಿ ಸಂತೋಷಗೊಂಡರು ಮುಂದಿನ ದಿನಗಳಲ್ಲಿ ನಡೆದ ಎರಡು ಅನಿರೀಕ್ಷಿತ ಘಟನೆಗಳು ಮಾತ್ರ ಅವರ ನಂಬಿಕೆ ಅಲ್ಲಾಡಿಸಿದವು.

***

:೨:

ಕಮಲಾಬಾಯಿ ಅವರ ಮಗಳು ಅಂಬುಜಾ ತನ್ನ ಮಗಳು ನೇಹಾಳ ಜೊತೆ ಬಂದಿಳಿದಿದ್ದು. ಮಗಳು, ಮೊಮ್ಮಗಳು ಬಂದ ಸಂತೋಷ ಏನೋ ಇತ್ತು. ಆದರೆ ಅವರಿಬ್ಬರ ನಡುವೆ ಏನೋ ಒತ್ತಡ ಇರುವುದು ಕಮಲಾ ಅವರ ಅನುಭವಕ್ಕೆ ಗೋಚರವಾಯಿತು. ಇನ್ನೊಂದೆಂದರೆ ಮಂಗಲಾಳ ಮಗಳು ರಶ್ಮಿ ಮನೆಯಿಂದ ನಾಪತ್ತೆ ಆಗಿದ್ದು. ಮಂಗಲಾ ಇವರ ಮನೆಗೆ ಬಂದು ಗೋಳಾಡಿದ್ದಳು. ಶ್ರೀಪತಿನೂ ಕಂಗಾಲಾಗಿದ್ದ. ಮಗಳು ಹೀಗೆ ಮಾಡಿಯಾಳು ಎಂದು ಅವ ಅಪೇಕ್ಷೆ ಮಾಡಿರಲಿಲ್ಲ. ಇನ್ನು ಎರಡು ದಿನ ನೋಡಿ ಪೋಲಿಸ್‌ಗೆ ತಿಳಿಸುವುದಾಗಿ ಅಂದುಕೊಂಡ.

ರಶ್ಮಿಯ ಕತೆ ಮಗಳಿಗೆ ಹೇಳಿದರು. ಮಗಳು ಯಾಕೋ ಗಾಬರಿಗೊಂಡಂತಿತ್ತು. ಮೊಮ್ಮಗಳು ಸಹ ಅಲ್ಲೇ ಇದ್ದಳು. ಅಜ್ಜಿ ಹೇಳುವುದನ್ನು ಕುತೂಹಲದಿಂದ ಕೇಳುತ್ತಿದ್ದಳು. ನೇಹಾ ಇದು ಅವಳ ಹೆಸರು. ಅವಳಿಗೆ ಅಜ್ಜಿಯ ರೀತಿನೀತಿ ಸೇರುತ್ತಿರಲಿಲ್ಲ. ಅಜ್ಜಿ ಇರಲಿಕ್ಕೆಂದು ಬೆಂಗಳೂರಿಗೆ ಹೋದಾಗ ಅವರ ನಡುವೆ ತಿಕ್ಕಾಟ ಏರ್ಪಟ್ಟಿತ್ತು. ಕಮಲಾಬಾಯಿ ಅವರಿಗೆ ಮೊಮ್ಮಗಳ ವೇಷಭೂಷ, ಚೆಲ್ಲು, ಚೆಲ್ಲು ಮಾತುಗಳು ಹಿಡಿಸಿರಲಿಲ್ಲ. ಗಂಡಸರಂತೆ ಅವಳು ಶಾರ್ಟ ಹಾಕಿಕೊಂಡು ಮನೆಯಲ್ಲಿ ತಿರುಗಾಡುವುದು, ಗಂಟೆ ಗಟ್ಟಲೆ ತೆಗೆದುಕೊಳ್ಳುತ್ತಿದ್ದ ಅಲಂಕಾರ, ಅ ಮೊಬೈಲಿನಲ್ಲಿ ಹರಟೆ ಹೊಡೆಯುವುದು ಇವಾವೂ ಅವರಿಗೆ ಸರಿಕಂಡಿರಲಿಲ್ಲ. ತಮ್ಮ ಅಸಮಾಧಾನ ಮಗಳು ಆಫೀಸಿಂದ ಬಂದ ಮೇಲೆ ಹೊರಹಾಕುತ್ತಿದ್ದರು. ಅಂಬುಜಾಳ ಪಾಡು ಹೇಳತಿರದು. ಮುದ್ದಿನ ಮಗಳಿಗೆ ದಂಡಿಸುವಂತೆಯೂ ಇರಲಿಲ್ಲ. ಹಾಗಂತ ತಾಯಿಯ ಮನಸ್ಸಿಗೂ ನೋವು ಕೊಡುವಂತಿಲ್ಲ. ಮಗಳು ತಮ್ಮ ಮಾತಿಗೆ ಬೆಲೆ ಕೊಡುತ್ತಿದಲ್ಲ ಅನಿಸಿದಾಗ ನೇರವಾಗಿ ನೇಹಾಳಿಗೆ ದಬಾಯಿಸಿದರು. ನೇಹಾ ಅಂದುಕೊಂಡು ಸುಮ್ಮನಾಗಲಿಲ್ಲ. ಬದಲು ಎದಿರು ಬಿದ್ದಳು. ಅಜ್ಜಿಗೆ ಹಳೇ ಕಾಲದವಳು ಎಂದು ಜರೆದಳು. ಅವಳ ಅಪ್ಪ ಮೋಹನನು ಸಹ ತನ್ನ ಅತ್ತೆಗೆ ಸುಮ್ಮನಿದ್ದು ಬಿಡುವಂತೆ ಸೂಚಿಸಿದ್ದ. ಕಮಲಾಬಾಯಿಗೆ ಅಲ್ಲಿರಲು ಮನಸ್ಸಾಗಲಿಲ್ಲ. ಮಗಳಿಗೆ ದುಂಬಾಲು ಬಿದ್ದು ಮುಂದಿನ ವಾರವೇ ಹುಬ್ಬಳ್ಳಿಗೆ ವಾಪಾಸ್ ಬಂದರು.

***
ಮಗಳು ಹಾಗೂ ಮೊಮ್ಮಗಳ ನಡುವೆ ಇದ್ದ ವಾದ ವಿವಾದ ಸ್ಫೋಟಗೊಳ್ಳಲು ನೇಹಾ  ಅಜ್ಜನ ಮೊಬೈಲಿನಿಂದ ಕಳಿಸಿದ ಮೆಸೇಜ್ ಕಾರಣವಾಯಿತು. ಅವರ ಫೋನಿಗೆ ಬಂದ ಅಪರಿಚಿತ ದನಿ ನೇಹಾಳನ್ನು ಬೇಡಿತ್ತು. ಏನು ಎಂತ ಗೊತ್ತಿಲ್ಲದ ಅಜ್ಜ ನೇಹಾಳಿಗೆ ಫೋನ ಕೊಟ್ಟಿದ್ದರು, ವಿಷಯ ತಿಳಿದ ಅಂಬುಜ ಕೂಗಾಡಿದಾಗ ರಾಯರು ಅಪ್ರತಿಭರಾದರು.ಏನೋ ಆಗಿದೆ ಎಂಬ ಗುಮಾನಿಯಲ್ಲಿದ್ದ ಕಮಲಾಬಾಯಿ ಅವರಿಗೆ ಎಲ್ಲ ನಿಚ್ಚಳವಾಯಿತು. ಮೊಮ್ಮಗಳು ಯಾರದೋ ಹುಡುಗನ ಬೆನ್ನು ಹತ್ತಿದ್ದಾಳೆ. ಅಮ್ಮ ಅಪ್ಪ ಕೊಟ್ಟ ಸವಲತ್ತು ದುರುಪಯೋಗ ಪಡೆಸಿಕೊಂಡಿದ್ದಾಳೆ. ಹುಡುಗನ ನಡವಳಿಕೆ ಸಹ ಅಷ್ಟಕ್ಕಷ್ಟೆ. ಒಂಥರಾ ಪುಡಿರೌಡಿ ಅವ. ಅಂಬುಜಾ ತಾಯಿ ಮುಂದೆ ಎಲ್ಲ ಹೇಳಿ ಅವಲತ್ತುಕೊಂಡಳು. ಕಮಲಾ ಅವರಿಗೂ ವಿಚಿತ್ರ ತಳಮಳ. ಮಂಗಲಾ ಶ್ರೀಪತಿಗೆನೋ ಸುಲಭವಾಗಿ ಬುದ್ಧಿ ಹೇಳಿದ್ದರು. ಆದರೆ ಅದೇ ಪ್ರಕರಣ ಮಗಳ, ಮೊಮ್ಮಗಳ ಜೀವನದಲ್ಲೂ ಪುನರಾವರ್ತನೆ ಆಗಿದೆ ಅಂದ್ರೆ… ಈಗ ಇಬ್ಬರೂ ಇಲ್ಲಿ ಬಂದಿಳಿದಿದ್ದು ನೋಡಿದ್ರೆ ಏನಾದರೂ ಹೆಚ್ಚುಕಮ್ಮಿ ಆಗಿದೆಯೇ ಹೇಗೆ ಮಗಳಿಗೆ ವಿಚಾರಿಸಿದರು. ಹಾಗೇನೂ ಇಲ್ಲ ಎಂದು ಅವಳಂದಾಗ ನಿರಾಳವಾಗಿ ಉಸಿರಾಡಿದರು. ಆದರೆ ಮೊಮ್ಮಗಳಿಗೆ ಆ ಹುಡುಗನ ಸಹವಾಸ ತಪ್ಪಿಸುವುದು ಹೇಗೆ ಈ ಬಗ್ಗೆ ತಾಯಿ ಮಗಳು ಚಿಂತಿಸಿದರು. ಧಾರವಾಡದಲ್ಲಿರುವ ತಮ್ಮ ನಂಬಿಕೆಯ ಜೋತಿಷಿಗಳ ಬಳಿ ಮಗಳನ್ನು ಕರೆದುಕೊಂಡು ಮೊಮ್ಮಗಳ ಜಾತಕದಲ್ಲಿ ಏನಾದರೂ ಗ್ರಹ ದೋಷ ಇದೆಯೋ ಹೇಗೆ ತಿಳಿಯಲು ಹೊರಟರು.

ರಾಮರಾಯರಿಗೂ ಮೊಮ್ಮಗಳ ಈ ಪ್ರಕರಣ ಸರಿಬಂದಿರಲಿಲ್ಲ. ತಟಸ್ಥವಾಗಿರಲು ಇದು ಬೇರೆ ಯಾರಿಗೂ ಸಂಬಧಿಸಿದುದಾಗಿರಲಿಲ್ಲ. ಹಾಗೆ ನೋಡಿದರೆ ರಾಮರಾಯರು ಸಾಹಿತ್ಯ ಓದಿಕೊಂಡವರು. ಪ್ರಗತಿಪರ ವಿಚಾರಉಳ್ಳವರು ನಿಜ. ಯೌವ್ವನದಲ್ಲಿರುವ ಮೊಮ್ಮಗಳ ಮನಸ್ಥಿತಿ ಅರಿಯಲು ಮುಂದಾದರು ಅವಳನ್ನು ಕೂಡಿಸಿಕೊಂಡು ನಯವಾಗಿ ಮಾತನಾಡುತ್ತ ಅವಳ ಬೇಗುದಿ ಏನು ತಿಳಿಯಲು ಪ್ರಯತ್ನಿಸತೊಡಗಿದರು.

ಅವಳ ಜೊತೆ ಮಾತನಾಡುತ್ತ ಅವರಿಗೆ ಯುವಪೀಳಿಗೆಯ ನಿಲುವುಗಳು, ಅಪೇಕ್ಷೆಷೆಗಳು ಅರಿವಾಗತೊಡಗಿದವು. ನೇಹಾಳಿಗೆ ಎಲ್ಲ ಸವಲತ್ತಿದ್ದವು. ಆದರೆ ಅಪ್ಪ, ಅಮ್ಮ, ತಮ್ಮ ಕೆಲಸದ ಒತ್ತಡದಲ್ಲಿದ್ದರು. ಆತ್ಮೀಯ ಗೆಳತಿಯ ಮೂಲಕ ಪರಿಚಯವಾದ ಹುಡುಗ ಅವ. ಇವಳೊಡನೆ ನಯವಾಗಿ ಮಾತನಾಡಿದ್ದಾನೆ. ಅಂತಃಕರಣ ಅವನಲ್ಲಿ ಅದೇಗೆ ನೇಹಾಳಿಗೆ ಆಯಿತೂ ತಿಳಿಯಲಿಲ್ಲ. ಆತನಿಗೆ ಸರಿಯಾದ ಕೆಲಸವೂ ಇಲ್ಲ ಮನೆಯಲ್ಲಿ ವಿಷಯ ಗೊತ್ತಾಗಿ ರಾದ್ಧಾಂತ ಆಗಿದೆ. ಮೋಹಗೆ ಮಗಳ ಬಗ್ಗೆ ಸಿಟ್ಟು ಬಂದು ಹೊಡೆದು ಬಡಿದು ಮಾಡಿದ್ದಾನೆ. ನೇಹಾಳ ವಿಷಯದಲ್ಲಿ ಗಂಡ ಹೆಂಡತಿ ನಡುವೆಯೂ ವಾದ ವಿವಾದ ಆಗಿವೆ. ತಲೆಕೆಟ್ಟು ಒಂದು ತಿಂಗಳ ರಜೆ ಹಾಕಿ ಅಂಬುಜ ಮಗಳನ್ನು ಇಲ್ಲಿ ಕರೆತಂದಿದ್ದಾಳೆ. ಅಜ್ಜ, ಅಜ್ಜಿ ಬಳಿ ಇಟ್ಟು ಮುಂದೆ ಓದಿಸುವ ಹವಣಿಕೆ ಅವಳದು.

ಯೋಚಿಸಿದಂತೆ ಏನೂ ಆಗುವುದಿಲ್ಲ ಇರು ರಾಮರಾಯರಿಗೆ ಗೊತ್ತಿದ್ದ ವಿಷಯ. ಈಗಿನ ಹುಡುಗ, ಹುಡುಗಿಯರ ನಿಲುವುಗಳು ಅವರ ಅಪೇಕ್ಷೆಗಳು ಬಹಳಿವೆ ಇದು ಅವರು ಕಂಡುಕೊಂಡ ಸತ್ಯವಾಗಿತ್ತು. ಮೊಮ್ಮಗಳ ಜತೆ ಮನಬಿಚ್ಚಿ ಮಾತನಾಡಿದರು. ನೇಹಾ ತನ್ನ ಬಗ್ಗೆ ತನ್ನ ಆಸೆ ಆಕಾಂಕ್ಷೆಗಳ ಬಗ್ಗೆ ಹೇಳಿಕೊಂಡಳು. ಆ ಹುಡುಗ ಯಾಕೆ ಇಷ್ಟವಾದ ಮುಲಾಜಿಲ್ಲದೆ ಹೇಳಿದಳು. ಕೇಳಿಸಿಕೊಂಡ ರಾಮರಾಯರಿಗೆ ಈ ಸಮಸ್ಯೆ ಬಿಡಿಸಲಾರದ ಕಗ್ಗಂಟು ಅಲ್ಲ ಎಂದು ಅರಿವಾಯಿತು. ಆದರೂ ಮಗಳು ಅಳಿಯ ಪರಿಸ್ಥಿತಿ ನಾಜೂಕಿನಿಂದ ನಿಭಾಯಿಸಿಯಾರೆ ಎಂಬ ಅಳುಕೂ ಅವರಲ್ಲಿ ಬಂತು. ರಾಮರಾಯರಿಗಿದ್ದ ಸಮಾಧಾನದ ಒಂದಶಂವೂ ಕಮಲಾ ಅವರಲ್ಲಾಗಲಿ ಅಥವಾ ಅಂಬುಜ ಅವರಲ್ಲಾಗಲಿ ಇರಲಿಲ್ಲ. ಜೋತಿಷಿ ಮಂತ್ರಿಸಿಕೊಟ್ಟ ತಾಯತ ನೇಹಾಳ ಬಲತೊಳಿಗೆ ಬಿಗಿದ ಇಬ್ಬರೂ ಕಾಯುತ್ತ ಕುಳಿತರು. ಇತ್ತ ರಾಮರಾಯರು ಅಳಿಯ ಮೋಹನನಿಗೆ ಒಂದೆರಡು ದಿನ ಬಂದು ಹೋಗಲು ಹೇಳಿದರು.

***
ರಶ್ಮಿಯನ್ನು ಹುಡುಕಲು ಶ್ರೀಪತಿ ವಿಶೇಷ ಕಾಳಜಿ ತಗೊಂಡಿದ್ದ. ಗುರ್ತಿದ್ದ ಪೋಲಿಸ್‌ಗೆ ಅನಧಿಕೃತವಾಗಿ ಕೇಳಿಕೊಂಡಿದ್ದ. ಅವಳ ಗೆಳತಿಯರು ತಮಗೇನೂ ತಿಳಿದಿಲ್ಲ ಎಂದು ಹೇಳಿದರು. ಶ್ರೀಪತಿಯ ಕಸಿನ್ ಒಬ್ಬನಿಗೆ ಪೋಲಿಸ್ ಅಧಿಕಾರಿಯ ಪರಿಚಯವಿತ್ತು. ಚಿಕ್ಕಮಗಳೂರು ಕಡೆ ಶ್ರೀಪತಿ ಹಾಗೂ ಅವನ ಕಸಿನ್ ಪಯಣ ಬೆಳೆಸಿದ್ದರು. ಮಂಗಲಾ ದೇವರಿಗೆ ಹರಕೆ ಹೊತ್ತಿದ್ದಳು. ಎರಡು ದಿನಗಳ ನಂತರ ಗಂಡನಿಂದ ಫೋನ್ ಬಂದಾಗ ನಿರಾಳವಾದಳು. ಅಂದೇ ಸಂಜೆ ಮಗಳ ಜೊತೆ ಬಂದಿಳಿದ ಗಂಡನನ್ನು ನೋಡಿ ದೇವರಿಗೆ ಕೃತಜ್ಞತೆ ತಿಳಿಸಿದಳು. ರಶ್ಮಿಯೇ ಅಂದು ರಾತ್ರಿ ಮಂಗಲಾಳ ಮುಂದೆ ಎಲ್ಲ ಹೇಳಿಕೊಂಡಳು. ಅವಳಿಗೆ ಆ ಹುಡುಗ ಇಷ್ಷವಾಗಿದ್ದ. ಅವ ಸ್ಥಿತಿವಂತ ಕೂಡ. ಆದರೆ. ಅವನ ಆಯ್ಕೆಗೆ ಅವನ ಮನೆಯಲ್ಲಿ ಮನ್ನಣೆ ಇರಲಿಲ್ಲ. ತಮ್ಮ ಮುಂದಿನ ಜೀವನದ ಬಗ್ಗೆ ಇವಳಿಗಿದ್ದ ಕನಸು ಅವನಲ್ಲಿ ಇರಲಿಲ್ಲ. ಇದರ ಅರಿವು ರಶ್ಮಿಗೆ ಆಯಿತು.  ಮೇಲಾಗಿ ಮನೆಯವರ ವಿರೋಧ ಕಟ್ಟಿಕೊಂಡು ತನ್ನನ್ನು ಬಾಳಿಸುವ ಭರವಸೆ ಅವನಿಂದ ಸಿಗಲಿಲ್ಲ. ಇವನನ್ನು ನಂಬಿ ನಾ ಹೆತ್ತವರಿಂದ ದೂರ ಆದೆ ಈ ವಿಚಾರ ಅವಳನ್ನು ಕೊರೆಯುತ್ತಲಿತ್ತು. ಅವನ ಜತೆ ಮಾತನಾಡಿದಳು. ಅವನಿಗೂ ಕಮಿಟ್‌ಮೆಂಟ ಬೇಕಿರಲಿಲ್ಲ. ಬಸ್‌ಸ್ಟ್ಯಾಂಡ್‌ನಲ್ಲಿ ಅವಳಿಗೆ ಹುಬ್ಬಳ್ಳಿಯ ಬಸ್ ಹತ್ತಿಸಲು ಕರೆತಂದಿದ್ದ. ಅದೇ ಸಮಯಕ್ಕೆ ಮುಫ್ತಿಯಲ್ಲಿದ್ದ ಪೋಲಿಸ್ ಒಬ್ಬ ರಶ್ಮಿಯನ್ನು ನೋಡಿ ಠಾಣೆಗೆ ಸುದ್ದಿ ಮುಟ್ಟಿಸಿದ. ಶ್ರೀಪತಿ ಅವನ ಕಸಿನ್ನು ಠಾಣೆಯಿಂದ ನೇರವಾಗಿ ದೌಡಾಯಿಸಿ ಬಸ್‌ಸ್ಟಾಂಡ್ ಮುಟ್ಟಿದ್ದರು. ರಶ್ಮಿ ನೇರವಾಗಿ ಹೇಳಿದಳು. ತನ್ನ ಹಾಗೂ ಅವನ ನಡುವೆ ನಡೆಯಬಾರದ್ದು ಏನು ನಡೆದಿಲ್ಲ ಎಂದು ಭರವಸೆ ಕೊಟ್ಟಳು. ಮಂಗಲಾ ನಿಡಿದಾಗಿ ಉಸಿರಾಡಿದಳು.

***

ಮೋಹನ್ ಬಂದ ದಿನವೇ ರಾಮರಾಯರು ಅವನನ್ನು ಕರೆದುಕೊಂಡು ಪಕ್ಕದಲ್ಲಿರುವ ಪಾರ್ಕಿಗೆ ಹೋದರು. ಅಲ್ಲಿರೋ ಕಲ್ಲು ಬೆಂಚಿನ ಮೇಲೆ ಕುಳಿತರು. ಅಳಿಯನ ಜೊತೆಗೆ ಮನಬಿಚ್ಚಿ ಮಾತನಾಡಿದರು. ನೇಹಾಳ ಜೊತೆ ತಾವಾಡಿದ ಮಾತು, ಅವಳ ಅಪೇಕ್ಷೆಗಳು ಅವಳ ಧೋರಣೆಗಳು ಎಲ್ಲ ತಿಳಿಸಿದರು. ಹೇಗವಳು ಅಪ್ಪ, ಅಮ್ಮನ ಪ್ರೀತಿಯಿಂದ ವಂಚಿತಳಾಗಿದ್ದಾಳೆ… ಮತ್ತು ಆ ಕೊರತೆ ಪೂರೈಸಲು ಹೊರಗಡೆ ಹುಡುಕುತ್ತಿದ್ದಾಳೆ ಎಂದು ತಿಳಿಸಿದರು. ಆ ಹುಡುಗನ ಮೇಲೆ ಅವಳಿಗಿರೋದು ಬರೀ ಆಕರ್ಷಣೆ ಮಾತ್ರ… ಸರಿಯಾದ ರೀತಿಯಲ್ಲಿ ತಿಳಿ ಹೇಳಿದರೆ ಎಲ್ಲ ಸರಿಯಾಗಬಹುದು ಎಂದು ಮನದಟ್ಟು ಮಾಡಿದರು. ಮಾವ ಆಡಿದ ಮಾತುಗಳಲ್ಲಿ ಮೋಹನನಿಗೆ ತಥ್ಯವಿದೆ ಇದು ಮೋಹನನಿಗೂ ವೇದ್ಯ ಆಯಿತು. ತಾವಿಬ್ಬರೂ ತಮ್ಮ ಕೆಲಸ, ಒತ್ತಡದಲ್ಲಿ ಮುಳುಗಿ ಮಗಳಿಗೆ ಪಾಕೆಟ್ ಮನಿ ನೀಡಿದರೆ ತಮ್ಮ ಕರ್ತವ್ಯ ಮುಗಿದಂತೆ ಎಂದು ಭಾವಿಸಿದ್ದು, ಎರಡು ವರ್ಷದಿಂದ ವರ್ಷಕ್ಕೊಮ್ಮೆ ಹೋಗುತ್ತಿದ್ದ ಫ್ಯಾಮಿಲಿ ಟೂರ್ ಸಹ ರದ್ದು ಮಾಡಿದ್ದು ಎಲ್ಲ ಹೇಳಿಕೊಂಡ. ಇನ್ನು ಆ ಬಗ್ಗೆ ಗಮನ ಹರಿಸುವುದಾಗಿ ಅಭಯ ನೀಡಿದ.

***
ಅಂದು ಹುಣ್ಣಿಮೆ ದಿನ. ಅಪಾರ್ಟಮೆಂಟಿನ ಮೇಲೆ ತಾರಸಿಯಲ್ಲಿ ಎರಡೂ ಕುಟುಂಬ ಸೇರಿ ಬೆಳದಿಂಗಳೂಟ ನಡೆಸಿದ್ದರು. ರಾಮರಾಯರೇ ಶ್ರೀಪತಿ ಮನೆಗೆ ಹೋಗಿ ಆಹ್ವಾನ ಇತ್ತಿದ್ದರು. ಮಂಗಲಾ ಸಹ ತನಗೆ ತಿಳಿದ ಅಡಿಗೆ ಮಾಡಿ ತಂದಿದ್ದಳು. ಕಮಲಾಬಾಯಿ, ಅಂಬುಜಾ ಸಹ ಹಿಂದೆ ಬಿದ್ದಿರಲಿಲ್ಲ. ಬೆಳದಿಂಗಳು ಪ್ರಶಾಂತವಾಗಿತ್ತು. ನಿಡಿದಾಗಿ ಕಾಲುಚಾಚಿ ಕುಳಿತ ರಾಮರಾಯರು ನೋಡುತ್ತಿದ್ದರು. ಗಂಡಸರು ರಿಸೆಶನ್ ವಿಷಯ ಮಾತನಾಡುತ್ತಿದ್ದರು. ಹೆಂಗಸರು ಅಡಿಗೆ ವಿಷಯದಲ್ಲಿ ಮಗ್ನರಾಗಿದ್ದರು. ಇಬ್ಬರೂ ಯುವತಿಯರು-ಅದುವರೆಗೂ ತಮ್ಮ ಮನೆಗಳಲ್ಲಿ ತಲ್ಲಣ ತಂದವರು – ಪಿಸುಮಾತಲ್ಲಿ ಮಗ್ನರಾಗಿದ್ದರು. ನೇಹಾ ಹಾಗೂ ರಶ್ಮಿ ಇಬ್ಬರನ್ನೂ ರಾಮರಾಯರು ತದೇಕವಾಗಿ ನೋಡುತ್ತಿದ್ದರು. ಕತ್ತಲು ಅವರೇ ತಂದುಕೊಂಡಿದ್ದು. ಈಗ ಅಮವಾಸ್ಯೆ ಕಳೆದಿದೆ. ಚಂದ್ರ ನಗುತ್ತಿದ್ದಾನೆ… ಬಾನಿನನಲ್ಲೂ ಮತ್ತೆ ಅವರ ಮೊಗದಲ್ಲೂ…! ಈ ಬೆಳದಿಂಗಳು ಹೀಗೇ ಇರಲಿ ಎಂದು ಮೌನವಾಗಿ ಹಾರೈಸಿದರ. ಯಾರದೋ ಮನೆಯಲಿ ಹಾಡು ಮೊಳಗಿತು… ಬೆಳದಿಂಗಳ ನೋಡ…

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
Guruprasad Kurtkoti
10 years ago

ದೇಸಾಯ್ರ, ಕತಿ ಚೊಲೊ ಬರ್ದೀರಿ!

amardeep.p.s.
amardeep.p.s.
10 years ago

ishtavaaytu sir…..

umesh desai
10 years ago

ಪ್ರತಿಕ್ರಿಯಿಸಿದ ಇಬ್ಬರೂ ಮಹನೀಯರಿಗೂ ಧನ್ಯವಾದಗಳು..

Vitthal kulkarni
Vitthal kulkarni
10 years ago

Mastada Sir kathi… bhaala cholo baradeeree…

prashasti
10 years ago

nice

Santhoshkumar LM
10 years ago

Sir chennagide!

6
0
Would love your thoughts, please comment.x
()
x