ಬೆಳಿಗ್ಗೆ ನಾಲ್ಕೂವರೆಗೆ ಪ್ರತಿನಿತ್ಯ ಏಳಲೇಬೇಕಾದ ಅನಿವಾರ್ಯುತೆ ನನ್ನದು. ಎಷ್ಟೇ ಕಾಳಜಿ ವಹಿಸಿದರೂ ಒಮ್ಮೊಮ್ಮೆ ತಡವಾಗಿ ಎಚ್ಚರವಾಗಿ ಇಡೀ ದಿನದ ಕಾರ್ಯಕ್ರಮವೆಲ್ಲಾ ಅಸ್ತವ್ಯಸ್ತವಾಗಿ ಸಾಕೋ ಸಾಕಾಗಿ ಹೋಗುವುದೂ ಉಂಟು. ಕೆಲದಿನಗಳ ಹಿಂದೆ ಒಳ್ಳೆಯ ನಿದ್ರೆಯಲ್ಲಿದ್ದಾಗ ಕಾಗೆಗಳ ಕರ್ಕಶ ಕೂಗಿನಿಂದ ಬಡಿದೆಬ್ಬಿಸಿದಂತಾಗಿ ಗಡಬಡಿಸಿ ಕಣ್ಣು ಬಿಟ್ಟೆ. ಕಿಟಕಿಯತ್ತ ನೋಡಿದಾಗ ಬೆಳ್ಳನೆಯ ಬೆಳಕು. ಆಯ್ತು, ಬೆಳಗಾಗೇ ಬಿಟ್ಟಿತು. ಈ ದಿನವೆಲ್ಲ ನನ್ನದು ಹಾಳು. ಹಾಳು ನಿದ್ದೆ ಎಂದು ಶಪಿಸುತ್ತಾ ಗಡಿಯಾರದತ್ತ ನೋಡಿದರೆ ರಾತ್ರಿ ಎರಡು ಗಂಟೆಯಷ್ಟೇ. ಅಚ್ಚರಿಯಿಂದ ಕಿಟಕಿಯ ಬಳಿ ಬಂದುನಿಂತು ಹೊರನೋಡಿದರೆ ಹಿಟ್ಟು ಚೆಲ್ಲಿದಂತಹ ಬೆಳದಿಂಗಳು. ತಲೆಯೆತ್ತಿದರೆ ನೀಲಾಗಸದಲ್ಲಿ ಉರುಟು ಟ್ಯೂಬ್‍ಲೈಟ್‍ನಂತೆ ಹೊಳೆಯುತ್ತಿದ್ದ ಚಂದ್ರಮ ಕೀಟಲೆಯಿಂದ ನಗಬೇಕೆ, ಅದೊಂದು ಅಪೂರ್ವ ದೃಶ್ಯ. ನೀರವ ರಾತ್ರಿ ಬೆಳದಿಂಗಳ ಹೊಳೆವ ಥಳುಕು ಉಡುಪು ಧರಿಸಿ ಹಾಯಾಗಿ ಪವಡಿಸಿದ್ದ ಸೊಬಗು ನೋಡಿ ಮಾತ್ರ ಅರಿಯುವಂಥದ್ದು. ಕಾಗೆಗಳಿಗೂ ಸಹ ಬೆಳಗಾಯಿತೆಂದು ಭ್ರಮೆ ಆಗಿಬಿಟ್ಟಿತೇನೋ. ಪರವಶಳಾಗಿ ಕಿಟಕಿಯ ಕಂಬಿ ಹಿಡಿದು ಹಾಗೆಯೇ ನೋಡುತ್ತಾ ನಿಂತುಬಿಟ್ಟೆ. ಮೇಲೆ ಚಂದಿರ ಮುಗುಳು ನಗುತ್ತಾ ಕೇಳಿದ, ನೆನಪಾಗದೇ ಬಾಲ್ಯದ ದಿನಗಳು? ಹೌದು ’ಬಾಲ್ಯ-ಬೆಳದಿಂಗಳು’ ಬೆಳದಿಂಗಳಿನಂಥ ಬಾಲ್ಯದಲ್ಲಿ ಸವಿದ ಬೆಳದಿಂಗಳ ಚೆಲುವು ಅದೆಷ್ಟೋ ದಿನ ವರ್ಷಗಳು ನಂತರ ಮನದಂಗಳಲ್ಲಿ ನೆನಪಿನ ಅಲೆಯನ್ನು ಮೂಡಿಸಿತ್ತು.
ಹುಣ್ಣಿಮೆಯ ದಿನಗಳೆಂದರೆ ಎಂಥ ಸಂಭ್ರಮ ನಮಗೆ. ಹೊರಗಿನ ಎಲ್ಲಾ ದೀಪಗಳನ್ನು ಆರಿಸಿ ಹೊರಗೆ ಬಂದುಬಿಡುವುದು. ಜೂಟಾಟ, ಕೈ ಹಿಡಿದು ತಿರುಗುವ ಆಟ, ಕಣ್ಣಾಮುಚ್ಚಾಲೆ, ಒಂದೇ ಎರಡೇ. ಮನೆಯ ಎಲ್ಲರೂ ಅಂಗಳದಲ್ಲೇ ಸಭೆ, ಹಾಡು, ನೃತ್ಯ, ನಗು, ಹರಟೆ, ಕಥೆ ಎಲ್ಲ ಚಂದ್ರನ ಅಧ್ಯಕ್ಷತೆಯಲ್ಲೇ ಸಾಗುತ್ತಿತ್ತು. “ಊಟ” ಉಹುಂ ಯಾರಿಗೂ ಬೇಡ. ಒಳಗೆ ಹೋಗುವುದು, ಅಮ್ಮ ಮೊಸರನ್ನ ಹುಳಿಯನ್ನಗಳನ್ನು ಕಲಸಿ ಹೊರಗೆ ತಂದು ಬಿಡುತ್ತಿದ್ದರು. ಕಥೆ ಹೇಳುತ್ತಾ ಕೈತುತ್ತು ನೀಡುತ್ತಿದ್ದರೆ ಹೊಟ್ಟೆಗೆ ಹೋದದ್ದೆಷ್ಟು ಎಂದೇ ಲೆಕ್ಕಾಚಾರವಿರುತ್ತಿರಲಿಲ್ಲ. ಪಾತ್ರೆ ಬರಿದಾದ ಮೇಲೆಯೇ ಕೈ ತೊಳೆಯಲು ಹೋಗುತ್ತಿದ್ದುದು.
ನಂತರ ಹಣ್ಣೋ, ಕುರುಕು ತಿಂಡಿಗಳೋ ಹೀಗೆ ಅವೂ ಹೊರಗೆ ಬರುತ್ತಿದ್ದವು. ಅವೂ ಸಾಲದು ಎನಿಸಿದಾಗ ಬೆಳದಿಂದಳಿನಲ್ಲೆ ಒಂದು ಪುಟ್ಟ ವಾಕಿಂಗ್. ಬರುವಾಗ ಅಂಗಡಿಯಲ್ಲಿ ಕೊಂಡ ಕುರುಕು ತಿಂಡಿಗಳು ಬೆಳದಿಂಗಳ ರುಚಿಯನ್ನು ದುಪ್ಪಟ್ಟು ಮಾಡುತ್ತಿದ್ದವು. ಇಷ್ಟೇ ಅಲ್ಲದೆ ಒಮ್ಮೊಮ್ಮೆ ಎಲ್ಲ ಬುತ್ತಿ ಕಟ್ಟಿಕೊಂಡು ನದೀ ದಡಕ್ಕೆ ಹೋಗಿಬಿಡುವುದಿತ್ತು. ಪುಟ್ಟ ಪುಟ್ಟ ಬಂಡೆಗಳ ಮೇಲೆ ಕುಳಿತು ಕಾಲುಗಳನ್ನು ನೀರೊಳಕ್ಕೆ ಇಳಿಬಿಟ್ಟು ಅಂಗಾಲಿಗೆ ಪುಟ್ಟ ಮೀನುಗಳು ಬಂದು ಮುತ್ತಿಕ್ಕಿದಾಗ ಕಚಗುಳಿಯೆನಿಸಿ ಧಡಕ್ಕೆಂದು ಕಾಲೆಳೆದುಕೊಳ್ಳುವುದು. ಪುನಃ ಅದೇ ಅನುಭವಕಾಗಿ ನೀರೊಳಕ್ಕೆ ಕಾಲಿಳಿಬಿಟ್ಟು ಮೀನುಗಳಿಗಾಗಿ ಕಾಯುವುದು. ಹಾಡು, ನಗು, ಮಧ್ಯೆ ಮಧ್ಯೆ ಅಜ್ಜಿಯ ಮೋಹಿನಿ ಕಥೆಗಳು ಕೇಳುತ್ತಾ ಬಿಳೀ ಸೀರೆಯುಟ್ಟ ಮಾರುದ್ದ ಮಾರುದ್ದ ಕೂದಲನ್ನು ಹರಡಿಕೊಂಡ ಅತ್ಯಂತ ಸುಂದರಿ ಮೋಹಿನಿ, ಅವಳ ಪಾದಗಳು ಮಾತ್ರ ಅಜ್ಜಿ ಹೇಳುತ್ತಿದ್ದಂತೆ ಹಿಂದು ಮುಂದು. ಬೆಳ್ಲಗೆ ಹರಡಿಕೊಂಡ ಮರಳ ಮೇಲೆ ನಿಂತೇ ಇದ್ದಾಳೇನೋ, ಬಂದೇ ಬಿಡುತ್ತಾಳೇನೋ ಎನ್ನಿಸಿ ಸ್ವಲ್ಪ ಒಳಗೊಳಗೇ ಪುಕು ಪುಕು ಆಗತೊಡಗುವಾಗಲೇ “ಸಾಕಿನ್ನು ನಡೆಯಿರಿ, ಭಾಳ ಹೊತ್ತಾಗಿದೆ” ಎಂಬ ಹಿರಿಯರ ಗದರಿಕೆಗೆ ಓಗೊಟ್ಟು ಮನೆಗೆ ಹಿಂದಿರುಗುತ್ತಿದೆವು. ಮಲಗಿದರೂ ಕಣ್ಣ ತುಂಬೆಲ್ಲ ಬೆಳದಿಂಗಳ ಬೆಳಕೇ, ಮನದ ತುಂಬಾ ಫಳ ಫಳನೆ ಹೊಳೆವ ನಗುವ ಚಂದಮಾಮನೇ.
ಓಹ್ ಬಾಲ್ಯವೂ ಮುಗಿದು ಹೋಯ್ತು, ಆ ಬೆಳದಿಂಗಳ ಸವಿಯೂ ಮುಗಿದು ಹೋಯ್ತು. ಇಂದಿನ ದಿನಗಳಲ್ಲಿ ಬೆಳದಿಂಗಳ ಊಟ ಸವಿಯಲೆಂದು ಹೊರಹೊರಟರೆ ಏನೆಲ್ಲಾ ಅಸಹ್ಯಗಳು, ಎಲ್ಲೆಲ್ಲೂ ಕೊಳೆ, ಕಸ, ಮಾಲಿನ್ಯ, ಕಟ್ಟಡಗಳು. ಹಾಗಿಲ್ಲದಿದ್ದರೂ ಸೂರ್ಯೋದಯ, ಸೂರ್ಯಾಸ್ತಮ, ಬೆಳದಿಂಗಳು ಇವನ್ನೆಲ್ಲಾಮನಸಾರೆ ಸವಿವ ಮನಸ್ಸು, ಸಮಯ ಪುರುಸೊತ್ತಾದರೂ ಎಲ್ಲಿದೆ? ಬರೀ ಯಂತ್ರಿಕತೆಯ ಬದುಕು. ಮುಂಬಯಿಯಂತಹ ಮಹಾನಗರಿಗೆ ಮದುವೆಯಾಗಿ ಹೋಗಿರುವ ದೊಡ್ಡಪ್ಪನ ಮಗಳು ಸಿಕ್ಕಾಗ ನೆನಪು ಮಾಡಿಕೊಳ್ಳುತ್ತಾ ವಿಷಾದದಿಂದ ಅನ್ನುತ್ತಾಳೆ, “ಎಲ್ಲಿಯ ಬೆಳದಿಂಗಳು? ಎಲ್ಲಿಯ ಆ ದಿನಗಳು? ಕೃತಕ ದೀಪಗಳ ಝಗಮಗ, ಕಿವಿ ತೂತು ಮಾಡುವ ಸೈರನ್ ಹಾರನ್ ಶಬ್ದಗಳು, ಕಾಂಕ್ರೀಟ್ ಕಟ್ಟಡಗಳಿಗೆ ವಿರಾಮಕ್ಕೂ ಎಡೆಕೊಡದೆ ಯಾಂತ್ರಿಕ ಬದುಕು, ಸಂಸಾರ ಜಂಜಾಟ. ಓಹ್, ಅದೆಂದೋ ಕಂಡ ಸಿಹಿ ಕನಸಿನ ನೆನಪಷ್ಟೇ ಉಳಿದಿರುವುದು. ಅಲಾರಾಂ ನಾಲ್ಕು ಗಂಟೆಯಾಯಿತೆಂದು ಹೊಡೆದುಕೊಳ್ಳತೊಡಗಿದಾಗ ನಿಟ್ಟುಸಿರಿಟ್ಟು ಕಿಟಕಿಯಿಂದ ಈಚೆ ಸರಿದೆ. ನೆನಪಿಗೆ ಪರದೆ ಎಳೆದೆ.