ಅಮರ್ ದೀಪ್ ಅಂಕಣ

ಬೆಳಗಿನ ಜಾವದ ಪ್ರಾಶಸ್ತ್ಯ ಓದು, ಸಕ್ಕರೆ ನಿದ್ದೆಯ ಸೋಗಲಾಡಿತನ: ಅಮರ್ ದೀಪ್ ಪಿ. ಎಸ್.

"ಬೇಗ ಮಲಗು ಬೇಗ ಏಳು"… ನಾಳೆ ಮಾಡುವುದನ್ನು ಇಂದೇ ಮಾಡು ಇಂದು ಮಾಡುವುದನ್ನು ಈಗಲೇ ಮಾಡು" ವಿದ್ಯೆಗೆ ವಿನಯವೇ ಭೂಷಣ" "ಕೈ ಮುಗಿದು ಒಳಗೆ ಬಾ" ಈ ಎಲ್ಲಾ ಮಾತು ಗಳನ್ನು ನಮ್ಮ ಶಾಲಾ ದಿನಗಳಲ್ಲಿ ದಿನಂಪ್ರತಿ ನಾವು ಬರೆಯುತ್ತಿದ್ದ ಕಾಪಿ ರೈಟಿಂಗ್ ಗಳು, ಮತ್ತು ಎಲ್ಲ ವನ್ನೂ ಹೇಳಿದಂತೆ ಬರೆಯಲು, ಬರೆದಂತೆ ರೂಢಿಸಿಕೊಳ್ಳಲು,  ಜೀವನದಲ್ಲಿ ಅಳವಡಿಸಿಕೊಳ್ಳಲು ಮಾಸ್ತರರು ಬೋಧಿಸುತ್ತಿದ್ದ ಬಗೆ.  ಚಿಕ್ಕಂದಿನಿಂದಲೇ ಕೆಲ ತಂದೆತಾಯಿ ಶಿಸ್ತು ಬದ್ಧವಾಗಿ ಬೆಳೆಸಿ ಮಕ್ಕಳನ್ನು ಅಣಿಗೊಳಿಸಿರುತ್ತಾರೆ. ಅದೇ ರೂಢಿ ಅವರನ್ನು ಮುಂದೆ ಉನ್ನತ ವ್ಯಾಸಂಗದಲ್ಲೂ ಅವರು  ಸಮಯವನ್ನು, ಓದನ್ನು, ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಸಹಕಾರಿಯಾಗಿರು ತ್ತದೆ. 

ಇನ್ನು ಕೆಲವರು ಚಿಕ್ಕಂದಿನಲ್ಲಿ ಬಹಳ ಶಿಸ್ತಿನಿಂದ ಇದ್ದು, ಬರು ಬರುತ್ತಾ ಹೆಚ್ಚಿನ ಓದು ಬರುವಲ್ಲಿಗೆ ವ್ಯತ್ಯಾಸ ಕಂಡಿರುತ್ತದೆ. ನಾನು ಚಿಕ್ಕಂದಿನಲ್ಲಿ ಶಾಲೆ, ಆಟ, ಓಣಿಯಲ್ಲಿ ನಡೆವ ಪುರಾಣ, ಪ್ರಸಾದ, ಇವೇ ವಾತಾವರಣದಲ್ಲಿ ಬೆಳೆದವನು. ಪುರಾಣದ ಕೊನೆ ದಿನ ಮೆರವಣಿಗೆಯಲ್ಲಿ ಸಮೇಳ (ಧಾರ್ಮಿಕ ಕಾರ್ಯಗಳಲ್ಲಿ ಬಳಸುವ ಒಂದು ವಾದ್ಯ) ಬಾರಿಸುವವರಿಂದ ಪಡೆದು ಬಾರಿಸುತ್ತಿದ್ದೆ.ಬಹಳ ಅಲರ್ಟ್ ಆಗಿದ್ದೆ, ಅದೂ ನನ್ನ ಹೆಣ್ಣಜ್ಜಿ ಕೊಟ್ರಬಸವ್ವ "ಲೋ …… " ಅನ್ನುವ ದನಿಗೆ. ಆದರೆ ವಯಸ್ಸಿನ ಹಮ್ಮು ಬಂದ ನಂತರ "ಪ್ರೌಢ" ದ ಗುಮ್ಮ ಹೊಕ್ಕ ನಂತರ ಬದಲಾದದ್ದನ್ನು ನಾನೇ ಒಪ್ಪಿಕೊಳ್ಳುತ್ತೇನೆ. ನನ್ನಂತೆ ಇತರೇ ಗೆಳೆಯರದೂ ಇದೇ ಹಣೆಬರಹ.

ಹತ್ತನೇ ತರಗತಿಗೆ ಬರುವ ಹೊತ್ತಿಗೆ ನಿಜವಾಗಲೂ ನನ್ನಂತೆ, ನನ್ನ ಗೆಳೆಯರಿಗೂ ಅವರವರ ಮನೆ ಗಳಲ್ಲಿ ಪ್ರೈವೆಸಿಗೆ ಸ್ವಂತವಾಗಿ ವ್ಯಕ್ತಪಡಿಸಲು ಸ್ವಾತಂತ್ರ್ಯವನ್ನು ಕೊಟ್ಟಿದ್ದರು. "ಪಾಪ, ಹುಡುಗರು ಎಸ್ಸೆಲ್ಸಿ  ಓದ್ತಾವು ಓದಾಕ ಬಿಡ್ರಿ" ಅನ್ನುತ್ತಲೇ ನನ್ನ ಗೆಳೆಯ ಅಕ್ಕಿ ಮಲ್ಲಿಯವರ ಮನೆಯ ಮೇಲೆ ರಾತ್ರಿ ಮತ್ತು ಬೆಳಗಾ ಮುಂಜಾಲೆದ್ದು ಓದಲು ಲೈಟಿನ ವ್ಯವಸ್ಥೆ ಮಾಡಿಕೊಟ್ಟು ಯಾರೂ ತೊಂದರೆ ಕೊಡ ದಂತೆ ಎಚ್ಚರ ವಹಿಸಿದ್ದರು.  ಆದರೆ, ನಾವು ಉಂಡು ಹೋಗಿ ಪುಸ್ತಕ ಹಿಡಿಯುತ್ತಲೇ ತೂಕಡಿಕೆ.. ಓದಬೇಕು ಪಾಸಾಗಬೇಕು. ಯಾವುದಕ್ಕಲ್ಲದಿದ್ದರೂ ನಮ್ಮ ಮುಂದಿನ ಓದಿನ ಭವಿಷ್ಯ (?)ಕ್ಕೆ , ಮನೆ ಯವರ ನಿರೀಕ್ಷೆಗೆ, ಓದಲಿಕ್ಕೆ  ಸಮಯ, ಜಾಗ ಮಾಡಿಕೊಟ್ಟು,ನಾಲ್ಕು ಜನ ನೋಡಿದವರು"ಹುಡುಗ್ರು  ಒದ್ತಾವಪ್ಪ" ಅಂದದ್ದಕ್ಕೆ  ಫಲಿತಾಂಶ ತೆಗೆಯಲೇಬೇಕಿತ್ತು.  

ಸರಿ, ಪರೀಕ್ಷೆ "ಇನ್ನೂ"  ನಾಲ್ಕು ತಿಂಗಳಿದೆ. ಟ್ಯುಶನ್ ಗೆ ಹೋಗುತ್ತಿದ್ದೆವು. ಹೇಳಿಕೊಟ್ಟಿದ್ದು ಕಲಿಯು ತ್ತಲೂ ಇದ್ದೆವು. ಆದರೆ ನೆನಪಿನ ಶಕ್ತಿ ಕೊರತೆ. ರಾತ್ರಿ ಎಷ್ಟು ಹೊತ್ತಾದರೂ ಏಕಾಗ್ರತೆಯಿಂದ ಏನು ಓದುತ್ತಿದ್ದೆವೋ ಅದೂ ಒಂದೇ ಗಂಟೆ ಆದರೂ ಪರವಾಗಿಲ್ಲ, ಅದು ತಲೆಯಲ್ಲುಳಿಯುತ್ತಿತ್ತು . ಬಹುಶಃ ಅದೇ ನಮ್ಮ ಫಲಿತಾಂಶವಾಗಿತ್ತೇನೋ.ಬೆಳಿಗ್ಗೆ ಓದಲು ಪ್ರಾಶಸ್ತ್ಯ ಸಮಯ ಎನ್ನುತ್ತಿದ್ದರೂ, ಆ ಹೊತ್ತಿಗೆ ನಮ್ಮ ಅಗಾಧ ಸೋಮಾರಿತನಕ್ಕೆ ಎದ್ದು ಓದಲಾರದತನ. ನಾನು, ರಾಜು ಎಷ್ಟೇ ಪ್ರಯತ್ನ ಪಟ್ಟರೂ ಬೆಳಿಗ್ಗೆ ಎದ್ದು ಓದುವುದಾಗಲೇ ಇಲ್ಲ. ಆದರೆ ಮಲ್ಲಿ ಪ್ರತಿ ದಿನ ಬೆಳಿಗ್ಗೆ ನಾಲ್ಕುವರೆಗೆ, ಐದಕ್ಕೆಲ್ಲ ಎದ್ದು ಓದುತ್ತಿದ್ದ.  ನಮಗೆ ಗಾಬರಿ, ಅವನು ಪಾಸಾಗಿ ನಾವು ಫೇಲಾದರೆ? ಎಂದು. ಇವತ್ತು ಕೂತರೇ ಇನ್ನೂ ದೂರೈತೆ(?)  ನಾಳೆ ಓದುವ, ರಾತ್ರಿಯಾದರೆ ಬೆಳಿಗ್ಗೆ ಓದುವ, ಬೆಳಿಗ್ಗೆ ಎದ್ದರೆ ಇವತ್ತು ಏನಾರ ಯಾಕ ಆಗಲೀ ರಾತ್ರಿ ಕುಂತು ಓದಿಯೇ  ಬಿಡುವ ಎನ್ನುತ್ತಲೇ ಇದ್ದೆವು.  ಪರೀಕ್ಷೆಗೆ ಮೂರು ತಿಂಗಳು ಬಾಕಿ, ಎರಡು ತಿಂಗಳು ಬಾಕಿ ಒಂದು ತಿಂಗಳು ಬಾಕಿ ಕಡೆಗೆ ಹದಿನೈದು ದಿನ ಬಾಕೀನೂ ಬಂತು.  ಪರೀಕ್ಷೆ ದಿನಾನೂ ಬಂತು. ಪರೀಕ್ಷೆ ಬರೆದದ್ದು, ಫಲಿತಾಂಶ ಬಂದದ್ದು ಎಲ್ಲಾ ಆಯಿತು.  ಅಚ್ಚರಿ ಮತ್ತು ಬೇಸರ ವಾಗಿದ್ದು, ಅಷ್ಟು ಕಷ್ಟ ಬಿದ್ದು ಹೊಲದ ಕೆಲಸ,ಮನೆ ಕೆಲಸ, ಮಾಡಿಕೊಂಡು ಬೆಳಿಗ್ಗೆ ಬೇಗ ಎದ್ದು ಓದು ತ್ತಿದ್ದ ಮಲ್ಲಿ ಆರಕ್ಕೆ ಆರು ವಿಷಯಗಳಲ್ಲಿ  ನಪಾಸಾಗಿದ್ದ. ನಾನು, ರಾಜು ಸೆಕೆಂಡ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದೆವು. ಮುಂದೆ ಅಕ್ಕಿ ಮಲ್ಲಿ  ಒಟ್ಟಿಗೆ ಎಲ್ಲವನ್ನೂ ಪಾಸ್ ಮಾಡಿಕೊಂಡು ಓದುತ್ತಾ, ಹೊಲದ ಕೆಲಸ ಮಾಡುತ್ತಾ, ಡಿಗ್ರಿ ಮುಗಿಸಿ, ಲಾ ಓದಿದ.  ಈಗವನು ವಕೀಲ. ರಾಜು ಡಿಗ್ರಿ ಮಾಡಿಕೊಂಡ. ಈಗವನು,
ಒಳ್ಳೆ ಬಟ್ಟೆ ವ್ಯಾಪಾರಿ (ಈ ರಾಜುವಿನ ಹೇರ್ ಡೈ ಪುರಾಣ ಮತ್ತು ಬಾಂಡ್ಲಿ ಹೆಡ್ ಪ್ರಸಂಗ ಮುಂದೆ ಯಾವಾಗಾದರೂ ಹೇಳುತ್ತೇನೆ). ಮತ್ತು ನಾನೀಗ ಸರ್ಕಾರಿ ನೌಕರಿಯಲ್ಲಿ ಅಧಿಕಾರಿ. 

ಇರಲಿ, "ಎಸ್ಸೆಲ್ಸಿ" ಪಾಸಾಗಿ ಡಿಪ್ಲೋಮಾಕ್ಕೆ ಸೇರಿದ ಹೊಸತು.  ಭಯಂಕರ ಇಂಗ್ಲೀಷು ಮಾತಾಡುವ ಮಾಸ್ತರರು, ಇಂಗ್ಲಿಷಿನಲ್ಲೇ ಪ್ರಶ್ನೆ ಕೇಳುವ ಹುಡುಗಿಯರು, ಒಹ್, ಇದೊಳ್ಳೆ ಫಜೀತಿಗೆ ಬಿದ್ದೆ ಅಂದು ಕೊಂಡೆ. ಪುಣ್ಯ, ನನ್ನದು ತಾಂತ್ರಿಕೇತರ ಕೋರ್ಸು. ಕಾಮರ್ಸ್ ವಿಷಯಗಳೇ ಇದ್ದವು. ಈಗ ಬಂತಲ್ಲ ಪಾಳಿ ಮತ್ತೆ ರಾತ್ರಿ ಓದು, ಬೆಳಿಗಿನ ಓದು. ಹಳ್ಳಿಯಲ್ಲಿ ಕನ್ನಡ ಭಾಷೆ ಓದಿಕೊಂಡು ಬಂದಿದ್ದ ನಮ್ಮಲ್ಲೇ ಬಹಳ ಚುರುಕು ಹುಡುಗರಿದ್ದರು. ಹಾಸ್ಟೆಲ್ ನಲ್ಲಿದ್ದ ನಮಗೆ ಎಲ್ಲಾ ನಮೂನೆ ಗುಣಗಳ ಗೆಳೆಯರು, ಸೂಕ್ಷ್ಮಗಳು, ಹರಕತ್ತುಗಳು, ಒಂದೊಂದಾಗಿ ಪರಿಚಯವಾಗತೊಡಗಿದವು.  ಓದಿಸುತ್ತಿದ್ದ ಮಾಮನಿಗೆ ಸುಳ್ಳು ಹೇಳುತ್ತೇನೋ, ನಿಜ ನಡೆದುಕೊಳ್ಳುತ್ತೇನೋ ಒಟ್ಟಿನಲ್ಲಿ ಅವರಿಗೆ ರಿಸಲ್ಟ್ ಕೈಯಲ್ಲಿರಬೇಕು, ಅದು ಯಾರಾದರೂ ಸಹ ಒಪ್ಪುವಂತೆ. ಸೇರಿದ ಎರಡು ತಿಂಗಳಲ್ಲೇ ಹಾಸ್ಟೆಲ್ ನಲ್ಲಿದ್ದ ಎಲ್ಲಾ ಕೋರ್ಸಿನ ಹುಡುಗರು ಪರಿಚಯವಾಗಿ ಗೆಳೆಯರಾಗಿ, ಹರಟೆಕೋರರಾಗಿ, ಬದಲಾಗಿದ್ದೆವು. ಅತಿ ಕಾಳಜಿ ವಹಿಸಿ ಓದುತ್ತಿದ್ದ ಗೆಳೆಯರಿದ್ದರು, ಚಂದ್ರು, ಯಲ್ಲಪ್ಪ, ಗುರು ಗಾವ್ಕರ್, ಗುರು ಪಡ್ನೀಸ್, ಆಮೇಲೆ ಸೋಮ ನಾಥ ರೆಡ್ಡಿ (ಈಗವನು ಒಂದನೇ ದರ್ಜೆಯ ಗುತ್ತಿಗೆದಾರ ) ಆಚಾರಿ, ಅಕ್ಕಿ ಗಿರಿ, ಪಚ್ಚಿ,ಗುಸ್ಸಿ, ಸುಬ್ಬ್ಯ(ಪೂರ್ಣ ಹೆಸರು – ಸುಭಾಷ್ ಚಂದ್ರ ಭೋಸ್ — ಇವನ ಬಗ್ಗೆ ವಿಶೇಷವಾಗಿ         
ಯಾವಾಗಾದರೂ ಒಮ್ಮೆ ಹೇಳುತ್ತೇನೆ- ಈಗವನು ಪ್ರೈಮರಿ ಶಾಲೆಯ ಹೆಡ್ ಮಾಸ್ತರ ),ಡಿಂಗ್ರಿ ನಾಗರಾಜ (ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲೀಗ  ಲೀಗಲ್ ಮ್ಯಾನೇಜರ್ ), ನಿಜಲಿಂಗ ಇನ್ನು ಹಲವರು ಇದ್ದರು ಹರಟೆಗೆ ಮತ್ತು ತಮ್ಮ ತಮ್ಮ ಇತಿ ಮಿತಿಗೆ, ಹದ್ದುಬಸ್ತಿಗೆ. 

ಒಂದಿಷ್ಟು ಹುಡುಗರಿದ್ದೆವು.  ರಾತ್ರಿ ಊಟ ಮಾಡಿಕೊಂಡು ಹರಟೆಗೆ ಕುಳಿತೆವೆಂದರೆ, ಬೆಳಗಿನ ಎರಡು ಗಂಟೆಯವರೆಗೆ ಕ್ವಾ ಕ್ವಾ ಕ್ವಾ ಎನ್ನುತ್ತಲೇ ಇದ್ದೆವು. ಬಾರಿಸಲು ಟ್ರಂಕು ಇತ್ತು, ನಾನು ಬಾರಿಸುತ್ತಿದ್ದೆ, ಸಿವಿಲ್ ಬ್ರಾಂಚಿನ ಯೋಗೇಶ್ ಆಚಾರಿ,  "ಹಾ ಹಾ ಹಾ …. ರುದ್ರ ..ಹಾ ಹಾ ಹಾ . ವೀರಭದ್ರ" ಎಂದು ಶುರು ಹಚ್ಚಿಕೊಳ್ಳುತ್ತಿದ್ದ.  ಎರಡಕ್ಕೆ ಎದ್ದು ಒಂದು ತಾಸು ಬುಕ್ಕು ಹಿಡಿದು ಕಣ್ಣಾಡಿಸಿ ಬಿದ್ದು ಕೊಳ್ಳುತ್ತಿದ್ದೆವು .   ಆದರೆ, ಬಂದ ಹೊಸತರಲ್ಲಿ ಬರುವಾಗ ಅಪ್ಪನಲ್ಲಿದ್ದ ಒಂದು ಅಲಾರ್ಮ್ ತೆಗೆದು ಕೊಂಡು ಬಂದಿದ್ದೆ. ಅದರದು ಒಂದು ಕಥೆ. ಬಂಡಿಯಲ್ಲಿ ಗುಜರಿಯ ಸಾಮಾನು ಹಾಕಿಕೊಂಡು ಮನೆ ಮುಂದೆ ಬಂದಾಗ ಅಪ್ಪ, ಒಂದು ರೇಡಿಯೋ ಮತ್ತು ಹಳೆಯ ಈ ಅಲಾರ್ಮ್ ಹತ್ತೋ ಇಪ್ಪತ್ತೋ ರೂಪಾಯಿಗೆ ಕೊಂಡಿದ್ದನಂತೆ.  ಅಂತೂ ರೇಡಿಯೋದಲ್ಲಿ ಬೆಳಿಗ್ಗೆ ಏಳು ಗಂಟೆಗೆ "ಪ್ರದೇಶ ಸಮಾ ಚಾರ" ಓದುತ್ತಿರುವವರು ಎಮ್. ರಂಗರಾವ್  ಎಂಬಲ್ಲಿಗೆ ರೆಡಿ ಮಾಡಿದ್ದರು. ಈ ಅಲಾರ್ಮ್ ಅನ್ನು ತಾನೇ ಕುಂತು ಜಂಗು ತಿಂದ ಸಾಮಾನುಗಳನ್ನೇ ಜೋಡಿಸಿಕೊಂಡು, ಇನ್ನು ಕೆಲವನ್ನು ತಂದು,  ದಿನ ಗಟ್ಟಲೆ ರಿಪೇರಿ ಮಾಡಿ "ನಡೆಯು" ವಂತೆ ಮಾಡಿದ್ದ. ಆ ಅಲಾರ್ಮ್ ಅನ್ನು  ನಾನು ಇನ್ನು ಮೇಲೆ ಸಿರಿಯಸ್ ಆಗಿ ಬೆಳಿಗ್ಗೆ ಎದ್ದು ಓದುವ ರೂಢಿ ಮಾಡಿಕೊಳ್ಳಲು ತಂದಿದ್ದೆ.  ಅಲಾರ್ಮ್ ಟೈಮ್  ಸೆಟ್ ಮಾಡಿ ಹಗಲೊತ್ತಲ್ಲಿ ಪರೀಕ್ಷಿಸಿದಾಗ ಗಟ್ಟಿಯಾಗೇ ಶಬ್ದ ಮಾಡುತ್ತಿತ್ತು. ಆದರೆ, ಬೆಳಿಗ್ಗೆ ಐದಕ್ಕೆ ಟೈಮ್  ಸೆಟ್  ಮಾಡಿ ಮಲಗಿದರೆ ನಾನು ಎದ್ದು ಕಣ್ಣು ಬಿಡುವ ಹೊತ್ತಿಗೆ ತಾಂತ್ರಿಕ ವಿಧ್ಯಾರ್ಥಿಗಳು ಕೊರಳಿಗೆ ಬ್ಯಾಗು ಏರಿಸಿಕೊಂಡು ಕಾಲೇಜಿಗೆ ಹೊರಟಿರುತ್ತಿದ್ದರು.  ಅಲಾರ್ಮ್ ಸದ್ದು ಮಾಡುತ್ತಿತ್ತಾ? ಗೊತ್ತೇ ಆಗುತ್ತಿರಲಿಲ್ಲ. 

ನನಗೂ ಪ್ರತಿದಿನ ಬೆಳಿಗ್ಗೆ ಈ ಅಲಾರ್ಮ್ ಬಾರಿಸದಿರುವ ಬಗ್ಗೆ,  ನಾನು ಏಳದಿರುವ ಬಗ್ಗೆ ಬೇಸರ ವಾಗಿ,  ಈ ಅಲಾರ್ಮ್ ಎತ್ತಿಟ್ಟುಬಿಡಲು ನಿರ್ಧರಿಸಿ ನನ್ನ ಟ್ರಂಕಿನಲ್ಲಿ ಇಟ್ಟುಬಿಟ್ಟೆ.  ಒಂದೆರಡು ದಿನ ಗಳಾದವು. ನನ್ನ ರೂಂ  ಇದ್ದದ್ದು ಮೊದಲ ಮಹಡಿಯಲ್ಲಿ. ಅದೊಂದು  ದಿನ ರಾತ್ರಿ ಊಟದ ನಂತರ ಒಂದಿಬ್ಬರು ಗೆಳೆಯರು ನನ್ನ ರೂಮಿಗೆ ಬಂದು " ಎಲ್ಲಿಟ್ಟಿ ಲೇ ಅಲಾರ್ಮ್  ಕರೆಕ್ಟಾಗಿ ಬಡಿದು ಎಬ್ಬಿಸಿ ದಂತೆ ನಾವು, ಪಕ್ಕದ ರೂಮಿನವರು ಐದಕ್ಕೆಲ್ಲ ಎದ್ದೇಳ್ತಿದ್ದಿವಿ,  ಒಂದೆರಡು ದಿನ ಆತಲೇ  ಎದ್ದೇ ಇಲ್ಲ" ಅಂದರು. 

 ಥೂ… ಇದೆಂಥ ನಿದ್ದೆ  ನನಗೆ? 

ಅದು ಸೋಮಾರಿತನವಾ? ಅಥವಾ ನಾನು ಆ ನಮೂನೆ ನಿದ್ದೆ  ಮಾಡುತ್ತಿದ್ದೆನಾ?. ಇವತ್ತಿಗೂ ನಾನು ನನ್ನನ್ನು ಬಯ್ದುಕೊಳ್ಳುತ್ತೇನೆ.  ರಾತ್ರಿ ಎಷ್ಟು ಹೊತ್ತಾದರೂ ಸರಿ ನಿದ್ದೆಗೆಡಲು ತಯಾರಿದ್ದ ನಾನು, ಬೆಳಿಗ್ಗೆ ಬೇಗ ಎದ್ದು ಓದುವ ರೂಢಿ ನನಗೆ ಹತ್ತಲೇ ಇಲ್ಲ. 

ಹೊಸದಾಗಿ  ನೌಕರಿಗೆ ಬಂದ ನಂತರ ಬಳ್ಳಾರಿಯಲ್ಲಿ  ಬಿ ಎಸ್ ಎನ್ ಎಲ್  ನೌಕರನಾಗಿದ್ದ ನನ್ನ ಸ್ನೇಹಿತ ಸತೀಶ್ ಜೊತೆ ರೂಂ ಮಾಡಿದ್ದ ದಿನಗಳಲ್ಲಿ, ಅವನು ಪ್ರತಿ ಶುಕ್ರವಾರ ತನ್ನೂರು ಹುಬ್ಬಳ್ಳಿಗೆ ಹೋಗಿ ಸೋಮವಾರ ಬೆಳಿಗ್ಗೆ ಬರೋನು. ನಾನು ನಮ್ಮೂರಿ ಹೋಗಿ ಬರುತ್ತಿದ್ದೆ.  ಒಮ್ಮೆ ನಾನು ಊರಿಗೆ ಹೋಗದ ದಿನ ಅವನು ಸೋಮವಾರ ಬೆಳಿಗ್ಗೆ ಐದುವರೆಗೆ ಬಂದು ರೂಮಿನ ಬಾಗಿನ ಬಡಿ ಯುತ್ತಿದ್ದ, ದಿಗ್ಗನೆದ್ದು ಬಾಗಿಲು ತೆಗೆದು "ಯಾ ನಮೂನೆ ಬಾಗ್ಲಾ ಬಡೀತಿಯೋ ಮಾರಾಯಾ, ಎದ್ದು ಬರೋತಂಕ ಪುರಸತ್ತಾ ಇಲ್ನೋಡು" ಅಂದೆ.  ಚಳಿಯಲ್ಲಿ ಬಂದಿದ್ದೊಂದು, ಅಕ್ಕಪಕ್ಕದ ಮನೆಯವರು ಎದ್ದು ನೋಡುತ್ತಿದ್ದ ಅನುಮಾನವೊಂದು. ಅವನು  ಮಾತಾಡಲೇ ಇಲ್ಲ, ಸುಮ್ಮನೆ ಬಾಗಿಲಿಗೆ ಬಡಿದ ಇಂಜಸ್ ಗಳು ಬಡಿದ ಫೋರ್ಸಿಗೆ ಸ್ಕ್ರೂ ಸಮೇತ ಕಳಚಿ ಬಿದ್ದಿದ್ದನ್ನು ಹಾಗೂ ಬಾಗಿಲು ಬಡಿಯುತ್ತಿದ್ದ ಶಬ್ಧಕ್ಕೆ ಬೆಳ್  ಬೆಳಿಗ್ಗೇನೇ  ಅಕ್ಕಪಕ್ಕದ ಮನೆಯ ಹೆಂಗಸರು ಗುರಾಯಿಸುತ್ತಿದ್ದ  ಮುಖಗಳನ್ನು  ತೋರಿಸಿ, "ಮುಕ್ಕಾಲು ಗಂಟೆಯಿಂದ ಬಾಗ್ಲಾ ಬಡಿಯಾಕ್ ಹತ್ತೀನಿ…. ಒಳಗಾ ಸತ್ಗಿತ್ ಹೋಗಿ ಅಂದ್ಕಂಡು  ಗಾಬ್ರಿ ಆಗಿತ್ ನೋಡ್ ….. " ಅಂದುಬಿಟ್ಟ. ನಿಚ್ಚಳವಾಗಿಬಿಟ್ಟೆ. 
 
ಅದಾಗಿ ವರ್ಷಗಳೇ ಆದವು. ಈಗ ನನ್ನ ಮಗ ಅಭಿ ನಿದ್ದೆಗಣ್ಣಲ್ಲಿ ಕಾಲು ಮೈಮೇಲೆ ಹಗುರಕ್ಕೆ ಒಗೆ ಯುತ್ತಾ ಕೈ ಮೂತಿಗೆ ಬಡಿಯುತ್ತಾ ಸೌಂಡ್ ಸ್ಲೀಪ್ ಅಂತಾರಲ್ಲ, ನಿದ್ದೆ ಮಾಡುತ್ತಿರುವುದನ್ನು ನೋಡು ವಾಗೆಲ್ಲ ನನ್ನ "ಅಲಾರ್ಮ್", ಬೆಳಗಿನ ಜಾವದ ಸೋಮಾರಿತನ, ಸೋಗಲಾಡಿತನ ಮತ್ತೊಮ್ಮೆ ಸಾವಿನಂಥ ನಿದ್ದೆ ನೆನಪಾಗುತ್ತದೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಬೆಳಗಿನ ಜಾವದ ಪ್ರಾಶಸ್ತ್ಯ ಓದು, ಸಕ್ಕರೆ ನಿದ್ದೆಯ ಸೋಗಲಾಡಿತನ: ಅಮರ್ ದೀಪ್ ಪಿ. ಎಸ್.

 1. ಪರೀಕ್ಷೆ ಸಮಯದಲ್ಲಿ ಐದಕ್ಕೆ ಎದ್ದು ಇನ್ನೊಂದು ಹತ್ತು ನಿಮಿಷ ಮಲಗೋಣ ಎಂದು ಒರಗಿದರೆ
  ಮತ್ತೆ ಕಣ್ಣು ಬಿಡುವಷ್ಟರಲ್ಲಿ ಏಳು ಗಂಟೆಯಾಗಿರುತ್ತಿತ್ತು! ನನಗೂ ಈ ರೀತಿಯ ಅನುಭವಗಳಾಗಿವೆ .
  ಲೇಖನ ಚೆನ್ನಾಗಿದೆ ಸರ್.

 2. ಹಹಹ ಸೂಪರ್, ನನ್ನ ಜೀವನದಲ್ಲಿ ನಾನು ಬೆಳಗಿನ ಜಾವ ಎದ್ದು ಓದಿಲ್ಲ.

  I mean… ಬೆಳಗಿನ ಸುಖ ನಿದ್ರೆಯ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ
   🙂

 3. ಬೆಳಗಿನ ಜಾವದ ಸುಖ ನಿದ್ರೆಯ, ಸಂಭ್ರಮವೇ ಸಂಭ್ರಮ ಅದರ ಬೆಚ್ಚಗಿನ ಕನಸುಗಳ ಮಧುರಾತಿ ಮಧುರದ ಸ್ಪರ್ಶಸುಖ ಬೇರೆ ಯಾವುದರಿಂದಲೂ ಸಿಗುತ್ತಿರಲಿಲ್ಲ. ಯಾರಾದರೂ ಎಬ್ಬಿಸಿದರೆ ಸಿಟ್ಟು, ಸೆಡವು ಎಬ್ಬಿಸಿದವರ ಮೇಲೆ ಬ್ರಹ್ಮಾಸ್ತ್ರವಾಗುತ್ತಿತ್ತು. ನಿರಾಳ ನಿರವತೆಯಲ್ಲಿ ಪರೀಕ್ಷೆಗೆ ಓದುವ ಪರಿಪಾಠ ಬೆಳಸಿಕೊಂಡಾಗಲೇ ಅದರ ಆಳ ಅಗಲಗಳ ಅರಿವಾಗಿದ್ದು; ಪ್ರಪುಲ್ಲಗೊಂಡ ಮನಸ್ಸು ತನ್ಮಯತೆಯಿಂದ ಮತ್ತಷ್ಟು ಓದುವಂತೆ ನನ್ನ ಅಕ್ಕ ಪ್ರೇಪಿಸಿದ್ದು. ನಿಮ್ಮ ಚಂದದ ಬರಹದಿಂದ ನಾನೂ ಸಹ ಆ ದಿನಗಳ ಮೆಲುಕು ಹಾಕುವಂತೆ ಮಾಡಿದ ಪರಿ ನಿಜಕ್ಕೂ ಅರ್ಥಪೂರ್ಣ ಬರಹ ಅಮರ್ ದೀಪ್ ಪಿ.ಎಸ್.

 4. ಅಲಾರಾಂ ಮತ್ತು ನಿನ್ನ ನಿದ್ದೆ ಎರಡೂ ಸರಿಯಾಗೇ ಕೆಲಸ ಮಾಡುತ್ತಿದ್ದವು ಅನಿಸುತ್ತೆ ಅಮರ್

 5. Ninna hostelnalli nadeda, nanu joteyalli odiddaru nanage gottirada vishayagalanna tilidu khushi aatale deepu, tumba prabudha baravanige.

Leave a Reply

Your email address will not be published. Required fields are marked *