ಬೆಳಗಿದ ರವಿಗೊಂದು ಅಕ್ಷರ ಮಾಲೆ: ಸಾವಿತ್ರಿ ಹಟ್ಟಿ

ರವಿ ಬೆಳಗೆರೆ ಅವರ ಬಗ್ಗೆ ಎಲ್ಲವನ್ನೂ ಬರೆಯುವುದೆಂದರೆ ಸಾಗರದ ನೀರನ್ನು ಕೊಡದಲ್ಲಿ ಹಿಡಿದಿಡುವೆನೆಂಬ ಹುಂಬತನ. ಅವರ ಪತ್ರಿಕೆಗಳು ಮತ್ತು ಲೇಖನಗಳನ್ನು ಓದಿ ಅವರನ್ನು ಪೂರಾ ಅರ್ಥ ಮಾಡಿಕೊಂಡಿದ್ದೇವೆ ಎನ್ನುವವರಿಗೆ ಅವರ ಬಗ್ಗೆ ತಿಳಿಯದ ಸಂಗತಿಗಳೂ ಹಲವು ಇವೆ ಅಂತ ಹೇಳಬಹುದು. ಅವರ ಲೇಖನಗಳೆಂದರೆ ಸ್ಫೂರ್ತಿಯ ಚಿಲುಮೆಗಳು. ಖಾಸ್ ಬಾತ್ ಮತ್ತು ಬಾಟಮ್ ಐಟಮ್ ಅಂಕಣಗಳನ್ನು ಓದಲೆಂದೇ ಮುಂದಿನ ಸಂಚಿಕೆಗಾಗಿ ಕಾಯ್ದು ನಿಲ್ಲುತ್ತಿದ್ದ ಅಗಾಧ ಸಂಖ್ಯೆಯ ಓದುಗ ಅಭಿಮಾನಿಗಳು ಅವರಿಗಿದ್ದರು. ಆ ಬಳಗದಲ್ಲಿ ನಾನೂ ಒಬ್ಬಳು. ಬದುಕಿನಲ್ಲಿ ನೊಂದ ಹೃದಯಗಳಿಗೆ, ಒಡೆದ ಮನಸುಗಳಿಗೆ, ಸೋತ ಕೈಗಳಿಗೆ, ದಣಿದ ಜೀವಗಳಿಗೆ ಬದುಕಿನ ಕುರಿತು ಧನಾತ್ಮಕತೆಯನ್ನು ತುಂಬಿದ ಹೆಂಗರುಳಿನ ಮಹಾನ್ ಲೇಖಕರವರು. ಬಹುಶಃ ಅಭಿಮಾನಿಗಳು ಬೆಳಗೆರೆಯವರ ಲೇಖನಗಳನ್ನು ಓದಲು ಕಾಯ್ದಷ್ಟು ಅವರ ಓರಗೆಯ ಬೇರೊಬ್ಬ ಯಾವ ಲೇಖಕನಿಗೂ ಕಾಯ್ದಿಲ್ಲ ಎನ್ನಿಸುತ್ತದೆ.

ಅಂತಹ ಅಕ್ಷರ ಬ್ರಹ್ಮನ ಪತ್ರಿಕೆಯಲ್ಲಿ ನಾನು ಕೆಲದಿನ ಅಕ್ಷರಗಳನ್ನು ಜೋಡಿಸುವ ಕೆಲಸ ಮಾಡಿದೆ ಎಂಬುದು ಮರೆಯಲಾಗದ ನೆನಪು. ಬೆಂಗಳೂರಿನ ಥಳಕು ಬಳುಕು ಮತ್ತು ತಂಪಾದ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಬಿ.ಇಡಿ ಓದುವೆ ಎಂದು ಅರ್ಧ ಸತ್ಯವನ್ನು ಹೇಳಿ ಅಲ್ಲಿಯ ಕೆಲಸವನ್ನು ಬಿಡುತ್ತೇನೆ ಅಂದಾಗ ಅವರು “ ಇಲ್ಲಿದ್ದುಕೊಂಡೇ ಬಿ.ಇಡಿ ಓದು. ಕೆಲಸ ಬಿಟ್ಟು ಹೋಗಬೇಡ ಮಗಳೇ..” ಅಂತ ಕಕ್ಕುಲತೆಯಿಂದ ಹೇಳಿದ್ದನ್ನು ನಿರ್ಲಕ್ಷಿಸಿ ಬಂದ ನನ್ನ ಮೂರ್ಖತನದ ಬಗ್ಗೆ ಸಾಕಷ್ಟು ಪಶ್ಚಾತಾಪವಾಯಿತು. ಮೊಟ್ಟ ಮೊದಲು ಕಂಪ್ಯೂಟರ್ ಕೀ ಬೋರ್ಡಿನ ಮೇಲೆ ನಾನು ಕೈ ಇರಿಸಿದ್ದು ಹಾಯ್ ಬೆಂಗಳೂರಿನಲ್ಲಿ. ಅದರಲ್ಲಿ ವರ್ಣಮಾಲೆಯನ್ನು ಮೊದಲು ಕಲಿತು ಒಂದೊಂದೇ ಪದ ರಚನೆಗೆ ತೊಡಗಿದಾಗ ಇಷ್ಟು ದಿನ ಓದಿ ಬರೆದದ್ದೆಲ್ಲಾ ಸುಳ್ಳಾಗಿ ಮತ್ತೆ ಅಕ್ಷರಾಭ್ಯಾಸಕ್ಕೆ ತೊಡಗಿದ ಸಣ್ಣ ಬಾಲಕಿಯಂತಾಗಿದ್ದೆ. ಆಗ ಹರ್ಷಿತಳಾಗಿದ್ದ ನನ್ನನ್ನು ಕಂಡು ನಿವೇದಿತಾ ಮೇಡಮ್ ಮತ್ತು ರವಿ ಸರ್ ಖುಷಿ ಪಟ್ಟಿದ್ದು ಈಗಲೂ ನೆನಪಿದೆ. ನಂತರ ತಪ್ಪಿಲ್ಲದೇ ಟೈಪಿಸಲು ಕಲಿತೆನು. ರವಿ ಸರ್ ಅವರ ಕೆಲವು ಲೇಖನಗಳನ್ನು ಟೈಪಿಸಲು ನನಗೂ ವಹಿಸಿಕೊಡಲಾಗುತ್ತಿತ್ತು. ನಾನು ಆ ಲೇಖನಗಳ ಮೊದಲ ಓದುಗಳೆಂಬ ಗರ್ವದಿಂದ ಓದುತ್ತ ಟೈಪಿಸುತ್ತಿದ್ದೆ. ಆ ದಿನಗಳಲ್ಲಿ ಸಿಕ್ಕಿದ್ದ ಗೀತಾ( ಈಗ ಇಲ್ಲ), ನಳಿನಿ ಎಂಬ ಗೆಳತಿಯರ ಸಲಹೆ, ಸ್ನೇಹ ಕೂಡ ಅಮೂಲ್ಯ. ಅಪರಿಚಿತ ಆ ದೊಡ್ಡ ಉದ್ಯಾನ ನಗರಿಯಲ್ಲಿ ನನಗೆ ಕೆಲವು ದಿನಗಳವರೆಗೆ ಆಶ್ರಯ ಕೊಟ್ಟಿದ್ದ ಹಾಯ್ ಆಫೀಸಿನ ನಿಷ್ಠಾವಂತ ಸಿಬ್ಬಂದಿಯಾದ ಪ್ರೇಮಲತಾ (ಪ್ರೇಮಕ್ಕ) ಶ್ರೀನಿವಾಸ(ಸೀನಣ್ಣ) ದಂಪತಿ ಕೂಡ ಸ್ಮರಣಾರ್ಹರು.

ಕೆಲಸ ಬಿಟ್ಟ ನಂತರವೂ ಅವರನ್ನು ನೋಡಲು ಹೋದಾಗ ಎಷ್ಟೊಂದು ಜನ ಸಂದರ್ಶನಾರ್ಥಿಗಳು ಕಾಯುತ್ತಿದ್ದರೂ ನನ್ನನ್ನು ಕ್ಯೂನಲ್ಲಿ ನಿಲ್ಲಿಸದೇ ಒಳಗೆ ಕರೆಸಿ ಅಕ್ಕರೆಯಿಂದ ಮಾತಾಡಿಸಿ ಕಳುಹಿಸುತ್ತಿದ್ದ ಆ ಹಿರಿಯ ಜೀವದ ಬಗ್ಗೆ ನನ್ನ ಗೌರವ ಅಖಂಡ. ಹೆಂಗಿದ್ದೀಯಾ ಮಗಳೇ, ಎಲ್ಲಿದ್ದೀಯವ್ವಾ ಅನ್ನುವ ಅವರ ಅಂತಃಕರಣದ ನುಡಿಗಳು ಈಗಲೂ ಕಿವಿಯಲ್ಲಿ ಮೊಳಗುತ್ತವೆ. ಅವರ ಮಗಳು ಬಾನಿ( ಭಾವನಾ ಬೆಳಗೆರೆ) ಸಿಬ್ಬಂದಿಯೊಂದಿಗೆ ಆಪ್ತವಾಗಿರುತ್ತಿದ್ದುದು ನನಗೆ ಇಷ್ಟವಾಗುತ್ತಿತ್ತು. ಕೆಲವು ಸಲ ಭಾವನಾ ನಮ್ಮೊಂದಿಗೆ ಊಟಕ್ಕೆ ಕೂಡ್ರುತ್ತಿದ್ದರು. ಒಂಚೂರೂ ಹಮ್ಮು ಬಿಮ್ಮು ಇಲ್ಲದೇ ನಮ್ಮ ಜೊತೆಯಲ್ಲಿ ಕುಳಿತು ಊಟ ಮಾಡುತ್ತಿದ್ದ ಭಾವನಾ ನನಗೆ ನನ್ನ ಸಹೋದರಿಯರನ್ನು ಅಗಲಿದ್ದ ಆ ದಿನಗಳಲ್ಲಿದ್ದ ದುಃಖವನ್ನು ಕಡಿಮೆ ಮಾಡುತ್ತಿದ್ದರು. ನಾನು ಆ ಎಲ್ಲಾ ಹಿರಿಯರ ಮಾತು ಕೇಳಿ ಪತ್ರಿಕೋದ್ಯಮದಲ್ಲಿಯೇ ಇದ್ದಿದ್ದರೆ ಇವತ್ತು ಬಿಡುವಿಲ್ಲದ ಲೇಖಕಿ/ ಪತ್ರಕರ್ತೆಯಾಗಿರುತ್ತಿದ್ದೆ. ಆದರೆ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಾ ನಾನು ತಲುಪಬೇಕಾದುದು ಶಿಕ್ಷಣ ಕ್ಷೇತ್ರವೆಂಬುದು ನನ್ನ ಖಚಿತವಾದ ಗುರಿಯಾಗಿದ್ದರಿಂದ ಕೆಲವು ತಾತ್ಕಾಲಿಕ ನೆಪಗಳನ್ನು ಹೇಳಿ ನಾನು ಅಲ್ಲಿಂದ ದೂರವಾದೆ.

ರವಿ ಬೆಳೆಗೆರೆಯವರ ಬಹಳಷ್ಟು ಕೃತಿಗಳನ್ನು ಓದಿದ್ದರೂ ‘ಹೇಳಿ ಹೋಗು ಕಾರಣ’ ಪಾಪದ ಹೂವು ಪೂಲನ್ , ಖಾಸ್ ಬಾತ್ ಸಂಗ್ರಹ, ಬಾಟಮ್ ಐಟಮ್ ಪುಸ್ತಕಗಳು ತೀರಾ ಮತ್ತೆ ಮತ್ತೆ ಓದಬೇಕೆನ್ನಿಸುವ ಬರೆಹಗಳು. ನಮಗೆ ಕೆಲವು ವ್ಯಕ್ತಿಗಳು ನಮ್ಮೊಡನೆ ಇದ್ದಾಗ ಅವರ ಘನತೆ ಅರಿವಿಗೆ ಬರುವುದೇ ಇಲ್ಲ. ಯಾವುದೋ ಒಂದೆರಡು ಕೋನಗಳಿಂದ ಅಳೆದು ನಿರ್ಣಯವನ್ನು ತೆಗೆದುಕೊಂಡು ಬಿಡುತ್ತೇವೆ. ಆದರೆ ಅಗಲಿ ಹೋದಾಗ ಅವರ ಅರಿವಾಗುತ್ತದೆ. ಯಾವಾಗಲೂ ಧನಾತ್ಮಕವಾಗಿ ಯೋಚಿಸುವ ನನಗೆ ಯಾವುದೇ ವ್ಯಕ್ತಿಯ ಋಣಾತ್ಮಕ ಗುಣಗಳ ಕಡೆ ಗಮನ ಹೋಗುವುದೇ ಇಲ್ಲ. ಅದರಂತೆ ಬೆಳಗೆರೆ ಅವರ ಬಗ್ಗೆಯೂ ಕೂಡ. ಅವರು ಅಕ್ಷರ ಲೋಕಕ್ಕೆ, ಈ ನಾಡಿನ ಜನರಿಗೆ ಲೇಖನಗಳ ಮೂಲಕ ನೀಡಿದ ಮೌಲ್ಯಗಳು ಮತ್ತು ಸ್ಫೂರ್ತಿಯನ್ನು ಮಾತ್ರ ನಾನು ಗಮನಿಸುತ್ತೇನೆ ಹೊರತು ಅವರ ವೈಯಕ್ತಿಕ ದೋಷಗಳನ್ನು ಗಮನಿಸಲಾರೆ. ಗುಲಾಬಿ ಹೂವಿನ ಜೊತೆಗೆ ಮುಳ್ಳುಗಳೂ ಇರುತ್ತವೆ. ಹೂವನ್ನು ಮಾತ್ರ ತೆಗೆದುಕೊಂಡು ಮುಳ್ಳುಗಳನ್ನು ಗಿಡದಲ್ಲೇ ಬಿಡುವ ಕೈಗಳ ಹಾಗೆ ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ನಾವು ಗಮನಿಸಬೇಕಿದೆ. ಹಾಯ್ ಬೆಂಗಳೂರು, ಓ ಮನಸೇ… ಜೊತೆಗೆ ಪ್ರಾರ್ಥನಾ ಶಾಲೆ, ಭಾವನಾ ಪ್ರಕಾಶನವನ್ನೂ ಸ್ಥಾಪಿಸಿದ, ಎಷ್ಟೋ ಜನ ಅಸಹಾಯಕರಿಗೆ ನೆರವು ನೀಡಿದ ಪರಿಶ್ರಮಪಟ್ಟು ಶ್ರೀಮಂತವಾದ ಕೈಗಳು ಅವರವು.

ಅವರು ಇಷ್ಟು ಬೇಗ ಇಹಲೋಕವನ್ನು ತ್ಯಜಿಸಬಾರದಿತ್ತು ಅಂತ ಅನ್ನಿಸುವುದು. ಈ ನಾಡು ಮತ್ತೊಮ್ಮೆ ಅಂತಹ ಅಕ್ಷರ ಮಾಂತ್ರಿಕನ‌ನ್ನು ಪಡೆಯಬಹುದೇ?! ಇಲ್ಲ ಅನ್ನಿಸುತ್ತದೆ. ಅವರಿಗೆ ಅವರೇ ಸಾಟಿ. ಅವರು ಲೇಖಕ, ಸಂಪಾದಕ, ಪತ್ರಕರ್ತ, ನಟ, ನಿರ್ದೇಶಕರಾಗಿ ಬದುಕಿದ್ದರೂ ಅದೆಲ್ಲವುಗಳ ಆಚೆ ಅವರೊಳಗೊಂದು ಮುಗ್ಧ ಮಗುವಿನ ಮನಸಿತ್ತು. ಅಪ್ಪಟ ತಾಯಿ ಹೃದಯವಿತ್ತು. ಜನರು ಅದನ್ನು ದುರುಪಯೋಗಮಾಡಿಕೊಂಡರೇನೊ ಎಂಬ ಅನುಮಾನವೂ ಕಾಡುವುದು. ನಿಮ್ಮ ಲೇಖನಗಳನ್ನು ಓದಿ ಓದಿ ಖಿನ್ನತೆಯಿಂದ ಹೊರಬಂದು ಬದುಕನ್ನು ಕಟ್ಟಿಕೊಂಡ ಈ ನಿಮ್ಮ ಅಕ್ಷರಲೋಕದ ಮಗಳು ಅಂತಃಕರಣದಿಂದ ಹೆಣೆದ ಈ ಅಕ್ಷರ ಮಾಲೆ ನಿಮ್ಮ ಜನ್ಮ ದಿನದ ಸಂದರ್ಭದಲ್ಲಿ ನಿಮಗೆ ಸಮರ್ಪಣೆ. ನಿಮ್ಮ ಆಶೀರ್ವಾದಗಳು ಸದಾ ಇರಲಿ. ನೀವು ಅಕ್ಷರ ರೂಪದಲ್ಲಿ ಜೀವಂತವಾಗಿದ್ದೀರಿ ಅಪ್ಪಾಜಿ!!!

-ಸಾವಿತ್ರಿ ಹಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಮೇಘನ.ಸಿ.ಹೆಚ್.
ಮೇಘನ.ಸಿ.ಹೆಚ್.
3 years ago

ಲೇಖನ ತುಂಬಾ ಚೆನ್ನಾಗಿದೆ..ನೀವು ರವಿ ಸರ್ ಬಳಿ ಕೆಲಸ ಮಾಡುತ್ತಿದ್ದ ವಿಷಯ ಗೊತ್ತಿರಲಿಲ್ಲ..ತುಂಬಾ ಖುಷಿ ಆಯ್ತು ಓದಿ..ಮತ್ತಷ್ಟು ಲೇಖನಗಳು ನಿಮ್ಮಿಂದ ಹೊರಬರಲಿ ಎಂಬ ಆಶಯದೊಂದಿಗೆ..

1
0
Would love your thoughts, please comment.x
()
x