ಬಹಳ ಹಿಂದಿನಿಂದಲೂ ಮಾನವನ ಕುತೂಹಲವನ್ನು ಅತಿಯಾಗಿ ಕೆರಳಿಸುತ್ತಿರುವ ವಿಷಯಗಳಲ್ಲಿ ಬೆಳಕು ಸಹ ಒಂದು. ನಮ್ಮ ಜೀವನದಲ್ಲಿ ವಿವಿಧ ಮಜಲುಗಳಲ್ಲಿ ವಿವಿಧ ರೀತಿ-ನೀತಿಗಳಲ್ಲಿ ಬೆಳಕು ನಮ್ಮೊಂದಿಗೆ ಬೆರೆತು ಹೋಗಿದೆ. ಜೊತೆಗೆ ಅವೆಲ್ಲವಕ್ಕೂ ಸಂಬಂಧಪಟ್ಟ ವಿವಿಧ ಪ್ರಶ್ನೆಗಳನ್ನೂ ನಮ್ಮಲ್ಲಿ ಹುಟ್ಟು ಹಾಕುತ್ತಿದೆ. ಬೆಳಕಿನಲ್ಲಿ ಹಸಿರಾದ ಎಲೆ ಹಸಿರಾಗಿಯೇ ಏಕೆ ಕಾಣುತ್ತದೆ ? ಆಕಾಶ ಹಗಲಿನಲ್ಲಿ ನೀಲಿಯಾಗಿ ಬೆಳಗ್ಗೆ ಮತ್ತು ಸಂಜೆ ಕೆಂಪಾಗಿ ಹಾಗೂ ರಾತ್ರಿಯಲ್ಲಿ ಕಪ್ಪಾಗಿ ಕಾಣುವುದೇಕೆ ? ಎಂಬ ಎಷ್ಟೋ ಪ್ರಶ್ನೆಗಳು ನಮ್ಮ ನಿಮ್ಮೆಲ್ಲರ ಮನಗಳಲ್ಲಿ ಹುಟ್ಟುತ್ತವೆಯಾದರೂ, ಉತ್ತರ ದೊರಕದೆ ಸುಮ್ಮನಾಗಿಬಿಡುತ್ತವೆ. ಆದರೆ ಈ ಪ್ರಶ್ನೆಗಳಿಗೆ ಉತ್ತರವನ್ನು ನಮ್ಮ ಭೌತವಿಜ್ಞಾನ ಖಂಡಿತವಾಗಿಯೂ ನೀಡುತ್ತದೆ.
ಹಸಿರಿನ ಗಿರಿಗಳ ಸಾಲೇ ನಿನ್ನಯ ಕೊರಳಿನ ಮಾಲೆ ಎಂಬ ಸಾಲನ್ನು ಕೇಳುವಾಗ ನೆನೆಪಾಗುವುದೇ ಹಚ್ಚ ಹಸಿರಿನ ಪಶ್ಚಿಮ ಘಟ್ಟದ ಗಿಡಮರಗಳು. ಅದೇ ಆ ಗಿಡಮರಗಳು ಹಸಿರಾಗೇ ಕಾಣುವುದು ಏಕೆ ಎಂದು ತಿಳಿದುಕೊಂಡಿದ್ದೀರಾ..? ಇರಲಿ ಬಿಡಿ. ಯಾವುದೇ ಸಸ್ಯದ ಎಲೆಗಳಲ್ಲಿ ಅಥವಾ ಮೇಲ್ಮೈಯಲ್ಲಿ ಕ್ಲೋರೊಫಿಲ್‌ಗಳೆಂಬ ಪುಟಾಣಿ ಘಟಕಗಳಿರುತ್ತವೆ. ಇವು ಸೂರ್‍ಯನ ಬೆಳಕಿನಲ್ಲಿರುವ ಎಲ್ಲಾ ಏಳು ಬಣ್ಣಗಳಲ್ಲಿ ಹಸಿರನ್ನು ಬಿಟ್ಟು ಮತ್ತೆಲ್ಲವನ್ನೂ ಹೀರಿಕೊಂಡು ಆಹಾರೋತ್ಪಾದನೆಯಲ್ಲಿ ಬಳಸಿಕೊಳ್ಳುತ್ತವೆ. ಉಳಿದ ಆ ಹಸಿರು ಬಣ್ಣದ ಬೆಳಕು, ಎಲೆಯ ಮೇಲ್ಮೈಯಿಂದ ಪ್ರತಿಫಲನ ಹೊಂದಿ ನಮ್ಮ ಕಣ್ಣನ್ನು ಸೇರುತ್ತದೆ. ಆದ್ದರಿಂದಲೇ ಎಲೆ ಮತ್ತು ಸಸ್ಯದ ಭಾಗಗಳು ಹಸಿರಾಗಿ ಕಾಣುತ್ತವೆ. ಇನ್ನೂ ಅನ್ವಯಿಸಿ ಹೇಳಬೇಕೆಂದರೆ, ಯಾವುದೇ ಬಣ್ಣದ ವಸ್ತು ಬೆಳಕಿನಲ್ಲಿರುವ ಮತ್ತೆಲ್ಲಾ ಬಣ್ಣಗಳನ್ನೂ ಹೀರಿಕೊಂಡು ತನ್ನ ಬಣ್ಣದ ಬೆಳಕನ್ನು ಮಾತ್ರ ಪ್ರತಿಫಲಿಸುತ್ತದೆ. ಆಗ ಅದನ್ನು ನಮ್ಮ ಕಣ್ಣು ಅರ್ಥೈಸಿಕೊಳ್ಳುತ್ತದೆ.
ಈಗ ನೀವು ಯೋಚಿಸುತ್ತಿರಬಹುದು ಹಾಗಾದರೆ ಯಾವ ಕಣಗಳೂ ಇಲ್ಲದ ಆಕಾಶವೇಕೆ ನೀಲಿಯಾಗಿ ಕಾಣುತ್ತದೆ ಎಂದು. ’ಹೌದು’ ಆಕಾಶದಲ್ಲಿ ಕ್ಲೋರೋಫಿಲ್ ಹಾಗಿರಲಿ ಬೇರಾವುದೇ ಸಣ್ಣ ಕಣವೂ ಸಿಗುವುದಿಲ್ಲ. ಆದರೆ ಈ ಆಕಾಶವೆಂದು ಹೇಳುವ ಜಾಗ ಮತ್ತು ನಮ್ಮ ನಡುವೆ ಹಲವು ಅನಿಲಗಳಿಂದಾದ ’ವಾತಾವರಣ’ ಎಂಬುದೊಂದಿದೆ. ನಿಮಗೇ ಗೊತ್ತಿರುವಂತೆ ಸೂರ್‍ಯನ ಬೆಳಕು ಕ್ರಮವಾಗಿ ತರಂಗದೂರದನ್ವಯ ನೇರಳೆ, ಕಡುನೀಲಿ, ನೀಲಿ, ಹಸಿರು, ಹಳದಿ, ಕೇಸರಿ ಮತ್ತು ಕೆಂಪು ಬಣ್ಣಗಳಿಂದಾಗಿದೆ. ಬೇರಾವುದೇ ಕಣಗಳ ನಡುವೆ ಸಾಗುವಾಗ ಈ ಬೆಳಕಿನಲ್ಲಿನ ನೇರಳೆ ಬಣ್ಣ ಬಹುಬೇಗ ಚದುರಿ ಹೋಗಿಬಿಡುತ್ತದೆ. ಈ ಚಲನೆ ಮುಂದುವರಿದಂತೆ ಕ್ರಮವಾಗಿ ಕಡುನೀಲಿ, ನೀಲಿ, ಹಸಿರು, ಹಳದಿ, ಕೇಸರಿ ಬಣ್ಣಗಳೂ ಹಾಗೂ ಕೊನೆಯಲ್ಲಿ ನಿಧಾನವಾಗಿ ಕೆಂಪು ಬಣ್ಣ ಆ ಕಣಗಳ ನಡುವೆ ಚದುರಿ ವಾತಾವರಣದಲ್ಲಿ ಹರಡತೊಡಗುತ್ತವೆ. ಹಗಲಿನಲ್ಲಿ ಸೂರ್‍ಯ ನಮ್ಮ ನೆತ್ತಿಯ ಮೇಲೆ ಇರುವುದರಿಂದ ವಾತಾವರಣದ ಮೂಲಕ ಹಾದು ಬರುವ ಬೆಳಕು ಕನಿಷ್ಟ ದೂರವನ್ನು ಕ್ರಮಿಸುತ್ತದೆ. ಆದ್ದರಿಂದ ಕೇವಲ ನೇರಳೆ ನೀಲಿ ಮತ್ತು ಹಸಿರು ಬಣ್ಣಗಳು ಮಾತ್ರ ಚದುರಿ ವಾತಾವರಣದಲ್ಲಿ ಹರಡಿ ಬಿಡುತ್ತದೆ. ಆದ್ದರಿಂದ ನಮ್ಮ ಮೇಲಿನ ವಾತಾವರಣ ಅಂದರೆ ಆಕಾಶ ವಿಶಿಷ್ಟ ನೀಲಿ ಬಣ್ಣವಾಗಿ ಕಾಣುತ್ತದೆ ಮತ್ತು ಅವುಗಳನ್ನು ಕಳೆದು ಉಳಿದ ಬೆಳಕಿನಿಂದ ಸೂರ್‍ಯ ಹಳದಿ ಬಣ್ಣದವನಾಗಿ ಕಾಣುತ್ತಾನೆ.
ಇನ್ನು ಸಂಜೆ ಅಥವಾ ಬೆಳಗ್ಗೆ ನಮ್ಮ ಬಳಿಗೆ ಬರಲು ಸೂರ್‍ಯನ ಬೆಳಕು ವಾತಾವರಣದಲ್ಲಿ ಓರೆಯಾಗಿ ಬರಬೇಕಾದ್ದರಿಂದ ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ. ಆದ್ದರಿಂದ ಒಂದರ ಹಿಂದೆ ಒಂದರಂತೆ ಎಲ್ಲಾ ಬಣ್ಣಗಳು ಚದುರಿ ನಮ್ಮ ಬಳಿ ಬರುವಾಗ ಕೇಸರಿ ಬಣ್ಣ ಚದುರುತ್ತಾ ಪೂರ್ವ ಅಥವಾ ಪಶ್ಚಿಮ ದಿಗಂತವನ್ನು ಕೇಸರಿ ಮಿಶ್ರಿತ ಕೆಂಪಾಗಿಸಿದರೆ, ಉಳಿದ ಕೊನೆಯ ಬಣ್ಣದೊಂದಿಗೆ ಸೂರ್‍ಯನು ಕೆಂಪಗೆ ಕಾಣಿಸಿಕೊಳ್ಳುತ್ತಾನೆ. ಇನ್ನು ನಮ್ಮ ಕಣ್ಣುಗಳು ಬೆಳಕಿನ ಕಿರಣಗಳಿಂದ ಮಾತ್ರ ಸಂವೇದನೆಗೊಳಪಡುತ್ತವೆ. ಆದ್ದರಿಂದ ಬೆಳಕಿನ ಅನುಪಸ್ಥಿತಿಯಲ್ಲಿ, ನಮ್ಮ ಸುತ್ತಮುತ್ತಲಿನ ವಸ್ತುಗಳಾಗಲಿ, ವಾತಾವರಣವಾಗಲಿ ಕಾಣುವುದಿಲ್ಲ. ಆದ್ದರಿಂದಲೇ ನಮ್ಮ ಸುತ್ತಲಿನ ವಾತಾವರಣ ಮತ್ತು ಆಕಾಶ ಕಪ್ಪಾಗಿ ಕಾಣುತ್ತದೆ. ಅದನ್ನೇ ನಾವು ಕತ್ತಲು ಎನ್ನುವುದು. ಹೀಗೆ ನಮ್ಮ ಜೀವನದಲ್ಲಿ ಕತ್ತಲನ್ನು ಓಡಿಸುವ ಈ ಬೆಳಕು ಒಂದು ಬಹುಮುಖ್ಯ ಅಂಶವಾಗಿಬಿಟ್ಟಿದೆ. ಅದಿಲ್ಲದಿದ್ದಿದ್ದರೆ ಬಣ್ಣ ಬಣ್ಣದ ಲೋಕ, ಅದ ಬಣ್ಣಿಸಲೂ ಆಗದು… ಎಂಬ ಮಾತುಗಳಿಗೆ ಅರ್ಥವೇ ಇರುತ್ತಿರಲಿಲ್ಲ, ಪ್ರಾಯಶಃ ನಾವೂ ಇರುತ್ತಿರಲಿಲ್ಲ.
ಮನುಕುಲಕ್ಕೆ, ಅವರ ಜೀವನಕ್ಕೆ ಇಷ್ಟೊಂದು ತಳುಕು ಹಾಕಿಕೊಂಡಿರುವ ಬೆಳಕು ಸೂರ್‍ಯನಿಂದ ಮಾತ್ರವೇ ಸಿಗುತ್ತದೆ ಎಂದೇನೂ ಇಲ್ಲ, ಎಲ್ಲಾ ನಕ್ಷತ್ರಗಳು ಬೆಳಕು ನೀಡುತ್ತವೆ. ಆದರೆ ಅವು ದೂರದಲ್ಲಿರುವುದರಿಂದ, ಇನ್ನು ಚಂದ್ರ ಅತೀ ಸ್ವಲ್ಪ ಪ್ರಮಾಣದ ಸೂರ್‍ಯನ ಬೆಳಕನ್ನೇ ಪ್ರತಿಫಲಿಸಿ ನಮಗೆ ನೀಡುವುದರಿಂದ ನಮಗವು ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ ಬೆಳಕಿನ ನೈಸರ್ಗಿಕ ಮೂಲವಾದಸೂರ್‍ಯನ ಬಗ್ಗೆ ನಮಗೆ ಒಲವು ಜಾಸ್ತಿ. ಆದರೆ ಕಾಲ ಬದಲಾದಂತೆ ಮನುಷ್ಯನ ಬುದ್ಧಿಶಕ್ತಿ ಹಲವು ರೀತ್ಯ ಕೃತಕ ಬೆಳಕಿನ ಮೂಲಗಳಿಗೆ ಜನ್ಮ ನೀಡಿದೆ, ನೀಡುತ್ತಿದೆ. ಈಗಿನ ದಿನಮಾನಗಳಲ್ಲಿ ಹೆಚ್ಚಿನದಾಗಿ ಜನ ಸಾಮಾನ್ಯರು ಕೃತಕ ಬೆಳಕಿನ ಮೂಲಗಳಾಗಿ ಬುರುಡೆ ಬಲ್ಬ್‌ಗಳು, ಟ್ಯೂಬ್‌ಲೈಟ್‌ಗಳು, ಸಿ.ಎಫ್.ಎಲ್ ಮತ್ತು ಎಲ್.ಇ.ಡಿ ಬಲ್ಬ್‌ಗಳನ್ನು ಬಳಸುತ್ತಾರೆ.
ಬರುಡೆ ಬಲ್ಬಿನಲ್ಲಿ ಒಂದು ಸುರುಳಿಯಾಕಾರದ ತಂತಿಯಿರುತ್ತದೆ. ಅದನ್ನು ಟಂಗ್‌ಸ್ಟನ್ ಎಂಬ ಲೋಹದಿಂದ ಮಾಡಿರುತ್ತಾರೆ. ಇದರ ವಿದ್ಯುತ್ ಪ್ರತಿರೋದಕ ಶಕ್ತಿ ಹೆಚ್ಚಿರುತ್ತದಾದ್ದರಿಂದ, ಇದು ತನ್ಮೂಲಕ ಹರಿಯುವ ವಿದ್ಯುತ್ ಪ್ರವಾಹವನ್ನು ಅಡ್ಡಗಟ್ಟುತ್ತದೆ. ಆಗ ಅವುಗಳ ನಡುವೆ ಉಂಟಾಗುವ ತಾಡನ ಮತ್ತು ಘರ್ಷಣೆಯಿಂದ ಬಿಡುಗಡೆಯಾಗುವ ಅತೀವ ಉಷ್ಣದಿಂದ ಆ ಸುರುಳಿ ಹೆಚ್ಚು ಕಡಿಮೆ ೩೦೦೦ ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಯಾಗಿ ಪಡೆದ ಉಷ್ಣ ಶಕ್ತಿಯನ್ನು ಬೆಳಕಿನ ಶಕ್ತಿಯ ರೂಪದಲ್ಲಿ ಹೊರಹಾಕತೊಡಗುತ್ತದೆ. ಆಗ ನಮಗೆ ಬೆಳಕು ದೊರೆಯುತ್ತದೆ. ಉಷ್ಣತೆ ಸುಮಾರು ೩೪೦೦ಡಿಗ್ರಿ ಸೆಲ್ಸಿಯಸ್‌ನಷ್ಟಾಗುವವರೆಗೂ ಟಂಗ್‌ಸ್ಟನ್ ತಂತಿ ಕರಗುವುದಿಲ್ಲವಾದ್ದರಿಂದ ಬುರುಡೆ ಬಲ್ಬ್‌ಗಳಲ್ಲಿ ಟಂಗ್‌ಸ್ಟನ್‌ನನ್ನೇ ಹೆಚ್ಚಾಗಿ ಬಳಸುತ್ತಾರೆ. ಆಕಸ್ಮಾತ್ ಅದು ಕರಗತೊಡಗಿದರೂ ಅದನ್ನು ತಡೆಯಲೆಂದು ಬಲ್ಬಿನ ಬುರುಡೆಯೊಳಗೆ ಸಾರಜನಕವನ್ನೋ ಅಥವಾ ಆರ್ಗನ್ ಅನಿಲವನ್ನೋ ತುಂಬಿರುತ್ತಾರೆ. ಇದು ಬಲ್ಬಿನ ಬಾಳಿಕೆಯನ್ನೂ ಹೆಚ್ಚಿಸುತ್ತದೆ. ಹಾಗಾಗಿಯೇ ಬುರುಡೆ ಬಲ್ಬ್ ಉರಿಯುವಾಗ ಅದು ತುಂಬಾ ಬಿಸಿಯಾಗಿರುತ್ತದೆ, ಮುಟ್ಟಿದರೆ ಸುಟ್ಟುಬಿಡುತ್ತದೆ. ಬುರುಡೆ ಬಲ್ಬ್‌ಗಳಿಂದ ಬರುವ ಬೆಳಕನ್ನು ’ತಾಪದೀಪ್ತಿ’ ಎಂದೂ ಕರೆಯುತ್ತಾರೆ. ಹೆಸರೇ ಹೇಳುವಂತೆ ಇಲ್ಲಿ ವಿದ್ಯುತ್ ಶಕ್ತಿ ಉಷ್ಣಶಕ್ತಿಯಾಗಿ ಅದರಿಂದುಂಟಾದ ಶಾಖದಿಂದ ಬೆಳಕು ಹುಟ್ಟಿಕೊಳ್ಳುತ್ತದೆ.
ಅತಿಯಾದ ಶಾಖ ಬೇಕಾದ ಈ ಪ್ರಕ್ರಿಯೆಯಲ್ಲಿ ವಿದ್ಯುತ್ ಶಕ್ತಿ ತುಸು ಹೆಚ್ಚಾಗಿಯೇ ಖರ್ಚಾಗುತ್ತದೆ. ಇದಕ್ಕೆ ಪರ್‍ಯಾಯವಾಗಿ ತಯಾರಾದ ಇನ್ನೊಂದು ಬೆಳಕಿನ ಮೂಲವೆಂದರೆ ಅದೇ ನಮ್ಮ ಟ್ಯೂಬ್ ಲೈಟು. ಅಚ್ಚ ಕನ್ನಡದಲ್ಲಿ ಇದನ್ನ ಸ್ಫುರಣದೀಪ್ತಿ ಎಂದೂ ಕರೆಯುತ್ತಾರೆ. ಹೇಳಿದ್ದನ್ನ ತುಂಬಾ ನಿಧಾನವಾಗಿ ಅರ್ಥಮಾಡಿಕೊಳ್ಳುವವರನ್ನ ’ಟ್ಯೂಬ್ ಲೈಟ್’ ಎಂದು ಕರೆಯುತ್ತೇವಲ್ಲಾ, ಹಾಗೆಯೇ ಇದು ಸ್ವಿಚ್ ಒತ್ತಿದ ತಕ್ಷಣ ಹೊತ್ತಿಕೊಳ್ಳುವುದಿಲ್ಲವಾದರೂ, ವಿದ್ಯುತ್‌ನ್ನು ಕಡಿಮೆ ಬಳಸುತ್ತದೆ. ಟ್ಯೂಬ್‌ಲೈಟ್ ಎನ್ನುವುದು ಒಂದು ಉದ್ದವಾದ ಗಾಜಿನ ಕೊಳವೆಯಾಗಿದ್ದು ಅದರಲ್ಲಿ ಹೀಲಿಯಂನಂತಹ ಜಡಾನಿಲವೊಂದನ್ನು ಮತ್ತು ಪಾದರಸದ ಆವಿಯನ್ನು ತುಂಬಿರುತ್ತಾರೆ. ಕೊಳವೆಯ ಎರೆಡೂ ತುದಿಗಳಲ್ಲಿ ಒಂದೊಂದು ಲೋಹದ ಸುರುಳಿಗಳನ್ನಿಟ್ಟು ಸಂಪೂರ್ಣವಾಗಿ ಮುಚ್ಚಲಾಗಿರುತ್ತದೆ. ಆ ಸುರುಳಿಗಳಿಗೆ ವಿದ್ಯುತ್ತನ್ನು ನೀಡಿದಾಗ ಅವು ಬಿಸಿಯಾಗಿ ಎಲೆಕ್ಟ್ರಾನುಗಳನ್ನು ಬಿಡುಗಡೆಮಾಡುತ್ತವೆ. ಈ ಎಲೆಕ್ಟ್ರಾನುಗಳು ಕೊಳವೆಯೊಳಗಿರುವ ಪಾದರಸದ ಪರಮಾಣುಗಳಿಗೆ ಡಿಕ್ಕಿ ಹೊಡೆದು, ತಮ್ಮ ಶಕ್ತಿಯನ್ನು ಅವುಗಳಿಗೆ ನೀಡುತ್ತವೆ. ಹೀಗೆ ಪಡೆದ ಶಕ್ತಿಯನ್ನು ಪಾದರಸದ ಪರಮಾಣುಗಳು ನೇರಳಾತೀತ ವಿಕಿರಣದ ರೂಪದಲ್ಲಿ ಹೊರಹಾಕುತ್ತವೆ. ಈ ವಿಕಿರಣವನ್ನು ನಮ್ಮ ಕಣ್ಣು ಗುರುತಿಸಲಾರದು. ಆದ್ದರಿಂದ ಕೊಳವೆಯ ಒಳ ಮೇಲ್ಮೈಗೆ ಫಾಸ್ಪರ್ ಎಂಬ ವಿಶಿಷ್ಟ ವಸ್ತುವನ್ನು ಲೇಪಿಸಿರುತ್ತಾರೆ. ಇದು ನೇರಳಾತೀತ ವಿಕಿರಣವನ್ನು ಹೀರಿಕೊಂಡು ಅದನ್ನು ನಮಗೆ ಬೇಕಾದ ಬೆಳಕನ್ನಾಗಿ ಪರಿವರ್ತಿಸಿ ಹೊರಚೆಲ್ಲುತ್ತದೆ. ಇನ್ನುಳಿದಂತೆ ಟ್ಯೂಬ್‌ಲೈಟ್‌ನಲ್ಲಿರುವ ’ಸ್ಟಾರ್ಟರ್’ ಎಂಬ ಭಾಗ ಮೇಲೆ ವಿವರಿಸಿದ ಪ್ರಕ್ರಿಯೆಗೆ ಪ್ರಾರಂಭದಲ್ಲಿ ಬೇಕಾದ ಹೆಚ್ಚಿನ ಶಕ್ತಿಯನ್ನು ನೀಡಲು ಸಹಕರಿಸುತ್ತದೆ. ’ಚೋಕ್’ ಎಂಬ ಭಾಗ ಕೊಳವೆಯೊಳಗೆ ಪ್ರವಹಿಸುವ ಎಲೆಕ್ಟ್ರಾನ್‌ಗಳನ್ನು ನಿಯಂತ್ರಿಸಲು ಬಳಕೆಯಾಗುತ್ತದೆ. ಈ ದೀಪವು ಬುರುಡೆ ಬಲ್ಬಿಗಿಂತ ಬಹು ಪಟ್ಟು ಕಡಿಮೆ ವಿದ್ಯುತ್ತನ್ನು ಬಳಸಿಕೊಳ್ಳುತ್ತದೆ. ಈ ಬಲ್ಬು ಕೇವಲ ಬೆಳಕನ್ನು ಮಾತ್ರ ನೀಡುತ್ತದೆ, ಬಿಸಿಯಾಗುವುದಿಲ್ಲ.
ಇನ್ನು ದಕ್ಷತೆಯ ಬಗ್ಗೆ ಯೋಚಿಸುವುದಾದರೆ ಬರುಡೆ ಬಲ್ಬು ತಾನು ಬಳಸಿದ ವಿದ್ಯುಚ್ಚಕ್ತಿಯ ಕೇವಲ ೧೦% ನ್ನು ಮಾತ್ರ ಬೆಳಕನ್ನಾಗಿ ಪರಿವರ್ತಿಸುತ್ತದೆ. ಉಳಿದ ೯೦% ಉಪಯೋಗಕ್ಕೆ ಬರದ ಶಾಖವಾಗಿ ಅಪವ್ಯಯಗೊಳ್ಳುತ್ತದೆ. ಇದರ ಎದುರಿಗೆ, ಬಳಸಿದ ವಿದ್ಯುತ್‌ನ ೪೫% ರಷ್ಟು ಭಾಗವನ್ನು ಬೆಳಾಕಾಗಿ ಪರಿವರ್ತಿಸುವ ಟ್ಯೂಬ್‌ಲೈಟ್ ತುಂಬಾ ಮಿತವ್ಯಯಿ ಎನಿಸುತ್ತದೆ. ಇನ್ನು ಬುರುಡೇ ಬಲ್ಬುಗಳನ್ನೇ ನೇತುಹಾಕಿ ಅಭ್ಯಾಸ ಮಾಡಿಕೊಂಡಿರುವವರಿಗಾಗಿಯೇ ಈ ಟ್ಯೂಬ್‌ಲೈಟ್ ಕಾರ್‍ಯನಿರ್ವಹಿಸುವ ರೀತಿಯಲ್ಲೇ ಬೆಳಕನ್ನುತ್ಪಾದಿಸುವ, ನೋಡಲಿಕ್ಕೆ ಮತ್ತು ನೇತುಹಾಕಲಿಕ್ಕೆ ಬುರುಡೆ ಬಲ್ಬಿನಂತೆಯೇ ಇರುವ ಹಾಗು ೭೫% ರಷ್ಟು ದಕ್ಷತೆ ಹೊಂದಿರುವ ’ಕಾಂಪ್ಯಾಕ್ಟ್ ಫ್ಲೋರೊಸೆಂಟ್ ದೀಪ’ (ಸಿ.ಎಫ್.ಎಲ್)ಗಳು ಸಹ ಈಗ ಮಾರುಕಟ್ತೆಯಲ್ಲಿ ಲಭ್ಯವಿವೆ. ಬೆಲೆ ಕೊಂಚ ಹೆಚ್ಚಾದರೂ ಅತೀ ಕಡಿಮೆ ವಿದ್ಯುತ್ ಬಳಸುವುದರೊಂದಿಗೆ ದೀರ್ಘಕಾಲ ಬಾಳಿಕೆ ಬರುತ್ತವಾದ್ದರಿಂದ ಕೊಟ್ಟ ಬೆಲೆ ಬಡ್ಡಿ ಸಮೇತ ವಸೂಲಾಗಿಬಿಡುತ್ತದೆ.
ಇವೆಲ್ಲವಕ್ಕಿಂತ ಅತೀ ಹೆಚ್ಚು ದಕ್ಷತೆ ಹೊಂದಿರುವ, ಈಗೀಗ ಮಾರುಕಟ್ಟೆಗೆ ಕಾಲಿಟ್ಟಿರುವ ಎಲ್.ಇ.ಡಿ ಬಲ್ಬುಗಳಂತೂ ಬಳಸಿದ ವಿದ್ಯುತ್ತಿನ ೯೦%ರಷ್ಟನ್ನು ಬೆಳಕಾಗಿ ಪರಿವರ್ತಿಸುತ್ತವೆ. ಅದ್ಭುತ ಕಾರ್‍ಯವೈಖರಿ ಹೊಂದಿರುವ ಇವು ಸಿ.ಎಫ್.ಎಲ್‌ಗಳಿಗಿಂತ ಕೊಂಚ ದುಬಾರಿ ಎನಿಸಿದರೂ ಅವುಗಳಿಗಿಂತಲೂ ಹೆಚ್ಚು ದಕ್ಷತೆ ಮತ್ತು ಐದು ಪಟ್ಟು ಅಧಿಕ ಬಾಳಿಕೆ ನೀಡುವುದರಿಂದ ಆ ಹೆಚ್ಚಿಗೆ ಕೊಟ್ಟ ಬೆಲೆಗಿಂತ ಹೆಚ್ಚು ಲಾಭ ನಮ್ಮದಾಗುತ್ತದೆ. ನಿಮಗೇ ಗೊತ್ತಿರುವಂತೆ ಬಳಕೆದಾರರು ಹೆಚ್ಚಾದಂತೆ ಬೆಲೆ ಇಳಿಯತೊಡಗುತ್ತದೆ. ಭವಿಷ್ಯದಲ್ಲಿ ಸರ್ಕಾರಕ್ಕೂ ಇದರ ಬೆಲೆ ಗೊತ್ತಾಗಿ ’ಎಲ್.ಇ.ಡಿ ಭಾಗ್ಯ’ ಯೋಜನೆ ಬಂದರೂ ಆಶ್ಚರ್ಯಪಡಬೇಕಾಗಿಲ್ಲ; ಆಗ ನಮ್ಮ ಅದೃಷ್ಟಕ್ಕೆ ಎಲ್ಲೆಯೇ ಇರುವುದಿಲ್ಲ, ಒಟ್ಟಿನಲ್ಲಿ ಹೇಳುವುದಾದರೆ ಎಲ್.ಇ.ಡಿ ಬಳಸಿ, ಬೆಲೆ ಇಳಿಸಿ, ವಿದ್ಯುತ್ ಉಳಿಸಿ ಅದರಿಂದ ನಮ್ಮ ಜೇಬು ಸೇಫ್, ಆಮೇಲೆ ನಾವು ಸೇಫ್, ನಮ್ಮ ಭೂಮಿಯೂ ಸೇಫ್.
*****