''ಇವತ್ತು ಹಬ್ಬ ಎಷ್ಟ್ ಕೆಲಸ ಇರ್ತು ಇವತ್ತಾದ್ರೂ ಸ್ವಲ್ಪ ಬೇಗ ಬೇಗ ಮಾಡನಹೇಳಿಲ್ಲೆ, ಇವತ್ತೂ ತೋಟಕ್ಕ್ ಹೋಗಿ ಕೂತ್ಕೈನ್ದ ಎಲ್ಲರ ಮನೆಲೂ ಪೂಜೆ ಮುಗಿದರೆನಮ್ಮನೇಲಿ ಇನ್ನೂ ಸ್ನಾನವೇ ಆಗಲ್ಲೆ, ಎಲ್ಲ ನಾ ಒಬ್ಬಳೇ ಮಾಡಿ ಸಾಯಕ್ಕು ''ಹಬ್ಬದ ತಯಾರಿ ಮಾಡ್ತಾ ಅಜ್ಜಿಯ ಸುಪ್ರಭಾತ ಸಾಗ್ತಾ ಇತ್ತು, ನಿಧಾನಕ್ಕೆ ಒಳಗಡೆಬಂದ ತಾತ, ಪೂಜೆ ಆತನೇ ಮಂತ್ರ ಕೇಳ್ತಾ ಇತ್ತು ಅಂತ ಕೇಳಿದ್ರು ನನ್ನ ಮುಖನೋಡಿ ನಗ್ತಾ, ಹು ಈಗ ಬಂದ್ರ, ಬೇಗ್ ಬೇಗ್ ಸ್ನಾನ ಮಾಡಿ, ಇನ್ನು ಹಸು, ಕರುಎಲ್ಲ ಪೂಜೆ ಮಾಡಕ್ಕು ಬೇಕಾದಷ್ಟು ಕೆಲಸ ಇದ್ದು '' ಇದು ದೀಪಾವಳಿ ಹಬ್ಬದಲ್ಲಿ ನಮ್ಮ ತಾತನ ಮನೇಲಿ ದೀಪಾವಳಿಲಿ ನಡೆಯೋ ಹಬ್ಬದ ಮಂತ್ರ.
ನಾವೆಲ್ಲ ಎದ್ದು ರೆಡಿ ಆಗಿ ಬರೋದ್ರೊಳಗೆ ಅಜ್ಜ ಗೋಪೂಜೆ ಮಾಡೋಕೆ ಕೊಟ್ಟಿಗೆಗೆ ಬಂದ್ರು. ನಾನು ಅಕ್ಕ ಚೆಂಡು ಹೂವಿನ ಹಾರಗಳನ್ನ ಹಿಡಿದು, ಇದುಲಕ್ಷ್ಮಿ ಗೆ, ಇದು ಗೌರಿ ಗೆ ಇದು ಪುಟ್ಟಿ ಕರಕ್ಕೆ, ಇದು ಆ ಎಮ್ಮೆಗೆ ಅಂತ ಹಾರದ ಹಂಚಿಕೆಯಲ್ಲಿ ಬ್ಯುಸಿ. ಎಲ್ಲಾ ಹಸು ಕರುಗಳು ನಮ್ಮನ್ನೇ ನೋಡ್ತಾ ಮುಖ ಅಲ್ಲಾಡಿಸ್ತಾ ಏನೋ ಸಂಭ್ರಮ ಪಡ್ತಾ ಇದ್ವು, ಹಾರ ಹಾಕೋದ್ರಲ್ಲಿ ನಾವುಗಳು ಹರ ಸಾಹಸಮಾಡಿ ಹಾಕಿದ್ದಾಯ್ತು. ಅಜ್ಜಿ ಎಲ್ಲ ದನ ಕರುಗಳಿಗೆ ಕುಂಕುಮ ಹಚ್ಚಿದ್ರು. ಗೋವುಗಳು ಮನೆಯಿಂದ ಹೊರಟಾಯ್ತು, ಪಕ್ಕದ ಮನೆಯ ಗೋವುಗಳೂ ಬಂದಾಯ್ತು, ನಾವೆಲ್ಲಾ ಗೋವಿನ ಹಿಂದೆ ಹೆಜ್ಜೆ ಹಾಕಿ ಹೊರಟಾಯ್ತು. ಇಂದು ದಿನದ ಹಾದಿಯಲ್ಲಿ ಗುಡ್ಡಕ್ಕೆ ಹೋಗದೆ ಹಸುಗಳು ಊರ ಕಡೆಗೆ ಸಾಗ ಬೇಕಿತ್ತು. ಸ್ವಲ್ಪ ದೂರ ಹೋದಮೇಲೆ ಗಣಪತಣ್ಣನ ಮನೆ ಹಸುಗಳು ಸೇರಿ ಕೊಂಡಾಯ್ತು.
ಪಕ್ಕದ ಮನೆ ಶಾಂತಕ್ಕ '' ಏನ್ರೆ ಅಕ್ಕ ತಂಗಿ ಇಬ್ರುವ ಅಜ್ಜನ್ ಮನೆಗೆ ಯಾವಾಗ ಬಂದಿದ್ದು ಅಮ್ಮ ಅರಮಾಗ್ ಇದ್ಲ, ಆಮೇಲೆ ನಮ್ಮನಿಗ್ ಬನ್ನಿ '' ಅಂತ ಕೂಗಿದ್ರು. ನಮ್ಮಿಬ್ಬರಿಗೆ ಖುಷಿ, ಇಷ್ಟು ಜನರ ಮಧ್ಯೆ ನಮ್ಮನ್ನ ಮಾತಾಡಿಸಿದ್ರು ಅತ ಹಿಗ್ಗು. ಹೀಗೆ ದಾರಿಯುದ್ದಕ್ಕೂ ಹೆಂಗಸರ ಅಡಿಗೆ ಮನೆ ವಿಷಯ, ಗಂಡಸರ ತೋಟದವಿಚಾರ ವಿನಿಮಯ ಸಾಗಿತ್ತು.
ಒಬ್ಬೊಬ್ಬರ ಮನೆಯ ಹಸುಗಳ ನೋಡೋದೇ ಖುಷಿ. ಕೊಡು ತುಂಬಾ ಹೂವು. ಅಲ್ಲಿದ್ದ ಹುಡುಗರಿಗೆ ಒಂತರಾ ಖುಶಿ, ಹಸುಗಳನ್ನ ಅಟ್ಟಿಸಿಕೊಂಡು ಹೋಗಿ, ಕೊರಳಲ್ಲಿದ್ದ ಸರ ಕಿತ್ತುಕೊಂಡು ಬರುವುದು ಅದೇನೋ ಮಜಾ ಆ ಹುಡುಗರಿಗೆ. ಅಂತು ಸುಮಾರು ೧೨-೧೫ ಮನೆಗಳ ಹಸುಗಳನ್ನೆಲ್ಲಾ ಒಂದೇ ಗುಡ್ಡಕ್ಕೆ ಬಿಟ್ಟು, ಅಲ್ಲಿ ದೇವರಿಗೆ ಕಾಯಿ ಒಡೆದು ಗುಡ್ಡದಲ್ಲಿ ಒಂದು ಕಡೆ ಎಲ್ಲರೂ ಸೇರಿ ಆಯಿತು.
ಅಲ್ಲಿ ಎಲ್ಲರೂ ಸೇರಿ ಮನೆಯಿಂದ ತಂದ ಅವಲಕ್ಕಿ, ಕಾಯಿ ಬೆಲ್ಲ ಸೇರಿಸಿ, ಬಾಳೆ ಎಲೆಯಲ್ಲಿ ತಿಂದು, ಸ್ವಲ್ಪ ಹೊತ್ತು ಹರಟೆ ಹೊಡೆದು ಮನೆ ಕಡೆ ಸಾಗುತ್ತಿತ್ತು ನಮ್ಮಪಯಣ. ತಾತನ ಮನೆಯಲ್ಲಿ ಹಬ್ಬ ಮುಗಿಸಿ ಅವತ್ತೇ ನಮ್ಮ ಮನೆಗೆ ವಾಪಾಸಾದ್ವಿ. ಸಾಯಂಕಾಲ ಅಪ್ಪಯ್ಯ ಹಬ್ಬ ಕಳಿಸಲಿಕ್ಕೆ (ಬಲೀಂದ್ರ ನ್ನ) ತಯಾರಿ ಮಾಡ್ಕೋತಾ ಇದ್ರು. "ಹಬ್ಬ ಹಬ್ಬ ಮಲ್ಲಣ್ಣ, ಇಬ್ಬರಿಗೊಂದ್ ಹೋಳಿಗೆ. ಹಬ್ಬದ ಮರ್ದಿನ ರಾಗಿರಬ್ಬಳಿಗೆ" ''ಇ೦ದ್ ಹೋಗ್ ಮುಂದ್ ಬಾರೋ ಬಲಿವೆಂದ್ರಾ''ಅಂತ ಅಪ್ಪಹೇಳ್ತಾಯಿದ್ರೆ ನಾವು ಧ್ವನಿಗೂಡಿಸದ್ದೂ ಆಯ್ತು.
ಇನ್ನೂ ಹಬ್ಬ ಮುಗಿದಿಲ್ಲ, ಇನ್ನೂ ಹಬ್ಬ ಹಾಡೋರು (ಅಂಟಿಗೆ ಪಿಂಟಿಗೆ) ಬರಬೇಕಲ್ಲ, ಇದಕ್ಕೋಸ್ಕರ ಮಧ್ಯರಾತ್ರಿ ವರೆಗೂ ಕಾದು ಅವರು ಬಂದು ಹೋದಮೇಲೇ ಮಲಗೋದು. ಅಮ್ಮಂಗೆ ಅಪ್ಪಂಗೆ ಮೊದಲೇ ಎಚ್ಚರಿಕೆ ಕೊಟ್ಟಾಯ್ತು, ಅವರು ಬಂದಾಗ ಏಳಿಸ್ದೆ ಇದ್ರೆ ಮತ್ತೆ ಸುಮ್ನಿರಲ್ಲ ನೋಡಿ ಅಂತ. ಅಷ್ಟಕ್ಕೂ ನಾನು ಅಕ್ಕ ಆ ದಿನ ನಿದ್ದೇನೆ ಮಾಡ್ತಿರಲಿಲ್ಲ. ಎಲ್ಲಾದರು ಬಂದು ಹೋಗಿ ಬಿಟ್ರೆ, ನಮ್ಮನ್ನ ಏಳಿಸದಿದ್ರೆ ಅಂತ.
ಹಬ್ಬ ಹಾಡೋರು ಅಂದ್ರೆ ಏನು ಗೊತ್ತಾ, ಊರಿನ ಯುವಕರು ಒಂದು ತಂಡ ಕಟ್ಟಿಕೊಂಡು ಮನೆ ಮನೆಗೆ ತೆರಳಿ ಅರೆ ನಿದ್ರೆಯಲ್ಲಿರುವ ನಮ್ಮನ್ನ ಏಳಿಸಿ, ''ದೀಪವನ್ನು '' ಹಚ್ಚಿ, ಆ ದೀಪವನ್ನ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಹೀಗೆ ಹಚ್ಚಿದ ದೀಪವನ್ನ ಆರಲು ಬಿಡುವುದಿಲ್ಲ, ಎಂಥಹ ಅರ್ಥ ಪೂರ್ಣ, ಸಿರಿವಂತ ಸಂಪ್ರದಾಯ ಅಲ್ಲವೇ. ಹೀಗೆ ಮನೆಗಳಿಗೆ ಬಂದ ತಂಡ ತಮ್ಮ ಜನಪದ ಹಾಡಿನಿಂದ ನಮ್ಮನ್ನ ಖುಶಿ ಪಡಿಸುತ್ತಾರೆ. ಮನೆಯ ಒಡೆಯ ಕೊಟ್ಟ ಸ್ವಲ್ಪ ಕಾಸು, ಹಬ್ಬದ ಸಿಹಿ ತಿಂಡಿಗಳನ್ನ ತೆಗೆದು ಕೊಂಡು ಮುಂದಿನ ಮನೆಗೆ ಹೋಗೋದು ನಮ್ಮೂರಿನ ದೀಪಾವಳಿ ಹಬ್ಬದ ಪದ್ದತಿ. ಹಬ್ಬ ಹಾಡೋದು ಕೇಳೋಕೆ ಎಂತಾಮಜಾ ಗೊತ್ತಾ. ನಾನಂತು ಇನ್ನೊಂದು ಹಾಡು ಹೇಳಿ ಅಂತ ಹೇಳಿಸಿ ಎರಡು ಹಾಡು ಜಾಸ್ತಿ ಹೇಳಿದ ಮೇಲೇನೆ ಹೋಗೋಕೆ ಬಿಡೋದು. ಅಮ್ಮ ''ಹಾಡು ಜಾಸ್ತಿ ಹೇಳ್ದಂಗು ಜಾಸ್ತಿ ದುಡ್ಡು ಕೊಡಿ ಕೇಳ್ತಾ ಅರ್ಥಾಗ್ತಲ್ಲೇ ಇವಳಿಗೆ'' ಅಂದ್ರೆ ನಮ್ಮಪ್ಪನಂಗೆ ಸಪೋರ್ಟ್. ಅಮ್ಮನ ಮಾತಿಗೆ ಕಿವಿಯೇ ಇರಲಿಲ್ಲ.
ಅಂಟಿಗೆ ಪಿಂಟಿಗೆಯವರು ಮನೆಗೆ ಬಂದಾಗ ನಮ್ಮನ್ನ ಏಳಿಸುವ ಪದ
*****
ಬಾಗಿಲ ತೆಗಿಯೋ ಮನೆ ಒಡಿಯಾ
ಹೊನ್ನಿನ ಬಾಗಿಲು ಕ೦ಚಿನ ಬಾಗಿಲು
ಬಾಗಿಲ ತೆಗಿಯೋ ನನ್ನೊಡಿಯಾ
ಬಾಗಿಲ ತೆಗಿಯೋ ಮನೆ ಒಡಿಯಾ
*****
ಲೇಗಿಣಿ ಲೇಗಿಣಿಯೇ ಮುತ್ತಿನ ಭಾಗಿಣಿ ಭಾಗಿಣಿಯೇ
ಭಾಗಿಣಿ ಭಾಗಿಣಿಯೇ ಚಿನ್ನದಾ ಲೇಗಿಣಿ ಲೇಗಿಣಿಯೇ
*****
ಇದೆಲ್ಲಾ ನನ್ನ ಬಾಲ್ಯದ ದಿನಗಳಲ್ಲಿ ದೀಪಾವಳಿ ಆಚರಿಸುತ್ತಿದ್ದ ಪರಿ, ಊರಿಗೆ ಈಹಬ್ಬಕ್ಕೆ ಹೋಗದೆ ವರುಷಗಳೇ ಕಳೆದಿವೆ. ಸ್ವಲ್ಪ ನೋವಾಯ್ತು ಯಾಕೋ. ಇಲ್ಲಿಪಟಾಕಿಗಷ್ಟೇ ಸೀಮಿತ ಆಗಿರೋ ದೀಪಾವಳಿ, ಹಚ್ಚಿರುವ ಹಣತೆ ನನ್ನನ್ನಅಣಕಿಸಿದಂತೆ ಭಾಸವಾಯ್ತು.
ಹಬ್ಬದ ಶುಭಾಶಯಗಳು ಎಲ್ಲರಿಗೂ. ಮನದ ಕತ್ತಲೆ ಕಳೆದು, ಬೆಳಕು ಹರಿದುಬರಲಿ.
-ಸವಿತಾ ಗುರುಪ್ರಸಾದ್
Nice writing Savitha.
Keep it up.