ಹಾಯ್ ಹೇಗಿದ್ದೀಯಾ…?
ಇವತ್ತು ನಿನ್ನದೇ ಇಷ್ಟದ ಹಬ್ಬ ದೀಪಾವಳಿ. ಪ್ರತಿ ದೀಪಾವಳಿಗೊಮ್ಮೆ ಮನದ ಮನೆಯ ದೀಪ ಬೆಳಗಿ ಇಷ್ಟದ ಮಾತುಗಳ ಜೊತೆಗೆ ಕಷ್ಟದ ಕರ್ಮಗಳನ್ನು ತೊರೆದು ನನ್ನ ಮನಸ್ಸನ್ನ ಗಟ್ಟಿ ಮಾಡುತ್ತಿದ್ದೀಯ ನೀನು. ನೀನಿಲ್ಲದ ಮೇಲು ಈಗಲೂ ಹಾಗೆ ಇದ್ದೇನೆ. ದೇವರ ನೆನೆಯೋದನ್ನ ಬಿಟ್ಟು ಸುಮಾರು ವರ್ಷಗಳಾಯಿತು, ಬದಲಿಗೆ ನೀನು ನೆನಪಾಗುತಿ. ಆಸರೆಯ ಅಡಿಪಾಯ ಮುರಿದು ಬಿದ್ದಮೇಲೆ ಶವದ ರೂಪ ತಾಳಿದೆ ಈಗ ಈ ಹೃದಯ. ವರ್ಷದ ಹಬ್ಬಕ್ಕೆ ದೀಪ ಹಿಡಿದು ಶುಭಾಶಯ ಕೋರುವ ನಿನ್ನದೊಂದು ಪುಟ್ಟ ಪೋಸ್ಟು ನನ್ನ ಮೋಬೈಲ್ ನ ಬಯಲಿನಲ್ಲಿ ನಲಿಯುತ್ತಿತ್ತು. ಅದೊಂದು ಖುಷಿ ಹಬ್ಬಕ್ಕಿಂತ ಹೆಚ್ಚಿತ್ತು ನಂಗೆ,
ಆದರೆ ಇದಕೆಲ್ಲ ಈಗ ಸಮಯವಿಲ್ಲ ಅನ್ನೋ ಈ ನಿನ್ನ ಮಾತು, ಅದೆಷ್ಟೂ ಎತ್ತರಕ್ಕೆ ಬೆಳೆದೆ ನೀನೂ ಅನ್ನೋ ಖುಷಿ ಜೊತೆ ಎಲ್ಲೋ ಒಂದ್ ಕಡೆ ನೋವು ಇದೆ.
ಈ ನಿನ್ನ ಮಾತಿಗೆ ಕಥೆಯೊಂದು ನೆನಪಾಗುತ್ತೆ.
ಬೀದಿಗೆ ಬೆಳಕಿಡುವ ದೀಪಕೆ ತನ್ನ ಬುಡದ ಕತ್ತಲ್ಲನ್ನೂ ದೂರ ಮಾಡಲಾಗಲಿಲ್ಲ, ಅದರ ಕಷ್ಟಕ್ಕಾದ ಇನ್ನೊಂದು ದೀಪ ಅದನ್ನ ಅರಸಿ ಬಂದಾಗ ಅದರ ಬುಡ ಬೆಳಗಿತು. ಆಸರೆ ಅನ್ನೋದು ಒಂದಕ್ಕೊಂದು ಜೋಡಿಸುವ ಸಂಬಂಧ. ಅದೇಷ್ಟೋ ವರ್ಷ ಆಯಿತು ನಿನ್ನ ಕಂಡು. ನೀ ಬಿಟ್ಟು ಹೋದ ಮಾತಿನ ಅರ್ಥಕ್ಕೆ ಕೋಪದ ಕವಿತೆಗೇನು ಕೆಲಸ ಹೇಳು. ಬರೆದು ದಾಹ ತೀರಿಸಿಕೊಳ್ಳವ ಹವಣಿಕೆಯೂ ಈಗ ನನ್ನಲಿಲ್ಲ.
ಪ್ರತಿಯೊಂದು ಹಬ್ಬದ ಸಂಭ್ರಮಕೆ ಹೀಗೆ ನಿನಗೊಂದು ಪುಟ್ಟ ಸಂದೇಶ ಬರೆದು ಪುಟ ಪುಟದಷ್ಟು ನಿನ್ನ ಬೈಯುತ್ತಲೇ ಬರೆಯುಬೇಕು ಅಂದಾಗಲೆಲ್ಲ ನಿನ್ನ ಮೇಲಿರುವ ಸಿಟ್ಟನ್ನು ಪುಟಕ್ಕಿಳಿಸುದು ವ್ಯರ್ಥ ಅಂತ ಅನಸಿ ಸುಮ್ಮನಾಗಿಬಿಡುತ್ತೇನೆ.
ದೀಪದ ರೂಪದ ಹುಡುಗಿ ನೀನೂ ಬೆಳಗಬೇಕಿತ್ತು, ನಾನು ಸಂಭ್ರಮಿಸಬೇಕಿತ್ತು. ಬದಲಿಗೆ ಸುಡುವ ನಿನ್ನ ಇನ್ನೊಂದು ರೂಪ ನನಗಿಷ್ಟ ಆಗಲಿಲ್ಲ. ಕತ್ತಲು ಅನ್ನೋದು ಕಣ್ಣಮುಚ್ಚಿದಾಗ ಮಾತ್ರ ಆವರಿಸುತ್ತೇ ಅಂತ ಅನ್ನಕೋಳ್ಳುವಷ್ಟು ಮುಗ್ಧ ಮನಸ್ಸು ನಂದು. ನೀ ಬಿಟ್ಟ ಹೋದ ಮೇಲೆ ಗೊತ್ತಾಗಿದ್ದು ಕತ್ತಲು ಅನ್ನೋದು ಪ್ರೀತಿಯ ಪಾತ್ರಕ್ಕಿರುವ ಹೊದಿಕೆ ಅನ್ನೋದು. ನೀ ಮುಚ್ಚಿಹೋದ ಮೇಲೆ ಹೊದಿಕೆಯ ಹೊದ್ದು ಕತ್ತಲ್ಲದ ಕಹಿನೆರಳಿನಲ್ಲಿ ಕನಸಬಿತ್ತಿ ಬದುಕುತ್ತಿದ್ದೇನೆ. ಅತೀಯಾದ ಪ್ರತಿ ಪ್ರೀತಿಯೂ ವಿಷದ ಸಮ ಅನ್ನೋ ನಿಜವನ್ನ ನೀನು ರುಜುವಾತು ಮಾಡಿಆಯಿತು. ಇಷ್ಟಾದರೂ ಪ್ರತಿ ದೀಪಾವಳಿಗೋಮ್ಮೆ ನಿನ್ನ ಹೆಸರಿಗೊಂದು ದೀಪ ಹಚ್ಚಿ ನೆನೆಯುತ್ತೇನೆ.ಜೊತೆಗೆ ಹೀಗೆ ಗೀಚುತ್ತೇನೆ.
“ನಿನ್ನ ಹೆಸರಿನಲ್ಲಿ
ಹಬ್ಬಕ್ಕೆ ಹಚ್ಚಿಟ್ಟ ದೀಪ
ನಿನ್ನದೇ ರೂಪ ಹೋಲುತ್ತಿದೆ
ಗಾಳಿಯ ಮಾತಿಗೆ ತಲೆದೂಗುತಿದೆ”
ಹೀಗೆ ನಿನ್ನ ಬಗ್ಗೆ ಬರೇದಾಗಲೆಲ್ಲ ನನ್ನ ಕಿರು ಕೋಪ ಸ್ವಲ್ಪಮಟ್ಟಿಗೆ ತಣ್ಣಾಗಾಗುತ್ತೇ ಅನಕೋತೀನಿ. ಗಾಳಿಯ ಸುದ್ದಿಗೆ ನೀನೂ ನನ್ನ ಬಗೆಗಿನ ಅಭಿಪ್ರಾಯಗಳನ್ನ ಹಾಳೆಯಂತೆ ಹರಿದು ಹಾಕಿ. ಯಾರೋ ಏನೋ ಹೇಳಿದರು ಅನ್ನೋ ನಿನ್ನ ಸ್ವಂತಿಕೆಯ ವಿಚಾರಗಳನ್ನ ವಿರೂಪಗೊಳಿಸಿ, ನನ್ನೆದುರಿಗೆ ನೀನಾಡಿದ ಇನ್ನಾರದೋ ಸಂಭಾಷಣೆ ನನಗಿಷ್ಟವಾಗಲಿಲ್ಲ. ಅದಕ್ಕೆ ಕಡೆಗೆ ನಿನಗೆಂದೂ ಸಂದೇಶ ಕಳಿಸಿ ಸುಮ್ಮನಾಗಿಬಿಟ್ಟೆ.
ಅದೊಂದು ಮಾತಿಗೆ ನೀನೂ ಇಷ್ಟದೊಡ್ಡ ನಿರ್ಣಯಕ್ಕೆ ಇಳಿಯುತ್ತಿ ಅಂತ ಅನಕೊಂಡಿರಲಿಲ್ಲ.
ಈಗಲೂ ಅದೇಷ್ಟೂ ಇಷ್ಟ ಪಡುತ್ತಿನಿ ನಿನ್ನ ಅನ್ನೋದು ನನಗೆ ಮಾತ್ರ ಗೊತ್ತು. ನೀ ದೂರದಿದ್ದರು ಪರಾವಾಗಿಲ್ಲ. ನಾನು ನಿನನ್ನ ಇನ್ನೆಂದಿಗೂ ದೂರುವುದಿಲ್ಲ. ನಿನ್ನ ಈ ಕೋಪ ನನ್ನಷ್ಟೇ ಅಲ್ಲ ನಿನ್ನನ್ನು
ಸುಡುತ್ತೇ. ನೀ ಕೋಪಿಸಿಕೊಂಡರೇ ಚೆನ್ನಾಗಿ ಕಾಣ್ತೀಯಾ ಅಂತ ಅನ್ನೋ ಸಂಭಾಷಣೆ ಅದ್ಯಾರ ಬರೇದರೋ ಗೊತ್ತಿಲ್ಲ. ಕೋಪದ ವಿರೂಪದ ನಿಜ ಈಗ ನಿನ್ನಲ್ಲಿ ಎದ್ದು ಕಾಣುತ್ತಿದೆ.
ಆರುವ ಮುನ್ನ ದೀಪ ಅತಿಯಾಗಿ ಉರಿಯುತ್ತೆ ಎಂಬಂತೆ. ಅರಿತು ಬಾಳುವ ಮುನ್ನ ಬಿರುಕು ಮೂಡಿಸಿ ದೂರಸರಿದ ನಿನಗೂ ನನ್ನಂಥದೇ ಅಭಿಪ್ರಾಯಗಳು ನಿನ್ನಲ್ಲೂ ಮೂಡಿದರೆ,
ಬರೆದು ಕಳಿಸು ಓದಿಯಾದರೂ ಖುಷಿಪಡುತ್ತೇನೆ.
ಇಷ್ಟಾದರೂ ನೀನು ನನ್ನೊಳಗಿನ ಹಣತೆಯ ಬೆಳಕಿನ ಬೆರಗು. ಇನ್ನಾರದೋ ಮೇಲಿನ ಕೋಪಕ್ಕೆ ನಿನ್ನ ಕಣ್ಣು ಕೆಂಪಾಗಿಸಬೇಡ. ನನ್ನನ್ನೇ ಬೈದು ನಿನ್ನ ಕೋಪ ಇಂಗಿಸಿಕೋ, ಅದೇನೂ ನನಗೆ ಹೊಸದಲ್ಲ .ಬೈದಾದ ಮೇಲಾದರೂ ನಿನಗೆ ನನ್ನ ಮೇಲಿನ ಪ್ರೀತಿ ಪ್ರತಿಧ್ವನಿಸಬಹುದೇನೋ…?
ಬೆಳಕಿನ ಹಬ್ಬಕೆ
ನಿನ್ನನ್ನು ಕೆಣಕಿ ಬರೆದದ್ದಕ್ಕೆ ಕ್ಷಮೆ ಇರಲಿ.
ನನ್ನದೊಂದು ಪುಟ್ಟ ಶುಭಾಶಯಗಳೊಂದಿಗೆ……
-ಮಹಾಂತೇಶ್ ಯರಗಟ್ಟಿ