ಪಂಜು-ವಿಶೇಷ

ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ..: ವಿನಾಯಕ ಅರಳಸುರಳಿ

ದೀಪಾವಳಿ ಮರಳಿ ಬಂದಿದೆ. ಆಫೀಸಿನ ಬಾಸಿನ ಟೇಬಲ್ ಮೇಲೀಗ ರಜೆಯ ಅರ್ಜಿಗಳೆಲ್ಲ ನಾ ಮೊದಲು, ತಾ ಮೊದಲು ಎಂದು ತಳ್ಳಾಡುತ್ತಾ ಸಾಲಾಗಿ ನಿಂತಿವೆ. ಯಾರಿಗೆ ಕೊಡುವುದು, ಯಾರಿಗೆ ಬಿಡುವುದು ಎಂದು ಯೋಚಿಸುತ್ತಿರುವಾಗಲೇ ಅವರ ಹೆಂಡತಿ ಕಾಲ್ ಮಾಡಿದ್ದಾರೆ. ‘ಹಬ್ಬಕ್ಕೆ ಊರಿಗೆ ಹೋಗಲಿಕ್ಕಿದೆ. ಟಿಕೇಟು ಬುಕ್ ಮಾಡೋದು ಮರೀಬೇಡಿ!” ಎಂದು ನೆನಪಿಸಿದ್ದಾಳೆ. ಹೀಗೆ ಬಾಸೆಂಬ ಬಾಸೇ ರಜೆ ಹಾಕಿ ಹೋದ ಆಫೀಸಿನಲ್ಲಿ ಕೆಲವರಿಗಷ್ಟೇ ರಜೆ ಮಂಜೂರಾಗಿದೆ. ಅವರೆಲ್ಲ ಸಂಭ್ರಮದಲ್ಲಿ ಊರಿನ ಬಸ್ಸು ಹತ್ತುತ್ತಿದ್ದರೆ ರಜೆ ಸಿಗದ ಹತಾಷರು ಹೊರಟವರಿಗೆ ಟಾಟಾ ಹೇಳಿ ಬೈಕು, ಬಸ್ಸುಗಳ ಹತ್ತಿ ತಮ್ಮ ತಮ್ಮ ಏರಿಯಾಗಳತ್ತ ಹೊರಟಿದ್ದಾರೆ.

ದೀಪಾವಳಿ ಮರಳಿಬಂದಿದೆ: ಊರಿಗೆ ಹೊರಟ ಬಸ್ಸುಗಳಿಗೆ, ಹಳ್ಳಿಯ ಹಂಚು ಮನೆಗೆ, ಪಟ್ಟಣದ ಕಾಂಕ್ರೀಟು ಕಟ್ಟಡಕ್ಕೆ, ಊರಿನ ಗೂಡಂಗಡಿಗೆ, ಹೊಸೂರಿನ ಪಟಾಕಿ ಸಂತೆಯ ಬೀದಿಗೆ, ವರಲೆ ಹಿಡಿದ ದ್ವಾರಬಾಗಿಲಿಗೆ, ಬಣ್ಣ ಮಾಸಿದ ಹೊಸಿಲಿಗೆ, ವರುಷದಿಂದ ಮೂಲೆಯಲ್ಲಿದ್ದ ಹಣತೆಗಳಿಗೆ, ಅಮ್ಮನ ಕೈಲಿ ಸಗಣಿ-ನೀರು ಬಳಿಸಿಕೊಂಡ ಅಂಗಳಕ್ಕೆ, ಕೊಂಬು ಕುಣಿಸುತ್ತಾ ಸ್ನಾನ ಮಾಡಿಸಿಕೊಳ್ಳುತ್ತಿರುವ ಕೊಟ್ಟಿಗೆಯ ದನಕರುಗಳಿಗೆ, ಸರಕಾರಿ ಶಾಲೆಯ ಫೋರನೊಬ್ಬ ಮಾಸ್ತರಿಗೆ ಕಾಣದಂತೆ ಕೋವಿ-ಮದ್ದು ಮುಚ್ಚಿಟ್ಟುಕೊಂಡಿರುವ ಪಾಟಿ ಚೀಲಕ್ಕೆ, ಪಟಾಕಿ ಹೊಡೆಸುತ್ತಿರುವ ಪುಟ್ಟುವಿನ ಕೈಗೆ, ಖಾಲಿಯಾದ ಅಪ್ಪನ ಜೇಬಿಗೆ… ದೀಪಾವಳಿ ಎಲ್ಲೆಡೆಗೂ ಬಂದಿದೆ!

ದೀಪಾವಳಿ ಬರಲಿರುವ ಸುಳಿವು ಎಲ್ಲರಿಗಿಂತ ಮೊದಲು ಊರಿನ ಚಿಣ್ಣರಿಗೆ ಸಿಕ್ಕಿದೆ. ಉಪೇಂದ್ರಣ್ಣನ ಅಂಗಡಿಯ ಪಡಸಾಲೆಯಲ್ಲಿ ಕೋವಿ-ಮದ್ದುಗಳ ಮಾಲೆಗಳು ನೇತಾಡತೊಡಗಿದ ದಿನ ಸಂಜೆಯೇ ಊರಿನ ಪೋರರೆಲ್ಲ ತಮ್ಮ ತಮ್ಮ ಅಮ್ಮಂದಿರ ಮುಂದೆ ಹಾಜರಾಗಿದ್ದಾರೆ . “ಪಟಾಕಿ ತಕಂಬುಕ್ ದುಡ್ ಕೊಡೇ” ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅವರಲ್ಲಿ ಕೆಲವರಿಗೆ ಸುಲಭವಾಗಿ ಸಿಕ್ಕ ಹಣ ಇನ್ನು ಕೆಲವರಿಗೆ ನಾಲ್ಕೆಂಟು ಒದೆಗಳ ಸಮೇತ ಸಿಕ್ಕಿದೆ. ಹೀಗೆ ಕಣ್ಣೀರು ಹರಿಸಿ ಪಡೆದುಕೊಂಡ ಹಣದಲ್ಲಿ ಕೊಳ್ಳಬೇಕೆಂದಿರುವ ಪಟಾಕಿಗಳು ಹಲವಿದ್ದರೂ ಕೋವಿ ಹಾಗೂ ಗುಂಡಿನ ರೀಲುಗಳು ಎಲ್ಲದಕ್ಕಿಂತ ಮೊದಲು ರಂಗ ಪ್ರವೇಶಿಸಿವೆ. ಅಪ್ಪ ಅಥವಾ ಅಮ್ಮ ಕೊಟ್ಟ ಹಣವನ್ನು ತೆಗೆದುಕೊಂಡು ಮಾಮೂಲಿ ಹುಡುಗನಂತೆ‌ ಮನೆಯಿಂದ ಹೊರಟ ಪ್ರತಿಯೊಬ್ಬ ಚಿಣ್ಣನೂ ಕೋವಿ ಹಿಡಿದುಕೊಂಡು ಸಾಕ್ಷಾತ್ ಪೋಲೀಸ್ ಇನ್ಸ್’ಪೆಕ್ಟರನೇ ಆಗಿ ಮನೆಗೆ ಮರಳಿದ್ದಾನೆ. ಹಣ ಕೊಡಲು ಸತಾಯಿಸಿದ ಅಮ್ಮನಿಗೇ ಕೋವಿ ಹಿಡಿದು ‘ಹ್ಯಾಂಡ್ಸಪ್’ ಹೇಳಿ, ಕಾಡಿ ಮತ್ತೆರೆಡು ಒದೆ ತಿಂದಿದ್ದಾನೆ.

ಹುಡುಗ ಪಟಾಕಿಗಳ ಹಿಂದೆ ಬಿದ್ದಿದ್ದರೆ‌ ಮನೆಯ ಹೆಣ್ಣು ಮಗಳು ತನ್ನದೇ ಲೋಕದಲ್ಲಿ ಮುಳುಗಿದ್ದಾಳೆ. ‘ನೀರು ತುಂಬುವ’ ಹಬ್ಬದ ದಿನ ಬಚ್ಚಲ ಹಂಡೆಗೆ ಕಂಯ್ಯಟ್ಲೆ ಬಳ್ಳಿಯ ಸರ ತೊಡಿಸಿದ್ದಾಳೆ. ಅಮ್ಮ ಬರೆದ ರಂಗೋಲಿಯ ನಡುವೆ ತನ್ನದೂ ಎರೆಡು ಸಾಲುಗಳನ್ನು ಸೇರಿಸಿದ್ದಾಳೆ. ಎಣ್ಣೆ-ನೀರಿನಲ್ಲಿ ಮಿಂದ ಹೆರಳನ್ನು ಹೆಗಲ ತುಂಬಾ ಹರವಿಕೊಂಡು, ಜರತಾರಿಯಂಚಿನ ಹಸಿರು ಲಂಗ ತೊಟ್ಟು ಸಾಕ್ಷಾತ್ ಪುಟ್ಟ ಲಕ್ಷ್ಮಿಯೇ ಆಗಿದ್ದಾಳೆ. ಅಂಗಳದಲ್ಲಿ ಅಣ್ಣ/ತಮ್ಮ ಹೊಡೆಸುವ ಪಟಾಕಿಯ ಸದ್ದುಗಳಿಗೆ ದೂರದಲ್ಲಿ ನಿಂತು ಕಿವಿ, ಕಣ್ಣುಗಳನ್ನೆಲ್ಲ ಮುಚ್ಚಿಕೊಂಡು ಬೆಚ್ಚುತ್ತಿದ್ದಾಳೆ. ಬಳಿಯಲ್ಲೇ ಪಟಾಕಿ ಸಿಡಿಸಿ ಅವಳನ್ನು ಬೆದರಿಸುವ ಆಟ ತಮ್ಮನಿಗೆ ಮೋಜು ತಂದಿದೆ. ಸಂಜೆಯ ಪೂಜೆಯ ವೇಳೆ ಅಕ್ಕ-ತಮ್ಮರಿಬ್ಬರೂ ಪರಸ್ಪರ ಪೈಪೋಟಿಯಲ್ಲಿ ಸಾಲು ಸಾಲು ದೀಪ ಹಚ್ಚುತ್ತಿರುವ ಸಂಭ್ರಮವನ್ನು ನೋಡಿದ ಫೋಟೋದಲ್ಲಿನ ದೇವರ ಮುಖದಲ್ಲಿನ ಮಂದಹಾಸ ದುಪ್ಪಟ್ಟಾಗಿದೆ.

ಕೊಟ್ಟಿಗೆಯಲ್ಲಿನ ದನ, ಕರು, ಎಮ್ಮೆಗಳಿಗೆ ಭರ್ಜರಿ ಅಭ್ಯಂಜನ ನಡೆಯುತ್ತಿದೆ. ಹಣೆಗೆ ಕುಂಕುಮವಿಟ್ಟುಕೊಂಡು, ಕೋಡಿನ ಸಂದಿಗೊಂದು ಬಿಡಿಹೂವು ಸಿಕ್ಕಿಸಿಕೊಂಡು ತಲೆಯಾಡಿಸುತ್ತಾ ನಿಂತಿರುವ ತಾಯಿ ಹಸುವಿನ ಕೊರಳಲ್ಲಿರುವ ಹೂವಿನ ಹಾರವನ್ನು ತಿನ್ನಲೆಂದು ಅದರ ಪುಟ್ಟೀಕರು ನಾಲಿಗೆ ಚಾಚುತ್ತಿದೆ. ಇಷ್ಟು ದಿನ ಅದೇ ಅಕ್ಕಚ್ಚು, ಬೂಸ, ಹಿಂಡಿಗಳ ತಿಂದೂ ತಿಂದೂ ಬೇಸತ್ತಿದ್ದ ಎಮ್ಮೆಗಿಂದು ಅಕ್ಕಿ, ಬೆಲ್ಲ, ಬಾಳೆಹಣ್ಣುಗಳ ಕಂಡು ಖುಷಿ ತಾಳದಾಗಿದೆ. ಅಡಿಗೆ ಮನೆಯಿಂದ ಹೊಮ್ಮುತ್ತಿರುವ ಪರಿಮಳಕ್ಕೆ ಮೂಗು ಅರಳಿಸುತ್ತಾ ಅವು ತಮ್ಮ ಆಂಯ್ ವಾಂಯ್ ಅಂಬೇ ಭಾಷೆಗಳ ಮೂಲಕ ತಮಗೂ ಪಾಯಸ ನೀಡುವಂತೆ ಒಡೆಯ, ಒಡತಿಯರನ್ನು ಒತ್ತಾಯಿಸುತ್ತಿವೆ.

ಹಬ್ಬದ ಬೆಳಗ್ಗೆ ಬೆಂಗಳೂರಿನಿಂದ ಬಂದ ಬಸ್ಸಿನಲ್ಲಿ ಸಂಭ್ರಮದ ಸಂತೆಯೇ ಬಂದಿಳಿದಿದೆ. ಮದುವೆಯಾದ ನಂತರ ಮೊದಲ ದೀಪಾವಳಿಗೆ ಮಾವನ ಮನೆಗೆ ಬರುತ್ತಿರುವ ಅಳಿಯ ತನ್ನ ನವವಧುವಿನ ಕೈ ಹಿಡಿದು ಮಾವನ ಮನೆಯತ್ತ ನಡೆಯುತ್ತಿದ್ದಾನೆ. ಅವನ ಕೈಚೀಲದಲ್ಲಿರುವ ಸಿಹಿತಿಂಡಿಯ ಕಂಪು ಅವರಿಗಿಂತ ಮೊದಲೇ ಮನೆ ತಲುಪಿದೆ. ಅವರನ್ನು ಸ್ವಾಗತಿಸಲು ಬಾಗಿಲಿಗೆ ಬಂದ ಅತ್ತೆ-ಮಾವನ ಮುಖದಲ್ಲಿ ನೂರು ಹಣತೆಗಳು ಬೆಳಗುತ್ತಿವೆ. ‘ಹೋ..’ ಎಂದು ಹೊಸ ಅಳಿಯನನ್ನು ಮುತ್ತಿಕೊಂಡ ಮಕ್ಕಳಿಗೆ ಸಿಹಿತಿಂಡಿಗಳು ಹಂಚಲ್ಪಟ್ಟಿವೆ. ಈಗಷ್ಟೇ ಮಿಂದು, ಜರೀಸೀರೆಯುಟ್ಟು, ಹಿತ್ತಲ ಸೇವಂತಿಗೆಯನ್ನು ಮುಡಿದು ಬರುತ್ತಿರುವ ತನ್ನ ಮುದ್ದು ಮಡದಿಯ ಮೇಲೆ ಅವನಿಗೀಗ ಹೊಸದಾಗಿ‌ ಒಲವಾಗಿದೆ. ಅತ್ತೆ ಬಡಿಸಿದ ಕಜ್ಜಾಯ, ಚಕ್ಕುಲಿಗಳು ಹಿಂದೆಂದೂ ಸವಿಯದಷ್ಟು ರುಚಿಯಾಗಿವೆ. ಸಂಜೆ ಆರತಿಯ ನಂತರ ವಧು-ವರರಿಬ್ಬರೂ ಜೊತೆಯಾಗಿ ಬೆಳಗಿದ ಹಣತೆಗಳು ಅವರ ಮುಂಬರುವ ಬದುಕಿನ ಕನಸುಗಳಂತೆಯೇ ದೇದೀಪ್ಯಮಾನವಾಗಿವೆ.

ಮೈತುಂಬಾ ಬಣ್ಣಬಣ್ಣದ ಬಲ್ಬು ತೊಟ್ಟು ನಿಂತ ಟೆರಾಸು ಮನೆಯ ಪಕ್ಕದ ಗುಡಿಸಲಿಗೂ ದೀಪಾವಳಿ ಕಾಲಿಟ್ಟಿದೆ. ಅಲ್ಲಿ, ಅಪರೂಪಕ್ಕೆ ಮಾಡಿದ ಪಾಯಸವನ್ನು ತಿನ್ನುವುದು ಹೇಗೆಂದು ತಿಳಿಯದೆ ಮುಖ-ಮೂತಿಗೆಲ್ಲ ಮೆತ್ತಿಕೊಂಡ ದೊಗಲೆ ಚಡ್ಡಿಯ ಹುಡುಗನ ಬಾಯನ್ನು ಅಮ್ಮನ ಹರಕು ಸೀರೆಯ ಸೆರಗು ವರೆಸಿ ಸ್ವಚ್ಛಗೊಳಿಸಿದೆ. ಪಕ್ಕದ‌ ಟೆರಾಸು ಮನೆಯವರು ರಾತ್ರೆಯ ಬಾನಿಗೆ ಹಾರಿಬಿಟ್ಟ ರಾಕೇಟನ್ನು ತನ್ನ ಮನೆಯ ಮಾಡಿನ ತೂತಿನಿಂದ ನೋಡಿದ ಹುಡುಗ ಹೊರಗೋಡಿ ಬಂದಿದ್ದಾನೆ. ಅವರ ಮನೆಯಂಗಳದಲ್ಲಿ ಗಿರಗಿರನೆ ತಿರುಗುತ್ತಾ ಬೆಳಕಿನ ವೃತ್ತ ರಚಿಸುತ್ತಿರುವ ನೆಲಚಕ್ರ ಹುಡುಗನ ಕಣ್ಣಲ್ಲೂ ಪ್ರತಿಫಲಿಸಿದೆ. ನೋಡನೋಡುತ್ತಿದ್ದಂತೆಯೇ ಬೆಳಕಿನ ಮರವೊಂದು ಹೂಬಿಟ್ಟಂತೆ ಅಷ್ಟೆತ್ತರಕ್ಕೆ ಅರಳಿ ನಿಂತ ‘ಬಾಳೆಕಂಬ’ದ ಮೇಲೆ ಹುಡುಗನಿಗೆ ಒಲವಾಗಿದೆ. ಮತ್ತೊಂದು ರಾಕೇಟು ಹಚ್ಚಲು ಹೊರಟ ಪಕ್ಕದ ಮನೆಯ ಅಣ್ಣನ ಕಣ್ಣೀಗ ಹುಡುಗನ ಮೇಲೆ ಬಿದ್ದಿದೆ. ‘ಬಾರೋ ಇಲ್ಲಿ ಪುಟ್ಟ’ ಎಂದು ಕರೆದ ಅವನತ್ತ ಹೆದರುತ್ತಲೇ ನಡೆದ ಪುಟ್ಟನ ಕೈಗೆ ನಕ್ಷತ್ರ ಕಡ್ಡಿಯೊಂದು ವರ್ಗಾವಣೆಯಾಗಿದೆ. ಹಿಡಿದುಕೊಳ್ಳಲು ಹೆದರಿ ಹಿಂದಡಿಯಿಟ್ಟ ಅವನ ಕೈಗೆ ಮತ್ತೊಂದು ಪುಟ್ಟ ಕೈ ಆಸರೆಯಾಗಿದೆ. ಚರ್ರನೆ ಕಿಡಿಯೆರಚುತ್ತಾ ಓಡಿ ಬಂದ ಕುದುರೆ ಪಟಾಕಿ ಅಣ್ಣನನ್ನು ಅಂಗಳದ ತುಂಬಾ ಅಟ್ಟಿಸಿಕೊಂಡು ಹೋದಾಗ ಮನೆಯವರೆಲ್ಲ ಗೊಳ್ಳೆಂದು ನಕ್ಕಿದ್ದಾರೆ. ಪುಟ್ಟನ ಕೈಯಲ್ಲೀಗ ಬೆಳಗುತ್ತಿರುವ ಸುರುಸುರು ಬತ್ತಿಯಿಂದ ಚಿಮ್ಮುತ್ತಿರುವ ನಕ್ಷತ್ರಗಳ ಹೊಳಪಿಗೆ ದೂರದಲ್ಲಿ ನಿಂತು ನೋಡುತ್ತಿರುವ ಅಮ್ಮನ ಕಣ್ಣಂದ ಜಾರಿದ ಹನಿಯೊಳಗೂ ಬೆಳಕು ಮೂಡಿದೆ.

              ***

ದೀಪಾವಳಿ ನಿರ್ಗಮಿಸಿದೆ. ಮತ್ತೆ ಶುರುವಾದ ಶಾಲೆಯ ತರಗತಿಗಳು ಸಿಡಿದು ಹೋದ ಪಟಾಕಿ, ಹಾರಿಹೋದ ರಾಕೇಟುಗಳ ರೋಚಕ ಕಥೆಗಳಿಂದ ತುಂಬಿಹೋಗಿವೆ. ರಸ್ತೆಯ ತುಂಬಾ ಬೆಳಕನೆರಚಿ ಹೋದ ವಿವಿಧ ಪಟಾಕಿಗಳ ಅವಶೇಷಗಳು ಮುಗಿದ ಸಂಭ್ರಮದ ಕುರುಹಾಗಿ ಬಿದ್ದುಕೊಂಡಿವೆ. ಸುಟ್ಟುಹೋದ ಆ ಸಿಡಿಮದ್ದುಗಳ ಅವಶೇಷಗಳ ನಡುವೆ ಹೊಟ್ಟದೇ ಉಳಿದ ಪಟಾಕಿಗಳಿಗಾಗಿ ಚಿಂದಿ ಆಯುವ ಹುಡುಗರ ತಂಡವೊಂದು ಹುಡುಕಾಟ ನಡೆಸಿದೆ. ಅವರು ಸಿಕ್ಕ ಒಂದು ಅರೆ ಉರಿದ ಮತಾಪಿಗೆ ಮತ್ತೆ ಬೆಂಕಿ ತಗುಲಿಸಿ ಹೋ ಎಂದು ಕುಣಿಯುವಾಗ ಮುಗಿದ ದೀಪಾವಳಿಗೆ ಮರುಜೀವ ಬಂದಿದೆ. ಹಬ್ಬ ಮುಗಿಸಿ ಶಹರಿಗೆ ಮರಳುತ್ತಿರುವ ಭಾರ ಹೃದಯಗಳೊಳಗೆ ನೆನಪಿನ ಪ್ರಣತಿಗಳು ಪ್ರಜ್ವಲಿಸುತ್ತಿವೆ.

ದೀಪಾವಳಿ ಸಂಪನ್ನವಾಗಿದೆ.

-ವಿನಾಯಕ ಅರಳಸುರಳಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *