ಬೆಲ್ಲದ ಬಗ್ಗೆ ಬಲ್ಲಿರೇನು?: ಎಂ.ಎಚ್.ಮೊಕಾಶಿ

ಇಂದು ಬಹುತೇಕ ಜನರ ಮನೆಯಲ್ಲಿ ಫ್ರಿಜ್ ಇರುವುದರಿಂದ ವಿವಿಧ ರೀತಿಯ ಸಾಫ್ಟ್ ಡ್ರಿಂಕ್ಸ್‍ಗಳನ್ನು ಬಳಸುತ್ತೇವೆ. ಇವುಗಳು ನಾವು ಬಿಸಿಲಿನಿಂದ ಬಂದಾಗ ನಮ್ಮ ದೇಹವನ್ನು ತಂಪಾಸುತ್ತವೆ. ಆದರೆ ಮೊದಲೆಲ್ಲ ಹಾಗಿರಲಿಲ್ಲ ಹೊರಗಿನಿಂದ ಬಿಸಿಲಿನಲ್ಲಿ ಬಂದವರಿಗೆ ಬೆಲ್ಲ ಮತ್ತು ನೀರು ಕೊಡುತ್ತಿದ್ದರು. ಏಕೆಂದರೆ ಬೆಲ್ಲದಲ್ಲಿ ಗ್ಲುಕೋಸ್, ವಿಟಮಿನ್ ಹಾಗೂ ಕ್ಯಾಲ್ಸಿಯಮ್‍ಗಳಿರುವುದರಿಂದ ಶೀಘ್ರವಾಗಿ ದಣಿವಾರಿಸಿ ಆರೋಗ್ಯವನ್ನು ಸುಧಾರಿಸುವುದೆಂದು ತಿಳಿದಿದ್ದರು. ಆದರೆ ಇಂದು ಬೆಲ್ಲ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ಬಹುತೇಕ ಜನರು ಸಕ್ಕರೆಯತ್ತ ತಮ್ಮ ಅಕ್ಕರೆಯನ್ನು ತೋರಿಸುತ್ತಿದ್ದಾರೆ. ಬೆಲ್ಲ ಅಂದರೆ ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ. ನೋಡಲೂ ಸ್ವಲ್ಪ ಕಂದು ಹಾಗೂ ಕಪ್ಪಾಗಿರುವುದರಿಂದಲೂ ಇಂದಿನ ಯುವ ಪೀಳಿಗೆ ಬೆಲ್ಲವನ್ನು ತಿನ್ನಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಬೆಳ್ಳಗೆ ಕಾಣುವ ಸಕ್ಕರೆಗಿಂತಲೂ ಬೆಲ್ಲ ಎಷ್ಟೋ ಪಟ್ಟು ಉತ್ತಮವಾಗಿದೆಯೆಂಬುದನ್ನು ಮರೆತಿದ್ದಾರೆ. ಬೆಲ್ಲ ಕೇವಲ ಸಿಹಿ ಪದಾರ್ಥವಾಗಿರದೇ ಅದು ಔಷಧಿಯುಕ್ತ ಸಿಹಿ ಪದಾರ್ಥವಾಗಿದೆ. ಬೆಲ್ಲದಿಂದಾಗುವ ಉಪಯೋಗಗಳ ಬಗ್ಗೆ ಬಲ್ಲವರಿಗೆ ಮಾತ್ರವೇ ತಿಳಿದಿರುತ್ತದೆ. ಹೀಗಾಗಿ “ಬಲ್ಲವನೇ ಬಲ್ಲ ಬೆಲ್ಲದ ಸವಿಯ”ಎಂಬ ಗಾದೆಮಾತಿದೆ.

ಬೆಲ್ಲವು ಏಷ್ಯಾ, ಆಫ್ರಿಕಾ, ದಕ್ಷಿಣ ಅಮೇರಿಕಾ ಖಂಡಗಳಲ್ಲಿ ಬಳಸಲಾಗುವ ಒಂದು ಸಾಂಪ್ರದಾಯಿಕ, ಶುದ್ಧೀಕರಿಸಿದ ಅಪಕೇಂದ್ರಕವನ್ನು ಉಪಯೋಗಿಸದೇ ತಯಾರಿಸಲಾಗುವ ಸಕ್ಕರೆಯಾಗಿದೆ. ಬೆಲ್ಲವನ್ನು ನೇರವಾಗಿ ಬಳಕೆಗಾಗಿ ತಯಾರಿಸಲಾಗುತ್ತದೆ. ಬೆಲ್ಲವು ಕಾಕಂಬಿ ಮತ್ತು ಹಳುಕುಗಳ ಬೇರ್ಪಡಿಸುವಿಕೆಯಿಲ್ಲದ ಕಬ್ಬಿನ ರಸದ ಸಾಂದ್ರಿತ ಉತ್ಪನ್ನವಾಗಿದೆ. ಇದರ ಬಣ್ಣ ಕಂದು ಬಂಗಾರ ಹಾಗೂ ಗಾಢ ಕಂದು ಬಣ್ಣವನ್ನು ಹೊಂದಿದೆ. ಇದರಲ್ಲಿ 50 ಪ್ರತಿಶತದವರೆಗೆ ಸುಕ್ರೋಸ್,20 ಪ್ರತಿಶತದವರೆಗೆ ವಿಲೋಮ್ ಸಕ್ಕರೆಗಳು 20 ಪ್ರತಿಶತದವರೆಗೆ ತೇವಾಂಶ ಮತ್ತು ಉಳಿದಂತೆ ಪ್ರೊಟೀನ್‍ಗಳು ಹಾಗೂ ಕಬ್ಬಿನ ಸಿಪ್ಪೆಯ ನಾರುಗಳಂತಹ ಇತರ ಕರಗದ ವಸ್ತುವನ್ನು ಹೊಂದಿದೆ. ಬೆಲ್ಲವನ್ನು ಆಂಗ್ಲ ಭಾಷೆಯಲ್ಲಿ  Jaggery ಎಂದು ಕರೆದರೆ, ಸಂಸ್ಕøತದಲ್ಲಿ ಗುಡಾ, ಹಿಂದಿಯಲ್ಲಿ ಗೂಡ್ ಎಂದು ಕರೆಯುವರು.

ವಿಶ್ವದ ಬೆಲ್ಲ ಉತ್ಪಾದನೆಯಲ್ಲಿ ಭಾರತದ್ದು 70 ಪ್ರತಿಶತಃ ಬಹುಪಾಲು ಹೊಂದಿದೆ. ಬೆಲ್ಲದ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಅತೀ ಹೆಚ್ಚು ಸಕ್ಕರೆಯನ್ನು ಭಾರತವು ಬಳಸುವುದಲ್ಲದೇ ಸುಮಾರು 40 ಲಕ್ಷ ಎಕರೆ ಭೂಮಿಯಲ್ಲಿ ಕಬ್ಬನ್ನು ಬೆಳೆಯಲಾಗುವುದು. ಭಾರತದಲ್ಲಿ ಸುಮಾರು 3 ಕೋಟಿ ಟನ್ ಕಬ್ಬನ್ನು ಬೆಳೆಯಲಾಗುತ್ತಿದ್ದು ಅದರಲ್ಲಿ 36 ಪ್ರತಿಶತಃ ಬೆಲ್ಲ ತಯಾರಿಕೆಯಲ್ಲಿ ಬಳಸಲಾಗುವುದು. ಬೆಲ್ಲವನ್ನು ಪ್ರಮುಖವಾಗಿ ಕಬ್ಬು ಹಾಗೂ ಖರ್ಜುರದಿಂದ ತಯಾರಿಸಲಾಗುವುದು. ಆದರೆ ಖರ್ಜುರ ರಸದಿಂದ ತಯಾರಿಸುವ ಬೆಲ್ಲಕ್ಕೆ ಹೆಚ್ಚು ಬೆಲೆ ಹಾಗೂ ದೊರೆಯುವುದೂ ಕಡಿಮೆಯಿರುವುದರಿಂದ, ಕಬ್ಬಿನಿಂದ ತಯಾರಿಸಿದ ಬೆಲ್ಲಕ್ಕೆ ಬೇಡಿಕೆ ಹೆಚ್ಚು ಬೆಲೆಯೂ ಕಡಿಮೆಯಾಗಿದೆ. ಇದಲ್ಲದೇ ತಾಳೆ ಹಣ್ಣಿನ ರಸದಿಂದಲೂ ಬೆಲ್ಲವನ್ನು ತಯಾರಿಸುವರು. ಆಂಧ್ರ ಹಾಗೂ ಕರ್ನಾಟಕದ ಗಡಿ ಭಾಗಗಳಲ್ಲಿ ತಾಳೆ ಗಿಡಗಳನ್ನು ಹೆಚ್ಚಾಗಿ ಬೆಳೆಯುವವರಲ್ಲದೇ ಅದೇ ಪ್ರದೇಶದಲ್ಲಿ ತಾಳೆ ಹಣ್ಣಿನಿಂದ ಬೆಲ್ಲವನ್ನು ತಯಾರಿಸುವರು. ಹೀಗೆ ತಯಾರಿಸಿದ ಬೆಲ್ಲವನ್ನು “ದಾಟಿನಿಂಗಿ”ಬೆಲ್ಲ ಎಂದು ಕರೆಯುವರು. ಇದರಿಂದ ಒಬ್ಬಟ್ಟು ಹಲವಾರು ಸಿಹಿ ಪದಾರ್ಥಗಳನ್ನು ತಯಾರಿಸಲು ಬಳಸುವರು. ಅಲ್ಲದೇ ಕಲ್ಲುಸಕ್ಕರೆಯಂತೆ ತಿನ್ನಲು ಹಾಗೂ ಮಕ್ಕಳ ಜ್ಞಾಪಕಶಕ್ತಿಯನ್ನು ಹೆಚ್ಚಿಸುವಲ್ಲಿ ಬಳಸುವರು. ಅಲ್ಲದೇ ಇಂದು ಸಾವಯುವ ಬೆಲ್ಲಕ್ಕೆ ಹೆಚ್ಚಿನ ಬೇಡಿಕೆಯಿದೆ.
ಕಬ್ಬಿನಿಂದ ಬೆಲ್ಲವನ್ನು ತಯಾರಿಸುವ ಕೇಂದ್ರವನ್ನು“ಆಲೆಮನೆ”ಎಂದು ಕರೆಯುವರು. ಆಲೆ ಎಂದರೆ ಕಬ್ಬಿನ ಗಾಣ, ಮನೆ ಎಂದರೆ ಕಬ್ಬನ್ನು ಹಿಂಡಿ ಬೆಲ್ಲ ಮಾಡುವ ಸ್ಥಳವಾಗಿದೆ. ಗ್ರಾಮೀಣ ಭಾಗದಲ್ಲಿ “ಆಲೆಮನೆಗೆ ಹೋದರೆ ಅಣ್ಣ ಇರಬೇಕು; ಅಡಿಗೆ ಮನೆಗೆ ಹೋದರೆ ಅಕ್ಕ ಇರಬೇಕು” ಎಂಬ ಗಾದೆಮಾತು ಪ್ರಸಿದ್ಧಿಯಾಗಿದೆ. ಬೆಲ್ಲವನ್ನು ತಯಾರಿಸಲು ಮೊದಲು ಕಬ್ಬನ್ನು ತುಂಡರಿಸಿ, ಹಿಂಡಿ, ರಸಮಾಡಿದ ನಂತರ ಶೋಧಿಸಿ ಕುದಿಸುವರು ನಂತರ ಮಡಕೆ, ತಗಡಿನಡಬ್ಬಿ ಅಥವಾ ಬಕೀಟ್‍ನಲ್ಲಿ ಹಾಕಿ ಬೆಲ್ಲವನ್ನು ತಯಾರಿಸುವರು.ಇದರ ಮಾದರಿಯು 1 ಕಿಲೋ ಯಿಂದ 15 ಕಿಲೋ ವರೆಗೆ ತೂಗುವುದು. ಹೀಗೆ ಅಚ್ಚು ಮಾಡಲು ಅಡಿಗೆ ಸೋಡಾ, ವನಸ್ಪತಿವಸ್ತುಗಳಲ್ಲದೇ ಹಲವಾರು ವಸ್ತುಗಳನ್ನು ಬಳಸುವರು. ಮಲೆನಾಡಿನಲ್ಲಿ ಕಾಯಿಸಿದ ಬೆಲ್ಲವನ್ನು ದೋಸೆಯ ಹಿಟ್ಟಿನ ಹದಕ್ಕೆ ಬಾನಿಯಿಂದ ತೆಗೆದು ಜೇನುತುಪ್ಪದ ರೀತಿಯಲ್ಲಿ ಮಾಡುವರು ಇದನ್ನು “ಜೋನಿಬೆಲ್ಲ”ಎಂದು ಕರೆಯುವರು.

ಪ್ರಾಚೀನ ಕಾಲದಿಂದಲೂ ಬೆಲ್ಲದೊಂದಿಗೆ ಮಾನವನ ಜೀವನ ಬೆರೆತಿದೆ. ಚರಕ ಸಂಹಿತೆಯಲ್ಲಿ ಬೆಲ್ಲದ ಉಪಯೋಗದ ಬಗ್ಗೆ ಹೇಳಲಾಗಿದೆ. ಆಯುರ್ವೇದದಲ್ಲಿಯೂ ಬೆಲ್ಲಕ್ಕೆ ಪ್ರಮುಖ ಪ್ರಾಶಸ್ತ್ಯ ನೀಡಲಾಗಿದೆ. ಗುಜರಾತ ಮೊದಲಾದ ರಾಜ್ಯಗಳಲ್ಲಿ ಧನಿಯಾ ಹಾಗೂ ಬೆಲ್ಲವನ್ನು ನಿಶ್ಚಿತಾರ್ಥದ ಸಮಯದಲ್ಲಿ ನೀಡಿ ಶುಭಕೋರುವರು. ಹಲವಾರು ಸಭೆ ಸಮಾರಂಭಗಳಲ್ಲಿ ಶುಭಸೂಚಕವಾಗಿ ಬೆಲ್ಲವನ್ನು ಕೊಡುವ ಪದ್ದತಿಯಿದೆ. ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನು, ಕಷ್ಟದ ಸಂಕೇತವಾದ ಬೇವನ್ನು ಸಮಾನವಾಗಿ ಹಂಚುವ ವಾಡಿಕೆಯಿದೆ. ಅಲ್ಲದೇ ಸಂಸ್ಕøತ ಶ್ಲೋಕದಲ್ಲಿ

ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| ಎಂದು ಹೇಳಲಾಗಿದೆ.

ಅಂದರೆ ನೂರು ವರ್ಷಗಳ ಆಯುಶ್ಯ, ಸದೃಢ ಆರೋಗ್ಯ, ಸಕಲ ಸಂಪತ್ತು ಪ್ರಾಪ್ತಿಗಾಗಿ ಬೆಲ್ಲ ಸೇವನೆ ಮಾಡಬೇಕೆಂದರ್ಥವಾಗಿದೆ. ಸರ್ವಜ್ಞನೂ ಕೂಡ “ಬೆಲ್ಲವ ಮೆಲುವವ| ಬೆಲ್ಲವ ನೆನೆವಂತೆ” ಎಂದಿದ್ದಾನೆ. ಷೋಡಶ(16ಜನರು)ಲಕ್ಷ್ಮಿಯರಲ್ಲಿ ರಸಲಕ್ಷ್ಮಿಯೂ ಒಂದಾಗಿದ್ದು ರಸಲಕ್ಷ್ಮಿಯನ್ನು ಬೆಲ್ಲಕ್ಕೆ ಹೋಲಿಸಿ ಬೆಲ್ಲದ ಅಭಿಮಾನ ದೇವತೆಯಾದ ಬೆಲ್ಲದಲ್ಲಿ ಬ್ರಹ್ಮದೇವರು, ಮಹಾಲಕ್ಷ್ಮೀ, ಮಹಾಗಣಪತಿ ದೇವರುಗಳ ಸಾನಿಧ್ಯವಿರುತ್ತದೆ. ಹೀಗಾಗಿ ಬೆಲ್ಲ ದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತವೆ. ಅಲ್ಲದೇ ದಾನಿಗಳು ಜೀವನದಲ್ಲಿ ಉನ್ನತ ಮಟ್ಟಕ್ಕೇರುವರು ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ಬೆಲ್ಲವನ್ನು ತಿನ್ನುವುದರಿಂದ ಸಕ್ಕರೆಯ ಅಂಶ ಹೆಚ್ಚಾಗದು, ಶಕ್ತಿಯು ವೃದ್ಧಿಸುವುದಲ್ಲದೇ ತೂಕ ಹೆಚ್ಚಾಗಲಾರದು. ನಮ್ಮ ದೇಶದಲ್ಲಿ ಸಿಹಿ ತಿಂಡಿಗಳನ್ನು ತಯಾರಿಸಲು ಇಂದೂ ಕೂಡ ಬೆಲ್ಲವನ್ನು ಬಳಸುವರು. ಚಳಿಗಾಲದಲ್ಲಿ ನಮ್ಮ ಹಿರಿಯರು ಊಟವಾದ ನಂತರ ಬೆಲ್ಲವನ್ನು ತಿನ್ನುತ್ತಿದ್ದರು. ಚಳಿಗಾಲದಲ್ಲಿ ಬೆಲ್ಲ ತಿಂದರೆ ವಿಟಮಿನ್‍ಗಳು ಹಾಗೂ ಲವಣಗಳು ಹೊಟ್ಟೆ ಸೇರುತ್ತವೆಯಲ್ಲದೇ ಆ್ಯಂಟಿ ಆಕ್ಸಿಡೆಂಟ್ ಮತ್ತು ಖನಿಜಾಂಶಗಳು ರೋಗ ನಿರೋಧಕ ಶಕ್ತಿಯನ್ನು ಸೃಷ್ಟಿಸಿ ದೇಹವನ್ನು ಬೆಚ್ಚಗಿಡುವಲ್ಲಿ ಸಹಾಯಕಾರಿಯಾಗಿದೆಯಲ್ಲದೇ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ. ಇಂದು ನಾವೆಲ್ಲರೂ ಸಕ್ಕರೆಯ ಬಣ್ಣಕ್ಕೆ ಮೊರೆ ಹೋಗುತ್ತಿದ್ದೇವೆ. ಆದರೆ ಹಲವಾರು ವೈದ್ಯರು ಬೆಲ್ಲವನ್ನು ತಿನ್ನಲು ಸಲಹೆ ನೀಡುವರು. ಹಳ್ಳಿಗಳಲ್ಲಿ ದನಗಳು ಕರುಹಾಕಿದ ನಂತರ ಬೆಲ್ಲದ ನೀರಿನ ಮಿಶ್ರಣವನ್ನು ಕುಡಿಸುವರು. ಏಕೆಂದರೆ ದನಗಳಿಗೆ ನಿತ್ರಾಣ ಆಗದಿರಲಿ ಅಂತ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಲಭ್ಯವಾಗುವ ಬೆಲ್ಲವನ್ನು ಮನೆಮದ್ದಿನ ರೂಪದಲ್ಲಿ ಉಪಯೋಗಿಸುವ ಮೂಲಕ ಹಲವಾರು ಬಗೆಯ ಸಮಸ್ಯೆಗಳನ್ನು ನಿವಾರಿಸಬಹುದು.
ಯಾವುದೇ ಆಗಲಿ ಇಂದು ಮಿತಿಯಲ್ಲಿರಬೇಕು. ಆತಿಯಾದರೆ ಅಪಾಯ ಎಂಬಂತೆ ಬೆಲ್ಲವನ್ನು ಮಿತಿಮೀರಿ ಸೇವಿಸಿದರೆ ಸ್ಥೂಲಕಾಯ ಬರುವ ಸಾಧ್ಯತೆಯಿದೆ. ಅಲ್ಲದೇ ಇದು ಮಧುಮೇಹಕ್ಕೆ ದಾರಿಮಾಡಿಕೊಡುವುದು.

ಬೆಲ್ಲದಿಂದಾಗುವ ಪ್ರಯೋಜನಗಳುಃ
• ಒಂದು ಗ್ಲಾಸ್ ಹಾಲಿಗೆ ಬೆಲ್ಲದ ಪುಡಿ ಹಾಕಿಕೊಂಡು ಪ್ರತಿದಿನ ಸೇವಿಸಿದರೆ ಚರ್ಮದ ಕಾಂತಿ ಹೆಚ್ಚಾಗುವದು. ಅಲ್ಲದೇ ಮುಖದಲ್ಲಿ ಮೊಡವೆ ಬೀಳುವುದನ್ನು ಕಡಿಮೆ ಮಾಡುತ್ತದೆ.
• ಒಂದು ಗ್ಲಾಸ್ ಹಾಲಿಗೆ ಬೆಲ್ಲ ಹಾಗೂ ಶುಂಠಿಪುಡಿಯನ್ನು ಹಾಕಿ ಕುಡಿಯುತ್ತಿದ್ದರೆ ಸಂಧಿವಾತ ಕ್ರಮೇಣ ಕಡಿಮೆಯಾಗಿತ್ತದೆ.
• ಕರಿ ಎಳ್ಳಿನೊಂದಿಗೆ ಬೆಲ್ಲವನ್ನು ದಿನನಿತ್ಯ ಸೇವಿಸಿದರೆ ಅಸ್ತಮಾ ಹಾಗೂ ಬ್ರಾಂಕೈಟಿಸ್ ರೋಗವನ್ನು ಗುಣಪಡಿಸಬಹುದಾಗಿದೆ.
• ಹಳೆಯ ಬೆಲ್ಲವನ್ನು ಹುಣಸೆ ಹುಳಿಯೊಂದಿಗೆ ಬಿಸಿಮಾಡಿ ನೋವಿರುವ ಜಾಗಕ್ಕೆ ಲೇಪಿಸಿದರೆ ನೋವು ಕಡಿಮೆಯಾಗುತ್ತದೆ.
• ಹಸುವಿನ ತುಪ್ಪದೊಂದಿಗೆ ಬೆಲ್ಲವನ್ನು ಸೇರಿಸಿ ದಿನನಿತ್ಯ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಅರೆ ತಲೆನೋವು ಕಡಿಮೆಯಾಗುವುದು.
• ಮಹಿಳೆಯರು ಬೆಲ್ಲವನ್ನು ತಿನ್ನುತ್ತಿದ್ದರೆ ಮಾಸಿಕ ನೋವು ಕಡಿಮೆಯಾಗುವುದಲ್ಲದೇ ಮನಸ್ಸನ್ನು ಶಾಂತಗೊಳಿಸುವಲ್ಲಿ ಸಹಾಯಕ.
• ನಿತ್ಯವೂ ಬೆಲ್ಲ ಸೇರಿಸಿದ ಹಾಲನ್ನು ಬೆಳಿಗ್ಗೆ ಮತ್ತು ರಾತ್ರಿ ಸೇವಿಸುವುದರಿಂದ ನಿಶ್ಯಕ್ತಿ ಕಡಿಮೆಯಾಗುವುದು.
• ಊಟದ ನಂತರ ಚಿಕ್ಕ ಬೆಲ್ಲದ ತುಂಡನ್ನು ಸೇವಿಸಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದ.
• ಗರ್ಭಿಣಿಯರು ನಿತ್ಯವೂ ಬೆಲ್ಲ ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ದೂರಾಗುತ್ತದೆ ಹಾಗೂ ಮಗುವಿನ ಬೆಳವಣಿಗೆಗೂ ಉತ್ತಮವಾಗಿದೆ.
• ಮೊಸರಿನೊಂದಿಗೆ ಬೆಲ್ಲವನ್ನು ಬೆರೆಸಿ ಸೇವಿಸುವುದರಿಂದ ಒಳಕೆಮ್ಮು ವಾಸಿಯಾಗುವುದು.

ಎಂ.ಎಚ್.ಮೊಕಾಶಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x