ಪ್ರತಿ ನಿತ್ಯವೂ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಕಪ್ಪು ಬಿಳಿ ಬಣ್ಣದ ಎರಡು ಹಕ್ಕಿಗಳು, ಮೇಲೆ ಕೆಳಗೆ ಬಾಲ ಕುಣಿಸುತ್ತಾ, ಅಂಗಳದ ತುಂಬೆಲ್ಲಾ ಅದೂ ಇದೂ ಹೆಕ್ಕುತ್ತಾ ಗಹನವಾಗಿ ಅದೇನೋ ಅಳೆಯುತ್ತಿರುವಂತೆ ತುಂಬಾ ಹೊತ್ತಿನವರೆಗೂ ಓಲಾಡುತ್ತಲೇ ಇರುತ್ತವೆ. ಅದಕ್ಕೇ ಇರಬೇಕು ಆ ಹಕ್ಕಿಗಳಿಗೆ ಭೂಮಿ ತೂಗುವ ಹಕ್ಕಿ ಅಂತ ಕರೆಯೋದು. ಆ ಜೋಡಿ ಹಕ್ಕಿಗಳಲ್ಲಿ ಒಂದಕ್ಕೆ ಒಂದು ಕಾಲಿನಲ್ಲಿ ಬೆರಳುಗಳೇ ಇಲ್ಲ. ಹೆಣ್ಣು ಹಕ್ಕಿಯೋ? ಗಂಡು ಹಕ್ಕಿಯೋ? ಗೊತ್ತಿಲ್ಲ. ಪಾಪ! ಅದಕ್ಕೆ ಅಂಗವಿಕಲತೆ. ಆದರೂ ಬರೇ ಪಾದ ಊರಿಕೊಂಡು , ಅಷ್ಟೊಂದು ಚುರುಕಾಗಿ, ಒಂದಷ್ಟೂ ವ್ಯಥೆಯನ್ನು ಹತ್ತಿರ ಬರಗೊಡದೆ, ನಮ್ಮನ್ನು ನಾಚಿಸುವಷ್ಟು ಲವಲವಿಕೆಯಿಂದ ಓಡಾಡಿಕೊಂಡಿರುತ್ತದೆ. ಮಾಡಲು ಕೈ ತುಂಬಾ ಕೆಲಸಗಳಿದ್ದರೆ, ಯೋಚಿಸಲು ಒಳ್ಳೆಯ ವಿಚಾರಗಳಿದ್ದರೆ ಎಲ್ಲಾ ನ್ಯೂನತೆಯನ್ನು ಮೀರಿ ನಿಲ್ಲಬಹುದು ಅಂತ ಆಗಾಗ್ಗೆ ಆ ಹಕ್ಕಿಯನ್ನು ನೋಡುವಾಗಲೆಲ್ಲಾ ಅನ್ನಿಸುವುದಿದೆ.
ನಮ್ಮ ಮನೆಯ ಸುತ್ತುಮುತ್ತೆಲ್ಲಾ ತಿಂದು ಬಿಸಾಕಿದ ಪಪ್ಪಾಯಿ ಬೀಜದಿಂದ ಅಲ್ಲಲ್ಲಿ ಬೇಕಾದಷ್ಟು ಪಪ್ಪಾಯಿಗಿಡಗಳು ಹುಟ್ಟಿಕೊಂಡಿವೆ. ಬಹುಷ: ಆ ಗಿಡದಲ್ಲಿ ಆತುಕೊಂಡಿರುವ ರಾಶಿ ರಾಶಿ ಹಣ್ಣುಗಳನ್ನು ತಿನ್ನಲು ಕಾಗೆ ಸೇರಿದಂತೆ ಒಂದಷ್ಟು ಹೆಸರೇ ತಿಳಿಯದ ಹಕ್ಕಿಗಳು ನಮ್ಮ ಮನೆಯ ಮುಂದೆ ಠಳಾಯಿಸುತ್ತಿರುವುದು. ದಿನ ನಿತ್ಯ ನಮ್ಮ ಆಸು ಪಾಸು ಓಡಾಡಿಕೊಂಡಿದ್ದರೂ ನಮಗಿನ್ನೂ ಅವು ಆಪ್ತವಾಗಲೇ ಇಲ್ಲ. ನಾವುಗಳೂ ಅಷ್ಟೆ, ಅವಕ್ಕೆ ಹೆದರಿಕೆ ಬರುವ ಹಾಗೆ ನಡೆದುಕೊಂಡಿರುವುದರಿಂದಲೋ ಏನೋ, ಮನುಷ್ಯ ಸಂಕುಲದ ಹತ್ತಿರ ಬಂದರೂ ತೀರಾ ಆತ್ಮೀಯವಾಗುವುದಕ್ಕೆ ಅವಕ್ಕೆ ಹಿಂಜರಿಕೆ. ನಾವು ಹತ್ತಿರ ಹೋದಾಗಲೆಲ್ಲಾ ಬುರ್ರ್ ಅಂತ ಸದ್ದು ಮಾಡುತ್ತಾ ಹಾರಿ ಹೋಗಿಬಿಡುತ್ತವೆ. ಆದರೆ ಬೀಡಾಡಿ ಕಾಗೆಗಳು ಮಾತ್ರ ತುಸು ಧೈರ್ಯವಂತರು. ನಮ್ಮ ಕ್ಯಾರೇ ಇಲ್ಲದೆ ಅನಾದಿಯಿಂದಲೂ ಮನೆಯ ಸುತ್ತುಮುತ್ತೆಲ್ಲವೂ ತಮ್ಮದೇ ಪೂರ್ವಾರ್ಜಿತ ಸ್ವತ್ತು ಎಂಬಂತೆ ಸಿಕ್ಕಿದ್ದನ್ನೆಲ್ಲಾ ನಮಗೂ ಉಳಿಸದೆ ತಿಂದು ಮುಗಿಸುವುದಲ್ಲದೆ, ಅಧಿಕಾರಯುತವಾಗಿ ತನ್ನ ಪರಿವಾರದವರನ್ನೆಲ್ಲಾ ಬೊಬ್ಬೆ ಮಾಡಿ ಧಾಂದಲೆ ಎಬ್ಬಿಸಿ ಕರೆಯುವಾಗ ಮಾತ ಕಿರಿ ಕಿರಿ ಆಗದೆ ಇರುತ್ತದೆಯೇ?
ಮೊನ್ನೆ ಮೊನ್ನೆ ಅಪ್ಪಿ ತಪ್ಪಿ ಚೆಂದದ, ಗಿಳಿ ಹಸುರು ಬಣ್ಣದ ಗಿಳಿಯಂತೇ ತೋರುವ ಪುಟ್ಟ ಹಕ್ಕಿಯೊಂದು ಹೇಗೋ ಗೊತ್ತಿಲ್ಲದೆ ತೆರೆದ ಬಾಗಿಲ ನಡುವೆ ನುಗ್ಗಿ, ಕಿಟಕಿ ಸರಳುಗಳ ನಡುವೆ ಸಿಲುಕಿ ಹೊರ ಬರಲು ದಾರಿ ತೋಚದೆ ಭಯದಿಂದ ತತ್ತರಿಸಿ, ಕಣ್ಣ ತುಂಬಾ ದಿಗಿಲು ತುಂಬಿಕೊಂಡು ಒಂದೇ ಸಮನೆ ರೆಕ್ಕೆಗಳನ್ನು ಪಟ ಪಟನೆ ಬಡಿಯುತ್ತಾ ಹೊರ ಹೋಗಲು ಹವಣಿಸುತ್ತಿತ್ತು. ಹಾಗೆಯೇ ಮೆಲ್ಲಗೆ ಜತನದಲ್ಲಿ ಎತ್ತಿ ಒಂದಷ್ಟು ಹೊತ್ತು ಮಗ ಶಾಲೆಯಿಂದ ಬರುವಲ್ಲಿಯವರೆಗಾದರೂ ಇರಲಿ ಅಂತ ರಟ್ಟಿನ ಬಾಕ್ಸಿನೊಳಗಿಟ್ಟು ಹಾಲು, ಹಣ್ಣು ಪಕ್ಕಕ್ಕಿಟ್ಟು ಮಗನ ಬರುವಿಕೆಗಾಗಿ ಕಾಯುತ್ತಾ ಕುಳಿತೆ. ಆಗಸದಲ್ಲಿ ರೆಕ್ಕೆ ಬಿಚ್ಚಿ ಹಾರುವ ಹಕ್ಕಿ, ರೆಕ್ಕೆ ಮುದುರಿಕೊಂಡು ಕೈಗೆ ಸಿಗುವಾಗ ಅದನ್ನು ಮುಟ್ಟಿ ಮಾತನಾಡಿಸುವುದೆಂದರೆ ಎಲ್ಲ ಮಕ್ಕಳಿಗೂ ಪ್ರಿಯ ತಾನೇ?ಹಾಲು ಕುಡಿಯಿತಾ? ಹಣ್ಣು ಕುಕ್ಕಿ ತಿಂದಿತಾ? ಅಂತ ಆಗಾಗ್ಗೆ ಹೋಗಿ ಇಣುಕಿ ನೋಡಿದ್ದೇ ಬಂತು. ತನ್ನೆಡೆಗೆ ಇಟ್ಟ ಆಹಾರದ ಕಡೆಗೆ ಅದು ಇನಿತು ಲಕ್ಷ್ಯವೂ ತೋರಿದ್ದಂತಿಲ್ಲ. ಅಷ್ಟು ಭಯಭೀತವಾಗಿ ಬಿಡುಗಡೆಗಾಗಿ ಕಾತರಿಸುತ್ತಿತ್ತು. ಹೊಸ ಅತಿಥಿಯನ್ನು ನೋಡಿದ ಮಗನಿಗೆ ಇವತ್ತು ಆಟವೂ ಬೇಡ ತಿಂಡಿಯೂ ಬೇಡ. ಹಕ್ಕಿಯನ್ನು ತನ್ನ ಹಿಡಿಯೊಳಗಿಟ್ಟುಕ್ಕೊಂಡು ಮುದ್ದು ಮಾಡುವಾಗ ಅದು ಎಲ್ಲಿ ಅಪ್ಪಚ್ಚಿ ಆಗಿ ಸತ್ತೇ ಹೋಗಿ ಬಿಡುತ್ತೆ ಏನೋ ಅನ್ನೋ ಭಯ ನನಗೆ. ಅವನನ್ನು ಹೇಗೆಲ್ಲಾ ಪುಸಲಾಯಿಸಿ, ಅಂಗೈಯೊಳಗಿನ ಹಕ್ಕಿಯನ್ನು ಅಂಗಳಕ್ಕೆ ಹಾರಿ ಬಿಟ್ಟಾಗ, ಅದು ಸಂತಸದಿಂದಲೇ ಒಮ್ಮೆಗೆ ಸಿಳ್ಳೆ ಹಾಕುತ್ತಾ ಹಾರುವುದ ಕಂಡಾಗ. ಸ್ವಾತಂತ್ರ್ಯವೆಂಬುದು ಎಲ್ಲ ಸುಖಕ್ಕಿಂತಲೂ ಮಿಗಿಲು ಅಂತ ಅನ್ನಿಸುವ ಹಾಗಾಯ್ತು.
ಎಳವೆಯಲ್ಲಿ ಅಮ್ಮ ನೆಟ್ಟ ಅಲಸಂಡೆ ಬಳ್ಳಿಗಳ ಎಡೆಯಲ್ಲಿ, ತಲೆಯಲ್ಲಿ ಕೆಂಪು ಜುಟ್ಟಿರುವ ಸುಂದರವಾದ ಹಕ್ಕಿಯೊಂದು ಗೂಡು ಕಟ್ಟಿ ಮರಿ ಮಾಡುತ್ತಿತ್ತು. ಅದು ಇಡುವ ಎರಡೋ ಮೂರೋ ತತ್ತಿಗಳು ಬಣ್ಣ ಬಣ್ಣ ಮಾತ್ರ ನೆಲ್ಲಿಕಾಯಿಗಿಂತಲೂ ಚಿಕ್ಕ ಗಾತ್ರ. ಅಂತಹ ಹಕ್ಕಿ ಗೂಡುಗಳು ಆವಾಗಲೆಲ್ಲಾ ಬೇಕಾದಷ್ಟು ಕಾಣ ಸಿಗುತ್ತಿದ್ದವು. ಕೆಲವೊಮ್ಮೆ ಆ ಕೆಂಪು ಜುಟ್ಟಿನ ಹಕ್ಕಿಯ ಗೂಡಿನಿಂದ ಅದರ ಮೊಟ್ಟೆಯನ್ನು ಹೊರತೆಗೆದು ನಾವು ಓರಗೆಯ ಮಕ್ಕಳೆಲ್ಲಾ ಸೇರಿಕ್ಕೊಂಡು, ಹಿತ್ತಲಿನ ಮೂಲೆಯಲ್ಲಿ ಮೂರು ಸಣ್ಣ ಕಲ್ಲಿನ ಒಲೆ ಹಾಕಿ ಆಮ್ಲೇಟ್ ಮಾಡಿ ತಿನ್ನುತ್ತಿದ್ದೆವು. ಅಷ್ಟು ಚಿಕ್ಕ ತತ್ತಿಯಲ್ಲಿ ಎಷ್ಟು ದೊಡ್ಡ ಆಮ್ಲೇಟ್ ಆಗುತ್ತಿತ್ತೋ. . ? ಅದನ್ನು ನಾವು ಅಷ್ಟೂ ಮಂದಿ ಹೇಗೆ ಪಾಲು ಹಂಚಿ ತಿಂದೆವೋ. . ?ಒಂದೂ ನೆನಪಿಲ್ಲ. ಆದರೆ ಗೂಡಿನಿಂದ ಹಕ್ಕಿ ಮೊಟ್ಟೆ ಎಗರಿಸಿದ್ದು, ಆಮ್ಲೇಟ್ ಮಾಡಿ ತಿಂದದ್ದು, ಆಮೇಲೆ ಪಾಪ! ಆ ಹಕ್ಕಿ ಕಾಣದ ಮೊಟ್ಟೆಗಾಗಿ ಎಷ್ಟೆಲ್ಲಾ ಹುಡುಕಾಡಿ ಪರಿತಪಿಸಿತೋ ಅಂತ ತೀರದಷ್ಟು ವ್ಯಥೆ ಪಟ್ಟುಕ್ಕೊಂಡದ್ದೂ. ಅದನ್ನೆಲ್ಲವನ್ನೂ ಈಗ ಮಕ್ಕಳಿಗೆ ಕಣ್ಣಿಗೆ ಕಟ್ಟುವಂತೆ ಕತೆ ಹೆಣೆದು ಹೇಳುವುದೂ. ಎಲ್ಲವೂ ಕೂಡ ಸತ್ಯ. ಮಾರನೇ ದಿನ ಕಳ್ಳರಂತೆ ಬೆಕ್ಕಿನ ಹೆಜ್ಜೆ ಹಾಕಿ ಗೂಡಿನತ್ತ ಹಣಕಿ ಹಾಕಿ ನೋಡಿದರೆ ಹಕ್ಕಿಗಳ ಸುಳಿವೇ ಇಲ್ಲ. ಅದಾಗಲೇ ಅಪಾಯದ ಮುನ್ಸೂಚನೆಯರಿತ ಅವುಗಳು ಹಾರಿ ಹೋಗಿ ಬಿಟ್ಟಿವೆ. ಅಷ್ಟೂ ಸೂಕ್ಷ್ಮಗ್ರಾಹಿಗಳು ಹಕ್ಕಿಗಳು. ಇನ್ನು ಹಲಸಿನ ಹಣ್ಣು ಆಗುವ ಸಮಯದಲ್ಲಿ ಚಿಕ್ಕ ಕೋಲನ್ನು ಹಲಸಿನ ಮಾಯಣದಲ್ಲಿ ಅದ್ದಿ, ಕಾಣದಂತೆ ಅದು ಹಾರಿ ಬರುವ ಜಾಗಕ್ಕೆ ಅಡ್ಡಲಾಗಿ ಇಡುತ್ತಿದ್ದೆವು. . ಕೆಲವೊಮ್ಮೆ ಮಾಯಣ ಪಾದಕ್ಕೆ, ರೆಕ್ಕೆಗೆ ಅಂಟಿಕ್ಕೊಂಡು ಹಕ್ಕಿಗಳು ಹಾರಲಾರದೆ ಚಡಪಡಿಸುವಾಗ, ಅದನ್ನ ಮೆಲ್ಲಗೆ ಎತ್ತಿ ತಂದು ಮನೆಯೊಳಗೆ ಸಾಕುವ ವಿಫಲ ಪ್ರಯತ್ನವನ್ನೂ ಮಾಡುತ್ತಿದ್ದೆವು. ನಮ್ಮ ಕೆಲಸದ ಜಾಡು ತಿಳಿದು ಅದಾಗಲೇ ಜಾಗ ಖಾಲಿ ಮಾಡಿ ಬಿಡುವ ಸಂಧರ್ಭಗಳೂ ಇದ್ದವು. ಈಗ ಅಳಿವಿನ ಅಂಚಿನಲ್ಲಿರುವ ಪಕ್ಷಿಗಳ ಕಾಣುವಾಗಲೆಲ್ಲಾ ಅಯ್ಯೋ ಅಂತ ಪಿಚ್ಚೆನಿಸಿ ಒಡಲೊಳಗೆ ಹೇಳಿಕೊಳ್ಳಲಾಗದ ಸಂಕಟ. ಸತ್ತ ಮೇಲೆ ನರಕ ಸ್ವರ್ಗ ಇರುವುದಾದರೆ, ಹಕ್ಕಿಯ ಮೊಟ್ಟೆ ಆಮ್ಲೇಟ್ ಮಾಡಿದ, ಹಾಗೂ ಅದರ ಪಾದಕ್ಕೆ ಮಾಯಣ ಮೆತ್ತಿ ಹಕ್ಕಿ ಹಿಡಿದ ವಿಷಯದಲ್ಲಿ ನನಗೆ ನರಕ ಪ್ರಾಪ್ತಿ ಗ್ಯಾರಂಟಿ ಅಂತ ಆಗಾಗ್ಗೆ ಹಕ್ಕಿ ನೋಡಿದಾಗಲೆಲ್ಲಾ ಜಿಜ್ನಾಸೆ ಕಾಡುವುದಿದೆ.
ಮಳೆಗಾಲದ ಸಮಯದಲ್ಲಿ ನಡು ನಡುವೆ ಬಿಸಿಲು ಬಂದಾಗ ಅಂಗಳದ ನಿಂತ ನೀರಿನಲ್ಲಿ ಎಳೆ ಬಿಸಿಲಿಗೆ ಮೈಯೊಡ್ಡಿ ಹಿಂಡು ಹಿಂಡು ನೆಲಗುಬ್ಬಿಗಳು ಅಲೆಗಳೇಳಿಸುತ್ತಾ ನೀರೆರಚಿಕ್ಕೊಂಡು ಮೀಯುವ ಸೊಬಗು, ನೀರಾರಿದ ಮೇಲೂ ಅಕ್ಷಿ ಪಟಲದ ಮುಂದೆ ಭಾವ ಚಿತ್ರದಂತೆ ಸರಿದು ಹೋಗುತ್ತದೆ. ಆದರೆ ಮೊನ್ನೆ ಮೊನ್ನೆ ಹೂವಿನ ಗಿಡದಲ್ಲಿ , ಅಪರೂಪಕ್ಕೆಂಬಂತೆ ಕಂಡ ಹಕ್ಕಿ ಗೂಡನ್ನು ಕಂಡು ಸಂಭ್ರಮ ಪಡುತ್ತಿರ ಬೇಕಾದರೆ, ಅದು ಮೊಟ್ಟೆ ಇಟ್ಟು, ಮರಿ ಮಾಡಿ ಚಿಂವ್‌ಗುಡುತ್ತಿರಬೇಕಾದರೆ, ಹೇಗೋ ನಮ್ಮ ಮನೆಯ ನಾಯಿಗೆ ಸುದ್ದಿ ಸಿಕ್ಕು, ಸಮಯ ಕಾದು ನೋಡಿ ಹೊಂಚು ಹಾಕಿ, ಹರಸಾಹಸಪಟ್ಟು ಮರಿಗಳೆರಡನ್ನೂ ಕಚ್ಚಿ ಗೂಡಿನಿಂದ ಹೊರಗೆಳೆದು ಹಾಕಿಬಿಟ್ಟಿದೆ. ಬೆಳ್ಳಂಬೆಳಗ್ಗೇ ಇನ್ನೂ ಕಣ್ಣು ಹುಟ್ಟದ ಮರಿ ಹಕ್ಕಿಗಳು ನೆಲದಲ್ಲಿಅನಾಥ ಶವವಾಗಿ ಬಿದ್ದದ್ದನ್ನು ನೋಡಿ ಕರುಳು ಹಿಚುಕಿದಂತಹ ವೇದನೆ. ಅದೇ ಗಿಡದ ಕೊಂಬೆ ಮೇಲೆ ಕುಳಿತುಕ್ಕೊಂಡು ಜೋಡಿ ಹಕ್ಕಿಗಳೆರಡೂ ಒಂದಷ್ಟು ಹೊತ್ತು ರೋಧಿಸುತ್ತಾ, ಪ್ರಲಾಪಿಸುತ್ತಾ ಇದ್ದದ್ದು ಆಕ್ರೋಶಕ್ಕೋ, ಬೇಸರಕ್ಕೋ, ಅಸಹಾಯಕತೆಗೋ ಒಂದೂ ಅರ್ಥೈಸಲಾಗಲಿಲ್ಲ. ಗಿಡ ದಳ ದಳನೇ ಎರಡು ದಳ ಹೂ ಉದುರಿಸಿ ಸಂತಾಪ ಸೂಚಿಸಿದ್ದಕ್ಕೆ ಹೂವಿನ ಗಿಡದ ಬುಡ ಸಾಕ್ಷಿ ಹೇಳುತ್ತಿತ್ತು.
ಮೊನ್ನೆ ಮೊನ್ನೆಯವರೆಗೂ ಮನೆಯ ಮಾಳಿಗೆಯಲ್ಲಿ ಕಸ ಕಡ್ಡಿ , ಬೇರು ನಾರು ತಂದು ಗೂಡು ಕಟ್ಟಿ ಮರಿ ಮಾಡಿ ಚಿಲಿಪಿಲಿಗುಟ್ಟುತ್ತಿದ್ದ ಗುಬ್ಬಿ ಹಕ್ಕಿಗಳ ಸದ್ದು ಕೇಳದೆ ಬಹಳೇ ದಿನಗಳಾಯಿತು. ಆಗಾಗ್ಗೆ ರಿಂಗಣಿಸುವ ಮೊಬೈಲ್ ಸದ್ದು ಅವುಗಳ ಕಲರವದ ಸದ್ದಿಗೆ ಭಂಗ ತರುತ್ತಿತ್ತೋ ಏನೋ. ಮನೆಯ ಮುಂದೆಯೇ ಆಳೆತ್ತರದ ಟವರ್ ನೋಡಿ ಅದಕ್ಕೆ ಭೀತಿ ಇನ್ನೂ ಹೆಚ್ಚಾಗಿರಬೇಕು. ಹೇಳದೇ ಕೇಳದೇ ಮನುಷ್ಯ ವಾಸವಿಲ್ಲದ ಸ್ಥಳಕ್ಕೆ ಬೇಸತ್ತು ತಾವು ಹುಡುಕಿಕ್ಕೊಂಡು ಹೋಗಿರಬೇಕು.
ಇಲ್ಲಿ ಈಗ ನೋಡಿದರೆ. . ಗುಬ್ಬಿಗಳೂ ಇಲ್ಲದೆ, ಮರಿ ಕಳೆದುಕ್ಕೊಂಡ ದು:ಖಕ್ಕೆ ಚೆಂದದ ಕೆಂಪು ಜುಟ್ಟಿನ ಹಕ್ಕಿಯೂ ಹಾರಿ ಹೋಗಿ ವಾತಾವರಣವಿಡೀ ಬಿಕೋ ಅನ್ನುತ್ತಿದೆ. ಪಾದವಿಲ್ಲದ ಕಪ್ಪು ಬಿಳಿ ಹಕ್ಕಿ ಮಾತ್ರ ತನ್ನ ಸಂಗಾತಿಯೊಂದಿಗೆ ತಪ್ಪದೆ ದಿನಕ್ಕೊಂದಾವರ್ತಿ ಹಾಜರಿ ಹಾಕಿ ಸಮಸ್ತ ಸುಖ ದು:ಖಗಳನ್ನೆಲ್ಲಾ ತೂಗಿ ಹೋಗುತ್ತಿದೆ. ನಾನೋ ಅದರ ಬೆರಳಿಲ್ಲದ ಪಾದದ ನಡಿಗೆಯನ್ನು ವಿಷಾದದಿಂದ ನೋಡುತ್ತಾ, ನನ್ನ ಬೆರಳುಗಳ ನಡುವೆ ಪೆನ್ನು ಸಿಕ್ಕಿಸಿಕ್ಕೊಂಡು ಅಷ್ಟೇ ವಿಷಾದದಿಂದ, ಹಗುರವಾಗುವ ತವಕದಲ್ಲಿ ಹಕ್ಕಿಯಂತ ಒಂದು ಕವಿತೆಯನ್ನು ಬರೆಯಲು ಹೆಣಗಾಡುತ್ತಿರುವೆ.
*****
ನಿಮ್ಮ ಲೇಖನ ತುಂಬಾ ಚೆನ್ನಾಗಿ ಬಂದಿದೆ. ಹಕ್ಕಿಗಳ ಮೇಲಿನ ಪ್ರೀತಿ ನಿಮ್ಮ ಲೇಖನದಲ್ಲಿ ಎದ್ದು ಕಾಣುತ್ತದೆ.