ಬೆರಗೊಂದು ಕೊರಗಾಗಿ ಕಾಡಿದಾಗ…. : ಸುಂದರಿ ಡಿ.

ತನ್ನ ಪಾಡಿಗೆ ತಾನು ಹಾಡಿಕೊಂಡು, ಹನಿಗಳ ಚುಮುಕಿಸಿ, ಬಳುಕುತ ಬಿಸಿಲ ನೇರ ಕೋಲುಗಳ ಸ್ಪರ್ಶದಿಂದಲೇ ಮತ್ತಷ್ಟು ಹೊಳಪಿನಿಂದ ತನ್ನಾಳದ ಮರಳನೂ ಚಿನ್ನದಂತೆ ಹೊಳೆಯಿಸುತ, ಜುಳು-ಜುಳು ನಾದದೊಂದಿಗೇ ಹರಿಯುತಿದ್ದ ನೀರ ಬದಿಯಲಿ ತನ್ನ ಸೊಬಗತೋರುತ, ನೀರ ಸೊಬಗನೂ ಹೆಚ್ಚಿಸಲೆಂಬಂತೆ ಅದರ ಸತ್ವವನೇ ಹೀರಿ ನಿಜವಾದ ಹಸಿರೆಂದರೆ ಇದೇ ಎಂಬಂತೆ ಬೆಳೆದು ನಿಂತಿದ್ದ ಗಿಡಗೆಂಟೆಗಳು, ಅವುಗಳಲ್ಲಿ ಬೆಟ್ಟದ ಹೂವಿನಂತೆ ಇತರರನು ತಮ್ಮತ್ತ ಸೆಳೆವ ಯಾವ ಗೋಜಿಗೂ ಹೋಗದೆ ಬೇಲಿಯ ಹೂವೆಂದೇ ಕರೆಸಿಕೊಂಡರೂ ಸಹಜ ಸೌಂದರ್ಯದ ಕಾರಣವೊಂದರಿಂದಲೇ ತಮ್ಮತ್ತ ತಿರುಗಿ ನೋಡುವಂತೆ ಮಾಡುತ್ತಿದ್ದ ಆ ಹೂಗಳ ಹೆಸರನೇ ನಾ ಇಲ್ಲಿಯವರೆಗೆ ಕಾಣೆ!. ಅವು ತಮಗಾಗಿ ಅರಳಿ, ತಮಗಾಗಿ ಮತ್ತು ತಮ್ಮಂತೆಯೇ ಬದುಕಿ ಬದುಕ ಮುಗಿಸುವ ಹಲ ಪುಟ್ಟ-ಪುಟ್ಟ ಹೂಗಳು. ಈ ಎಲ್ಲ ಸೌಂದರ್ಯವ ನೋಡಲೆಂಬಂತೆ ಸೌಂದರ್ಯದ ಗಣಿಯೇ ಆಗಿದ್ದ ಬಣ್ಣದ ಪುಟ್ಟ ಹಕ್ಕಿಯೊಂದು ಆಗಾಗ ಹಾರಿ ಬಂದು ಆ ಗಿಡಗಳ ಮೇಲೆ ಕುಳಿತು. ಎಲೆಗಳ ಮರೆಗೆ ತೆರಳಿ ನಿಂತಲ್ಲಿ ನಿಲಲಾರದೇ ತಾನೇ ಅವಿತುಕೊಳುತಾ, ತಾನೇ ಹಿಡಿಯಲು ಹವಣಿಸುತಲೂ ಇರುವಂತೆ ಏಕಪಾತ್ರಾಭಿನಯ ಮಾಡುತ ಪಿಳ-ಪಿಳನೇ ಅತ್ತಿಂದಿತ್ತ, ಇತ್ತಿಂದತ್ತ ಪುಟಿಯುವ ಚೆಂಡಾಗಿ ಮೇಲಿನ ಈ ಎಲ್ಲ ಸೌಂದರ್ಯವನೂ ಹೆಚ್ಚಿಸುತಲೇ ಈ ಎಲ್ಲವನೂ ಸವಿಯುವ ಬಹುದೊಡ್ಡ ಅವಕಾಶವಿತ್ತ ಪರಿಯ ಮರೆವುದಾದರೂ ಎಂತು??!!

ಆ ಹಕ್ಕಿ ಬರುತ್ತಿದ್ದುದು ಈ ಹೂಗಳ, ಗಿಡಗಳ ಮೇಲಿರುತ್ತಿದ್ದ ಪುಟ್ಟ ಹುಳುಗಳೆಂಬ ಗುಟುಕಿನ ಸಲುವಾಗಿ. ಆ ಬಣ್ಣ-ಬಣ್ಣದ ಹಕ್ಕಿ ನನ್ನ ಕಣ್ಣಿಗೆ ಬಹು ವಿಸ್ಮಯವಾಗಿಯೇ ತೋರುತ್ತಿತ್ತು: ಪ್ರತೀ ನೋಟದಲೂ ಕೂಡ. ನೈಜ ಮತ್ತು ಮಾನಸಿಕ ಅಂಧತ್ವದ ಕಾರಣವೊಂದರಿಂದಲೇ ಬಹಳ ಮಂದಿಗೆ ಈ ಸೌಂದರ್ಯವ ಸವಿಯುವ ಅವಕಾಶವೇ ಲಭ್ಯವಾಗದಿರುವಾಗ ಈ ಪರಿಯ ಸೌಂದರ್ಯವ ಕಣ್ಣಿರುವ ಮತ್ತು ಮನವ ಕಣ್ಣನು ತೆರೆದುನೋಡಬಲ್ಲ ಯಾರಾದರೂ ಹೇಗೆ ತಾನೇ ಸವಿಯದಿರುವರು? ಅನುದಿನವಲ್ಲದಿದ್ದರೂ ಆಗಾಗ, ಸಮಯ ಸಿಕ್ಕಾಗ, ಮಗದೊಂದು ಕೆಲಸದಲಿ ಮಗ್ನಳಾದಾಗಲೂ, ಅನ್ಯಮನಸ್ಕಳಾಗಿಯೂ ಆ ಹಕ್ಕಿಯನು ಈ ಇಡೀ ಪರಿಸರದ ಸೌಂದರ್ಯದೊಟ್ಟಿಗೆ ಸವಿಯುವ ಅವಕಾಶವನ್ನಂತೂ ನಾನೆಂದೂ ಕಳೆದುಕೊಂಡವಳಲ್ಲ. ಆ ಮುಖೇನ ಇಂತಹ ಅದ್ಭುತಗಳ ಆಗರವಾದ ಈ ಭೂತಾಯಿಗೆ, ಯಾವ ಅಪೇಕ್ಷೆಯೂ ಇಲ್ಲದೇ ಇಂತಹ ಸೌಂದರ್ಯವ ಅನುದಿನವೂ ಉಣಬಡಿಸುವ ದೈವಕ್ಕೆ ಮನದುಂಬಿ, ಕಣ್ತುಂಬಿ, ಮೆಚ್ಚುಗೆಯಿಂದಲೇ ಪೂಜೆಗೈವ ಕಾಯಕವ ಮಾಡದಿದ್ದರೆ ಅದೆಂತು!!!

ಕೆಲಸದೊತ್ತಡವೋ, ಬದುಕಿನ ಜಂಜಾಟವೋ ಅರಿಯೆ ಮೂರ್ನಾಲ್ಕು ದಿನಗಳಿಂದ ಈ ಪರಿಸರದ ಸೌಂದರ್ಯವನು, ಆ ಹಕ್ಕಿಯನೂ ನಾ ನೋಡಲೇ ಇಲ್ಲ. ಬಿಡುವಾದ ಅಂದು ಈ ದಿನ ನೋಡಿಯೇಬಿಡೋಣವೆಂದು ಎಂದಿನಂತೆ ನೀರಲಿ ಕಾಲಿಳಿಬಿಟ್ಟು ಕುಳಿತೆ. ಕೂರುವ ಭಂಗಿ, ಕಾಯುವ ಪರಿ, ವೀಕ್ಷಣೆಯ ಕೇಂದ್ರಗಳು, ಗಡಿಯಾರದ ಮುಳ್ಳುಗಳ ಸ್ಥಾನಗಳು ಬದಲಾದವೇ ಹೊರತು ಕಾದು ಕುಳಿತ ನೋಟ ಸಿಕ್ಕಲಿಲ್ಲ, ಹಾಗಾಗಿಯೇ ನಾ ನೊಂದುಕೊಂಡೆ ಮತ್ತು ಹೀಗಂದುಕೊಂಡೆ; ಅದಕೂ ಗೂಡು ಕಟ್ಟುವ, ಮೊಟ್ಟೆಯನಿಟ್ಟು, ಕಾವುಕೊಟ್ಟು, ಮರಿಗಳಿಗೆ ಗುಟುಕು ಕೊಟ್ಟು, ಅವುಗಳ ಜೀವವನ್ನು ಕಾಪುವ ಜವಾಬ್ದಾರಿಗಳಿಲ್ಲವೇ? ಜೊತೆಗೆ ನಮ್ಮಂತೆ ಆಹಾರ ಸಂಗ್ರಹಣೆಗಾಗಿಯೇ ಅವೆಲ್ಲಿ ಸ್ಟೋರ್ ರೂಂಕಟ್ಟಿ ಕೂಡಿಟ್ಟಿವೆ ? ಆಯಾ ದಿನದ ಆಹಾರವ ಅಂದಂದೇ ತಂದು ಜೀವಿಸುವ ಜೀವನದ ಉಸಾಬರಿ ಅದಕ್ಕಿಲ್ಲವೇ ಎಂತಲೂ ಸಮಾಧಾನಿಸಿಕೊಂಡೆ. ಅನುದಿನದ ಕಾಯಕದಲೂ ಮಗ್ನಳಾದೆ.

ಮರುದಿನವೇ ಅತ್ತ ಹೋಗಬೇಕಾಗಿ ಬಂತು ಹೋದೆ ಆದರೆ ಆ ಹಕ್ಕಿಯ ಸೌಂದರ್ಯವ ಸವಿಯಲೂ ಅಲ್ಲ, ಚಿಲಿಪಿಲಿಯ ಸದ್ದನಾಲಿಸುವ ಸಲುವಾಗಿಯೂ ಅಲ್ಲ, ಬದಲಿಗೆ ಯಾವುದೋ ಕಾರಣ ನಿಮಿತ್ತ ಅನಿಸುತ್ತೆ. ಅಲ್ಲೇನೋ ಇದೆ ಎನಿಸಿತು ಏಕೆಂದರೆ ಸಣ್ಣ-ಸಣ್ಣ ಕೆಂಪಿರುವೆ, ದೊಡ್ಡ ಕಪ್ಪಿರುವೆ, ಕಪ್ಪನೆಯ ಅದೆಂತದೋ ಹುಳುಗಳು, ಯಾವುದೋ ಒಂದು ಆಕೃತಿಯ ಮೇಲೆ ಪೂರ್ಣ ಆವರಿಸಿಕೊಂಡ ಪರಿ ಹೇಗಿತ್ತೆಂದರೆ! ತಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಸಲುವಾಗಿ ಇಡೀದೇಶದ ಜನತೆ ಒಂದೆಡೆ ನಿಂತುದನು ವಿಮಾನದಲಿ ಬಹುದೂರದಿಂದ ಸೆರೆಹಿಡಿದಾಗ ಕಾಣುವ ಚಿತ್ರಣದಂತೆ, ಮಾದಪ್ಪನ ಜಾತ್ರೆಯಲೋ, ಚುಂಚನಗಿರಿ ಭೈರವನ ತೇರನ್ನು ಕತ್ತಲಲೇ ಎಳೆಯುತ್ತಿದ್ದರೂ ಕತ್ತಲನೂ ನಾಚಿಸುವಂತೆ ಕಿಕ್ಕಿರಿದು ಆವರಿಸಿದ ಜನ ಸಮೂಹ ನಿಂತ ನೆಲದ ದರ್ಶನವನೂ ಮಾಡಲು ಅವಕಾಶವೀಯದಂಥಾ ದಟ್ಟಣೆಯ ಪರಿ ಹೇಗಿರುತ್ತದೋ ಹಾಗೆ ಆ ಯಾವುದೋ ಇಡೀ ಆಕೃತಿಯ ಮೇಲೆ ಹುಳುಗಳ ರಾಶಿ ಮುತ್ತಿತ್ತು. ಆದರೆ ಈಗಿನ ರಾಜಕಾರಣಿಗಳು ಬೇಕೆಂದಾಗ, ಬೇಕಾದುದು ಲಭ್ಯವಾಗುವಾಗಲೆಲ್ಲಾ ಪಕ್ಷಾಂತರವ ಮಾಡುವಂತೆ ಆ ಆಕೃತಿಯ ಮೇಲೆ ಮುತ್ತಿದ್ದ ಚಂಚಲ ಮನಸಿನ ಹುಳುಗಳು ಅತ್ತಿಂದಿತ್ತ-ಇತ್ತಿಂದತ್ತ ಸ್ಥಾನಪಲ್ಲಟ ಮಾಡುತ್ತಿದ್ದುದರಿಂದ ಅರ್ಧನಾರೀಶ್ವರನಂತೆ ಅ ಹುಳುಗಳು ಮುತ್ತಿದ್ದ ಆಕೃತಿಯ ಭಾಗಶಃ ದರ್ಶನ ಆಗಾಗ ಆಗುತ್ತಲಿತ್ತು. ಹುಳುಗಳ ಹಾರಾಟದ ಕಾರಣದಿಂದಾಗಿ ಭಾಗಶಃ ದರ್ಶನವಾದಂತೆಲ್ಲಾ ಎಲ್ಲೋ ಕಂಡ, ಅದೂ ಆಪ್ತಭಾವದಿಂದ ನೋಡಿದ ಏನೋ ಅಲ್ಲಿದೆ ಅನಿಸಿತು. ಬಹಳ ಸೂಕ್ಷ್ಮವಾಗಿ ಗಮನಿಸಿದೆ. ಅಲ್ಲಿ ಅನೂಹ್ಯ ಅಚ್ಚರಿಯೊಂದು ಕಾದಿತ್ತು. ಅಚ್ಚರಿ ಎಂದರೆ ಒಳಿತೆಂಬ ಭಾವವೂ ಬರಬಹುದು ಅದಕ್ಕಾಗಿ ನಾನಿಲ್ಲಿ ಅನೂಹ್ಯ ಆಘಾತಕಾರಿ ಘಟನೆಯೊಂದು ಜರುಗಿ ಬಹಳ ಕಾಲವೇ ಸರಿದುಹೋಗಿತ್ತೆಂದೇ ಹೇಳಬಯಸುತ್ತೇನೆ.

ಪಿಳ-ಪಿಳನೇ ನೋಡುತ, ಹಾರುತ ತನ್ನ ಜೀವನದ ನಿತ್ಯಕೈಂಕರ್ಯವ ಮಾಡುತಲೇ ನನ್ನ ಮನವ ಸೆಳೆದ ಆ ಹಕ್ಕಿ ಸತ್ತು ಬಿದ್ದಿತ್ತು ಅದರ ಶರೀರದ ಮೇಲೇ ಆ ವಿವಿಧ ಹುಳುಗಳು ಕೂತು ತಮ್ಮ ಗುಟುಕ ಪಡೆವ ಹವಣಿಕೆಯಲ್ಲಿದ್ದವು. ಬಹಳವೇ ನೋವಾಯಿತು. ಅದನ್ನು ಈ ಪರಿಯಲಿ ಹಚ್ಚಿಕೊಂಡ ಯಾವ ಅರಿವೂ ಆ ಹಕ್ಕಿಗಿರಲಿಲ್ಲ, ನನಗೂ ಕೂಡ,. ಆದರೆ ಅದು ತನ್ನ ಜೀವನದ ಯಾತ್ರೆಯ ಮುಗಿಸಿ ಆಗಿತ್ತು.

ಮನ ಬಹಳವೇ ಕನಲಿತು. ಇಷ್ಟು ದಿನ ಈ ಪರಿಸರದಲ್ಲಿ ನನಗೆ ಸಿಗುತ್ತಿದ್ದ ಬೆರಗು ಆ ಹಕ್ಕಿಯ ಶಾಶ್ವತ ಗೈರಿನಿಂದಾಗಿ ಶೂನ್ಯ ಎನಿಸತೊಡಗಿತು. ಆ ಹಕ್ಕಿಯ ಸಾವಿನ ಸತ್ಯ ಗೊತ್ತಿರದ ಸಲುವಾಗಿ ಮನದಲೇ ಅದರ ಸಾವಿಗೆ ಕಾರಣವಾದ ದಾರಿ ಯಾವುದಿರಬಹುದೆಂದು ಊಹಿಸತೊಡಗಿದೆ. ಈ ಹಸಿರು ಮೆಳೆಗಳ ಮೇಲೆ ಹಸಿರು ಹಾವುಗಳಿರುತ್ತವೆ, ಅವುಗಳು ಮನುಷ್ಯನ ಕಣ್ಣನ್ನೇ ತಿಂದುಬಿಡುತ್ತವೇ, ಹಾಗಾಗಿ ನೋಡಿಕೊಂಡು ಓಡಾಡಬೇಕು ಎಂದು ಯಾವುದೋ ಸಂದರ್ಭದಲಿ ಕೇಳಿದ ಮಾತು ನೆನಪಾಗಿ ಆ ಹಸಿರು ಹಾವು ಇದನ್ನು ಕಚ್ಚಿತೇ ?, ಹಾಗಾಗಿ ವಿಷವೇರಿ ಸತ್ತಿತೇ?, ಸಣ್ಣ-ಸಣ್ಣ ಮೀನುಗಳ ಬೇಟೆಗಾಗಿ ನವಿರು ಹೆಜ್ಜೆಗಳನಿಡುವುದರಲಿ ನಿಪುಣವಾದ ಹಲ ದೊಡ್ಡಗಾತ್ರದ ಹಕ್ಕಿಗಳು ಬರುವುದ ನಾ ಕಂಡಿರುವೆ. ಆ ಹಕ್ಕಿಗಳು ತನಗಿಂತ ಅಬಲವಾದ ಪ್ರತಿಸ್ಪರ್ಧಿ ಎಂದು ಕುಟುಕಿ ಕೊಂದಿತೇ?, ಇಲ್ಲ ಇಲ್ಲ…. ಹಾಗೇನಾದರೂ ಆಗಿದ್ದಿದ್ದರೆ ಆ ಹಕ್ಕಿ ಅದನ್ನು ತಿಂದು ತೇಗುತ್ತಿತ್ತಲ್ಲವೇ ? ಮತ್ತೆಲ್ಲಿ ಹೀಗೆ ದಡದ ಮೇಲೆ ಹುಳುಗಳಿಗೆ ಆಹಾರವಾಗಲಾಗುತ್ತಿತ್ತು?. ಛೆ ಅದಲ್ಲ… ಹಾಗಾದರೆ ಸಹಜ ಸಾವೇ??!! ಇರಬಹುದು,

ಆ ಹಕ್ಕಿ ಸಾಯುವ ಕೊನೆಯ ಕ್ಷಣದಲಿ ವಿಲವಿಲನೆ ಒದ್ದಾಡಿತೋ?, ಹೇಗೆ ಜೀವ ಬಿಟ್ಟಿತೋ?, ಅಂತೂ ಸಾವಿನ ಶೂಲದಿರಿತ ಒಂದೆಡೆಯಾದರೆ ಆ ವೇಳೆಯಲೇ ಇತರ ಜಂತುಗಳ ಗುಟುಕಿನ ತುತ್ತಾಗುವ ಹಿಂಸೆಯೂ ಆಗದಿರದು. ಛೇ ಅನಿಸಿತು. ಸಾವು ಸಮೀಪಿಸುವ ವೇಳೆಯಲಿ ಬದುಕಿಗಾಗಿ ಹೋರಾಡಿ ಜರ್ಝರಿತವಾದಾಗ ಪ್ರಬಲ ಮತ್ತು ಇದರ ನೋವನು ಅರಿಯದ, ಆ ಅರಿವೂ ಬೇಕಿರದ, ಅದರ ಅಭದ್ರ ಸ್ಥಿತಿಯ ಪರೀಕ್ಷಿಸುವ ಜಂತುಗಳ ಇರಿತಕೆ ಮತ್ತದೆಷ್ಟು ಬಲಿಯಾಯಿತೋ? ಗುಟುಕಿಗಾಗಿ ಇರಿಯುವ ಪರಿ ಬೇರೆ, ಅದು ಬಹಳವೇ ಕಾಡದು ಏಕೆಂದರೆ ಪ್ರತೀ ಜೀವಿಯೂ ಮತ್ತೊಂದು ಜೀವಿಯನ್ನು ಆಶ್ರಯಿಸಿರುವ ವಿಚಾರ ಜೈವಿಕ ಸರಪಳಿಯ ಪಾಠ ಕೇಳಿದಾಗಿನಿಂದಲೂ ನೆನಪಿದೆ ಮತ್ತು ಮೆದುಳು ಬಲಿಯುತಲೇ ಅದಕ್ಕೆ ಪೋಷಣೆ ನೀಡುವ ಹಲ ಘಟನೆಗಳು ಜರುಗಿ ಆ ಅರಿವೂ ಆಗಿದೆ, ಹಾಗಾಗಿ ಪರಸ್ಪರಾವಲಂಬನೆ ಆ ಮುಖೇನ ಸಾವು ನಿಶ್ಚಿತವೇ ಸರಿ. ಈ ಹಿಂದೆ .ಆ ಹಕ್ಕಿಯೂ ಆಗಾಗ ಬರುತ್ತಿದ್ದುದೂ ಅದರ ಗುಟುಕಿಗಾಗಿ ಅಲ್ಲವೇ? ಆಗಲ್ಲವೇ ಆ ಬೆರಗ ನಾ ಕಂಡಿದ್ದು! .

ಆದರೂ ಇಷ್ಟು ಬೇಗ ಅದೂ ಇಂತಹ ಸೌಂದರ್ಯ ಗಣಿಗೇ!! ಮರುಕ್ಷಣವೇ ಪಂಪನ ನೀಲಾಂಜನೆ ನೆನಪಾದಳು. ಸೌಂದರ್ಯಕ್ಕೆ ಸವಿದ ಕಣ್ಣಲ್ಲಿ ಸಾವಿಲ್ಲವಷ್ಟೇ, ಎಲ್ಲದಕ್ಕೂ ಸಾವಿದೆಯಲ್ಲ ಎಂದು ಸಂತೈಸಿಕೊಂಡೆ ಆದರೂ ನೋವನುಂಡೆ. ಕಡೆಗೆ

“ಜವನ ನಿಂದಿಪುದೇಕೆ ಸರ್ವಘಾತಕನೆಂದು ?
ಭುವಿಗೆ ವೃದ್ಧ ಸಮೃದ್ಧಯನು ಸುಮ್ಮನಿರಲ್
ನವಜನಕ್ಕೆಡೆಯೆತ್ತಲಾರುಮೆಡೆಬಿಡದೆ ನಿಲೆ?
ನವತೆಯವನಿಂ ಜಗಕೆ-ಮಂಕುತಿಮ್ಮ.”.

ಎಂಬ ಡಿ.ವಿ.ಜಿ ಅವರ ಮಾತಿನಂತೆ ಯಮನು ಎಲ್ಲರನೂ ಒಂದಲ್ಲ ಒಂದು ದಿವಸ ಸಾಯಿಸುತ್ತಾನೆಂದು ಸಾಯುವುದಕೆ ಯಾವ ಜೀವಿಗೂ ಇಷ್ಟವಿಲ್ಲದ ಕಾರಣ ಅವನ ಹೆಸರು ಕೇಳಿದೊಡನೇ ಎಲ್ಲರೂ ಹೆದರುತ್ತಾರೆ, ದೂಷಿಸುತ್ತಾರೆ. ಆದರೆ ಯಮ ತನ್ನ ಕೆಲಸವ ಮಾಡದಿದ್ದರೋ ಇಡೀ ಭೂಮಿಯಲ್ಲಿ ಹೊಸಜೀವಿಗಳ ಹುಟ್ಟಿಗೆ ಜಾಗವಿಲ್ಲವಾಗುತ್ತದೆ. ಹಾಗಾಗಿ ಯಮನಿರಬೇಕು, ಆತ ತನ್ನ ಕೆಲಸವ ಮಾಡುತಿರಬೇಕು. ಆಗಲೇ ಜಗಕೆ ನವ್ಯತೆಯ ಪ್ರಾಪ್ತಿ ಇದಲ್ಲವೇ ಜಗದ ನಿಯಮ ಎಂದು ನೋಯುತಲೇ ಸಂತೈಸಿಕೊಂಡೆ. ಇದೇ ಅಲ್ಲವೇ ಮನುಷ್ಯ ತನ್ನ ನೆಮ್ಮದಿಗಾಗಿ ಕಂಡುಕೊಂಡ ರಕ್ಷಣಾತಂತ್ರ.

-ಸುಂದರಿ ಡಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ರಾಜ್ ಮಂಜು
ರಾಜ್ ಮಂಜು
3 years ago

ಲಲಿತಪ್ರಬಂಧಕೆ ಕವಿತೆಯ ಸ್ಪರ್ಶ….ಸಕಲ ಜೀವಿಗಳ ಲೇಸನು ಬಯಸುವ ಲೇಖಕಿಯ ಮನದಂತರಾಳ…. ಪಾಡು ಹಾಡಾದ ಪವಾಡ….

ಮನೋಜ್ಞ ಬರೆಹ….ಸು ರಂ ಎಕ್ಕುಂಡಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವನ ಸಂಗ್ರಹ “ಬಕುಲದ ಹೂವು” ಗಳನು ಮತ್ತೆ ಓದಿದ ಅನುಭವ ಆಯಿತು…

ಮಾನವೀಯ ಜೀವಪರ ಕಾಳಜಿಗೆ ಅಭಿವಂದನೆ, ಪ್ರಕಟಿಸಿದ ಪಂಜುವಿಗೆ ಪ್ರಣಾಮಗಳು

– ಮನ್ರಾಜ್ಮೈಸೂರು, ೧೮-೧೨-೨೦೨೦

1
0
Would love your thoughts, please comment.x
()
x