ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ

ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ ಇವರಿಬ್ಬರೂ ಏನಾದರೊಂದು ಉದ್ಯೋಗ ಕೈಗೊಂಡು ಸುಖವಾಗಿರಲೆಂದು ಬಯಸುತ್ತಾನೆ.

ಆದರೆ ಕಥೆಯ ಹಾಸ್ಯದ ತಿರುಳು ಬಿಚ್ಚಿಕೊಳ್ಳುವುದು ಈ ಘಟನೆಯೊಂದಿಗೆ. ತರುಣ ಎಡ್ವರ್ಡನ ಸ್ನೇಹಿತ ವೆಲ್ಬ್ರೆಡ್‍ನ ಪತ್ರ ಆಕಸ್ಮಿಕವಾಗಿ ತಂದೆಯ ಕೈಸೇರುತ್ತದೆ. ಅಲ್ಲಿಯ ಒಕ್ಕಣಿಕೆಗೆ ಬೆದರಿ ತನ್ನ ಪುತ್ರ ಹಾದಿ ತಪ್ಪಿ ಹೋಗಿರುವನೆಂದು ತಿಳಿದು ಆತನ ಮೇಲೊಂದು ನಿಗಾ ಇಡಬೇಕಾದ ಅನಿವಾರ್ಯ ತೋರುತ್ತದೆ ತಂದೆಗೆ. ಆದನ್ನಾತ ತನ್ನ ಕೆಲಸಗಾರ ಬ್ರೇನ್‍ವರ್ಮನಲ್ಲಿ ತೋಡಿಕೊಳ್ಳುತ್ತಾನೆ. ಮಗನ ಮೇಲೆ ತನ್ನ ಬೇಹುಗಾರಿಕೆಯನ್ನು ಪ್ರಾರಂಭಿಸಲು ನಿರ್ಧರಿಸಿ ಮಗನಿದ್ದ ಪಟ್ಟಣಕ್ಕೆ ಬರಲು ಸಿದ್ಧನಾಗುತ್ತಾನೆ.. ಹುಡುಗನಲ್ಲಿ ಅಪಾರ ಸ್ನೇಹ ಹೊಂದಿದ ಬ್ರೇನವರ್ಮ ಇದ್ದ ಸಂಗತಿಯನ್ನು ತರುಣ ಎಡ್ವರ್ಡಗೆ ಹೇಳಿಬಿಡುತ್ತಾನೆ. ಪತ್ರವನ್ನು ನೋಡಿದ ಎಡ್ವರ್ಡ ತನ್ನ ಸಹೋದರ ಸ್ಟೀಫನ್ ಜೊತೆಗೂಡಿ ತನ್ನ ಗೆಳೆಯ ವೆಲ್‍ಬ್ರೆಡ್‍ನನ್ನು ಭೇಟಿಯಾಗಲು ನಿರ್ಧರಿಸುತ್ತಾನೆ. ವೆಲ್‍ಬ್ರೆಡ್ ತನ್ನ ಸಹೋದರಿ ಡೇಮ್ ಕೈಟ್ಲೀ ಮನೆಯಲ್ಲಿ ವಾಸವಾಗಿರುತ್ತಾನೆ. ಕೈಟ್ಲೀ ಒಬ್ಬ ವ್ಯಾಪಾರಿ. ಆತನಿಗೆ ವೆಲ್‍ಬ್ರೆಡ್‍ನ ವ್ಯವಹಾರಗಳು ಇಷ್ಟವಾಗುವುದಿಲ್ಲ. ವೆಲ್‍ಬ್ರೆಡ್ ಆಗಾಗ ತನ್ನ ಎಡಬಿಡಂಗಿ ಸ್ನೇಹಿತರನ್ನು ಮನೆಗೆ ಕರೆತಂದು ಕುಡಿದು, ಕುಣಿದು ಇಲ್ಲದ ರಾದ್ಧಾಂತಗಳ ಮಾಡುವುದು ತನ್ನ ವ್ಯವಹಾರದ ಬದುಕಿನ ಘನತೆಗೆ ಕುಂದು ಎಂದು ಆತನ ಅಭಿಪ್ರಾಯ. ಅದನ್ನಾತ ವೆಲ್‍ಬ್ರೆಡ್‍ನ ಮಲ ಸಹೋದರ ಜಾರ್ಜ ಡೌನ್‍ರೈಟ್‍ನಲ್ಲಿ ಹೇಳಿಕೊಳ್ಳುತ್ತಾನೆ. ಡೌನ್‍ರೈಟ್ ಒಬ್ಬ ಜಮೀನುದಾರ. ಕೈಟ್ಲೀಯ ಇನ್ನೊಂದು ಸಂಗತಿಯೆಂದರೆ ತನ್ನ ಪತ್ನಿ ಡೇನ್ ಕೈಟ್ಲೀ ಮೇಲಿನ ಸಂದೇಹ.

ಇತ್ತ ನೊವೆಲ್ಲ್‍ನ ಸೇವಕ ಬ್ರೇನವರ್ಮ ತನ್ನ ಯಜಮಾನನ ಬೇಹುಗಾರಿಕೆಯನ್ನು ಲಂಬಿಸಲು ಹಾಗೂ ಎಳೆಯ ಬದುಕಿನ ತರುಣ ಎಡ್ವರ್ಡ ತನ್ನ ಬದುಕನ್ನು ಖುಷಿಯಿಂದ ನಡೆಸಲು ಅನುವು ಮಾಡಿಕೊಡುವುದಕ್ಕಾಗಿ ತಾನು ಕೂಡಾ ಗಾಯಗೊಂಡ ಸೈನಿಕನಂತೆ ವೇಷಾಂತರ ಮಾಡಿಕೊಂಡು ಪಟ್ಟಣಕ್ಕೆ ಬರುತ್ತಾನೆ. ತನ್ನ ಹಳೆಯ ಖಡ್ಗವೊಂದನ್ನು ಸ್ಟೀಫನ್‍ಗೆ ಮಾರುತ್ತಾನೆ. ನೋವೆಲ್ಲ್‍ನಲ್ಲಿ ತನ್ನ ದೀನತೆಯನ್ನು ವಿವರಿಸಿ ಕರುಣೆ ಹುಟ್ಟಿಸಿಕೊಂಡು, ಅಲ್ಲಿಯೂ ಆತನ ಸೇವಕನಾಗುತ್ತಾನೆ. ಆತನೊಂದಿಗೆ ಇರುತ್ತಾ ಎಡ್ವರ್ಡನ ತಂದೆಯ ಎಲ್ಲ ಗೌಪ್ಯ ಕಾರ್ಯಾಚರಣೆಯನ್ನು ತಿಳಿದುಕೊಳ್ಳಲು ಅದರ ಮೂಲಕ ತರುಣ ಎಡ್ವರ್ಡನಿಗೆ ಆತನ ತಂದೆಯ ಪ್ರತಿಯೊಂದು ಯೋಜನೆಗಳನ್ನು ತಿಳಿಯಲು ಸಹಕಾರಿಯಾಗುತ್ತಾನೆ
.
ಕೈಟ್ಲೀ ತನ್ನ ಸುಂದರಿಯಾದ ಪತ್ನಿ ತಾನಿಲ್ಲದ ಸಮಯದಲ್ಲಿ ತನಗೆ ಮೋಸ ಮಾಡಬಹುದೆಂದು ಹೆದರಿ ತನ್ನ ಸೇವಕ ಥಾಮಸ್ ಕ್ಯಾಶ್‍ನಿಗೆ ವೆಲ್‍ಬ್ರೆಡ್ ತನ್ನ ಜೊತೆಗಾರರ ಕರೆದು ತಂದರೆ ತಕ್ಷಣ ತನಗೆ ತಿಳಿಸುವಂತೆ ಹೇಳಿಹೋಗುತ್ತಾನೆ. ಆದರೆ ಆತ ಅತ್ತ ಹೋದ ಕೂಡಲೇ ತನ್ನ ಎಲ್ಲ ಗೆಳೆಯರ ಬಳಗದೊಂದಿಗೆ ವೆಲ್‍ಬ್ರೆಡ್ ಬರುತ್ತಾನೆ, ಕ್ಯಾಶ ಈ ಸಂಗತಿಯನ್ನು ಕೈಟ್ಲೀಗೆ ತಿಳಿಸುವಂತೆ ಕೊಬ್‍ನನ್ನು ಕಳುಹಿಸುತ್ತಾನೆ. ಅದೇ ಸಮಯಕ್ಕೆ ಕೊಬ್ ಅಸಭ್ಯವಾಗಿ ಮಾತನಾಡಿದ್ದಕ್ಕಾಗಿ ವೆಲ್ ಬ್ರೆಡ್‍ನ ಇನ್ನೊಬ್ಬ ಸ್ನೇಹಿತ ಬೊಬ್ಯಡಿಲ್‍ನಿಂದ ಒದೆ ತಿನ್ನುತ್ತಾನೆ. ಜಸ್ಟಿಸ್ ಕ್ಲೆಮಂಟ್ ಮನೆಯಲ್ಲಿ ಕೆಲಸದ ನಿಮಿತ್ತ ಇದ್ದ ಕೈಟ್ಲೀಗೆ ವಿಷಯ ತಿಳಿಯುತ್ತಲೇ ಮನೆಗೆ ಧಾವಿಸುತ್ತಾನೆ. ಅದೇ ಕೊಬ್ ತನ್ನ ಮೇಲೆ ಬೊಬ್ಯಾಡಿಲ್ ಹಲ್ಲೆ ಮಾಡಿದ್ದಕ್ಕಾಗಿ ಆತನನ್ನು ಬಂಧಿಸುವಂತೆ ಜಸ್ಟಿಸ್‍ರಲ್ಲಿ ಹೇಳುತ್ತಾನೆ. ಆದರೆ ಯಾವಾಗ ಕೊಬ್ ಬಳಸಿದ ಭಾಷೆ ಅಸಭ್ಯವೆಂದು ತಿಳಿಯುತ್ತಲೇ ಜಸ್ಟೀಸ್ ಕ್ಲೆಮಂಟ್ ಆತನಿಗೆ ಜೈಲುಶಿಕ್ಷೆ ವಿಧಿಸುತ್ತಾನೆ. ಆದರೆ ಅದೇ ಸಮಯಕ್ಕೆ ಅಲ್ಲೆ ಇದ್ದ ಮುದುಕ ನೊವೆಲ್ಲ್ ಕೊಬ್‍ನ ಪರ ನಿಂತು ಜೈಲು ಶಿಕ್ಷೆಯ ಬದಲು ವಾರಂಟ್ ಜಾರಿಗೊಳ್ಳುವಂತೆ ಮಾಡುತ್ತಾನೆ. ತನ್ನ ಅತೀ ಬುದ್ಧಿವಂತಿಕೆಯಿಂದ ತಾನೇ ಬಲೆಗೆ ಸಿಲುಕಿ ನರಳುವ ಪಾತ್ರವಾಗಿ ಕೊಬ್ ಕಾಣುತ್ತಾನೆ.

ಕೈಟ್ಲೀ ಮನೆಯಲ್ಲಿ ಡೇಮ್‍ಕೈಟ್ಲೀಗೆ ವೆಲ್‍ಬ್ರೆಡ್ ಮತ್ತಾತನ ಸ್ನೇಹಿತರನ್ನು ಮನೆ ಒಳಗೆ ತೆಗೆದುಕೊಳ್ಳದಿರುವಂತೆ ಡೌನ್‍ರೈಟ್ ಸಲಹೆ ನೀಡುತ್ತಾನೆ. ಅದೇ ಸಮಯಕ್ಕೆ ಅಲ್ಲಿಗೆ ಬರುವ ಕೈಟ್ಲೀಯ ಸಹೋದರಿ ಮಿಸ್ಟ್ರೆಸ್ ಬ್ರಿಗೇಟ್‍ಳ ಹಿಂಬಾಲಿಸಿ ಬರುವ ವೆಲ್‍ಬ್ರೆಡ್, ತರುಣ ಎಡ್ವರ್ಡ ನೋವೆಲ್, ಮಾಥ್ಯೂ, ಬೊಬ್ಯಾಡಿಲ್ ಇವರನ್ನು ಕಂಡು ಡೌನರೈಟ್ ಕೋಪಿತನಾಗಿ ಅವರೆಲ್ಲ ಮನೆಯಿಂದ ತೊಲಗುವಂತೆ ಬೈಯುತ್ತಾನೆ. ಇನ್ನೇನು ಅಲ್ಲಿ ಹೊಡೆದಾಟವೇ ಶುರುವಾಗುವ ಕ್ಷಣದಲ್ಲಿ ಕೈಟ್ಲೀ ಆಗಮಿಸಿದ್ದರಿಂದ ಎಲ್ಲ ಶಾಂತವಾಗುತ್ತದೆ. ಆದರೆ ಈ ಗಲಾಟೆಯ ನಡುವೆಯೇ ಪತ್ನಿ ಡೇಮ್‍ಕೈಟ್ಲೀ ಬಾಯಲ್ಲಿ ತರುಣ ಎಡ್ವರ್ಡ ಬಗ್ಗೆ ಗುಣಗಾನ ಕೇಳಿದ ಕೈಟ್ಲೀ ಆಕೆ ಆತನೊಂದಿಗೆ ಸಂಬಂಧ ಹೊಂದಿರಬಹುದೆಂದು ಸಂಶಯಿಸುತ್ತಾನೆ. ಕೊಬ್ ಕೂಡಾ ತನ್ನ ಪತ್ನಿ ಟಿಬ್ ಇನ್ನಾರದೋ ಜೊತೆಯಲ್ಲಿ ಅಕ್ರಮವಾಗಿ ಸಂಬಂಧ ಹೊಂದಿರಬಹುದೆಂದು ಶಂಕೆ ಪಟ್ಟು ವಾರಂಟ್ ಹಿಡಿದೇ ಮನೆಗೆ ಬರುತ್ತಾನೆ. ಆಕೆಗೆ ಯಾರನ್ನು ಮನೆ ಒಳಗೆ ಬಿಟ್ಟುಕೊಡಬಾರದೆಂದು ಎಚ್ಚರಿಕೆ ನೀಡುತ್ತಾನೆ.

ಕೈಟ್ಲೀಯ ಸಹೋದರಿ ಮಿಸ್ಟ್ರೇಸ್ ಬ್ರಿಗೆಟ್‍ಳನ್ನು ತರುಣ ಎಡ್ವರ್ಡ ನೊವೆಲ್ಲ್ ಪ್ರೀತಿಸುತ್ತಿರುತ್ತಾನೆ. ಈ ವಿವಾಹ ನಡೆಸಲು ತರುಣ ಎಡ್ವರ್ಡ, ವೆಲ್ ಬ್ರೆಡ್ ಮತ್ತು ಸೇವಕ ಬ್ರೇನವರ್ಮ ಈ ಮೂವರೂ ಸೇರಿ ಸಂಚೊಂದನ್ನು ಮಾಡುತ್ತಾರೆ. ಇದಕ್ಕೋಸ್ಕರ ವೇಷಾಂತರಿ ಸೈನಿಕ ಬ್ರೇನವರ್ಮ ಮುದುಕ ನೊವೆಲ್‍ಗೆ ಆತನ ಮಗ ಎಡ್ವರ್ಡ ತರುಣಿಯೊಬ್ಬಳನ್ನು ಭೇಟಿಯಾಗಲು ಕೊಬ್‍ನ ಮನೆಗೆ ಹೋಗಿರುವುದಾಗಿ ಸುಳ್ಳು ಹೇಳುತ್ತಾನೆ. ಹೀಗಾಗಿ ಆತ ಮಗನ ಮೇಲೆ ಗುಪ್ತಚಾರಿಕೆ ಮಾಡುತ್ತ ಕೊಬ್‍ನ ಮನೆಗೆ ಬರುತ್ತಾನೆ. ವೆಲ್‍ಬ್ರೆಡ್ ಡೇಮ್ ಕೈಟ್ಲೀಗೆ ಆಕೆಯ ಪತಿ ಕೊಬ್‍ನ ಪತ್ನಿ ಟಿಬ್‍ಳ ಜೊತೆ ಅನೈತಿಕ ಸಂಬಂಧ ಹೊಂದಿರುವನೆಂದು ಆತನೊಬ್ಬ ವಿಕೃತ ಕಾಮಿಯೆಂದು ಹೇಳುತ್ತಾನೆ. ಆಕೆ ಕೂಡಾ ಗಂಡನ ಮೇಲೆ ಬೇಹುಗಾರಿಕೆ ಮಾಡುತ್ತ ಕೊಬ್‍ನ ಮನೆಗೆ ಬರುತ್ತಾಳೆ. ಇನ್ನು ಕೈಟ್ಲೀಗೆ ಜಸ್ಟೀಸ್ ಕ್ಲೆಮೆಂಟ್‍ನನ್ನು ಭೇಟಿಯಾಗಲು ಹೋಗುವ ಸನ್ನಿವೇಷವನ್ನು ಸೃಷ್ಟಿಸಲಾಗುತ್ತದೆ.

ಒಟ್ಟಾರೆ ಅವರಿಬ್ಬರೂ ಮನೆಯಲ್ಲಿಲ್ಲದ ಸಂದರ್ಭ ನೋಡಿ ಮಿಸ್ಟ್ರೇಸ್ ಬ್ರೀಗೇಟ್‍ಳನ್ನು ಕರೆದುಕೊಂಡು ವೆಲ್‍ಬ್ರೆಡ್ ಚರ್ಚಿಗೆ ಬರುತ್ತಾನೆ. ಅಲ್ಲಿ ತರುಣ ನೋವೆಲ್ಲ್‍ನೊಂದಿಗೆ ಆಕೆಯ ವಿವಾಹವಾಗುತ್ತದೆ,
ಜಸ್ಟೀಸ್ ಮನೆಯಲ್ಲಿ ಕೆಲಸ ಮುಗಿಸಿ ಬಂದ ಕೈಟ್ಲೀ ಮನೆಯಲ್ಲಿ ಪತ್ನಿ ಕಾಣದೇ ಹುಡುಕಲು ಪುನಃ ಬ್ರೇನವರ್ಮ ಆಕೆ ಕೊಬ್‍ನ ಮನೆಗೆ ಹೋಗಿರುವುದಾಗಿ ಹೇಳುತ್ತಾನೆ. ಕೈಟ್ಲೀ ಕೂಡಾ ಕೊಬ್‍ನ ಮನೆಗೆ ಬರುತ್ತಾನೆ. ಈಗ ಮುದುಕ ನೋವೆಲ್ಲ್ ,ಕೈಟ್ಲೀ ಮತ್ತು ಡೇಮ್ ಕೈಟ್ಲೀ, ಪರಸ್ಪರ ದೋಷಾರೋಪಣೆ ಮಾಡತೊಡಗುತ್ತಾರೆ. ಕೊಬ್ ಕೂಡಾ ತನ್ನ ಪತ್ನಿ ಟಿಬ್‍ಳನ್ನು ತನಗೆ ಮೋಸ ಮಾಡಿದಳೆಂದು ಥಳಿಸುತ್ತಾನೆ.

ಆದರೆ ಕೊನೆಯಲ್ಲಿ ಜಸ್ಟೀಸ್ ಕ್ಲೆಮೆಂಟ್ ಮನೆಯಲ್ಲಿ ವಿಚಾರಣೆ ನಡೆದು ಇದಕ್ಕೆಲ್ಲಾ ಕಾರಣ ತಪ್ಪುಗೃಹಿಕೆ ಎಂಬುದು ಅರಿವಾಗುತ್ತದೆ. ಸೇವಕ ಬ್ರೇನವರ್ಮ ತನ್ನ ನಿಜ ವ್ಯಕ್ತಿತ್ವವನ್ನು ವ್ಯಕ್ತಗೊಳಿಸಿ ತನ್ನ ತರುಣ ಮಾಲೀಕನ ಮೇಲಿನ ಪ್ರೀತಿ ಇದಕ್ಕೆಲ್ಲಾ ಕಾರಣವೆಂದು ತಿಳಿಸುತ್ತಾನೆ. ದಂಪತಿಗಳಾಗಿರುವ ತರುಣ ಎಡ್ವರ್ಡ ನೋವೆಲ್ಲ್ ಮತ್ತು ಮಿಸ್ಟ್ರೆಸ್ ಬ್ರಿಗೆಟ್ ಅಲ್ಲಿಗೆ ಆಗಮಿಸುತ್ತಾರೆ. ತಂದೆ ನೊವೆಲ್ಲಾ ಮಗನನ್ನು ಕ್ಷಮಿಸುತ್ತಾನೆ. ಕೈಟ್ಲೀ ಮತ್ತು ಡೇಮ್, ಕೊಬ್ ಮತ್ತು ಟಿಬ್ ರಾಜಿಯಾಗುತ್ತಾರೆ. ಎಲ್ಲವೂ ಸುಖಾಂತವಾಗುತ್ತದೆ.

ನಾಟಕದ ವಸ್ತು ತೀರಾ ಸಾಮಾನ್ಯವಾದರೂ ಪಾತ್ರಗಳ ಮೂಲಕ ಚಿತ್ರಿತವಾದ ಭಿನ್ನ ವಿಭಿನ್ನ ಹಾಸ್ಯ ಪ್ರವೃತ್ತಿಗಳು, ಅವಿವೇಕತನಗಳು, ತಪ್ಪುಕಲ್ಪನೆಗಳು ಉಂಟುಮಾಡುವ ಅಚಾತುರ್ಯ, ಸಂಬಂಧಗಳ ಬಲೆಯಲ್ಲಿ ಅನುಭವಿಸುವ ಪರದಾಟ, ನೋವು ನಿರಾಶೆ, ಪ್ರೇಕ್ಷಕ ಹಾಸ್ಯದ ನೆಲೆಯಲ್ಲಿಯೇ ಗೃಹಿಸಿ ಆನಂದಿಸುವಂತಿದೆ. ಮನುಷ್ಯರಲ್ಲಿರುವ ವಿವಿಧ ಹಾಸ್ಯದ ಪ್ರವೃತ್ತಿಯು ಕಟು ವಾಸ್ತವದ ನೆಲೆಯಲ್ಲಿಯೇ ಮೂಡಿಬಂದಿದೆ. ನಾಟಕ ಎಲ್ಲ ಕಡೆಯಲ್ಲೂ ಇರುವ ಮಾನವ ಸಹಜ ಅಭಿಲಾಷೆಗಳನ್ನು, ಸಂಶಯಗಳನ್ನು, ತಪ್ಪು ತಿಳುವಳಿಕೆಗಳನ್ನು ತೀರಾ ಸರಳ ಪಾತ್ರಗಳ ಮೂಲಕ ಬಿಂಬಿಸುತ್ತದೆ.
ಹಾಸ್ಯ ನಾಟಕಗಳಿಂದ ಕೂಡಾ ಕಾಲದ ಜನಜೀವನ, ಇತಿಹಾಸ ಮತ್ತು ರಮಣೀಯತೆಯ ಸ್ವಾದವನ್ನು ಬಹಳ ಕಾಳಜಿಯಿಂದ ಪೂರೈಸಿದ ನಾಟಕಕಾರ ಬೆನ್ ಜಾನ್‍ಸನ್. ಆತನ ಆದ್ಯ ಗಮನ “Sought to spot with human Follies, not with crimes” ಬಗ್ಗೆಯೇ ಇದ್ದು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x