ಬೆಂಬಿಡದ ಭೂತ: ರಾಜೇಂದ್ರ ಬಿ. ಶೆಟ್ಟಿ

ಸುಮಾರು ಅರುವತ್ತು ವರ್ಷಗಳ ಹಿಂದೆ
*
ಅಪ್ಪ ಇನ್ನೂ ಮನೆಗೆ ಬಂದಿಲ್ಲ. ಅವರು ಮಂಗಳೂರಿನಿಂದ ಬರಬೇಕು. ಅದು ನಮ್ಮ ಊರಿನಿಂದ ಹತ್ತೊಂಬತ್ತು ಮೈಲು ದೂರವಂತೆ. ನಾನು, ಅಣ್ಣ ಮತ್ತು ಅಮ್ಮ ಅಪ್ಪನಿಗಾಗಿ ಕಾದು ಕುಳಿತಿದ್ದೇವೆ. ಯಾವಾಗಲೂ ರಾತ್ರಿ ಆಗುವ ಮೊದಲೇ ಬರುವ ಅಪ್ಪ ಇವತ್ತು ಇನ್ನೂ ಬಂದಿಲ್ಲ.
“ಅಪ್ಪ ಕೊನೆಯ ಬಸ್ಸಿನಲ್ಲಿ ಬರಬಹುದು. ನೀವು ಊಟ ಮಾಡಿ ಮಲಗಿ” ಎಂದು ಅಮ್ಮ ನಮಗೆ ಗಂಜಿ ಬಡಿಸಿದರು. ಊಟ ಮಾಡಿ, ನಿದ್ದೆ ತಡೆಯಲಾರದೆ ನಾನು ಮಲಗಿದೆ. ನಡುವೆ ಎಚ್ಚರ ಆದಾಗ ಅಪ್ಪ ಊಟಕ್ಕೆ ಕುಳಿತಿದ್ದಾರೆ. ಅಮ್ಮನಿಗೆ ಹೇಳುತ್ತಿರುವುದು ಕೇಳಿಸಿತು, ಮಾಮನಿಗೆ ಹುಷಾರಿಲ್ಲ. ಆಸ್ಪತ್ರೆಗೆ ಸೇರಿಸಿದ್ದಾರೆ. ಹಾಗಾಗಿ ತಡ ಆಯಿತು, ಮುಲ್ಕಿಯಿಂದ ನಡೆದುಕೊಂಡು ಬರಬೇಕಾಯ್ತು ಅಂದರು.
ಮಾಮ ಅಪ್ಪನ ಆಫೀಸಿನಲ್ಲಿ ಕೆಲಸ ಮಾಡುವವರು. ಅವರಿಗೆ ಮಕ್ಕಳು ಇಲ್ಲವಂತೆ. ಅಪ್ಪನ ಬಳಿ ಯಾವಾಗಲೂ ನಮ್ಮ ಬಗ್ಗೆ ಮಾತನಾಡುತ್ತಾರಂತೆ. ಆಗಾಗ ನಮಗೆ ಬಿಸ್ಕಿಟ್, ಪೆಪ್ಪರ್ಮೆಂಟ್ ಕಳುಹಿಸುತ್ತಾರೆ.

“ನಾಳೆ ರಜೆ ಹಾಕಿದ್ದೇನೆ. ಆಸ್ಪತ್ರೆಗೆ ಹೋಗುತ್ತೇನೆ……” ಅಪ್ಪ ಹೇಳುವುದು ಕೇಳಿಸಿತು
ಮರುದಿನ ನಾನು ಶಾಲೆಗೆ ಹೋಗಲು ಕೇಳಲಿಲ್ಲ. “ಮಾಮನನ್ನು ನೋಡಲು ಮಂಗಳೂರಿಗೆ ನಾನೂ ಬರುತ್ತೇನೆ, ನಾನು ಇನ್ನೂ ಮಂಗಳೂರು ನೋಡಿಲ್ಲ.”
“ನೀನು ಜಾಣನಲ್ಲವೇ. ಮಾಮ ಹುಷಾರದ ಮೇಲೆ ನಿನ್ನನ್ನು ಖಂಡಿತ ಮಂಗಳೂರಿಗೆ ಕರೆದು ಕೊಂಡು ಹೋಗುತ್ತೇನೆ. ನಿನಗೆ ಇಡೀ ದಿನ ಆಸ್ಪತ್ರೆಯಲ್ಲಿ ಇರಲು ಆಗಲಿಕ್ಕಿಲ್ಲ. ಮತ್ತೆ ಹಠ ಹಿಡಿಯುತ್ತಿಯಾ….”
“ಇಲ್ಲ ಪಪ್ಪ. ನಾನು ಜಾಣ ಹುಡುಗರಂತೆ ಸುಮ್ಮನೆ ಇರುತ್ತೇನೆ.”

ಅಪ್ಪ ನನ್ನನ್ನು ರಮಿಸಲು ತುಂಬಾ ನೋಡಿದರು. ನಾನು ಕೇಳಲೇ ಇಲ್ಲ. ಸಿಟ್ಟಿನಿಂದ ಅಮ್ಮ ನನಗೆ ಕರವೀರದ ಅಡರಿನಿಂದ ಎರಡು ಬಾರಿಸಿದರು. ನಾನು ಅಳುತ್ತಲೇ ನನ್ನ ಹಠ ಬಿಡಲಿಲ್ಲ.
ಕೊನೆಗೆ ಅವರಿಬ್ಬರೂ ಸೋತರು. ಒಂದು ಒಳ್ಳೆಯ ಅಂಗಿ ಚಡ್ದಿ ಹಾಕಿಕೊಂಡು ಅಪ್ಪನೊಡನೆ ಮಂಗಳೂರಿಗೆ ಹೊರಟೆ. ಅಣ್ಣ ಶಾಲೆಗೆ ಹೋದ.
ಬಸ್ಸಿನಲ್ಲಿ ಕಿಟಕಿಯ ಬದಿಯಲ್ಲಿ ಕುಳಿತೆ. ಮುಖಕ್ಕೆ ಗಾಳಿ ರಪ ರಪನೆ ಹೊಡೆಯುತ್ತಿದೆ. ಮರ, ಲೈಟ್ ಕಂಬ, ಮನೆಗಳು ಎಲ್ಲಾ ಹಿಂದೆ ಓಡುತ್ತಿವೆ. ಲೈಟ್ ಕಂಬದ ತಂತಿ ಒಮ್ಮೆ ಮೇಲೆ, ಒಮ್ಮೆ ಕೆಳಗೆ ಹೋಗುತ್ತಿದೆ. ಕಂಬ ಬಂದಾಗ ತಂತಿ ಮೇಲೆ ಬರುತ್ತದೆ. ಎಲ್ಲಾ ಹೊಸ ಊರು. ನೋಡುತ್ತಾ ನೊಡುತ್ತಾ ನಿದ್ದೆ ಹೋದೆ.
“ಕುಡ್ಲ ಬತ್ಂಡ್” ಎಂದು ಅಪ್ಪ ನನ್ನನ್ನು ಎಬ್ಬಿಸಿದರು. ಇಳಿಯುವಾಗ ಅಲ್ಲಿ ಮೂರು ನಾಲ್ಕು ದೊಡ್ಡ ದೊಡ್ಡ ಬಸ್ಸುಗಳು ನಿಂತಿವೆ. ಖಾಕಿ ಅಂಗಿ ಹಾಕಿದ ಟಿಕೆಟ್ ಕೊಡುವವರು ಯಾವುದೋ ಊರಿನ ಹೆಸರು ಹೇಳಿ ಕರೆಯುತ್ತಿದ್ದರು, ನನಗೆ ಕೆಲವು ಊರಿನ ಹೆಸರು ಗೊತ್ತು. ನಾನು ಅವರ ಮುಖ ನೋಡುತ್ತಿರುವಾಗ, ಅಪ್ಪ ನನ್ನನ್ನು ಕೈ ಹಿಡಿದು ಎಳೆದುಕೊಂಡು ಹೋದರು. ನನಗೆ ಅಪ್ಪನ ಜೊತೆ ನಡೆಯಲು ಓಡ ಬೇಕಾಯಿತು. ಒಂದೆರಡು ಕಡೆ ಅಪ್ಪನ ಜೊತೆ ನಡೆಯಲಾಗದ ನನ್ನನ್ನು ಅವರು ಎತ್ತಿಕೊಂಡರು.

ಆಸ್ಪತ್ರೆಗೆ ಬಂದೆವು. ಅಪ್ಪ ಯಾರ ಜೊತೆಯೋ ಮಾತನಾಡಿ ಹಿಂದೆ ಬಂದರು. ಅಪ್ಪನ ಕಣ್ಣಲ್ಲಿ ನೀರು.
“ನಿನ್ನ ಮಾವ ತೀರಿಕೊಂಡರು…”
“ಹಾಗಾದರೆ ಮಾವ ಇನ್ನು ಹಿಂದೆ ಬರುದಿಲ್ಲವೇ? ಅಜ್ಜಿ ಸಹ ತೀರಿಕೊಂಡ ನಂತರ ಹಿಂದೆ ಬಂದಿಲ್ಲ.”
“ಇಲ್ಲ.”
“ಪಪ್ಪ, ಸತ್ತ ಮೇಲೆ ಅವರು ಎಲ್ಲಿ ಹೋಗುತ್ತಾರೆ?”
“ದೇವರ ಬಳಿ…”
“ಅಣ್ನ ಮತ್ತು ನನ್ನ ಗೆಳೆಯರು ಹೇಳುತ್ತಿದ್ದರು, ಸತ್ತ ಮೆಲೆ ಭೂತ ಆಗುತ್ತಾರೆ ಅಂತ….ಹೌದಾ ?”
“ಇಲ್ಲ ಮಗು…”

ಅಪ್ಪ ನನ್ನನ್ನು ಒಂದು ಹೋಟೇಲಿಗೆ ಕರೆದುಕೊಂಡು ಹೋದರು. “ಹೊಟ್ಟೆ ತುಂಬಾ ತಿನ್ನು. ಮಧ್ಯಾಹ್ನ ಊಟ ಇಲ್ಲ” ಅನ್ನುತ್ತಾ ನನಗೆ ತಿಂಡಿ ತಿನಿಸಿದರು. ಪಪ್ಪ ಮಾತ್ರ ಬರೇ ಚಹಾ ಕುಡಿದರು.
ಇನ್ನೊಂದು ಬಸ್ಸಿನಲ್ಲಿ ಅಪ್ಪ ನನ್ನನ್ನು ಇನ್ನೊಂದು ಊರಿಗೆ ಕರೆದುಕೊಂಡು ಹೋದರು. ಅಲ್ಲಿಂದ ಒಂದು ದೊಡ್ಡ ಮನೆಯ ಮನೆಗೆ ನಡೆದುಕೊಂಡು ಹೋದೆವು. ಅಲ್ಲಿ ತುಂಬಾ ಜನರಿದ್ದರು. ಪಪ್ಪ ಅವರ ಜೊತೆ ಮಾತನಾಡ ತೊಡಗಿದರು. ನಂತರ, ಪಪ್ಪ ಯಾರೋ ಒಬ್ಬ ಮಾಮನ ಜೊತೆ ಬಂದರು. ಅವರು ನಮ್ಮಿಬ್ಬರನ್ನು ಅವರ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಮಾಮಿ ಮತ್ತು ಒಂದು ಮಗು ಇತ್ತು.
“ನಾವು ಬರುವ ವರೆಗೂ ನೀನು ಇಲ್ಲಿಯೇ ಇರು” ಎಂದು ಹೇಳಿ ಅವರಿಬ್ಬರೂ ಹಿಂದೆ ಹೋದರು.

ಅಲ್ಲಿ ಮಗು ಅಳುತ್ತಲೇ ಇತ್ತು. ಕೊನೆಗೆ ಅದು ನಿದ್ದೆ ಮಾಡಿತು. ಅಲ್ಲಿ ಏನು ಮಾಡುವುದು ಎಂದು ಗೊತ್ತಾಗಲಿಲ್ಲ. ಮನೆಯ ಹೊರಗೆ, ಒಳಗೆ ತಿರುಗಾಡ ತೊಡಗಿದೆ.
ತುಂಬಾ ಹೊತ್ತಾದ ನಂತರ ಪಪ್ಪ ಒಬ್ಬರೇ ಹಿಂದೆ ಬಂದರು. ಮಾಮಿಗೆ ಹೇಳಿ ನನ್ನನ್ನು ಕರೆದುಕೊಂಡು ಹೋದರು.
ನಾವು ಒಂದು ಗದ್ದೆಯ ಮುಂದೆ ಬಂದೆವು. ಇಲ್ಲಿ ಸಹ ತುಂಬಾ ಜನರಿದ್ದಾರೆ. ಏನೇನೋ ಮಾತನಾಡುತ್ತಿದ್ದಾರೆ, ಬೇರೆ ಬೇರೆ ಕೆಲಸ ಮಾಡುತ್ತಿದ್ದಾರೆ. ಒಂದು ಕಡೆ ಕಟ್ಟಿಗೆಯ ರಾಶಿಯನ್ನು ಜೋಡಿಸಿ ಇಟ್ಟಿದ್ದಾರೆ. ಪಪ್ಪ ಆ ಕಟ್ಟಿಗೆಯ ರಾಶಿಯ ಹತ್ತಿರ ಹೋಗಿ ಏನೇನೋ ಹೇಳುತ್ತಿದ್ದಾರೆ.

ಒಬ್ಬರು ಬಂದು ನನ್ನ ಬೆನ್ನು ತಟ್ಟಿದರು. ಅವರ ಮುಖ ನೋಡಿದೆ. ಪರಿಚಯ ಇಲ್ಲ. ನನ್ನ ಹೆಸರು ಮತ್ತು ನನ್ನ ಅಪ್ಪನ ಹೆಸರು ಕೇಳಿದರು. ಶಾಲೆಗೆ ಹೋಗುತ್ತಿಯಾ? ಎಷ್ಟನೇ ತರಗತಿ ಎಂದೆಲ್ಲಾ ಕೇಳಿದರು. ಅವರು ನನ್ನ ತಲೆ ಸವರುತ್ತಾ, “ನೀನು ಒಳ್ಳೆಯ ಹುಡುಗ. ಚೆನ್ನಾಗಿ ಕಲಿತು ಹೆಸರು ತರಬೇಕು, ಆಯಿತಾ?” ಎಂದು ಹೇಳಿ ಅವರು ಕಟ್ಟಿಗೆಯ ರಾಶಿಯತ್ತ ಹೋದರು.
“ಗೋವಿಂದಾ.. ಗೋವಿಂದಾ…” ತುಂಬಾ ಜನ ಕೂಗುವುದು ಕೇಳಿಸಿತು. ಸದ್ದು ಬಂದ ಕಡೆ ನೋಡಿದೆ.
ಯಾರೋ ಒಬ್ಬರು ಅನ್ನುವುದು ಕೇಳಿಸಿತು, “ಪುಣ ಬತ್ಂಡ್”. ತುಂಬಾ ಜನರಿದ್ದಾರೆ. ಕೆಲವರು ಹೆಗಲಲ್ಲಿ ಬಿಳಿಯ ಬಟ್ತೆಯಲ್ಲಿ ಸುತ್ತಿದ ಹೆಣ ಹೊತ್ತು ತರುತ್ತಿದ್ದಾರೆ.
ಆ ಬಿಳಿ ಬಟ್ಟೆಯ ಹೆಣವನ್ನು ಕಟ್ಟಿಗೆಯ ರಾಶಿಯ ಮೇಲೆ ಇಟ್ಟರು. ನಂತರ ಏನೇನೋ ಪೂಜೆ ಮಾಡಿದರು. ನಂತರ ಅದರ ಮುಖಕ್ಕೆ ಎಲ್ಲರೂ ಎಲೆಯಿಂದ ನೀರು ಹಾಕುವುದು ಕಾಣಿಸಿತು. ಸ್ವಲ್ಪ ನಂತರ ಅಪ್ಪ ನನ್ನನ್ನು ತಮ್ಮ ಬಳಿಗೆ ಕರೆದರು.

ಯಾರೋ ಹೇಳಿದರು, “ಮಗುವಲ್ಲವೇ ಬೇಡ…”
“ಅವ ಮಾವನನ್ನು ನೋಡ ಬೇಕೆಂದು ಹಠಮಾಡಿ ಇಲ್ಲಿಗೆ ಬಂದಿದ್ದಾನೆ. ಒಮ್ಮೆ ಅವರ ಮುಖ ನೋಡಿ, ನೀರು ಬಿಡಲಿ.”
ನನ್ನ ಮುಂದೆ ಇಬ್ಬರು ಇದ್ದರು. ಅವರು ಏನು ಮಾಡುತ್ತಾರೆಂದು ನೋಡಿದೆ, ಅವರು ನೀರಲ್ಲಿ ಮುಳುಗಿಸಿದ ತುಳಸಿ ಎಲೆಯಿಂದ, ಕೈ ತಿರುಗಿಸಿ ಬಾಯಿಗೆ ನೀರು ಹಾಕುತ್ತಿದ್ದಾರೆ. ಯಾಕೆ ನೇರವಾಗಿ ಕೈಯಿಂದ ನೀರು ಹಾಕುತ್ತಿಲ್ಲ ಎಂದು ಗೊತ್ತಾಗಲಿಲ್ಲ. ಮೊದಲ ಸಲಕ್ಕೆ ಮಾವನ ಮುಖ ನೋಡಿದೆ. ಕಿಟಾರನೆ ಕಿರುಚಿ ನಾನು ಅಲ್ಲಿಂದ ಓಡಿದೆ. ಯಾರೋ ನನ್ನನ್ನು ಹಿಡಿದು ನಿಲ್ಲಿಸಿದರು. ಮಗು ಹೆದರಿದೆ ಅಂದರು. ನನ್ನ ಕಾಲು ನಡುಗುತ್ತಿದೆ. ಬಾಯಿ ಎಲ್ಲಾ ಒಣಗಿದೆ. ಕಣ್ಣಿಂದ ನೀರು ಹರಿಯುತ್ತಿದೆ. ಸ್ವಲ್ಪ ಹೊತ್ತಿನ ಮೊದಲು ನನ್ನ ಜೊತೆ ಮಾತನಾಡಿದ ಮಾವ ಅಲ್ಲಿ ಸತ್ತು ಮಲಗಿದ್ದಾರೆ. ಅಣ್ಣ ಹೇಳಿದ್ದು ಸುಳ್ಳಲ್ಲ, ಸತ್ತವರು ಭೂತ ಆಗುತ್ತಾರೆ. ಭೂತ ನನ್ನೊಡನೆ ಮಾತನಾಡಿತ್ತು, ನನ್ನನ್ನು ಮುಟ್ಟಿತ್ತು……

ನಾನು ಅಳುತ್ತಲೇ ಇದ್ದೇನೆ. ಯಾರೋ ನನ್ನನ್ನು ತಮ್ಮ ಮೈಗೆ ಒತ್ತಿ ಹಿಡಿದು, ಕಟ್ಟಿಗೆ ರಾಶಿಯ ವಿರುದ್ಧ ಬದಿಗೆ ಮುಖ ಮಾಡಿ ನಿಲ್ಲಿಸಿದರು. ಅಪ್ಪ ಬಂದು ಏನಾಯಿತು ಎಂದು ಕೇಳಿದಾಗ. ಭೂತ ನೋಡಿದ್ದನ್ನು ಹೇಳಲೂ ಹೆದರಿಕೆ.
ಹಿಂದೆ ಬರುವಾಗ ಬಸ್ಸಿನಲ್ಲಿ ಮಲಗಿದ್ದ ನೆನಪು. ಎಚ್ಚರ ಆದಾಗ ಮನೆಯಲ್ಲಿ ಇದ್ದೆ.
ಪುನಹ ನಿದ್ದೆ, ಊಟ ಮಾಡಿದೆನೋ ಇಲ್ಲವೋ ಗೊತ್ತಿಲ್ಲ. ಬೆಳಿಗ್ಗೆ ಎದ್ದಾಗ ಚಡ್ಡಿ ಒದ್ದೆ ಆಗಿತ್ತು. ಅಮ್ಮ ಬಂದು ಚಡ್ಡಿ ಬದಲಿಸುವಾಗ, “ಇವನಿಗೆ ಜ್ವರ ಬರುತ್ತಿದೆ,” ಅಂದರು. ಬೆಳಗಿನ ತಿಂಡಿಯ ಜೊತೆಗೆ ಕಷಾಯ ಮಾಡಿ ಕೊಟ್ಟು ಮಲಗಲು ಹೇಳಿದರು. ಏನೇನೋ ಕನಸುಗಳು. ಯಾರೋ ನನ್ನನ್ನು ಆಕಾಶದ ಎತ್ತರಕ್ಕೆ ಕೊಂಡು ಹೋಗಿ, ಅಲ್ಲಿ ಕೈ ಬಿಡುತ್ತಾರೆ. ನೆಲಕ್ಕೆ ಬೀಳುವಾಗ ಎಚ್ಚರ. ಮೈ ನಡುಗುತ್ತಿದೆ. ಅಮ್ಮನನ್ನು ಕರೆದರೂ ಅವರು ಬರುತ್ತಿಲ್ಲ. ಪುನಹ ನಿದ್ದೆ, ಎಚ್ಚರ, ನಿದ್ದೆ, ಕೆಟ್ಟ ಕನಸು.

ರಾತ್ರಿ ಮಲಗುವಾಗ ದೀಪ ಆರಿಸ ಬಾರದು ಎಂದು ನನ್ನ ಹಠ. ಮಧ್ಯ ಎಚ್ಚರ ಆದಾಗಲೂ ದೀಪ ಉರಿಯುತ್ತಿದೆ. ಅಪ್ಪ, ಅಮ್ಮ ಮಾತನಾಡುವುದು ಕೇಳಿಸುತ್ತದೆ, “ಮಗು ಹೆಣ ನೋಡಿ ಹೆದರಿದೆ. ದೀಪ ಇದ್ದರೆ ನಮಗೂ ನಿದ್ದೆ ಇಲ್ಲ…..”
“ದೀಪ ಆರಿಸಿ” ಅಂದೆ. ಅಮ್ಮ ದೀಪ ಆರಿಸಿದರು. ನಾನು ಅಮ್ಮನನ್ನು ತಬ್ಬಿಕೊಂಡು ಮಲಗಿದೆ. ನಿದ್ದೆ ಬರಲಿಲ್ಲ. ಪುನಹ ಹೆದರಿಕೆ. ನಡುಗತೊಡಗಿದೆ. ಅಮ್ಮ ಪುನಹ ದೀಪ ಹಾಕಿದರು.
ದಿನ ದಿನವೂ ಇದೇ ಕಥೆ. ಆಗಾಗ ಶಾಲೆಯಲ್ಲಿ ಮಕ್ಕಳು ಹೇಳಿದ್ದ, ಅಣ್ಣ ಹೇಳಿದ್ದ ದೆವ್ವಗಳ ಕಥೆ ನೆನಪಾಗುವುದು,
ಸಾಯಂಕಾಲ ಕತ್ತಲು ಆಗುತ್ತಿದ್ದಂತೆಯೇ ಹೆದರಿಕೆ. ಹೊರಗೆ ಹೋಗಿ ಮೂತ್ರ ಮಾಡಲೂ ಹೆದರಿಕೆ. ಈ ಮೊದಲು ಒಬ್ಬನೇ ಹೋಗಿ ಮೂತ್ರ ಮಾಡಿ ಬರುತ್ತಿದ್ದೆ, ಈಗ ಆ ಧೈರ್ಯ ಇಲ್ಲ. ಅಣ್ಣ ಇಲ್ಲವೇ ಅಮ್ಮ ಜೊತೆಯಲ್ಲಿ ಇರಲೇಬೇಕು.

ಅಣ್ಣ ಹೇಳಿದ, “ಪಪ್ಪ ಮತ್ತು ಅಮ್ಮನಿಗೆ ದೀಪ ಇದ್ದರೆ ನಿದ್ದೆ ಬರುವುದಿಲ್ಲ. ನೀನು ಹೆದರ ಬೇಡ. ಪಪ್ಪ ಇದ್ದಾರಲ್ಲ…… ನಿನ್ನಿಂದಾಗಿ ಅವರಿಗೂ ಕಷ್ಟ ಅಲ್ಲವೆ?” ಆಮೇಲೆ ರಾತ್ರಿ ಮಲಗುವ ಮುನ್ನ ಅಮ್ಮ ದೀಪ ಆರಿಸುವ ಮುನ್ನ ದೇವರ ದೀಪ ಹಚ್ಚಿ ಮಲಗತೊಡಗಿದರು.
ಅದೊಂದು ರಾತ್ರಿ. ಎಚ್ಚರ ಆದಾಗ ಮಾವ ಬದಿಯಲ್ಲೇ ಕುಳಿತಿದ್ದಾರೆ. ನನ್ನ ತಲೆ ಸವರುತ್ತಾ ಕುಳಿತಿದ್ದಾರೆ. ಅವರ ಮುಖ ನೋಡಲೂ ಹೆದರಿಕೆ. ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡೆ. ಕಣ್ಣು ತೆರೆಯಲೂ ಹೆದರಿಕೆ. ಅಮ್ಮ ನನ್ನನ್ನು ಎಬ್ಬಿಸಿದಾಗ ಬೆಳಗಾಗಿತ್ತು, ಮಾಮ ಇರಲಿಲ್ಲ. ಹಾಸಿಗೆ ಒದ್ದೆ ಆಗಿತ್ತು.

ಒಂದು ರಾತ್ರಿ, ಎಚ್ಚರ ಆದಾಗ ಹೊರಗೆ ನಾಯಿ ವಿಕಾರವಾಗಿ ಬೊಗಳುತ್ತಿದೆ. ಮಾಮ ಬಂದರು. ಕಪ್ಪು ಕಪ್ಪಗಾಗಿದ್ದಾರೆ. ಕುಡ್ಪಾಲ್ ಭೂತದಂತೆ ಅವರು ಎತ್ತರ ಎತ್ತರಕ್ಕೆ, ತೆಂಗಿನ ಮರದಷ್ಟು ಎತ್ತರ ಬೆಳೆದರು. ಅವರು ನನ್ನನ್ನು ತಿನ್ನಲು ಬಗ್ಗಿದರು. ಅಮ್ಮ, ಅಪ್ಪನನ್ನು ಕರೆಯಲು ನೋಡಿದೆ. ದನಿ ಹೊರಡುತ್ತಿಲ್ಲ. ಕೈ ಕಾಲು ಅಲ್ಲಾಡಿಸಲೂ ಆಗುತ್ತಿಲ್ಲ. ಕಟ್ಟಿ ಹಾಕಿದ ಅನುಭವ. ಬಗ್ಗಿದ ಮಾವ ನನ್ನನ್ನು ಮೆಲಕ್ಕೆ ಎತ್ತಿ ನೆಲಕ್ಕೆ ಬಿಸಾಡಿದರು. ನೆಲಕ್ಕೆ ಬೀಳುವಾಗ ಚೀರಿದೆ. ಅಮ್ಮ ನನ್ನನ್ನು ಎಬ್ಬಿಸಿದರು. ಎಚ್ಚರ ಆಯಿತು. ಹಾಕಿಕೊಳ್ಳಲು ಅಮ್ಮ ಬೇರೆ ಚಡ್ದಿ ಕೊಟ್ಟರು.
ಮರು ದಿನ ಅಣ್ಣನಿಗೆ ಮಂಗಳೂರಲ್ಲಿ ಮಾವನ ಭೂತ ಕಂಡದ್ದನ್ನು ಹೇಳಿದೆ. ಅವರು ನನ್ನ ಮೈ ಸವರಿದ್ದು, ನನ್ನನ್ನು ಮಾತನಾಡಿಸಿದ್ದು ಎಲ್ಲಾ ಹೇಳಿದೆ. ಅವನೂ ಸ್ವಲ್ಪ ಹೆದರಿದಂತೆ ಇತ್ತು. ಅವ ಅದನ್ನು ಅಪ್ಪನಿಗೆ ಹೇಳಿದ.

ಎರಡು ಮೂರು ದಿನದ ನಂತರ ಶಾಲೆಗೆ ರಜಾ. ಅಪ್ಪನಿಗೂ ರಜಾ. ರವಿವಾರ ಇರಬಹುದು. ಮನೆಯಲ್ಲಿ ಕೋಳಿ ಪಲ್ಯ ಮಾಡುತ್ತಿದ್ದಾರೆ. ಅಪ್ಪ ಅಮ್ಮನಿಗೆ ಸಹಾಯ ಮಾಡುತ್ತಿದ್ದಾರೆ. ನಾನು ಮತ್ತು ಅಣ್ಣ ಮನೆಯಲ್ಲೇ ಆಟ ಆಡುತ್ತಿದ್ದೇವೆ.
“ನಾನೊಂದು ಅರ್ಧ ಘಂಟೆಯಲ್ಲಿ ಬರುತ್ತೇನೆ” ಅನ್ನುತ್ತಾ ಅಪ್ಪ ಹೊರಗೆ ಹೋದರು. ನಾವಿಬ್ಬರೂ ಆಡಲು ತೋಟಕ್ಕೆ ಹೋಗುವುದಾಗಿ ಅಮ್ಮನಿಗೆ ಹೇಳಿದೆವು.
“ಬೇಡ. ಬಿಸಿಲಿಗೆ ಕುಲೆಗಳು ಹೊಯ್ಗೆ ಬಿಸಾಡುತ್ತವೆ. ಮೈ ಮೇಲೆ ದಡಿಕೆ ಬೀಳುತ್ತವೆ.”

ಅಮ್ಮನ ಮಾತು ಕೇಳದೆ ನಾವಿಬ್ಬರೂ ಹೊರಗೆ ಓಡಿ ಕುಟ್ಟಿ ದೊನ್ನೆ ಆಡಲು ಆರಂಭಿಸಿದೆವು. ಸ್ವಲ್ಪ ಹೊತ್ತಿನಲ್ಲಿ ಹೊಲದ ಅಂಚಿನಲ್ಲಿ ಅಪ್ಪ ಬರುವುದು ಕಾಣಿಸಿತು. ಅವರ ಹಿಂದೆ ಸತ್ತ ಮಾವನ ಭೂತ! ನಾನು ಕಿಟ್ಟನೆ ಚೀರಿ ಮನೆಗೆ ಓಡಿ, ಪಡಶಾಲೆಯಲ್ಲಿ ಅಡಗಿ ಕುಳಿತುಕೊಂಡೆ. ನಡುಗುತ್ತಾ ಹೊರ ನೋಡಿದೆ. ಅಪ್ಪ ಒಳ ಬಂದರು. ಅವರ ಹಿಂದೆ ಮಾವನ ಭೂತ ಸಹ. ನಾನು ಕೂಡಲೇ ಪಡಶಾಲೆಯ ಬಾಗಿಲು ಹಾಕಿ ಕೊಂಡು ಜೋರಾಗಿ ಅಳತೊಡಗಿದೆ. ಹೊರಗಿನಿಂದ ಬಾಗಿಲು ದೂಡಿಕೊಂಡು ಅಪ್ಪ ಮತ್ತು ಜೊತೆಯಲ್ಲಿ ಮಾವನ ಭೂತ ಬಂತು. ನಡುಗುತ್ತಿದ್ದ ನನ್ನನ್ನು ನೋಡಿ ಭೂತ, “ನನ್ನ ಗುರುತು ಆಗಲಿಲ್ಲವೇ? ನಾನು ನಿನ್ನ ಜೊತೆ ಮಾತನಾಡಿದ್ದೆ…..”
ನಾನು ಜೋರಾಗಿ ಕಿರುಚಿಕೊಂಡೆ. ಅಪ್ಪ ನನ್ನನ್ನು ಎತ್ತಿಕೊಂಡರು.
“ಇವರು ಭೂತ ಅಲ್ಲ. ಸತ್ತ ನಿನ್ನ ಮಾವನ ತಮ್ಮ. ಇವರು ನೋಡಲು ಅವರ ಅಣ್ಣನ ಹಾಗೇ ಇದ್ದಾರೆ. ಇಬ್ಬರೂ ಅವಳಿ ಜವಳಿ ಮಕ್ಕಳು. ಹೆದರಬೇಡ…..”

ರಾಜೇಂದ್ರ ಬಿ. ಶೆಟ್ಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x