ಬೆಂದಕಾಳೂರ ಟ್ರಾಫಿಕ್ಕೂ, ಗುಂಡಣ್ಣನ ಲಾಜಿಕ್ಕು: ಪ್ರಶಸ್ತಿ

ನಮ್ಮ ಗುಂಡಣ್ಣಂಗೆ ಬಗೆಹರಿಯದ ಸಮಸ್ಯೆಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ.  ನಾಲ್ಕು ಜನ ಯಾವುದಾದ್ರೂ ವಿಷಯದ ಬಗ್ಗೆ ಚರ್ಚಿಸ್ತಾ ಇದ್ದಾರೆ ಅಂದ್ರೆ ಇವರನ್ನ ಕರೆಯದೇ ಹೋದ್ರೂ ಅಲ್ಲಿಗೊಂದು ಎಂಟ್ರಿ ಕೊಟ್ಟು ಅವ್ರು ಯಾವ ಗಹನವಾದ ವಿಷಯದ ಬಗ್ಗೆ ಚರ್ಚಿಸ್ತಾ ಇದ್ದಾರೆ ಅಂತ ತಿಳಿದುಕೊಂಡು ಅದಕ್ಕೊಂದು ಪರಿಹಾರ ಸೂಚಿಸ್ಲಿಲ್ಲ ಅಂದ್ರೆ ಗುಂಡಣ್ಣಂಗೆ ಅವತ್ತು ತಿಂದ ಅನ್ನ ಜೀರ್ಣವಾಗೋಲ್ಲ. ಹೀಗೇ ಎಲ್ಲರೂ ಗುಂಡಣ್ಣನ ಬಗ್ಗೆ ಹೇಳೋದನ್ನ ಕೇಳಿ ಕೇಳೀ, ಸಂಜೆಯವರೆಗೂ ಯಾವ ಸಮಸ್ಯೆಗೂ ಪರಿಹಾರ ಸೂಚಿಸದ ದಿನ ತನಗೇನಾದ್ರೂ ಅಜೀರ್ಣವಾಗಿಬಿಡುತ್ತಾ ಎಂಬ ಭಯ ಕಾಡೋಕೆ ಶುರುವಾಗಿರುತ್ತೆ. ಕಛೇರಿಯ ಸಹೋದ್ಯೋಗಿಗಳಿರಬಹುದು, ಬಸ್ ಕಂಡಕ್ಟರ್ ಆಗಿರ್ಬೋದು, ಕೊನೆಗೆ ಯಾರೂ ಸಿಗ್ಲಿಲ್ಲ ಅಂದ್ರೆ ರಾತ್ರೆ ಮನೆಗೆ ಮರಳ್ತಾ ಕಂಡ ಬಾಗಿಲು ಹಾಕ್ತಿರೋ ಅಂಗಡಿಯವನಿರಬಹುದು..ಗುಂಡಣ್ಣನ ಉಪದೇಶಕ್ಕೆ ಇಂತವರೇ ಆಗಬೇಕೆಂಬ ನಿಯಮಗಳಿಲ್ಲ ! ಯಾರಿಗಾದರೂ ಆ ದಿನದ ಉಪದೇಶಾಮೃತವನ್ನು ಹಂಚಿದ ಮೇಲೇ ಗುಂಡಣ್ಣನ ಮನಸ್ಸು ನಿರುಮ್ಮಳ, ನಿರಾಳ !

ಇಂತಿಪ್ಪ ಗುಂಡಣ್ಣನಿಗೆ ತುಂಬಾ ದಿನಗಳಿಂದ ಕಾಡಿದ ಸಮಸ್ಯೆ ಬೆಂದಕಾಳೂರ ಟ್ರಾಫಿಕ್ಕು. ಗುಂಡಣ್ಣನ ಹೊಸ ಆಫೀಸಿದ್ದ ಬೆಳ್ಳಂದೂರಿಗೆ ಹತ್ತು ಕಿ.ಮೀ ಆಗದಿದ್ದರೂ ಕುಂದಲಹಳ್ಳಿ,ಮಾರತ್ತಳ್ಳಿ, ಕಾಡುಬೀಸನಹಳ್ಳಿಯೆಂಬೋ ಒಂದೂವರೆ ಘಂಟೆಗಳ ಜ್ಯಾಮುಗಳ ನಡುವೆ ಸಿಕ್ಕ ಬ್ರೆಡ್ಡಾಗಿ ಅಲ್ಲಲ್ಲ, ಜ್ಯಾಮುಗಳಲ್ಲಿ ಸಿಕ್ಕು ಬೆಂಡಾಗಿ ಹೋಗ್ತಿದ್ದ. ವಾರಾಂತ್ಯದಲ್ಲಿ ಹದಿನೈದು ನಿಮಿಷಕ್ಕೆ ಸಾಗೋ ಜಾಗ ವಾರದ ದಿನಗಳಲ್ಲಿ ಒಂದೂವರೆ ಘಂಟೆ ತಗೋಳ್ಳೋದು ಯಾಕೆ ಅನ್ನೋ ಪ್ರಶ್ನೆ ಅವನಿಗೆ ಕಾಡತೊಡಗಿತು. ಹಿಂದೊಮ್ಮೆ ಸಿಲ್ಕ್ ಬೋರ್ಡಿನ ಜಂಕ್ಷನ್ನಲ್ಲೇ ಅರ್ಧ ಘಂಟೆ ಕಾದಿದ್ದು, ಕಮಾಂಡ್ ಆಸ್ಪತ್ರೆಯ ನಂತರದ ಜಂಕ್ಷನ್ನಿನಲ್ಲಿ ಕಾಲು ಘಂಟೆಗಿಂತ ಹೆಚ್ಚು ಸಿಕ್ಕಾಕಿಕೊಂಡಿದ್ದು ಎಲ್ಲಾ ನೆನಪಾಗತೊಡಗಿತು. ಬೆಳಬೆಳಗ್ಗೆ ಬಂದ್ರೆ ಮೆಜೆಸ್ಟಿಕ್ಕಿನಿಂದ ಅರ್ಧ ಘಂಟೆಗೆ ಬರೋ ಮಾರತ್ತಳ್ಳಿಗೆ ವಾರಾಂತ್ಯದಲ್ಲಿ ಎರಡೂವರೆ ಘಂಟೆ ಆದ್ರೂ ತಲುಪೋಕ್ಕಾಗಲ್ಲವೇಕೆ ಅನ್ನೋ ಆಲೋಚನೆ ಅವನ ಬಿಟ್ಟೂ ಬಿಡದ ಬೇತಾಳದಂತೆ ಕಾಡತೊಡಗಿತು. ಅದಕ್ಕೆ ಸರಿಯಾಗಿ ಅವತ್ತು ಬಸ್ಸಲ್ಲಿ ಪಕ್ಕದಲ್ಲಿ ಕೂತ ಹಿರಿಯರೊಬ್ರು ಕಾಲು ಘಂಟೆಯಾದ್ರೂ ಒಂದಿಂಚೂ ಮುಂದಡಿಯಿಡದ ಬಸ್ಸಿನ ಬಗ್ಗೆ ಶಾಪ ಹಾಕ್ತಿದ್ರೆ, ಗುಂಡಣ್ಣನ ವಿಚಾರಧಾರೆ ಪುಂಖಾನುಪುಂಖವಾಗಿ ಅವರ ಮುಂದೆ ಹರಿಯತೊಡಗಿತು. ಬೆಂದಕಾಳೂರ ಟ್ರಾಫಿಕ್ಕಿಗೆ ಕಾರಣಗಳೇನು ಮತ್ತದಕ್ಕೆ ಪರಿಹಾರಗಳೇನು ಎಂಬ ಗುಂಡಣ್ಣನ ವಿಚಾರಮಾಲೆಯನ್ನು ಅವನ ಮಾತುಗಳಲ್ಲೇ ಕೇಳೋಣ.

ಜನ ಟ್ರಾಫಿಕ್ಕಿನ ಹೊಗೆಯಲ್ಲಿ, ಕಾದ ವಾಹನಗಳ ಬೆಂಕಿಯಲ್ಲಿ ಬೆಂದು ಹಿಡಿಶಾಪ ಹಾಕೋ ನಗರಿಯಾಗುತ್ತೆ ಅನ್ನೋದನ್ನ ಮುಂಚೆಯೇ ಆಲೋಚಿಸಿದ ನಮ್ಮ ಹಿರಿಯರು ಇದಕ್ಕೆ ಬೆಂದಕಾಳೂರು ಉರುಫ್ ಬೆಂಗಳೂರು ಅಂತ ಹೆಸರಿಟ್ಟಿರಬಹುದು. ಅವರ ಕಲ್ಪನೆಯನ್ನು ಸುಳ್ಳು ಮಾಡ್ಬಾರ್ದು ಅಂತಲೇ ನಾವು ಬೇಯೋದಲ್ದೇ ಗಂಟೆಗಟ್ಟಲೇ ಹಾರನ್ನಿಕ್ಕುತ್ತಾ ನಮ್ಮೆದುರಿರುವವರ, ಹಿಂದಿರುವವರ ತಲೆಯನ್ನೂ ಬಿಸಿಯೆಬ್ಬಿಸುತ್ತಿದ್ದೇವೆ. ಈ ಟ್ರಾಫಿಕ್ಕಿಗೆ ಮುಖ್ಯ ಕಾರಣವೇ ಇಲ್ಲಿ ಹೆಚ್ಚಿದ ವಾಹನಗಳು. ಒಬ್ಬ ಹೋಗ್ತಾ ಇದಾನೆ ಅಂದ್ರೂ ಅವನಿಗೆ ವ್ಯಾಗನಾರೋ, ಆಲ್ಟೊವೋ, ಐ ೨೦ ಕಾರೋ ಬೇಕು. ಅಂತಾ ನಾಲ್ಕು ಕಾರುಗಳು ಹೋಗೋ ಜಾಗದಲ್ಲಿ ಒಂದು ಬಸ್ಸು ಹೋಗಬಹುದು. ಬಸ್ಸಲ್ಲಿ ಐವತ್ತು ಜನ ಹೋಗೋ ಜಾಗದಲ್ಲಿ ಕಾರಿನ ನಾಲ್ಕು ಜನ ಹೋಗ್ತಾ ಇದ್ದಾರೆ ಆ ನಾಲ್ಕು ಜನ ಉಳಿದ ೪೬ ಜನರ ಸಮಯ ಮತ್ತು ಜಾಗವನ್ನು ತಿಂತಾ ಇದ್ದಾರೆ ಅಂತ ಅರ್ಥ ಅಲ್ವಾ ? ಕಂಪೆನಿಗಳ ಬಸ್ಸಿರುತ್ತೆ, ಸಾಮಾನ್ಯ ಬಸ್ಸುಗಳಲ್ಲಿ ನೇತಾಡಿಕೊಂಡು ಹೋಗೋಕೆ ಅವಮರ್ಯಾದೆ ಅಂದರೆ ವೋಲ್ವೋದಲ್ಲಿ ಬರಲಿ. ಕಾರಲ್ಲಿ ಬಂದ್ರೆ ಮಾತ್ರ ಗೌರವವಾ ? ! ಬೆಳಗ್ಗೆ ಒಂಭತ್ತರಿಂದ ಸಂಜೆ ಆರರವರೆಗೆ ಕಾರಲ್ಲಿ ಒಬ್ಬೊಬ್ಬರೇ ಓಡಾಡುವವರನ್ನ ಹಿಡಿದು ದಂಡ ಹಾಕ್ಬೆಕ್ ! ಮತ್ತೆ ಮತ್ತೆ ಅದ್ನೇ ಮಾಡಿದ್ರೆ ಮೂರು ತಿಂಗಳಿಗೆ ಲೈಸನ್ಸ್ ಮುಟ್ಟುಗೋಲು ಹಾಕ್ಕೋಳ್ಬೇಕ್ !(ತಮ್ಮ ಖಡಕ್ ಮಾತುಗಳಿಂದ ಅದೆಷ್ಟೋ ಜನಕ್ಕೆ ಸ್ಪೂರ್ತಿಯಿತ್ತ ಹುಚ್ಚ ವೆಂಕಟ್ ಅವರ ಶೈಲಿಯಲ್ಲಿ). ಇವರೊಬ್ರು ಆರಾಮಾಗಿರ್ಬೇಕು ಅಂತ ಪ್ರಯತ್ನ ಮಾಡಿ ಇವ್ರ ನೆಮ್ಮದಿಯನ್ನೂ ಹಾಳ್ಮಾಡ್ಕೋತಾರೆ. ಬೇರೆಯವ್ರ ನೆಮ್ಮದಿಯನ್ನೂ ಹಾಳ್ಮಾಡ್ತಾರೆ ದಿನಾ ಇವ್ರು. .

ಅಕ್ಕಪಕ್ಕದ ಅಪಾರ್ಟುಮೆಂಟುಗಳಲ್ಲಿರ್ತಾರೆ. ಒಂದೇ ಕಂಪೆನಿಯಲ್ಲಿರ್ತಾರೆ, ಒಂದೇ ಸಮಯಕ್ಕೆ ಒಂದೇ ರೂಟಲ್ಲಿ ಓಡ್ತಾಡ್ತಿರ್ತಾರೆ. ಆದ್ರೆ ಹೋಗೋಕೆ ಮಾತ್ರ ಬೇರೆ ಬೇರೆ ಕಾರುಗಳು. ಒಂದೇ ಕಾರಲ್ಲಿ ಮೂರು ಅಥವಾ ನಾಲ್ಕು ಜನ ಹೋಗೋ ಕಾರ್ ಪೂಲಿಂಗ್ ಯಾಕೆ ಮಾಡಬಾರ್ದು ? ಅವ್ನ ಸಮಯಕ್ಕೆ ನನ್ನ ಸಮಯ ಮ್ಯಾಚಾಗೋಲ್ಲ ಅನ್ನೋ ಪಿಳ್ಳೆ ನೆವಗಳನ್ನೆಲ್ಲಾ ಬಿಟ್ಟು ಪರಿಸರದ ಬಗ್ಗೆ ಯೋಚಿಸೋ ಪ್ರಬುದ್ದತೆ ಬರ್ಬೇಕು ಜನಕ್ಕೆ. ವಿದೇಶಗಳಲ್ಲಿ ಅದೆಷ್ಟೋ ಕಿ.ಮೀಗಳಷ್ಟು ದೂರವಿರೋ ಜನರೇ, ಸಮಯಕ್ಕೆ ಅದೆಷ್ಟೋ ಬೆಲೆ ಕೊಡೋ ಜನರೇ ಕಾರ್ ಪೂಲಿಂಗ್ ನ ಸಮರ್ಪಕವಾಗಿ ಬಳಸಿಕೊಳ್ತಿರಬೇಕಾದ್ರೆ ಒಂದೇ ಅಪಾರ್ಟುಮೆಂಟು, ಆಫೀಸಿನಲ್ಲಿರೋರಿಗೆ ಇದು ಸಾಧ್ಯವಾಗೋಲ್ಲ ಅಂದ್ರೆ ಇನ್ನೇನನ್ನಬೇಕು ಇವರಿಗೆ ?

ಎಲ್ಲಾ ಆಫೀಸೂ ತೆಗೆಯೋದು ಒಂಭತ್ತಕ್ಕೆ. ಮುಚ್ಚೋದು ಆರಕ್ಕೆ ಅಂದ್ರೆ ಬೆಳಗ್ಗೆ ಎಂಟರಿಂದ ಹತ್ತರವರೆಗೆ ಮತ್ತೆ ಐದರಿಂದ ಏಳರವರೆಗೆ ವಿಪರೀತ ಟ್ರಾಫಿಕ್ಕು ಆಗೇ ಆಗತ್ತೆ. ಹಂಗೇ ಯಾಕಿರಬೇಕು. ಒಂದಿಷ್ಟು ಆಫೀಸುಗಳನ್ನ ಒಂಭತ್ತೂವರೆಗೆ, ಒಂದಿಷ್ಟನ್ನ ಎಂಟಕ್ಕೆ, ಇನ್ನೊಂದಿಷ್ಟನ್ನ ಹತ್ತಕ್ಕೆ ಅಂತ ಭಿನ್ನ ಭಿನ್ನ ಸಮಯಕ್ಕೆ ತೆರದ್ರೆ ಒಂದೇ ಸಲ ಹುಚ್ಚೆದ್ದು ಓಡೋ ಜನರ ಸಂಖ್ಯೆ ಕಮ್ಮಿಯಾಗುತ್ತೆ. ಟ್ರಾಫಿಕ್ಕೂ ಇಳಿಯುತ್ತೆ !

ಸಿಲ್ಕ್ ಬೋರ್ಡ್ ಜಂಕ್ಷನ್ನು, ಮಾರತ್ತಳ್ಳಿ ಜಂಕ್ಷನ್ನುಗಳಲ್ಲಿ ದಿನಾ ಅರ್ಧ ಘಂಟೆ ಜ್ಯಾಮಾಗುತ್ತೆ ಅಂತ ಗೊತ್ತಾದ್ರೂ ಬಸ್ಸಲ್ಲಿ ಕೂತವನಿಗೆ ಏನೂ ಮಾಡಲಾರದ ಪರಿಸ್ಥಿತಿ. ಅವ ತಾನೇ ಇಳಿದು ಸಿಗ್ನಲ್ ದಾಟಿ ಮುಂದ್ರೆ ಹೋದ್ರೂ ಹಿಂದಿನಿಂದ ಬಸ್ಸು ಬಾರದ ಕಾರಣ ಏನೂ ಮಾಡಲಾಗದೇ ಶಾಪ ಹಾಕ್ತಾ ಕೂತಿರ್ತಾನೆ. ಅದ್ರ ಬದ್ಲು ಈ ಕಡೆಯಿಂದ ಸಿಲ್ಕ್ ಬೋರ್ಡುವರೆಗೆ, ಸಿಲ್ಕ್ ಬೋರ್ಡಿನಿಂದ ಬನಶಂಕರಿಯವರೆಗೆ ಅಂತ ಶಟಲ್ ಸರ್ವೀಸ್ ತರದ ಬಸ್ಸುಗಳನ್ನು ಪ್ರಾರಂಭಿಸಿದ್ರೆ ? ಅಲ್ಲಲ್ಲೇ ಹೆಚ್ಚು ಓಡಾಡೋ ಬಸ್ಸುಗಳಿದ್ರೆ ಇರುವಷ್ಟು ಬಸ್ಸುಗಳಲ್ಲೇ ನೇತಾಡುತ್ತಾ ಪ್ರಾಣದ ಹಂಗು ತೊರೆದು ಪ್ರಯಾಣಿಸೋ ಜನರ ಸಂಖ್ಯೆಯೂ ತಪ್ಪುತ್ತೆ. ಸಿಗ್ನಲ್ಲುಗಳಲ್ಲೇ ಘಂಟೆಗಟ್ಟಲೇ ಜ್ಯಾಮಾಗೋದೂ ತಪ್ಪುತ್ತೆ !!

ಎಲ್ಲದಕ್ಕಿಂತ ಮುಖ್ಯವಾಗಿ ಬದಲಾಗಬೇಕಿದ್ದು ಸರ್ಕಾರವಲ್ಲ. ಇಲ್ಲಿರೋ ಜನರ ಮನೋಭಾವ. ಬಿ.ಬಿ.ಎಂ.ಪಿ ಅದು ಮಾಡ್ಲಿಲ್ಲ ಇದು ಮಾಡ್ಲಿಲ್ಲ ಅಂತ ಕೂಗಾಡ್ತಿದ್ದ ಜನ ಇತ್ತೀಚೆಗೆ ನಡೆದ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ ಮತ ಹಾಕಿದ್ದೆಷ್ಟು. ಎಲ್ಲಾ ರಜೆ ಅಂತ ಹೊದ್ದು ಮಲಗಿದ್ರಲ್ಲ. ಕೆಲವರು ನಮ್ಮ ಓಟು ಇಲ್ಲಿರಲಿಲ್ಲ. ನಮ್ಮ ಹಳ್ಳಿಗಳಲ್ಲಿತ್ತು, ಬೇರೆ ರಾಜ್ಯದಲ್ಲಿತ್ತು ಅಂತ್ಲೂ ತಪ್ಪಿಸಿಕೊಳ್ಳಬಹುದು. ಆ ರಾಜ್ಯಗಳ ಗ್ರಾಮ ಪಂಚಾಯಿತಿ ಎಲೆಕ್ಷನ್ ನಡೆದಾಗ ಹೋಗ್ಲಿ ರಾಜ್ಯ ಸಭೆ, ವಿಧಾನಸಭೆಗಳ ಎಲೆಕ್ಷನ್ ನಡೆದಾಗ್ಲಾದ್ರೂ ಊರಿನತ್ತ ಮುಖ ಮಾಡಿದ್ರಾ ಅವ್ರು ? ಲೋಕ ಸಭೆ ಎಲೆಕ್ಷನ್ನಲ್ಲೂ ಓಟಾಕೋ ಸುದ್ದಿಗೆ ಹೋಗದ ಇವರಿಗೆ ಬಯ್ಯೋಕೆ ಮಾತ್ರ ಸರಕಾರ ಬೇಕು, ತಮ್ಮ ತಮ್ಮ ಜವಾಬ್ದಾರಿಗಳ ನೆರವೇರಿಸೋಕೆ ಮಾತ್ರ ಸರಕಾರ ಅನ್ನೋದು ವ್ಯರ್ಥ ವ್ಯವಸ್ಥೆ ! ವೋಟು ಹಾಕದ ಜನಕ್ಕೆ ಆ ತಿಂಗಳ ಸಂಬಳ ಕಟ್ ಅನ್ನೋ ತರದ್ದೇನಾದ್ರೂ ಮಾಡ್ಬೇಕು ಅಂತ ರೋಷಾವೇಷದಿಂದ ಮಾತಾಡ್ತಿದ್ದ ಗುಂಡಣ್ಣ ಒಮ್ಮೆ ಯಾಕೋ ತಿರುಗಿ ನೋಡಿದ ಒಂದೆರಡು ಕಣ್ಣುಗಳು ಇವನನ್ನೇ ನೋಡ್ತಿದ್ದಂತೆ ಕಂಡಿದ್ದು, ತಕ್ಷಣವೇ ತಮ್ಮ ತಮ್ಮ ಪೇಪರ್ಗಳಲ್ಲಿ ಅಡಗಿಕೊಂಡವು. ಎಡಬಲಕ್ಕೆ ನೋಡಿದ ಮತ್ತೊಮ್ಮೆ. ಇವನನ್ನೇ ನೋಡುವಂತಿದ್ದ ಇನ್ನೊಂದೆರೆಡು ತಮ್ಮ ತಮ್ಮ ಮೊಬೈಲುಗಳಲ್ಲಿ ಹುಗಿದುಕೊಂಡವು. ತನ್ನ ಪಕ್ಕದಲ್ಲಿದ್ದ ಹಿರಿಯರತ್ತ ನೊಡಿದ ಪ್ರಶ್ನಾರ್ಥಕವಾಗಿ. ಅವರು ಇವನನ್ನ ನೋಡೊಮ್ಮೆ ಮುಗುಳ್ನಕ್ಕರು. Be the change what you want to be ಅಂತ ಗಾಂಧೀಜಿಯವ್ರು ಹೇಳ್ತಿದ್ರಂತೆ ಮಗು. ನಿನ್ನ ಆಲೋಚನೆಗಳು ಚೆನ್ನಾಗಿದೆ. ಇವನ್ನು ಹೀಗೇ ಕಳೆದುಹೋಗೋ ಮಾತುಗಳಲ್ಲಿ ಸಾಯಲು ಬಿಡಬೇಡ. ಅವಕ್ಕೊಂದಿಷ್ಟು ಉಸಿರು ಕೊಡು. ಜಗದೋದ್ದಾರಕ್ಕಾಗಿ ತಾಳ್ಮೆಯಿಡು. ಸಿಗೋಣ ಮತ್ತೊಮ್ಮೆ ಎಲ್ಲಾದ್ರೂ. ಅಂತ ಅವರ ನಿಲ್ದಾಣ ಬಂತೆಂದು ಉಳಿದುಹೋದ್ರೂ ಗುಂಡಣ್ಣನಲ್ಲಿ ಅವರ ಮಾತುಗಳ ಪ್ರಭಾವ ಇನ್ನೂ ಇಳಿದಿಲ್ಲ. ವೇಗವಾಗಿ ಸಾಗುತ್ತಿರೋದು ಬಸ್ಸೋ ತನ್ನ ಗಮ್ಯದೆಡೆದಿನ ನಿರ್ಧಾರಗಳೋ ಎಂಬ ಸಂದಿಗ್ದದಲ್ಲಿ ಸಿಲುಕಿರೋ ಗುಂಡಣ್ಣ ಮತ್ತೆ ತನ್ನ ಆಲೋಚನಾಲಹರಿಯಲ್ಲಿ ಮುಳುಗಿಹೋಗಿದ್ದಾನೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x