ಬೆಂಗ್ಳೂರಲ್ಲಿ ಭಾರೀ ಮಳೆ ಅಂತ ಟೀವಿನಲ್ಲಿ ಬೆಳಗ್ಗಿಂದ ತೋರಿಸ್ತಿದ್ದದ್ನ ನೋಡಿ ಅಮ್ಮ ಗಾಬ್ರಿಯಾಗಿ ಫೋನ್ ಮಾಡಿದ್ರು. ಅಯ್ಯೋ ಅಮ್ಮಾ , ನಿಂಗೆ ಮಾಡಕ್ಕೆ ಬೇರೆ ಕೆಲ್ಸ ಇಲ್ಲ. ಯಾವ್ದೋ ಏರಿಯಾದಲ್ಲಿ ಮಳೆ ಬಂತು ಅಂದ್ರೆ ಇಡೀ ಬೆಂಗ್ಳೂರೇ ಮುಳುಗಿ ಹೋಯ್ತು ಅಂತ ತೋರಿಸ್ತಾರೆ ಈ ಟೀವಿಯವ್ರು. ಅವ್ರಿಗೆ ಒಂದೋ ತೋರ್ಸಕ್ಕೆ ಬೇರೆ ಸುದ್ದಿ ಇಲ್ಲ. ಮಾಡಕ್ಕೆ ಬೇರೆ ಕೆಲ್ಸ ಇಲ್ಲ ಅಂದ ಮಗ. ಮಗನ ಮಾತು ಕೇಳಿ ತಾಯಿಗೆ ಎಷ್ಟೋ ಸಮಾಧಾನವಾದ್ರೂ ಸೊಂಟ ಮಟ್ಟ ನೀರಲ್ಲಿ ನಿಂತ ಕಾರುಗಳ ಟೀವಿಯಲ್ಲಿ ಕಂಡವಳಿಗೆ ಏನೋ ಒಂದು ಕಳವಳ. ಯಾಕೋ ಆತಂಕ. ಊರಲ್ಲಿ ಮಳೆಯಿಲ್ಲದೇ ಕಂಗಾಲಾಗಿದ್ರೂ ಕರುಣೆ ತೋರದ ವರುಣ ಪೇಟೆಯಲ್ಯಾಕೆ ಈ ಪರಿ ಸುರಿತಾನೆ ? ಅಷ್ಟಕ್ಕೂ ಇಲ್ಲಿ ಕಪ್ಪೆ ಮದುವೆ, ಕತ್ತೆ ಮದುವೆ, ಮಂಗನ ಮದುವೆ, ಬೊಂಬೆ ಮದುವೆ ಮಾಡಿ ಕರೆದ್ರೂ ಬಾರದ ವರುಣ , ಕರೆಯದ ಅತಿಥಿಯಾಗಿ ಪೇಟೆಗೆ ಹೋಗಿ ಕಾಟ ಕೊಡೋದ್ಯಾಕೆ ಅನ್ನೋದು ತಾಯಿಗೆ ಎಂದಿಗೂ ಸೋಜಿಗ. ಅದನ್ನೇ ಮಗನತ್ರ ಹೇಳಿದ್ರೆ ಈ ಮದುವೆ ಮಾಡಿದ್ರೆ ಮಳೆ ಬರುತ್ತೆ ಅನ್ನೋದೆಲ್ಲಾ ನಿಮ್ಮ ಮೂಡನಂಬಿಕೆ ಅಷ್ಟೇ. ಚಲಿಸೋ ಮಳೆ ಮೋಡಗಳನ್ನ ಪರ್ವತಗಳು ತಡೆದಲ್ಲೆಲ್ಲಾ ಮಳೆ ಬರುತ್ತಷ್ಟೇ ಅಂತಿದ್ದ. ಇದ್ದ ಹಸಿರನ್ನೆಲ್ಲಾ ನುಂಗಿ ಹಾಕಿ ಕಾಂಕ್ರೀಟ್ ಸೌಧಗಳನ್ನೆಬ್ಬಿಸಿರೋ ಪೇಟೆಗಳಲ್ಲಿ ಪರ್ವತಗಳೆಲ್ಲಿಂದ ಬರ್ಬೇಕು ಅನ್ನೋ ಸಂದೇಹ ಬಂದ್ರೂ ಈ ಹತ್ತರಿಂದ , ನೂರರವರೆಗೆ ಮಹಡಿಗಳಿರೋ ಬೃಹತ್ ಕಟ್ಟಡಗಳೇ ಮೋಡಗಳನ್ನ ಅಡ್ಡಹಾಕಬಹುದೇನೋ ? ಎತ್ತರದಲ್ಲಿ ಅದು ನಮ್ಮೂರಿನ ಜೇನಿನ ಗುಡ್ಡಕ್ಕಿಂತ ಕಮ್ಮಿ ಇದ್ಯಾ ಅಂತ ಸಮಾಧಾನ ಮಾಡ್ಕೋತಿದ್ರು ಅಮ್ಮ. ಅಷ್ಟಕ್ಕೂ ನನ್ನ ಮಗನೇನೋ ಸಾಮಾನ್ಯ ಬುದ್ದಿವಂತನಾ ? ದಿನಕ್ಕೊಂದು ರೂಪಾಯಿಗೆ ಪರಿತಪಿಸಿ ಹೆಚ್ಚಿನ ಓದೆಂಬುದು ಮರೀಚಿಕೆಯೆ ಆಗುಳಿದ ನಾವೆಲ್ಲಿ ? ತಿಂಗಳಿಗೆ ಐದಂಕಿ ಎಣೆಸ್ತಿರೋ ಮಗನೆಲ್ಲಿ ? ಅವನು ಹೇಳ್ತಿದಾನೆ ಅಂದ್ರೆ ಅದು ಸತ್ಯವೇ ಇರಬೇಕೆಂಬುದು ಇವರ ಸಮಾಧಾನ. ಮಗನ ಮೇಲಿಟ್ಟ ಭರವಸೆಯ ತೀರ್ಮಾನ.
"ವಾವ್. ಇವತ್ತು ಬೆಂಗ್ಳೂರಲ್ಲಿ ಮೊದಲ ಬಾರಿಗೆ ಬಟ್ಟೆಯೆಲ್ಲಾ ನೆನೆಯುವಂತ ಮಳೇಲಿ ಸಿಕ್ಕಾಕೊಂಡೆ". ತಗಾ ಒಂದು ಫೇಸ್ಬುಕ್ ಸ್ಟೇಟಸ್ಸು. ಅದಕ್ಕೊಂದಿಷ್ಟು ಲೈಕು , ಕಮೆಂಟುಗಳ ಸುರಿಮಳೆ. ಅಂದ ಮಾತ್ರಕ್ಕೆ ಅವ ಬೆಂಗ್ಳೂರಿಗೆ ಇತ್ತೀಚೆಗಷ್ಟೇ ಕಾಲಿಟ್ಟವನಲ್ಲ. ಇಟ್ಟಾಗಲೇ ಎರಡು ವರ್ಷವಾಗುತ್ತಾ ಬಂದಿದ್ರೂ ಅವನಿಗೆ ಮಳೆಗಾಲ ಅಂತ ಎದುರು ಸಿಕ್ಕಿದ್ದೆಲ್ಲಾ ಜಿಮುರುಗಳೇ. ಮೊದಲ ಮಳೆಯೆಂದ್ರೆ ಮೂಗರಿಳುಸುತ್ತಿದ್ದ ಊರ ಮಣ್ಣಿನ ವಾಸನೆಯನ್ನೆಣೆಸಿದ್ದವನಿಗೆ ಮೊದಲ ಮಳೆ ಕಂಡಿದ್ದು ಆಫೀಸಿನ ಕಿಟಕಿಯಿಂದ. ಆರಂತಸ್ತಿನ ಕಟ್ಟಡದ ಕೊನೆಯ ಮಹಡಿಯಲ್ಲಿ ನಿಂತಿದ್ದವನಿಗೆ ಮಣ್ಣಿನ ವಾಸನೆಯೆಲ್ಲಿ ಬರಬೇಕು ? ಗಾಜಿನಾಚೆಯ ಮಳೆಹನಿಗಳು ಊರ ನೀರ ಭಾವವನ್ನೆಲ್ಲಿ ತರಬೇಕು ? ಅದಾದ ಮೇಲಿನ ಮಳೆಗಳಲ್ಲೆಷ್ಟೋ ಆಫೀಸಿನ ಏಸಿಯ ಭೋರ್ಗರೆತದಲ್ಲಿ, ಕತ್ತಲ ಕೋಣೆಯ ಟ್ಯೂಬಲೈಟ್ ಮೀಟಿಂಗುಗಳಲ್ಲಿ ಮುಳುಗಿಹೋಗಿದ್ದವನಿಗೆ ಗೊತ್ತೇ ಆಗಿರಲಿಲ್ಲ. ಬೆಳಗೆದ್ದು ಆಫೀಸಿಗೆ ಬರುವಾಗ ಕಾಣ್ತಿದ್ದ ಒದ್ದೆ ರಸ್ತೆಯಿಂದಲೋ, ಮನೆಗೆ ಮರಳುವಾಗ ರಸ್ತೆಯ ಮೇಲೆಲ್ಲಾ ಹರಡಿರುತ್ತಿದ್ದ ಎಲೆಗಳ, ಮಣ್ಣ ರಾಶಿಯಿಂದಲೋ ಓ, ಒಂದೊಳ್ಳೆ ಮಳೆ ಬಂದು ಹೋಯ್ತು ಅಂತ ಗೊತ್ತಾಗಿದ್ದು. ಒಮ್ಮೆ ಆಫೀಸಿನ ಕ್ಯಾಂಟೀನಲ್ಲಿರುವಾಗಲೇ ಹೊರಗೆ ಆಲೀಕಲ್ಲು ಮಳೆ ಶುರುವಾಗಿತ್ತು. ಶೀಟ್ ಮೇಲಿನ ಧಡಬಡ ಸದ್ದು ಕೇಳಿ ಸುಮಾರಷ್ಟು ಜನ ಗಾರ್ಬಿಯಾಗಿದ್ರೂ ಇವ ತನ್ನ ಬಾಲ್ಯದ ದಿನಗಳನ್ನು ನೆನೆಸಿ ಖುಷಿಯಾಗಿದ್ದ. ಶಾಲಾ ದಿನಗಳವು. ಮನೆಗೆ ಬರೋ ದಾರಿಯಲ್ಲಿ ಸಿಗೋ ಮಳೆಗಳೆಲ್ಲಾ ಆಲಿಕಲ್ಲು ಮಳೆ ಆಗ್ಲಪ್ಪಾ ಅಂತ ಬೇಡ್ತಿದ್ದ ಎಲೆ ಜೀವಗಳವು. ಎಲ್ಲೋ ವಾರಕ್ಕೊಮ್ಮೆ ಇವರ ಬೇಡಿಕೆಗೆ ವರುಣ ತಥಾಸ್ತು ಅಂದಾಗ ಅದೇ ಸ್ವರ್ಗಸಮಾನ ಖುಷಿ. ಎಲ್ಲೆಲ್ಲೋ ಬೀಳುತ್ತಿದ್ದ ಆ ಬಿಳಿ ಬಿಳಿ ಆಲಿಕಲ್ಲು ಆರಿಸೋದೇನು ? ಒಂದೋ ಎರಡೋ ಆರಿಸಿ ಬಾಯಿಗೆ ಹಾಕ್ಕಂಡ್ರೆ ಸಾಕಾಗದೇ , ಆಮೇಲೆ ತಿನ್ನೋಕೂ ಇರ್ಲಿ ಅಂತ ತಿಂಡಿಯ ಬಾಕ್ಸಲ್ಲೂ ಒಂದೆರಡು ಹಾಕಿಟ್ಕೊಳ್ಳೋದೇನು ? ಅವನಿಗೆ ದೊಡ್ಡ ಆಲಿಕಲ್ಲು ಸಿಕ್ತು. ನಂಗೆ ಅದ್ಕಿಂತ ದೊಡ್ಡದು ಸಿಗ್ಲಪ್ಪ ದೇವ್ರೆ ಅಂತ ಬೇಡೋದೇನು .. ಓಹ್,, ಈ ಜೋರು ಮಳೆಯಲ್ಲಿ, ಆಲಿಕಲ್ಲಿಗಾಗಿನ ಓಡಾಟದಲ್ಲಿ ಕೊಡೆಯಿದ್ರೂ ಮೈಯೆಲ್ಲಾ ಒದ್ದೆ. ಒಂದಿಷ್ಟು ನಿಮಿಷ ಹೊಯ್ದ ಆಲೀಕಲ್ಲು ಮಳೆ ಕೊನೆಗೆ ಸಾಮಾನ್ಯ ಮಳೆಯಾಗಿ ಬದಲಾಗೋ ಹೊತ್ತಿಗೆ, ಅಯ್ಯೋ ಮನೆಗೆ ಹೋಗೋದು ಲೇಟಾಯ್ತಲ್ಲ ಅನ್ನೋ ನೆನಪಾಗೋದು. ಲೇಟಾದ್ರೆ ಬಯ್ಯೋ ಅಮ್ಮನ ನೆನೆಸಿ, ಪಚಕ್ ಪಚಕ್ ಅಂತ ರಸ್ತೆಯೆಲ್ಲಾ ತುಂಬಿದ್ದ ನೀರಲ್ಲಿ ಆಡೋ ಬಯಕೆಗೊಂದು ಕಡಿವಾಣ ಹಾಕಿ ಮನೆ ಕಡೆಗೆ ಓಡ್ತಿದ್ವಿ. ಆದ್ರೂ ಕೆಲೋ ಕಡೆ ರಸ್ತೆಯ ಬಲದಿಂದ ಎಡಕ್ಕೆ ಉಲ್ಟಾ ಬೈತಲೆ ತೆಗೆದಂತೆ ಹರಿಯುತ್ತಿದ್ದ ನೀರಲ್ಲಿ ಪಚಕ್ ಪಚಕ್ ಆಗೇ ಬಿಡುತ್ತಿತ್ತು. ಹೆಚ್ಚು ಕಮ್ಮಿ ಅದೇ ಸಮಯಕ್ಕೆ ಮನೆಗೆ ಬಂದ್ರೂ ಅಮ್ಮ ಬಾಗ್ಲಲ್ಲೇ ಕಾಯ್ತಾ ನಿಂತಿರ್ತಿದ್ರು. ಇವತ್ತೂ ಪೂರಾ ನೆನಕಂಡು ಬಂದ್ಯಾ ? ಸೀದಾ ಬಚ್ಚಲಿಗೆ ನಡಿ. ಬಿಸಿ ಬಿಸಿ ನೀರಲ್ಲೊಂದು ಸ್ನಾನ ಮಾಡು. ನಿನ್ನೀ ವದ್ದೆ ಬಟ್ಟೆಗಳನ್ನೆಲ್ಲಾ ಬಿಚ್ಚಾಕು, ಈ ಆಲೀಕಲ್ಲು ಮಳೆ ಬಂತು ಅಂದ್ರೆ ಸಾಕು, ನೋಡು ಹೆಂಗೆ ಕೆಸ್ರು ಮಾಡ್ಕೊಂಡು ಬಂದಿದೀಯ ಬಟ್ಟೆಗಳನ್ನ ಅಂತ ಬಯ್ಯಲು ಶುರು ಮಾಡುತ್ತಿದ್ದ ಅಮ್ಮನಿಗೆ , ಅಮ್ಮ ಅದು ಅಂತ ತನ್ನ ತಿಂಡಿ ಬಾಕ್ಸು ತೆಗೆದು ಏನೋ ಕೊಡೋಕೆ ಹೋಗ್ತಿದ್ದ. ಆದ್ರೆ ಮನೆಗೆ ಬರುವಷ್ಟರಲ್ಲಿ ಆ ಆಲೀಕಲ್ಲೆಲ್ಲಾ ನೀರಾಗಿ ಇವನ ಮುಖ ಸಣ್ಣ ಆಗೋದು. ಶಾಲೆಯತ್ರ ಬರ್ತಿದ್ದ ಐಸ್ ಕ್ಯಾಂಡಿ ಅನ್ನೋ ಸೌಭಾಗ್ಯವನ್ನು ಅಮ್ಮ ಜೀವಮಾನದಲ್ಲಿ ತಿಂದಿರೋಕೆ ಸಾಧ್ಯವಿಲ್ಲ. ಅಷ್ಟೇ ತಂಪು ಕೊಡೋ ಬಡವರ ಐಸು ಆಲಿಕಲ್ಲಾನಾದ್ರೂ ಅಮ್ಮನಿಗೆ ತಂದು ತೋರ್ಸಿ ಅದ್ರ ರುಚಿ ಬಗ್ಗೆ ಹೇಳ್ಬೇಕು ಅಂದ್ಕೊಂಡಿದ್ದ ಮಗರಾಯ. ತನ್ನ ವಯಸ್ಸನ್ನೇ ದಾಟಿ ಬಂದ ಅಮ್ಮ ತನ್ನಂತೆ ಆಡ್ತಿದ್ರಾ ? ಆಲಿಕಲ್ಲು ತಿಂತಿದ್ರಾ ಅನ್ನೋ ಸಣ್ಣ ಅನುಮಾನವನ್ನು ಆಲೀಕಲ್ಲು ಮಳೆಯಲ್ಲಿ ನೆಂದು ಬಂದಾಗೆಲ್ಲಾ ಬಯ್ತಿದ್ದ ಅವರ ಬಯ್ಗುಳಗಳು ಮೆಟ್ಟಿ ಹಾಕಿದ್ದವು. ಅಮ್ಮನೆಂದ್ರೆ ಅವನ ಪಾಲಿಗೆ ಮನೆಯ ನಾಲ್ಕು ಗೋಡೆಗಳ ಯಾವ ಕಾರಣಕ್ಕೂ ದಾಟದ, ಮನೆಯಲ್ಲಿ ತನ್ನ ಬರವನ್ನೇ ಕಾಯ್ತಾ , ತನಗಾಗೇ ತನ್ನ ಜೀವನವ ಮುಡಿಪಿಟ್ಟ ಜೀವ ಅವನ ದೃಷ್ಟಿಯಲ್ಲಿ. ಪ್ರತೀ ಮಳೆಯಲ್ಲಿ ನೆನೆದ್ರೂ ತನಗೆಂದು ಆಲೀಕಲ್ಲು ಬಾಕ್ಸಲ್ಲಿ ಕೂಡಿಡುವ, ಆದ್ರೆ ತನಗೆ ಹೇಳಲಾಗದೇ ಹೋದ ಮಗನ ಬಗ್ಗೆ ತಾಯಿಗೆ ಪ್ರತೀ ಬಾರಿಯೂ ಆತನ ಶೀತಲ ತಿಂಡಿ ಬಾಕ್ಸ ತೊಳೆದಿಡುವಾಗ ಗೊತ್ತಾಗ್ತಿತ್ತು. ಕಣ್ಣಂಚಲ್ಲೊಮ್ಮೆ ನೀರು ಜಿನುಗ್ತಿತ್ತು.
ಎಂತಾ ದರಿದ್ರ ಮಳೆಯಪ್ಪಾ ಇದು.ಇವತ್ತಾದ್ರೂ ಬೇಗ ಮನೆಗೆ ಹೋಗೋಣ ಅಂತ ಅಂದ್ಕೊಂಡಿದ್ದೆ. ಈ ಮಳೆಯಿಲ್ಲ ಟ್ರಾಫಿಕ್ಕೆಲ್ಲಾ ಜಾಮಾಗಿ ಮನೆ ಮುಟ್ಟೋದು ಮಿನಿಮಮ್ ಮುಕ್ಕಾಲು ಘಂಟೆ ಲೇಟಾಗುತ್ತೆ. ಥೋ ಅಂತ ಗೊಣಗ್ತಿದ್ದ ಸಹೋದ್ಯೋಗಿಯ ಗೊಣಗಾಟದಿಂದ ವಾಸ್ತವಕ್ಕೆ ಬಂದಿದ್ದ ಇವ. ಎದುರು ಬೀಳುತ್ತಿದ್ದ ಆಲೀಕಲ್ಲುಗಳನ್ನ ಕಂಡು ಓಡಿ ಹೋಗಿ ಆರಿಸೋಣವಾ ಅನಿಸಿದ್ರೂ ಇವನ ಟೈ, ಬೆಲ್ಟುಗಳ ಫಾರ್ಮಲ್ಲು ಇವನನ್ನು ನಿಂತ ಜಾಗಕ್ಕೇ ಕಟ್ಟಿ ಹಾಕಿದ್ವು.ಅಲ್ಲೇ ಐದು ನಿಮಿಷ ಮಳೆ ನೋಡುತ್ತಾ ಮೈಮರೆತಿದ್ದವನಿಗೆ ಮೂರು ಮಿಸ್ ಕಾಲುಗಳು ಬಂದಿದ್ದೂ ಗೊತ್ತಾಗಿರಲಿಲ್ಲ.
ಬೆಳಗಾದರೆ ಆಫೀಸಿನ ಏಸಿ, ರಾತ್ರೆಯಾದ್ರೆ ರೂಮಿನ ಫ್ಯಾನ ಸದ್ದು, ಟೀವಿಯ ಸದ್ದುಗಳಲ್ಲಿ, ಹಗಲನ್ನೇ ರಾತ್ರಿಯಾಗಿಸುವಂತಿದ್ದ ಕಿಟಕಿಯ ಕರ್ಟನ್ನುಗಳ ಕತ್ತಲಲ್ಲಿ ಮಳೆಯ ಸದ್ದಾಗಲಿ, ದೃಶ್ಯಗಳಾಗ್ಲಿ ಕಾಣೋದಾದ್ರೂ ಹೇಗೆ ? ಎಲ್ಲೋ ಜೋರಾಗಿ ಗುಡುಗಿದಾಗ ಕೆಲವೊಮ್ಮೆ ಓ, ಮಳೆ ಬರ್ತಿದ್ಯಾ ಅನ್ನೋ ಭಾವ ಎದ್ದು ಮತ್ತೆ ಮಲಗಿದ್ದು ಬಿಟ್ರೆ ಮಳೆಯೆಂಬುದು ಬಾಲ್ಯದ ಕನಸುಗಳಿಗೆ ಮಾತ್ರ ಸೀಮಿತವಾಗಿತ್ತು. ಬೆಳಗ್ಗೆ ಆಫೀಸು ಬಸ್ಸು, ಸಂಜೆಗೆ ಬಸ್ಸು, ತೀರಾ ಲೇಟಾದ್ರೆ ಕ್ಯಾಬು ಅಂತ ಮನೆ ಬಳಿಯೇ ಸಕಲ ಸೌಲಭ್ಯಗಳು ಸಿಕ್ಕಿದಾಗ , ಅದರಲ್ಲೂ ಇಯರ್ ಫೋನ್ ಸಾಥಿಯಾದಾಗ ರಸ್ತೆಯಲ್ಲಿ ಎದುರಾಗುತ್ತಿದ್ದ ಮಳೆಯೂ ಟೀವಿಯಲ್ಲಿ ನೋಡಿದ ಮಳೆಯ ಸನ್ನಿವೇಶದಷ್ಟೇ ನೀರಸವೆನಿಸುತ್ತಿತ್ತು. ತಿಂಗಳಿಗೊಮ್ಮೆ ಊರಿಗೆ ಬಂದಾಗ ಅಡ್ಡಗಟ್ಟಿ ತನ್ನ ಪ್ರೀತಿಯನ್ನೋ, ರೋಷವನ್ನೋ ತೀರಿಸಿಕೊಳ್ಳುವಂತೆ ಛತ್ರಿಯಿದ್ದರೂ ಅರ್ಧ ಮೈ ತೋಯಿಸಿಬಿಡುತ್ತಿದ್ದ ಮಳೆಯೇ ಆತನ ಪಾಲಿಗೆ ಮಳೆ. ಬೆಂಗ್ಳೂರನ್ನೋದು ಒಂಥರಾ ಹೊಟ್ಟೆಪಾಡಿನ ತಾತ್ಕಾಲಿಕ ತಂಗುದಾಣವಷ್ಟೇ. ಅಷ್ಟಕ್ಕೂ ಬಸ್ಟಾಂಡಲ್ಲಿ ಬಸ್ಸಿಗೆಂದು ಕೂತಾಗ ಅದು ಸುರಿಯತೊಡಗಿದ್ರೆ ಅದು ಎಂದಾದ್ರೂ ಖುಷಿ ಕೊಟ್ಟೀತೆ ? ಹಾಗೇ ಬೆಂಗ್ಳೂರಿನ ಮಳೆ ಒಮ್ಮೊಮ್ಮೆ ಎದುರಾದ್ರೂ ಅದರೊಂದಿಗೆ ಎದುರಾಗುತ್ತಿದ್ದ ಕೊಚ್ಚೆ ನೀರು, ಜಾಮಾಗುತ್ತಿದ್ದ ಟ್ರಾಫಿಕ್ಕು ಯಾಕೋ ಬೇಸರ ತರಿಸಿದ್ವು.
ಹಿಂದಿನ ದಿನ ಸಂಜೆ ಫ್ರೆಂಡು ಮನೆಯಲ್ಲಿ ಪಾರ್ಟಿಯಿದೆ ಬಾರೋ ಎಂದು ಎಷ್ಟು ಕರೆದ್ರೂ ಹೋಗಿರಲಿಲ್ಲ ಇವ. ಬೈಕಲ್ಲಿ ಅಷ್ಟು ದೂರ ಯಾರು ಹೋಗ್ತಾರೆ ಅನ್ನೋ ಉದಾಸೀನ. ಬೆಂಗ್ಳೂರೆಲ್ಲಾ ಬೈಕೋಡಿಸಿದವನಿಗೆ ಅವತ್ಯಾಕೋ ಮನಸ್ಸಿಲ್ಲ. ಏನೋ ಕಾರಣ ಹೇಳಿ ತಪ್ಪಿಸಿಕೊಂಡವ ರಾತ್ರಿಯೆಲ್ಲಾ ಏನೋ ಮಾಡುತ್ತಾ ತಡವಾಗಿ ಮಲಗಿದ್ದ. ಬೆಳಗ್ಗೆ ಎದ್ದು ಲೇಟಾಗಿ ಆಫೀಸಿಗೆ ಹೊರಟವನಿಗೆ ರಸ್ತೆಯ ಮೇಲೆಲ್ಲಾ ಬಿದ್ದಿದ್ದ ಮಣ್ಣರಾಶಿಯಿಂದ ಸಖತ್ ಮಳೆ ಬಂದಿರಬೇಕು ನಿನ್ನೆ ರಾತ್ರಿ. ಆದ್ರೂ ಗೊತ್ತೇ ಆಗ್ಲಿಲ್ಲವಲ್ಲ ನಂಗೆ. ಛೇ ಅಂದ್ಕೊಂಡ. ಸಂಜೆ ಮನೆಗೆ ಮರಳ್ತಾ ಶುರುವಾಯ್ತು ನೋಡಿ ಮಳೆ. ಆಫೀಸು ಬಸ್ಸು ತಪ್ಪಿಸಿಕೊಂಡು ಸಾಮಾನ್ಯ ಬಸ್ಸಲ್ಲಿ ಹೊರಟಿದ್ದವನಿಗೆ ತನ್ನೂರ ಹಳೆ ಮಳೆ ನೆನಪಿಸಿಬಿಡ್ತು ಅದು. ಬಸ್ಸಿಳಿದು ತನ್ನ ರೂಮಿಗೆ ಐದು ನಿಮಿಷದ ನಡಿಗೆಯಷ್ಟೇ. ಆದ್ರೆ ಆ ಐದು ನಿಮಿಷದ ಬದ್ಲು ಓಡಿ ಎರಡೇ ನಿಮಿಷಕ್ಕೆ ಬಂದಿದ್ರೂ ಬರುವಷ್ಟರಲ್ಲಿ ಪೂರಾ ತೋದು ಹೋಗಿದ್ದ ಮಳೆಯಲ್ಲಿ. ಭೋರ್ಗರೆಯುತ್ತಿದ್ದ ಮಳೆಯಲ್ಲಿ , ರಸ್ತೆಯ ಮೇಲೆ ಹರಿಯುತ್ತಿದ್ದ ನೀರಲ್ಲಿ ಬೀಳದಂತೆ ಸಾವರಿಸಿಕೊಂಡು ಒಂದೇ ಉಸಿರಲ್ಲಿ ಓಡಿ ಮನೆ ತಲುಪಿದ್ರೂ ಪೂರಾ ನೆಂದುಹೋಗಿದ್ದ ಈತ. ಹಾಕಿದ್ದ ಗೀಸರ್ ಲೈಟ್ ಯಾಕೆ ಅರ್ಧಕ್ಕೆ ಹೋಯ್ತು ಅಂತ ನೊಡಿದವನಿಗೆ ಕರೆಂಟ್ ಹೋಗಿದ್ದು ಗಮನಕ್ಕೆ ಬಂದಿತ್ತು. ಗೀಸರಿನ ಅರ್ಧ ಕಾದಿದ್ದ ನೀರಲ್ಲಿ ಸ್ನಾನ ಮಾಡ್ತಿದ್ರೆ ಅವನಿಗೆ ಊರ ಆಲಿಕಲ್ಲಿನ ನೆನಪುಗಳೇ. . ಯಾವಾಗ ಊರಿಗೆ ಹೋಗ್ತೀನೋ. ಮತ್ತೆ ಆಲಿಕಲ್ಲ ಮಳೇಲಿ ಆಡ್ತೀನೋ ಅನಿಸಿಬಿಟ್ಟಿತ್ತು, ಈ ಬೆಂಗ್ಳೂರ ಮಳೆಯಲ್ಲಿ ಎರಡು ನಿಮಿಷ ತೋದ ಭಾವ. ಕರೆಂಟ ಕಾದು ಬೇಸತ್ತು ಫೇಸ್ಬುಕ್ಕು ಹೊಕ್ಕವ ಅಲ್ಲೊಂದು ಮಳೆಯ ಖುಷಿಯ ಬಗ್ಗೆ ಸ್ಟೇಟಸ್ ಹರಿಬಿಟ್ಟಿದ್ದ. ಅಲ್ಲೂ ಟೈಂ ಪಾಸಾಗದೇ ಅಮ್ಮನಿಗೊಂದು ಕಾಲ್ ಹಚ್ಚಿದ್ದ. ಇವತ್ತು ತನಗೆ ಸಿಕ್ಕಿದ ಬೆಂಗಳೂರು ಮಳೆ ಬಗ್ಗೆ , ಅದ್ರಲ್ಲಿ ಎರಡು ನಿಮಿಷದಲ್ಲೇ ತೋದ ಬಗ್ಗೆ, ಇನ್ನೂ ಭೋರ್ಗರೆತಿರೋ ಗುಡುಗು ಸಮೇತ ಮಳೆ ಬಗ್ಗೆ ಖುಷಿಯಿಂದ, ಇರದ ಕರೆಂಟ್ ಬಗ್ಗೆ ಬೇಸರದಿಂದ ಹೇಳ್ತಿದ್ರೆ ಇಲ್ಲಿ ಬೆಳಗ್ಗಿಂದ ಕರೆಂಟಿಲ್ಲ ಅಂತ ಹೇಳೇಕೆ ಹೋದ ಅಮ್ಮ ಸುಮ್ಮನಾಗಿದ್ರೂ. ಕೊನೆಗೆ ಹಿಂದಿನ ರಾತ್ರಿ ಟೀವಿಯಲ್ಲಿ ನೋಡಿದ್ದು ನೆನಪಾಗಿ ಅಂದ್ರು ಅಮ್ಮ. ಅದ್ಯಾವ್ದೋ ಶ್ಯಾಮ ನಗರವೋ , ಭಾಮ ನಗರದಲ್ಲೋ ಭರ್ಜರಿ ಮಳೆಯಾಗಿದ್ಯಂತಲ್ಲೋ, ಅದು ಬೆಂಗಳೂರಲ್ಲಿ ಎಲ್ಲಿ ಬರುತ್ತೆ ಅಂದ್ರು ಅಮ್ಮ. ಶ್ಯಾಮ ನಗರ ಅಂದ್ರೆ, ನಿನ್ನೆ ಸಂಜೆ ನಾನು ಹೋಗ್ಬೇಕಾಗಿದ್ದ ಏರಿಯಾವೇ .. ಮಗನ ಕಿವಿ ನೆಟ್ಟಗಾಯ್ತು.ಭರ್ಜರಿ ಮಳೆಯಾ ? ಇನ್ನೇನು ತೋರಿಸಿದ್ರು ಅಂದ ಇವ. ಅದ್ಯಾವ್ದೋ ಏರಿಯಾದಲ್ಲಿ ನಿಲ್ಲಿಸಿದ್ದ ಬೈಕುಗಳು ಕೊಚ್ಚಿ ಹೋಗಿ, ಕಾರುಗಳೆಲ್ಲಾ ಅದೆಷ್ಟೋ ದೂರ ತೇಲಿ ಹೋಗಿದೆ ಅಂತ ಹೇಳ್ತಿದ್ರು. ಮನೆಯೊಳಗೆಲ್ಲಾ ಸೊಂಟದಷ್ಟು ನೀರು ನಿಂತಿತ್ತು ಅಂದದ್ದು ಕೇಳಿ ಗಾಬರಿಯಾಗಿದ್ದ. ಅಮ್ಮನ ಕಾಲಿಟ್ಟ ನಂತರವೇ ತನ್ನ ಗೆಳೆಯನಿಗೆ ಫೋನಾಯಿಸಿದ್ರೆ ಸ್ವಿಚ್ಚಾಫು. ಆ ಏರಿಯಾದಲ್ಲಿದ್ದ ಇನ್ನಿಬ್ಬರಿಗೆ ಫೋನಾಯಿಸಿದ್ರೆ ಅವೂ ಸ್ವಿಚ್ಚಾಫು. ಗಾಬರಿಯಾಗಿ ಮತ್ತೊಬ್ಬ ಗೆಳೆಯನಿಗೆ ಫೋನಾಯಿಸಿದ್ರೆ ಅವ ಬೇಸರದಿಂದ್ಲೇ ಉತ್ತರಿಸಿದ್ದ. ಬೆಳಗ್ಗಿನಿಂದ ಟೀವಿಯಲ್ಲಿ ತೋರಿಸ್ತಿದ್ದಾರಲ್ಲೋ. ಶ್ಯಾಮನ ಮನೆಯಲ್ಲಿ ಮೊಣಕಾಲುದ್ದ ನೀರು ನಿಂತಿರೋದು, ತಮ್ಮ ಏರಿಯಾದ ಗಾಡಿಗಳೆಲ್ಲಾ ಕೊಚ್ಚಿ ಹೋಗಿರೋದನ್ನ ಆ ಏರಿಯಾದವ್ರು ಗೋಳಾಡ್ತಿದ್ದಿದ್ನ ನೋಡಿಲ್ವಾ ನೀನು ? ಹತ್ತಿರದ ಏರಿಯಾದ ನಾವೆಲ್ಲಾ ಆಫೀಸಿಗೆ ರಜೆ ಹಾಕಿ ಶ್ಯಾಮನಿಗೆ ಸಮಾಧಾನ ಮಾಡೋಕೆ ಅಂತ ಹೋಗಿದ್ವಿ. ಅವ್ನ ಕ್ಲೋಸ್ ಫ್ರೆಂಡು ಅಂತಿರೋ ನೀನು ನೋಡಿದ್ರೆ.. ಏನೋ ನೀನು ಅಂತ ಬೈದು ಫೋನ್ ಕುಕ್ಕಿದ. ಧಾರಾಕಾರ ಮಳೆಗೆ ಸಿಕ್ಕಿ ಕೊಚ್ಚಿಹೋದ ನತದೃಷ್ಟ ಬೈಕು ತನ್ನದಾಗದ ಬಗ್ಗೆ ವಿಧಿಗೆ ಧನ್ಯವಾದ ಹೇಳ್ಬೇಕೋ, ಜೀವದ ಗೆಳೆಯನ ಕಷ್ಟದಲ್ಲೂ ಜೊತೆಗಿರಲಾಗದ ದುರ್ವಿಧಿಗೆ ಬಯ್ಯಬೇಕೋ ಗೊತ್ತಾಗುತ್ತಿರಲಿಲ್ಲ. ಅದೇ ಸಮಯದಲ್ಲಿ ಬೆಂಗ್ಳೂರಲ್ಲಿ ಭಾರೀ ಮಳೆಯೆಂಬ ಸುದ್ದಿ ಫುಲ್ಲು ಬಿಸಿಲಿದ್ದ ಅದೇ ನಗರದ ಇನ್ಯಾವುದೋ ಭಾಗದ ಜನಕ್ಕೆ ಕಾಮಿಡಿ ಅನಿಸುತ್ತಿತ್ತು. ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಗಳಿಗೆ ಬಯ್ಗುಳಗಳು ಮುಂದುವರೆದಿತ್ತು.
*****
ಪ್ರಶಸ್ತಿ –
ತುಂಬಾನೆ ಇಷ್ಟ ಆತು ಕಣೋ…
ಏನೆಲ್ಲ ನೆನಪುಗಳ ಸುರಿಮಳೆ ಮನದಲ್ಲಿ…
ಮಳೆನೀರು, ಆಲಿಕಲ್ಲು… ಚೆನ್ನಾಗಿದೆ ಪ್ರಶಸ್ತಿ.
ಆದ್ರೆ ಇಲ್ಲಿ ಮಳೆನೇ ಇಲ್ಲ. ನಿನ್ನೆ ಭಾನುವಾರ
ಬೆಳಗ್ಗೆಯಿಂದ ಸಂಜೆವರೆಗೂ ಜಿಮಿರಿದಂತಹ
ಮಳೆಯಿತ್ತು. ಇವತ್ತು ಇಲ್ಲ.
ಹೌದಾ ವತ್ಸಣ್ಣ.. ಧನ್ಯವಾದನೋ..
ಈ ವಾರ ಮತ್ತೆ ಫುಲ್ ಮಳೆ ಅಂತೆ ಅಕ್ಕಿ ಭಾಯ್ ಊರಲ್ಲಿ.. ಅಮ್ಮ ಫೋನ್ ಮಾಡ್ದಾಗ ಖುಷ್ ಖುಷಿಯಾಗಿ ಹೇಳ್ತಿದ್ರು 🙂
ಚೆನ್ನಾಗಿದೆ ಪ್ರಶಸ್ತಿ ನಿಮ್ಮ ಲೇಖನ….