ಜೀ ಕನ್ನಡ ವಾಹಿನಿಯ ಡಿವೈಡೆಡ್ ಅನ್ನೋ ಕಾರ್ಯಕ್ರಮದಲ್ಲೊಂದು ಪ್ರಶ್ನೆ. ದೊಮ್ಮಲೂರಲ್ಲಿರೋ ಚೊಕ್ಕನಾಥಸ್ವಾಮಿ ದೇವಸ್ಥಾನ ಕಟ್ಟಿಸಿದರು ಯಾರು ? ೧)ಯಲಹಂಕ ನಾಡ ಪ್ರಭುಗಳು ೨)ಚೋಳರು ೩)ಮೈಸೂರ ಅರಸರು. ಅವತ್ತು ನಾನಂದುಕೊಂಡತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೂ ಹೇಳಿದ ಉತ್ರ ಯಲಹಂಕ ನಾಡ ಪ್ರಭುಗಳು. ಬೆಂಗ್ಳೂರಿಗೆ ಚೋಳರೆಲ್ಲಿಂದ ಬರಕ್ಕಾಗುತ್ತೆ ? ಮೈಸೂರರಸರು ಬೆಂಗ್ಳೂರಿಗೆ ಬಂದ್ಯಾಕೆ ದೇವಸ್ಥಾನ ಕಟ್ಟುಸ್ತಾರೆನ್ನೋ ಲಾಜಿಕ್ಕು. ಆದ್ರೆ ಅದು ತಪ್ಪು. ! ಚೊಕ್ಕನಾಥಸ್ವಾಮಿ ಅಥವಾ ಚೊಕ್ಕಪೆರುಮಾಳ್ ದೇವಸ್ಥಾನವನ್ನು ಸುಮಾರು ಕ್ರಿ.ಶ ೧೨೦೦ ರ ಸುಮಾರಿಗೆ ಕಟ್ಟಿಸಿದ್ದು ಚೋಳರಸ ರಾಜರಾಜ ಚೋಳ ಅಂತ ಕೇಳಿ ಒಂದ್ಸಲ ಶಾಕ್.. ದೊಮ್ಮಲೂರಿನ ಸಮೀಪದಲ್ಲೇ ಇದ್ರೂ ಇಲ್ಲೊಂದು ಹನ್ನೆರಡರ ಶತಮಾನದ ದೇಗುಲವಿದೆ ಅಂತ ಗೊತ್ತಿರಲಿಲ್ಲವಲ್ಲ ಅಂತನಿಸಿ ಅದನ್ನ ತಿಳಿಸಿದ ಕಾರ್ಯಕ್ರಮಕ್ಕೊಂದು ಧನ್ಯವಾದ ಹೇಳೋ ಜೊತೆಗೇನೇ ಆ ದೇವಸ್ಥಾನ ಯಾವಾಗ ನೋಡುತ್ತೀನೋ ಅನ್ನೋ ಕಾತುರವೂ ಶುರುವಾಗಿತ್ತು. ಬೆಂಗಳೂರಲ್ಲಿರೋ ದೇಗುಲಗಳಲ್ಲೇ ಅತಿಪುರಾತನವಾದದ್ದೂ ಇದೇ ಅಂತ ಕೇಳಿದ ಮೇಲೆ ಕುತೂಹಲ ಇನ್ನೂ ಹೆಚ್ಚಾದ್ದು ಸುಳ್ಳಲ್ಲ.
ಇತಿಹಾಸ: ಕ್ರಿ.ಶ ೯೪೯ ರಲ್ಲಿ ಪಶ್ಚಿಮ ಗಂಗರು,ಬಾಣರು ಮತ್ತು ವೈದುಂಬರ ಸಂಯುಕ್ತ ಸೇನೆ ಮತ್ತು ಚೋಳರಸ ಪರಾಂತಕನ ಮಗ ರಾಜಾದಿತ್ಯನ ನಡುವೆ ನಡೆದ ತಕ್ಕೋಲಮ್ ಕಾಳಗದಲ್ಲಿ(ಪ್ರಸಕ್ತ ವೆಲ್ಲೂರ್) ರಾಜಾದಿತ್ಯನು ಸೋತು ಯುದ್ದರಂಗದಲ್ಲೇ ಮರಣವನ್ನುಪ್ಪುತ್ತಾನೆ. ತದನಂತರ ರಾಷ್ಟ್ರಕೂಟರೊಂದಿಗೆ ಗೆಳೆತನ ಮುಂದುವರೆಸಿದ ಗಂಗರಸ ಎರಡನೇ ಬುಟುಗ ಮತ್ತು ಎರಡನೇ ಮಾರಸಿಂಹರು ಹಲವು ಯುದ್ದಗಳನ್ನು ಗೆಲ್ಲುತ್ತಾರೆ. ಆದ್ರೆ ಹತ್ತನೇ ಶತಮಾನದ ಕೊನೆಯಲ್ಲಿ ರಾಷ್ಟ್ರಕೂಟರು ಚಾಲುಕ್ಯರಿಗೆ ಮಾನ್ಯಕೇಟದ ಯುದ್ದದಲ್ಲಿ ಸೋಲುವುದರೊಂದಿಗೆ ಗಂಗರಸರಿಗೂ ಆಪತ್ತೊದಗುತ್ತದೆ. ಕ್ರಿ.ಶ ಸಾವಿರದ ಸುಮಾರಿಗೆ ಪ್ರಾಬಲ್ಯಕ್ಕೆ ಬಂದ ಚೋಳರಸ ರಾಜ ರಾಜ ಚೋಳನು ಗಂಗರನ್ನು ಸೋಲಿಸಿ ಬೆಂಗಳೂರನ್ನು ವಶಪಡಿಸಿಕೊಳ್ಳುತ್ತಾನೆ. ನಂತರದ ಕಾಲದಲ್ಲಿ ಚೋಳರು ಬೆಂಗಳೂರ ಸುತ್ತಮುತ್ತ ಹಲವು ದೇಗುಲಗಳ ಕಟ್ಟಿಸಿದರೆನ್ನುತ್ತದೆ ಇತಿಹಾಸ. ಅವುಗಳಲ್ಲಿ ಈ ದೇವಸ್ಥಾನದ ನಿರ್ಮಾಣದ ಕಾಲದಲ್ಲಿದ್ದವನು ಮೂರನೇ ಕುಲೋತ್ತುಂಗ ಚೋಳ (Kulothunga Chola III 1178–1218). ಆದರೆ ತದನಂತರ ಅಧಿಕಾರಕ್ಕೆ ಬಂದು ೧೨೫೬ರ ವರೆಗೆ ಆಳಿದ ಮೂರನೇ ರಾಜ ರಾಜ ಚೋಳನ ಹೆಸರೇಕಿದೆ ಇಲ್ಲಿನ ಉಲ್ಲೇಖದಲ್ಲಿ ಉಂಬುದು ಕುತೂಹಲಕರ. ಪ್ರಾಯಶ: ಆಗಿನ ಯುವರಾಜನಾಗಿದ್ದ ಕಾರಣದ ಪ್ರಸ್ಥಾಪ ಎಂದುಕೊಂಡರೂ ಈ ದೇಗುಲದ ನಿರ್ಮಾಣ ೧೨೦೦ ರಿಂದ ೧೨೩೦ ರ ಆಸುಪಾಸಿನಲ್ಲಾಗಿರಬಹುದು ಎಂದು ಅಂದಾಜಿಸಬಹುದು.(ಸಾಮಾನ್ಯವಾಗಿ ಕಟ್ಟಿಸಿದ ರಾಜನ ಹೆಸರಿರುತ್ತೇ ಹೊರತು ಯುವರಾಜನದಲ್ಲ).ಆಗಿನ ಟೊಮ್ಮಲೂರು(ಈಗಿನ ದೊಮ್ಮಲೂರು) ಚೋಳರ ಇಲೈಪಕ್ಕನಾಡು(ಈಗಿನ ಯಲಹಂಕ) ಪ್ರಾಂತ್ಯದ ದೇಶೀ ಮಾಣಿಕ್ಯ ಪಟ್ಟಣಕ್ಕೆ ಸೇರಿತ್ತಂತೆ. ಇಲ್ಲಿನ ಶಿಲಾಶಾಸನವೊಂದರ ಪ್ರಕಾರ ಇರವಿ ತ್ರಿಪುರಾಂತಕ ಚೆಟ್ಟಿಯಾರ್ ಮತ್ತವರ ಧರ್ಮಪತ್ನಿ ಪಾರ್ವತಿ ಚೆಟ್ಟಿಟ್ಟಿಯವರು ಜಾಲಹಳ್ಳಿಯಲ್ಲಿದ್ದ ಜಮೀನು ಮತ್ತು ವಿನ್ನಮಂಗಳಂ(ಪ್ರಸ್ತುತ ಭಿನ್ನಮಂಗಲ ?) ಕೆರೆಗಳನ್ನು ದೊಮ್ಮಲೂರಿನ ನಾಯಕನಾಗಿದ್ದ ತ್ರಿಭುವನ್ ಮಲ್ಲಾರ್ ವೆಂಪಿ ದೇವರ್ ಅನ್ನುವವರಿಗೆ ಬಳುವಳಿಯಾಗಿ ನೀಡಿದರೆಂದೂ ಅದೇ ತದನಂತರ ಈ ದೇಗುಲದ ನಿರ್ವಹಣೆಗೆ ಬಳಕೆಯಾಯಿತೆಂದು ತಿಳಿಸುತ್ತದೆ. ಕಾಲಕ್ರಮೇಣ ಶಿಥಿಲಗೊಂಡಿದ್ದ ಈ ದೇಗುಲವನ್ನು ೧೯೭೫-೮೩ ರ ಅವಧಿಯಲ್ಲಿ ಭಕ್ತಾದಿಗಳೇ ಸೇರಿ ಶ್ರೀ ಕೃಷ್ಣಾರೆಡ್ಡಿ ಎಂಬುವವರ ನೇತೃತ್ವದಲ್ಲಿ ಜೀರ್ಣೋದ್ದಾರ ಮಾಡಿದರೆಂದು ಅಲ್ಲಿರುವ ಫಲಕ ತಿಳಿಸುತ್ತದೆ.
ವಿಶೇಷತೆ: ಶ್ರೀದೇವಿ, ಭೂದೇವಿಯರ ಸಹಿತವಾದ ಚೊಕ್ಕನಾಥಸ್ವಾಮಿ ದೇಗುಲದ ಸುತ್ತಲಿನ ಮಹಾಗಣಪತಿ ಮತ್ತು ಆಂಜನೇಯ ದೇವಸ್ಥಾನಗಳು ಇತ್ತೀಚಿಗೆ ಕಟ್ಟಲ್ಪಟ್ಟವಾಗಿದ್ದರೂ ಮೂಲದೇಗುಲದ ಗರ್ಭಗುಡಿ, ಅರ್ಧಮಂಟಪಗಳು ಚೋಳರ ಕಾಲಕ್ಕೆ ಸೇರಿರಬಹುದೆನ್ನುತ್ತದೆ ಕರ್ನಾಟಕ ಗೆಜೆಟಿಯರ್. ಮುಂಭಾಗದ ನೃತ್ಯಮಂಟಪ/ಅಂತರಾಳ ಮತ್ತು ಮುಖಮಂಟಪವು ವಿಜಯನಗರ ಶೈಲಿಯಲ್ಲಿದೆ ಅನ್ನುತ್ತೆ ಇಲ್ಲಿನ ಸೂಚನಾ ಫಲಕ. ಹದಿನಾರನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಶೈಲಿ ಅಂತ ಹದಿಮೂರನೇ ದೇಗುಲದ ಶಿಲ್ಪಕಲೆಗೆ ಹೆಸರಿಡೋದು ಹೇಗೆ ಸೂಕ್ತವೆನ್ನೋ ಸಂದೇಹ ವ್ಯಕ್ತವಾದರೂ ಆ ವಿಷಯಕ್ಕೆ ಆಮೇಲೆ ಬರೋಣ. ಈ ನವರಂಗದ ಶೈಲಿ ಹೊಯ್ಸಳರಸರ ದೇಗುಲದಲ್ಲೂ, ಅದಕ್ಕಿಂತಲೂ ಮುಂಚಿನ ಗಂಗರ ಕಾಲದ ದೇಗುಲಗಳಲ್ಲಿ, ಹೊಂಬುಜರಸರ ಕಾಲದ ಬನವಾಸಿ ದೇಗುಲದಲ್ಲೂ ಕಾಣಬಹುದಾದ್ದರಿಂದ ಇಲ್ಲಿನ ನವರಂಗದ ಶೈಲಿಯ ಬಗ್ಗೆ ಇತಿಹಾಸಕಾರರೇ ಉತ್ತರಿಸಬೇಕಾದ ಅನಿವಾರ್ಯತೆಯಿದ್ದರೂ ಸದ್ಯಕ್ಕದನ್ನು ಬದಿಗಿಟ್ಟರೆ ಕಲಾ ಸೌಂದರ್ಯದ ದೃಷ್ಟಿ ನೋಡಲರ್ಹ ಸ್ಥಳವಿದು. ಅದರ ನಂತರದ ಶುಕನಾಸಿ/ಅಂತರಾಳದಲ್ಲಿರುವ(ಪ್ರಸ್ತುತ ಮುಚ್ಚಲಾಗಿರುವ) ನೆಲಮಾಳಿಗೆಯಲ್ಲಿ ಬೆಲೆಬಾಳುವ ವಸ್ತುಗಳ ಸಂಗ್ರಹ ಮಾಡಲಾಗುತ್ತಿತ್ತಂತೆ. ಸೆಪ್ಟೆಂಬರ್ ಕೊನೆಯ ವಾರದಿಂದ ಅಕ್ಟೋಬರ್ ಮೊದಲನೇ ವಾರದಲ್ಲಿ ಮತ್ತು ಫೆಬ್ರವರಿ ಮೊದಲನೇ ವಾರದಿಂದ ಮಾರ್ಚ್ ಮೊದಲ ವಾರದವರೆಗೆ ಸೂರ್ಯನ ಕಿರಣಗಳು ನೇರವಾಗಿ ವಿಗ್ರಹದ ಮೇಲೆ ಬೀಳುತ್ತದಂತೆ. ಆ ಸಮಯದಲ್ಲಿ ಮುಂಜಾನೆಯ ಸಂದರ್ಭದಲ್ಲಿ ಇಲ್ಲಿಗೆ ಬಂದು ದೇವರ ದರ್ಶನ ಪಡೆಯಬಹುದು . ೧೯೪೭, ಆಗಸ್ಟ್ ಹದಿನೈದರಂದು ಸ್ವಾತಂತ್ರ್ಯ ಪಡೆದ ದಿನದಂದು ಈ ದೇಗುಲದ ಎದುರಿಗಿರುವ ಧ್ವಜಸ್ಥಂಭದ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದ್ದರಂತೆ. ಆ ಚಿತ್ರವನ್ನು ದೇಗುಲದೆದುರಿಗೆ ಈಗಲೂ ಕಾಣಬಹುದು ! ದೇಗುಲದ ಧ್ವಜಸ್ಥಂಭದ ಮೇಲೆ ದೇಶದ ಧ್ವಜವನ್ನು ಹಾರಿಸಿ ದೇಶಪ್ರೇಮ ಮೆರೆದ ಸಂದರ್ಭ ಎಲ್ಲೂ ದಾಖಲಾಗದಿದ್ದರೂ ಸ್ವಾತಂತ್ರ್ಯ ಹೋರಾಟದ ಹಿಂದಿನ ಇಂಥಹ ಅದೆಷ್ಟೋ ಘಟನೆಗಳು ಪ್ರಸಿದ್ದಿ ಪಡೆಯದೇ ತೆರೆಮರೆಗೆ ಸರಿದಿರಬಹುದಲ್ಲವಾ ಅನಿಸುತ್ತದೆ. ಸದ್ಯದ ಪ್ರವೇಶದ್ವಾರದಲ್ಲಿ ದಶಾವತಾರದ ಕೆತ್ತನೆಗಳು, ಶೇಷ ಶಯನ ವಿಷ್ಣು, ಭಗವದ್ ಗೀತೋಪದೇಶ ಮತ್ತಿತರ ಕೆತ್ತನೆಗಳನ್ನು ಕಾಣಬಹುದಾದರೆ ಅದಕ್ಕಿಂದ ಮುಂಚೆ ಸಿಗೋ ಹಳೆಯ ಕಲ್ಲುಗಳಲ್ಲಿ ಉಗ್ರನರಸಿಂಹ, ಮೂರ್ಲೋಕ ಅಳೆಯುತ್ತಿರುವ ಬಲಿ, ಶ್ರೀಕೃಷ್ಣ ಮುಂತಾದ ಕೆತ್ತನೆಗಳನ್ನು ಕಾಣಬಹುದು.
ಅಂದಾಗೆ ಬೆಂಗಳೂರಲ್ಲಿರೋ ಮತ್ತೊಂದು ಪುರಾತನ ದೇಗುಲ ಯಲಹಂಕದ ಸೋಮೇಶ್ವರ ದೇಗುಲ. ಇದನ್ನು ಕಟ್ಟಲ್ಪಟ್ಟಿದ್ದು ಯಲಹಂಕ ನಾಡಪ್ರಭುಗಳ ಕಾಲದಲ್ಲಿ ಹದಿನೈದನೇ ಶತಮಾನದಲ್ಲಿ ಎಂದು ಅಂದಾಜಿಸಲಾಗುತ್ತೆ. ಕೆಲವರು ಯಲಹಂಕದರಸ ಜಯಪ್ಪ ಗೌಡನ ಕಾಲದಲ್ಲಿ ಅಂದರೆ ಕೆಲವರು ಕೆಂಪೇಗೌಡರ ಕಾಲದಲ್ಲಿ ಅನ್ನುತ್ತಾರೆ. ಇದನ್ನು ಚೋಳರ ಕಾಲದಲ್ಲೇ ಕಟ್ಟಲಾಗಿದ್ದು ತದನಂತರ ಯಲಹಂಕ ನಾಡಪ್ರಭುಗಳ ಕಾಲದಲ್ಲಿ ಇದರ ನವೀಕರಣವಾಯಿತೆಂಬ ಅನಿಸಿಕೆಯಿದ್ದರೂ ಅದನ್ನು ಪ್ರಮಾಣೀಕರಿಸುವ ದಾಖಲೆಗಳಿಲ್ಲ. ಬೆಂಗಳೂರಲ್ಲಿ ಚೋಳರ ಕಾಲದ ದೇವಸ್ಥಾನಗಳು ಇವೆರಡೇ ಅಲ್ಲ ಮತ್ತೆ. ಈ ಲಿಂಕ್ ಅನ್ನು ನೊಡಿದ್ರೆ ಅಚ್ಚರಿಹುಟ್ಟಿಸೋ ಹದಿಮೂರು ದೇಗುಲಗಳು ಎದುರಾಗುತ್ತೆ ! ಅದರಲ್ಲಿ ಮಾರತ್ತಳ್ಳಿಯಲ್ಲಿರೋ(ಹನ್ನೊಂದನೇ ಶತಮಾನದ) ಸೋಮೇಶ್ವರ ದೇಗುಲವೂ ಒಂದು ಅಂತ ನೋಡಿ ಆಶ್ಚರ್ಯವಾಗುತ್ತಿದೆ. ಈಗ ಬಹುದೊಡ್ಡ ಮಾರ್ಕೇಟಾಗಿ ಬೆಳೆದಿರೋ ಮಾರತ್ತಳ್ಳಿಯ ಯಾವ ಮೂಲೆಯಲ್ಲಿ ಈ ದೇಗುಲ ವರ್ತಮಾನದ ಗದ್ದಲಗಳ ನಡುವೆ ಶಾಂತವಾಗಿ ಮಲಗಿಬಿಟ್ಟಿದೆಯೋ ಗೊತ್ತಿಲ್ಲ. ಮುಂದಿನ ಬಾರಿ ಅದರ ಬಗ್ಗೆಯೊಂದಿಷ್ಟು ಜಾಲಾಡೋ ಬಯಕೆಯಿದೆ.!
ಮೇಲೆ ಕೊಟ್ಟಿರೋ ಲಿಸ್ಟಲ್ಲಿರೋ ದೇಗುಲಗಳಲ್ಲಿ ಹಲವು ಹನ್ನೊಂದನೇ ಶತಮಾನದ್ದು ಅನ್ನೋ ವಿಕಿಪೀಡಿಯಾ ಕೊಂಡಿಗಳು ತೆರೆದುಕೊಂಡ್ರೂ ಅವುಗಳೆಲ್ಲಾ ಶ್ರೀ ಸಾಲಿಗ್ರಾಮ ಕೃಷ್ಣ ರಾಮಚಂದ್ರ ರಾವ್ ಅವರು ಬರೆದ "Art and Architecture of Indian temples , Volume 3" ಎಂಬಲ್ಲಿಗೆ ಲಿಂಕ್ ಕೊಡುವ ಒಂದು ಲೈನ ಮಾಹಿತಿಯೊಂದಿಗೆ ಕೊನೆಯಾಗುತ್ತದೆ. ಆ ಹೊತ್ತುಗೆಯನ್ನು ಇನ್ನೂ ಓದಿಲ್ಲವಾದ್ದರಿಂದ ಈ ದೇಗುಲಗಳ ಬಗ್ಗೆ ಹೆಚ್ಚು ತಿಳಿದವರು ಅದನ್ನಿಲ್ಲಿ ತಿಳಿಸಬಹುದು.
ದೇಗುಲ ಇರೋದೆಲ್ಲಪ್ಪಾ ? ಮತ್ತು ಹೋಗೋದೆಂಗೆ ಅಂದ್ರಾ ?:
ಬೆಳಗ್ಗೆ ಆರರಿಂದ ಹನ್ನೊಂದು ಮತ್ತು ಸಂಜೆ ಐದೂವರೆಯಿಂದ ಎಂಟೂವರೆಯಿಂದ ತೆಗೆದಿರುವ ದೇಗುಲಕ್ಕೆ ದೊಮ್ಮಲೂರು ಬಸ್ಟಾಪಲ್ಲಿ ಇಳಿದರೆ ತುಂಬಾ ಹತ್ತಿರ. ಬಸ್ಟಾಪಿಗೆ ಅಭಿಮುಖವಾಗಿ ಇರೋ ಕ್ರಾಸಿನಲ್ಲಿ ಹೋದ್ರೆ ಐದು ನಿಮಿಷದ ನಡಿಗೆಯಲ್ಲೇ ಸಿಗುತ್ತದೆ ದೇವಸ್ಥಾನ.
ಅಂದಂಗೆ ಈ ದೇಗುಲದ ಸುತ್ತಲಿನ ಗೋಡೆಗಳಲ್ಲಿ ತಮಿಳಿನಲ್ಲಿ ಹಲವು ಬರಹಗಳಿವೆ. ಅದನ್ನೋದಲೆಂದಾದ್ರೂ ತಮಿಳು ಲಿಪಿಯನ್ನೋದಬಲ್ಲ ಗೆಳೆಯರನ್ನು ಜೊತೆಗೆ ಕರೆದೊಯ್ಯಿರೆಂಬ ವಿನಂತಿಯೊಂದಿಗೆ ಲೇಖನಕ್ಕೊಂದು ವಿರಾಮ. ಅಂದಂಗೆ ಅಲ್ಲಿ ಸೆರೆಹಿಡಿದ ತಮಿಳು ಲೇಖಗಳನ್ನು ಇದರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ತಮಿಳು ಬಲ್ಲ ಗೆಳೆಯರು ಅನುವಾದಕ್ಕೆ ಸಹಕರಿಸಬಹುದು.
*****
ಪ್ರಶ್ನೆಯೊಂದರ ಬೆನ್ನುಹತ್ತಿ ಕುತೂಹಲಕರ ಇತಿಹಾಸವನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು
ಮೆಚ್ಚುಗೆಗೆ ಧನ್ಯವಾದಗಳು ಶ್ರೀಧರ್ ಅವ್ರೆ 🙂