ಪ್ರಾರಂಭ.
ನಾನು ಎಂದರೆ ? ಯಾರು ? ಇಗೋ ಈಗ ಹೇಳುತ್ತೇನೆ ಕೇಳಿ.
ನಿಮ್ಮನ್ನು ಈ ಮಹಾ ನಗರಿಯಲ್ಲಿ ನಿಮಗೆ ಬೇಕಾದ ಸ್ಥಳಕ್ಕೆ ಹೊತ್ತೊಯ್ಯುವ ಬಸ್ಸು “ನಾನು” . ನನ್ನನ್ನು ನೀವು ’ ಬಸ್ಸಪ್ಪ’, ’ ಬಸ್ಸಣ್ಣ’ , ’ಬಂಧು’ ಎಂದೇ ಕರೆಯಬಹುದು. ನೀವು ಯಾವುದೇ ರೀತಿಯಲ್ಲಿ ಕರೆದರೊ ನನಗೆ ಬೇಸರವಿಲ್ಲ, ಏಕೆಂದರೆ ನೀವೆಲ್ಲರೊ ನನ್ನನ್ನು ದಿನವೂ ನಡೆಸಿಕೊಳ್ಳುವುದಕ್ಕಿಂತ ಅದೇ ವಾಸಿ ಎನಿಸುತ್ತದೆ.
ನಾನು ಸಾಮಾನ್ಯನಲ್ಲ ಎಂಬುದು ನಿಮಗೆ ಈ ಬರಹದ ಕೊನೆಗೆ ತಿಳಿಯುತ್ತದೆ. ಬೆಂದಕಾಳೂರೆಂಬ ಒಂದು ಚಿಕ್ಕ ಊರು ನಗರವಾಗುವುದಕ್ಕಿಂತ ಬಹಳ ಹಿಂದೆಯೇ ನನ್ನ ಜನುಮವಾಯ್ತು. ನನ್ನ ಹುಟ್ಟಿದ ವರುಷ ನೆನಪಿಲ್ಲದಿದ್ದರೂ ಎಲ್ಲರೂ ಸೇರಿ ಸೆಪ್ಟೆಂಬರ್ ೫ ರಂದು ನನ್ನ ಜನ್ಮ ದಿನವನ್ನು ’ಬಸ್ ಡೇ’ ಎಂದು ಕೊಂಡಾಡುತ್ತಾರೆ !
ನನ್ನನ್ನು ವಿಧ ವಿಧವಾದ ಹೆಸರುಗಳಿಂದ ಮತ್ತು ಬೇರೆ ಬೇರೆ ಬಣ್ಣಗಳಿಂದ ಜನರು ಗುರುತಿಸುತ್ತಿದ್ದರು. ನಾನು ಬಹಳ ವರುಷಗಳು ’ ಕೆಂಪು’ ಬಣ್ಣದಿಂದ ಕಂಗೊಳಿಸಿದ್ದೆ. ಆಗ ಎಲ್ಲರೂ ನನ್ನನ್ನು ’ಸಿಟಿ ಬಸ್’ ಎಂದೇ ಕರೆಯುತ್ತಿದ್ದರು. ಈಗ ಕೆಲವು ವರುಷಗಳಿಂದ, ಈ ನಗರ ಬೆಳೆಯುತ್ತಿದ್ದಂತೆ ನನ್ನನ್ನು ’ ಬಿ.ಟಿ.ಎಸ್. ಎಂದು ಮರು ನಾಮಕರಣ ಮಾಡಿದ್ದರು. ಯಾರೋ ಬುದ್ದಿಜೀವಿ ನನ್ನ ನಾಮಾಂಕಿತವಾದ ಬಿ.ಟಿ.ಎಸ್. ಎಂಬುದಕ್ಕೆ ” ಬಿಟ್ಟರೆ ತಿರುಗಿ ಸಿಗುವುದಿಲ್ಲ” ಎಂಬ ನಾಣ್ನುಡಿಯ ಮಾಡಿ ಎಲ್ಲರಲ್ಲೂ ಬಿತ್ತಿದ್ದನು !
ನಾನೇನು ಮಾಡಲಿ ? ನಾನು ಎಂದೆದೂ ನಿಮ್ಮ ಸೇವೆಗೆ ತಯಾರಾಗಿಯೆ ಇರುವೆ, ಆದರೆ ನನ್ನನ್ನು ನಡೆಸುವ ಡ್ರೈವರಣ್ಣನ ಮನ:ಸ್ಥಿತಿಯ ಮೇಲೆ ನಾನು ಸಂಪೂರ್ಣ ಅವಲಂಬಿತ. ನಾನೊಬ್ಬ ಪರಾವಲಂಬಿ !
ಡ್ರೈವರನ ಹೆಂಡತಿಯೋ, ತಾಯಿಯೋ, ಅಥವ ಅವನ ಪ್ರಿಯತಮೆಯೋ ಅವನನ್ನು ಯಾವುದೊ ಕಾರಣದಿಂದ ತರಾಟೆಗೆ ತೆಗೆದುಕೊಂಡಿದ್ದರೆ ಅವನು ನನ್ನನ್ನು ಮನ ಬಂದಂತೆ ತುಳಿಯುತ್ತಿರುತ್ತಾನೆ. ದಾರಿಯುದ್ದಕ್ಕೂ ನನ್ನನ್ನು ಶಪಿಸುತ್ತಲೇ ಇರುತ್ತಾನೆ.
ಪ್ರಸಂಗ- ೧:
ಮೊನ್ನೆ ಮೇಲೆ ಹೇಳಿದ ಮನ: ಸ್ಥಿತಿಯಲ್ಲಿಯೆ ಡ್ರೈವರಣ್ಣ ಮೆಜೆಸ್ಟಿಕ್ ಬಸ್ಸು ನಿಲ್ಡಾಣದಿಂದ ಹೊರಟು ಡೇರಿ ವೃತ್ತದ ಮೇಲು ಸೇತುವೆಯ ಬದಿಯಲ್ಲಿ ನಿಂತಿದ್ದ ಮೂವರು ವಿದ್ಯಾರ್ಥಿಗಳ ಮೇಲೆ ನನ್ನನ್ನು ಹರಿಸಿಯೇ ಬಿಡುವುದೆ ! ಪಾಪ ಮುಗ್ದ ಹುಡುಗರು, ಇನ್ನೂ ಮೀಸೆ ಚಿಗುರದ ಪಡ್ಡೆ ಹೈಕಳು, ಅವುಗಳ ಪಾಡಿಗೆ ಅವು ಮಾತನಾಡುತ್ತ ಬೇರೆ ಯಾವುದೋ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದವು. ಸೇತುವೆಯವರೆಗೂ ನಿಧಾನ ಗತಿಯಲ್ಲಿ ಬಂದ ಡ್ರೈವರ್ ಇದ್ದಕ್ಕಿದ್ದಂತೆ ಮೈ ಮೇಲೆ ದೇವರು ಬಂದಂತೆ ವೇಗವನ್ನು ಇಮ್ಮಡಿಗೊಳಿಸಿ ಆ ಹುಡಗರ ಮೇಲೇ ಹರಿಸಿಯೇ ಬಿಡುವುದೆ ! ನನಗೆ ಬಹಳ ಗಾಬರಿ ಮತ್ತು ಬಹಳ ನೋವಾಯಿತು, ನಾನು ಚೀರುತ್ತಾ ನಿಂತೆ: ಏನು ಮಾಡಲಿ ನಾನು ? ಬಸ್ಸಿನಲ್ಲಿದ್ದ ಜನರೆಲ್ಲರೂ ಕುಳಿತಲ್ಲಿಯೆ ಸ್ತಂಭೀಭೂತರಾಗಿದ್ದರು. ಬಸ್ಸಿನಿಂದ ದುಮುಕಿದ ಜನ, ರಸ್ತೆಯಲ್ಲಿ ನಡೆಯುತ್ತಿದ್ದ ಜನರೆಲ್ಲರೂ ಬಂದು ಘೇರಾಯಿಸುತ್ತಿದ್ದಂತೆ ಡ್ರೈವರ್ ಬಸ್ಸಿನಿಂದ ದುಮುಕಿ ಓಡಿ ಬಳಿಯಲ್ಲಿದ್ದ ಆಟೋ ಹತ್ತಿ ಅಲ್ಲಿಂದ ಪರಾರಿಯಾಗುವುದೆ?
“ಅಯ್ಯೊ ಪಾಪ, ಯಾರ ಮನೆಯ ಹುಡುಗರೊ ಏನೊ” , ಎಂದು ಉಧ್ಗಾರ ತೆಗೆಯುತ್ತಾ ಜನರೆಲ್ಲರೂ ತಮ್ಮ ಮೊಬೈಲ್ನಲ್ಲಿ ಆ ದೃಶ್ಯವನ್ನು ಚಿತ್ರೀಕರಿಸತೊಡಗಿದರೇ ವಿನಹ ಯಾರೊಬ್ಬರೂ ರಕ್ತ ಕಾರಿ ಸಾಯುತ್ತಿದ್ದ ಹುಡುಗರಿಗೆ ಸಹಾಯ ಹಸ್ತ ನೀಡದೆ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದವರ ಕಂಡು “ಎಷ್ಟು ಲುಚ್ಹಾ ಜನಗಳು ಇವರು ; ದೇವರೆ ಯಾರೂ ಇಲ್ಲವೆ ಈ ಹುಡುಗರನ್ನು ಕಾಪಾಡಲು” ಎಂದು ನಾನು ನೊಂದುಕೊಳ್ಳುತ್ತಿರುವಾಗಲೇ ಯಾರೋ ನನ್ನ ಹಿಂಬದಿಗೆ ಬೆಂಕಿ ಹಚ್ಹಿ ಬಿಟ್ಟರು! ಈಗ ನನ್ನನ್ನು ಅದ್ಯಾರು ಕಾಪಾಡುತ್ತಾರೋ ಎಂದು ನಾನು ರೋಧಿಸತೊಡಗಿದೆ. ಅಷ್ಟರಲ್ಲಾಗಲೆ ಹುಡುಗರನ್ನು ಆಂಬ್ಯುಲೆನ್ಸಗೆ ಸಾಗಿಸಿದ್ದಾಗಿತ್ತು, ಆದರೆ ನನ್ನ ಸಹಾಯಕ್ಕೆ ಯಾರು ಬರುತ್ತಾರೆಂದು ಬಹಳ ಕಾತುರದಿಂದ ಕಾಯುತ್ತಿದ್ದೆ. ಬೆಂಕಿಯ ಜ್ವಾಲೆ ಏರಿದಂತೆ ನನ್ನ ಮೇಲೆ ಕಲ್ಲು ತೂರಾಟ ನಡೆಸಲು ಶುರು ಹಚ್ಹಿ ಕೊಂಡಿದ್ದರು ಅಲ್ಲಿ ಜಮಾಯಿಸಿದ್ದ ಜನ. ನನ್ನ ಒಳಗೆಲ್ಲ ಬರಿಯ ಗಾಜಿನ ಪುಡಿ, ಅಯ್ಯೋ ನನಗೇಕೆ ಈ ಶಿಕ್ಷೆ? ನಾನೇನು ಪಾಪದ ಕೆಲಸ ಮಾಡಿದ್ದೆ ಹೀಗೆ ಮನ ಬಂದಂತೆ ಹೊಡೆಯಲು ? ಇದಕ್ಕೆಲ್ಲ ಯಾರು ಹೊಣೆ ? ಎಂದೆಲ್ಲಾ ಯೋಚಿಸತೊಡಗಿದಾಗ ದೂರದಲ್ಲೆಲ್ಲೂ ಫ಼ೈರ್ ಅಲಾರ್ಮ್ ಕೇಳಿ ತಲೆಯತ್ತಿ ನೋಡುವಷ್ಟರಲ್ಲಿ ನಾನು ಅಸ್ಥಿ ಪಂಜರವಾಗಿದ್ದೆ! ಎರಡು ದಿನಗಳು ಕಳೆದರೂ ಯಾರೊಬ್ಬರೂ ನನ್ನನ್ನು ಅಲ್ಲಿಂದ ಎಲ್ಲಿಗೂ ಸಾಗಿಸಲೇ ಇಲ್ಲ, ಎಲ್ಲರೂ ಒಂದರೆಕ್ಷಣ ನಿಂತು ನೋಡುವುದು, ಹಲ್ಲಿಯಂತೆ ಲೊಚಗುಟ್ಟುವುದು, ಹಾಗೆಯೇ ಮುಂದೆ ಸಾಗುವುದು. ಹೀಗೆಯೆ ಮೂರು ದಿನಗಳು ಕಳೆದ ಬಳಿಕ ನನ್ನನ್ನು ಯಾವುದೊ ಬಸ್ ಬಾಡಿ ಬಿಲ್ಡರ್ ಶೆಡ್ಡಿನಲ್ಲಿ ತಂದು ಒಗೆದರು. ಆ ಹುಡುಗರನ್ನು ಬಲಿ ತೆಗೆದು ಕೊಂಡದ್ದು ನಾನೇ ಎಂಬ ತೀರ್ಮಾನಕ್ಕೆ ಜನರೆಲ್ಲರೂ ಬಂದಿದ್ದರು. ಈ ಬಲಿಗೆ ನಾನು ಕಾರಣ ? ನೀವೇ ಹೇಳಿ.
ಪ್ರಸಂಗ-೨ :
ನನ್ನ ಹೊಟ್ಟೆ ಬಿರಿಯುವಷ್ಟು ಜನರನ್ನು ತುಂಬಿದ್ದಾನೆ ನಮ್ಮ ಕಂಡಕ್ಟ್ರಣ್ಣ. ಇಂದು ಅವನು ಬಹಳ ಖುಷಿಯಿಂದ, ಮುದದಿಂದ ಡ್ಯೂಟಿ ಮಾಡುತ್ತಿದ್ದಾನೆ! ಅದಕ್ಕೆ ಕಾರಣ ಅಂದಿನ ಕಲೆಕ್ಸನ್ನೆ ಇರಬಹುದು ! ನನಗೆ ಇಂದು ಮಾರುಕಟ್ಟೆಯಿಂದ ಸರ್ಜಾಪುರಕ್ಕೆ ಹೊರಡುವ ರೂಟಿನಲ್ಲಿ ಕೆಲಸ. ಬಹಳ ದೂರದಲ್ಲಿರುವ ಹೊರ ವಲಯಕ್ಕೆ ನನ್ನನ್ನು ಡ್ರೈವರ್ ಕೊಂಡೊಯ್ಯುತ್ತಿದ್ದಾನೆ.
“ಒಳಗ್ ಬನ್ನಿ ಅಣ್ಣ, ಬನ್ನಿ ಸರ್ ಒಳಗೆ, ಬಾಮ್ಮ ಯಾಕ್ ಮುಖ ನೋಡ್ತಾ ನಿಂದ್ರಿ ಅಲ್ಲೆ, ಉಳ್ಳೆ ವಾಪ್ಪಾ, ಅಂದರ್ ಆವೋ ಭಾಯಿ ” ಎಂದು ಕಂಡಕ್ಟರ್ ಸಾರಿ ಸಾರಿ ಹೇಳಿದರೂ ತಮಗಲ್ಲವೆಂಬಂತೆ ಮೊಂಡು ಹಿಡಿದ ಮಕ್ಕಳಂತೆ ಜನ ಒಳಗೆ ಸರಿಯದೆ ನಿಂತಲ್ಲೆ ನಿಂತಿದ್ದರು. ಒಳಗೆ ಜನರು ತುಂಬಿದ್ದುದರಿಂದ ಎಲ್ಲರೂ ಒಬ್ಬರಿಗೊಬ್ಬರು ಆತುಕೊಂಡೇ ನಿಂತಿದ್ದರು. ಬೇಸಿಗೆಯ ದಿನಗಳಾದುದರಿಂದ ನನ್ನ ಹೊರ ಮೈಯೆಲ್ಲ ಕಾದು ಸುಣ್ಣವಾಗಿತ್ತು, ಅಂತೆಯೇ ಒಳಗೆಲ್ಲ ಬಿಸಿ ಇಳಿದು ಎಲ್ಲರಿಗೂ ಬಿಸಿ ತಟ್ಟುತ್ತಿತ್ತು. ಮಾರುಕಟ್ಟೆಯಲ್ಲಿ ಖರೀದಿಸಿದ್ದ ನಾನಾ ತರಹದ ಸಾಮಾನು ಸರಂಜಾಮು, ಸಾಂಬಾರು ಪದಾರ್ಥಗಳು, ತರಕಾರಿಗಳು, ಹಣ್ಣು ಹಂಪಲುಗಳು, ಹೂವಿನ ದಂಡೆಗಳು ಎಲ್ಲವೊ ನಾನಾ ತೆರನಾದ ಸುವಾಸನೆಯನ್ನು ಬೀರುತ್ತಿದ್ದರೂ, ಬಿಸಿಲಿನ ತಾಪಕ್ಕೆ ಜನರ ಮೈಯಿಂದ ಬರುತ್ತಿದ್ದ ಬೆವರು ವಾಸನೆ ಅದೊರೊಡನೆ ಸೇರಿ ಸಹಿಸಲಸಾದ್ಯವಾದ ಗಬ್ಬು ನಾತ ನನ್ನ ಮೂಗು ಒಡೆಯುವಂತಾಗಿತ್ತು. ಇದೆಲ್ಲದರ ನಡುವೆ ರೆಗ್ಯುಲರ್ ಬಿಕ್ಷುಕರು ಮುಂದಿನ ಬಾಗಿಲಿನಿಂದ ಒಳಗೆ ಏರಿ “ಅಮ್ಮಾ ತಾಯಿ ಬಿಕ್ಷೆ ಹಾಕಮ್ಮ, ಅಪ್ಪಾ ಬಿಕ್ಷೆ ಹಾಕಪ್ಪಾ, ಸಿವಾ ನಿಮ್ಗೆ ಒಳ್ಳೇದು ಮಾಡ್ತಾನೆ” ಎಂದು ಒಂದೇ ರಾಗದಲ್ಲಿ ಗೋಗರೆಯುವ ದನಿ ಜನರಾಡುತ್ತಿರುವ ಮಾತಿನಲ್ಲಿ ಸೇರಿ ಒಂದು ರೀತಿಯ ಸಂಕಟ, ತಳಮಳ ನನ್ನ ಮನಸ್ಸಿನಲ್ಲಿ. ಸೂಜಿ ಇಕ್ಕಲಾರದ ಜಾಗವೆಂದಾದಾಗ ಕಂಡಕ್ಟರ್ ಸಂಪ್ರೀತನಾಗಿ ಎಂಟ್ರಿ ಮಾಡಿಸಿ ರೈಟ್ ಎಂದ ಕೂಡಲೆ ಡ್ರೈವರಣ್ಣ ನನ್ನನ್ನು ತುಳಿಯಹತ್ತಿದ.
ನಾನು ಮುಂದಿನ ನಿಲ್ಡಾಣಕ್ಕೆ ಬಂದು ಸೇರುತ್ತಿದ್ದಂತೆ ಒಳಗೆ ಏನೋ ಗದ್ದಲ “ಹಿಡೀರಿ ಅಲ್ಲಿ ಇಳದೋಯ್ತನಲ್ಲ ಅವನ್ನ, ಅಗೋ ಚಡ್ಡಿ ಆಕ್ಕಂಡು ಓಡೋಯ್ತಾನಲ್ಲ ಅವನ್ನ ಹಿಡಕಳ್ಳಿ, ಅವನೇರಿ, ಕಟ್ ಪಾಕೇಟ್ ಮಾಡಿರೋದು ” ಎಂಬುದನ್ನು ಕೇಳಿದಾಕ್ಶಣ ಯಾರೊ ಒಬ್ಬ ಹೀರೋ ಓಡಿ ಹೋಗುತ್ತಿದವನನ್ನು ಹಿಡಿದು ತಂದವೆಗೆ ಎಲ್ಲರೊ ತಲೆಗೊಂದರಂತೆ ಗೂಸಾ ಕೊಡ ಹತ್ತಿದರು. ಅವನ ಜೇಬಿನ ಒಳಗೆಲ್ಲಾ ಹುಡುಕಿದರೂ ಕದ್ದ ಹಣ ದೊರಕಲೇ ಇಲ್ಲ. ಅವನು ಜೋರಾಗಿ ಅಳ ಹತ್ತಿದ. “ಹೊರಗೆ ಎಲ್ಲ್ರಿ ಮಡಕ್ಕೊತ್ತಾನ್ರಿ, ಒಳಗೆ ಕಾಚ ಒಳಗೆ ನೋಡ್ರಿ” ಎಂದ ಯಾರದೋ ಮಾತಿಗೆ ಬೆಲೆ ಕೊಟ್ಟು ಅವನ ಕಾಚವನ್ನು ಜನ ಎಳೆದೆ ಬಿಡುವಿದೆ ! “ಛೆ, ಎಂತ ಕೀಳು ಜನ ಇವರು ಎಂದು ಕಣ್ಣು ಮುಚ್ಹಿಕೊಳ್ಳುವಂತಾಯ್ತು. ಕಟ್ ಪಾಕೇಟ್ ಅಥವಾ ಪಿಕ್ ಪಾಕೇಟ್ ಸಾಮಾನ್ಯವಾದ ಘಟನೆಯಾದರೂ ಹಿಂದೊಮ್ಮೆ ಕಂಡ ಅಂದಿನ ಆ ದೃಶ್ಯ ನನ್ನ ಮನಸ್ಸಿನಲ್ಲಿ ಈಗಲೂ ವ್ಯಸನವನ್ನು ಉಂಟು ಮಾಡುತ್ತದೆ. ಅಂದು ಇಂದಿನಂತೆ ನನ್ನ ಹೊಟ್ಟೆ ಬಿರಿಯುವಷ್ಟು ಜನ ನನ್ನೊಡಲಿನಲ್ಲಿ ತುಂಬಿರಲಿಲ್ಲವಾದರೂ ಜನ ನಿಲ್ಲುವಷ್ಟು ಜಾಗವಿತ್ತು.
ಅಂದು ತಿಂಗಳಿನ ಎರಡನೆ ದಿನವಾದುದರಿಂದ ಕಟ್ ಪಾಕೇಟ್ ಮಂದಿ ಬಹಳ ಚಟುವಟಿಕೆಯಿಂದ ಎಲ್ಲ ಕಡೆ ಹೊಂಚು ಹಾಕುತ್ತಿರುತ್ತಾರೆ.
ಈ ಮಹಾ ನಗರಿಯಲ್ಲಿ ನಾನು ಕಂಡಂತೆ ತಿಂಗಳಿನ ಒಂದನೆ ತಾರೀಖಿನಿಂದ ಹತ್ತನೇ ತಾರೀಖಿನವರೆಗೂ ಎಲ್ಲ ಬಾರ್ ಮತ್ತು ಬಾರ್ ಕಮ್ ರೆಸ್ಟೋರೆಂಟಗಳನ್ನು ಹೂವಿನ ಹಾರಗಳಿಂದ ಅಲಂಕರಿಸಿರುತ್ತಾರೆ. ಕಾರಣ ಒಂದರಿಂದ ಹತ್ತರವೆರೆಗೆ ಎಲ್ಲ ಶ್ರೀ ಸಾಮಾನ್ಯನೂ ಸಾಹುಕಾರನಾಗಿರುತ್ತಾನೆ. ಜೇಬಿನ ತುಂಬಾ ಝಣ, ಝಣ ಕಾಂಚಾಣ. ಎಂದೋ ಕೇಳಿದ ಆ ಹಾಡು “ಮೊದಲ ತೇದಿ ಒಂದರಿಂದ ಹತ್ತರವರೆಗೆ ಉಂಡಾಟ ಉಂಡಾಟ” ಮತ್ತೆ ನೆನಪಿಗೆ ಬರುತ್ತಿದೆ. ಅವನಿಗೆ ಎಂದಿನಂತೆ ಎರಡನೆ ತಾರೀಖಿನಂದು ಸಂಬಳವಾಗಿ ಅದನ್ನು ತನ್ನ ಪ್ಯಾಂಟಿನ ವಾಚ್ ಪಾಕೇಟಿನಲ್ಲಿ ಬಂದೋಬಸ್ತು ಮಾಡಿಕೊಂಡು ನನ್ನೊಡಲಿಗೆ ಏರಲು ಪ್ರಯತ್ನಿಸುತ್ತಿರುವವನನ್ನು ಒಳಗೆ ಏರಿ ಬರದಂತೆ ಇಬ್ಬರು ವ್ಯಕ್ತಿಗಳು ಬಾಗಿಲಿನಲ್ಲಿಯೆ ಅಟಕಾಯಿಸಿ ಕೊಂಡರು. ಮತ್ತಿಬ್ಬರು ಅವನ ಕೈಗಳನ್ನು ಹಿಡಿದು ಮೇಲೇರಲು ಸಹಾಯ ಮಾಡುವಂತೆ ನಟಿಸುತ್ತಿದ್ದಾರೆ, ಪಾಪ ಅವನಿಗೆ ಅವರ ಆಟವೊಂದೂ ತಿಳಿಯುತ್ತಿಲ್ಲ. ಅವನು ಮೇಲೇರಲು ಪ್ರಯತ್ನಿಸುತ್ತಿದ್ದರೂ ಅವನಿಗೆ ಮೇಲೇರಲು ಆಗುತ್ತಿಲ್ಲ! ಅದರ ಕಾರಣ ಅವನಿಗೆ ಗೊತ್ತಾಗಲೇ ಇಲ್ಲ. “ಅಯ್ಯೊ ಪಾಪ, ನಾನೇನೂ ಮಾಡಲು ಸಾದ್ಯವಿಲ್ಲವಲ್ಲ ಎಂದು ಮನಸ್ಸಿಗೆ ಬಹಳ ಖೇದವಾಯ್ತು. ಅವನನ್ನು ಮೇಲಕ್ಕೆ ಎತ್ತುತ್ತಿದ್ದ ವ್ಯಕ್ತಿ ಇನ್ನಿಬ್ಬರಿಗೆ ಕೆಲಸವಾಯಿತೆಂದು ಕಣ್ಸನ್ನೆ ಮಾಡಿದೊಡನೆ ಎಲ್ಲ ನಾಲ್ಕೂ ವ್ಯಕ್ತಿಗಳು ಮುಂದಿನ ನಿಲ್ಡಾಣದಲ್ಲಿ ಸದ್ದಿಲ್ಲದೆ ಅವನನ್ನು ಮೇಲೆ ಏರಲು ಅನುವು ಮಾಡಿ ಕೊಟ್ಟು ತಾವು ಕೆಳಗೆ ಇಳಿದು ಜನಸ್ತೊಮದಲ್ಲಿ ಮಾಯವಾದರು.
ಸ್ವಲ್ಪ ಸಮಯದ ನಂತರ ಹಣ ಕಳುವಾಗಿರುವುದು ಅವನ ಅರಿವಿಗೆ ಬಂತು. “ಅಯ್ಯಯ್ಯೋ, ನನ್ನ ದುಡ್ಡು ಕಟ್ ಪಾಕೆಟ್ ಮಾಡಿದ್ದಾರೆ, ನಾನು ಇದನ್ನು ತಾಯಿಯ ಕಾಯಿಲೆಯ ಚಿಕೆತ್ಸೆಗೆ, ತಂಗಿಯ ಪರೀಕ್ಶೆಗೆ ಊರಿಗೆ ಕಳುಹಿಸಬೇಕಿತ್ತು, ಈಗ ಏನು ಮಾಡಲಿ” ಎಂದು ಕರುಳು ಕಿತ್ತು ಬರುವಂತೆ ರೋಧಿಸತೊಡಗಿದ. ಅವನು ಎದೆ ಎದೆ ಬಡಿದುಕೊಂಡು ಅಳುವುದನ್ನು ನನ್ನಿಂದ ನೋಡಲಾಗಲೇ ಇಲ್ಲ. ಆ ಅಕ್ರಂದನ ಮುಗಿಲು ಮುಟ್ಟುವಂತಿತ್ತು. ನಾನೋ ಕೌರವನ ಸಭೆಯ ದರ್ಮನಂದನನಂತೆ ನಿತ್ರಾಣನಾಗಿಟ್ಟೆ.
ಪ್ರಸಂಗ- ೩
ನಿಮಗೆಲ್ಲರಿಗೂ ತಿಳಿದೇ ಇರುವಂತೆ ನನ್ನೊಡಲಿಗೆ ಬಂದು ಸೇರುವ ಮಂದಿ ನಾನ ತೆರನಾಗಿರುತ್ತಾರೆ. ಇಲ್ಲಿ ಯಾವುದೆ ಜಾತಿಯ ಯಾವುದೇ ಲಿಂಗ ಭೇದವಿಲ್ಲದೆ, ಯಾವುದೇ ಮತ ಭೇದವಿಲ್ಲದೆ ಜನ ನನ್ನೊಡಲನ್ನು ಸೇರುತ್ತಾರೆ !
ಶುಭ್ರವಾಗಿ ಸ್ನಾನ ಮಾಡಿ ಕ್ರಾಪನ್ನು ಚೆನ್ನಾಗಿ ತೀಡಿ, ಗರಿಗರಿಯಾದ ಶರಟು, ಪ್ಯಾಂಟನ್ನು ಧರಿಸಿ ಬರುವ ಕಾಲೇಜು ಹೈದರು : ಸ್ನೋ, ರೋಜು, ಪೌಡರ್, ಚಾರ್ಲಿ ಸೆಂಟನ್ನೋ, ರೆಕ್ಸೋನಾ ಬಾಡಿ ಸ್ಪ್ರೇ ಯನ್ನೊ ಸಿಂಪಡಿಸಿಕೊಂಡು ಘ್ಂ ಎಂದು ಸುವಾಸನೆಯನ್ನು ಬೀರುತ್ತಾ, ನಲಿಯುತ್ತಾ ಬರುವ ಕಾಲೇಜು ಹುಡುಗಿಯರು: ಸಮವಸ್ತ್ರ ಧರಿಸಿ ಶಾಲೆಗೆ ಹೊರಟ ಕಿಶೊರಿ, ಕಿಶೋರರು: ವಿಧಾನ ಸೌಧದಲ್ಲಿ ಕೆಲಸ ಮಾಡುವ ನೌಕರರೂ: ಮನೆಗೆಲಸದ ಹುಡುಗಿಯರೂ: ಕಛೇರಿಗೆ ಹೊರಟಿರುವ ಹ್ಯಾಪೆ ಮೋರೆಯ ಸರ್ಕಾರಿ ಗುಮಾಸ್ತೆಯರು: ಬಿಲ್ಡಿಂಗ್ ಕೆಲಸಕ್ಕೆ ಹೊರಟಿರುವ ಉತ್ತರಪ್ರದೇಶವೋ ಅಥವ ಒರಿಸ್ಸಾದಿಂದ ಬಂದಿರುವ ಪಡ್ಡೆ ಯುವಕರು: ಹತ್ತಿರದ ತಮಿಳ್ನಾಡಿನ ಗಾರೆ ಕೆಲಸದವರು: ಪೈಂಟರಗಳು: ಇನ್ನೂ ಅನೇಕ ರೀತಿಯ, ಅನೇಕ ಬಾಷಿಗರು, ವಿಭಿನ್ನ ಸಂಸೃತಿಯ ಜನ ನನ್ನೊಡಲಿನಲ್ಲಿ ಬಂದು ತುಂಬಿಕೊಳ್ಳುತ್ತಾರೆ. ನಾನು ಎಲ್ಲರನ್ನು ಯಾವುದೇ ಭೇದವಿಲ್ಲದೆ ಸಾಗಿಸುತ್ತೇನೆ. ನಾನು ಒಂದು ರೀತಿಯ “ರಾಷ್ಟ್ರೀಯ ಏಕೀಕರಣದ” ಸಂಕೇತವೆಂದು ಹೇಳಬಹದು. ನಾನು ಇಷ್ಟೆಲ್ಲ ಮಾಡುತ್ತಿದ್ದರೂ ನನಗೆ ಯಾರೂ ಯಾವ ಪ್ರಶಸ್ತಿಯನ್ನೂ ನೀಡಿಯೆ ಇಲ್ಲ ! ನಾನು ಗೀತೆಯ ” ಕರ್ಮಣ್ಯೇವಾದಿಕಾರಸ್ತೆ……” ಯ ಸೂಕ್ತಿಯಂತೆ ಕರ್ತವ್ಯವನ್ನು ಮಾಡುತ್ತಲೇ ಬಂದಿದ್ದೇನೆ.
ಮೇಲೆ ಹೇಳಿದ ನಾನಾ ತೆರನಾದ ಜನರಲ್ಲಿ ನನಗೆ ಅತೀ ಬೇಸರ ತರಿಸುವ ಜನರೆಂದರೆ ದಿನದ ಇಪ್ಪತ್ತುನಾಲ್ಕು ಗಂಟೆಯೂ ಬಾಯಿಗೆ ಪಾನ್ ಪರಾಗ್ ಹಾಕಿಕೊಂಡು ಎಲ್ಲೆಂದರಲ್ಲೇ ಉಗಿಯುವ ಜನ. ಕಿಟಕಿಯ ಪಕ್ಕ ಕೂತು ಪಾನ್ ಪರಾಗ್ ಜಗಿಯುತ್ತಾ ಪಿಚಕ್ಕನೆ ಕಿಟಕಿಯ ಮೂಲಕ ಉಗಿಯುವಾಗ ನನ್ನ ಬಾಡಿಗೆಲ್ಲಾ ಅದನ್ನು ಅಂಟಿಸಿ ಉಗಿಯುವರನ್ನು ಕಂಡರೆ ನನಗೆ ಎಲ್ಲಿಲ್ಲದ ಸಿಟ್ಟು. ಸಾರ್ವಜನಿಕ ಜಾಗಗಳಲ್ಲಿ ಉಗಿಯುವುದೇ ಒಂದು ಅಪರಾಧವಾಗಿರುವಾಗ ನನ್ನ ಮೇಲೇ ಉಗುಳುವ ಜನ ನನ್ನ ಶರೀರದ ಮೇಲೆ ಕಲೆಗಳನ್ನು ಮೂಡಿಸಿರುವುದು ಅಕ್ಷಮ್ಯ ಅಪರಾಧವಲ್ಲವೆ ? ಕೇಳುವರಾರು ಈ ದೇಶದಲ್ಲಿ ?
ಒಮ್ಮೆ ಕಾರ್ಪೊರೇಷನ್ ವೃತ್ತದ ಬಳಿ ಸಿಗ್ನಲಗಾಗಿ ಕಾದಿದ್ದಾಗ ಒಳಗಿನಿಂದ ಒಬ್ಬ ಪಿಚಕ್ ಎಂದು ಉಗಿದ, ಅದು ಹಾರಿ ಅಲ್ಲಿಯೇ ಪಕ್ಕದಲ್ಲಿ ಇದ್ದ ಬೈಕ್ ಸವಾರನ ಮೇಲೆ ಸಿಡಿಯಿತು. ಬೈಕ್ ಸವಾರ ಒಳಗೆ ಬಂದು ಉಗಿದವನ ಹುಟ್ಟಡಗಿಸುವಂತೆ ಗೂಸಾ ಕೊಟ್ಟು ಜೀವನ ಪೂರಾ ಪಾನ್ ಪರಾಗ್ ಕಡೆಗೆ ತಿರುಗದಂತೆ ಮಾಡಿದ್ದ. ನಾನು ಮಾಡಿದ್ದನ್ನು ಆ ಬೈಕ್ ಸವಾರ ಮಾಡಿದ್ದನ್ನು ಕಂಡು ನನಗೆ ಬಹಳ ಸಂತಸವಾಯಿತು. ನಮ್ಮ ನಾಡಿನ ಪಡ್ಡೆ ಹೈಕಳು ಆ ಮಂದಿಯನ್ನು ನೋಡಿ ತಾವೂ ಪಾನ್ ಪರಾಗ್ ಜಗಿಯಲು ಹತ್ತಿವೆ ! ಅಂತವರಿಗೊಂದು ಕಿವಿ ಮಾತು ಹೇಳುವುದೆಂದರೆ “ದಯವಿಟ್ಟು ಪಾನ್ ಪರಾಗ್ ಜಗಿದು ಮಧುರ ಜೀವನವನ್ನು ಹಾಳು ಮಾಡಿ ಕೊಳ್ಳಬೇಡಿ, ಇಂದೇ ಉಗಿದು ಬಿಡಿ ಅದನ್ನು ಎಂದೆಂದಿಗೂ” ಎಂದು.
ಪ್ರಸಂಗ -೪
ಈಗಾಗಲೆ ನಿಮಗೆಲ್ಲರಿಗು ಮನವರಿಕೆಯಾಗಿರುವಂತೆ ನನ್ನ ಒಡಲಲ್ಲಿ ಹಲವಾರು ವಿಚಿತ್ರ ಸಂಗತಿಗಳು ನಡೆಯುತ್ತಲೇ ಇರುತ್ತದೆ. ಅಂತಹ ಸಂಗತಿಯನ್ನು ನಿಮಗಾಗಿ ತೆರೆಯುತ್ತಿದ್ದೇನೆ ಓದಿ.
ಸಾಮಾನ್ಯವಾಗಿ ಮುಂಜಾನೆ ಮತ್ತು ಸಂಜೆ ನನ್ನ ಒಡಲು ಜನರಿಂದ ತುಂಬಿ ತುಳುಕುತ್ತಿರುತ್ತದೆ. ಹಾಗೆ ಬರ್ತಿಯಾಗಿರುವಾಗ ಒಬ್ಬರಿಗೊಬ್ಬರು ಅಂಟಿಕೊಂಡು ನಿಲ್ಲುವುದು ಎಲ್ಲ ಪ್ರಯಾಣಿಕರಿಗೆ ರೂಡಿಯಾಗಿರುತ್ತದೆ. ಆದರೆ ಕೆಲವು ಪಡ್ಡೆ ಹೈಕಳು ಮತ್ತು ಕೆಲವು ಮುದುಕರು ಇಂತಹ ಸಂದರ್ಭವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.
ಒಮ್ಮೆ ಒಬ್ಬ ಯುವಕ ಮದ್ಯದ ಬಾಗಿಲಿನಿಂದ ಒಳಕ್ಕೆ ಏರಿ ಬಂದು ಹೇಗೋ ಮದ್ಯ ನುಸುಳಿಕೊಂಡು ಹೆಂಗಸರ ಬಳಿಗೆ ಸರಿದು ಬಂದು ನಿಂತನು. ಅವನು ಎಲ್ಲರಂತೆ ಸುಮ್ಮನೆ ನಿಂತಿದ್ದರೆ ಇಲ್ಲಿ ಅವನ ಬಗ್ಗೆ ಹೇಳುವ ಪ್ರಮೇಯವೇ ಬರುತ್ತಿರಲಿಲ್ಲ. ಮೊದಲು ತನ್ನೆರಡು ಕೈಗಳನ್ನು ಕೆಳಗೆ ಹಾಕಿ ಮುಂದಿರುವ ಯುವತಿಯ ಪೃಷ್ಟಕ್ಕೆ ತಾಗುವಂತೆ ನಿಂತನು. ಡ್ರೈವರ್ ತನ್ನ ಪಾಡಿಗೆ ನೇರವಾಗಿ ನನ್ನನ್ನು ಚಾಲನೆ ಮಾಡುತ್ತಿದ್ದರೂ ಅವನ ಕೈ ಅವಳ ಅಂಗಾಂಗಳ ಸ್ಪರ್ಶವನ್ನು ಮಾಡುತ್ತಿದ್ದವು. ಸುಮ್ಮ ಸುಮ್ಮನೆ ಅವಳ ಮೇಲೆ ವಾಲುತ್ತಿದ್ದನು. ಏನಿದು ವಿಷಯ ಲಂಪಟತನ ಎಂದು ನಾನು ಬಹಳ ಬೇಸರಿಸಿಕೊಂಡು ಯುವತಿಯ ಮುಖವನ್ನು ದಿಟ್ಟಿಸಿದಾಗ ಅವಳ ಕಣ್ಗಳಲ್ಲಿಯ ಭಯ ಮತ್ತು ಅವನ ಆ ವರ್ತನೆಯಿಂದ ಅಸಹ್ಯ, ಅಸಹಾಯಕತೆ ಕಂಡು ಅವನನ್ನು ಒದ್ದು ಹೊರಗೆ ಹಾಕಬೇಕೆಂದರೂ ನನ್ನಿಂದ ಅದು ಸಾದ್ಯವಿಲ್ಲವೆಂದು ಕಣ್ಣುಗಳನ್ನು ಮುಚ್ಚಿದೆ.
ಹಾಗೆಯೆ ಮತ್ತೊಮ್ಮೆ ಮುದುಕನೊಬ್ಬ ಸಣ್ಣ ಬಾಲಕನಿಗೆ ಆತು ನಿಂತು ತನ್ನದನ್ನು ಅವನಿಗೆ ಒತ್ತಿ ಅಲ್ಲೆ ತನ್ನ ಚಟ ತೀರಿಸಿಕೊಳ್ಳುವುದನ್ನು ಕಂಡು ಏನೂ ಮಾಡದ ನನ್ನ ನಿಸ್ಸಹಾಯಕತೆಗೆ ನನ್ನ ಮೇಲೇ ನನಗೆ ಸಿಟ್ಟು ಬಂದು ಸುಮ್ಮನಾದೆ. ಆ ಯುವಕನಿಗಾಗಲಿ ಅಥವಾ ಆ ಮುದುಕನಿಗಾಗಲಿ ಮನುಷ್ಯತ್ವವೇ ಇಲ್ಲವೇ ಎಂಬ ಸಂದೇಹ ನನ್ನನ್ನು ಅದರ ಬಗೆಗೇ ಚಿಂತಿಸುವಂತೆ ಮಾಡಿದೆ.
ಮೇಲೆ ಹೇಳಿದ ಅಸಹ್ಯಕರ ಘಟನೆಗಳಿಗೆ ವಿರುದ್ದವಾಗಿ ಮನಸ್ಸಿಗೆ ಹಿತವಾಗುವ ದೈವೀಕವಾದ ಪ್ರೇಮ, ಪ್ರಣಯಗಳು ನನ್ನೊಡಲಿನಲ್ಲಿ ಜರುಗಿದ ಪ್ರಸಂಗವನ್ನು ನಿಮಗೆ ಹೇಳುತ್ತೇನೆ ಕೇಳುವಂತವರಾಗಿ.
ಪ್ರಸಂಗ-೫
ಅವಳು ಇಪ್ಪತ್ತರ ಚೆಲುವೆ. ನೇರ ನಾಸಿಕದ, ಕೋಲು ಮೊಗದ, ಗೌರವ ವರ್ಣದ, ಸಪೂರ ದೇಹದ ವನಿತೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆಂಬ ಚೆಲುವು ಆಕೆಯದು. ಪ್ರತಿ ದಿನ ಮೆಜೆಸ್ಟಿಕನಲ್ಲಿ ನಿಂತಿರುತ್ತಿದ್ದ ನನ್ನೊಡಲಿನಲಿ ನಿಗದಿತ ಸಮಯಕ್ಕೆ ಬಂದು ಸೇರಿಕೊಳ್ಳುತ್ತಿದ್ದಳು. ಅವಳೊಡನೆ ಅವಳ ಸ್ನೇಹಿತೆಯರೂ ಇರುತ್ತಿದ್ದರು. ನಾನು ವ್ಹೈಟ್ ಫೀಲ್ಡ್ ನವರೆಗೂ ಹೊಗುತ್ತಿದ್ದೆ, ಆದರೆ ಅವಳು ಮಾರ್ಗ ಮದ್ಯದಲ್ಲಿಯೇ ಇಳಿದು ತಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಗೆ ಹೋಗುತ್ತಿದ್ದಳು.
ಅವನು ಸುಮಾರು ಇಪ್ಪತ್ತುಮೂರೋ ಅಥವಾ ಅದಕ್ಕಿಂತ ಒಂದು ಮೇಲಿರಬಹುದು, ಸದೃಡ ಯುವಕ, ಎಣ್ಣೆಗೆಂಪು ಬಣ್ಣ, ತಲೆಯ ತುಂಬ ತಿದ್ದಿದ ಕ್ರಾಪು, ವ್ಯಾಯಾಮ ಮಾಡಿದ ಗಟ್ಟಿಯಾಗಿರುವ ತೋಳುಗಳು ಅವನು ಕೈ ಆಡಿಸುತ್ತಿದ್ದರೆ ತೋಳಿನ ಮಾಂಸ ಖಂಡಗಳು ಮೇಲೆ ಕೆಳಗೆ ಆಡುವ ರೀತಿ ಅವನನ್ನು ನೋಡಿದ ಕೂಡಲೆ ಆರೋಗ್ಯವಂತ ಯುವಕನೆಂದು ಹೇಳಬಹುದಿತ್ತು. ಕಾಲಿಗೆ ಕರಿಯ ಬಣ್ಣದ ಇಲಿ ಮೂತಿಯ ಶೊ ತೊಟ್ಟು, ಶರಟನ್ನು ಇನ್ ಟಕ್ ಮಾಡಿ ಟಕ್ ಟಕ್ ಎಂದು ಪೊಲೀಸ್ ಇನ್ಸ್ಪೆಕಟರ್ ಸ್ಟೈಲಿನಲ್ಲಿ ನಡೆದು ಬಂದು ನನ್ನೊಡಲಿಗೆ ಸೇರಿ ಬಿಡುತ್ತಿದ್ದ.
ಅವಳು ಅವನಿಗೆ ಕಂಡಳೋ ಅಥವಾ ಅವನು ಅವಳಿಗೆ ಕಂಡನೋ ದೇವರಿಗೊಬ್ಬನಿಗೇ ಗೊತ್ತು ಒಟ್ಟಿನಲ್ಲಿ ಅವರು ಸ್ನೇಹಿತರಾದರು.
ಅವರಿಬ್ಬರ ನಡುವೆ ಯಾವಾಗ ಅವರ ಕಣ್ಣುಗಳಲ್ಲಿ ಮಿಂಚು ಸರಿದು ಪ್ರೀತಿಯ ಮಿಲನವಾಯಿತೂ ನನಗೆ ತಿಳಿಯಲೇ ಇಲ್ಲ, ಆದರೆ ಅವರಿಬ್ಬರು ಪ್ರೇಮಿಗಳಾಗಿಬಿಟ್ಟರು !
ನಾನು ನನ್ನನ್ನೆ ಮರೆತು ಅವರ ಆ ದೈವೀಕವಾದ ಪ್ರೇಮ ಸಲ್ಲಾಪಗಳನ್ನು ಪ್ರತಿ ದಿನವೂ ಕೇಳ ತೊಡಗಿದೆ. ಎಲ್ಲ ಪ್ರೇಮಿಗಳಂತೆ ಅವರ ನಡುವೆಯೊ ತುಂಟಾಟ ಸರಿದಾಡುತ್ತಿತ್ತು ಆದರೆ ಅದಕ್ಕೆ ಒಂದು ಎಲ್ಲೆ ಇರುತ್ತಿತ್ತು. ಪ್ರೇಮ ಸಂಭಾಷೆಣೆಗಳಲ್ಲಿ ಗೌರವವನ್ನು ಇಬ್ಬರೊ ಮೀರುತ್ತಿರಲಿಲ್ಲ, ಅಲ್ಲಿ ಪ್ರೇಮದ ಬುನಾದಿಯಾದ ಸ್ನೇಹ ಮನೆ ಮಾಡಿತ್ತು. ಅಲ್ಲಿ ಅವರ ಪ್ರೇಮದ ಮಾತುಗಳು, ಪ್ರೀತಿಯ ಕನಸುಗಳು, ಭಾವೀ ಭವಿಷ್ಯದ ಜೀವನದ ಬಗೆಗಿನ ಅಂಶಗಳು, ಹೀಗೆ ಅದರ್ಶ ಪ್ರೇಮಿಗಳಿಗೆ ಏನೆಲ್ಲ ಸಾದ್ಯವೊ ಎಲ್ಲವನ್ನು ಚರ್ಚಿಸುತ್ತಿದ್ದರು. ಗಂಡಾಗಲಿ ಅಥವಾ ಹೆಣ್ಣಾಗಲಿ ಅವರಿಬ್ಬರ ನಡುವೆ ಸ್ನೇಹ ಪೊರ್ವಕವಾದ ಪ್ರೇಮವೇರ್ಪಟ್ಟರೆ ಅದು ದೈವೀಕ ಪ್ರೀತಿಗೆ ನಾಂದಿಯಾಗುವುದಲ್ಲವೆ. ಒಟ್ಟಿನಲ್ಲಿ ಅಸಹ್ಯಕರವಾದ ಘಟನೆಗಳನ್ನು ಕಂಡಿದ್ದ ನನ್ನ ಮನಸ್ಸು ಈ ಜೋಡಿ ಹಕ್ಕಿಗಳನ್ನು ಕಂಡು ಸಂಪ್ರೀತವಾಗಿತ್ತು.
ಎಂದಾದರೊಮ್ಮೆ ಆಗಸದ ಸೂರ್ಯ ಅಥವಾ ಚಂದ್ರನಾಗಲಿ ಹುಟ್ಟುವುದನ್ನು ಮರೆಯಬಹುದೇನೋ, ಆದರೆ ಅವರೀರ್ವರೂ ಪ್ರತಿ ದಿನ ತಪ್ಪದೆ ಭೇಟಿಯಾಗತೊಡಗಿದರು. ಅವರ ಪ್ರೇಮಕ್ಕೆ ನಾನು ಮತ್ತು ಅವರ ಸ್ನೇಹಿತೆಯರು ಸಾಕ್ಷಿಯಾಗಿ ನಿಂತೆವು.
ಒಂದು ದಿನ ಅವಳು ಮಾಮೂಲಿನಂತೆ ಬರಲೇ ಇಲ್ಲ. ಅವನು ಕಂಗಾಲಾಗಿ ಬಿಟ್ಟ. ಯಾರಿಗೆ ಹೇಳುವುದು ? ಯಾರಿಗಾದರೂ ಕೇಳೋಣವೆಂದರೆ ಅವಳ ವಿಳಾಸವೇ ಅವನಿಗೆ ತಿಳಿದಿಲ್ಲ. ಪ್ರೇಮಿಗಳು ಎಲ್ಲ ವಿಷಯವನ್ನು ಅವರವರ ಅಂತರಂಗದಲ್ಲಿ ಅಡಗಿಸಿಕೊಂಡಿರುತ್ತಾರೆಯೆ ಹೊರತು ಯಾವುದನ್ನೂ ಎಲ್ಲಿಯೂ ಬರೆದಿಟ್ಟುಕೊಳ್ಳುವುದಿಲ್ಲ ಅಲ್ಲವೆ ?
ಎಂಟು ದಿನಗಳ ಬಳಿಕ ಅವನ ಕಾಯುವಿಕೆಗೆ ಒಂದು ಕೊನೆ ಹಾಕಿದಂತೆ ಅವಳು ಮೋಡದ ಮರೆಯಿಂದ ನುಸುಳಿ ಬರುವ ಚಂದಿರನಂತೆ ಮೊಗವೆತ್ತಿ ಬಂದಳು, ಮಲ್ಲಿಗೆಯ ನಗು ಸೂಸಿದಳು; ಮನಸಾರೆ ನಕ್ಕುಬಿಟ್ಟರು ಅವರು. ನನಗಂತೂ ಕೆ.ಎಸ್.ನ ಅವರ ’ರಾಯರು ಬಂದರು ಮಾವನ ಮನೆಗೆ’ ಪದ್ಯದ ನೆನಪು ಬರತೊಡಗಿತ್ತು ಅವರೀರ್ವರನ್ನು ಜೊತೆಯಾಗಿ ಕಂಡಾಗ.
ಪ್ರೇಮದ ಹೊ ಹಣ್ಣಾಗಿ, ಕಾಯಾಗಿ ಫಲ ಕೊಟ್ಟಾಗ ವಸಂತ ಮಾಸದ ಒಂದು ಒಳ್ಳೆಯ ದಿನದಂದು ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ನನ್ನನ್ನು ಅಂದರೆ, ನನ್ನ ಯಜಮಾನರುಗಳಾದ ಡ್ರೈವರ್ ಮತ್ತು ಕಂಡಕ್ಟರ್ ನ್ನು ತಮ್ಮ ಮದುವೆಗೆ ಬರಮಾಡಿ ಕೊಂಡರು. ಬಹುಶ: ಈ ರೀತಿಯ ತಮ್ಮ ಪ್ರೇಮಕ್ಕೆ ಸಾಕ್ಷಿಗಳಾದ ವ್ಯಕ್ತಿಗಳನ್ನು ಆಹ್ವಾನಿಸಿ ಮದುವೆ ಮಾಡಿಕೊಂಡ ಅಪೂರ್ವ ಪ್ರೇಮಿಗಳು ಇವರೇ ಇರಬಹುದಲ್ಲವೆ !
ಇನ್ನು ಅನೇಕ ಪ್ರಸಂಗಗಳು ಇವೆ, ಹೇಳಲು ಸಮಯವಿಲ್ಲದಿರುವುದರಿಂದ ಇಲ್ಲಿಗೆ ಮುಕ್ತಾಯ ಮಾಡುತ್ತಿದ್ದೇನೆ. ಇದೋ ಇಲ್ಲಿದೆ ಓದಿ.
ಮುಕ್ತಾಯ:
ನಾನು ಹಲವಾರು ಬಾರಿ ಸತ್ತು ಬದುಕಿದ್ದೇನೆ. “ಮುರ್ದಾಬಾದ್, ಮುರ್ದಾಬಾದ್, ಹಿಂದಿಗೆ ದಿಕ್ಕಾರ, ಸರಕಾರಕ್ಕೆ ದಿಕ್ಕಾರ, ಮಾಲೀಕನಿಗೆ ದಿಕ್ಕಾರ, ನ್ಯಾಯ ಬೇಕು, ಏನೇ ಬರಲಿ ಒಗ್ಗಟ್ಟಿರಲಿ, ದಿಕ್ಕಾರ, ದಿಕ್ಕಾರ ಸಾಮಾಜ್ಯ ಶಾಹಿಗಳಿಗೆ ದಿಕ್ಕಾರ, ಸಮಾನತೆ ಬೇಕು, ದಲಿತರಿಗೆ ಜಯವಾಗಲಿ, ರೈತರಿಗೆ ನ್ಯಾಯ ಸಿಗಲಿ, ಅತ್ಯಾಚಾರ ಅಳಿಯಲಿ, ವನಿತೆಯರಿಗೆ ಜಯವಾಗಲಿ” ಇತ್ಯಾದಿ ಇತ್ಯಾದಿ ಸ್ಲೋಗನ್ ಗಳನ್ನು ಕೇಳಿ ಕೇಳಿ ನಾನು ಬೇಸತ್ತು ಹೋಗಿದ್ದೇನೆ. ಜನರೆಲ್ಲ ಕೂಡಿ ಕೂಗುವ ಕೂಗು ಯಾರಿಗೆ ತಲಪುತ್ತದೂ ಇಲ್ಲವೂ ಅಂತಿಮವಾಗಿ ಅದು ನನಗೆ ಮಾರಕವಾಗಿಬಿಡುತ್ತದೆ.
ನಾನು ಹೊತ್ತು ತಂದ ಜನಸ್ತೋಮ ನಾಯಕನ ಬರವಿಗಾಗಿ ಕಾಯುತ್ತಿದೆ. ಆ ಪಕ್ಷ, ಈ ಪಕ್ಷದ ಬಾಷಣಕ್ಕೆ ಕಾಯುತ್ತಿದೆ. ನಾಯಕ ಬಂದು ಭಾಷಣ ಬಿಗಿದು ಅತ್ತ ಹೋದೂಡನೆ ಎಲ್ಲ ಜನರು ಹೊಡೆದಾಡಲು ಶುರು ಹಚ್ಹಿ ಕೊಳ್ಳುತ್ತಾರೆ. ಕೊನೆಗೆ ಅವರನ್ನು ಹೊತ್ತು ತಂದ ತಪ್ಪಿಗೆ ನನಗೆ, ನನ್ನ ಸಹೊದರರಿಗೆ ಬೆಂಕಿ ಇಡುತ್ತಾರೆ. ಯಾರ ಮೇಲಿನ ಸಿಟ್ಟನ್ನೋ ನಮ್ಮ ಮೇಲೆ ಹರಿಯ ಬಿಡುತ್ತಾರೆ. ನಮ್ಮ ಜ್ವಾಲೆ ಭುಗಿಲೆದ್ದು ಉರಿಯುತ್ತದೆ. ನಾವೆಲ್ಲ ಅಸ್ತಿ ಪಂಜರಗಳಾಗುತ್ತೇವೆ.
ಓ ದೇವರೆ ಏನಿದು ನಿಯಮ ? ಸಹಾಯ ನೀಡಿದ ಕೈಗಳನ್ನೆ ಏಕೆ ಕಚ್ಹುತ್ತಾರೆ ಈ ಜನ ? ಒಂದೂ ಅರ್ಥವಗುತ್ತಿಲ್ಲ ತಂದೆಯೆ. ಮರು ಜನುಮ ನನಗೆ ಇರುವುದಾದರೆ ಬಸ್ಸಾಗಿ ನನ್ನನ್ನು ಹುಟ್ಟಿಸ ಬೇಡವೋ ದೇವರೆ ಎಂದು ಪ್ರಾರ್ಥಿಸುತ್ತಾ ಕೆಳಗೆ ಕುಸಿಯುತ್ತೇನೆ.
–ಶ್ರೀಕೊಯ