ಬೆಂಗಳೂರಿನ ದಾಖಲೆ ಮಳೆ: ಪ್ರಶಸ್ತಿ ಅಂಕಣ


 
ಟ್ರಾಫಿಕ್ ಜಾಂಗೂ ಬೆಂಗ್ಳೂರಿಗೂ ಖಾಸಾ ಖಾಸಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯನೇ..ಆದರೆ ಬೆಂಗ್ಳೂರಲ್ಲಿ ದಾಖಲೆ ಮಳೆಯೆಂಬ ದಾಖಲೆಯಲ್ಲಿ ದಾಖಲಾಗಿದ್ದು, ಮುಕ್ಕಾಲು ಘಂಟೆಯ ಪಯಣ ಮಳೆರಾಯನಿಂದ ಮೂರು ಘಂಟೆಯಷ್ಟಾಗಿದ್ದು  ಮಾತ್ರ ಮರೆಯಲಾರದ ನೆನಪುಗಳು..
 
ಮೊನ್ನೆ ಎಂದಿನಂತೆ ಶುಭ ಶುಕ್ರವಾರ. ಅಕ್ಷರಶ: ಸೆಕೆಯಲ್ಲಿ ಬೇಯ್ತಿರೋ ಬೆಂಗಳೂರಿಂದ ದೂರ ನನ್ನ ಹುಟ್ಟೂರೆಡೆಗೆ ತೆರಳೋ ಖುಷಿಯಿಂದ ಸಹಜವಾಗೇ ಶುಕ್ರವಾರ ಶುಭದ್ದೆನಿಸಿತ್ತು. ಆದರೆ ಸಂಜೆ ಆರು ಘಂಟೆಯಾಗುತ್ತಿದ್ದಂತೆಯೇ ಎಲ್ಲಿಂದಲೋ ಕವಿದ ಮೋಡಗಳು ಅದ್ಯಾವ ಮಾಯೆಯಲ್ಲಿ ಮಳೆ ಸುರಿಸತೊಡಗಿದವೋ ತಿಳಿಯಲೇ ಇಲ್ಲ…ಯಾರೋ  ಬಾಗಿಲು ತೆಗೆಯುತ್ತಿದ್ದ ಹಾಗೆಯೇ ಉಧೋ ಎಂದು ಮಳೆಯ ಸದ್ದು. ಇದು ಯಾವಾಗಲೂ ಸುರಿದಂತೆ ಮಾಡಿ ಫೂಲ್ ಮಾಡೋ ಬೆಂಗಳೂರ ಸಾಧಾರಣ ಮಳೆ ಬಿಡೆಂದು ಸುಮ್ಮನಾದೆ. ಅರ್ಧಘಂಟೆ ಆಯ್ತು. ಮುಕ್ಕಾಲಾಯ್ತು. ಘಂಟೆ ಎಂಟಾದ್ರೂ ಮಳೆ ನಿಲ್ಲೋ ಸುಳಿವೇ ಇಲ್ಲ. ಊರಿಗೆ ಹೋಗ್ಬೇಕು ಅಂತ ಪ್ಲಾನ್ ಮಾಡಾಗಿದೆ ಆದ್ರೆ ಆಫೀಸಿಂದ ಮನೆಗೇ ಮರಳಕ್ಕಾಗ್ತಿಲ್ವಲ್ಲ ಅಂತೊಮ್ಮೆ ಯೋಚನೆ ಬಂತು. ನೆನೆದ್ರೆ ನೆನೆದ್ರಾಯ್ತು ಅಂತ ಬಂದ ಬಸ್ಸೊಂದಕ್ಕೆ ನೆನೆನೆನೆದೇ ಓಡಿ ಹತ್ತಿದ್ದೂ ಆಯ್ತು..ಬಸ್ಸೊಳ್ಳಗಿದ್ದವ್ರೆಲ್ಲಾ ಮಳೆಯಲ್ಲಿ ನೆಂದಿದ್ದವರೇ. ಒದ್ದೆ ಕೂದಲುಗಳು, ನೀರು ತೊಟ್ಟಿಕ್ತಿದ್ದ ಬಟ್ಟೆಗಳ್ನ ನೋಡಿ ನಾನೇ ಪರ್ವಾಗಿಲ್ಲ ಗುರೂ ಅಂದ್ಕೊಂಡೆ.
 
ನಂ ಸ್ಟಾಪು ಬಂತು. ಆದ್ರೆ ಮನೆ ಪಕ್ಕನೇ ಇಲ್ವೇ.. ಓಡಿದ್ರೂ ಐದು ನಿಮಿಷ. ಆದ್ರೆ ಮಳೆ ? ಬೆಂಗ್ಳೂರಿಗೆ ಬಂದು ನೀನು ಪಕ್ಕಾ ಫಾರಿನರ್ರೇ ಆಗಿದೀಯ.. ಮಲೆನಾಡಲ್ಲೇ, ಮಳೆಕಾಡಲ್ಲೇ ಹುಟ್ಟಿ ಬೆಳೆದವ ಈ ಮಳೆಗೆ ಹೆದರ್ತಾ ಇದೀಯಲ್ಲ ಅಂದಂತನಿಸಿ ನಗು ಬಂತು..ಅಲ್ಲಿಂದ ಒಂದೇ ಓಟಕ್ಕೆ ಪೀಜಿ ಮುಟ್ಟಿದೆ.. ತಕ್ಷಣ ತಲೆ ಒರೆಸ್ಕೊಂಡಿದ್ದು ಬಿಟ್ರೆ ಬೇರೇನು ಮಾಡಕ್ಕೂ ಟೈಮಿರಲಿಲ್ಲ. ಘಂಟೆ ಒಂಭತ್ತಾಗ್ತಾ ಬಂತು. ಊರಿಗೆ ಬೇರೆ ಹೋಗ್ಬೇಕಲ್ಲಾ.. 🙂 ಬಿಸಿ ಬಿಸಿ ಊಟ ಹೊಟ್ಟೆ ಒಳಗೆ ಇಳೀತಿದ್ದಾಗೆ ಸೋಂಬೇರಿತನ ಆವರಿಸೋಕೆ ಶುರು ಆಯ್ತು. ಇಲ್ಲೇ ಆರಾಮಾಗಿ ಮಲ್ಗಿ ಬಿಡೋಣ ಅನ್ಸೋಕೂ ಶುರು ಆಯ್ತು.. ಹಂಗೇ ಮಲ್ಗಿದ್ದಿರೆ ಬೆಂಗ್ಳೂರ ದಾಖಲೆ ಮಳೆ ಅನ್ನೋದನ್ನ ಸ್ವತಃ ಅನುಭವಿಸೋ ಸುಖ(?) ಇರ್ತಿರ್ಲಿಲ್ಲ(!!) ಅದು ಬಿಡಿ, ಫುಲ್ ರೆಸ್ಟೆಂಬ ವೀಕೆಂಡುಗಳಲ್ಲಿ ಈ ವಿಷಯ ಗೊತ್ತೇ ಆಗ್ತಿರ್ಲಿಲ್ಲ. 
 
ಶುಕ್ರವಾರ ರಾತ್ರೆ ಎರಡು ಘಂಟೆಗಳ ಅವಧಿಯಲ್ಲಿ ಬೆಂಗಳೂರಲ್ಲಿ ಸುರಿದ ಮಳೆ ೧೦ ಸೆಂಟಿಮೀಟರ್(೧೦೦ ಮಿ.ಮೀ). ಇದು ೧೨೨ ವರ್ಷಗಳಲ್ಲೇ ಭಾರೀ ಮಳೆಯಂತೆ. ಇದೇ ೧೨೨ ವರ್ಷಗಳ ಹಿಂದೇ ಜೂನ್ ೧೪ರಲ್ಲಿ ಸುರಿದ ೧೦೧ ಮಿ.ಮೀ ಮಳೆ ಇದುವರೆಗಿನ ಒಮ್ಮೆಗೆ ಬಿದ್ದ ಮಳೆಯ ದಾಖಲೆಯಂತೆ. ರಾತ್ರಿ ಪೂರ್ತಿ ಸುರಿಯುತ್ತಿದ್ದ ಮಳೆಗೆ ಮೊದಲೇ ಕಟ್ಟಿದ ಮೋರಿಗಳಲ್ಲಿ ನೀರು ಸಾಗದೇ ರಸ್ತೆಗಳೇ ಮೋರಿಗಳಾದವು. ಕೆಟ್ಟ ಡ್ರೈನೇಜ್ ಪ್ರಭಾವವೇ ಸುರಿದ ಹುಚ್ಚು ಮಳೆಯ ಪ್ರಭಾವವೋ ಕಣ್ಣು ಹಾಯಿಸಿದತ್ತೆಲ್ಲಾ ನೀರೇ ನೀರು. ರಸ್ತೆಯೋ, ಕೆರೆಯೋ ಗೊತ್ತಾಗ್ತಿರ್ಲಿಲ್ಲ. ಕೆರೆ ಮುಚ್ಚಿ ಅಪಾರ್ಟಮೆಂಟ್ ಕಟ್ಟಿದಾಕ್ಷಣ ಕೆರೆಯತ್ತ ಹರಿಯುತ್ತಿದ್ದ ನೀರಿನ ಸಹಜ ಗತಿ ಬದಲಾಗತ್ತಾ ? ಇನ್ನೂ ಅಲ್ಲಿ ಕೆರೆನೇ ಇದೆ ಅಂದ್ಕೊಂಡು ನುಗ್ಗಿದ್ದ ಅಮಾಯಕ ಮಳೆ(?) ನೀರಿಂದ ಅಪಾರ್ಟುಮೆಂಟುಗಳೊಳಗೆಲ್ಲಾ ನೀರು ನುಗ್ಗಿ ಒಬ್ಬರ ಬಲಿಯೂ ಆಯಿತು 🙁 
 
ಯಾವತ್ತೂ ಯಮವೇಗದಿಂತ ಚಲಿಸುತ್ತಿದ್ದ ವಾಹನಗಳಿಗೆ ನಿನ್ನೆ ಮೊಳಕಾಲುದ್ದ ನೀರಲ್ಲಿ ಮುಂದೆ ಹೋದಲಾದರೆ ತಾನೇ. ಆಮೆಗತಿಯಿಂದ ಸಾಗ್ತಿದ್ದ, ಕೆಲ ಕಡೆ ಎತ್ತ ಸಾಗ್ಬೇಕು ಅಂತನೇ ತಿಳಿದೇ ನಿಲ್ತಿದ್ದ ವೆಹಿಕಲ್ಗಳು.. ಪರಿಣಾಮವೇ ಟ್ರಾಫಿಕ್ ಜಾಂ 🙁 ಬೆಂಗಳೂರಿಗೆ ಬಂದ ಮೇಲೆ ಇದು ಹೊಸತೇನು ಅಲ್ಲ ಅಂತನಿಸಿದರೂ ಅದರ ಅಪರಾವಸ್ಥೆ ನೋಡಿದ್ದು ನೆನ್ನೆಯೇ. ಮಾರತ್ತಳ್ಳಿಯಿಂದ ಮೆಜೆಸ್ಟಿಕ್ಕಿಗೆ 35 ರಿಂದ ೪೦ ನಿಮಿಷ. ರಾತ್ರೆ ಎಂಟೂಕಾಲಿಗೆ ಹೊರಟ ಗೆಳೆಯರೊಬ್ಬರು ನಿನ್ನೆ ಮೆಜೆಸ್ಟಿಕ್ ತಲುಪೋ ಹೊತ್ತಿಗೆ ಹನ್ನೊಂದೂ ಕಾಲು. ಆಮೇಲೆ ಮಳೆಯ ಆರ್ಭಟ ನಿಲ್ಲದಿದ್ದರೂ ಶುರುವಿನಷ್ಟಿಲ್ಲದಿದ್ದರಿಂದ ನಾನು ಸ್ವಲ್ಪ ಬೇಗ ತಲುಪಿದೆ. ಬೇಗ ಅಂದ್ರೆ ಭಾರೀ ಬೇಗ ಅಲ್ಲ ಸ್ವಾಮಿ. ಒಂಭತ್ತೂವರೆಗೆ ಹೊರಟವನು ಮೆಜೆಸ್ಟಿಕ್ ತಲುಪುವಷ್ಟು ಹೊತ್ತಿಗೆ ಹನ್ನೊಂದು ನಲ್ವತ್ತು! ಏನ್ಮಾಡೋಣ. ಇಳಿದು ನಡೆದಾದ್ರೂ ಹೋಗೋಣ ಅಂದ್ರೆ ಮೊಳಕಾಲುದ್ದದ ಮೋರಿ ನೀರು 🙁 . ಬೆಂಗ್ಳೂರು ಏರಿಯಾಗಳು ರಾತ್ರೆ ವೇಳೆ ಸೇಫಲ್ಲ ಗುರು, ಮಳೇಲಿ ರಸ್ತೆ ಯಾವ್ದು, ಮೋರಿ ಯಾವ್ದು ಅಂತ್ಲೂ ಗೊತ್ತಾಗಲ್ಲ. ನಡೀತೀನಿ ಅಂತ ಹೋಗಿ ಯಾವ್ದಾದ್ರೂ ಓಪನ್ ಮ್ಯಾನ್ ಹೋಲಿಗೆ ಕಾಲಾಕಿದ್ರೆ ಏನ್ಮಾಡ್ತೀರಾ ಅಂದ್ರು ಬಸ್ಸಲ್ಲಿರೋ ಬೆಂಗಳೂರಿನವರೊಬ್ರು . ಅವತ್ತು ರಾತ್ರೆ ಬಿ ಎಮ್ಟೀಸಿ ಬಸ್ಸೊಂದು ಮ್ಯಾನ್ ಹೋಲಿಗೆ ಸಿಕ್ಕಾಕೋಂಡಿತ್ತು ಅಂತ ಮಾರ್ನೇ ದಿನ ಪೇಪರಲ್ಲಿ ಓದಿದೆ! ಯಪ್ಪಾ ಅವ್ರ ಮಾತನ್ನು ಕೇಳ್ದೇ ನಾನೇನಾದ್ರೂ ಹೊರಟಿದ್ರೆ ? !!!ಉಪ್, ದೇವ್ರೆ ಕಾಪಾಡ್ದ ಅಂತ ಅಂದ್ಕೊಳ್ತಾ ಇದೀನಿ..
 
ಆಟೋ, ಕಾರುಗಳ ಒಳಗೆ ನೀರು ನುಗ್ತಿದ್ದ ಸಮಯದಲ್ಲಿ ಕೆಲವರಿಗೆ ರವೀಂದ್ರ ಸಿಂಗ್ ಅವರ i too had love story ಯ ಮಳೆಯ ಸನ್ನಿವೇಶ ನೆನಪಾಗಿರ್ಬೋದು. ತೀರಾ ಅಲ್ಲಿಗೆ ಹೊದೋದೇಕೆ. ನಮ್ಮ ಮಲೆನಾಡಿಗೇ ಹೋದ್ರೂ ಮಳೆ ಸಾಮಾನ್ಯ. ಒಂದು ಕಂಬಳಿ ಕೊಪ್ಪೆಯೋ, ಪ್ಲಾಸ್ಟಿಕ್ ಕೊಪ್ಪೆಯೋ ಹೊದ್ದುಕೊಂಡು ಅದೇ ಮಳೆಯಲ್ಲಿ ಅಲೆದಾಡೋ, ದುಡಿಯೋ ಜೀವಗಳಿಗೆ ಒಂದು ದಿನವೇಕೆ ಒಂದು ತಿಂಗಳು ಮಳೆ ಸುರಿದರೂ ಏನೂ ಅನ್ನಿಸೊಲ್ಲ. ಮಳೆ,ಉಂಬುಳ, ಮಳೆಗಾಲದಲ್ಲಿ ಅಲ್ಲಿ ಹಾಕೋ ಹೊಡಸಲು ಎಂಬ ಬೆಂಕಿಯ ಒಲೆಗಳೆಲ್ಲಾ ಅವರಿಗೆ ತೀರಾ ಕಾಮನ್ನು. ಅಲ್ಲಿ ಎಷ್ಟು ಸೆಂಟಿಮೀಟರಾಯ್ತೆಂದು ಅಳೆಯುವವರು ಯಾರೂ ಇಲ್ಲ. ಅವರಿಗೆ ಸೆಂಟಿಮೀಟರೆಂಬುದು ಮಕ್ಕಳ ಸ್ಕೇಲಲ್ಲಿ ಮಾತ್ರ. ಮಳೆಯನ್ನೂ ಯಾರಾದ್ರೂ ಅಳಿತಾರಾ ಅಂತ ಆಶ್ಚರ್ಯ ಪಡೋ, ಬೆಂಗ್ಳೂರಲ್ಲಿ ಭಾರೀ ಮಳೆಯೆಂಬ ಕಾರುಗಳೆಲ್ಲಾ ತೇಲ್ತಿರೋದನ್ನ ನೋಡಿ ಆ ಮಳೆ ಇಲ್ಲಾದ್ರೂ ಬರ್ಬಾರ್ದಿತ್ತಾ , ಅರ್ಧ ಅಷ್ಟೇ ತುಂಬಿರೋ ಎಣ್ಣೆ ಹೊಳೆ ತುಂಬ ಬಾರ್ದಿತ್ತಾ ಅನ್ನೋ ಜೀವಗಳವು. ಎಣ್ಣೆ ಹೊಳೆ ಸೇತುವೆ ಮೇಲೆಲ್ಲಾ ನೀರು ಹರಿದು ಬಸ್ಸು ಹೋಗದೆ ಶಾಲೆಗೆ ರಜಾ ಸಿಕ್ಕೀತೇನೋ ಎಂದು ಬೇಡೋ ಎಳೆ ಜೀವಗಳು 🙂 ಮಳೆ ಬಂದ್ರೆ ತಿಂಗಳುಗಟ್ಟಲೇ ಕರೆಂಟಿಲ್ಲ, ಹಾಳು ಮಳೆ ಎಂಬ ಶಾಪ ಹಾಕೋ ಹೆಂಗಳೆಯರು.. ಈ ಪಾಟೀ ಮಳೆ ಬಂದ್ರೆ ನಮ್ಮನೆ ತ್ವಾಟದಲ್ಲಿ ಒಂದು ಮರನಾದ್ರೂ ಉಳಿಗ ? ಕೊಳೆ ಬಂದು ಹಾಳ್ಬಿದ್ದು ಹೋಗ್ತು. ದರಿದ್ರ ಮಳೆ ಅನ್ನೋ ಕವಳದ ರಾಂಭಟ್ರು… ಇಂತದ್ದೇ ದೃಶ್ಯಗಳು ಘೋರ ಮಳೆ ಅಂದಾಗ ನೆನಪಾಗ್ತಿತ್ತೇ ಹೊರ್ತು ಬಸ್ಸೊಂದರಲ್ಲಿ ಎರಡೂವರೆ ಘಂಟೆ ಕಾಯಬೇಕಾದ ಸನ್ನಿವೇಶ ಕನಸಲ್ಲೂ ಬರ್ತಿರ್ಲಿಲ್ಲ. ಅಂತದ್ದೊಂದಕ್ಕೆ ಸಾಕ್ಷಿಯಾದದ್ದು ನಿನ್ನೆ 🙁
 
ಅಂತೂ ಮೆಜೆಸ್ಟಿಕ್ ಬಂದು ಮುಟ್ಟಿದರೂ ಬಸ್ಸುಗಳು ಹೊರಡ್ತಿರ್ಲಿಲ್ಲ. ಸಾಕ್ಷಾತ್ ಕೆರೆಯಾಗಿತ್ತು ಮೆಜೆಸ್ಟಿಕ್.. ಹತ್ತು ಹತ್ತೂವರೆಗೆ ಹೊರಡಬೇಕಾದ ಬಸ್ಸುಗಳು ಜನರಿಗೆ ಕಾಯುತ್ತಾ ಹನ್ನೆರಡಾದರೂ ಹೊರಟಿರಲಿಲ್ಲ. ಡಿಪೋದಲ್ಲಿ ಗಾಡಿಯೊಳಗೆಲ್ಲಾ ನೀರು ನುಗ್ಗಿ ನೀರಿಳೀಲಿ ಅಂತ ಕಾಯ್ತಾ ಕೂತಿದ್ರಂತೆ.. ಇನ್ನು ಕೆಲೋ ಗಾಡಿಗಳು ನಮ್ಮಂತೆ ಮಧ್ಯ ಮಧ್ಯ ಸಿಕ್ಕಾಕೊಂಡು ಮೆಜೆಸ್ಟಿಕ್ಕಿಗೆ ಬರೋದೇ ಸಾಹಸವಾಯ್ತಂತೆ 🙁 ಕೊನೆಗೂ ಬಸ್ಸೇನೋ ಹೊರಡ್ತು. ಆದ್ರೆ ಹೆಜ್ಜೆ ಹೆಜ್ಜೆಗೂ ಜಂಪುಗಳು. ಬೆಂಗ್ಳೂರಲ್ಲಿರೋ ರಸ್ತೆಗಳಿಗೆಲ್ಲಾ ಇವತ್ತೇ ತೂತು ಬಿದ್ದಿದ್ಯಾ ಅಂತನಿಸ್ತು.. ಪಾಪದ ಡ್ರೈವರ್ರು.. ನೆಲಕಾಣದ ನೀರಲ್ಲಿ , ಮಧ್ಯರಾತ್ರೀಲಿ ಒಂದು ಅಂದಾಜಿನ ಮೇಲೆ ಇದೇ ರೋಡು ಅಂತ ಓಡಿಸ್ತಿರೋದಕ್ಕೆ ಶಭಾಷ್ ಅನ್ಬೇಕು. ಅಂತದ್ರಲ್ಲಿ ಹೊಂಡ, ಸ್ಪೀಡ್ ಬ್ರೇಕರನ್ನೆಲ್ಲಾ ತಪ್ಪಿಸು ಅನ್ನೋಕಾಗತ್ತಾ.. ಅದಲ್ಲದೇ ಮಲ್ಲೇಶ್ವರಂ ಮೇಲೆ ಹೋಗ್ಬೇಕಿತ್ತು, ಅಲ್ಲಿ ಹೋಗ್ಬೇಕಿತ್ತು, ಯಾವಾಗ ಕರ್ಕೊಂಡೋಗ್ತೀಯಪ್ಪಾ ಅನ್ನೋ ಜನಗಳು ಬೇರೆ..ಸಮಯಕ್ಕೆ ಸರಿಯಾಗಿ ಬೈದು ಕಂಡಕ್ಟರಪ್ಪ ಅವ್ರನ್ನೆಲ್ಲಾ ಸುಮ್ಮನಾಗಿಸಿದ ..ಅಂತೂ ನಾಲ್ಕೂವರೆಗೆ ಶಿವಮೊಗ್ಗಕ್ಕೆ ಬರ್ತಿದ್ದ ಬಸ್ಸು ಆರಕ್ಕೆ ಬಂದ. ಬೆಂಗಳೂರಲ್ಲಿ ಶುರುವಾದ ಮಳೆ ಶಿವಮೊಗ್ಗ ಇರ್ಲಿ, ಸಾಗರ ತಲುಪಿದ್ರೂ ಹೊಡಿತಾನೇ ಇತ್ತು..ಈಗ ತಾನೇ ಬಿದ್ದ ಮಳೆಯಿಂದ ಎಲ್ಲೆಡೆ ಚಿಗುರ್ತಿರೋ ಹಸಿರು ಹುಲ್ಲುಗಳು, ಮುತ್ತಂತೆ ಮಳೆಹನಿ ಹೊತ್ತ ಗಿಡಗಳು , ಬೆಳಬೆಳಗ್ಗೆ ಬರ್ತಿರೋ ನನಗೆಂದೇ ಕಾದಂತಿರೋ  ಮೇ ಫ್ಲವರ್ರು , ನಿನ್ನೆ ಎದ್ದು, ಸತ್ತ ಮಳೆ ಹುಳಕ್ಕೆ ಮುತ್ತಿರೋ ಇರುವೆಗಳು.. ವಾ..ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಅಂತಾರಲ್ಲ ಹಾಗೇ ಅನ್ನ ಕೊಡ್ತಿರೋ ಬೆಂದಕಾಳೂರಷ್ಟು ಸೌಕರ್ಯಗಳಿಲ್ಲರೂ ನಮ್ಮೂರು ನಮ್ಮೂರೇ ಅನಿಸಿತು. ಹಿಂದಿನ ರಾತ್ರಿ ಬಿದ್ದ ಭಾರೀ ಮಳೆಯ ಪ್ರಭಾವ ತುಂಬಿ ಹರೀತಿದ್ದ ಕೆಂಪು ಹೊಳೆಯಲ್ಲಿ, ನೀರು ತುಂಬಿದ್ದ ಗದ್ದೆಗಳಲ್ಲಿ ಕಾಣ್ತಾಯಿತ್ತು..ರಾತ್ರಿ ನಿದ್ರೆಗೆಟ್ಟ ಪರಿಣಾಮವೋ ಅಥವಾ ಮಳೆಯಿಂದ ರಸ್ತೆ ಮೋರಿಯಾಗಿ, ಬಸ್ಸೊಳಗೆ ನೀರು ನುಗ್ಗಿದ ಸುದ್ದಿ ಕೇಳಿದರೆ ಮನೆಯವರು ನಕ್ಕಾರೆಂಬ ಗುಮಾನಿಯಿಂದಲೋ ಹಾಗೆಯೇ ನಿದ್ದೆಗೆ ಜಾರಿದೆ 🙂
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
11 years ago

ಅದೃಷ್ಟವಂತರು….ಮಳೆ ಬಂದು ತಂಪಾಗಿದೆ….ಆದರೆ….ವಿಜಾಪೂರ/ಗುಲಬರ್ಗಾದಂತಹ ಖಾಯಂ ಬರಗಾಲದ ಪ್ರದೇಶಗಳಲ್ಲಿ ಇನ್ನೂ ಬೇಸಿಗೆ ಬೀಸಿಲಿನ ಶೆಕೆಯ ಹಿತಾನುಭವ ದಟ್ಟವಾಗಿದೆ….ಒಳ್ಳೇಯ ಲೇಖನ…Congrats…

parthasarathy
11 years ago

ಬೆಂಗಳೂರಿನ ಮಳೆಯ ಕತೆ ಚೆನ್ನಾಗಿದೆ, ಆದರೆ ಅಂದು ಸಂಜೆ ನಾನು ಏಳು ವರೆ ಒಳಗೆ ಮನೆ ಸೇರಿದ್ದೆ  ಸದ್ಯ ಹಾಗಾಗಿ ಹೆಚ್ಚು ಕಷ್ಟ ಅನುಭವಿಸಲಿಲ್ಲ

ಕೆ.ಎಂ.ವಿಶ್ವನಾಥ

ಉತ್ತಮ

Venkatesh
Venkatesh
11 years ago

Superb narration 

sharada moleyar
sharada moleyar
11 years ago

….ಒಳ್ಳೇಯ ಲೇಖನ…
ಬರವಣಿಗೆಯ ಶೈಲಿ ಓದಲು ಚೆನ್ನ

Upendra
Upendra
11 years ago

ವಾಸ್ತವಚಿತ್ರಣ. ನವಿರಾದ ಹಾಸ್ಯಲೇಪನ. ಖುಷಿ ಕೊಡ್ತು…

6
0
Would love your thoughts, please comment.x
()
x