ಮಕ್ಕಳ ಲೋಕದ ಒಗ್ಗಟ್ಟಿನ ಸೂತ್ರ ಹೇಳುವ ‘ಬುದ್ಧ ಹೇಳಿದ ಕಥೆ’ ನಾಟಕ ಪ್ರಯೋಗ.
ಮಗು ಮನಸ್ಸಿನ ಧಾರವಾಡದ ಉದಯೋನ್ಮುಖ ಹವ್ಯಾಸಿ ರಂಗನಟಿ ಶ್ರೀಮತಿ ಗಿರಿಜಾ ಹಿರೇಮಠ ಅವರು ಬಹು ಆಸಕ್ತಿ-ಶ್ರಮವಹಿಸಿ ಎಸ್.ಮಾಲತಿ ವಿರಚಿತ ‘ಬುದ್ಧ ಹೇಳಿದ ಕಥೆ’ ನಾಟಕವನ್ನು ಇತ್ತೀಚೆಗೆ (ಡಿ.27) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪದ ಆಶ್ರಯದಲ್ಲಿ ಸಾಧನಕೇರಿಯ ಆಲೂರ ವೆಂಕಟರಾವ್ ಪದವಿ ಪೂರ್ವ ಮಹಾವಿದ್ಯಾಲಯದ ಮಕ್ಕಳು ಮುದ್ದು-ಮುದ್ದಾಗಿ ಅಭಿನಯಿಸಿ ನೆರದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಹಲವಾರು ಶಾಲಾ-ಕಾಲೇಜುಗಳ ಮಕ್ಕಳು ಕೇವಲ ಶಾಲಾ ಸಮಾರಂಭಗಳಲ್ಲಿ ನಾಟಕ ಅಭಿನಯಿಸಲೇಬೇಕು ಎಂಬ ಹಠದಿಂದ ಎರಡ್ಮೂರು ದಿನಗಳಲ್ಲಿ ನಾಟಕವೊಂದನ್ನು ಅರೆ-ಬರೆ ತಯಾರಿ ಮಾಡಿಕೊಂಡು ಬಂದು ತೋಚಿದಂತೆ, ಗೊಂದಲಗೊಂಡು, ಗಾಬರಿಯಿಂದ ಅಭಿನಯಿಸಿ, ತಮ್ಮವರಿಂದಲೇ ಬಲವಂತದ ಶಾಬಾಷಗಿರಿ ಪಡೆಯುತ್ತಿರುವ ಮಕ್ಕಳ ನಾಟಕ ಪ್ರದರ್ಶನಗಳು ಹೆಚ್ಚಾಗುತ್ತಿರುವ ಇಂದಿನ ದಿನಮಾನದಲ್ಲಿ ತಿಂಗಳಪೂರ್ತಿ ಸಮಾಧಾನದಿಂದ ಮಕ್ಕಳಿಗೆ ನಾಟಕ ಕಲಿಸಿ, ಪ್ರದರ್ಶನ ನೀಡಿದ ನಿರ್ದೇಶಕಿಗೆ ಹ್ಯಾಟ್ಸ್‍ಪ್ ಹೇಳಲೇಬೇಕು.
ಮಕ್ಕಳಿಗಾಗಿ ಬರೆದ ‘ಬುದ್ಧ ಹೇಳಿದ ಕಥೆ’ ನಾಟಕವು ಬುದ್ಧದೇವನ ಅಸಂಖ್ಯೆ ಜಾತಕ ಕಥೆಗಳಲ್ಲಿಯ ಒಂದನ್ನು ಆಧರಿಸಿದ ಈ ನಾಟಕವು ಮಕ್ಕಳಿಗೆ ಮುದನೀಡುವುದರೊಂದಿಗೆ ಬೋದಪ್ರದವಾದ ಸರಳ ಭಾಷೆಯಲ್ಲಿದ್ದು, ರಂಗದಲ್ಲಿ ಸರಳ ಮತ್ತು ಸುಂದರವಾಗಿ ಮಕ್ಕಳ ರಂಗಭೂಮಿಯಲ್ಲಿ ಪ್ರಯೋಗಿಸಲು ಹೆಚ್ಚು ಅನುಕೂಲವಾಗಿದೆ. ಈಗಾಗಲೇ ಈ ನಾಟಕವು ನಾಡಿನಲ್ಲೆಡೆ ವಿವಿಧ ಸಂದರ್ಭದಲ್ಲಿ ಹಲವಾರು ನಿರ್ದೇಶಕರು ವಿಭಿನ್ನವಾಗಿ ರಂಗಸ್ಥಳದಲ್ಲಿ ಕಟ್ಟಿಕೊಟ್ಟಿದ್ದಾರೆ.
ಶ್ರೀಮತಿ ಗಿರಿಜಾ ಹಿರೇಮಠ ನಿರ್ದೇಶನದ ಈ ಪ್ರಯೋಗದಲ್ಲಿ ಮಕ್ಕಳು ಉತ್ಸಾಹದಿಂದ ಪಾತ್ರವಹಿಸಿ ಪ್ರೇಕ್ಷಕರಿಂದ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡರು. ನಾಟಕದ ಆರಂಭದಲ್ಲಿಯೇ ಮಕ್ಕಳು ರಂಗಶಿಸ್ತಿನಿಂದ ಆಗಮಿಸುತ್ತಾ ರಾಜಕುಮಾರ ಸಿದ್ಧಾರ್ಥ ಅರಮನೆ ತೊರೆದು ಮುಕ್ತಿ ಮಾರ್ಗದೆಡೆಗೆ ಸಾಗುತ್ತಾ ಬುದ್ಧದೇವನಾದ ವೃತ್ತಾಂತವನ್ನು ಸರಳ-ಸುಂದರವಾಗಿ ವಿವರಿಸಿದರು. ಅಂಥಹ ದಾರ್ಶನಿಕ ಬುದ್ಧದೇವ ಹೇಳಿದ ಹಲವಾರು ಕಥೆಗಳಲ್ಲಿಯ ಒಂದು ಕಥೆ, ಪ್ರಾಚೀನ ಭಾರತದ ವಾರಣಾಸಿಯ ಪರಿಸರದಲ್ಲಿ ನಡೆಯುವ ಮತ್ತು ರೋಹಂತ ಹೆಸರಿನ ಚುರುಕು ಸ್ವಭಾವದ ಜಿಂಕೆಯ ಕಥೆಯನ್ನು ನಾಟಕದೊಳಗೊಂದು ನಾಟಕವಾಗಿಸಿ ಮಕ್ಕಳು ಆಡಿತೋರಿಸಿದರು. ಹಲವಾರು ತೊಂದರೆಗಳನ್ನು ಚತುರತೆಯಿಂದ ನಿಭಾಯಿಸುತ್ತಾ, ಕಾಡಿನ ಪ್ರಾಣಿಗಳಲ್ಲಿ ಐಕ್ಯತೆಯ ಮಂತ್ರವನ್ನು ಮನದಟ್ಟು ಮಾಡಿಸುತ್ತದೆ. ಆಗಾಗ ಬದಲಾಗುವ ಧೋರಣೆಯುಳ್ಳ ನಾಡನ್ನಾಳುವ ಆಡಳಿತಗಾರರ ದುರಾಶೆಗೆ ಕಾಡು ಮತ್ತು ಕಾಡಿನ ಪ್ರಾಣಿಗಳು ಜೀವಭಯದಿಂದ ತತ್ತರಿಸುವುದನ್ನು ತನ್ನ ಬುದ್ಧಿವಂತಿಕೆಯಿಂದ ತಪ್ಪಿಸುತ್ತದೆ.
ಆಳುವ ರಾಜನ ಮನಪರಿವರ್ತನೆ ಆಗುವಂತೆ ಮಾಡಿ, ಪ್ರಾಣಿಹಿಂಸೆಯ ಬೇಟೆಯಾಡದಂತೆ ರಾಜನಿಂದ ವಚನ ಪಡೆಯುವುದರೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ಸರೋಜಾ, ಸ್ವಾತಿ, ಉಮಾ, ರಾಧಾ, ಬಿಂದು, ದೀಪಾ, ಸಾಹೀನ, ಸಾವಿತ್ರಿ, ಕಾವೇರಿ ಮತ್ತು ಪವಿತ್ರಾ ಮುಂತಾದ ಮಕ್ಕಳು ಸನ್ನಿವೇಶಕ್ಕೆ ತಕ್ಕಂತೆ ನೈಜವಾಗಿ ಅಭಿನಯಿಸಿದರು. ನಿರ್ದೇಶನದೊಂದಿಗೆ ಗಿರಿಜಾ ಹಿರೇಮಠರು ಸರಳ ಸುಂದರವಾಗಿ ಸಿದ್ಧಗೊಳಿಸಿದ್ದ ರಂಗಪರಿಕರಗಳು ಮತ್ತು ವೇಷಭೂಷಣ ಗಮನಸೆಳೆಯಲು ಬೆಳಕಿನ ವಿನ್ಯಾಸ ಮಾಡಿದ ಮಹಾದೇವ ಹಡಪದ ಅವರ ಪ್ರಯತ್ನ ಪೂರಕವಾಗಿದ್ದು ಎದ್ದು ಕಾಣುತ್ತಿತ್ತು. ನಾಟಕದುದ್ದಕ್ಕೂ ಸುಮಧುರ ಸಂಗೀತವೂ ಸಹ ಪ್ರಮುಖ ಪಾತ್ರವೆಂಬಂತೆ ಪ್ರೇಕ್ಷಕರಲ್ಲಿ ಸಪ್ತಸ್ವರದ ಸುಮಧುರ ನಾದದ ಅಲೆಗಳು ಹೊಮ್ಮಿದ್ದು ಉದಯೋನ್ಮುಖ ಕಲಾವಿದ ನಾಗರಾಜ ಸಾಣೆಹಳ್ಳಿಯವರ ಸುಮಧುರ ಕಂಠಸಿರಿಯಿಂದ. ಪ್ರಯತ್ನಿಸಿದರೆ ಇನ್ನೂ ಉತ್ತಮ ಪ್ರಯತ್ನದ ಪ್ರಯೋಗದ ನೀತಿಬೋಧಕ ನಾಟಕ.