ವಿಭಿನ್ನ ಧೃವಗಳಂತೆ ಭಿನ್ನವಾಗಿರುತಿತ್ತು ಆ ಕೊಳ್ಳ ಹಗಲಿರುಳುಗಳ ಹೊತ್ತಿನಲ್ಲಿ. ಬೆಳಗಿನಲ್ಲಿ ಬಿಡುವಿಲ್ಲದಷ್ಟು ಚಟುವಟಿಕೆಯ ಚಿಲಿಪಿಲಿಯಾದರೆ ಸಂಜೆಯೆಂದರದು ಕತ್ತಲ ತವರು . ಕಪ್ಪೆಗಳ ವಟರುವಿಕೆ, ಝೀರುಂಡೆಗಳ ಝೀಂಕಾರವ ಬಿಟ್ಟರೆ ಕೊಳ್ಳದೆಲ್ಲೆಡೆ ಸ್ಮಶಾನ ಮೌನ. ಮನೆಗಳ ಮಧ್ಯದಲ್ಲಿನ ಬುಡ್ಡಿದೀಪಗಳ ಬೆಳಕು ಹಂಚ ಸಂದಿಯಿಂದ ಹೊರಬರಲೋ ಬೇಡವೋ ಎಂಬಂತೆ ಅಲ್ಲಿಲ್ಲಿ ಹಣಿಕಿದ್ದು ಬಿಟ್ಟರೆ ಬೇರೆಲ್ಲೆಡೆ ಕತ್ತಲ ಸಾಮ್ರಾಜ್ಯ. ಚಂದ್ರ ಮೋಡಗಳ ಮರೆಯಿಂದ ಹೊರಬಂದು ಕರುಣೆ ತೋರಿ ಊರಿಗೊಂದಿಷ್ಟು ಬೆಳಗ ತೋರಿದರೆ ರಾತ್ರಿಯಲ್ಲಿ ಬೆಳಕೇ ಹೊರತು ಬೇರೇನೂ ಬೆಳಕಿಲ್ಲವಲ್ಲಿ. ಮನೆಯೊಳಗೆ ಬುಡ್ಡಿದೀಪ, ಲಾಂದ್ರಗಳು ಹೊರಗಡಿಯಿಡಬೇಕಂದ್ರೆ ದೊಂದಿ ಅಥವಾ ಇತ್ತೀಚೆಗೆ ಹೊಸದಾಗಿ ಬಂದಿರೋ ರಾಮಣ್ಣನ ಲ್ಯಾಂಪು !.ಹುಣ್ಣಿಮೆಯ ಆಚೀಚೀನ ದಿನಗಳಲ್ಲಿ ಚಂದ್ರನ ಬೆಳಕ ಹುಡುಕಿ ದಾರಿ ಹುಡುಕಬಹುದಿತ್ತಾದರೂ ಮರಗಳ ಮರೆಯಿದ್ದಲ್ಲಿ ಗಾಢ ಕತ್ತಲು ಕಾಡಿ ದೊಂದಿ ಬೇಕೇ ಬೇಕಾಗುತ್ತಿತ್ತು. ಕತ್ತಲಿಗಲ್ಲದಿದ್ದರೂ ಆಗಾಗ ಎದುರಾಗುತ್ತಿದ್ದ ಕರಡಿಗಳನ್ನ ಹೆದರಿಸಲಾದರೂ !
ಕೊಳ್ಳದಲ್ಲಿದ್ದ ಒಂದೇ ಅಂಗಡಿ ರಾಮಣ್ಣನದು . ಕತ್ತಲಾದಾಗ ಹೊರಬರುತ್ತಿದ್ದ ರಾಮಣ್ಣನ ಚಿಮುಣೆ ಬುಡ್ಡಿ(ಸೀಮೆ ಎಣ್ಣೆ)ದೀಪವೆಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಸಂಜೆಯಾದ ಕೂಡಲೇ ತನ್ನ ವ್ಯಾಪಾರವೂ ಬಂದಾಗುವುದಲ್ಲಾ ಎಂಬ ರಾಮಣ್ಣನ ಬೇಸರವನ್ನು ತಾನು ಹೋಗಲಾಡಿಸೋ ಕತ್ತಲಂತೆಯೇ ದೂರವಟ್ಟಿತ್ತು ಆ ಬುಡ್ಡಿದೀಪ. ಒಂದು ಮೂಲೆಯಲ್ಲಿ ನಗ್ಗಿದ್ರೂ ತನ್ನ ವ್ಯಾಪಾರಕ್ಕೆ ಅನುಕೂಲಕರವಾದ ಆ ದೀಪವೆಂದ್ರೆ ರಾಮಣ್ಣನಿಗೆ ಅಚ್ಚುಮೆಚ್ಚು. ತನ್ನ ವ್ಯಾಪಾರ ಹೆಚ್ಚಾಗಿದ್ದು, ಅಷ್ಟೇಕೆ, ತನ್ನ ಈ ಸ್ಥಿತಿಗೆ ಕಾರಣವೇ ಆ ದೀಪ ಎಂಬ ನಂಬಿಕೆ ರಾಮಣ್ಣನದು . ದಿನಾ ಬೆಳಗ್ಗೆ ಅಂಗಡಿಯ ದೇವರ ಫೋಟೋಗಳನ್ನೆಲ್ಲಾ ಒರೆಸಿದ ನಂತರ ಬುಡ್ಡಿ ದೀಪಕ್ಕೆ ಹಿಡಿದ ಮಸಿಯನ್ನೆಲ್ಲಾ ಒರೆಸಿ, ಎಣ್ಣೆ ತುಂಬಿ ಸಂಜೆಗೆ ಅಣಿಗೊಳಿಸುತ್ತಿದ್ದ. ರಾಮಣ್ಣನ ಈ ವರ್ತನೆಯನ್ನು ನೋಡಿದ ಊರಿನ ಕೆಲವರು ಹಲಬಗೆಯ ಕತೆಗಳನ್ನ ಕಟ್ಟಿದ್ದರು. ಅದೆಂತದೋ ಅಲ್ಲಾವುದ್ದೀನನ ದೀಪದಂತೆ ಈ ದೀಪವಂತೆ. ದಿನಾ ಬೆಳಗ್ಗೆ ರಾಮಣ್ಣ ಆ ದೀಪವನ್ನು ಒರೆಸುವಾಗ ಒಂದು ಭೂತ ಬಂದು ರಾಮಣ್ಣ ಕೇಳಿದ್ದೆಲ್ಲಾ ಕೊಡುತ್ತಂತೆ, ರಾಮಣ್ಣನ ಊಟಕ್ಕೆ ಅದೇ ಕೊಡೋದು ಹೋಗ್ಲಿ, ಅಂಗಡಿಗೆ ಬೇಕಾದ ದಿನಸಿ ತರೋಕೂ ಪೇಟೆಗೆ ಹೋಗಲ್ವಂತೆ ಅವ, ಅವನಿಗೆ ಬೇಕಾದ್ದನ್ನೆಲ್ಲಾ ಆ ಭೂತವೇ ಪುಕ್ಕಟೆ ಕೊಡುತ್ತಂತೆ.ಭೂತವನ್ನು ದುರುಪಯೋಗ ಮಾಡ್ಕೊಂಡು ಹಿಂಗೆ ಪುಕ್ಕಟೆ ಬಂದಿದ್ದನ್ನ ಮಾರಿದ ಪಾಪದಿಂದ್ಲೆ ರಾಮಣ್ಣ ದಿನಾ ದಿನಾ ಏಳಿಗೆ ಹೊಂದ್ತಾ ಇರೋದಂತೆ ಅನ್ನೋ ವದಂತಿಗಳು ಊರಲ್ಲೆಲ್ಲಾ ಹರಿದಾಡುತ್ತಿದ್ದವು ! ಇನ್ನು ಕೆಲವರ ಪ್ರಕಾರ ರಾಮಣ್ಣ ಹಿಂದೆ ಯಾವಾಗ್ಲೋ ಕಾಶಿ ಯಾತ್ರೆಗೆ ಹೋದಾಗ ಜೊತೆಯಾದ ಯಾರೋ ಸಾಧುಗಳ ಸೇವೆ ಮಾಡಿದ್ನಂತೆ. ಆಗ ಅವರು ಖುಷಿಯಾಗಿ, ಉದ್ದಾರವಾಗು ಮಗು ಅಂತ ಮಂತ್ರಿಸಿ ಕೊಟ್ಟ ದೀಪವಂತೆ ಅದು. ಸ್ವಲ್ಪ ಏಳಿಗೆಯಾಗುತ್ತಿದ್ದಂತೇ ಆ ಗುರುಗಳನ್ನೇ ಮರೆತು ಬಿಟ್ಟು ತನ್ನ ಬಿಟ್ಟರೆ ಯಾರೂ ಇಲ್ಲವೆಂದು ಬೀಗತೊಡಗಿದನಂತೆ ರಾಮಣ್ಣ. ಆ ಗುರುಗಳಿಗೆ ತಮ್ಮ ದಿವ್ಯದೃಷ್ಠಿಯಿಂದ ಈ ವಿಷಯ ತಿಳಿದು ಅವರ ಕೋಪದಿಂದ ದಿನೇ ದಿನೇ ದೀಪ ನಗ್ಗಲಾರಂಭಿಸಿತಂತೆ! ಕೊನೆಗೆ ತನ್ನ ತಪ್ಪನ್ನರಿತ ರಾಮಣ್ಣ ಮತ್ತೆ ಗುರುಗಳನ್ನ ಪ್ರಾರ್ಥಿಸಲಾಗಿ ದೀಪದ ನಗ್ಗವುದು ನಿಂತಿತಂತೆ. ಮುಂದೆ ಎಂದಾದರೂ ಜನಕ್ಕೆ ದ್ರೋಹ ಮಾಡೋಕೆ ಮತ್ತೆ ಶುರುಮಾಡಿದ್ರೆ ಆ ದೀಪ ಮತ್ತೆ ನಗ್ಗೋಕೆ ಶುರುವಾಗಿ ಕೊನೆಗೆ ನೀನು ಸರ್ವನಾಶವಾಗ್ತೀಯ ಅಂತ ಎಚ್ಚರಿಸಿದಾರಂತೆ. ಹಂಗಾಗೇ ರಾಮಣ್ಣ ಎಳೇ ಮಕ್ಕಳಿಂದ ಹಿಡಿದು ಹಿರೀಕರ ತನಕ ತನ್ನ ಅಂಗಡಿಗೆ ಬರೋ ಎಲ್ರನ್ನೂ ಒಂದೇ ಸಮನೆ ನೋಡೋದು ಅಂತಿದ್ರು ಇನ್ನು ಕೆಲೋರು. ಹಿಂಗೆ ಹಲವಿಧದ ಕತೆಗಳು ರಾಮಣ್ಣ ಮತ್ತವನ ದೀಪದ ಬಗ್ಗೆ. ಆದ್ರೆ ರಾಮಣ್ಣನ ದೀಪದ ನಂಟಿನ ಕತೆ ಬೇರೆಯೇ ಇತ್ತು. ಯಾರಾದರೂ ಅವನನ್ನೇ ಕೇಳಿದ್ರೆ ಅಥವಾ ಅವನ ಬಾಲ್ಯದ ಕಾಲಕ್ಕೆ ಹೊಕ್ಕು ನೋಡಲು ಪ್ರಯತ್ನಿಸಿದ್ದಿದ್ರೆ ತಿಳಿಯಬಹುದಾಗಿದ್ದ ಕತೆ ಅವರ ಅರಿವ ಪರಿಧಿಯ ಹೊರಗೇ ಇತ್ತು.
ಅಪ್ಪ ಬರುತ್ತಾರೆ, ಬರುತ್ತಾರೆ ಅಂತ ಮಧ್ಯಾಹ್ನದಿಂದಲೂ ಹೇಳುತ್ತಲೇ ಇದ್ದೀಯಲ್ಲಮ್ಮ, ಅಪ್ಪ ಬರೋದು ಯಾವಾಗ ? ಹಸಿವಾಗ್ತಾ ಇದೆ. ಊಟಕ್ಕೆ ಹಾಕಮ್ಮಾ ಅಂತ ಮಗ ಕೇಳ್ತಾ ಇದ್ರೆ ಮೂಲೆಯಲ್ಲಿ ಕೂತಿದ್ದ ತಾಯಿಯ ಕರುಳು ಹಿಂಡಿದಂತಾಗಿ ಆಕೆಯ ಕಣ್ಣಾಲಿಗಳು ತುಂಬಿ ಬಂದಿದ್ದವು. ಬುಡ್ಡಿದೀಪದ ಬೆಳಕಿನಲ್ಲಿ ಓದುತ್ತಿದ್ದ ಮಗನಿಗೆ ಬರಗಾಲ ಬಿದ್ದು , ಫಸಲಿಲ್ಲದೇ ಊಟಕ್ಕೇ ಗತಿಯಿಲ್ಲದಿದ್ರೂ ಕಂದಾಯ ಕೇಳಲು ಬಂದ ಆಂಗ್ಲರು ಮನೆಯಲ್ಲಿ ಉಳಿದ ದುಡ್ಡು, ಬೆಲೆಬಾಳೋದನ್ನೆಲ್ಲಾ ತಗೊಂಡು , ಎಲ್ಲಾ ವಸ್ತುಗಳನ್ನು ಹೊರಹಾಕಿದ್ದರು ಅಂತ ಹೇಗೆ ಹೇಳೋದು ? ಮಗುವಿನ ಬಟ್ಟೆ, ಪುಸ್ತಕಗಳನ್ನಾದ್ರೂ ಬಿಡಿ, ನಮ್ಮದನ್ನ ತಗೊಳ್ಳಿ ಅಂತಅವರ ಕೈಕಾಲಿಗೆ ಬಿದ್ದ ಮೇಲೆ, ಮಗುವಿಗೆ ಓದು ? ! ಹುಹ್. ಈ ನಗ್ಗಿದ ದೀಪ ಸಾಕಲ್ಲಾ ಓದೋಕೆ ? ಅದನ್ನ ನಾವು ಮುಟ್ಟೋಲ್ಲ. ಅದೊಂದನ್ನು ಬಿಟ್ಟು ಉಳಿದೆಲ್ಲಾ ವಸ್ತುಗಳನ್ನು ನಾಳೆ ಬಂದು ಜಪ್ತಿ ಮಾಡ್ತೀವಿ, ಅಂತ ವ್ಯಂಗ್ಯವಾಗಿ ನಕ್ಕರು ಅಂತ ಹೇಗೆ ಹೇಳೋದು ಅಂತ ಅದನ್ನ ಮನಸ್ಸಲ್ಲೇ ನುಂಗಿ ನೋವು ತಿನ್ನುತ್ತಾ ಕುಳಿತಿದ್ದಳಾ ತಾಯಿ. ನಾಳೆ ಜಪ್ತಿಯಾಗುತ್ತೆ ಅಂತಿರೋ ಮನೆಯ ಸಾಮಗ್ರಿಗಳನ್ನ ಯಾರು ತಗೋತಾರೆ ಇವತ್ತು ? ಅದೆಲ್ಲಾ ಸರ್ಕಾರದ ಆಸ್ತಿಯಲ್ಲವೇ ಅಂತ ಆ ಬಾಲಕನ ತಂದೆ ಮನೆಯ ಯಾವ ವಸ್ತುವನ್ನಾದ್ರೂ ಮಾರಿ ಹೊತ್ತಿಗೊಂದಿಷ್ಟು ಅಕ್ಕಿಯನ್ನು ಸಂಪಾದಿಸೋ ಪ್ರಯತ್ನದಲ್ಲಿದ್ದಾಗ ಸಿಕ್ಕೋರೆಲ್ಲಾ ಹೇಳಿದ್ರು. ನಾನೇ ನಿಮ್ಮಂಗಡಿಯ ಜೀತಕ್ಕಿದ್ದುಬಿಡುತ್ತೀನಿ. ಈ ರಾತ್ರಿಗಾಗುವಷ್ಟು ಅಕ್ಕಿ ಕೊಡಿ ಅಂದಾಗ ಹೃದಯ ಕರಗಿದ ಸಜ್ಜನರೊಬ್ಬರು ಈ ಊರು ನಿಮ್ಮಂತ ಒಳ್ಳೆಯವರಿಗಲ್ಲ ಅಣ್ಣ, ಈ ರಾತ್ರೆ ಊಟ ಮಾಡಿ ಈ ಊರೇ ಬಿಟ್ಟು ಬೇರೆಲ್ಲಾದರೂ ಹೋಗಿ ಬಿಡಿ. ಆ ದರಿದ್ರ ಆಂಗ್ಲರಿಂದ ದೂರ ದೂರ ಅಂತ ಒಂದಿಷ್ಟು ಅಕ್ಕಿ, ಬೇಳೆ ಕೊಟ್ಟಿದ್ದರವರು. ನಾವು ಅಜ್ಜಿ ಮನೆಗೆ ಟಾಟಾ ಹೋಗೋಣ ಬಾ ಅಂತ ಊಟವಾದ ಮೇಲೆ ತಮ್ಮ ಬಟ್ಟೆಗಳ ಜೊತೆಗೆ ಹುಡುಗನ ಬಟ್ಟೆಗಳನ್ನೂ ಒಂದು ಸಣ್ಣ ಚೀಲಕ್ಕೆ ತುಂಬಿದ್ದರು ಆ ಹುಡುಗನ ತಂದೆ ತಾಯಿ. ಟಾಟಾವಾ ? ಹಂಗಾದ್ರೆ ನಂಗೆ ಓದೋಕೆ ಈ ದೀಪ ಮತ್ತೆ ಪುಸ್ತಕಗಳೂ ಬೇಕು ಅಂತ ಆ ಹುಡುಗ ಅವುಗಳನ್ನು ತನ್ನ ಕೈಯಲ್ಲಿ ತಗೊಂಡಾಗ ಆ ಬಾಲಕ ರಾಮಣ್ಣನ ತಾಯಿಯ ಕಣ್ಣಾಲಿಗಳು ಮತ್ತೆ ತುಂಬಿ ಬಂದವು.
ಹೊಸ ಊರು, ಹೊಸ ಜನ. ಅಪ್ಪನಿಗೊಂದು ದಿನಗೂಲಿ ಸಿಕ್ಕಿದ್ದರಿಂದ ಎರಡು ಹೊತ್ತಿನ ಕೂಳು ದಕ್ಕತೊಡಗಿತ್ತು ಮುಂಚಿನಂತೆ. ಅಮ್ಮ ಅಕ್ಕಪಕ್ಕದವರ ಮನೆಯ ಬಟ್ಟೆಗಳನ್ನು ಹೊಲಿಯಲಾರಂಭಿಸಿದ್ದರಿಂದ ಮಗುವಿನ ಓದಿಗೆ ಮತ್ತು ಅವನ ಭವಿಷ್ಯಕ್ಕೆ ಒಂದಿಷ್ಟು ದುಡ್ಡು ಕೂಡಿಡಲಾರಂಭಿಸಿದರು. ಮಗುವಿನ ಓದೂ ಮುಂದುವರೆದಿತ್ತು ಅವನ ಮೆಚ್ಚಿನ ಬುಡ್ಡಿ ದೀಪದ ಬೆಳಕಿನಲ್ಲಿ. ಒಂದು ಹಂತದ ಓದಿನ ನಂತರ ಮುಂದೆ ಓದಿಸಲು ಶಕ್ತಿಯಿಲ್ಲವಪ್ಪಾ ಎಂದರು ತಂದೆ. ಯಾರಿಗಾದ್ರೂ ಕೈಚಾಚಿದ್ರೆ ದುಡ್ಡು ಸಿಕ್ಕಿರುತಿತ್ತೇನೋ ? ಸರ್ಕಾರವೂ ವಿದಾರ್ಥಿವೇತನ ಅಂತ ಕೊಟ್ಟಿರುತ್ತಿತ್ತೇನೋ. ಆದ್ರೆ ತನ್ನ ಮನೆಯನ್ನೇ ಜಪ್ತಿ ಮಾಡಿದ ದರಿದ್ರ ಸರ್ಕಾರದ ಬಗ್ಗೆ ತನ್ನ ತಂದೆ ತಾಯಿಗಳಿಂದ ಕೇಳಿದ್ದ ಅವನಿಗೆ ಸರ್ಕಾರ ಕೊಡಬಹುದಾದ ದುಡ್ಡಿನಲ್ಲಿ ಇಂತಹ ಚಿಂದಿಯಾದ ಅದೆಷ್ಟು ಸಂಸಾರಗಳಿವೆಯೋ ಅಂತ ಹೇಸಿಗೆಯಾಯಿತು. ಮುಂದೆ ಓದಿ ಮತ್ತೆ ಅವರ ಕೈಕೆಳಗೇ ಕೆಲಸ ಮಾಡೋ ಬದಲು ನಾನೇ ಸ್ವತಂತ್ರವಾಗಿ ಏನಾದ್ರೂ ಕೆಲಸ ಮಾಡುತ್ತೇನೆ ಅಂದ. ಸ್ವತಂತ್ರವಾದ ಕೆಲಸ ? ಏನಪ್ಪಾ ಅದು ಅಂತ ಅಚ್ಚರಿಪಟ್ಟ ಅಪ್ಪ ಅಮ್ಮಂದಿರಿಗೆ ನಾನೊಂದು ಅಂಗಡಿ ತೆರೆಯುತ್ತೇನೆ ಅಂದಿದ್ದ ರಾಮಣ್ಣ. ಈ ಆಂಗ್ಲರಿಗೆ ನಮ್ಮ ಜನ ಉದ್ದಾರವಾಗೋದು ಇಷ್ಟ ಇಲ್ಲ. ಇಲ್ಲಿ ಕೆಲಸ ಮಾಡಿ ಸಂಪಾದಿಸಿದ ದುಡ್ಡನ್ನೆಲ್ಲಾ ಅವರಿಗೆ ಕಪ್ಪ ಕೊಡೋ ಬದ್ಲು ನಾನು ಯಾವುದಾದ್ರೂ ಹಳ್ಳಿ ಮೂಲೆಗೆ,ಅವರ ಕಾಟವಿಲ್ಲದೆಡೆಗೆ ಹೋಗ್ಬಿಡ್ತೀನಿ. ಆಗಾಗ ಬಂದು ನಿಮ್ಮನ್ನ ನೋಡ್ತಿರ್ತೀನಿ. ನನ್ನ ಅಂಗಡಿ ಚೆನ್ನಾಗಾದ್ರೆ ನಿಮ್ಮನ್ನೂ ಅಲ್ಲಿಗೆ ಕರೆಸ್ಕೋತೀನಿ ಅಂದಾಗ ತನ್ನ ಮಗನ ಪ್ರೌಢಿಮೆಯ ನೋಡಿ ತಂದೆಗೆ ಹೆಮ್ಮೆಯಾದರೆ ತಾಯಿಯ ಕಣ್ಣುಗಳಲ್ಲಿ ದೂರಾಗೋ ನೋವು. ಎರಡು ದಿನದ ನಂತರ ಅಂಗಡಿ ಮಾಡ್ತೀನಿ ಅಂತೀಯ , ನಿನ್ನ ಭವಿಷ್ಯಕ್ಕೆ ಅಂತ ಇಟ್ಟ ದುಡ್ಡಾದ್ರೂ ತಗೋ ಅಂದರೆ ಅದೇನೂ ಬೇಡ ನನಗೆ ನನ್ನ ಬುಡ್ಡಿದೀಪವೊಂದೇ ಸಾಕು ಎಂದಿದ್ದ. ಆದರೂ ಒತ್ತಾಯಿಸಿ ಕೊಟ್ಟಿದ್ದ ದುಡ್ಡು ಪಡೆದು ಮನೆಯಿಂದ ಹೊರಬಿದ್ದ ರಾಮನೀಗ ಕತ್ತಲ ಕೊಳ್ಳದ ರಾಮಣ್ಣ. ಊರಲ್ಲೊಂದು ಅಂಗಡಿ ತೆಗೀತೀನಿ, ಜಾಗ ಕೊಡಿ, ನನ್ನ ದುಡ್ಡನ್ನೆಲ್ಲಾ ತಗೋಳಿ ಬೇಕಾದ್ರೆ ಈ ಬುಡ್ಡಿದೀಪವನ್ನೂ ಅಂದಾಗ ಆ ನಗ್ಗಿದ ದೀಪವನ್ನು ನೋಡಿದ ಯಾರೋ, ಇವನು ಒಳ್ಳೆಯವನಂತೆ ಕಾಣಿಸುತ್ತದೆ ಅಂತ ಸಹಾಯ ಮಾಡಿದ್ರು. ಆ ಸಹಾಯ ಇಂದೂ ಮರೆಯದಂತೆ ಊರೊಳಗೆ ಊರವನೇ ಆದಂತೆ ಬೆರೆಯುತ್ತಿದ್ದಾನವ. ತಾನು ಸ್ವತಃ ಬಳಸದಿದ್ರೂ ರಂಗಣ್ಣನ ಅಂಗಡಿಯಲ್ಲಿ ಬಂದ ಲಾಂಧ್ರ, ದೀಪಗಳೆಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಅನಕ್ಷರಸ್ಥರೇ ತುಂಬಿ ಹೋಗಿರೋ ಆ ಕೊಳ್ಳದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಅಂತ ಹೇಳೋ ರಾಮಣ್ಣನ ಬುಡ್ಡಿದೀಪದ ಬೆಳಕೇ ಅನೇಕರ ಪಾಲಿಗೆ ಅಕ್ಷರದೀವಿಗೆ. ಸಂಜೆಯ ಅಂಗಡಿ ಕೆಲಸಗಳ ಮಧ್ಯೆಯೇ ಅಲ್ಲಿಗೆ ಬರೋ ಊರವರಿಗೆ ಅಕ್ಷರ ಕಲಿಸೋ ಪ್ರಯತ್ನ ಮಾಡೋ ರಾಮಣ್ಣ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ವರ್ಷಗಳ ಹಿಂದೆ ಒಂದು ಬಟ್ಟೆ ಚೀಲ ಹೊತ್ತು ಬಂದು ಒಂದು ಸಣ್ಣ ಸೋಂಗೇ ಅಂಗಡಿ ಕಟ್ಟಿದ್ದ ರಾಮಣ್ಣ ಈಗ ಹಂಚಿನ ಮನೆಯ ಮಟ್ಟಕ್ಕೆ ಬಂದಿದ್ದನ್ನು ಅವರು ಹೆಮ್ಮೆಯಿಂದ್ಲೇ ತಮ್ಮ ಮಕ್ಕಳಿಗೆ ತೋರಿಸ್ತಾರೆ. ಆಗಾಗ ರಾಮಣ್ಣ ಎಲ್ಲಿಗೆ ಹೋಗುತ್ತಾನೆ, ಈಗ ಮನೆಗೆ ಸುಣ್ಣ ಬಣ್ಣ ಯಾಕೆ ಹೊಡೆಸುತ್ತಿದ್ದಾನೆ ಎಂಬ ಅವರ ಸಂದೇಹಕ್ಕೆ ರಾಮಣ್ಣ, ಅವನ ಬುಡ್ಡಿ ದೀಪ ಅಥವಾ ಕೆಲ ದಿನಗಳಲ್ಲಿ ಅಲ್ಲಿಗೆ ಬರಲಿರೋ ಅವನ ತಂದೆ ತಾಯಿಯರೇ ಉತ್ತರಿಸಬೇಕು.
*****
Prashasthi 🙂 ….. buddi deepadondige raamannana kathey saraagavaagi saagithu. Ishtavaaythu baraha 🙂
ಹೆ ಹೆ.. ಧನ್ಯವಾದಗಳು ರೂಪಕ್ಕ..
Very nice brother 🙂
Thanks a lot Venkatesh 🙂