ಬೆಂಗಳೂರಿನಲ್ಲಿ ಬದುಕುವುದು ಕಲಿತು ನಾಲ್ಕೈದು ವರ್ಷ ಆಗಿರಬಹುದು. ಆದರೆ ನನ್ನನ್ನು ನಾನು ಇಷ್ಟೊಂದು ಕಳೆದುಕೊಂಡಿದ್ದು ಇದೇ ಮೊದಲು. ಹಾಡು, ಕುಣಿತ, ಎಲ್ಲರನ್ನೂ ಆಕರ್ಷಿಸುತ್ತಿದ್ದ ನನ್ನ ತಮಟೆ ಸದ್ದು.. ಅವ್ಯಾವೂ ಈಗಿಲ್ಲ. ನಾನು, ನನ್ನ ಅಸ್ಮಿತೆ ಬೇರೆಬೇರೆಯಂತೆ ಅನಿಸುತ್ತಿದೆ. ನೋಡಿ, ಆಗ ಜೊತೆಗಿದ್ದ ಗೆಳೆಯ-ಗೆಳತಿಯರು ಈಗ ದೊಡ್ಡ ಸಾಧಕರಂತೆ, ಪತ್ರಕರ್ತರಂತೆ, ಅಥವಾ ತುಂಬಾ ಸುಖೀ ಜೀವಿಗಳಂತೆ ಕಾಣುತ್ತಾರೆ. ನಾನೂ ಅವರನ್ನೆಲ್ಲಾ ಸಂಪರ್ಕಿಸುವುದೇ ಕಡಿಮೆ. ಬಹುಶಃ ನಾನೀನ ಅವರಿಗೆ ತುಂಬಾ ದೂರದ ಗೆಳತಿಯಾಗಿದ್ದಿರಬಹುದು. ಅಥವಾ ನನಗೇ ನಾನೇ ಹಾಗಂದುಕೊಂಡಿರಬಹುದು! ಒಂದಿಷ್ಟು ಕಾರ್ಯಕ್ರಮಗಳಲ್ಲಿ ಅಲ್ಲಲ್ಲಿ ಸಿಗುತ್ತಿದ್ದವರು ಈಗ ಅಪರಿಚಿತರಂತೆ ಕಾಣುತ್ತಾರೆ, ಬೆಂಗಳೂರಿನಲ್ಲಿ ಅಡ್ಡಾಡುತ್ತಿದ್ದ ಕೆಲವು ಸ್ಥಳಗಳ ಅಡ್ರೆಸ್ ಕೂಡ ಮರೆತಂತಾಗಿದೆ. ನನಗೆ ಕ್ರಾಂತಿಕಾರಿ ಬದುಕು ಕಲಿಸಿಕೊಟ್ಟ ‘ಸಂವಾದ’ವನ್ನೂ ನೆನೆಸಿಕೊಳ್ಳಲಾಗುತ್ತಿಲ್ಲ. ಆಪ್ತವಾಗಿ ಅಪ್ಪುತ್ತಿದ್ದ ಕೆಲವರ ತೋಳಿಗೂ ನಾನು ಎಟಕುತ್ತಿಲ್ಲ. ನಾನೀಗ ಬುದ್ಧಿವಂತೆ ಎಂದುಕೊಳ್ಳಲು ಕಾರಣಗಳೇ ಇಲ್ಲವಲ್ಲ ಅನಿಸುತ್ತಿದೆ. ನಾನೀಗ ಓದುತ್ತಿಲ್ಲ, ಬರೆಯುತ್ತಿಲ್ಲ, ತಿರುಗುತ್ತಿಲ್ಲ!!
ಹೌದು, ನಾನಿಷ್ಟು ವಿಚಲಿತಳಾಗಿದ್ದು ಇದೇನು ಮೊದಲಲ್ಲ. ಈ ಐದಾರು ವರ್ಷ ಸಂಪೂರ್ಣ ಅವನನ್ನು ಧ್ಯಾನಿಸಿದ್ದೇ ಆಗಿಹೋಯ್ತು. ನನ್ನೆಲ್ಲತನವನ್ನೂ ಗೌರವಿಸುತ್ತಲೇ ಅವನು ಇಲ್ಲಿವರೆಗೆ ನಡೆಸಿದ್ದಾನೆ. ಯಾವ್ಯಾವುದೋ ಕಾರಣಗಳಿಗೆ ನಾನೇ ನನ್ನ ಸುತ್ತ ಗೋಡೆ ಕಟ್ಟಿಕೊಂಡಿದ್ದೇ ಇಷ್ಟು ಪಶ್ಚಾತ್ತಾಪಕ್ಕೆ ಕಾರಣ. ಉಳಿದಂತೆ ಎಲ್ಲವೂ ಸರಿಯಿದೆ. ನಾನೂ, ನನ್ನ ಬದುಕೂ ಸಹ.
ಅಂದುಕೊಂಡಂತೆ ಮದುವೆಯಾಗಿದ್ದೇವೆ. ಮನೆಯವರೊಂದಿಗೆ ಒಂದಿಷ್ಟು ಮನಸ್ತಾಪ, ಪರೋಕ್ಷವಾದ ನಿರೀಕ್ಷೆಗಳು, ಮದುವೆ ಇನ್ನೂ ಚೆನ್ನಾಗಿ ಮಾಡಿಕೊಡಬಹುದಿತ್ತು ಅನ್ನುವ ಯಾಱರದೋ ಮಾತುಗಳು ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೇವೆ. ಅಷ್ಟೇ ಅಲ್ಲ ನೀವಿದನ್ನೂ ಗಮನಿಸಲೇಬೇಕು; ಮದುವೆಯಾದ ನಂತರ ನಾನೊಂದಿಷ್ಟು ಬೆಳ್ಳಗಾಗಿದ್ದೇನೆ!! ಸರಳತೆಯೆಂದರೆ ಬಡತನ ಎಂದು ವ್ಯಾಖ್ಯಾನಿಸುವವರ ಮಧ್ಯೆ ನಾನು ‘ಬಡವಿ’ಯಾಗಿಯೇ ಇದ್ದೇನೆ, ಇರುತ್ತೇನೆ. ಜೀನ್ಸ್, ಟೀ ಷರ್ಟ್ಗಳು ಮೈಗೇರುತ್ತಲೇ ಇಲ್ಲ. ಪಾಪ ನಾನು ಯಾರನ್ನೂ ದೂರುವುದಿಲ್ಲ. ನಾನು ಸ್ವತಂತ್ರವಾಗಿ ಬದುಕುವುದು, ಮನಬಿಚ್ಚಿ ಇದ್ದುದ್ದನ್ನು ಮಾತಾಡುವುದು ಮತ್ತೊಬ್ಬರ ಗೌರವಕ್ಕೆ ಧಕ್ಕೆ ಉಂಟುಮಾಡುವುದಾದರೆ ನನ್ನ ಮೌನವನ್ನು ಅವರಿಗೆ ಸಮರ್ಪಿಸುತ್ತೇನೆ!!
ಇನ್ನು ನಾನು ಹೆಚ್ಚು ಪ್ರೀತಿಸಿದ ಅವನನ್ನು ಪಡೆದದ್ದು ಸಾಧನೆಯೆಂದು ಅನ್ನಿಸುವುದೇ ಇಲ್ಲ. ಯಾಕೆಂದರೆ ನಮ್ಮ ಬದುಕಿನ ಆಯ್ಕೆ ನಮಗೇ ಬಿಟ್ಟಂತೆ ಬೆಳೆಸಿದ್ದು ನನ್ನ ಮನೆ ವಾತಾವರಣ. ಹಾಗಾಗಿ ನಮ್ಮ ಮದುವೆಗೆ ವಿರೋಧವೇ ಇರಲಿಲ್ಲ. ನಮ್ಮನೆಯಲ್ಲಿ ನಿರೀಕ್ಷಿಸಿದಷ್ಟು ಸರಳವಾಗಿಯೂ ಮದುವೆಯಾಗಲು ಆಗದೆ ಅವರೆಲ್ಲರಿಗೂ ತೊಂದರೆ ಕೊಟ್ಟಿದ್ದೇನೆ. ‘ರಿಜಿಸ್ಟರ್ ಮ್ಯಾರೇಜ್ ಆಗೋನು ಬಂದು ಮದ್ವೆ ಮಾಡ್ಕೊಂಡೋಗ್ಲಿ’.. ನಮ್ಮಪ್ಪ ಯಾವಾಗಲೂ ಹೇಳುತ್ತಿದ್ದ ಮಾತಿದು. ದುರಾದೃಷ್ಟ! ಆ ಅವಕಾಶ ನಾನು ಬಳಸಿಕೊಳ್ಳಲೇ ಇಲ್ಲ.
ಈ ನಾಲ್ಕೈದು ತಿಂಗಳ ಪಯಣದಲ್ಲಿ ನಾವಿಬ್ಬರೂ ತುಂಬಾ ಒತ್ತಡದಲ್ಲೇ ಇದ್ದೇವೆ. ಅಂದುಕೊಂಡಂತೆಯೇ ಬದುಕುವುದು ನಮ್ಮಿಬ್ಬರ ಸವಾಲೂ ಕೂಡ. ಹಾಗಾಗಿಯೇ ಮದುವೆಯಾದ ನಂತರ ವೃತ್ತಿ ಮುಂದುವರಿಸಿ ಬಾಡಿಗೆ ಮನೆ ಆಶ್ರಯಿಸಿದ್ದೇವೆ. ಇಷ್ಟುದ್ದ ಪೀಠಿಕೆ ಹಾಕುವುದಕ್ಕೂ ಕಾರಣವಿದೆ. ಆಗಾಗ ಸಿಗುತ್ತಿದ್ದುದ್ದು, ಕೈಕೈ ಹಿಡಿದು ಸುತ್ತಾಡುತ್ತಿದ್ದದ್ದು, ಬೇಕನಿಸಿದ್ದನ್ನು ಸಾಕೆನಿಸುವಷ್ಟು ತಿನ್ನುತ್ತಿದ್ದಿದ್ದು, ಭಾವುಕರಾಗಿ ಆಲಿಂಗಿಸುತ್ತಿದ್ದಿದ್ದು ಇವೆಲ್ಲಕ್ಕೂ ಈಗ ಬ್ರೇಕ್..!
ಈಗ ಅವನ ಬಳಿ ಉದ್ದುದ್ದ ಬಯಕೆಗಳನ್ನಿಟ್ಟು ಕಾಡುವುದನ್ನೂ-ಬೇಡುವುದನ್ನೂ ಬಿಟ್ಟಿದ್ದೇನೆ. ಈಗೀಗ ಗೋಡೆಯ ಮಳೆಗಳ ಸುತ್ತಲಿನ ಜಾಡು ಕಟ್ಟುವ ಸದ್ದನ್ನೂ ಆಲಿಸುವಷ್ಟು ವ್ಯವದಾನ ಬಂದಿದೆ. ನನ್ನ ಇಡೀ ದಿನದ ಮೌನವನ್ನು ಅವನಿಗೆ ಅರ್ಪಿಸುತ್ತಲೇ ಮೊಬೈಲಿನ ಕಾಲ್ ಲಿಸ್ಟ್ನಲ್ಲಿ ಬೆರಳಾಡಿಸುವುದನ್ನೂ ಬಿಟ್ಟಿದ್ದೇನೆ. ನನ್ನ ಪ್ರೇಮದ HIS-ಸ್ಟೋರಿ ನಾನೇ ಬರೆದಿಟ್ಟುಕೊಂಡ ಡೈರಿ ಸಾಲುಗಳಂತಾಗಿವೆ. ನೋಡಿ, ನಾನೀಗ ಯಾರನ್ನೂ ಸಂಪರ್ಕಿಸುತ್ತಿಲ್ಲ. ಮೊಬೈಲಿಗೆ ಕಟ್ಟುವ ಇಎಂಐಗೂ ನ್ಯಾಯ ಸಿಗುತ್ತಿಲ್ಲ. ವಾಟ್ಸಾಪ್, ಫೇಸ್ಬುಕ್ ಎಂದರೆ ವಾಕರಿಕೆ. ಯಾಕೆಂದರೆ ಅವನು ಅಲ್ಲೆಲ್ಲೂ ಇರುವುದೇ ಇಲ್ಲ. ಹಣ ಮಾಡುವುದೇ ಅಂತಿಮ ಗುರಿಯೆಂದು ವಾದಿಸುವ ಅವನು, ನನ್ನತ್ತ ಒಂಚೂರು ನೋಡು ಎನ್ನುವ ನಾನು. ಇದೇ ಬೇಸರ; ಸಮಯವಿದ್ದಾಗಲೂ ಸಂಭ್ರಮಿಸಲು ಕಾರಣವಿಲ್ಲದಂತಾಗಿದೆ. ಕಣ್ಣಲ್ಲಿ ಕಣ್ಣಿಟ್ಟು ಏನನ್ನೋ ಹೇಳಬೇಕೆನ್ನುವಾಗ ಅವನಿಗೆ ಕೆಲಸಕ್ಕೆ ಅವಸರ. ರಾತ್ರಿ ಎದೆಯೊತ್ತಿ ಪುಳಕಗೊಳ್ಳುವಾಗ ನಿದ್ದೆಯ ಮಂಪರು. ನಮಗಾಗಿ ಸಮಯ ಹೊಂದಿಸಿಕೊಳ್ಳಲಾಗದಿರುವುದು ಯಾರ ತಪ್ಪು ಎಂದು ಯೋಚಿಸುವಾಗ ಇಬ್ಬರೂ ಅಪರಾಧಿಗಳೇ..!?
ಉಳಿದಂತೆ ಇರುವುದಿಷ್ಟೇ, ಆಗಾಗ ಕಣ್ಣಮುಂದೆ ಬರುವ ಅವನ ಅನನ್ಯ ಮೂರ್ತಿಯನ್ನು ತೆಳುವಾಗಿ ಅಪ್ಪಳಿಸುವಷ್ಟು ಬಿಡುವು. ಏಕಾಂಗಿಯಾಗಿ ಮುಸಿಮುಸಿ ಅಳುವಷ್ಟು ಒಲವು.
– ಮಂಗಳ ರವಿಕುಮಾರ್
ನಾನು ಸ್ವತಂತ್ರವಾಗಿ ಬದುಕುವುದು, ಮನಬಿಚ್ಚಿ ಇದ್ದುದ್ದನ್ನು ಮಾತಾಡುವುದು ಮತ್ತೊಬ್ಬರ ಗೌರವಕ್ಕೆ ಧಕ್ಕೆ ಉಂಟುಮಾಡುವುದಾದರೆ ನನ್ನ ಮೌನವನ್ನು ಅವರಿಗೆ ಸಮರ್ಪಿಸುತ್ತೇನೆ! ಅಬ್ಬಾ ಈ ಸಾಲುಗಳು ಬಹಳ ಆಪ್ತ ಅನ್ನಿಸಿದ್ವು.ಅಮ್ಮ ನೆನ್ನೆ ರಾತ್ರಿ ಹೇಳಿದ್ಲು ಈ ಮಾತನ್ನು ಈ ಸಂಜೆ ನಿಮ್ಮ ಲೇಖನದಿ ಓದುತ್ತಿದ್ದೇನೆ.ಮದುವೆ ಅನ್ನೋದು ಜವಬ್ಧಾರಿ ಹೆಚ್ಚಿಸುತ್ತೆ ಅನ್ನೊ ವಾದವನ್ನು ಬಹಳ ಕಡಿಮೆ ವಯಸಲ್ಲೆ ಮನೆಯ ಜವಬ್ಧಾರಿ(ನಾ ಹೊತ್ತದ್ದು ಜವಬ್ಧಾರಿಯೆ ಅಲ್ಲ ಅನ್ನೋದು ಈಗೀಗ ಅರ್ಥವಾಗಿದೆ) ಹೊತ್ತ ಒಪ್ಪದ ನಾನು ಈಗೀಗ ನಿಜವಾದ ಜವಬ್ಧಾರಿ ಯಾವುದು ಎಂಬುದು ಅರ್ಥ ಮಾಡಿಕೊಳ್ಳುತ್ತಿದ್ದೇನೆ.ಫ಼ೈನಲಿ ಸಂಬಂಜ ಅನ್ನೋದು ದೊಡ್ಡದು ಕಾಣಾ😍 ಲವ್ಡಿಟ್ ಮಂಗಳಿ…