ಬೀದಿ ನಾಯಿಗಳಾದ ನಮಗೆ ಮನುಷ್ಯರೆಂದು ಕರೆಸಿಕೊಳ್ಳುವ ನಿಮ್ಮ ಮೇಲೆ ಮುನಿಸಿದೆ. ನಾವೇನು ನಮಗೆ ವಸತಿ ಸೌಲಭ್ಯ ಕಲ್ಪಿಸಿ ಎಂದು ಎಂದಾದರೂ ಬೇಡಿಕೆ ಮುಂದಿಟ್ಟಿದ್ದೇವೆಯೇ? ಬೀದಿಯನ್ನೇ ಸರ್ವಸ್ವವೆಂದು ಭಾವಿಸಿ ನಮ್ಮ ಮುತ್ತಾತನ ಕಾಲದಿಂದಲೂ ಅಲ್ಲೇ ಜೀವಿಸುತ್ತಿದ್ದೇವೆ.
ಇತ್ತೀಚಿನ ದಿನಗಳಲ್ಲಿ ನಮ್ಮ ಮೇಲೆ ನೀವು ಹೊರಿಸುತ್ತಿರುವ ಗಂಭೀರ ಆಪಾದನೆ ಎಂದರೆ, ನಾವು ಮನುಷ್ಯರ ಮೇಲೆ ದಾಳಿ ಮಾಡುತ್ತೇವೆನ್ನುವುದು. ಯಾರೋ ನಮ್ಮ ಕಡೆಯ ಕೆಲವರು ಮಾಡುವ ದುಷ್ಕøತ್ಯಕ್ಕೆ ನಮ್ಮೆಲ್ಲರನ್ನೂ ಬಲಿಪಶುಗಳನ್ನಾಗಿ ಮಾಡುವುದು ಎಷ್ಟು ಸರಿ? ಈಗ ನೀವೆ ಆಲೋಚಿಸಿ, ನಿಮ್ಮ ಕುಲಕ್ಕೆ ಸೇರಿದ ಉಮೇಶ್ ರೆಡ್ಡಿ, ಚಾಲ್ರ್ಸ್ ಶೋಭರಾಜ್‍ರಂತಹವರು ಮಾಡುವ ಕೃತ್ಯಗಳಿಗೆ ಇಡೀ ಮಾನವ ಕುಲವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಕ್ಕೆ ಸಾಧ್ಯವೇ? ಹಾಗೆ ನಮ್ಮಲ್ಲೂ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ನೀಡಿ.
ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ನಮ್ಮ ಸಂತತಿಯನ್ನೇ ವಿನಾಶದಂಚಿಗೆ ದೂಡುತ್ತಿರುವುದು ತಪ್ಪಲ್ಲವೇ? ನಮ್ಮ ವಂಶ ಬೆಳೆಸಬೇಕೆಂಬ ಬಯಕೆ ನಮ್ಮಲ್ಲೂ ಇರುತ್ತದೆಂಬುದು ನಿಮಗೇಕೆ ಅರ್ಥವಾಗುವುದಿಲ್ಲ.
ನಮ್ಮ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಕೌಬಾಯ್ ಸ್ವಾಮಿಯಂತೆಯೇ ಬೌ ಬೌ ಸ್ವಾಮಿಗಳು ಮತ್ತವರ ಸಂಗಡಿಗರಾದ ಪ್ರಾಣಿ ಪ್ರಿಯ ಸಂಘಟನೆಗಳ ಕಾರ್ಯಕರ್ತರು ದನಿ ಎತ್ತಿದರೆ ನೀವು ಅಪಹಾಸ್ಯ ಮಾಡುವುದು ಕ್ರೌರ್ಯದ ಪರಮಾವಧಿಯಲ್ಲವೇ?
ನಾನ್ ವೆಜ್ ಹೋಟೆಲ್ ನಡೆಸುವ ಕೆಲವರು ನಮ್ಮನ್ನು ಕಿಡ್ನಾಪ್ ಮಾಡಿ, ಕೊಂದು ನಂತರ ಇನ್ನಿತರ ಮಾಂಸದೊಂದಿಗೆ ನಮ್ಮ ಮಾಂಸ ಮಿಕ್ಸ್ ಮಾಡಿ ಗ್ರಾಹಕರಿಗೆ ತಿನ್ನಿಸಲು ಮುಂದಾಗುತ್ತಿದ್ದಾರೆ. ಅದಕ್ಕೆ ಬೌ ಬೌ ಬಿರಿಯಾನಿ ಎಂದು ಕೆಲವರು ಕರೆಯುತ್ತಾರೆ.
ಹಳ್ಳಿಗಳಲ್ಲಿ ಈ ಪರಿಸ್ಥಿತಿ ಇಲ್ಲ. ಅಲ್ಲಿ ನಮ್ಮ ಕಡೆಯವರಿಗೆ ನಾಟಿ ನಾಯಿಗಳೆಂದು ಕರೆಯುತ್ತಾರೆ. ತುಂಬಾ ಪ್ರೀತಿಯಿಂದ, ಆದರದಿಂದ ನೋಡಿಕೊಳ್ಳುತ್ತಾರೆ.
ಈ ಸಿಟಿ ಜನಕ್ಕೆ ತಲೆಕೆಟ್ಟು, ದುಡ್ಡು ಜಾಸ್ತಿಯಾಗಿ ಎಲ್ಲೆಲ್ಲಿಂದಲೋ ನೆಟ್ಟಗೆ ಹೆಸರನ್ನೇ ಉಚ್ಚರಿಸಲಾಗದ ತಳಿಗೆ ಸೇರಿದ ನಾಯಿಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ. ಅವಕ್ಕೆ ಸ್ನಾನ ಮಾಡಿಸಲೆಂದೇ ಸೋಪು, ತಿನ್ನಿಸುವ ಸಲುವಾಗಿಯೇ ಬಿಸ್ಕತ್ತನ್ನೂ ತಯಾರಿಸಿ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಲದ್ದಕ್ಕೆ ಜಿಮ್ಮಿ, ಪಮ್ಮಿ, ಜಾನಿ, ಬಾನಿ, ಕ್ಯಾಶ್, ಡಾಲರ್, ಸನ್ನಿ, ಬಿನ್ನಿ ಎಂದೆಲ್ಲ ಹೆಸರಿಟ್ಟು ಪ್ರೀತಿಯಿಂದ ಕರೆಯುತ್ತಾರೆ.
ನಾವೂ ಕೂಡ ಸದ್ಯದಲ್ಲೇ ಸಂಘಟಿತರಾಗುತ್ತೇವೆ. ನಮ್ಮ ಬೌ ಬೌ ಸ್ವಾಮಿಗೆ ರಾಜಕೀಯ ಶಕ್ತಿ ತುಂಬಲು ಶ್ರಮಿಸುತ್ತೇವೆ. ಬೀದಿ ಬೀದಿಯಲ್ಲಿ ಬಾಲಕ್ಕೆ ಬ್ಯಾನರ್ ಕಟ್ಟಿಕೊಂಡು ಅವರ ಪರ ಪ್ರಚಾರ ಮಾಡುತ್ತೇವೆ. ಮುಂದೊಂದು ದಿನ ನಮ್ಮ ಒಲವು ಗಳಿಸಲು ರಾಜಕಾರಣಿಗಳು ಕೆಲವು ರಸ್ತೆಗಳನ್ನು ನಮಗಾಗಿಯೇ ಮೀಸಲಿಡಬಹುದು!
-ಎಚ್.ಕೆ.ಶರತ್