‘ಬಿ, ಎಡ್ನಲ್ಲಿ ಒಂದು ದಿನ’: ಯಲ್ಲಪ್ಪ ಹಂದ್ರಾಳ

handral-y-k
ನಾಳೆ "ಕುಮಾರಗಂಧರ್ವ ಹಾಲ್ ನಲ್ಲಿ (ಬೆಳಗಾವಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಶಕ್ತರು ಭಾಗವಹಿಸಬೇಕು ಮತ್ತು ಆಸಕ್ತರು ಕಾರ್ಯಕ್ರಮವನ್ನು ವೀಕ್ಷಿಸಬೇಕು. ಒಟ್ಟಿನಲ್ಲಿ ಎಲ್ಲರೂ ಅಲ್ಲಿರಬೇಕು'' ಎಂದು ಪ್ರಿನ್ಸಿಪಾಲರಾದ ಶ್ರೀ ಬಿ. ಮಲ್ಲಿಕಾರ್ಜುನ ಸರ್ ಅವರು ಗಂಭೀರವಾಗಿ ಹೇಳಿದಾಗ ರೋಮಾಂಚನವಾಯಿತು. ಏಕೆಂದರೆ ಬಿ. ಎಡ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅಂದ್ರೆ ಮರುಭೂಮಿಯಲ್ಲಿ ಸಿಗುವ ಓಯಾಸಿಸ್ ಇದ್ದಹಾಗೆ. ಅದೂ ಕೆ. ಡಿ ದೇಶಪಾಂಡೆ ಮತ್ತು ಆನಂದ ಅಪ್ಪುಗೋಳ್(ಧರ್ಮದೇವತೆ, ನಂತರ ಸಂಗೊಳ್ಳಿರಾಯಣ್ಣ ಸಿನೆಮಾ ಖ್ಯಾತಿಯ)ಅವರುಗಳು ನಡೆಸುವ ಕಾರ್ಯಕ್ರಮ. ಸರಿ,  ತಂತಮ್ಮ ಆಸಕ್ತಿ ವಿಭಾಗದಲ್ಲಿ ಭಾಗವಹಿಸಲು ಸ್ನೇಹಿತರೆಲ್ಲರೂ ತೊಡಗಿದರು. ನಮ್ಮ 'ಪಟಾಲಮ್ಮು' ನನ್ನ ಹುಡುಕಿಕೊಂಡು ಬಂದಿತು. 
    
ಪರಶುರಾಮ್, ಲಕ್ಮಣ್ ಮೀಸೆ, ಗೀತಾ ಭಟ್, ಪೂರ್ಣೀಮಾ ಮತ್ತು ಮುನವಳ್ಳಿ ನನ್ನ ಹತ್ರ ಬಂದು ನಾಳೆ ಏನರ ಭಾಗವಹಿಸುವೆಯಾ? ಅಥವಾ ಬರೀ ನೋಡೋದೋ?ಅಂದ್ರು. "ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ವಿತರಿಸುವ ಕಾರ್ಯಕ್ರಮ ಅದಾಗಿದ್ದರಿಂದ ಹೆಂಗೋ ಭಾಗವಹಿಸಿದರೂ ಬಹುಮಾನ ಮತ್ತು ವೇದಿಕೆಯ ಏರೋದು ಪಕ್ಕಾ"ಅಂತೇಳಿ ಒಬಬ್ಬರೂ ಒಂದೊಂದರಲ್ಲಿ ಭಾಗವಹಿಸಲು ತೀರ್ಮಾನಿಸಿ ತಯಾರಾದೆವು. 
         
ಮರುದಿನ ಆ ಘಳಿಗೆ ಬಂದೇಬಿಟ್ಟಿತು. ಎಲ್ಲರೂ 'ಕುಮಾರ ಗಂಧರ್ವ ಹಾಲ್ ಕಡೆ ಧಾವಿಸಿದೆವು. ನನ್ನದು ಹಾಡುಗಾರಿಕೆ ಇದ್ದಕಾರಣ ಅತ್ತಕಡೆ ನಡೆದೆ. ಮುಖ್ಯ ವೇದಿಕೆಯಲ್ಲೇ ಅದು ಇದ್ದಿದ್ದು ಮತ್ತು ಅದನ್ನು ಬಹಳ ಜನ ವೀಕ್ಷಿಸಲು ಅವಕಾಶವಿತ್ತು. ಅಲ್ಲಿಗೆ ಹೋದಾಗ ಇನ್ನೂ ನೋಂದಾವಣೆ ಕಾರ್ಯ ನಡೆದಿರಲಿಲ್ಲ. ಹಾಗೇ ಬೇರೆ ವಿಭಾಗದ ಕಡೆ ಕಣ್ಣು ಹಾಯಿಸಿಕೊಂಡುಬರಲು ಆ ಕಡೆ ಹೋದೆ. ಅಲ್ಲಿ ಸ್ವಲ್ಪ ನೋಡಿಕೊಂಡು ಮತ್ತೊಂದು ಸ್ಪರ್ಧೆಯನ್ನು ನೋಡಲು ಹೋದೆ. ಅಲ್ಲಿ ಉಳಿದವರು ಜೊತೆಯಾದರು. ನಂತರ ಮತ್ತೊಂದು ಸ್ಥಳಕ್ಕೆ. ಹೀಗೆ ಅಡ್ಡಾಡಿ 'ಏಕಪಾತ್ರಾಭಿನಯ' ನಡೆದ ಸ್ಥಳದಲ್ಲಿ ಗೀತಾಭಟ್ ಅವರ ಅಭಿನಯ ನಡೆಯುತ್ತಿತ್ತು. ನೋಡಿ, ಅವರನ್ನು ಕರೆದುಕೊಂಡು ನಮ್ಮ ಸ್ಪರ್ಧಾಸ್ಥಳ ಮುಖ್ಯ ವೇದಿಕೆಗೆ ಬಂದಾಗ ಆಗ್ಲೇ ಶುರುವಾಗಿತ್ತು. ನಾನು ಅವಸರದಲ್ಲಿ ಹೆಸರು ನೋಂದಾವಣೆ ಮಾಡಲು ಆ ಸ್ಥಳಕ್ಕೆ ನಡದೆ. "ಆಗ್ಲೇ ನೋಂದಾವಣೆ ಮುಕ್ತಾಯವಾಗಿದೆ"ಎಂದು ಬರೆದುಕೊಳ್ಳುವ 'ಮೇಡಂ' ಹೇಳಿದರು. ಬೇರೆವಿಧಿಯಿಲ್ಲದೆ ಸ್ನೇಹಿತರಿದ್ದ ಕಡೆ ಬಂದೆ. ಬಂದಶೈಲಿ ಮತ್ತು ನಾನು ಅಲ್ಲಿ ವಿಚಾರಿಸುವಾಗ ನನ್ನ ವರ್ತನೆಯನ್ನು ನೋಡಿದ್ದ ಪರಶುರಾಮ್ ಎದ್ದು ಬಂದ. 

"ಯಾಕೆ?, ಹೆಸರು ತಗೊಳ್ಳಲಿಲ್ವಾ? ನಡಿ, ಅದ್ಹೆಂಗೆ ತಗೊಳ್ಳಲ್ಲ ನಾನೂ ನೋಡ್ತಿನಿ"ಅಂದು ಮುಂದೆ ನಡೆದ. ಗದ್ದಲ ಆಗೋ ಛಾನ್ಸಿದೆಯೆಂದು ತಿಳಿದ ನಾನು
'ಹೋಗ್ಲಿ ಬಿಡು ಪರಶು, ಜಗಳ ಬೇಡ'. ಅಂದೆ. 
ಕೇಳುವ ಜಾಯಮಾನವೇ ಅವನದು ಮತ್ತು ಆ ವಯಸ್ಸಿನದು. ಹ್ಞೂ. . ಹ್ಞೂಂ ಸೀದಾ ಕರ್ಕೊಂಡು ಹೋಗಿ ಅವರ ಮುಂದೆ ನಿಂತು ವಿನಯದಿ ಕೇಳಿದ, ಜೋರು ಮಾಡಿದ, ಲಾಸ್ಟ್ಗೆ  ದಬಾಯಿಸಲು ಅಣಿಯಾದ. 
ಹೆದರಿದ ಆಕೆ, 
"ಆಯ್ತು , ನಿಮ್ಮ ಪ್ರೆಂಡ್ಗೆ ಹಾಡಲು ಹೇಳಿ "ಅಂದ್ಲು. 
ವಾಪಸ್ಸು ಬಂದಾಗ ಪರಶುರಾಮ್ ನ ದಾಡ್ಸೀತನದಿಂದ ಅವಕಾಶ ಸಿಕ್ಕಿದ್ದು ಎಂದು ಎಲ್ಲರೂ ಮಾತನಾಡಿದರು. ಒಟ್ಟಿನಲ್ಲಿ ನನಗೆ ಅವಕಾಶ ಸಿಕ್ಕಿದ್ದು ಖುಷಿನೀಡಿತ್ತು. 
   
ಲಿಸ್ಟ್ ಓಡ್ತಾ ಇತ್ತು, ಮುಖಗಳು ಬದಲಿಯಾಗ್ತಾ ಇತ್ತು. ಹಾಡು ಕೇಳ್ತಾ ಇತ್ತು. ಕಟ್ಟಕಡೆಗೆ ನನ್ನ ಪಾಳಿ ಬಂತು.  ವೇದಿಕೆಯನ್ನೇರಿ, ಎಲ್ಲರಿಗೂ ಒಂದಿಸಿ ದ. ರಾ ಬೇಂದ್ರೆಯವರ 
''ನೀ ಹೀಂಗ ನೋಡಬ್ಯಾಡ ನನ್ನ. ನೀ ಹೀಂಗ ನೋಡಿದರ ನನ್ನ ತಿರುಗಿ ನಾಹ್ಯಾಂಗ ನೋಡಲೋ ನಿನ್ನ '' ಹಾಡನ್ನು ನೀವು ಕೇಳಿರದ ಚರಣಗಳನ್ನು ಹಾಡುತ್ತೇನೆಂದು ಸಭಿಕರಿಗೆ ಹೇಳಿ ಅವರ ಅವಧಾನವ ನನ್ನೆಡೆ ಸೆಳೆದೆ ಹಾಡಿದೆ. 'ಇಂಪಾಗಿ ಹಾಡಿದೆ' ಎಂದು ಅನೇಕರ ಚಪ್ಪಾಳೆ ಮತ್ತು ನಮ್ಮ ಪಟಾಲಮ್ಮುನ ಮಾತಿನಿಂದ ನನಗೆ ಅನ್ನಿಸಿತು 
     
 ಸರಿ, ನನ್ನ ನಂತರ 20 ನಿಮಿಷ ವಿಶ್ರಾಂತಿ ನೀಡಲಾಯಿತು. ಎಲ್ಲ ಫಲಿತಾಂಶಗಳನ್ನು ತಂದು ಸಮಾರೋಪ ಸಮಾರಂಭಕ್ಕೆ ವ್ಯವಸ್ಥೆ ಮಾಡಹತ್ತಿದರು. ಅನೇಕ ಗಣ್ಯರು(ಕನ್ನಡಪರಹೋರಾಟಗಾರರು) ಇದ್ದರು. ಅವರಲ್ಲಿ ಸಂಘಟಕ ಕೆ. ಡಿ. ದೇಶಪಾಂಡೆ, ಆನಂದ ಅಪ್ಪುಗೋಳ್ ಮೊದಲಾದವರ ಹೆಸರುಗಳು ಮಾತ್ರ ಗೊತ್ತಿದ್ದವು. ಬೇರೆಬೇರೆ ವಿಭಾಗದಲ್ಲಿ ಭಾಗವಹಿಸಿದ್ದ ನನ್ನ ಪಟಾಲಮ್ಮು ಮೇಲೆ ಹೋಗಿ ಬಹುಮಾನ ತಂದರು. ಭಾಗವಹಿಸಿದ ಎಲ್ಲರಿಗೂ ಬಹುಮಾನ ಇತ್ತಲ್ಲ. ಬಹಳ ತಡಹಿಡಿಯಿತು. ಕಟ್ಟಕಡೆಗೆ ನಮ್ಮ ಹಾಡುಗಾರಿಕೆ ವಿಭಾಗದ ಬಹುಮಾನ ವಿತರಣೆ ಶುರುವಾಯಿತು. ಮೈರೋಮಾಂಚನವಾಯಿತು. 

ಸಂಘಟಕರು ಬಹುಮಾನವನ್ನು ಹಿಂದಿನಿಂದ ನೀಡುತ್ತಾ ಬಂದರು. ಅಂದರೆ, ಕಳಪೆ ಪ್ರದರ್ಶನದಿಂದ ಉತ್ತಮ ಪ್ರದರ್ಶನದ ಕಡೆಗೆ ಆ ನಂತರ ತೃತೀಯ, ದ್ವಿತೀಯ , ಪ್ರಥಮ ಸ್ಥಾನ ನೀಡುವ ಪದ್ಧತಿ ಅದು. ಎಷ್ಟು ತಡವಾಗುತ್ತೋ ಅಂದರೆ ನಮ್ಮ ಹೆಸರು ಅಂತ್ಯದಲ್ಲಿ ಬಂದ್ರೆ ಖುಷಿ. ನಾವು ಎಷ್ಟು ಜನರನ್ನು ಹಿಂದೆ ಹಾಕಿದ್ದೇವೆ ಎಂದು ಕುತೂಹಲದಿಂದ ನೋಡುತ್ತಾ ಕಾಯುತ್ತಾ ಕುಳಿತೆವು. ಹಾಡುಗಾರಿಕೆಯಲ್ಲಿ 52 ಜನ ಹಾಡಿದವರಿದ್ದರು. 
   
ಹಿಂದಿನಿಂದ. . . . . 
ಒಂದಾಯಿತು, ಹತ್ತಾಯಿತು, ಇಪ್ಪತ್ತಾಯಿತು. ಪ್ರತಿಯೊಂದು ಹೆಸರನ್ನು ಗಮನವಿಟ್ಟು ಕೇಳಬೇಕಾಗಿತ್ತು. ಏಕೆಂದರೆ ನಮ್ಮ ಹೆಸರು ಯಾವಾಗ್ಲಾದ್ರೂ ಬರಬಹುದಿತ್ತು. ಹಿಂದೆಹಿಂದೆ ಹೋದಂತೆ ರೋಚಕತೆ ಜಾಸ್ತಿಯಾಗತೊಡಗಿತು. 
ಮೂವತ್ತಾಯಿತು, ನಲವತ್ತಾಯಿತು, ನಲವತ್ತೈರೆಡಾಯಿತು. 
"ಓಹ್!! ಹಂದ್ರಾಳವ್ರು ಟಾಪ್ ಟೆನ್ನಲ್ಲಿದ್ದಾರೆ ಅಂತಾಯ್ತು"
ಎಂದು ಗೀತಾಭಟ್ ಹುಬ್ಬೇರಿಸಿ ನುಡಿದಳು. ಉಳಿದವರು 'ಆಹ್ಞಾಂ' ಅಂದ್ರು. 
ಟಾಪ್ 9 ಆಯ್ತು, 8 ಆಯ್ತು , 7 ಆಯ್ತು, 6 ಆಯ್ತು, 
ಹಾಗೆ ನನ್ನ ಹೆಸರು ಹಿಂದೆ ಸರೀತಾ ಸರೀತಾ ಹಿಂದೆ ಹಿಂದೆ ಹೋಗ್ತಾಯಿದೆ. ನನ್ನನ್ನು ಹಿಡಿದು ಎಲ್ಲರಿಗೂ ದೊಡ್ಡ ಖುಷಿ ಕಾಯ್ದಿತ್ತು. ವಿಶೇಷವಾಗಿ ಪರಶುರಾಮನಿಗೆ. ಅವ್ನೇ ಅಲ್ವಾ ಅವಕಾಶ ಕೊಡ್ಸಿದ್ದು. 
      
ಮತ್ತೆ ಟಾಪ್ 5 ಆಯ್ತು, ಟಾಪ್ 4 ಆಯ್ತು. . . . . . . . 
ತುಂಬಿದ ಸಭೆಯ ಕಡತಾಡನ ಜೋರಾಗುತ್ತಾ, ಎಲ್ಲರೂ ಫಲಿತಾಂಶದ ಕಡೆಗೆ ಗಮನವಿಟ್ಟು ಕೇಳುತ್ತಿದ್ದಾರೆ. 
"ಈಗ ಗಾಯನ ಸ್ಪರ್ಧೆಯ 
ಟಾಪ್ ತರ್ಡ್ ಪ್ಲೇಸ್ ಗೋಸ್ ಟು 'ಕು. ಠಠಠಠಠಠ", 
    
ನನ್ನ ಹೆಸರಲ್ಲ. . ಓಹ್ ಸೆಕೆಂಡಾದ್ರೂ ಪಿಕ್ಸ್. . . ಅಕ್ಕಪಕ್ಕದಲ್ಲಿದ್ದವರಿಗೆ ತಡೆದುಕೊಳ್ಳಲಾಗದಷ್ಟು ಖುಷಿ. ನನಗೋಪಕ್ಕದಲ್ಲಿದ್ದ ಎಲ್ಲರೂ ವಿಶ್ ಮಾಡಹತ್ತಿದರು. 
ಮತ್ತೆ ಅನೌನ್ಸ್ 
"ದ ಸೆಕೆಂಡ್ ಪ್ಲೇಸ್ ಗೋಸ್ ಟು ಮಿ. ಛಛಛಛಛಛ"
"ಓಹ್!!ಮೈ ಗಾಡ್. ಸೆಕೆಂಡ್ ಪ್ಲೇಸು ಬೇರೆಯವ್ರು ತಗೊಂಡಿದಾರೆ. ಪರ್ಸ್ಟ್ ಪ್ಲೇಸ್ ನಂ ಹಂದ್ರಾಳ್ನೆ"ಅಂದು ಗಂಡುಗಳೆಲ್ಲಾ ತೆಕ್ಕಿಬಡಿದರು(ಅಪ್ಪುಗೆ). 
ಹೆಣ್ಮಕ್ಳು ಹ್ಯಾಂಡ್ ಷೇಕ್ಸ್ ಮಾಡಿ ವಿಷ್ ಮಾಡಿದ್ರು. ವೇದಿಕೆಯ ಮೇಲೆ ದ್ವಿತೀಯ ಸ್ಥಾನಪಡೆದವನು ಪೋಟೋ ತಗೆಸಿಕೊಂಡು ಕೆಳಗೆ ಬಂದ. ಈಗ ಅನೌನ್ಸ್ ಮಾಡಲು ಸಜ್ಜಾದರು. ಎಲ್ಲರೂಸೈಲೆಂಟಾದ್ರು ಜೋರಾಗಿ. . . 
" ದ ಪರ್ಸ್ಟ್ ಪ್ಲೇಸ್ ಆಪ್ ದಿ ಸಿಂಗಿಂಗ್ ಕಾಂಪಟೇಷನ್ ಇಸ್. . . . . . . . . . ಮಿಸ್ಟರ್. . . . . (ಹೆಸರು ಹೇಳಲಿಲ್ಲ )
ಎಲ್ಲರೂ ಕೇಕೇ ಹಾಕಿದರು. ಶಿಳ್ಳೆ. . ಸೀಟಿಗಳು ಜೋರಾಗಿದ್ದವು. . . ಮತ್ತೊಮ್ಮೆ ಅನೌನ್ಸ್. ಜೋರಾಗಿ 
ಮಿಸ್ಟರ್. . . . ', ಕು. ಛಛಛಛಛಛ, , '. ಹೆಸರು ಕೂಗಿಬಿಟ್ಟರು. ನಾನು ದಿಗ್ಗಂತ ಎದ್ದು ಪಕ್ಕದವರಿಗೆ ಕೈಕೊಡುತ್ತಾ ಎದ್ದೆ. . . ಪ್ರಶಸ್ತಿ ತೆಗೆದುಕೊಳ್ಳುವ ಭರದಲ್ಲಿ ನಾನು ಸಾಗಲು ಅನುವಾದೆ. ಮೈಯಲ್ಲಿ ಭಯ, ಆನಂದ ಉಲ್ಲಾಸ. . . !

ಒಂದು ಹೆಜ್ಜೆ ಇಟ್ಟಿಲ್ಲ. . ನನ್ನ ಗೆಳೆಯರೆಲ್ಲ ಶಾಂತರಾಗಿದ್ದಾರೆ. . . ನಾನು ಆಕಾಶದಲ್ಲಿ ತೇಲುತ್ತಿದ್ದೇನೆ. ಇವರೇಕೆ ಸೈಲೆಂಟಾದ್ರು ಎಂದು ಮನಸ್ಸಿನಲ್ಲಿ ಅನಿಸಿತು. ವೇದಿಕೆಗೆ ಹೋಗೋಣವೆಂದು ಹೋಗಲನುವಾಗುತ್ತಲೆ ಲಕ್ಷ್ಮಣ ಕೈಹಿಡಿದು ನಿಲ್ಲಿಸಿದ. 

"ಏಕೆ"?ಎಂದು ಅವನನ್ನು ಪ್ರಶ್ನಾರ್ಥಕವಾಗಿ ನೋಡಿದೆ. ಅವನು ವೇದಿಕೆ ಕಡೆಗೆ ಸನ್ನೆ ಮಾಡಿದ. ಅಲ್ಲಿ ಆಗ್ಲೇ ಪ್ರಥಮಸ್ಥಾನ ಪಡೆದವನಿಗೆ ಸನ್ಮಾನ ನಡೆದಿತ್ತು. ರೋಮಾಂಚನದ ಅಬ್ಬರದಲ್ಲಿ ನಾನು ಕೂಗಿದ ಹೆಸರನ್ನೇ ಕೇಳಿರಲಿಲ್ಲ. ಅವರು ಬೇರೆ ಹೆಸರು ಕೂಗಿದ್ದರು. ಎದ್ದಿದ್ದ ವೇಗದಲ್ಲೇ ದಖ್ಖಂತ ಕುಳಿತುಬಿಟ್ಟೆ. ನನ್ನ ಖುರ್ಚಿಮಾತ್ರ ಪಾತಾಳಕ್ಕೆ ಇಳಿದಂಗಾತು. ಕೆಲಹೊತ್ತು ಸಾವರಿಸಿಕೊಂಡು ಮುಖ ಎತ್ತಿ ನೋಡಿದೆ. ನನ್ನ ಗೆಳೆಯರನ್ನು ಬಿಟ್ಟು ಎಲ್ಲರೂ ಚಪ್ಪಾಳೆ ತಟ್ಟುತ್ತಿದ್ದಾರೆ 'ಗೆದ್ದವನಿಗೆ'!. ಕ್ಷಣಕಾಲ ಸಾವರಿಸಿಕೊಂಡೆ. ನಂತರ ನನ್ನ ಕೈಯ್ಯೂ ನನಗೆ ಗೊತ್ತಿಲ್ಲದಂತೆ ಚಪ್ಪಾಳೆ ತಟ್ಟಲು ಶುರುಮಾಡಿದವು. ನನ್ನ ನೋಡಿ ನನ್ನ ಪಕ್ಕದಲ್ಲಿದ್ದ ಗೆಳೆಯರೂ ತಟ್ಟಿದರು. ಪರಶುರಾಮನಿಗೆ ವಿಪರೀತವಾಗಿ ಕೋಪ ಬಂದಿತ್ತು. ಅವನು ಚಪ್ಪಾಳೆ ತಟ್ಟಲಿಲ್ಲ. ನನಗದು ಗೊತ್ತಾಯಿತು. ಹೋಗಿ ಸಂಘಟಕರನ್ನು ದಬಾಯಿಸೋಣವಂದೂ, ಭಾಗವಹಿಸಿದ ಎಲ್ಲರಿಗೂ ಬಹುಮಾನ ಅಂದಮೇಲೆ ಇವನಿಗೇಕಿಲ್ಲವೆಂದೂ, ಗಲಾಟೆ ಮಾಡಿ ಇಸ್ಗೊಂಡು ಬಲೋಣವೆಂದು ನನ್ನ ಕೈಹಿಡಿದು ಎಳೆದು ನಡೆಯಲು ನೋಡಿದ. ನಾನು ಅವನನ್ನು ನಿಲ್ಲಿಸಿ ''ನನಗೆ ಪ್ರಶಸ್ತಿಗಿಂತ ಅದನ್ನು 'ಪಡೆದೆಬಿಟ್ಟೆ' ಎಂದು ಇದೀಗ ಅನುಭವಿಸಿದ ಆನಂದವೇ ಹೆಚ್ಚು ಆನಂದವೇ ನೀಡಿದೆ. 'ಈಗ ಜಗಳವಾಡಿ ಪ್ರಶಸ್ತಿ ತಂದರೆ ಈ ಅನುಭವಕ್ಕೆ ಅವಮಾನ ಮಾಡಿದಂತೆ. ಈ 'ರೋಚಕ' ಅನುಭವವೇ ನನಗೆ ಮರೆಯಲಾರದ ಉಡುಗೊರೆ ಇವರು ನೀಡಿದ್ದು. ಜಗಳಬೇಡ, ನನ್ನಾಣೆ. ನನಗೆ ಇನ್ನೂ ಮೈ ಜುಮ್ಮೆನ್ನುತ್ತಿದೆ. ಇದನ್ನು ಹಾಗೆ ಇರಲುಬಿಡು ಪ್ಲೀಜ್'' ಎಂದೆ. ಗೀತಾ, ಅನ್ಪೂರ್ಣ ಮತ್ತು ಮೀಸೆ ಜೊತೆಗೆ ತಾನೂ ಆನಂದದ ಕಣ್ಣಿನಿಂದ ಥಮ್ಸ್ ಅಪ್ ಮಾಡಿ ಕೈಕುಲುಕಿದರು. ವೇದಿಕೆಯಲ್ಲಿ ಒಂದನಾರ್ಪಣೆ ಮುಗಿಯಿತು. 

ಆದ್ರೂ ಪರಶುರಾಮ್ ವೇದಿಕೆಗೆ ಹೋಗಿ ವಿಚಾರಿಸಿದ. ಆ ಮೆಡಂ "ನಿರ್ಣಾಯಕರ ಹತ್ತಿರ ಹೆಸರು ನೀಡಿಯಾಗಿದ್ದರಿಂದ ನಿಮ್ಮ ಗೆಳೆಯನಿಗೆ ಸುಮ್ನೆ ಒಂದು ಅವಕಾಶ ನೀಡಲಾಯಿತು" ಅಂದ್ರಂತೆ. ಸೀದಾ ಬಂದು ವಿಷಯ ಒಪ್ಪಿಸಿದ. ಎಲ್ಲರೂ ನಕ್ಕುಬಿಟ್ಟೆವು. ಪರಶುರಾಮ್ ಮತ್ತು ನಾನು ಬೆಪ್ಪುತಕ್ಕಡಿಯಂತಾದ ಅನುಭವವಾಯಿತು. 
ಈ ಅನುಭವ ನನ್ನೊಳಗೆ ಅಚ್ಚಳಿಯದಂತೆ ಉಳಿಯಿತು. "ಧನ್ಯೋಸ್ಮಿ!!

-'ನೆನಪಿನ ಬುತ್ತಿ'-ಯಲ್ಲಪ್ಪ ಹಂದ್ರಾಳ.              

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x