ಹೈದರಬಾದ್ ಕರ್ನಾಟಕ ಎಂದಾಕ್ಷಣವೇ ಮೂಗು ಮುರಿಯುವ ಇಂದಿನ ಜಾಯಮಾನದಲ್ಲಿಯೇ ರಾಯಚೂರು ಜಿಲ್ಲೆಯ ಭತ್ತದ ಕಣಜ ಎಂದೇ ಖ್ಯಾತಿಯನ್ನು ಪಡೆದಿರುವ ಸಿಂಧನೂರು ತನ್ನ ಒಡಲಲ್ಲಿ ಭತ್ತದ ಜೊತೆ-ಜೊತೆಗೆ ಅನೇಕ ಪ್ರತಿಭೆಗಳನ್ನು ಅಡಗಿಸಿಟ್ಟುಕೊಂಡಿದೆ. ಅಂತಹ ಪ್ರತಿಭೆಗಳ ಸಾಲಿಗೆ ನನ್ನೂರಿನ ಹೆಮ್ಮೆಯ ಯುವತಿ ಶಿಲ್ಪ ಅಂತರಗಂಗೆ ನಮ್ಮ ಇಂದಿನ ಯುವ ಸಮುದಾಯಕ್ಕೆ ಹೊಸ ಭರವಸೆಯ ಪ್ರತಿಭೆಯಾಗಿ ನಿಲ್ಲುತ್ತಾರೆ. ಇಂತಹ ಭರವಸೆಯ ಕಣ್ಮಣಿಗೆ ಪ್ರಸ್ತುತ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕೊಡಮಾಡಲಾಗುವ 2014-15ನೇ ಸಾಲಿನ ರಾಜ್ಯ ಮಟ್ಟದ ‘ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ’ಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಜಿಲ್ಲೆಯ ಹಿರಿಮೆ-ಗರಿಮೆಯನ್ನು ಹೆಚ್ಚಿಸುವುದರ ಜೊತೆಗೆ ತನ್ನೂರಿನ ಹೆಮ್ಮೆಯ ಮಗಳಾಗಿ ಗುರುತಿಸಿಕೊಂಡಿದ್ದಾರೆ.
ಜನನ-ವಿದ್ಯಾಭ್ಯಾಸ : ಅಪ್ಪ ದಿನಗೂಲಿ ಮಾಡಿದರೆ ಮಾತ್ರ ಬದುಕಿನ ಬಂಡಿ ಸಾಗುತ್ತದೆ. ಇಂತಹ ಕಡು ಬಡತನದಲ್ಲೇ ಹುಟ್ಟಿದ ಶಿಲ್ಪ ಅಂತರಗಂಗೆ ತಾಯಿ ಗಿರಿಜಮ್ಮ ಒಂದು ಹೊತ್ತು ಉಪವಾಸವಿದ್ದರೂ ತನ್ನ ಮೂರು ಜನ ಮಕ್ಕಳಿಗೆ ಪ್ರೀತಿ, ಮಮಕಾರಗಳಿಗೇನು ಕಮ್ಮಿ ಮಾಡಲಿಲ್ಲ. ಅದರಲ್ಲೂ ಅಪ್ಪನ ಸ್ಪೂರ್ತಿ, ಅಮ್ಮನ ಮಮಕಾರಗಳಲ್ಲಿ ಹುಟ್ಟಿ ಬೆಳೆದ ಶಿಲ್ಪಾ ಜನಿಸಿದ್ದು ಲಿಂಗಸುಗೂರು ತಾಲೂಕಿನ ಐತಿಹಾಸಿಕ ಪಟ್ಟಣ ಮಸ್ಕಿಯಲ್ಲಿ 1ನೇ ಫೆಬ್ರವರಿ ಸಾವಿರದ ಒಂಭೈನೂರಾ ತೊಂಭತ್ತೊಂದನೇ ಇಸ್ವಿ. ಕೂಲಿಯನ್ನಿರಸಿ ಸಿಂಧನೂರುಗೆ ಬಂದ ಇವರ ಕುಟುಂಬ ಬಡತನದಲ್ಲಿಯೇ ತನ್ನ ಮಗಳು ಶಿಲ್ಪಾಗೆ ಅತ್ಯುತ್ತಮ ಶಿಕ್ಷಣವನ್ನು ಕೊಡಿಸುವಲ್ಲಿ ಯಶಸ್ವಿಯಾದರು.
ಶಿಲ್ಪ ತನ್ನ ಪ್ರಾಥಮಿಕ ಶಿಕ್ಷಣವನ್ನು ಸಿಂಧನೂರು ನಗರದ ಉಪ್ಪಾರವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿ, ನಂತರದ ಪ್ರೌಢಶಿಕ್ಷಣವನ್ನು ಸಿಂಧನೂರು ನಗರದ ಡಾ||ತಿಮ್ಮನಗೌಡ ಪ್ರೌಢಶಾಲೆಯಲ್ಲಿ ಮುಗಿಸುತ್ತಾರೆ. ಪದವಿ ಪೂರ್ವ ಶಿಕ್ಷಣವನ್ನು ಐತಿಹಾಸಿಕ ಪಟ್ಟಣ ಮಸ್ಕಿಯ ಶ್ರೀ ವಿದ್ಯಾನಿಕೆತನ ಪಿ. ಯು. ಕಾಲೇಜಿನಲ್ಲಿ ಮುಗಿಸಿದ ಇವರು ಮುಂದಿನ ಪದವಿ ಶಿಕ್ಷಣವನ್ನು ಸಿಂಧನೂರು ನಗರದ ಶ್ರೀ ಶಾರದಾ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡು ಪ್ರಥಮ ಶ್ರೇಣಿಯಯಲ್ಲಿ ಉತ್ತೀರ್ಣರಾಗುತ್ತಾರೆ. ನಂತರ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಇಲ್ಲಿ ವಾಣಿಜ್ಯ ವಿಭಾಗದ ಕಂಪನಿ ಸಕ್ರಟರಿ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದಾರೆ. ಮಹಿಳಾ ವಿಶ್ವವಿದ್ಯಾಲಯ ನೀಡಿದ ವಿದ್ಯಾರ್ಥಿವೇತನ ಮತ್ತು ವಸತಿ ನಿಲಯದಲ್ಲಿಯೇ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಅಲ್ಲಿಯ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರಿಗೆ ಅಚ್ಚು-ಮೆಚ್ಚಿನ ವಿದ್ಯಾರ್ಥಿಯಾಗಿದ್ದಲ್ಲದೆ. ಮಹಿಳಾ ವಿಶ್ವವಿದ್ಯಾಲಯ ನಡೆಸಿದ ಎಲ್ಲಾ ಸಾಂಸ್ಕøತಿಕ, ಸಾಹಿತ್ಯಿಕ ಮತ್ತು ಇನ್ನಿತರ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಶ್ವವಿದ್ಯಾಲಯಕ್ಕೆ ಬಹುಮಾನಗಳನ್ನು ತಂದುಕೊಡುವುದರ ಜೊತೆಗೆ ವಿವಿಯಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದಾರೆ. ಎಲ್ಲಾ ಸಭೆ, ಸಮಾರಂಭ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಬಲು ಲವಲವಿಕೆಯಿಂದ ಓಡಾಡಿಕೊಂಡು ಇರುತ್ತಿದ್ದ ಶಿಲ್ಪ ಹೀಗೆ ತನ್ನ ಓರಿಗೆಯ ಗೆಳತಿಯರಿಗೆಲ್ಲಾ ಬಲುಪ್ರೀತಿ, ಅಭಿಮಾನ, ಎಲ್ಲಿಲ್ಲದ ಕಕ್ಕುಲಾತಿ.
ಅರಳಿದ ಶಿಲ್ಪ : ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ಆಕೆಯ ಸಾಂಸ್ಕøತಿಕ ಆಸಕ್ತಿ ಮುಂದೆ ಜಿಲ್ಲಾ ಮಟ್ಟ, ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ, ಕಲಾ ಉತ್ಸವ, ಬಾಲಶ್ರೀ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಂತರದ ದಿನಗಳಲ್ಲಿ ಯುವಜನ ಮೇಳದಲ್ಲಿ ತಾಲೂಕಾ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ವಿಜಯೀಶಾಲಿಯಾಗಿ ಅನೇಕ ಬಹುಮಾನಗಳನ್ನು ಪಡೆದು ತಾನು ಅಲ್ಲದೆ ತಾನು ಪ್ರತಿನಿಧಿಸಿದ ಯುವತಿ ಮಂಡಳಿಗಳಿಗೆ ಕೀರ್ತಿಯನ್ನು ತಂದುಕೊಟ್ಟ ಶ್ರೇಯಸ್ಸು ಅವರದ್ದಾಗಿದೆ. 2005ರಿಂದ ಆರಂಭವಾದ ಆಕೆಯ ಯುವಜನಮೇಳದ ಪಯಣ 2014-15ನೇ ಸಾಲಿನವರೆಗೂ ಒಂದಲ್ಲ ಒಂದು ಪ್ರಶಸ್ತಿಗಳನ್ನು ಪಡೆದು ಬಿಸಿಲ ನಾಡಿನಲ್ಲಿ ಸೋಂಪಾಗಿ ಬೆಳೆದು ಅರಳಿನಿಂತಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸದು.
2005ರಲ್ಲಿ ರಾಯಚೂರು ಜಿಲ್ಲೆಯ ಚಿನ್ನದೂರು ಹಟ್ಟಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಪ್ರಥಮ ಸ್ಥಾನ, 2006-07ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ಜಾನಪದ ಜಾತ್ರೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ, ನಂತರ 2010ರಲ್ಲಿ ರಾಯಚೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಭಾಗಿ, 2012ರಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ವತಿಯಿಂದ ರಾಯಚೂರಿನಲ್ಲಿ ನಡೆದ ಸಾಂಸ್ಕøತಿಕ ಸ್ಪರ್ಧೆಯಲ್ಲಿ, 2013ರಲ್ಲಿ ಬೀದರನಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಯುವಜನೋತ್ಸವ ಸ್ಪರ್ಧೆಯಲ್ಲಿ, 2014ರಲ್ಲಿ ಗ್ರಾಮ ಸ್ವಚ್ಛತೆ ಕಾರ್ಯಕ್ರಮ, 2015ರಲ್ಲಿ ಬಿಜಾಪೂರನಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮ, 2014-15ರಲ್ಲಿ ಕಲಬುರಗಿಯಲ್ಲಿ ನಡೆದ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ, 2016ರಲ್ಲಿ ಬೆಂಗಳೂರಿನ ಪಂಚವಟಿಯಲ್ಲಿ ನಡೆದ ಕಾರ್ಯಕ್ರಮ ಹೀಗೆ ಅನೇಕ ಸ್ಪರ್ಧೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬಹುಮಾನ ಗಳಿಸಿ ಯಶಸ್ಸು ತನ್ನದಾಗಿಸಿಕೊಂಡಿದ್ದಾರೆ.
ಪ್ರಶಸ್ತಿ-ಪುರಸ್ಕಾರ : ಬಿಸಿಲ ನಾಡಿನ ಕಲ್ಲಲ್ಲರಳಿದ ಶಿಲ್ಪ ತಾಲೂಕಾ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ಸರಕಾರ ಹಾಗೂ ಸಂಘ-ಸಂಸ್ಥೆಗಳು ಕೊಡಮಾಡಲಾಗುವ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರ ಸಾಮಾಜಿಕ, ಸಾಂಸ್ಕøತಿಕ, ಶೈಕ್ಷಣಿಕ ಮತ್ತು ಕಾನೂನು ಅರಿವು-ನೆರವು, ಸಾಮಾಜಿ ಜಾಗೃತಿ, ಸ್ವಚ್ಛಗ್ರಾಮ, ಸಾಕ್ಷರತಾ ಪುನಶ್ಚೇತನಾ ಕಾರ್ಯಕ್ರಮ, ವೃದ್ದರಿಗೆ ವಿವಿಧ ಯೋಜನೆಗಳ ಅರಿವು, ಭಾವೈಕ್ಯತಾ ಜಾಥಾ, ಪಲ್ಸ್ ಪೋಲಿಯೋ ಕಾರ್ಯಕ್ರಮ, ವ್ಯಕ್ತಿತ್ವ ವಿಕಸನ ತರಬೇತಿ, ಪರಿಸರ ಜಾಗೃತಿ ಕಾರ್ಯಕ್ರಮ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಎನ್.ಎನ್.ಎಸ್. ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಸೇರಿದಂತೆ ಹೀಗೆ ಹತ್ತು-ಹಲವಾರು ಕಾರ್ಯಕ್ರಮಗಳಲ್ಲಿಯ ಸಕ್ರಿಯತೆಯನ್ನು ಪರಿಗಣಿಸಿ ಉಡುಪಿಯಲ್ಲಿ ನಡೆದ 2014-15ನೇ ಸಾಲಿನ ಯುವಜನ ಮತ್ತು ಸಬಲೀಕರಣ ಇಲಾಖೆಯಿಂದ ಕೊಡಲಾಗುವ ರಾಜ್ಯ ಮಟ್ಟದ ‘ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ’ ಶಿಲ್ಪ ಅಂತರಗಂಗೆ ಭಾಜನರಾಗಿದ್ದಾರೆ. ಇವರ ಈ ಸಾಧನೆಯನ್ನು ಮನ್ನಸಿ ಸಿಂಧನೂರು ತಾಲೂಕಾ ಆಡಳಿತದಿಂದಲೂ 70ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ವಿಶೇಷ ಗೌರವ ಸನ್ಮಾನವನ್ನು ಇವರ ಮುಡಿಗೇರಿಸಿ ಸ್ಪೂರ್ತಿ ತುಂಬಿ, ಇನ್ನುಳಿದ ಯುವಕ-ಯುವತಿಯರಿಗೆ ಪ್ರೇರಣೆಯಾಗಲಿ ಎಂದು ಶುಭಹಾರೈಸಿದೆ. ಬೆಂಗಳೂರು ಮೂಲದ ಉತ್ತರ ಕರ್ನಾಟಕ ಸಾಂಸ್ಕøತಿಕ ವೇದಿಕೆ(ರಿ)ಯು ಸಹ ಇವರ ಅಪರೂಪದ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಿದ್ದು ಹೆಮ್ಮೆಯ ಸಂಗತಿಯೇ ಸರಿ.
ಕೌಟುಂಬಿಕ ಹಿನ್ನಲೆ : ಇವರದು ಒಂದು ಚಿಕ್ಕ ಮತ್ತು ಚೊಕ್ಕ ಕುಟುಂಬವಾಗಿದ್ದು ತಂದೆ-ತಾಯಿ ಒಳಗೊಂಡು ಒಬ್ಬ ಸಹೋದರ ಹಾಗೂ ಸಹೋದರಿ ಇದ್ದಾರೆ. ತಂದೆ ಸಾಧಾರಣ ದಿನಗೂಲಿ ಕಾರ್ಮಿಕರಾಗಿದ್ದು ತಾಯಿ ಗೃಹಿಣಿಯಾಗಿರುತ್ತಾರೆ. “ನನ್ನ ಆಲೋಚನೆ ಮತ್ತು ವಿಚಾರಗಳಿಗೆ ಪ್ರೇರಣೆ ಮತ್ತು ಉತ್ಸಾಹ ನೀಡುವ ಮೂಲಕ ನನ್ನ ಕುಟುಂಬ ನನಗೆ ಸಹಕರಿಸಿದ್ದಾರೆ. ಇದೇ ಕಾರಣಕ್ಕೆ ಇಂದು ನಾನು ಯುವಕರ ಕಣ್ಮಣಿ ಆದಂತಹ ಸ್ವಾಮಿ ವಿವೇಕಾನಂದರ ಹೆಸರಿನ ರಾಜ್ಯ ಯುವ ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು ಕುಟುಂಬದ ಸಹಕಾರ ನನಗೆ ಬೆನ್ನೆಲುಬಾಗಿದೆ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಾಗ ಆಕೆಯ ಕಣ್ಣಂಚಿನಿಂದ ಉದುರಿದ ಹನಿಗಳು ಹೇಳುವ ಮಾತಿಗಿಂತಲೂ ಮಿಗಿಲಾಗಿದ್ದವು.
ಸ್ಪೂರ್ತಿ ಯಾರು ? : ಸಿಂಧನೂರು ನಗರದ ಕಳೆದ ಹತ್ತಾರು ವರ್ಷಗಳಿಂದ ಜಿಲ್ಲಾ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೂ ತನ್ನ ಪ್ರಾತಿನಿಧ್ಯವನ್ನು ತೋರ್ಪಡಿಸಿ ಅಸ್ತತ್ವದಲ್ಲಿರುವ ‘ಸ್ಪೂರ್ತಿ’ ಯುವತಿ ಮಂಡಳಿಯಿಂದ ತನ್ನ ಸಾಂಸ್ಕøತಿಕ ಹೆಜ್ಜೆಗಳನ್ನು ಇಟ್ಟಿರುವ ಶಿಲ್ಪ ಈ ಸ್ಪೂರ್ತಿಯ ಯುವತಿ ಮಂಡಳಿಗೆ ಸದಾ ಮಾರ್ಗದರ್ಶನ ಮಾಡುತ್ತಾ ಬಂದಿರುವ ಶಂಭೋಜಿ ದಂಪತಿಗಳನ್ನು ಖಂಡಿತಾ ನೆನೆಯುತ್ತಾರೆ. ಇನ್ನು ಶಾಲೆಯಲ್ಲಿ ನಡೆಯುವಂತಹ ಪ್ರತಿಭಾ ಕಾರಂಜಿ ಹಾಗೂ ವಿವಿಧ ಗ್ರಾಮಗಳಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸಹಪಾಟಿಗಳೊಂದಿಗೆ ಭಾಗವಹಿಸುತ್ತಾ ಯಾವುದೇ ಪ್ರಚಾರವನ್ನು ಬಯಸದೇ ಎಲೆಮರೆಕಾಯಿಯಂತೆ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಪದವಿ ಪೂರ್ವ ಹಂತದಲ್ಲಿ ತನ್ನ ಸ್ನೇಹಿತರು, ಪದವಿ ಹಂತದಲ್ಲಿ ಉಪನ್ಯಾಸಕಿಯರಾದ ಲಕ್ಷ್ಮೀದೇವಿ ಪೂಜಾರ, ವಂದನಾ ಕುಲಕರ್ಣಿ ಹಾಗೂ ಶ್ವೇತಾ ಸಾಗರ ಇವರು ಆಕೆಯ ಚಟುವಟಿಕೆಗಳಿಗೆ ಉತ್ಸಾಹ ತುಂಬಿ ಅವಕಾಶಗಳನ್ನು ಹುಡುಕಿ ಒದಗಿಸುವುದರ ಮೂಲಕ ಸಹಕರಿಸಿದ್ದಾರೆ ಹಾಗೂ ಸಂಗೀತಾ ಯುವತಿ ಮಂಡಳಿಯ ಎಲ್ಲ ಸದಸ್ಯರು ಮತ್ತು ರುದ್ರಗೌಡ ಯುವಕರ ಸಂಘದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಬಸವರಾಜ ಗಸ್ತಿ, ನಬಿಸಾಬ ವಕಿಲರು ಹಾಗೂ ವೀರೇಶ ಯರದಿಹಾಳ ಇವರು ಸಹ ತನ್ನ ಸಾಧನೆಗೆ ಅನುವಾಗಿದ್ದಾರೆ’ ಎನ್ನುವುದನ್ನು ಮರೆಯದೇ ಹೇಳುತ್ತಾರೆ.
ಸದಾಶಯ: ಸಧ್ಯಕ್ಕೆ ಬೆಂಗಳೂರಿನಲ್ಲಿ ಮುಂಬೈ ಮೂಲದ ಖಾಸಗಿ ಶೇರ್ ಮಾರ್ಕೆಟಿಂಗ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಲ್ಪ ತಾನೊಬ್ಬ ಬ್ಯಾಂಕ್ ಅಧಿಕಾರಿಯಾಗಿ ಬಡವರ, ದೀನ-ದಲಿತರಿಗೆ, ಕೂಲಿ-ಕಾರ್ಮಿಕರ, ಹಿಂದುಳಿದವರಿಗೆ ಆಸರೆಯಾಗಬೇಕು. ಯುವತಿ ಮಂಡಳಿಗಳಿಗೆ ಸ್ವಯಂ ಉದ್ಯೋಗ ಮಾಡಲು ಪ್ರೇರಣೆ ನೀಡಿ ನಿರುದ್ಯೋಗ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರು ನಿವಾರಿಸಬೇಕು. ಹೀಗೇ ಹತ್ತಾರು ಕನಸಗಳು ಅವರ ಮನ-ಮಸ್ತಕದಲ್ಲಿವೆ. ಇಂತಹ ಅದಮ್ಯ ಉತ್ಸಾಹ, ಹುರುಪು, ಹುಮ್ಮಸ್ಸುಗಳನ್ನು ತುಂಬಿಕೊಂಡಿರುವ ಇವರು ‘ಏನೂ ಕೆಲಸವಿಲ್ಲ’ ಎಂದು ಕಾಲಹರಣ ಮಾಡುತ್ತಿರುವ ನಿಸ್ಪ್ರಯೋಜಕ ಯುವಪಡೆಗಳ ನಡುವೆ ತುಂಬಾ ಭಿನ್ನವಾಗಿ ಕಾಣುತ್ತಾಳೆ ಶಿಲ್ಪ ಅಂತರಗಂಗೆ.
ಕೊನೆ ಮಾತು: ಇಂದಿನ ಯುವಕ-ಯುವತಿಯರು ಸಾಮಾಜಿಕ ಚಟುವಟಿಕೆ, ಚಳುವಳಿಗಳಿಂದ ವಿಮುಖರಾಗಿರುತ್ತಿದ್ದಾರೆ. ಸಮಾಜ ಪ್ರಸ್ತುತ ಎದುರಿಸುತ್ತಿರುವ ಸಾಮಾಜಿಕ ಅಸಮತೋಲನ, ಕೋಮುವಾದ, ಆಭದ್ರತೆ, ಉಗ್ರವಾದ, ಭ್ರಷ್ಟಾಚಾರ, ಅರಾಜಕತೆ, ಮಾದಕ ವ್ಯಸನ, ಶೋಷಣೆಗಳಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ, ಆಲೋಚಿಸುವ ಗೋಜಿಗೆ ಹೋಗುತ್ತಿಲ್ಲ ಎನ್ನುವ ಆಪಾದನೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ಇದು ಈ ಕಾಲಘಟ್ಟದ ಕಟುಸತ್ಯವೂ ಕೂಡಾ.
ಅದಕ್ಕಂತಲೇ “ಇಂದಿನ ಯುವ ಸಮುದಾಯ ವ್ಯಾಟ್ಸಪ್ಪು, ಫೇಸ್‍ಬುಕ್ಕು, ಟ್ಯೂಟರ್, ಇಂಟರ್‍ನೆಟ್, ಪ್ರೀತಿ-ಪ್ರೇಮ ಎನ್ನುತ್ತಾ ಕಾಲಹರಣ ಮಾಡದೇ, ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಸಮಾಜದಲ್ಲ್ಲಿ ಮಾದರಿಯ ಯುವಕ/ಯುವತಿಯರಾಗಿ ಬೆಳೆಯಬೇಕು” ಎನ್ನುವುದು ಈಕೆಯ ಸದಾಶಯ.
-ವೀರೇಶ ಗೋನವಾರ, ಶಿಕ್ಷಕರು,