![](https://panjumagazine.com/wp-content/uploads/JAYASHRI-ABBIGERI-252x300.jpg)
ದಿನವೂ ದೇವರ ಮೂರ್ತಿಗಳನ್ನು ನೀರಿನಿಂದ ತೊಳೆದು, ಹಾಲಿನ ಅಭಿಷೇಕ ಮಾಡಿ,ಮೆತ್ತನೆಯ ಬಟ್ಟೆಯಲ್ಲಿ ಒರೆಸಿ, ವಿಭೂತಿ, ಅರಿಷಿಣ, ಕುಂಕುಮ, ಗಂಧ,ಅಕ್ಷತೆ,ಬಿಲ್ವಪತ್ರೆಯನ್ನು ಏರಿಸಿ ಕೈ ಮುಗಿದರೆ ಸಾಕು ಮನದಲ್ಲಿ ಅಂದುಕೊಂಡದ್ದು ನಡೆಯುತ್ತದೆ ಎನ್ನುವುದು ನಮ್ಮಲ್ಲಿಬಹುತೇಕರ ನಂಬಿಕೆ. ದೇವರ ಪೂಜೆ ಭದ್ರತಾ ಭಾವವನ್ನು ಒದಗಿಸುವುದು ಎನ್ನುವ ಭಾವ ಸುಳ್ಳೇನಲ್ಲ. ಇಷ್ಟೇ ಅಲ್ಲ ಆಶಾಭಾವ ಲವಲವಿಕೆಯ ಮನೋಭಾವನೆಯನ್ನೂ ಹೆಚ್ಚಿಸುವುದು. ಪ್ರಯತ್ನಿಸದೇ, ಬದಲಾವಣೆಯ ಗಾಳಿಗೆ ಮೈ ಒಡ್ಡದೇ, ವಾಸ್ತವವನ್ನು ಅರಿಯದೇ, ಅದೊಂದೇ ಬದುಕಿನ ಚಿತ್ರವನ್ನು ಬದಲಿಸಿಬಿಡುವುದು ಎನ್ನುವುದು ನಾವು ಸೃಷ್ಟಿಸಿಕೊಂಡ ಮಾಯದ ಬಲೆಯಲ್ಲಿ ನಾವೇ ಬಿದ್ದಂತೆ. ಬದುಕಿಗೆ ಕೌಶಲ್ಯಗಳ ಮೌಲ್ಯಗಳ ಕಾಯ ತೊಡಿಸಿ ನಮ್ಮ ಪ್ರತಿಭಾ ವೈಖರಿಯ ಮಾಯದ ಬಲೆಯಲ್ಲಿ ಬದುಕೆಂಬ ಅತ್ಯಪೂರ್ವ ಕಲಾಕೃತಿಯನ್ನು ಪುನರ್ನವೀಕರಣ ಮಾಡುವ ಅವಕಾಶ ನಮಗೆ ಸದಾ ಇದೆ.ಮೇಲ್ನೋಟಕ್ಕೆ ಸರಳವಾಗಿ ಕಾಣುವ ಬದುಕಿನ ಬಂಡಿ ಅರ್ಥಪೂರ್ಣತೆಯನ್ನು ಪಡೆಯಲು ಮನೋದೃಷ್ಟಿ ಬದಲಿಸಲೇಬೇಕಿದೆ. ‘ಇಬ್ಬರು ವ್ಯಕ್ತಿಗಳು ಒಂದೇ ಕಿಟಕಿಯ ಸರಳುಗಳೆಡೆಯಿಂದ ಹೊರಗಡೆ ನೋಡುತ್ತಿದ್ದರು; ಒಬ್ಬನಿಗೆ ಮಣ್ಣು ಕಾಣುತ್ತಿತ್ತು., ಇನ್ನೊಬ್ಬನಿಗೆ ಕಾಣುತ್ತಿದ್ದುದ್ದು ನಕ್ಷತ್ರಗಳು.’ ಇದು ಎಫ್ ಲಾಂಗ್ಬ್ರಿಜ್ರವರ ಮಾತು.ಇಂದಿನ ಬಾಳಿಗೆ ಹಿಡಿದ ಕನ್ನಡಿಯಂತಿದೆ. ಆಶಾಭಾವನೆಯೇ ಇಲ್ಲದ ದೃಷ್ಟಿ ಬದಲಿಸಲ್ಲೊಲ್ಲದವರಿಂದ ಚೆಂದದ ಬದುಕಿನ ನಿರೀಕ್ಷೆ ಏಕೆ? ಕನಸಿನ ಬೇರುಗಳನ್ನು ಗಟ್ಟಿಗೊಳಿಸಿದರೆ ಬದುಕಿನ ಬಿಸಿಲು ಮಾಗಿ ಬೆಳದಿಂಗಳಾಗುವ ಸೊಗಸಿದೆ.
ಮಾಂತ್ರಿಕ ವಾಸ್ತವ
ಅಧಿಪತ್ಯದ ಬಾವುಟ ಊರಿದ ಬ್ರಿಟೀಷರು ನಮ್ಮೆಲ್ಲ ತತ್ವ ಆದರ್ಶಗಳಿಗೆ ಸಂಕಷ್ಟದ ಸಂದರ್ಭ ತಂದಿತ್ತರು.ಸನಾತನ ಸಂಸ್ಕೃತಿ ಉಳಿಸಿಕೊಳ್ಳಲು ಹಾಗೂ ಆಂಗ್ಲ ಸಂಸ್ಕೃತಿ ಬೇರೂರಿಸಲು ಜಟಾಪಟಿ ಪ್ರಾರಂಭವಾದ ಸಂಕ್ರಮಣದ ಕಾಲವದು. ಒಳ್ಳೆಯದೋ ಕೆಟ್ಟದ್ದೋ ಗೊತ್ತಿರದ, ಹೊಸತು ಚಿಗುರೊಡೆಯುವ ಸಮಯ ಪೂರ್ವಜರು ಹುಟ್ಟು ಹಾಕಿದ ಸತ್ಸಂಪ್ರದಾಯಗಳ ಸಂಸ್ಕೃತಿಗಳು ಉಚ್ಛ್ರಾಯ ಸ್ಥಿತಿಯನ್ನು ಅನುಭವಿಸಿ ಪರಕೀಯರ ಪ್ರಭಾವ ಹೆಚ್ಚಾದ ಸಂದರ್ಭದಲ್ಲಿ ನೇಪಥ್ಯಕ್ಕೆ ಸರಿಯುವ ಸ್ಥಿತಿಯನ್ನು ತಲುಪ ತೊಡಗಿದವು.ಮಸಾಲೆ ಸಂಪತ್ತಿಗೆ ಮರುಳಾಗಿ ವ್ಯಾಪಾರದ ಹೆಸರಿನಲ್ಲಿ ವೈವಿಧ್ಯಗಳ ಘಮ ಹೊಂದಿರುವ (ಚಿಕ್ಕ ಚಿಕ್ಕ ರಾಜರುಗಳ) ದೊಡ್ಡ ಸಾಮ್ರಾಜ್ಯದಲ್ಲಿ ಮಹಾರಾಜರುಗಳ ಚಕ್ರಾಧಿಪತ್ಯದಲ್ಲಿ ದಬ್ಬಾಳಿಕೆಯ ಮೂಲಕ ತಮ್ಮ ವಿದೇಶಿ ಸಂಸ್ಕೃತಿ ಬಿತ್ತ ತೊಡಗಿದರು. ಅಸಹಾಯಕ ಬಡವರನ್ನು ಸೆಳೆಯಲು ಬೈಬಲ್ನ್ನು ಕೈಯಲ್ಲಿ ಹಿಡಿದ ಮಿಷನರಿಗಳು ತುದಿಗಾಲಲ್ಲಿ ನಿಂತಿದ್ದವು. ವಿವಿಧ ವಂಶಸ್ಥರಲ್ಲಿ ಹರಿದು ಹಂಚಿ ಹೋಗಿದ್ದ ಆಡಳಿತದ ಅಧಿಕಾರಿಶಾಹಿಯನ್ನು ಲಪಾಟಿಯಿಸಲು ಹೊಂಚು ಹಾಕಲು ಬಹಳ ಸಮಯ ಬೇಕಾಗಲಿಲ್ಲ. ಭಾರತೀಯ ಸನಾತನ ಸಂಸ್ಕೃತಿಯನ್ನು ಸಂಪೂರ್ಣವಾಗಿ ಅಳಿಸಿಹಾಕಲು ಇನ್ನಿಲ್ಲದಂತೆ ಪ್ರಯತ್ನಿಸಿದ ಅತ್ಯದ್ಭುತ ಷಡ್ಯಂತ್ರದ ಪ್ರಯತ್ನವದು.
ಗೊನೆಯಾಗಿ ಹೊಸ ಬಾಳೆ
ಜೀವನ್ಮುಕ್ತ ಹಳಸುತಿದೆ
ಹಿಂಡುಹಿಳ್ಳುಗಳಲ್ಲಿ ಪ್ರಾಣ ಊರಿ
ಗೊನೆ ಹಾಕಿದ ಬಾಳೆಗಿಡದ ಜನ್ಮ ಮುಗಿಯಿತು ಎಂದು ನಾವು ತಿಳಿಯುವಷ್ಟರಲ್ಲಿ ಮತ್ತೆ ಮುಂದಿನ ತಲೆಮಾರು ಹಿಳ್ಳುಗಳಲ್ಲಿ ಟಿಸಿಲೊಡೆದು ನಿಲ್ಲುತ್ತದೆ. ಎಂಬ ಕವಿವಾಣಿಯಂತೆ ಇತಿಹಾಸದಲ್ಲಿ ದಾಖಲಾಗುವಂಥ ದೊಡ್ಡ ಚಳುವಳಿಗೆ ಸಾಕ್ಷಿಯಾಗಿ ನಾಶವಾಯಿತು ಎನ್ನುವ ಕ್ಷಣದಲ್ಲಿ ಮತ್ತೆ ವಾಸ್ತವದೊಂದಿಗೆ ಮಾಂತ್ರಿಕತೆ ಹೊಸದಾಗಿ ಸೃಷ್ಟಿಯಾಗಿ ಬೆರಗು ನೀಡುತ್ತದೆ. ಇದು ಈಗಿನಿದ್ದಲ್ಲ ಸೃಷ್ಟಿ ಹುಟ್ಟಿದಾಗಿನಿಂದ ಬಂದ ಮಾಂತ್ರಿಕ ವಾಸ್ತವ. ಜಗ ನಡೆದು ಬಂದ ರೀತಿಯೇ ಅದ್ಭುತ ರಮ್ಯವೆನಿಸುವಂಥದ್ದು.ಪರ ಸಂಸ್ಕೃತಿ ವ್ಯಾಮೋಹದ ಇಕ್ಕಟ್ಟಿನಲ್ಲಿ ಹೊಂದಿಕೊಳ್ಳುವ ಬದಲಿಗೆ ನಮ್ಮ ಸ್ವತಂತ್ರ ನಮಗಿರಲಿ.
ಬದಲಾವಣೆಯ ಗೆರೆ
ಒಂದರ ಮೇಲೊಂದು ಅವ್ಯಾಹತವಾಗಿ ಬದಲಾವಣೆಗಳು ನಡೆಯುತ್ತಲೇ ಇವೆ. ಬದಲಾವಣೆ ಬೇಡವೆಂದು ಅದರಿಂದ ದೂರ ಸರಿಯುವುದು ಅನಪೇಕ್ಷಣೀಯ ದುರಂತ. ಬದಲಾವಣೆಗೆ ಪೂರಕವಾಗಿ ಬದಲಾಗುವುದು ಹೇಗೆ? ಬದಲಾವಣೆಗೆ ಹೊಂದಿಕೊಳ್ಳುವುದು ಹೇಗೆ ಎಂದು ಯೋಚಿಸುವುದು ಸೂಕ್ತ ಸಂಗತಿ. ಮುಂಜಾನೆ ಏಳುವಾಗ ಪವಾಡ ಸದೃಶಗಳು ನಡೆಯುವುದು ಅತಿ ವಿರಳ. ಅತ್ಯದ್ಭುತವಾದ ಬದಲಾವಣೆಯೂ ಏನಾಗಿರುವುದಿಲ್ಲ. ನಾವು ಒಂದು ವಿಚಿತ್ರ ಪ್ರಾಣಿಯಾಗಿ ಬದಲಾಗಿರುವುದಿಲ್ಲ. ಆದರೆ ಚಿಟ್ಟೆಯೊಂದು ಆಕರ್ಷಕವಾಗಿ ಹೂದೋಟದಲ್ಲಿ ಹಾರಾಡುತ್ತ ಸಾರ್ಥಕ ಬದುಕು ತನ್ನದಾಗಿಸಿಕೊಳ್ಳ ಬೇಕೆಂದರೆ ಲಾರ್ವಾ ರೂಪವನ್ನು ತೊರೆಯಲೇಬೇಕು.ನನಗೆ ಐವತ್ತಾಯಿತು ಇನ್ನೇನು ಸಾವು ಹತ್ತಿರವಾಯಿತು ಎನ್ನುವ ಮೂರ್ಖತನವನ್ನು ಬಿಡಬೇಕು. ನಮ್ಮಲ್ಲಿಯ ಅತ್ಯುತ್ತಮವನ್ನು ನಾವು ಪಡೆಯಬೇಕೆಂದರೆ ನಮ್ಮಲ್ಲಿ ಜಿಡ್ಡುಗಟ್ಟಿದ, ಬೇಡವಾದ ನಾವು ಸಾಯಲೇಬೇಕು ಅಷ್ಟೆ. ಇದು ಉತ್ಪ್ರೇಕ್ಷೆ ಅಲ್ಲ ಕಟು ವಾಸ್ತವ. ವಾಸ್ತವ ಮತ್ತು ಭ್ರಮೆಗಳ ನಡುವಿನ ಗೆರೆ ತಿಳಿಯುವುದು ಜಾಣತನ. ಭ್ರಮೆ ಬಿಟ್ಟು ವಾಸ್ತವ ಲೋಕದಲ್ಲಿ ವಾಸ್ತವ ಮಾರ್ಗವನ್ನು ಹುಡುಕಿಕೊಂಡು ಬದಲಾವಣೆಯ ಗೆರೆ ಅಪ್ಪಿಕೊಂಡು ಬಾಳುವುದೇ ಬುದ್ಧಿವಂತಿಕೆ. ಪರ್ಯಾಯ ಸಂಸ್ಕೃತಿಯಲ್ಲಿ ವಿಮುಖತೆ ವಿಷಣ್ಣನಾಗಿ ಬದುಕುವುದು ಹತಾಶೆಗೆ ಎಡೆ ಮಾಡುತ್ತದೆ. ಸ್ವದೇಶಿ ಸಂಸ್ಕೃತಿಯಲ್ಲಿ ಆಹ್ಲಾದವನ್ನು ಒಪ್ಪಿಕೊಳ್ಳುವ ತೆರೆದ ಮನಸ್ಸು ನಮ್ಮದಾಗಬೇಕು. ಮೌಡ್ಯಗಳಲ್ಲಿ ಬದುಕುವುದು ನಮಗೆ ನಾವೇ ವಿಧಿಸಿಕೊಂಡ ಬಂಧನ. ‘ಸಂಕೋಲೆಯು ಕಬ್ಬಿಣದ್ದೇ ಇರಲಿ, ಬಂಗಾರದ್ದೇ ಇರಲಿ ಅದು ಬಂಧನವಲ್ಲವೇ?’ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ ವಿವೇಕಾನಂದರು. ಬದುಕಿನ ಹಾದಿಯ ಬದಲಾವಣೆಯ ಮುಂಚಾಚುಗಳನ್ನು ಸ್ವೀಕರಿಸುತ್ತ, ಕುತೂಹಲದಿ ಮುಂದಿನ ಹೆಜ್ಜೆಗಳನ್ನು ಇಡುವುದೇ ಜೀವನದ ಸೊಗಸು.’ಬೆಳೆದವರಿಗಾಗಿ ಸೆರೆಮನೆಯನ್ನು ಕಟ್ಟಿಸುವುದಕ್ಕಿಂತ ಎಳೆಯರಿಗಾಗಿ ಶಾಲೆಯನ್ನು ಕಟ್ಟಿಸುವುದು ಸೂಕ್ತ.’ ಎನ್ನುವ ಎಲಿಝಾ ಕುಕ್ನ ಮಾತುಗಳು ಬೆಳಗಿನ ಸಮಯದಲ್ಲಿ ಎಚ್ಚರವಾಗಿರುವುದು ಮಧ್ಯ ರಾತ್ರಿಯಲ್ಲಿ ದೀಪ ಉರಿಸುವುದಕ್ಕಿಂತ ಹೆಚ್ಚು ವಿಶೇಷವಾದುದು ಎನ್ನುವುದನ್ನು ನೆನಪಿಗೆ ತರುತ್ತದೆ.
ಕಾಯುವ ಹುಚ್ಚುತನ
ಬದುಕಿನ ದಾರಿಯುದ್ದಕ್ಕೂ ಅದರ ಅಂದಚಂದ ಒಪ್ಪ ಓರಣ ಮೆಚ್ಚಿಕೊಳ್ಳದೇ, ಎಂದೋ ಒಂದು ದಿನ ನಮಗೆ ಶುಭವಾಗುವುದು ಎಂದು ಕಾಯುವುದು ಎಂದರೆ ಕೊಳದ ಬದಿಯ ಕಲ್ಲಂಚಿನ ಮೇಲೆ ಕುಳಿತು ಸತ್ತ ಹಸುವಿಗೆ ಕಾವಲು ಕಾದಂತೆ. ಒಮ್ಮೊಮ್ಮೆ ಈ ಕಾಯುವಿಕೆ ಒಳಗಿಂದ ಒಳಗೆ ಪಿಚ್ಚೆನಿಸಿಬಿಡುವುದು ಮಾತ್ರ ಸುಳ್ಳಲ್ಲ. ಕಾಯುವುದನ್ನು ಬಿಟ್ಟು ಬೇರೆ ಆಯ್ಕೆ ಮಾಡಿಕೊಳ್ಳಬೇಕೆಂದರೆ ನೂರು ಪ್ರಶ್ನೆಗಳು ಎದುರಾಗುತ್ತವೆ. ಅಡುಗೆ ಊಟ ವಾಕು ದೇವರ ಪೂಜೆ ಜೀವನೋಪಾಯಕ್ಕಾಗಿ ಒಂದು ಕೆಲಸ ಇಷ್ಟೇ ಮಾಡಿದರೆ ಫಲವೂ ಅಷ್ಟೇ ಸಿಗುತ್ತದೆ. ನಾವು ಮಾಡಿದ್ದನ್ನೇ ಮಾಡುತ್ತಿದ್ದರೆ ಇದುವರೆಗೆ ದೊರೆತ ಫಲವೇ ದೊರೆಯುತ್ತದೆ. ಐನಸ್ಟೀನ್ ಹೇಳಿದಂತೆ’ಒಂದೇ ರೀತಿಯ ಕೆಲಸ ಮಾಡುತ್ತ ಭಿನ್ನ ರೀತಿಯ ಫಲಿತಾಂಶವನ್ನು ನಿರೀಕ್ಷಿಸುವುದು ಹುಚ್ಚುತನ.’ ಬಡಪಾಯಿ ನಾನು ನನ್ನಿಂದ ಏನೂ ಆಗುವುದಿಲ್ಲ ಎಂದು ಕಾಯುವುದಕ್ಕಿಂತ ಯತ್ನದಲ್ಲಿ ಎಡುವುದು ಲೇಸು. ಇದನ್ನೇ ಖ್ಯಾತ ನವೀಕರಣ ತಜ್ಞ ಡೇವಿಡ್ ಕೆಲ್ಲಿ ‘ಬೇಗ ಸೋತು,ಬೇಗ ಗೆಲ್ಲಿರಿ.’ ಎಂದು ಬಹಳ ಅರ್ಥಪೂರ್ಣವಾಗಿ ಹೇಳಿದ್ದಾನೆ. ಸೋಲಿನ ದಡದಲ್ಲಿ ಅಚಾನಕ್ಕಾಗಿ ಉತ್ತಮ ತಿರುವುಗಳು ಸಿಗುವುದುಂಟು. ಕನಸು ಕಾಣುವ ಶಕ್ತಿ ದೈವ ನಮಗೆ ನೀಡಿದೆ ಎಂದರೆ ಅದನ್ನು ಸಾಕಾರಗೊಳಿಸುವ ಶಕ್ತಿಯನ್ನೂ ನೀಡಿದೆ. ‘ನಿನ್ನ ಹೃದಯಕ್ಕೆ ಕನಸಿನ ಜಾಡು ಹಿಡಿಯುವ ಹಾದಿ ಗೊತ್ತು. ಆ ದಿಕ್ಕಿನಲ್ಲಿ ಓಡು.’ಎಂದಿದ್ದಾನೆ ಪ್ರಸಿದ್ಧ ಸೂಫಿ ಸಂತ ಜಲಾಲುದ್ದೀನ ರೂಮಿ. ಪ್ರಯತ್ನದ ಪ್ರಯಾಣ ಶುರು ಮಾಡಿದವರು ಮಾತ್ರ ಗುರಿ ತಲುಪುವರು. ಪ್ರಯತ್ನ ಮಾಡುವ ಪಯಣಿಗರ ಬರುವಿಕೆಯನ್ನು ದಾರಿಯೂ ದಾರಿ ಕಾಯುತ್ತದೆ. ಸ್ಪಷ್ಟವಾದ ನಕ್ಷೆ, ಅಗತ್ಯವಿರುವ ಎಲ್ಲ ಸೌಲಭ್ಯಗಳು, ಚಲಿಸುವ ಮಾರ್ಗ ತೋರಿದ ಮೇಲೆಯೇ ಪ್ರಯಾಣ ಪ್ರಾರಂಭಿಸುವೆನೆಂದರೆ ಪ್ರಗತಿ ಮರಿಚಿಕೆಯೇ ಸರಿ.
‘ಎಲ್ಲಿಗೆ ಪಯಣವೋ ದಾರಿಗ ನಿನಗೆ?
ಚೆಲ್ಲಿರೆ ಕತ್ತಲೆ ಹಗಲಿನ ಮೊಗಕೆ,
ಸಾವಿನ ಬೀಜವು ಬಿತ್ತಲು ಸಂಜೆ
ಜೀವವ ಕರೆವುದು ನೀನಿನಿತಂಜೆ ‘
ಎಂಬ ಶಂಕರ ಭಟ್ಟರ ಮುರುಲಿನಾದ ಕವಿತೆ ಕಣ್ಮುಂದೆ ಬಂದು ನಿಲ್ಲುತ್ತದೆ. ಮುಚ್ಚಿದ ಒಳಗಣ್ಣನ್ನು ತೆರೆಸುತ್ತದೆ. ಚೆಂದದ ಬದುಕಿಗೆ ಮುನ್ನುಡಿ ಬರೆಯಲು ಪ್ರೇರೇಪಿಸುತ್ತದೆ. ಹಾಗಾದರೆ ತಡವೇಕೆ ಬನ್ನಿ ಅಂತಃಪ್ರೇರಣೆಗೆ ಒಳಗಾಗೋಣ ಪೂರ್ಣ ಚಂದಿರನ ಪೂರ್ಣಿಮೆಯನು ಆನಂದಿಸೋಣ.
–ಜಯಶ್ರೀ. ಜೆ. ಅಬ್ಬಿಗೇರಿ