ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಐತಿಹಾಸಿಕ ಸ್ಥಳಗಳು ಸಾಕಷ್ಟಿವೆ. ಇಕ್ಕೇರಿ, ಕೆಳದಿ, ಕಲಸಿ, ಹಳೆಇಕ್ಕೇರಿಯ ಕೋಟೆ ಇತ್ಯಾದಿ ಇತ್ಯಾದಿ. ನಮ್ಮ ಊರಿನಲ್ಲಿ ಇರುವುದೊಂದೇ ವೀರಶೈವರ ಮನೆ ಮತ್ತು ಅವರಿಗೊಂದು ವೀರಭದ್ರ ದೇವಸ್ಥಾನ. ದೇವಸ್ಥಾನದಿಂದ ಕೊಂಚ ದೂರದಲ್ಲಿ ಒಂದು ಬಸವಣ್ಣ. ಅದರ ಹೆಸರು ಬಿಸಿಲು ಬಸಪ್ಪ. ಪ್ರತಿವರ್ಷ ಆಯ್ದ ದಿನಗಳಲ್ಲಿ ಅದಕ್ಕೆ ಪೂಜೆ. ವಿಶೇಷವಾಗಿ ತುಳಸಿಪೂಜೆ, ದೀಪಾವಳಿಗಳಂದು ವರ್ಷವಿಡೀ ಬಿಸಿಲಿನಲ್ಲೇ ಮಲಗಿದ ಬಸಪ್ಪನಿಗೆ ಪೂಜೆ. ಬಿಸಿಲು-ಮಳೆಗಳಿಂದ ರಕ್ಷಿಸಲು ಆ ಬಸಪ್ಪನಿಗೆ ಕಟ್ಟಡವಿರಲ್ಲಿಲ್ಲ. ಬಿಸಿಲಿನಲ್ಲೇ ಇರುವುದರಿಂದಾಗಿ ಬಿಸಿಲು ಎಂಬುದು ಬಸಪ್ಪನ ಹಿಂದೆ ಸೇರಿಕೊಂಡಿತ್ತು. ಇಂತಿಪ್ಪ ಸುಮಾರು ೩-೪ ಕ್ವಿಂಟಾಲ್ ತೂಗುವ ಸುಂದರ ಬಸಪ್ಪ ಒಂದು ದಿನ ಬೆಳಗ್ಗೆ ಕಾಣೆಯಾಗಿದೆ. ವಿಗ್ರಹಚೋರರು ಕದ್ದೊಯ್ದು ಎಲ್ಲಿಗೋ ಸಾಗಿಸಿದ್ದಾರೆ. ಪೊಲೀಸ್ ತನಿಖೆಯಲ್ಲೂ ಯಾವುದೇ ಪ್ರತಿಫಲ ಕಾಣದೆ, ಫೈಲು ಇನ್ನು ಕ್ಲೋಸ್ ಆಗಿಲ್ಲದೇ ಕೂತಿದೆ.
ಇಷ್ಟೆಲ್ಲಾ ಪೀಠಿಕೆ ಈ ಲೇಖನಕ್ಕೆ ಏಕೆಂದರೆ? ನಮ್ಮನ್ನು ಆಳುವವರು ಹೆಚ್ಚು ಕಡಿಮೆಯೇಕೆ? ತುಸು ಹೆಚ್ಚೇ ವಿಗ್ರಹಚೋರರು-ನಿಧಿಚೋರರಂತೆ ವರ್ತಿಸುತ್ತಿದೆ. ಸಾಧು ಶೋಬನ್ ಸರ್ಕಾರ್ ಕಾರಣಕ್ಕೆ ಅಜ್ಞಾತವಾಗಿದ್ದ ಉತ್ತರ ಪ್ರದೇಶದ ದೌಂಡಿಯಾ ಖೇಡ್ ರಾತ್ರಿ ಬೆಳಗಾಗುವುದರಲ್ಲಿ ವಿಶ್ವಪ್ರಸಿದ್ದವಾಗಿಬಿಟ್ಟಿತು. ರಾಜಾ ರಾಮ್ ಬಕ್ಸ್ ಸಿಂಗ್ ಆಳಿದ ಉನ್ನಾವ್ ಕೋಟೆಯ ಆವರಣದ ಕೆಳಗೆ ಒಂದು ಸಾವಿರ ಟನ್ ಬಂಗಾರವಿದೆ ಎಂದು ಶೋಬನ್ ಸರ್ಕಾರ್ ಕೇಂದ್ರ ಸರ್ಕಾರದ ಮಂತ್ರಿ ಚರಣ್ ದಾಸ್ ಮಹಾಂತ್‌ಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದ. ಇದೇ ಕೇಂದ್ರ ಮಂತ್ರಿಗಳು ಪುರಾತತ್ವ ಇಲಾಖೆಗೆ ಶೋಬನ್ ಸರ್ಕಾರ್ ಕನಸನ್ನು ನಿವೇದಿಸಿ, ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾದರು. ಸರಿ ಪುರಾತತ್ವ ಇಲಾಖೆ ಉನ್ನಾವ್ ಕೋಟೆ ಆವರಣದಲ್ಲಿ ಉತ್ಖನನ ನಡೆಸಲು ತಯಾರಿ ನಡೆಸಿತು. ಇದೇ ಗ್ರಾಮದ ಇನ್ನೊಬ್ಬ ಸಾಧು ಓಂಜೀ ಮಹಾರಾಜ್ ಪ್ರಕಾರ ಕೋಟೆಯ ಆವರಣದಲ್ಲಿ ಎಷ್ಟು ಬಂಗಾರ ಸಿಗಬಹುದೆಂದು ಸಾಮಾನ್ಯ ಜನ ಅಂದಾಜು ಮಾಡಲು ಸಾಧ್ಯವಿಲ್ಲ, ಅಷ್ಟೂ ಬಂಗಾರವನ್ನು ತೆಗೆದಲ್ಲಿ ಇಡೀ ಗ್ರಾಮವನ್ನು ಚಿನ್ನದಿಂದಲೇ ಮುಚ್ಚಿಬಿಡಬಹುದು ಎಂದು ಹೇಳಿಕೆ ನೀಡಿದ. ಊರಿನ ಜನ ಇನ್ನೂ ಮುಂದೆ ಹೋಗಿ ದೌಂಡಿಯಾ ಖೇಡ್‌ಗೆ ರಾಜಾ ರಾಮ್ ಬಕ್ಸ್ ಸಿಂಗ್ ಹೆಸರಿಡಬೇಕು ಮತ್ತು ವಿಮಾನ ನಿಲ್ದಾಣವನ್ನು ನಿರ್ಮಿಸಬೇಕು ಎಂದು ಓಕ್ಕೋರಲಿನಿಂದ ಊರಿನ ಹಿರಿಯ ಅಜಯ್ ಪಾಲ್ ನೇತೃತ್ವದಲ್ಲಿ ಒತ್ತಾಯಿಸಿದರು.
ಸುಳ್ಳನ್ನು ನಂಬಿದಷ್ಟು ಬೇಗ ಜನ ನಿಜವನ್ನು ನಂಬುವುದಿಲ್ಲ ಎಂಬುದು ಬಹುಕಾಲದಿಂದ ಬಳಕೆಯಲ್ಲಿರುವ ನುಡಿ. ಇದೀಗ ಭಾರತದ ಎಲ್ಲಾ ಕಡೆ ಜನ ನಿಧಿಗಾಗಿ ಶೋಧ ನಡೆಸಿದ್ದಾರೆ. ಹಳೇ ಕೋಟೆ ಕೊತ್ತಲಗಳು ಇವರ ಗುರಿ. ಗಂಗಾ ನದಿ ತೀರದಲ್ಲಿರುವ ಫತೇಪುರದ ಅದಂಪುರದಲ್ಲಿ ಸುಮಾರು ೨೫೦೦ ಸಾವಿರ ಟನ್ ಚಿನ್ನ ಇದೆ ಎಂಬ ಗುಲ್ಲು ಹಬ್ಬಿ, ಜನ ಹಾರೆ ಪಿಕಾಸುಗಳನ್ನು ತಂದು ಅಗೆಯಲು ಶುರು ಮಾಡಿದರು. ನೆಲದಾಳದಲ್ಲಿರುವ ಯಾವುದೇ ಅಮೂಲ್ಯ ವಸ್ತುಗಳು ಸರ್ಕಾರದ ಸ್ವತ್ತು ಎಂಬುದು ಅಲಿಖಿತ ಕಾನೂನು. ಹಾಗಾಗಿ ನೆಲವನ್ನು ಅಗೆದು ಅಲ್ಲಿ ಸಿಕ್ಕಿದ ಚಿನ್ನವನ್ನು ಖಾಸಗಿಯಾಗಿ ಉಪಯೋಗಿಸುವಂತಿಲ್ಲ. ಸರ್ಕಾರಕ್ಕೆ ನೀಡಬೇಕು. ತಪ್ಪಿದಲ್ಲಿ ಅದೊಂದು ಗಂಭೀರ ಸ್ವರೂಪದ ಅಪರಾಧ. ಆದರೂ ಜನ ಅಗೆಯುವುದನ್ನು ನಿಲ್ಲಿಸುತ್ತಿಲ್ಲ. ಗಂಗಾ ತೀರದಲ್ಲಿ ಬೇಕಾಬಿಟ್ಟಿ ಮಣ್ಣನ್ನು ಅಗೆದು ಸವಕಳಿ ಮಾಡುತ್ತಿದ್ದಾರೆ. ಈಗಾಗಲೇ ಕೋಟಿ ಸಮಸ್ಯೆಗಳಿಂದ ನರಳುತ್ತಿರುವ ಗಂಗಾಮಾತೆಯನ್ನು ಮಣ್ಣು ಸವಕಳಿಯ ಹೊಸ ಸಮಸ್ಯೆಯಿಂದ ಪಾರು ಮಾಡುವವರು ಯಾರು? ಪುರಾತತ್ವ ಇಲಾಖೆಗೀಗ ಎಲ್ಲೆಲ್ಲೂ ಕಾಯುವುದೇ ಕೆಲಸವಾಗಿದೆ.
ಬಿಜೆಪಿಯ ಬಿಂಬಿತ ಪ್ರಧಾನಿ ಅಭ್ಯರ್ಥಿ ಇದೇ ಸಮಯದಲ್ಲಿ ಚೆನೈನಲ್ಲಿ ಭಾಷಣ ಮಾಡುವಾಗ ಚಿನ್ನ ಅಗೆಯುವ ಬದಲಿಗೆ ವಿದೇಶದಲ್ಲಿರುವ ಕಪ್ಪುಹಣ ವಾಪಾಸು ತನ್ನಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು. ಈ ಮಾತು ಸಾಧು ಶೋಬನ್ ಸರ್ಕಾರ್‌ಗೆ ವಿಪರೀತ ಸಿಟ್ಟು ತರಿಸಿತು. ಕೂಡಲೇ ಉಗ್ರರೂಪದಲ್ಲಿ ಮೋದಿಗೊಂದು ಖಾರವಾದ ಪತ್ರವನ್ನು ಬರೆದು ಹಾಕಿದ. ಪತ್ರ ನೋಡಿದ ಭಾವಿ ಪ್ರಧಾನಿ ಅಭ್ಯರ್ಥಿಗಳು ಯಡವಟ್ಟಾಯಿತು ಎಂದುಕೊಂಡು, ತಮ್ಮದೇ ಪಕ್ಷದ ಶಾಸಕನನ್ನು ಪತ್ರ ಸಮೇತ ಅಟ್ಟಿ ಸಾಧುಗಳನ್ನು ಭೇಟಿ ಮಾಡಿ ಕ್ಷಮೆ ಕೇಳಿದ ಘಟನೆಯು ನಡೆಯಿತು. ಮೋದಿಯ ಪರ ವಕ್ತಾರನಾಗಿ ಹೋದವನು ಖಾನ್‌ಪುರದ ಶಾಸಕ ಸತೀಶ್ ಮಹಾನ. ಅಲ್ಲಾ ಸಾಧುಗಳೇ ಮೋದಿಯವರು ನಿಮ್ಮನ್ನಾಗಲಿ, ನಿಮ್ಮ ಭಾವನೆಗಳನ್ನಾಗಲಿ ದೂರಿಲ್ಲ. ಅಥವಾ ಅವರಿಗೆ ನಿಮ್ಮ ಭಾವನೆಗಳಿಗೆ ಘಾಸಿ ಮಾಡಬೇಕು ಎಂಬ ಇಚ್ಚೆಯೂ ಇರಲಿಲ್ಲ. ಆದ್ದರಿಂದ ದಯವಿಟ್ಟು ಕ್ಷಮಿಸಿ ಎಂದು ಶೋಬನ್ ಸರ್ಕಾರ್ ಪಾದಗಳಿಗೆ ತಲೆಯಿಟ್ಟು ಉದ್ದಂಡ ನಮನ ಮಾಡಿದರು.
ನಾವೇನು ಕಡಿಮೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಯೋಚಿಸಿದರು. ಬಂಗಾರದಲ್ಲಿ ರಾಜ್ಯ ಸರ್ಕಾರಕ್ಕೂ ಅರ್ಧ ಪಾಲು ಬೇಕು ಎಂದು ಹಠ ಹಿಡಿದು, ಕುಳಿತಿದ್ದಾರೆ. ಪುಗಸಟ್ಟೆ ಸಿಕ್ಕಿದರೆ ನಂಗೊಂದು, ನಮ್ಮಪ್ಪನಿಗೊಂದು ಥಿಯರಿ ಇವರದ್ದು. ಮಧ್ಯದಲ್ಲಿ ರಾವ್ ಚಾಂದಿ ಪ್ರತಾಪ್ ಸಿಂಗ್ ಎಂಬುವನೊಬ್ಬ ತಾನು ಇದೇ ರಾಜ ಮನೆತನಕ್ಕೆ ಸೇರಿದವನು, ಕೋಟೆಯ ಆವರಣದಲ್ಲಿ ನಿಜವಾಗ್ಯೂ ಚಿನ್ನವಿದೆ. ಈ ಹಿಂದೆ ಕೂಡ ಚಿನ್ನವನ್ನು ಅಗೆಯಲು ಹಲವರು ಬಂದ್ದಿದ್ದರು. ಆದರೆ ಇವರು ಯಾವಾಗ ಅಗೆತ ಶುರುಮಾಡಿದರೂ ಆ ಹೊತ್ತಿನಲ್ಲಿ ದೊಡ್ಡ ಕಣಜಗಳು ಕಚ್ಚಲು ಶುರು ಮಾಡುತ್ತಿದ್ದವು, ಹಾಗಾಗಿ ಇಲ್ಲಿ ಯಾರೂ ಚಿನ್ನವನ್ನು ಅಗೆಯಲು ಬರುವುದಿಲ್ಲ. ಈಗ ಸರ್ಕಾರವೇ ಚಿನ್ನವನ್ನು ಅಗೆಯಲು ಬಂದಿದ್ದರಿಂದ ಕಣಜದ ಸಮಸ್ಯೆಯಿಲ್ಲ. ಚಿನ್ನದಲ್ಲಿ ನನಗೊಂದು ಪಾಲು ಕೊಡಿ. ನಾನು ಕೋಟೆಯ ಜೀರ್ಣೋದ್ದಾರ ಮಾಡುತ್ತೇನೆ ಎಂದಿದ್ದಾನೆ. ಈ ಮಧ್ಯೆ ಶೋಬನ್ ಸರ್ಕಾರ್ ಹೇಳುತ್ತಿರುವುದು ಸುಳ್ಳಲ್ಲ ಎಂಬುದಕ್ಕೆ ಕೆಲವು ದಾಖಲೆಗಳನ್ನು ಆತ ಬಿಡುಗಡೆ ಮಾಡಿದ್ದಾನೆ. ೧೪ನೇ ಜೂನ್ ೧೮೫೭ರಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಬ್ರೀಟೀಷರು ವಶಪಡಿಸಿಕೊಂಡಿದ್ದ ಚಿನ್ನವನ್ನು ಎಗರಿಸಿ ತಂದು ದೌಂಡಿಯಾ ಖೇರ್‌ನಲ್ಲಿ ತಂದು ಹೂತಿಟ್ಟಿದ್ದಾನೆ ಎಂಬುದಾಗಿ ದಾಖಲೆಗಳನ್ನು ತೋರಿಸುವ ಶೋಬನ್ ಸರ್ಕಾರ್‌ನನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಪುರಾತತ್ವ ಇಲಾಖೆಗಳ ಇರಾದೆ. ಮಾಲ್ವಿ ಲಿಯಾಖತ್ ಅಲಿ ಬ್ರಿಟೀಷರು ಭಾರತದ ರೈತರಿಂದ ಬಲವಂತ ವಸೂಲಿ ಮಾಡಿದ ತೆರಿಗೆಗಳನ್ನು ಚಿನ್ನದ ರೂಪದಲ್ಲಿ ಪರಿವರ್ತಿಸಿ ಇಟ್ಟಿದ್ದ ಖಜಾನೆಯನ್ನು ಲೂಟಿ ಮಾಡಿ ತಂದು ದೌಂಡಿಯಾ ಖೇಡ್‌ನಲ್ಲಿ ಇಟ್ಟಿರುವ ಸಾಕ್ಷ್ಯವಿದೆ ಎನ್ನುತ್ತಾನೆ. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂಬುದು ಪುರಾತತ್ವ ಇಲಾಖೆಯ ಗೋಳು.!!!
ಇದಲ್ಲದೇ ಇನ್ನೊಂದು ಕತೆಯೂ ಇದೆ. ರಾಜಾ ರಾಮ್ ಬಕ್ಸ್ ಸಿಂಗ್ ಚಿನ್ನದ ವ್ಯಾಪಾರಿಯಾಗಿದ್ದ, ಅವನ ಹತ್ತಿರ ಬಹಳಷ್ಟು ಚಿನ್ನವಿತ್ತು. ಅದನ್ನೆಲ್ಲಾ ಇಲ್ಲಿ ಹುಗಿದು ಇಟ್ಟಿದ್ದಾನೆ. ಕನ್ನಡ ರಾಜ್ಯೋತ್ಸವದ ದಿನ ಅಂದರೆ ನವೆಂಬರ್ ೧, ಈ ದಿನ ಸಿಕ್ಕಿದ ಮಾಹಿತಿಗಳನ್ನು ನೋಡಿದರೆ?
ಉನ್ನಾವ್ ಜಿಲ್ಲೆಯ ದೌಂಡಿಯಾ ಖೇಡ್‌ನಲ್ಲಿ ಸಿಕ್ಕಿದವು, ಬರೀ ಬಳೆ ಓಡು, ಮಡಿಕೆ ಚೂರು ಇನ್ನಿತರೆ ವಸ್ತುಗಳು, (ಪ್ಲಾಸ್ಟಿಕ್ ವಸ್ತುಗಳು ಸಿಕ್ಕಿರುವುದಿಲ್ಲ). ಈ ತನ್ಮಧ್ಯೆ ಜೆಡಿಯು ನಾಯಕ ಶರದ್ ಯಾದವ್ ಅವರು ಕೇಂದ್ರ ಸರ್ಕಾರದ ಮಂತ್ರಿ ಚರಣ್ ದಾಸ್ ಮಹಾಂತ್ ಮೇಲೆ ಮೂಡನಂಬಿಕೆಗೆ ಪ್ರಚೋಧನೆ ನೀಡಿದ್ದಾರೆ ಎಂಬುದನ್ನು ಕೇಂದ್ರವಾಗಿಟ್ಟುಕೊಂಡು ಪೊಲೀಸ್ ಕೇಸ್ ಹಾಕಿದ್ದಾರೆ. ಮೂಢನಂಬಿಕೆಗಳಿಂದಾಗಿಯೇ ಅರ್ಧ ಭಾರತ ಹಾಳಾಗಿದೆ, ಇದೀಗ ಕೇಂದ್ರ ಸರ್ಕಾರವೇ ಮೂಢನಂಬಿಕೆಗಳಿಗೆ ಪೋಷಣೆ ನೀಡುತ್ತಿದೆ. ಆದ್ದರಿಂದ ಕೇಂದ್ರಮಂತ್ರಿಯ ಮೇಲೆ ಮೊಕದ್ದಮೆಯನ್ನು ದಾಖಲು ಮಾಡಿ ಜೊತೆಗೆ ಶೋಬನ್ ಸರ್ಕಾರ್ ಎಂಬ ನಾಟಕದವನನ್ನು ದಸ್ತಗಿರಿ ಮಾಡಿ ಜೈಲಿಗೆ ಹಾಕಿ ಎಂದು ಗುಡುಗಿದ್ದಾರೆ (ಕರ್ನಾಟಕ ಸರ್ಕಾರದಲ್ಲಿ ಕಾಂಗ್ರೇಸ್ ಸರ್ಕಾರವಿದೆ, ಮುಖ್ಯಮಂತ್ರಿ ಸಿದ್ರಾಮಯ್ಯನವರು ಪ್ರಗತಿಪರರು, ಮಾಟ-ಮಂತ್ರ, ಜೋತಿಷ್ಯ ಇವುಗಳನ್ನು ಪ್ರೋತ್ಸಾಹಿಸುವವರಿಗೆ ಮುಂದೆ ಕಾನೂನು ರೀತಿಯಲ್ಲಿ ಪಾಠ ಕಲಿಸಲಾಗುವುದು ಎಂಬಂತಹ ಎಚ್ಚರಿಕೆಯನ್ನು ನೀಡಿದ್ದಾರೆ, ಅದೇ ಸಮಯದಲ್ಲಿ ಉನ್ನಾವ್ ನಾಟಕ ಶುರುವಾಗಿದ್ದು).
ಕಡೆಯದಾಗಿ, ೧೨೦ ಕೋಟಿ ಜನಸಂಖ್ಯೆಯನ್ನು ಆಳುವವರು ಬರೀ ೫೨೫ ಸಂಸದರು. ಇವರ ಅಡಿಯಲ್ಲೇ ಎಲ್ಲಾ ರಾಜ್ಯಗಳು, ನ್ಯಾಯಾಧಿಕರಣ, ಸರ್ವೋಚ್ಛ ನ್ಯಾಯಾಲಯ, ಪಂಚಾಯ್ತಿಗಳು, ಜಿಲ್ಲಾ ಪಂಚಾಯ್ತಿಗಳು, ತಾಲ್ಲೂಕು ಪಂಚಾಯ್ತಿಗಳು ಹೀಗೆ ಎಲ್ಲಾ ಆಡಳಿತ ವ್ಯವಸ್ಥೆಗಳು ಬರುವುದು. ಪ್ರಾಣಿ ಪ್ರಪಂಚದಲ್ಲಿ ಆಹಾರ ಚಕ್ರದಲ್ಲಿ ಉತ್ತುಂಗ ಸ್ಥಾನದಲ್ಲಿ ಇರುವ ಪ್ರಾಣಿಗಳೆಂದರೆ, ಹುಲಿ-ಸಿಂಹ-ಚಿರತೆ-ಡೇಗೆ-ಹಾವು ಇತ್ಯಾದಿಗಳು. ಅವೆಲ್ಲಾ ಹಿಂಸ್ರ ಪಶುಗಳೆ, ಆದರೆ ನೈಜವಾದ ಅಥವಾ ನೈಜವಾಗಿರುವ ಪ್ರಕೃತಿ ವ್ಯವಸ್ಥೆಯಲ್ಲಿ ಹಿಂಸ್ರಪಶುಗಳು ಕೂಡ ಜೀವವೈವಿಧ್ಯವನ್ನು ಪರಿಸರದ ಆರೋಗ್ಯವನ್ನು ಕಾಪಾಡುವಲ್ಲಿ ತಮ್ಮದೆ ಆದ ಪಾತ್ರವನ್ನು ನಿರ್ವಹಿಸುತ್ತವೆ. ಆದರೆ ಮನುಜ ವ್ಯವಸ್ಥೆಯಲ್ಲಿ ಏನಾಗಿದೆಯೆಂದರೆ? ಮತ್ತೆ ಉನ್ನಾವ್‌ನ ಚಿನ್ನದ ವಿಷಯಕ್ಕೆ ಬಂದರೆ, ಸಾಧು ಶೋಬನ್ ಸರ್ಕಾರ್ ಹೇಳುತ್ತಾನೆ ನನ್ನ ಅನುಮತಿಯಿಲ್ಲದೆ, ನನ್ನ ಸಹಕಾರವಿಲ್ಲದೆ ಅಲ್ಲಿರುವ ೧೦೦೦ ಸಾವಿರ ಟನ್ ಚಿನ್ನ ಯಾರಿಗೂ ದಕ್ಕುವುದಿಲ್ಲ ಇದನ್ನು ಮಾಧ್ಯಗಳು ದೇಶದ ಜನರೆದುರಿಗೆ ಅಂದರೆ ಎಲ್ಲರಿಗೂ ಗೊತ್ತಾಗುವಂತೆ ಬಿತ್ತರಿಸಬೇಕು ಎನ್ನುತ್ತಾನೆ. ಆದರಿಲ್ಲಿ, ಮನುಜನ ಜೀವನ ಚಕ್ರದಲ್ಲಿ ಬರುವ ಉನ್ನತ ಪ್ರಾಣಿಗಳು, ಅಂದರೆ ಸಂಸದರು, ಶಾಸಕರು, ಅಥವಾ ಇನ್ಯಾವುದೇ ಸಮಾಜದ ಸ್ವಾಸ್ಥ್ಯವನ್ನು ಚುನಾಯಿತ ಪ್ರತಿನಿಧಿಗಳು ಇವತ್ತು ಸುಲಭದ ನಿಧಿಯ ಹಿಂದೆ ಬಿದ್ದಿದ್ದಾರೆ. ಇದೇ ಪ್ರವೃತ್ತಿ ಮುಂದುವರೆದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ (ಆರ್ಥಿಕವಾಗಿ ಹಿಂದುಳಿದವರು) ಬಾಳುವುದು ಅಸಾಧ್ಯವೇ ಸೈ?
******