ಮನುಷ್ಯ !
ಪ್ರೀತಿಸುವ ದ್ವೇಷಿಸುವ, ಕಾಡುವ ಕಾಡಿಸುವ, ಹೆದರುವ ಹೆದರಿಸುವ, ಅಳಿಸುವ ಸೃಷ್ಟಿಸುವ, ಕರುಣೆಯ ಕ್ರೌರ್ಯದ ಮನುಷ್ಯ. ಧರ್ಮದ ಹೆಸರಿನಲ್ಲಿ ಹಸಿದ ಹೊಟ್ಟೆಗೆ ತುತ್ತು ಅನ್ನ ಕೊಡುವ ಮನುಷ್ಯ ಅದೇ ಧರ್ಮದ ಹೆಸರಿನಲ್ಲಿ ಅನ್ನಕ್ಕೆ ವಿಷವನ್ನಿಕ್ಕಬಲ್ಲ. ಆದಿ ಮಾನವ ನಂತರದ ಆಧುನಿಕ ಮಾನವ ಬದುಕಿಗೊಂದು ಶಿಸ್ತಿನ ಚೌಕಟ್ಟು ಬೇಕು ಎಂದು ಸೃಷ್ಟಿಸಿದ ಧರ್ಮದ ಸರಳ ರೇಖೆಗಳನ್ನ ತಿರುಚಿ ವಕ್ರವಾಗಿಸಿ ಸುಂದರ ರಂಗೋಲಿಯ ಸಾಲುಗಳನ್ನು ಕುಣಿಕೆಯಾಗಿಸಿ ಕುತ್ತಿಗೆಗೆ ಬಿಗಿಯಬಲ್ಲ ಮನುಷ್ಯ. ಕ್ರೌರ್ಯ ಮತ್ತು ಕರುಣೆ ಒಂದೇ ಮುಖದ ಎರಡು ಮುಖವಾಡಗಳು, ತೊಟ್ಟು ಕಣ್ಣೀರಿಟ್ಟರೆ ಕರುಣೆಯನ್ನು ನಟಿಸಿದಷ್ಟೇ ಸುಲಭವಾಗಿ ಕ್ರೌರ್ಯದಿಂದ ಕಣ್ಣೀರು ಹಾಕಿಸಲು ಮನುಷ್ಯನಿಗೆ ಸಾಧ್ಯ. ಪುಟ್ಟ ಕಂದಮ್ಮಗಳನ್ನು ಭೂಮಿಗೆ ಜೋಪಾನವಾಗಿ ತರುವ ದೇವತೆಯಂತ ಹೆಣ್ಣು ಜೀವಕ್ಕೆ ಹಲವಾರು ಅಪರಾಧಿ ಪಟ್ಟ ಕಟ್ಟಿ ಕಲ್ಲು ಹೊಡೆದು ಸಾಯಿಸುವ ಅಥವಾ ಜೀವಂತವಾಗಿ ಸುಡುವ ಹಲವಾರು ಪದ್ಧತಿಗಳು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಇವೆ. ( ಲೇಖನ ಸಂಬಂಧಿಸಿದ್ದು ಮನುಷ್ಯನ ಕ್ರೂರತೆಯ ಆಧಾರದ ಮೇಲೆ ಹೊರತು ಧರ್ಮ ಜಾತಿ ಇಲ್ಲಿ ಮುಖ್ಯವಲ್ಲ).
ಸಿನಿಮಾದ ಕಥೆ, ಪಾತ್ರಗಳು, ಭಾವನೆಗಳು ನೋಡುಗನ ಎದೆಯಲ್ಲಿನ ಯಾವುದೋ ತಂತಿಯನ್ನು ಜಗ್ಗಿದ ಅನುಭೂತಿ ಕೊಡುವ ಸಿನಿಮಾಗಳು ದಶಕಗಳಲ್ಲಿ ಒಂದೊಂದು ಮಾತ್ರವಾಗಿರಬಹುದು. ಸಿನಿಮಾವೊಂದು ಮನುಷ್ಯನ ನೋವು, ಕಲೆ ಮತ್ತು ಸತ್ಯವನ್ನ ಇಡೀಯಾಗಿ ಬಿಚ್ಚಿಡಬಹುದು. ಅದ್ಭುತ ಸಿನಿಮಾವೊಂದು ಶೂನ್ಯದಿಂದ ಎಲ್ಲ ಭಾವನೆಗಳ ಸೃಷ್ಟಿಸಬಹುದು. ಪರ್ಷಿಯನ್ ಸಿನಿಮಾ ನಿರ್ದೇಶಕರು ಇಂಥಹ ಅದ್ಭುತ ಸಿನಿಮಾಗಳ ಮಾಂತ್ರಿಕ ಸೃಷ್ಟಿಕರ್ತರು. ತನ್ನ ಎಲ್ಲ ಮೂಲಭೂತನದ ವೈರುಧ್ಯಗಳ ನಡುವೆಯೂ ಇರಾನ್ ಯಾವಾಗಲೂ ಅಸಾಮಾನ್ಯವಾದ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯಕ್ಕೆ ಕೇಂದ್ರವಾಗಿದೆ. ಉಮರ್ ಖಯ್ಯಾಮ್, ಮೌಲಾನಾ ರುಮಿ ಮತ್ತು ಹಫೀಜ್ ಅವರಂತವರಿಂದ ಫಲವತ್ತಾದ ಇರಾನಿನ ಭೂಮಿಯ ಕಳೆಯ ಆಳ ಜಗತ್ತಿನ ಉಳಿದೆಲ್ಲ ಸಿನಿಮಾ ಲೋಕಕ್ಕಿಂತ ಭಿನ್ನ ಮತ್ತು ಸುಂದರ.
The Stoning of Soraya M ಎನ್ನುವದು ನೈಜ ಘಟನೆಯನ್ನು ಮತ್ತು ಅದೇ ಹೆಸರಿನ ಕಾದಂಬರಿಯಾಧಾರಿತ ಸಿನಿಮಾ. ಮುಖ್ಯ ಭೂಮಿಕೆಯಲ್ಲಿ ಒಬ್ಬಳು ಇರಾನಿಯನ್-ಅಮೆರಿಕನ್ ಮುಖ್ಯ ನಟಿಯಾ, ನಿರ್ದೇಶಕರಾಗಿ ಒಬ್ಬ ಇರಾನಿಯನ್-ಅಮೆರಿಕನ್ ನಿರ್ದೇಶಕ ಮತ್ತು ಉಳಿದ ಪಾತ್ರಗಳಾಗಿ ಸ್ಥಳೀಯ ಇರಾನಿಯನ್ನರ ಜೊತೆಗೂಡಿಸಿಕೊಂಡು ಎರಕ ಹೊಯ್ದ ಸಮಗ್ರ ಚಿತ್ರವಾದರೂ ಚಿತ್ರ ಲೇಖಕ ಮತ್ತು ನಿರ್ದೇಶಕ ಹಾರೈಕೆ ಪ್ರಕಾರ ಸಿನಿಮಾದ ಸಂಪೂರ್ಣ ಚಿತ್ರೀಕರಣವಾದದ್ದು ಪರ್ಷಿಯನ್ ನೆಲದಲ್ಲಿಯೇ. ಈ ಸಿನಿಮಾವನ್ನು ೬ ವಾರಗಳಲ್ಲಿ ಜೋರ್ಡಾನ್ ಸಮೀಪದ ಒಂದು ಕಣಿವೆ ಗ್ರಾಮದಲ್ಲಿ ಚಿತ್ರಿಸಲಾಯಿತು. ಸಿನಿಮಾದ ಆರಂಭದಲ್ಲಿ ವಯಸ್ಸಾದ ಹೆಂಗಸೊಬ್ಬಳು ನಾಯಿಗಳನ್ನು ಓಡಿಸುತ್ತಿರುತ್ತಾಳೆ ಮತ್ತು ಅದೇ ಸಮಯದಲ್ಲಿ ಕಾರೊಂದು ಅವಳ ಗ್ರಾಮದಲ್ಲಿ ಕೆಟ್ಟು ನಿಂತಿರುವದು ಕಂಡುಬರುತ್ತದೆ. ಈ ಕಾರು ನೆರೆಯ ದೇಶದ ಗಡಿಯನ್ನು ತಲುಪಲು ಹೊರಟಿರುವ ಒಬ್ಬ ಫ್ರೆಂಚ್ ಇರಾನಿನ ಪತ್ರಕರ್ತನಿಗೆ ಸೇರಿದ್ದು. ನಾಯಿಯನ್ನು ಓಡಿಸುತ್ತಿರುವ ವಯಸ್ಸಾದ ಹೆಂಗಸು ಈ ಪತ್ರಕರ್ತನ ಜೊತೆಗೆ ನಡೆಸುವ ಸೊರಯ್ಯ ಎನ್ನುವ ಹೆಣ್ಣು ಮಗಳೊಬ್ಬಳು ಕಲ್ಲು ಹೊಡೆತದ ಶಿಕ್ಷೆಗೆ ಗುರಿಯಾದ ಕಥೆಯನ್ನು ಹೇಳುವ ಸಂಭಾಷಣೆಯೇ ಸಿನಿಮಾ.
ಸೊರಯ್ಯ ಪತಿ ಅಲಿ ಕ್ರೌರ್ಯ ತುಂಬಿದ ಯಾವುದಕ್ಕೂ ಹೇಸದ ಸ್ವಾರ್ಥಿ ಮನುಷ್ಯ. ಅವನು ಮರು ಮದುವೆಯಾಗಲು ಹೊರಟಿರುವ ಪುಟ್ಟ ಬಾಲೆಯನ್ನು ಯಾರೂ ಯಾವತ್ತೂ ಅವಳಿಗೆ ಈ ಮದುವೆಯ ಕುರಿತು ಒಪ್ಪಿಗೆ ಇದೆಯೇ ಎಂದು ಕೇಳಿಲ್ಲ. ಮದುವೆಯನ್ನು ನಿರ್ಧರಿಸಲಾಗಿದೆ. ಗ್ರಾಮದ ಮುಲ್ಲಾ ಗೆ ಅಲಿ ಹೇಳಿದಂತೆ ನಡೆದುಕೊಳ್ಳಬೇಕಾದ ಅನಿವಾರ್ಯತೆಯಿದೆ ಇಲ್ಲವಾದರೆ ಮುಲ್ಲಾ ಜೈಲಿನಲ್ಲಿ ಶಿಕ್ಷೆಗೊಳಗಾಗಿದ್ದ ಒಬ್ಬ ಅಪರಾಧಿ ಎನ್ನುವ ಅಲಿಗೆ ಮಾತ್ರ ಗೊತ್ತಿರುವ ಸತ್ಯ ಎಲ್ಲರಿಗೆ ಗೊತ್ತಾಗುವ ಭಯವಿದೆ. ಗ್ರಾಮದ ಮೇಯರ್ ಗೆ ಇವರು ಮಾಡುತ್ತಿರುವದು ಅಲ್ಲಾನ ದೃಷ್ಟಿಯಿಂದ ತಪ್ಪು ಎನ್ನುವದು ತಿಳಿದಿದೆ ಆದರೆ ಅದನ್ನು ತಡೆಯುವ ಧೈರ್ಯವಿಲ್ಲ. ೧೪ ವರ್ಷದ ಬಾಲೆಯನ್ನು ಮದುವೆಯಾಗಬೇಕಾದರೆ ಅಲಿಗೆ ಸೊರಯ್ಯಳಿಂದ ವಿಚ್ಛೇದನ ಪಡೆಯುವ ಅಗತ್ಯತೆಯಿದೆ ಆದರೆ ತನ್ನ ಮಕ್ಕಳಿಗೆ ಜೀವನಾಂಶ ಕೊಡದೆ ವಿಚ್ಛೇದನ ತೆಗೆದುಕೊಳ್ಳಲು ಸೊರಯ್ಯಾ ಒಪ್ಪುತ್ತಿಲ್ಲ. ಈ ಸೊರಯ್ಯಾಳನ್ನು ಪೂರ್ವನಿಯೋಜಿತ ಅಪರಾಧಕ್ಕೆ ಸಿಕ್ಕಿಸಿ ಕಲ್ಲು ಹೊಡೆದು ಸಾಯಿಸುವ ಶಿಕ್ಷೆಗೆ ಗುರಿ ಮಾಡುವಲ್ಲಿಗೆ ಸಿನಿಮಾ ತುತ್ತತುದಿ ತಲುಪಿರುತ್ತದೆ.
ಸಿನಿಮಾದ ಕೊನೆಯಲ್ಲಿ ಬರುವ ಕಲ್ಲು ಹೊಡೆಯುವ ದೃಶ್ಯ ಸಹಿಸಲಾರದ ಚಿತ್ರಣ.. ಹೊಂಡವೊಂದನ್ನು ತೋಡಿ ಬಿಳಿಯ ಬಟ್ಟೆ ಧರಿಸಿದ ಸೊರಯ್ಯಾ ಳನ್ನು ನಿಲ್ಲಿಸಿ ಮಣ್ಣು ಮುಚ್ಚಲಾಗುತ್ತಿದೆ, ನೋಡುಗರಿಗೆ ಚೀರಿ ಹೇಳಬೇಕೆನಿಸುತ್ತದೆ, ಅಚ್ಚ ಬಿಳಿಯ ಬಟ್ಟೆಯಲ್ಲಿ ಸೊರಯ್ಯಾಳನ್ನು ಮುಚ್ಚಲು ಹಾಕುವ ಪ್ರತಿ ಗುದ್ದಲಿ ಮಣ್ಣು ಇಲ್ಲೇ ಎಲ್ಲೋ ನಡೆದಂತಿದೆ. ಉತ್ತರ ಪ್ರದೇಶದಲ್ಲಿ, ಪಾಕಿಸ್ತಾನದಲ್ಲಿ, ಆಫ್ರಿಕಾದಲ್ಲಿ ಬಿಹಾರದಲ್ಲಿ, ನಮ್ಮದೇ ರಾಜ್ಯದಲ್ಲಿ ಪ್ರತಿ ದಿನ ಹೊಡೆತ ತಿನ್ನುವ, ಗಂಡಿನ ಪಾಶವೀ ಕಾಮಕ್ಕೆ ಬಲಿಯಾಗುವ ಎಲ್ಲ ಹೆಣ್ಣು ಮಕ್ಕಳ ಪ್ರತಿನಿಧಿಯಾಗಿ ನಿಂತಿರುವ ಸೊರಯ್ಯಾಳ ಮೈ ಮೇಲೆ ಬೀಳುವ ಪ್ರತಿ ಗುದ್ದಲಿ ಮಣ್ಣು, ಮನುಷ್ಯ ಸಂತತಿಗೆ ಬೀಳುವ ನಿಟ್ಟುಸಿರಿನ ಶಾಪ. ಸೊಂಟದವೆರೆಗೆ ಮುಚ್ಚಿದ ಮಣ್ಣು ಎಲ್ಲ ರಕ್ತ ಪಿಪಾಸುಗಳ ಕೈ ಒತ್ತಿ ಹಿಡಿದಂತೆ ಭಾಸವಾಗುತ್ತಿದೆ. ಗ್ರಾಮದ ಹುಡುಗರು ಕೈ ಬಂಡಿಯಲ್ಲಿ ಎಸೆಯಲು ಹದವಾದ ಕಲ್ಲುಗಳನ್ನು ಪೇರಿಸಿಕೊಂಡು ಬರುತ್ತಿದ್ದಾರೆ, ತಳ್ಳು ಗಾಡಿಯ ಮೇಲೆ ಮನುಷ್ಯತ್ವವನ್ನು ತುಂಡು ತುಂಡಾಗಿ ಕತ್ತರಿಸಿ ಕಲ್ಲುಗಳನ್ನು ಮಾಡಲಾಗಿದೆ. ಪ್ರತಿ ಕಲ್ಲು ಎಸೆತಕ್ಕೂ, ಹೊಡೆತಕ್ಕೂ ನಿನ್ನೆಯವೆರೆಗೆ ಈ ಕ್ಷಣದ ಹಿಂದಿನವರೆಗೆ ಅಮ್ಮಳಾಗಿದ್ದ ಹೆಂಡತಿಯಾಗಿದ್ದ ಗೆಳತಿಯಾಗಿದ್ದ ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಳಾಗಿದ್ದ ಸೊರಯ್ಯಾಳ ಮುಖ ಕಣ್ಣು ಕಿವಿ ಗಲ್ಲ ಕೆನ್ನೆ ಹಣೆ ಕುತ್ತಿಗೆ ಎಲ್ಲೆಡೆಯಿಂದ ರಕ್ತ ತೊಟ್ಟಿಕ್ಕಲು ಪ್ರಾರಂಭಿಸಿದೆ, ಇಡೀ ಮಾನವ ಸಮುದಾಯವೇ ಎಲ್ಲರ ಆತ್ಮಗಳನ್ನು ಉದ್ದುದ್ದ ತೂಗು ಹಾಕಿ ಕಲ್ಲುಗಳಿಂದ ಬಡಿಯುತ್ತಿರುವ೦ತಿದೆ. ಸಾಯುತ್ತಿರುವದು ಸೊರಯ್ಯ ಮಾತ್ರವಲ್ಲ, ಹೊಡೆಯುತ್ತಿರುವದು ಸೊರಯ್ಯ ಎನ್ನುವ ಒಬ್ಬಳು ಹೆಣ್ಣಿಗಲ್ಲ, ರೊಯ್ಯನೆ ಬೀಸಿದ ಕಲ್ಲು ಸಾಗುತ್ತಿರುವದು ಹೂತಿಟ್ಟವಳ ಕಡೆಗಲ್ಲ, ಮನುಕುಲದ ಪ್ರೀತಿ ಕರುಣೆ ಶಾಂತಿ ಪ್ರೇಮಕ್ಕೆ ಬೀಸಿದ ಏಟು.
ಈ ಕಲ್ಲು ಹೊಡೆತ ನಡೆದಿದ್ದು ೧೯೮೬ ರಲ್ಲಿ ಇಸ್ಲಾಮಿಕ್ ಕ್ರಾಂತಿಯಾದ ನಂತರ. ಮೂಲಭೂತವಾದಿಗಳು ಅಧಿಕಾರಕ್ಕೆ ಬಂದ ನಂತರ ನ್ಯಾಯದ ಬಾಗಿಲುಗಳು ಮುಚ್ಚಿದವು ಮತ್ತು ಅಲ್ಲಿ ಕ್ರೂರತೆಯ ವಾಗ್ದಂಡನೆಯಂತ ಪದ್ಧತಿಗಳು ತೆರೆದವು. ಇವತ್ತು ಇರಾನಿನ ಬೀದಿಗಳಲ್ಲಿ, ಮೂಲಭೂತವಾದಿಗಳ ಕಾನೂನಿನ ವಿರುದ್ಧ ಹೋರಾಟಗಳು ಆರಂಭವಾಗಿವೆ.
ಧರ್ಮದ ಹೆಸರಿನಲ್ಲಿ ಅಮಾಯಕ ಜೀವಗಳು ಅಧರ್ಮಕ್ಕೆ ಬಲಿಯಾಗುತ್ತಿವೆ, ಧಿಕ್ಕಾರವಿರಲಿ ಇಂಥ ಎಲ್ಲ ಧರ್ಮ ಪ್ರವರ್ತಕರಿಗೆ, ಧರ್ಮ ನಿಯಮಗಳಿಗೆ.
ಸಿನಿಮಾ : ದಿ ಸ್ಟೋನಿಂಗ್ ಆಫ್ ಸೊರಯ್ಯ ಎಂ (The Stoning of Soraya M)
ಭಾಷೆ : ಪರ್ಷಿಯನ್
ದೇಶ : ಅಮೇರಿಕಾ
ನಿರ್ದೇಶನ : ಸೈರಸ್ ನೋವಾರ್ಸ್ತೆ
ಇಂತಿ,
ಸಚೇತನ
*****