ಬಿದ್ದಾಗಲೆಲ್ಲಾ ಎತ್ತಿ ಎಚ್ಚರಿಸಿದ ಅಪ್ಪನೆಂಬ ಧೀಮಂತ: ನಾಗರೇಖಾ ಗಾಂವಕರ


ನನ್ನ ಅಪ್ಪನ ಬಗ್ಗೆ ಬರೆಯಲೇನಿದೆ? ಬದುಕಿನ ಹಾಳೆಯಲ್ಲಿ ಮಕ್ಕಳ ಮುಖದಲ್ಲಿಯ ನಗುವಿಗೋಸ್ಕರ ತೇಯ್ದ ಜೀವನದ ಹಾದಿಯಲ್ಲಿ ಕಂಡುಂಡಿದ್ದು ಸಂಕಟಗಳೇ. ಅದೆಷ್ಟು ಆಪ್ತವಾಗಿತ್ತು ಕೆಲವೊಮ್ಮೆ ಅವರ ಮಾತು, ಪ್ರೀತಿ ತುಂಬಿದ ನೋಟ,ಬಾಲ್ಯದ ಬಿಂಬಗಳು ಜೀವ ರಸವೂಡುವ ಪ್ರತಿಮೆಗಳು. ತಂದೆ ತಾಯಿಯೆಂದರೆ ಭಯಮಿಶ್ರಿತ ಪ್ರೀತಿ. ಅಪ್ಪನೆದುರು ಎದೆ ಸೆಟೆಸಿ ಮಗುವಾಗಿದ್ದಾಗ ಹಠಮಾಡಿ ಕಾಡುತ್ತಿದ್ದ ಅದೇ ನಾನು ಕಿಶೋರಾವಸ್ಥೆಗೆ ಬಂದಂತೆ ಬಾಲ್ಯದ ಹುಡುಗಾಟ ಅಲ್ಪಸ್ವಲ್ಪವೇ ಕಣ್ಮರೆಯಾಗಿತ್ತು.

ತಂದೆಯೆದುರು ತಲೆ ಎತ್ತಿ ಮಾತನಾಡಲು ಆಗದ ಸಂಕೋಚ ತಾನೆ ತಾನಾಗಿ ಹುಡುಗಿಯರಲ್ಲಿ ಮೂಡುತ್ತದೆ. ಅದಕ್ಕೂ ಮುಖ್ಯ ಕಾರಣವೆಂದರೆ ಆ ಕಾಲದ ಸಂಸ್ಕೃತಿ. ತಂದೆ ಎಂಬ ಮನೆಯ ಯಜಮಾನ ಆತನ ಗೌರವ ಅದನ್ನು ಸಂಭಾಳಿಸುವ ತಾಯಿ ಮಕ್ಕಳಿಗೆ ತಂದೆಯ ಬಗ್ಗೆ ಭಯ ಪ್ರೀತಿ, ಗೌರವ ಮೂಡುವಂತೆ ರೀತಿ ನೀತಿಗಳ ಮಕ್ಕಳಿಗೆ ಗೊತ್ತಿಲ್ಲದೇ ಬೆಳೆಸುತ್ತಿದ್ದರು. ನನ್ನಮ್ಮ ಆ ಶಿಸ್ತಿನ ಗೌರವ ತಂದೆಯ ಮೇಲಿರಲಿ ಎಂಬಂತೆ ಅಪ್ಪನೆಂದರೆ ಹೆದರಿಕೆ ಇರುವಂತೆ ಯಾವಾಗಲೂ ಅವರ ಪರ ವಹಿಸಿ ತಂದೆಯೆಂದರೆ ಹಾಗೆ ಇರಬೇಕು ಎಂಬ ತಮ್ಮದೇ ಕಾನೂನು ಮಾಡಿದಂತಿತ್ತು. ಕೆಲವೊಮ್ಮೆ ತಂದೆಯೊಂದಿಗೆ ಚರ್ಚೆ ವಿಚಾರಗಳ ನೇರ ಸಂವಹನವಾಗುತ್ತಿದ್ದರೆ ಮತ್ತೆ ಕೆಲವೊಮ್ಮೆ ಅದು ಬಿಸಿ ತುಪ್ಪದ ಸಮಸ್ಯೆಯಾಗಿದ್ದರೆ ತಾಯಿಯ ಮೂಲಕವೇ ರವಾನೆಯಾಗಬೇಕಿತ್ತು.ಅದೇನೋ ಅಂಜಿಕೆ. ಅಮ್ಮನಲ್ಲಿ ಮಾತಾಡಿದಂತೆ ಅವರಲ್ಲಿ ನಾವುಗಳು ಗಂಡಾಗಲಿ ಹೆಣ್ಣು ಮಕ್ಕಳಾಗಲಿ ತೀರಾ ಸಲಿಗೆಯಿಂದ ಮಾತಾಡುತ್ತಿರಲಿಲ್ಲ. ಎ ಆರ್ ಮಣಿಕಾಂತ ಹೇಳುವಂತೆ ಅದಕ್ಕೆ ಅಪ್ಪ ಎಂದರೆ ಆಕಾಶ ಎಂಬಂತೆ ಅವರಿದ್ದರು. ಕೆಲವೊಮ್ಮೆ ಅದೆಷ್ಟು ಕೋಪ ತಾಪ..

ಆ ಸಂಗತಿ ನನಗೆ ನೆನಪಿಲ್ಲ. ನಾನಾಗ ತೀರಾ ಎಳಸು ಬಾಲೆಯಂತೆ. ಆದರೆ ಆ ಘಟನೆಯ ಚಿತ್ರಣ ಮನೆಯ ಮಾತಿನ ಜಗುಲಿಯಲ್ಲಿ ಆಗಾಗ ನಡೆಯುತ್ತಲೇ ಇರುತ್ತಿತ್ತು. ಶಾಲೆ ಕಾಲೇಜುಗಳಿಗೆ ರಜೆ ಬಿದ್ದಾಗಲೆಲ್ಲಾ ಹಳೆಯ ನೆನಪುಗಳ ತೆಗೆದು ಅವುಗಳು ವಿಮರ್ಶೆ ಮಾಡಿ, ಹಾಸ್ಯ ಚಟಾಕಿಗಳ ಹಾರಿಸುವ ಸಂಪ್ರದಾಯ ನಮ್ಮ ,ಮನೆಯಲ್ಲಿತ್ತು. ಆಗಾಗ ನೆನಪಿನ ದೋಣಿಯಲ್ಲಿ ಈಗಲೂ ಪಯಣಿಗರಾಗುವುದು ಹಳ್ಳಿಯಲ್ಲಿ ಅಪರೂಪವಲ್ಲ. ಆರು ಮಕ್ಕಳ ಹೆತ್ತ ಅಮ್ಮ ಪೇಟೆಯ ಬದುಕು ಸಾಕಾಗಿ ಹಳ್ಳಿಯಲ್ಲಿ ತಂದೆಗೆ ಹೇಳಿ ಹತ್ತಾರು ಎಕರೆ ಜಮೀನು ಖರೀದಿಸುವಂತೆ ಮಾಡಿದ್ದರು. ಅದೂ ತನ್ನ ತವರೂರಲ್ಲಿಯೇ. ನಾನು ಹುಟ್ಟಿದ ಒಂದೇ ವರ್ಷಕ್ಕೆ ಹಳ್ಳಿಗೆ ವಾಸ್ತವ್ಯ ಬದಲಾಯಿಸಿದ್ದರು ಅಮ್ಮ. ಮನೆಯಲ್ಲಿ ಆರು ಜನ ಮಕ್ಕಳ ಬೆಳೆಸುವ ಕಾಲಕ್ಕೆ ಸಂಸಾರದ ಜಂಜಾಟಕ್ಕೆ ನುಗ್ಗು ನುಗ್ಗಾಗಿದ್ದ ತಂದೆ ತಾಯಿ ಹೈರಾಣಾಗಿದ್ದರು. ಅಮ್ಮ ಆರು ಮಕ್ಕಳ ಕಟ್ಟಿಕೊಂಡು ಹಳ್ಳಿಯಲ್ಲಿ ಖರೀದಿಸಿದ ಜಮೀನು ಉಸ್ತುವಾರಿ ಮಾಡುತ್ತ ಇದ್ದರೆ ತಂದೆ ನೌಕರಿ ಮಾಡುತ್ತ ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದರು. ಎಲ್ಲರೂ ಶಾಲೆ ಕಲಿವ ಪ್ರಾಯದವರು. ಅದಾಗ ನಾನು ಒಂದನೇ ತರಗತಿಯಲ್ಲಿದ್ದೆ. ದೊಡ್ಡವನಾಗ ಆಗಷ್ಟೇ ಕಾಲೇಜು ಮೆಟ್ಟಿಲು ಏರಿದ್ದ. ಉಳಿದವರೆಲ್ಲ ಹೈಸ್ಕೂಲು, ಪ್ರಾಥಮಿಕ ಹಂತದಲ್ಲಿದ್ದೆವು. ನನಗೋ ಐದೇ ವರ್ಷಕ್ಕೆ ಶಾಲೆಗೆ ಸೇರಿಸಿದ್ದರು. ಅಕ್ಕಂದಿರೊಂದಿಗೆ ದೂರದ ಒಂದೂವರೆ ಕಿ. ಮಿ ದೂರದ ಶಾಲೆಗೆ ದಿನಕ್ಕೆರಡು ಬಾರಿ ಹೋಗಿ ಬರುತ್ತಿದ್ದೆ. ಆ ಐದನೇ ವಯಸ್ಸಿಗೆ ಮೊದಲ ನೋವಿನ ಗಾಯ ಎಳೆದಿತ್ತು ಬರಸಿಡಿಲು ಬಡಿದಿತ್ತು ಎಳೆಯ ಮನಸ್ಸಿನ ಮೇಲೆ.

ಶಾಲೆಯಿಂದ ಆಗಷ್ಟೇ ಮನೆಗೆ ಅಕ್ಕನೊಂದಿಗೆ ಮಧ್ಯಾಹ್ನದ ಊಟಕ್ಕೆ ಬಂದರೆ ಮನೆಯಲ್ಲಿ ದುಃಖದ ಛಾಯೆ.ಹತ್ತಾರು ಜನ ಮನೆ ಮುಂದೆ ಜಮಾಯಿಸಿದ್ದರು.ಮನೆಯ ಮುಂದೊಂದು ಅಂಬಾಸಿಡರ ಕಾರಿತ್ತು. ನಾಲ್ಕೈದು ಜನ ಮನೆಯಿಂದ ತಂದೆಯನ್ನು ಹೊತ್ತುಕೊಂಡಂತೆ ಹೊರಗೆ ತಂದು ಕಾರಿನಲ್ಲಿ ಮಲಗಿಸಿದರು.ಅವರೊಟ್ಟಿಗೆ ಅಮ್ಮ ಅಣ್ಣ ಹೊರಟುಬಿಟ್ಟರು. ಅಮ್ಮನೋ ಮಾತಾಡಲಾಗದಷ್ಟು ಸ್ಥಂಬಿತಳಾಗಿದ್ದಳು.ಏನಾಗಿದೇ ಎಂದು ತಿಳಿಯುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅಲ್ಪ ಸ್ವಲ್ಪ ಅರ್ಥೈಸಿಕೊಂಡ ಅಕ್ಕ ಜೋರಾಗಿ ಅಳುತ್ತ ಮನೆಮುಂದಿನ ಅಂಗಳದಲ್ಲಿ ಮಣ್ಣಿನ ನೆಲದ ಮೇಲೆ ಕೂತು ಅಸಹಾಯಕ ವೇದನೆಯಲ್ಲಿ ಮಣ್ಣು ಎತ್ತಿ ಎತ್ತಿ ತಲೆಯ ಮೇಲೆ ಸುರಿದುಕೊಳ್ಳುತ್ತ ಗೋಳಿಡುತ್ತಿದ್ದಳು. ನಾನಾದರೋ ಭೀತಿಯಲ್ಲಿ ಮುಳುಗಿದ್ದೆ. ತಂದೆಗೇನಾಯಿತೋ ತಿಳಿದಿರಲಿಲ್ಲ. ಮೊದಲ ಬಾರಿ ನನ್ನ ಮನಸ್ಸಿಗೆ ಅತೀವ ನೋವಾಗಿತ್ತು. ಮನೆಯಲ್ಲಿ ಕೊನೆಯ ಮಗುವಾದ ನನ್ನನ್ನು ತಾಯಿಗಿಂತ ಹೆಚ್ಚು ಮುದ್ದು ಮಾಡುತ್ತಿದ್ದರು. ಅವರು ತಿನ್ನುವ ಎಲ್ಲ ಪದಾರ್ಥಗಳಲ್ಲೂ ಒಂದಿಷ್ಟು ನನ್ನ ಪಾಲಾಗುತಿತ್ತು. ನಾನು ತಿಂಡಿಪೋತ ಆಸೆಬುರುಕ ಹುಡುಗಿಯಾಗಿದ್ದೆ. ನನಗೆ ಕೊಟ್ಟಿದ್ದು ಸಾಕಾಗುತ್ತಿರಲಿಲ್ಲ ಎಂಬುದು ತಂದೆಗೆ ತಿಳಿದಿರುತ್ತಿತ್ತು ಅಮ್ಮ ಜೋರು ಮಾಡುತ್ತಿದ್ದರೂ ನಕ್ಕು ತಮ್ಮ ತಿನಿಸಿನಲ್ಲಿ ನನಗೆ ಕೊಡುವ ಅವರು ನನ್ನನ್ನು ಹುಡುಗನೆಂದೆ ಸಂಬೋಧಿಸುತ್ತಿದ್ದರು ಮುದ್ದು ಉಕ್ಕಿದಾಗಲೆಲ್ಲಾ. ಆಗೆಲ್ಲ ಅಣ್ಣಂದಿರು ಹೊಟ್ಟೆಯುರಿದುಕೊಳ್ಳುತ್ತಿದ್ದರು. ಅಂತಹ ಅಪ್ಪನಿಗೆ ಏನಾಯಿತೋ ಅನ್ನೋ ಭಯವನ್ನು ನಾನು ಅದನ್ನು ಅರ್ಥ ಮಾಡಿಕೊಳ್ಳದ ವಯಸ್ಸಿನಲ್ಲಿ ಅನುಭವಿಸಿದ್ದೆ.

ಮಧ್ಯಾಹ್ನದ ಊಟವನ್ನೂ ಮಾಡದೆ ನಾವೆಲ್ಲ ಐದು ಮಕ್ಕಳು ಮನೆಯಲ್ಲಿ ಕಾದು ಕುಳಿತಿದ್ದೆವು. ಅಗ ಮಾವ ಅಜ್ಜಿಯನ್ನು ಕರೆದುಕೊಂಡು ಬಂದಿದ್ದರು. ಮಕ್ಕಳಷ್ಟೇ ಇರುವ ಮನೆಯಲ್ಲಿ ಅಡುಗೆ ಮಾಡಲು ಯಾರೂ ಇರಲಿಲ್ಲ. ಹಾಗಾಗಿ ಅಜ್ಜಿ ಬಂದವರು ಹೊಟ್ಟೆಗೆ ಸ್ವಲ್ಪ ಹಾಕಿದ್ದರು. ಹಾಗೂ ಹೀಗೂ ಏನಾಯಿತೋ ಎಂದು ಕಾದು ಕುಳಿತಿರುವಾಗಲೇ ಅಣ್ಣ ಆಸ್ಪತ್ರೆಯಿಂದ ಮನೆಗೆ ಬಂದಿದ್ದ. ತಂದೆ ಮಾತನ್ನಾಡುತ್ತಿರುವರೆಂದು ಹಾರ್ಟ ಅಟ್ಯಾಕ್‍ಗೆ ಒಳಗಾಗಿರುವರೆಂದು ಹೇಳಿದ್ದ. ಅದೇನೆಂದು ಅರಿವಾಗದೇ ಇದ್ದರೂ ತಂದೆಗೆ ಆರೋಗ್ಯ ಸರಿಯಿಲ್ಲವೆಂದಷ್ಟೇ ಅರ್ಥವಾಗಿತ್ತು.

ಹೊಟ್ಟಗೆ ಬಟ್ಟೆಗೆ ಬಡತನವಿಲ್ಲದಿದ್ದರೂ ನಾವೆಲ್ಲ ಕಲಿಯುವ ಮಕ್ಕಳಾದ್ದರಿಂದ ಬದುಕು ಒಂದು ಸವಾಲಾದ ಕಾಲದಲ್ಲೇ ನಮಗೆ ಈ ಸಂಕಷ್ಟ ಬಂದಿದ್ದು ಅಮ್ಮನಿಗೆ ಜವಾಬ್ದಾರಿಯ ಗುಡ್ಡವೇ ತಲೆ ಮೇಲೆ ಬಿದ್ದಂತಾಗಿತ್ತು. ಗಟ್ಟಿಗಿತ್ತಿಯಾದ ಆಕೆ ಒಳಗೊಳಗೆ ನರಳಿದರೂ ತೋರಿಸಿಕೊಳ್ಳದೇ ಸುಮಾರು ಇಪ್ಪತ್ತು ಮೂವತ್ತು ದಿನಗಳ ಕಾಲ ಆಸ್ಪತ್ರೆ ಮನೆ ಎಂದು ಏಗಿದ್ದಳು.ಹುಷಾರಾದ ತಂದೆ ಮನೆಗೆ ಬರುವವರೆಗೆ ಕೂಡಿಟ್ಟ ಇದ್ದಬಿದ್ದ ಹಣವೆಲ್ಲ ಖರ್ಚಾಗಿತ್ತು. ತಂದೆ ನೌಕರಿ ಬಿಡೆಂದರೂ ಒಪ್ಪದೇ ಹಠಮಾಡಿ ಮತ್ತೆ ಕೆಲಸಕ್ಕೆ ಹೊರಟರು. ಅಮ್ಮ ನೌಕರಿ ಬೇಡವೆಂದು ಎಷ್ಟೆಲ್ಲಾ ಪುಸಲಾಯಿಸಿದರೂ ಕಾಡಿ ಬೇಡಿದರೂ ಕೇಳದ ಅವರು ಅಲ್ಲಿ ಕೆಲಸದೊತ್ತಡ, ಹೊಟೇಲು ಊಟ, ಅಸ್ತವ್ಯಸ್ತ ಜೀವನಶೈಲಿಯಿಂದ ಸ್ವಲ್ಪದಿನದಲ್ಲಿಯೇ ಮತ್ತೊಮ್ಮೆ ಎದೆನೋವಿನಿಂದ ಬಳಲಿದ್ದರು. ಆಗಂತೂ ಹೋದ ಜೀವ ವಾಪಸ್ಸು ಬಂದದ್ದು ನಮ್ಮ ಭಾಗ್ಯವಾಗಿತ್ತು. ಅವರನ್ನು ಆಸ್ಪತ್ರೆಯಿಂದ ವಾಪಸ್ಸು ಕರೆತಂದ ದಿನ ಅಮ್ಮ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತ ಅಳುವುದನ್ನು ನಾನು ಕೇಳಿಸಿಕೊಂಡಿದ್ದೆ. ಮತ್ತೆ ಸಾಂತ್ವನ ಹೇಳಲು ಬಂದ ಊರ ಹೆಂಗಸರ ಮುಂದೆ ಅಳುವನ್ನು ನುಂಗುತ್ತ ಮಾತನಾಡುತ್ತಿರುವ ಅಮ್ಮ ಹೆತ್ತ ಮಕ್ಕಳ ಸಣ್ಣ ಪ್ರಾಯ. ಆರು ಮಕ್ಕಳ ದೊಡ್ಡ ಸಂಸಾರ ಹೇಗೆ ನಡೆಸುವುದು ಸಾಲ ಬೆಳೆದಂತೆ ಬದುಕಿನ ಸಂಕಷ್ಟಗಳ ಹೇಗೆ ಎದುರಿಸಲಿ ಎಂಬಿತ್ಯಾದಿ ನೋವನ್ನು ಹಂಚಿಕೊಳ್ಳುತ್ತಿದ್ದರು.

ಹೆಣ್ಣಿಗೆ ಪತಿಯ ಅನಿವಾರ್ಯತೆ ಎಷ್ಟು ಎಂಬುದು, ಮಕ್ಕಳಿಗೆ ತಂದೆಯ ಮಾರ್ಗದರ್ಶನ ಎಷ್ಟೆಂಬುದು, ಸಂಬಂಧಗಳ ಬಂಧ ಏನೆಂಬುದು ಆಗ ತಿಳಿಯದಿದ್ದರೂ ಕ್ರಮೇಣ ಅರಿವಾಗಿದ್ದವು. ಹಾಗಾಗಿ ಆ ಮಾತುಗಳು ಇಂದಿಗೂ ನನಗೆ ನೆನಪಿವೆ. ಆಗ ತಂದೆ ನೌಕರಿಗೆ ರಾಜೀನಾಮೆ ಕೊಟ್ಟು ಸ್ವಯಂ ನಿವೃತ್ತಿ ತೆಗೆದುಕೊಂಡರು. ಬಂದ ಅಲ್ಪಸ್ವಲ್ಪ ಹಣ ಅವರ ಆಸ್ಪತ್ರೆ ವೆಚ್ಚಕ್ಕೆ ಖರ್ಚಾದರೆ ಉಳಿದ ಸ್ವಲ್ಪ ಹಣವನ್ನು ಹೆಣ್ಣು ಮಕ್ಕಳ ಹೆಸರಿನಲ್ಲಿಟ್ಟರು. ಮತ್ತೆ ಜೀವನ ಬಂಡಿ ಹಳ್ಳಿಯಲ್ಲಿ ಸಾಗತೊಡಗಿತ್ತು. ಪಟ್ಟಣದ ಬದುಕಿಗೆ ಹೊಂದಿಕೊಂಡಿದ್ದ ತಂದೆ ಕೆಲಸವೂ ಇಲ್ಲದೇ ಮನೆಯಲ್ಲಿಯೇ ಇರಬೇಕಾದ ಹಿಂಸೆಗೆ ಸ್ವಲ್ಪ ವಿಚಲಿತರಾಗಿದ್ದರು. ಆದರೆ ಅಮ್ಮ ಅವರ ಹಿಂದೆ ಸದಾ ಬೆಂಗಾವಲಾಗಿ ಇರುತ್ತಿದ್ದಳು.

ಹೆಚ್ಚಿನ ಕೃಷಿಯ ಉಸ್ತುವಾರಿಯನ್ನೆಲ್ಲಾ ಆಕೆಯೇ ಮಾಡುತ್ತಿದ್ದರೆ ತಂದೆ ಆಳುಕಾಳು ಲೆಕ್ಕಾಚಾರ ಇವುಗಳನ್ನೆಲ್ಲಾ ನಿಭಾಯಿಸುತ್ತಿದ್ದರು. ಅಂತೂ ಒಂದಿಷ್ಟು ವರ್ಷ ಹೇಗೋ ಬಂಡಿ ಸಾಗಿತ್ತು. ನಾವೆಲ್ಲ ಶಾಲೆ ಅಭ್ಯಾಸದ ಜೊತೆಜೊತೆಗೆ ಗದ್ದೆ ಕೆಲಸಗಳಲ್ಲಿ ತಾಯಿಯೊಂದಿಗೆ ಕೆಲಸದಾಳುಗಳೊಂದಿಗೆ ಸಮವಾಗಿ ದುಡಿಯುತ್ತ ಇದ್ದದ್ದು ಆಗಾಗ ತಂದೆತಾಯಿ ಹಣಕಾಸಿನ ಮುಂಗಟ್ಟು ಕುರಿತು ಚರ್ಚಿಸುತ್ತಿದ್ದರು. ಕೆಲವೊಮ್ಮೆ ಸಣ್ಣ ಮಾತುಕತೆ ಜಗಳ ಎಲ್ಲವೂ ಇತ್ತು. ತಂದೆಯ ವೈಶಾಲ್ಯದ ಗುಣ ಹಣವನ್ನು ಖರ್ಚು ಮಾಡುವುದರಲ್ಲೂ ಇತ್ತು. ಹೀಗಾಗಿ ಸದಾ ಮಕ್ಕಳ ಶ್ರೇಯೋಭಿವೃದ್ಧಿಯನ್ನೆ ಗಮನದಲ್ಲಿಟ್ಟುಕೊಂಡಿರುತ್ತಿದ್ದ ಅಮ್ಮ ಆಗಾಗ ತಂದೆಗೆ ಬುದ್ಧಿಹೇಳುತ್ತಿದ್ದರು ತಂದೆ ಅದನ್ನು ಕೇಳುತ್ತಿರಲಿಲ್ಲ. ಅಮ್ಮ ಬೆಳೆಯುತ್ತಿದ್ದ ಹೆಣ್ಣು ಮಕ್ಕಳನ್ನು ಮುಂದಿಟ್ಟು ಮನವರಿಕೆ ಮಾಡಲು ಪ್ರಯತ್ನಿಸಿದರೆ ತಂದೆ ‘ಹುಟ್ಟಿಸಿದವ ಹುಲ್ಲು ಮೇಯಿಸುವ’ ಎನ್ನುತ್ತಿದ್ದರು.

ಎಲ್ಲವೂ ಹೋರಾಟ. ಎರಡನೇಯ ಅಣ್ಣ ಅದ್ಹೇಕೋ ಶಾಲೆ ಎಂದರೆ ದೂರ ಸರಿಯತೊಡಗಿದ. ಮನೆಯಲ್ಲಿ ಕೃಷಿಗೆ ನಿಲ್ಲುವೆನೆಂದ. ಎಸ್ ಎಸ್ ಎಲ್ ಸಿ ಬರುತ್ತಲೂ ಅವನ ಶಿಕ್ಷಣ ಅಲ್ಲಿಗೆ ನಿಂತುಹೋಯಿತು. ಅಮ್ಮನೊಂದಿಗೆ ಕೃಷಿಗೆ ಕೈ ಹಚ್ಚಿದ. ಬೆಳೆಗಳು ವರ್ಷಕ್ಕೆರಡು ಬೆಳೆದವು. ಐವರು ಶಾಲೆ ಕಾಲೇಜು ಮೆಟ್ಟಿಲೇರಿದರೆ ಆತನೋ ಮನೆ ಮಠ, ಗದ್ದೆ ಎನ್ನುತ್ತ ಕುಟುಂಬದ ಆರ್ಥಿಕ ಬಲಕ್ಕೆ ಬಲಗೈಯಾಗಿದ್ದ. ಆಗಲೇ ಮತ್ತೊಮ್ಮೆ ತಂದೆಗೆ ಹೃದಯಾಘಾತವಾಗಿತ್ತು. ಇಡೀ ಕುಟುಂಬ ಕಂಗೆಟ್ಟಿತ್ತು. ಒಂದಾಂದ ಮೇಲೊಂದು ಸಂಕಟಗಳು ಗುಳೇ ಎತ್ತಿ ಬಂದಂತೆ. ನಮ್ಮ ಶಿಕ್ಷಣ ಹಾಗೋ ಹೀಗೋ ಮುಂದುವರೆಯಿತು.ತಂದೆ ಸ್ವಯಂ ನಿವೃತ್ತಿ ಪಡೆದುಕೊಂಡರು. ಕೃಷಿಯಲ್ಲಿ ತೊಡಗಿಸಿಕೊಂಡರು. ಅಮ್ಮ ಮತ್ತು ಅಣ್ಣ ಬಲಗೈಯಂತೆ ಅವರೊಂದಿಗಿದ್ದರು. ಹೀಗೆ ಹತ್ತು ವರ್ಷ ನಮ್ಮ ಜೊತೆಗಿದ್ದ ತಂದೆ ದೂರವಾದ ದಿನ ನಾನು ತಂದೆಯ ಹತ್ತಿರವೇ ಇದ್ದೆ. ಬೆಳ್ಳಂಬೆಳಿಗ್ಗೆ ಚಹ ಲೋಟ ಕೈಗೆ ಕೊಟ್ಟು ಕುಡಿಯಲು ಹೇಳಿ ಒಳಕೋಣೆಗೆ ಹೋಗಿದ್ದೆನಷ್ಟೇ! ಹಠಾತ್ತನೇ ತಂದೆ ಮಂಚದ ಮೇಲೆ ಕೂತವರು ನೆಲಕ್ಕೆ ಬಿದ್ದಿದ್ದರು, ಮತ್ತೇ ಮೇಲೇಳಲೇ ಇಲ್ಲ. ನನ್ನಪ್ಪ ಹೊರಟು ಹೋದ ದಿನ ನನಗೀಗಲೂ ನೆನಪಿಸಿಕೊಂಡರೆ ನಿನ್ನೆ ಮೊನ್ನೆಯಂತೆ ಭಾಸವಾಗುತ್ತದೆ. ಕಂಗಳು ಕೊಳಗಳಾಗುತ್ತವೆ.

ನನ್ನ ತಂದೆ
ಎಲ್ಲರಂತಿರಲಿಲ್ಲ ನನ್ನ ತಂದೆ
ಹೆಣ್ಣ ಕರುಳ ಗಂಡು ಜೀವ
ಮಕ್ಕಳೆಂದರೆ ಅವಗೆ
ಮರಳುಮಾಯೆ
ಗುರಿಯ ತತ್ವವ ಕಲಿಸಿ
ಬದುಕ ಚಾತುರ್ಯ
ಬೆರೆಸಿ ಬೆಳೆಸಿದನು
ಪುಟ್ಟ್ ಕೈಗಳ ಹಿಡಿದು
ಭರವಸೆಯ ಒತ್ತಿದನು
ಬಾಳ ಹಾದಿಯ ಸವಿಸೋ
ಧೈರ್ಯವನು ತುಂಬಿ
ಆ ಹೊತ್ತು ಮುಂಜಾನೆ
ನೀ ಅಗಲಿದ ದಿನ
ಕೈಯ ಚಾ ಲೋಟ
ತುಟೀಯೇರುವ ಮುನ್ನ
ಹೇಳದೇ ನಡೆದೆ ಹಂಗು ತೊರೆದು
ಬಾ ಮಗನೇ’ ಎನಲು
ನೀನಿಲ್ಲವೆಂದಾಗ ಅನಿಸಿದ್ದು’
ಮರೀಚಿಕೆ ಈ ಬದುಕು
ಮರಳು ಮಾಯೆ
ಅತ್ತು ಹೊರಳಾಡಿ
ಗುಣಗಾನಗೈಯುತಿರೆ
ನೆಂಟರಿಷ್ಟರು ಕೂಡಿ
ಮತ್ತು ಸಂತೈಕೆ ಮಾಡಿ
ತಂದೆ ಇಲ್ಲದ ಮನೆಯು
ಗುರುವು ಇಲ್ಲದ ಮಠವು’ಕೊನೆಯಿಲ್ಲದಾಯ್ತು ನಮ್ಮ ನೋವು.

ದಾದ. ಹೌದು ನಾವು ನಿನ್ನನ್ನು ಕರೆಯುತ್ತಿದ್ದದ್ದು ದಾದನೆಂದೆ. ನೀನೆಷ್ಟು ಹೆಣ್ಣ ಕರುಳನಾವನಾಗಿದ್ದೆ. ನೆನಪಿಸಿಕೊಂಡರೆ ಅದೇಕೋ ಕಣ್ಣೀರು ತಾನೆ ತೊಟ್ಟಿಕ್ಕುತ್ತಿದೆಯಲ್ಲ. ಆ ಬಂಧಕ್ಕೆ ಇರುವ ಅನುಬಂಧದ ಕಾರಣವೇ ಇರಬೇಕು. ನೀನಿದ್ದಾಗ ಎಂತಹ ಶಿಸ್ತು, ರೀತಿ ನೀತಿಗಳು. ಅಷ್ಟಕ್ಕೂ ನಮ್ಮೆಲ್ಲರ ಆರು ಮಕ್ಕಳ ಸಾಕುವಲ್ಲಿ ವಿದ್ಯೆ ಕೊಡುವಲ್ಲಿ ಅಮ್ಮನೊಂದಿಗೆ ನೀನು ನಡೆದದ್ದು ಎಂತಹ ದಾರಿ ಎಂಬುದು ನಮಗೆಲ್ಲಾ ಗೊತ್ತೆ ಇದೆ. ಹಾಗಾಗೇ ನೀನು ಮಕ್ಕಳ ಮನಸ್ಸಿನಿಂದ ಇಂದಿಗೂ ದೂರವಾಗಲೇ ಇಲ್ಲ. ಕೊನೆಮಗಳಾದ ನಾನು ಆಗಷ್ಟೇ ಬಿ. ಎಡ್ ಹೋಗುತ್ತಿದ್ದೆ. ಒಬ್ಬ ಅಣ್ಣ, ಇಬ್ಬರು ಅಕ್ಕಂದಿರು ನೌಕರಿಗೆ ಸೇರಿಯೂ ಆಗಿತ್ತು. ಅಕ್ಕಂದಿರ ಮದುವೆಯೂ ಆಗಿತ್ತು. ಆದರೂ ನಿನಗೆ ಬರುತ್ತಿದ್ದ ಅಲ್ಪ ನಿವೃತ್ತಿಯ ದುಡ್ಡಿನಲ್ಲಿಯೇ ಅಲ್ಲಿವೇ ನಾನು ಕಲಿತದ್ದು, ನಾಲ್ಕಾರು ಗೆಳತಿಯರು ಸೇರಿ ಬಾಡಿಗೆ ಹಿಡಿದ ಮನೆಯಲ್ಲಿ ಅಡುಗೆ ಮಾಡಿ ಉಣ್ಣುತ್ತಿದ್ದೆವು. ಶನಿವಾರ ಬಂತೆಂದರೆ ಓಡೋಡಿ ಪ್ರತಿವಾರವೂ ಮನೆಗೆ ಬರುತ್ತಿದ್ದ ನಾನು ಬಂದಾಗಲೆಲ್ಲಾ ಅದೆಷ್ಟು ಕಾಳಜಿ ಮಾಡುತ್ತಿದ್ದೆ. ಮೂರೂ ಬಾರಿಯಷ್ಟೆ ಬಂದ ನೀನು ಒಮ್ಮೆ ಊಟ ಮಾಡುವಾಗ ನಮ್ಮ ಊಟ ನೋಡಿ ಬೈದು ಹೋದ್ದದ್ದು, ತಿಂಗಳಿಗೆ ಐನೂರು ರೂಪಾಯಿ ಕೊಡುತ್ತಿದ್ದದ್ದನ್ನು ಬಾಡಿಗೆಗೂ, ಊಟದ ಖರ್ಚಿಗೂ ಬಿ. ಎಡ್ ದಿನಗಳ ಅಸೈನ್ ಮೆಂಟ್‍ಗಳು ಚಾರ್ಟುಗಳು, ಬೋಧನಾ ಪರಿಕರಗಳ ತಯಾರಿಕೆಗೆ ನಾನು ಎಲ್ಲಕ್ಕೂ ಅದನ್ನೆ ಹೊಂದಿಸಿಕೊಂಡು ಹೋಗುತ್ತಿದ್ದೆ. ಬದುಕಿನ ಸಂತಸ, ಹೊಂದಾಣಿಕೆ ಮತ್ತು ಎದುರಿಸುವ ತಾಕತ್ತು ಕಲಿಸಿದ್ದು ನೀನು.

ಹೌದು ನನ್ನ ದಾದ ಅಂದರೆ ಹಾಗೇ ಇದ್ದ. ಬಾಲ್ಯ ಯೌವನದಲ್ಲಿ ಮಾತ್ರ ತಂದೆಯ ನನ್ನ ಜೊತೆಗಿದ್ದರು. ಈ ಮಧ್ಯವಯಸ್ಸಿನಲ್ಲಿ ನಾ ದುಡಿಯುತ್ತಿರುವ ಸಂದರ್ಭದಲ್ಲಿ ದಾದ ಇರಬೇಕಾಗಿತ್ತು ಎಂದೆನ್ನಿಸುತ್ತದೆ. ಮಕ್ಕಳ ಓದು ಕಲಿಕೆಗಾಗಿ ಆಯಾಸಗೊಂಡ ದೇಹದಲ್ಲೂ ಅದೆಷ್ಟು ಸಂಕಟದಲ್ಲಿ ಏಗುತ್ತಿದ್ದರು ಎಂಬುದು ನೆನಪಾದರೆ ದುಃಖ ಉಮ್ಮಳಿಸಿ ಬರುತ್ತದೆ. ದಾದ, ಹೃದಯದ ಕಾಯಿಲೆ ನಿನ್ನನ್ನು ಹದಿನೈದು ವರ್ಷಗಳ ಕಾಡಿದ್ದು, ಹೃದಯ ಬಿಗಿಹಿಡಿದು ನಮಗಾಗಿ ನೀನು ಬದುಕಿದ್ದು, ಎಲ್ಲ ಯಾವುದೋ ಚಿತ್ರವೊಂದರ ಕಥೆಯಾಗುವಷ್ಟಿದೆ ಎನಿಸುತ್ತದೆ
ಹೀಗೆ ಬದುಕಿಗೆ ಬೇಕಾದ ಹಲವು ಮುಖಗಳಾದ ಪ್ರೀತಿ, ವಿಶ್ವಾಸ ದೈರ್ಯ ಸ್ಥೈರ್ಯಗಳ ಆಶಾವಾದವನ್ನು ಬಳುವಳಿಯಾಗಿ ನೀಡಿದ ತಂದೆ ಇಂದಿಲ್ಲ ಅವರ ನೆನಪು ಇದೆ.ಅವರ ಮರಣದ ನಂತರ ಮನೆ ಗುರುವಿಲ್ಲದ ಮಠದಂತೆ ಹಲವು ವರ್ಷ ಅನ್ನಿಸಿದ್ದು, ಕ್ರಮೇಣ ಪ್ರಕೃತಿಯ ನಿಯಮದಂತೆ ಬದುಕಿನ ದಾರಿಗೆ ನಾವೆಲ್ಲ ತೆರೆದುಕೊಳ್ಳುತ್ತ ನಡೆದರೂ ನಮ್ಮ ಕೊನೆಯ ಕ್ಷಣದವರೆಗೂ ನೆನೆಪು ಅಜರಾಮರ.”ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ” ಎಂದು ಸಂಸ್ಕೃತ ಸುಭಾಷಿತ ಹೇಳುವಂತೆ ನನ್ನ ತಂದೆಯೂ ಇದ್ದರೆಂಬುದೇ ನನ್ನ ಹೆಮ್ಮೆ.

-ನಾಗರೇಖಾ ಗಾಂವಕರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x