ಬಿಡುವು: ಪ್ರಶಸ್ತಿ ಪಿ.ಸಾಗರ

ದಿನಾ ಆಫೀಸಿಂದ ಲೇಟಾಗಿ ಮನೆಗೆ ಬರುವವನಿಗೆ ಒಂದು ದಿನ ಬೇಗ ಮನೆಗೆ ಬಂದು ಬಿಟ್ರೆ ಎಲ್ಲಿಲ್ಲದ ಚಡಪಡಿಕೆ. ಮನೆಯಲ್ಲಿರುವರ ಮಾತಾಡಿಸುವಿಕೆಗಿಂತ ಆಫೀಸಿನದೇ ಚಿಂತೆ. ಅಲ್ಲಿ ಕೆಲಸವಿದ್ದುದ್ದನ್ನು ಬಿಟ್ಟು ಬಂದುದಕಲ್ಲ, ಏನೂ ಕೆಲಸವಿಲ್ಲದಿದ್ದರೂ ಇದೇ ತರ. ಸಮಸ್ಯೆ ಕೆಲಸದ್ದಲ್ಲ. ಅದಿಲ್ಲದಿದ್ದಾಗ ಇರೋ ಬಿಡುವಿನದು. ದಿನಾ ಶಾಲೆ. ಟ್ಯೂಷನ್ನು, ಹೋಂವರ್ಕು ಅಂತ ಓದಿನಲ್ಲೇ ಮುಳುಗಿ ಹೋಗಿ ಮನೆಗೆ ಬಂದವರನ್ನು ಮಾತಾಡಿಸಲೂ ಬಿಡುವಿಲ್ಲದ ಮಗನಿಗೆ ಓದಿನ ಒಂದು ಹಂತ ದಾಟಿದ ನಂತರ ತೀರಾ ಕಸಿವಿಸಿ. ಮುಂದಿನ ಹಂತ ಏನೆಂದು ನಿರ್ಧರಿತವಾಗಿದ್ದರೂ ಅಲ್ಲಿಯವರೆಗೆ ಕಾಯಲಾಗದ ತಳಮಳ. ಕೆಲ ದಿನಗಳ ರಜೆಯಾದರೂ ಏಕೆ ಬರುತ್ತೋ ಎಂಬ ಶಾಪ. ಸಮಸ್ಯೆ ಶಾಲೆ,ಓದು, ಹೋಂವರ್ಕಿನದಲ್ಲ. ಸಮಸ್ಯೆ ಬಿಡುವಿಗೆ ಒಗ್ಗದ ಮನಸಿನದು. ಗಂಡ ಹೆಸರಾಂತ ಆಟಗಾರ. ಇತ್ತೀಚೆಗಷ್ಟೇ ನಿವೃತ್ತನಾಗಿ ಮನೆ ಸೇರಿದ್ದಾನೆ. ಆ ಧಾರಾವಾಹಿ ಯಾಕೆ ನೋಡುತ್ತೀಯ, ಕಿಟಕಿಗೆ ಈ ಬಣ್ಣದ ಕರ್ಟನ್ ಯಾಕೆ ಅಂತ ಇಷ್ಟು ವರ್ಷಗಳಿಲ್ಲದ ಪ್ರಶ್ನೆ. ದಿನಾ ಸಂಜೆ ಎಲ್ಲಾದರೂ ಹೊರಗಡೆ ಹೋಗೋಣ ಬಾ ಅಂತ ನಿತ್ಯದ ಧಾರಾವಾಹಿ ನೋಡಲೂ ಬಿಡಲ್ಲ ಅನ್ನೋದು ಹೆಂಡತಿಯ ಅಳಲು. ಇಲ್ಲಿ ಮತ್ತೆ ಸಮಸ್ಯೆ  ಬಿಡುವಿನದೇ.ಗಂಡನ ಬಿಡುವು,ಹೆಂಡತಿಯ ಬಿಡುವಿನೊಂದಿಗೆ ಹೊಂದಾಣಿಕೆಯಾಗದುದು. ಯಾವಾಗಲೂ ಏನಾದರೂ ಕೆಲಸ ಮಾಡ್ತನೇ ಇದ್ದವರಿಗೆ ಒಂದರೆಕ್ಷಣ ಸುಮ್ಮನೆ ಕೂರುವುದೂ ಕಷ್ಟವೇ. ಆದರೆ ತೀರಾ ಕಷ್ಟಪಡುವಾಗ ಅಂದುಕೊಳ್ಳುತ್ತಿದ್ದ ಒಂದು ದಿನ ತಾನೂ ಆರಾಮಾಗಿರಬೇಕೆಂಬ ಆಸೆ ಇದ್ದಕ್ಕಿದ್ದಂತೆ ನೆರವೇರಿ ತಾನೂ ಆರಾಮವಾಗಿರಬಹುದಾದ ದಿನ ಬಂದಾಗ ಆ ಆರಾಮದ ಪರಿಕಲ್ಪನೆಯೇ ಬದಲಾಗಿರುತ್ತದೆ. ವಿರಾಮವೇ ಬೇಸರ ತರಿಸುತ್ತಿರುತ್ತದೆ.

ಬಿ. ಚಂದ್ರಪ್ಪ ಅಂತ ಒಬ್ಬ. ಬಿ. ಅಂದ್ರೆ ಬೊರೆಗೌಡನೋ, ಬೊಮ್ಮನಳ್ಳಿಯೋ, ಬೆಂಗಳೂರೋ ಯಾರಿಗೂ ಗೊತ್ತಿರಲಿಲ್ಲ. ಗೊತ್ತಿಲ್ಲವೆಂದರೆ ಹೇಗೆ ? ಕೇಳಿದರೆ ಹೇಳೋಲ್ಲವೇ ? ಅಯ್ಯೋ, ಯಾರಾದರೂ ಮಾತಾಡಿಸಿದರೆ ಉತ್ತರಿಸುವೆಷ್ಟು ಪುರುಸುತ್ತೆಲ್ಲಿದೆ ಆ ಮನುಷ್ಯನಿಗೆ . ಏನಾದ್ರೂ ಕೇಳಿದ್ರೆ . ಇದು ಅರ್ಜೆಂಟಾ ? ಆಮೇಲೆ ಮಾತಾಡೋಣವಾ ? ನಾ ಸ್ವಲ್ಪ ಬ್ಯುಸಿ ಇದ್ದೀನಿ ಅನ್ನೋ ಉತ್ತರವೇ ಹೆಚ್ಚಿನ ಬಾರಿ ಸಿಗುತ್ತಿತ್ತು. ಮನೆಯಿಂದ ಹೆಂಡತಿ ಬೇಗ ಬನ್ನಿ ಅಂತ ಫೋನ್ ಮಾಡಲಿ, ಮಗ ಅಪ್ಪ ನನ್ನ ಯೂನಿಯನ್ ಡೇ ಇದೆ. ನೆನಪಿದೆ ತಾನೇ ಅಂತ ನೆನಪಿಸಲಿ, ನಾನು ಬ್ಯುಸಿಯಿದ್ದೀನಿ ಕಣೋ.. ಸಾರಿ ಎಂಬ ಉತ್ತರವೇ ಸಿಕ್ಕಿ ಸಿಕ್ಕಿ ಮನೆಯವರಿಂದ ಹಿಡಿದು ಎಲ್ಲರ ಬಾಯಲ್ಲೂ ಇವ ಬಿಸಿ ಚಂದ್ರಪ್ನೋರು ಆಗಿದ್ದ. ಕ್ಷಮಿಸಿ ಆಗಿಬಿಟ್ಟಿದ್ರು !. ಸದಾ ಒಂದಿಲ್ಲೊಂದು ಚಿಂತೆಯ ಚಿತೆಯಲ್ಲಿ ತಮ್ಮನ್ನು ಸುಟ್ಟುಕೊಳ್ಳುತ್ತಾ ಗರಂ ಆಗೇ ಇದ್ದು  ಬಿಸಿ ಚಂದ್ರಪ್ಪನೆನ್ನೋ ಹೆಸರಿಗೆ ಸೂಕ್ತವಾಗೇ ಇದ್ರು ಅವರು.ಈ ಬ್ಯುಸಿ ಚಂದ್ರಪ್ನೋರು ನಿಜವಾಗ್ಲೂ ಏನು ಮಾಡ್ತಿದ್ರು ಅನ್ನೋದ್ನ ಸದ್ಯಕ್ಕೆ ಸ್ವಲ್ಪ ಬದಿಗಿಟ್ಟು ಒಂದು ದಿನ ಏನಾಯ್ತಪ ಅಂತ ನೋಡೋಣವಂತೆ. 

ಚಂದ್ರಪ್ಪನವರು ಈಗಿದ್ದ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಮುಗಿಯುತ್ತಾ ಬಂದಿತ್ತು. ಈಗಿರೋ ಪ್ರಾಜೆಕ್ಟಿನ ಮುಗಿಯೋ ದಿನಾಂಕ ಇನ್ನೂ ತಡವಿದ್ದುದರಿಂದ ಹೊಸ ಪ್ರಾಜೆಕ್ಟು ಯಾವಾಗ ಶುರು ಅನ್ನೋದೇ ಗೊತ್ತಿಲ್ಲದ ಅನಿಶ್ಚಿತತೆ ಇದ್ದಿದ್ದರಿಂದ ಇವರ ಸಹೋದ್ಯೋಗಿಗಳೆಲ್ಲಾ ಒಂದೊಂದು ದಿನ ಚಕ್ಕರ್ ಹಾಕ್ತಾ ಇದ್ದರು ಇಲ್ಲಾ ಬೇಗ ಮನೆಗೆ ಹೋಗುತ್ತಿದ್ದರು. ಬಿಸಿ ಚಂದ್ರಪ್ಪನವರು ಕೇಳಿದಾಗ ಶನಿವಾರ, ಭಾನುವಾರ, ಹಗಲು ರಾತ್ರೆಗಳೆನ್ನದೇ ಕೆಲಸ ಮಾಡಿದೀವಲ್ರೀ , ಈಗ ಸ್ವಲ್ಪ ದಿನ ಕುಟುಂಬದ ಜೊತೆ ಕಳೆಯೋಣ ಅಂತಿದೀವಿ. ನೀವೂ ಸ್ವಲ್ಪ ರೆಸ್ಟ್ ತಗೋಳ್ರಿ. ಎಷ್ಟು ಅಂತ ಕೆಲ್ಸ ಮಾಡ್ತೀರಾ ಅಂತ ಬಂದ್ರೆ ಬಿಟ್ಟಿ ಅಡ್ವೈಸ್ ಕೊಡೋಕೆ ಬಂದ್ರು , ಮೈಗಳ್ಳರು ಅಂತ ಅವ್ರ ಮಾತೇ ಕೇಳ್ತಿರಲಿಲ್ಲ ಬಿಸಿ ಚಂದ್ರಪ್ಪ. ಶುಕ್ರವಾರದ ದಿನ. ಕೆಲಸವೂ ಇಲ್ಲದ್ದರಿಂದ ಮೂರು ಘಂಟೆಗೇ ಆಫೀಸು ಫುಲ್ ಖಾಲಿ. ಬಿಸಿ ಚಂದ್ರಪ್ಪನಿಗೆ ಹುಡುಕಿಕೊಂಡು ಮಾಡಲೂ ಏನೂ ಕೆಲಸವಿರಲಿಲ್ಲ. ಮಾತಾಡಲೂ ಯಾರೂ ಜನರಿಲ್ಲ. ಪಕ್ಕನೇ ಯಾರಿಗಾದರೂ ಫೋನ್ ಮಾಡೋಣವಾ ಅನಿಸಿತು. ತನ್ನ ಗೆಳೆಯರೆಲ್ಲಾ ಅರ್ಧರ್ಧ ಘಂಟೆ ಫೋನಲ್ಲಿ ಮಾತಾಡುತ್ತಲೇ ಕಾಲ ಕಳೆಯೋದನ್ನ ಗಮನಿಸಿದ್ದ ಚಂದ್ರಪ್ಪ ತನ್ನ ಮೊಬೈಲು ತಡಕಿದ. ಆಫೀಸು, ಮನೆ, ಕೆಲ ಸಹೋದ್ಯೋಗಿಗಳದ್ದು ಬಿಟ್ಟರೆ ಬೇರೆ ನಂಬರುಗಳೇ ಇರಲಿಲ್ಲ. ಒಂದಿಷ್ಟು ಗೆಳೆಯರ ನಂಬರಿದ್ದರೂ ಹೇಗೆ ಮಾಡೋದೆಂಬ ಸಂಕೋಚ. ಅವರು ಟ್ರಿಪ್ಪು, ಗೆಟ್ ಟುಗೆದರ್, ಮದುವೆ ಹೀಗೆ ಯಾವುದಕ್ಕೆ ಕರೆದರೂ ಹೋಗದೇ ಬಿಸಿಯಾಗಿದ್ದ ತಾನು ಈಗ ಅವರಿಗೆ  ಹೇಗೆ ಫೋನ್ ಮಾಡೋದೆಂಬ ಅಳುಕು. ಬೆಳಿಗ್ಗೆ ಓದಿದ ಅದೇ ಪೇಪರ್ ಮತ್ತೆ ಓದಲು ಬೇಜಾರಾಗಿ ಮನೆಗೆ ಹೊರಟ. ಶುಕ್ರವಾರದ ಟ್ರಾಫಿಕ್ಕು ಒಂದಿಂಚೂ ಚಲಿಸದಂತೆ ನಿಂತು ಬಿಟ್ಟಿತ್ತು. ಕಿಟಕಿ ಬಳಿಯ ಸೀಟು ಸಿಕ್ಕಿದ್ದು  ಯಾವ ಜನ್ಮದ ಪುಣ್ಯವೋ ಎಂದು ಖುಷಿಗೊಂಡಿದ್ದ ಚಂದ್ರಪ್ಪ ಕೆಲವೇ ನಿಮಿಷಗಳಲ್ಲಿ ಕೂತಲ್ಲೇ ನಿದ್ರೆ ಹೋಗಿದ್ದ. 

ಅಂತೂ ಮನೆ ಬಂತು. ಕಾಲಿಂಗ್ ಬೆಲ್ ಒತ್ತೇ ಒತ್ತಿದ. ಒಂದು ನಿಮಿಷವಾದರೂ ಯಾರೂ ಬಾಗಿಲು ತೆಗೆಯುತ್ತಿಲ್ಲ. ಒಳಗೇನೋ ಮಾಡ್ತಿದಾರೇನೋ , ಫೋನ್ ಮಾಡಿ ಕರೆಯೋಣ ಅಂತ ಹೆಂಡತಿಯ ಮೊಬೈಲಿಗೆ ಕರೆ ಮಾಡಿದ. ಕೆಲ ರಿಂಗಾಗೋಷ್ಟರಲ್ಲಿ ಆ ಕಡೆಯಿಂದ ಹೆಂಡತಿ ಫೋನ್ ಎತ್ತಿದಳು. ಎಂತದೋ ಭಜನೆಯ ದನಿ. ಅವಳು ಏನು ಮಾತಾಡ್ತಿದಾಳೆ ಅನ್ನೋದೇ ಸ್ಪಷ್ಟವಾಗಿ ಕೇಳ್ತಿರಲಿಲ್ಲ. ಭಜನೆ ಕ್ಲಾಸಲ್ಲಿದೀನಿ ಕಣ್ರಿ. ನೀವು ಬರೋದು ಹೇಗಿದ್ರೂ ಎಂಟು ಘಂಟೆಗಲ್ವಾ, ಅಷ್ಟರೊಳಗೆ ಬರ್ತೀನಿ ಅಂತ ಏನೋ ಅಂದಂತೆ ಅಸ್ಪಷ್ಟವಾಗಿ ಕೇಳಿತು.  ಅಪರೂಪಕ್ಕೆ ಬೇಗ ಮನೆಗೆ ಬಂದ ಗಂಡನನ್ನು ಮಾತಾಡಿಸೋದು ಬಿಟ್ಟು ಎಲ್ಲೋ ಹೋಗಿದಾಳೆ ಅಂತ ಬಿಸಿಯಾದ್ರು ಚಂದ್ರಪ್ಪನೋರು. ಸಿಟ್ಟು ತಣ್ಣಗಾದ ಮೇಲೆ ವಿವೇಕ ಹೇಳಿತು ಚಂದ್ರಪ್ಪಂಗೆ. ನೀನೊಬ್ನೇ ಬ್ಯುಸಿಯಾಗಿರ್ತೀನಿ ಅಂದ್ಕೊಂಡಿದೀಯ . ನನ್ನ ಹೆಂಡತಿಯೂ ಬ್ಯುಸಿಯಾಗಿದಾಳೆ ಅದ್ರಲ್ಲಿ ತಪ್ಪೇನಿದೆ ? ಒಂದಿನವೂ ಸಮಯಕ್ಕೆ ಸರಿಯಾಗಿ ಮನೆಗೆ ಬರದ, ಬರೋ ದಿನವೂ ಫೋನ್ ಮಾಡಿ ಹೇಳದ್ದು ನಿಂದೇ ತಪ್ಪು. ನಿನ್ನ ಇರುವಿಕೆಯ ಬಯಸಿ ಬಯಸಿ ಬೇಸರವಾದ ಅವಳು ಇನ್ನೇನೋ ಮಾರ್ಗ ಕಂಡುಹಿಡ್ಕೊಂಡಿದಾಳೆ ಬೇಸರ ಕಳೆಯೋಕೆ.ಅದ್ರಲ್ಲಿ ತಪ್ಪೇನಿದೆ ಅಂತು. ಹೌದಲ್ವಾ ಅನಿಸಿತು ಚಂದ್ರಪ್ಪಂಗೆ. ಮಗನಾದ್ರೂ ಮನೆಯಲ್ಲಿರಬೇಕೆಂದು ನಿರೀಕ್ಷಿಸಿ  ಫೋನ್ ಮಾಡಿದ. ನಾನು ಫ್ರೆಂಡ್ಸ್ ಜೊತೆ ಪ್ರಾಜೆಕ್ಟಿನ ಅಸೈನುಮೆಂಟಿನಲ್ಲಿ ಬ್ಯುಸಿ ಇದೀನಿ ಡ್ಯಾಡ್. ಆಮೇಲೆ ಮಾಡ್ತೀನಿ ಅಂತ ಚಂದ್ರಪ್ಪ ಮಾತಾಡೋದ್ರೊಳಗೇ ಫೋನ್ ಕಟ್! ಹೋಗಲಿ ಎಂದು ಮಗಳಿಗೆ ಫೋನ್ ಮಾಡಿದ. ಫೋನ್ ಫುಲ್ ರಿಂಗಾದರೂ ಎತ್ತಲಿಲ್ಲ ಅವಳು. ಮೊದಲು ಇವರ ಬಗ್ಗೆ ಸಿಟ್ಟು ಬಂದರೂ ಆಮೇಲೆ ಮೊದಲಿನಂತೆಯೇ ವಿವೇಕ ಉದಯಿಸಿದ ಮೇಲೆ ಸಮಾಧಾನವಾಯ್ತು. ಎಲಾ ಶಿವನೇ ನಾನೊಬ್ನೇ ಎಲ್ಲರಿಗಿಂತ ಬಿಸಿ ಅಂದ್ಕೊಂಡ್ರೆ ಎಲ್ಲಾ ನನಗಿಂತ ಬ್ಯುಸಿ ಆಗಿದ್ದಾರಲ್ಲಾ. ಏನು ಮಾಡೋದು ಅಂತ ತಲೆ ಮೇಲೆ ಕೈಹೊತ್ತು ಕುಳಿತ. ಭಕ್ತಾ ಕರೆದೆಯಾ ಅಂತ ಎಲ್ಲಿಂದಲೋ ದನಿ ಕೇಳಿಸಿತು. ನೋಡಿದರೆ ಯಾರೂ ಕಾಣುತ್ತಿಲ್ಲ. ಆದರೂ ಎಲ್ಲಿಂದಲೋ ದನಿ. ಯಾರು ನೀನು ಅಂದ್ರೆ. ನಾನು ಶಿವ.ಈಗಷ್ಟೆ ಕರೆದೆಯಲ್ಲಾ. ಅದಕ್ಕೇ ನಿನ್ನೆದುರು ಬಂದಿದೀನಿ ಅನ್ನೋ ಉತ್ತರ ಬಂತು. ಎರಡು ಮೂರು ಕೆಲಸಗಳಲ್ಲಿ ಮುಳುಗಿದರೇ ಬ್ಯುಸಿ ಬ್ಯುಸಿಯೆಂದು ಎಲ್ಲರ ಮೇಲೂ ಹರಿಹಾಯೋ ನಾನೆಲ್ಲಿ, ಕೊಟಿ ಕೋಟಿ ಭಕ್ತರ ಮೊರೆ, ಲೋಕದ ಲಯದಂತಹ ಹೊರೆ ಹೊತ್ತಿದ್ರೂ ತಕ್ಷಣ ಸ್ಪಂದಿಸಿದ ಶಿವ ಎಲ್ಲಿ ಅನಿಸಿತು. ಬ್ಯುಸಿ ಬ್ಯುಸಿಯೆಂದು ತಾನು ಇತ್ತೀಚೆಗೆ ಕಳೆದುಕೊಂಡ ಮಗನ ಯೂನಿಯನ್ ಡೇ, ಆಪ್ತ ಗೆಳೆಯನ ಮದುವೆ, ಅಣ್ಣನ ಮಗನ ನಾಮಕರಣ, ತನ್ನದೇ ಮದುವೆಯ ಆನಿವರ್ಸರಿ,ಹೀಗೆ.. ಅನೇಕ ಕ್ಷಣಗಳೆಲ್ಲಾ ನೆನಪಾಗಿ ದು:ಖ ಉಮ್ಮಳಿಸಿ ಬರತೊಡಗಿತು. 

ಯಾಕೋ ಭಕ್ತ, ನನ್ನ ಕರೆದು ಅರ್ಧ ಘಂಟೆ ಆಗ್ತಾ ಬಂತು. ಏನೂ ಮಾತಿಲ್ಲದೆ ಅಳುತ್ತಾ ಕೂತಿದ್ದೀಯಲ್ಲೋ ಅನ್ನೋ ದನಿ ಕೇಳಿತು. ಅರ್ಧ ಘಂಟೆಯೇ ? ನಿನ್ನ ಅಮೂಲ್ಯ ಸಮಯ ಹಾಳು ಮಾಡಿದೆನೆಲ್ಲೋ ಶಿವನೇ. ಎಷ್ಟು ಬ್ಯುಸಿಯಿದ್ದೆಯೇನೋ ನೀನು ಅಂದ ಚಂದ್ರಪ್ಪ. ಬ್ಯುಸಿಯಾ ? ಅದೇನದು ಅಂದ ಶಿವ. ಬ್ಯುಸಿ ಅಂದರೆ ಬಿಡುವಿಲ್ಲದೇ ಇರುವುದು ಅಂದ ಚಂದ್ರಪ್ಪ. ಓ ಅದಾ? ಅದು ನಂಗೆ ಗೊತ್ತಿಲ್ಲಪ್ಪ ಅಂದ ಶಿವ. ಓ, ಹೌದಾ ? ಇಷ್ಟು ಫ್ರೀ ಹೇಗೆ ಮಾಡ್ಕೋತೀಯ ನೀನು ಅಂದ ಚಂದ್ರಪ್ಪ. ಈ ಬ್ಯುಸಿ, ಫ್ರೀ ಮಾಡ್ಕೋಳ್ಳೋದು ಇದೆಲ್ಲಾ ನಂಗೆ ಗೊತ್ತಿಲ್ಲಪ್ಪ. ಇದನ್ನೇನಿದ್ದರೂ ಮಹಾವಿಷ್ಣುವಿಗೆ ಕೇಳು ಅಂದ, ವಿಷ್ಣುವಿಗೆ ದುಷ್ಟರಕ್ಷಣೆ, ಶಿಷ್ಟ ರಕ್ಷಣೆಯೇ ಕೆಲಸ. ಸಮಸ್ತ ಲೋಕ ಕಲ್ಯಾಣದಲ್ಲಿ ನಿರತನಾಗಿರೋ ಆತ ತನ್ನ ಮೊರೆಗೆಲ್ಲಿ ಪ್ರತ್ಯಕ್ಷನಾಗುತ್ತಾನೋ ಎಂದುಕೊಳ್ಳುವಷ್ಟರಲ್ಲೇ ಭಕ್ತಾ ನೆನೆದೆಯಾ ನನ್ನ ಅನ್ನೋ ಮತ್ತೊಂದು ದನಿ ಕೇಳಿಸಿತು. ನಿನ್ನೆಲ್ಲಾ ಕೆಲಸಗಳ ಮಧ್ಯೆಯೂ ನನ್ನ ಮೊರೆ ಕೇಳಿ ಕ್ಷಣದಲ್ಲೇ ಓಡಿಬಂದೆಯಾ ಹರಿಯೇ ? ನೀನು ಇಷ್ಟು ಫ್ರೀ ಹೇಗೆ, ಅಷ್ಟು ಕೆಲಸವಿದ್ದರೂ ಫ್ರೀ ಮಾಡ್ಕೋಳ್ಲೋದು ಹೇಗೆ ? ಇರೋ ಒಂದು ಕೆಲಸದಲ್ಲೇ ಮುಳುಗಿಹೋಗೋ ನಾನು ಮಡದಿ ಮಕ್ಕಳನ್ನೇ ಮಾತಾಡಿಸಲಾಗೋದಿಲ್ಲ ಅಂದ ಚಂದ್ರಪ್ಪ. ಬ್ರಹ್ಮ ಪ್ರಜಾಪಿತನಷ್ಟು ಕೆಲಸ ನನಗಿಲ್ಲ ಭಕ್ತಾ. ನಿನ್ನ ಪ್ರಶ್ನೆಗೆ ಅವನೇ ಉತ್ತರಿಸಿಯಾನು ಅವನನ್ನೇ ಕರೆ ಅಂತು ಎರಡನೇ ದನಿ. ಜಗದ ಪ್ರತಿಯೊಬ್ಬರ ಹಣೆಬರಹ ಬರೆಯೋದರಲ್ಲಿ ಅರೆಕ್ಷಣವೂ ವಿಶ್ರಮಿಸದ ಬ್ರಹ್ಮ ನನ್ನ ಕರೆಗೆ ಓಗೋಡೋದು ಅಸಾಧ್ಯದ ಮಾತೇ ಸರಿ ಅಂತ ಚಂದ್ರಪ್ಪ ಅಂದುಕೊಳ್ತಿರಬೇಕಾದ್ರೇ ಕರೆದೆಯಾ ಭಕ್ತಾ ಅನ್ನೋ ಮೂರನೇ ದನಿ ಕೇಳಿತು. ನೀನು ಬ್ಯುಸಿಯಿಲ್ಲವೇ ಬ್ರಹ್ಮ ಎಂದು ಬಿಟ್ಟ ಬಾಯಿ ಬಿಟ್ಟಂತೆ ತೆರೆದ ಕಣ್ಣುಗಳನ್ನು ಇನ್ನೂ ಅಗಲಗೊಳಿಸುತ್ತಾ ದಿರ್ಭಮೆಯಿಂದ ಕೇಳಿದ ಚಂದ್ರಪ್ಪ. ಬ್ರಹ್ಮ ನಸುನಗುತ್ತಾ ಹೇಳಿದ. ಭಕ್ತಾ. ಜಗದಲ್ಲಿ ಬಿಡುವಿಲ್ಲದವರು ಯಾರಪ್ಪಾ ಇದ್ದಾರೆ ? ತನ್ನ ರಥವೇರಿ ಜಗಕ್ಕೇ ಶಕ್ತಿಯುಣಿಸುತ್ತಾ ಸಾಗೋ ಸೂರ್ಯನಿಗೂ ಒಂದು ದಿನದ ಅವಿರತ ಪಯಣದ ನಂತರ ಒಂದು ರಾತ್ರಿಯ ವಿಶ್ರಾಂತಿ. ಅಸಂಖ್ಯ ತಾರೆಗಳ ತೋಟದ ಮಾಲಿ ಚಂದ್ರನಿಗೂ ರಾತ್ರಿ ಪಾಳಿಯ ನಂತರ ಹಗಲೆಲ್ಲಾ ವಿಶ್ರಾಂತಿ. ಕೊಚ್ಚಿ ಹರಿವ ಹೊಳೆಗೂ ಚಳಿಗಾಲದಲ್ಲಿ ಮರಗಟ್ಟಿ ವಿಶ್ರಾಂತಿ. ಪ್ರಾಣಿ, ಪಕ್ಷಿ, ಜಲಚರ, ಸಸ್ಯ, ಮನುಜರಿಗೂ ಬಿಡುವೆಂಬುದು ಇದ್ದೇ ಇದೆ ನನ್ನ ಸೃಷ್ಟಿಯಲ್ಲಿ. ಬಿಡುವಿನಿಂದಲೇ ಸೃಷ್ಟಿಸಿದ್ದೇನೆ ನಿನ್ನನ್ನ. ನಿನಗೊಪ್ಪುವ ಸುಖದ ಸಂಸಾರವನ್ನ ಅಂತ ವಿರಮಿಸಿತು ಆ ದನಿ. ವಾಗ್ಝರಿಯ ನಡುವೆ ಒಂದು ಬಿಡುವು ತೆಗೆದುಕೊಳ್ಳುತ್ತಾ. 

ಹೌದಲ್ಲಾ ಅನಿಸಿತು ಚಂದ್ರಪ್ಪನಿಗೆ. ಎಲ್ಲಕ್ಕೂ ಅದರದ್ದೇ ಆದ ಸಮಯವಿದೆ. ಆಫೀಸಷ್ಟೇ ತನ್ನ ಬದುಕಲ್ಲ. ಅದಾದ ನಂತರ ತನ್ನದೇ ಆದ ಸಂಸಾರವಿದೆ. ಎಲ್ಲರೊಳಗೊಂದಾಗಿ ಇರೋ ಬದಲು ತಾನೇ ಎಲ್ಲಾ ಮಾಡಬೇಕೆಂಬ ಹಮ್ಮು ಯಾಕೆ ? ಬಿಡುವು ಎಂಬುದು ಎಲ್ಲಿಂದಲೋ ಬರುವುದಲ್ಲ. ನಾವು ಇರುವುದಕ್ಕೆ ಕೊಡೋ ಪ್ರಾಮುಖ್ಯತೆಗಳೇ ಬಿಡುವನ್ನು ಸೃಷ್ಠಿಸುತ್ತದೆ ಅಂತ ಎಲ್ಲೋ ಓದಿದ ನೆನಪಾಯ್ತು. ಇನ್ನಾದರೂ ಬ್ಯುಸಿ ಅನ್ನೋದನ್ನ ತನ್ನ ಕಡತದಿಂದ ಹೊರಹಾಕಿ ಎಲ್ಲರಿಗಾಗಿ , ಎಲ್ಲರೊಂದಿಗೆ ಬಾಳಬೇಕು ಎಂದು ನಿರ್ಧರಿಸಿದ..ತಥಾಸ್ತು ಅಂದತಾಯಿತು ಮೂರು ದನಿಗಳು. ಒಮ್ಮೆಲೇ ಭೂಕಂಪವಾದಂತೆ ಆಗಿ ಆಯ ತಪ್ಪಿ ಮುಂದಕ್ಕೆ ವಾಲಿದ. ಹಣೆ ಎದುರಿಗಿದ್ದ ಸೀಟಿಗೆ ಹೊಡೆದಿತ್ತು. ಕಣ್ಣು ಬಿಟ್ಟಿತ್ತು. ನೋಡಿದರೆ ತಾನು ಇಳಿಯಬೇಕಾದ ಸ್ಟಾಪು ಬಂದು ಬಿಟ್ಟಿದೆ. ಗಡಬಡಿಸಿ ಎದ್ದು ಮನೆಗೆ ಸಾಗಿದ. ಇಷ್ಟು ಹೊತ್ತು ನಡೆದಿದ್ದು ಕನಸೋ ನನಸೋ ಎನ್ನೋ ಆಲೋಚನೆಯಲ್ಲಿದ್ದಾಗಲೇ ಮನೆ ತಲುಪಿಬಿಟ್ಟಿದ್ದ. ಎಲ್ಲೋ ಸೈಕಲ್ ಹತ್ತಿ ಹೊರಟಿದ್ದ ಮಗ ಹಾಯ್ ಡ್ಯಾಡ್ ಅಂತ ಇವನನ್ನು ನೋಡಿ ಖುಷಿಯಿಂದ ಮನೆಗೆ ವಾಪಾಸಾಗಿದ್ದ. ಅಪ್ಪ ಬಂದ್ರು  ,ಮಮ್ಮಿ ಪಪ್ಪ ಬಂದ್ರು ಅಂತ ಮಹಡಿಯ ಮೇಲಿಂದ ಅಪ್ಪ, ತಮ್ಮ ಬರೋದ್ನ ನೋಡಿದ್ದ ಮಗಳೂ ಕೆಳಗೆ ಓಡಿಬಂದಿದ್ಲು. ಮಗಳ ಗಲಾಟೆ ಕೇಳಿ ಹೌದೋ ಅಲ್ವೋ ಅನ್ನೋ ಆಶ್ಚರ್ಯದಲ್ಲೇ ಬಾಗಿಲು ತೆಗೆಯೋಕೆ ಬಂದ್ಲು. ಚಂದ್ರಪ್ಪ ಕಾಲಿಂಗ್ ಬೆಲ್ ಒತ್ತೋದಕ್ಕೂ ಅವನ ಮಡದಿ ಬಾಗಿಲು ತೆಗೆಯೋದಕ್ಕೂ ಸರಿ ಹೋಯ್ತು. ಬೇಗ ಮನೆಗೆ ಬಂದಿದ್ದು ಒಂದು ಅಚ್ಚರಿಯಾದರೆ ದಿಢೀರನೆ ಬದಲಾದ ವರ್ತನೆ ಇನ್ನೊಂದು ಬಗೆಯ ಅಚ್ಚರಿ. ಅಂತೂ ಎಲ್ಲೋ  ಕಳೆದುಹೋದ ಅಪ್ಪ, ಗಂಡ ಮರಳಿ ಸಿಕ್ಕಿದ್ದಕ್ಕೆ ಎಲ್ಲಾ ಖುಷಿಯಾಗಿದ್ದರು..ಈ ಸಡನ್ ಬದಲಾವಣೆಗೆ ಕಾರಣ ಏನು ಅಂತ ಯಾರೂ ಬಿಸಿ ಚಂದ್ರಪ್ಪನ್ನ ಆಮೇಲೂ ಕೇಳಲೇ ಇಲ್ಲ. ಏಕೆಂದರೆ ಬಿಸಿ ಚಂದ್ರಪ್ಪ ಕರಗಿಹೋಗಿದ್ದ. ಅವನ ಬದಲಾವಣೆಗೆ ಕಾರಣವಾಗಿದ್ದ ಮೂರು ದನಿಗಳು ನಗ್ತಾ ಇದ್ದವು. ನಮ್ಮ ನಿಮ್ಮೊಳಗೂ ಇರಬಹುದಾದ ಈ ತರದ ಇನ್ನೊಂದು ಬಿಸಿ ಚಂದ್ರಪ್ಪನ ಹುಡುಕಿ ಅವನನ್ನು ಸರಿ ದಾರಿಗೆ ತರೋ ಯೋಚನೆಯಲ್ಲಿದ್ದವು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Suman Desai
Suman Desai
10 years ago

chand barediri…. bhal ishta aatu….

1
0
Would love your thoughts, please comment.x
()
x