ಬಿಡುಗಡೆಗೆ ಹಂಬಲಿಸುವ ಮಹಿಳಾ ಧ್ವನಿಯ ’ದ್ಯೂತಭಾರತ’: ಹಿಪ್ಪರಗಿ ಸಿದ್ಧರಾಮ


ಮಹಾಭಾರತ ಕಥನ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವಂಥದ್ದೇ. ಆಯಾ ಕಾಲಘಟ್ಟದಲ್ಲಿ ಸೃಜನಶೀಲತೆಯ ವಿವಿಧ ಆಯಾಮಗಳೊಂದಿಗೆ ವಿವಿಧ ಪ್ರಕಾರಗಳಲ್ಲಿ ಪ್ರಕಟಗೊಳ್ಳುತ್ತಲೇ ಇದೆ. ಈ ಮಹಾಭಾರತದಲ್ಲಿ ಹೆಚ್ಚಾಗಿ ಮೋಸ, ಕುತಂತ್ರ, ಶೋಷಣೆ, ಅಪಮಾನ, ಹಾದರ, ಬಹುಪತಿತ್ವ, ಬಹುಪುತ್ರತ್ವ, ಮಂತ್ರ ಜಪಿಸಿದ ಕ್ಷಣ ಮಾತ್ರದಲ್ಲಿ ಜನಿಸುವ ವೀರರು, ಹೀನ ರಾಜಕಾರಣ, ಸೇಡು, ಕಿಡಗೇಡಿತನ, ಹೊಣೆಗೇಡಿತನ, ರಸಿಕತನ, ಹುಂಬತನ, ಸ್ನೇಹ ಹೀಗೆ ಹಲವಾರು ಸಂಗತಿಗಳು ವಿಜೃಂಭಿಸಿರುವುದು ಸುಳ್ಳೇನಲ್ಲ. ಇಂತಹ ಮಹಾಭಾರತದಲ್ಲಿ ಶಕುನಿ ಮಾಮಾನ ಕುತಂತ್ರದಿಂದ ಪಗಡೆಯಾಟದ ಜೂಜಿನಲ್ಲಿ ಸೋಲುಂಡ ಪಾಂಡವರು ಕರಾರಿನಂತೆ ವನವಾಸ-ಅಜ್ಞಾತವಾಸ ಅನುಭವಿಸುತ್ತಾರೆ. ಈ ಕರಾರು ಎಂಬುದು ಇಲ್ಲಿ ದ್ಯೂತವಾಗಿದೆ. ದ್ಯೂತ(ಕರಾರು)ವೆಂಬುದು ಮಹಾಭಾರತದಲ್ಲಿ ನಡೆದು ದ್ಯೂತಭಾರತವೆಂದು ಹೆಸರಾಗಿದೆ. ಇಂತಹ ದ್ಯೂತಭಾರತದಲ್ಲಿ ನಡೆಯುವ ದೂತೆ(ಸೇವಕಿ)ಯರೆಂಬ ಹೆಸರಿನ ಮಹಿಳಾ ಶೋಷಣೆಯ ಕರಾಳತೆಯ ಸುತ್ತ ಗಿರಕಿ ಹೊಡೆಯುವ ಕಥಾನಕದ ನಾಟಕವೊಂದು ಇತ್ತೀಚೆಗೆ (೨೫-೦೩-೨೦೧೫) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಂಗಕರ್ಮಿ ಪದ್ಮಾ ಕೊಡಗು ನಿರ್ದೇಶನದಲ್ಲಿ ಕೃಪಾಸನ್ನಿದಿ ಸಮನ್ವಯ ಕಲಾಕೇಂದ್ರದ ಕಲಾವಿದೆಯರು ಅಭಿನಯಿಸಿದರು. 

ಪ್ರಥಮ ಪ್ರಯೋಗ ಕಂಡ ’ದ್ಯೂತಭಾರತ’ ನಾಟಕದಲ್ಲಿ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು, ಕಥೆಯ ಆಯ್ಕೆಯ ವಿಷಯದಲ್ಲಿ ನಿರ್ದೇಶಕರ ಜಾಣ್ಮೆಯನ್ನು ಮೆಚ್ಚಲೇಬೇಕು. ಯಾಕಂದರೆ ಕೇವಲ ಒಂದೋ-ಎರಡೋ ಪುರುಷ ಪಾತ್ರಗಳು ಬಂದರೂ ಬೃಹನ್ನಳೆ ವೇಷದ ಅರ್ಜುನ, ಹೆಂಗಳೆಯರ ಮುಂದೆ ಕೊಚ್ಚಿಕೊಳ್ಳುವ ಹೆಣಗ ಉತ್ತರಕುಮಾರ ಹೀಗೆ ಆಯಾ ಪಾತ್ರಗಳಿಗೆ ಮಹಿಳಾ ಕಲಾವಿದೆಯರನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡಿದ್ದು ಎದ್ದು ಕಾಣುತ್ತಿತ್ತು. ಸರಳವಾದ ರಂಗಸಜ್ಜಿಕೆ, ನಿಂಬರಗಿ-ನೂಲಕರ್-ನಿಡಗುಂದಿಯಂತಹ ಹಿರಿಯರ ಹಿನ್ನಲೆ ಸಂಗೀತ, ನಾಪಾ ಬೆಳಕಿನ ಕೈಚಳಕ, ಶಿವರಾಜ್-ರವಿ ಧ್ವನಿ ನಿರ್ವಹಣೆ, ಮಹಾಲೆ ಅಜ್ಜನ ಮೇಕಪ್ಪು, ಬಾಸುಮ-ಚಂದು ಕೊಡಗು ರಂಗಸಜ್ಜಿಕೆ, ನೃತ್ಯ ಸಂಯೋಜನೆ, ಹೊಸಬರೆಂದು ಭಾಸವಾಗದಂತೆ ಅಭಿನಯಿಸಲು ಪ್ರಯತ್ನಿಸಿದ ಮಹಿಳಾ ಮಂಡಳದ ಎಲ್ಲಾ ವಯೋಮಾನದ ಕಲಾವಿದೆಯರು, ಹದವರಿತ ನಿರ್ದೇಶನ ಮುಂತಾದ ಸಂಗತಿಗಳಿಗೆ ಸ್ಪಂದಿಸಿದ ಪ್ರೇಕ್ಷಕರು ಹೀಗೆ ಎಲ್ಲವೂ ಸೂಕ್ತವಾಗಿ ಮೇಳೈಸಿದರೆ ರಂಗಕೃತಿಯೊಂದು ರಂಗಸ್ಥಳದಲ್ಲಿ ಎಂಥವರನ್ನೂ ಸಹ ಹಿಡಿದಿಡಬಲ್ಲುದು ಎಂಬುದಕ್ಕೆ ’ದ್ಯೂತಭಾರತ’ ನಾಟಕ ಪ್ರಯೋಗ ಸಾಕ್ಷಿಯಾಯಿತು. ನಟಶೇಖರ ಪಂ.ಬಸವರಾಜ ಮನಸೂರರ ನೆನಪಿನ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ಹಲವಾರು ನಾಟಕಗಳ ಮದ್ಯದಲ್ಲಿ ಗಮನಸೆಳೆಯಿತು. 

ಮೈಸೂರಿನ ಎಚ್.ಎಸ್.ಉಮೇಶ ರಚನೆಯ ದ್ಯೂತಭಾರತ ನಾಟಕದಲ್ಲಿ ಬರುವ ಎಲ್ಲರೂ ಪರಿಸ್ಥಿತಿ-ಪ್ರಸಂಗಗಳಿಂದ ದೂತೆ(ಸೇವಕಿ)ಯರಾಗಿದ್ದು, ಬಿಡುಗಡೆಗಾಗಿ ಸಾಂಪ್ರದಾಯಿಕ ಪುರುಷ ಪ್ರಧಾನ ಸಮಾಜವನ್ನು ಪ್ರಶ್ನಿಸುತ್ತಾರೆ. ಕುರುಡ ಗಂಡನಿಗಾಗಿ ಕಣ್ಣಿಗೆ ಪಟ್ಟಿಕೊಂಡು ಜೀವನ ಪರ್ಯಂತ ಅಡಿಯಾಳಾಗುವ ಗಾಂಧಾರಿ, ಅಶಕ್ತ ಗಂಡನಿದ್ದರೂ ವಂಶಾಭಿವೃದ್ದಿಗಾಗಿ ಬೇರೆಯವರಿಂದ ಪುತ್ರಸಂತಾನ ಪಡೆದು ಮೌನಿಯಾದ ಕುಂತಿ, ದ್ರೌಪತಿಯ ವಸ್ತ್ರಾಪಹರಣದಲ್ಲಿ ಅಸಹಾಯಕತೆಯ ಸಂದರ್ಭದ ಅರಮನೆಯ ಸೇವಕಿಯರ ತಲ್ಲಣಗಳು, ಅಜ್ಞಾತವಾಸದಲ್ಲಿ ದ್ರೌಪದಿಯು ಸೈರಂದ್ರಿ ಹೆಸರಿನ ಸೇವಕಿಯಾಗಿದ್ದು, ಚಕ್ರವ್ಯೂಹದಲ್ಲಿ ಹತನಾದರೂ ಅಭಿಮನ್ಯುವಿನ ಹೆಸರಿನಲ್ಲಿ ಸೇವಕಿಯಾದ ಉತ್ತರೆ, ಅರಮನೆಯ ಸುಮತಿ, ದ್ರುಮತಿಯರು ಸೇರಿದಂತೆ ಹಲವರದೂ ಸಹ ಅಸಹಾಯಕ ಪರಿಸ್ಥಿತಿ. ಕ್ಷತ್ರಿಯ ರಕ್ತ ಮೈಯಲ್ಲಿ ಹರಿಯುತ್ತಿದ್ದರೂ ಜಾರತನದಲ್ಲಿ ಹುಟ್ಟಿದ ತಪ್ಪಿಗಾಗಿ ಅರಮನೆಯ ಸೇವಕಿಯರಾದ ಕೆಲವರು, ಕುಲದ ಮಾನಕ್ಕಂಜಿ ಅನಿವಾರ್ಯವಾಗಿ ಸೇವಕಿಯರಾದ ಹಲವರು, ತಮ್ಮ ಹುಟ್ಟಿನ ಮೂಲವನ್ನು ಕಣಿ ಹೇಳುವವರ ವೇಷ ತೊಟ್ಟು ಬರುವ ದೂತೆಯರು, ಅರಮನೆಯ ಹೊರವಲಯದಲ್ಲಿ ಸೇವಕಿಯರು ಆಗಿರುವ ಉಪಪತ್ನಿಯರು ಹೀಗೆ ಮಹಿಳಾ ಧ್ವನಿಯ ಈ ನಾಟಕದಲ್ಲಿ ಭಾರತೀಯ ಪರಂಪರೆಯಲ್ಲಿ ಸ್ತ್ರೀಶೋಷಣೆಯು ಆದಿ-ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿತ್ತು ಮತ್ತು ವಿಮೋಚನೆಗಾಗಿ ಧ್ವನಿಯೆತ್ತಿದರೂ ಆಚೆ ಕೇಳಿಸದಂತೆ ವ್ಯವಸ್ಥಿತವಾಗಿ ಪುರುಷ ಸಮಾಜ ನೋಡಿಕೊಂಡಿತು. ನೋಡಿಕೊಂಡಿತು ಎಂದು ದೂರುವುದಕ್ಕಿಂತ ಆ ಕ್ಷಣದಲ್ಲಿ ಮೌನಿಯಾಗಿ ಉಳಿಯದೇ ತಕ್ಷಣವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಪೂರಕವಾಗಿ ಪ್ರವಚನ, ಉಪನ್ಯಾಸ, ವಿಚಾರ-ವಿನಿಮಯ, ರಂಗಪ್ರಯೋಗದಂತಹ ವಿವಿಧ ಕಾರ್ಯಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಬಹುದು ಎಂಬ ಪರಿಹಾರಾತ್ಮಕ ದೃಷ್ಟಿಕೋನ ಈ ನಾಟಕದಲ್ಲಿ ಕಂಡು ಬಂತು. ಕಾಲ ಗತಿಸಿದಂತೆ ಶೋಷಣೆಯಲ್ಲಿಯೂ ಸುಧಾರಣೆ-ಮಾರ್ಪಾಡುಗಳಾಗಿ ಸಮಕಾಲೀನ ಸಂದರ್ಭದಲ್ಲಿ ಮಹಿಳಾ ಅತ್ಯಾಚಾರ, ಕೊಲೆ, ಸುಲಿಗೆಯಂತಹ ಘಟನೆಗಳು ನಡೆಯುತ್ತಿವೆ. ಘಟನೆಗಳು ನಡೆದ ನಂತರ ವ್ಯವಸ್ಥೆಯು ಪರಿಹಾರ ದೊರಕಿಸಿಕೊಡುವಲ್ಲಿ ವಿಫಲವಾಗುತ್ತಿದೆ. ಅದಕ್ಕಾಗಿ ಸುಮ್ಮನಾಗದೇ ತಕ್ಷಣವೇ ಶೋಷಣೆಯಿಂದ ಮುಕ್ತರಾಗಲು ಪ್ರಯತ್ನಿಸಬೇಕು ಎಂಬ ಸಮಾಜಮುಖಿ ಸಂದೇಶವನ್ನು ಅಂತಿಮವಾಗಿ ನಾಟಕ ಧ್ವನಿಸುತ್ತದೆ. ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಅನುಭವಿ ನಿರ್ದೇಶಕಿ ಪದ್ಮಾ ಕೊಡಗು ಅವರು ನಾಟಕ ಪ್ರಯೋಗದ ವೇಗ ಮತ್ತು ಎಲ್ಲಾ ಕಲಾವಿದೆಯರ ಸಂಭಾಷಣೆಯು ಪ್ರೇಕ್ಷಕರಿಗೆ ತಲುಪುವಂತೆ ಕೊಂಚ ಮುತುವರ್ಜಿವಹಿಸಿ ತಿದ್ದಿದರೆ ಮಹಿಳಾಪರ ಧ್ವನಿಯ ನಾಟಕವೊಂದು ಸಮಕಾಲೀನ ದಿನಗಳಲ್ಲಿ ಕನ್ನಡ ರಂಗಭೂಮಿಗೆ ದಕ್ಕುವುದರಲ್ಲಿ ಸಂಶಯವಿಲ್ಲ. ಕುಸುಮಾ, ನೀಲಾ, ಸವಿತಾ, ಅನುಪಮಾ, ಪಂಕಜ, ಲತಾ, ಭಾಗ್ಯಜ್ಯೋತಿ, ಹೊಂಬಾಳೆ, ಭಾಗ್ಯಶ್ರೀ, ಶೀಲಾ, ಸಿಂಚನ, ರೇಖಾ, ಗಂಗಾ ಕಾಳೆನವರ್ ಮುಂತಾದವರು ಸಮಯೋಚಿತ ಅಭಿನಯ ನೀಡಿದರು. ಅನಿತಾ, ಸುಮಾ, ಲತಾ ಮತ್ತು ಸಂಗಡಿಗರು ತಮ್ಮ  ಗಾಯನದ ಮೂಲಕ ಪ್ರೇಕ್ಷಕರಿಗೆ ತಲುಪಲು ಪ್ರಯತ್ನಿಸಿದರು.  

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x