ಬಿಟ್ಟೇನೆಂದರೂ ಬಿಡದೀ ಮಾಯೆ: ಗೌರಿ. ಚಂದ್ರಕೇಸರಿ, ಶಿವಮೊಗ್ಗ.

 

ಮೂರ್ಖ ಪೆಟ್ಟಿಗೆ, ಮಾಯಾ ಪೆಟ್ಟಿಗೆ ಎಂದು ಕರೆಸಿಕೊಳ್ಳುವ ದೂರದರ್ಶನ ಎಂಥವರ ಮೇಲೂ ಸಮ್ಮೋಹನವನ್ನು ಮಾಡಿ ಬಿಡುತ್ತದೆ. ಇದು ರೂಪದಲ್ಲಿ ಹೊಸ ಹೊಸ ಬಿನ್ನಾಣಗಳನ್ನು ಬದಲಿಸುತ್ತ ಅಬಾಲವೃದ್ಧರಾದಿಯಾಗಿ ತನ್ನತ್ತ ಸೆಳೆದುಕೊಂಡು ಬಿಟ್ಟಿದೆ. ಮೊದ ಮೊದಲು ಕಪ್ಪು-ಬಿಳುಪು ಸುಂದರಿಯಾಗಿ ಅವತರಿಸಿ ಈಗ ರಂಗು ರಂಗಿನ ಮಿಂಚುಳ್ಳಿಯಂತೆ ಬಣ್ಣಮಯವಾಗಿದೆ. ಹಿಂದೆ ಧಡೂತಿ ದೇಹವನ್ನು ಹೊಂದಿದ ಈ ಮಾಯೆ ಇತ್ತೀಚೆಗೆ ಸ್ಲಿಮ್ ಆಗಿ, ಗೋಡೆಯಲ್ಲಿ ಕಂಗೊಳಿಸುತ್ತಿದ್ದಾಳೆ. ಸಾವಿಲ್ಲದ ಮನೆಯ ಸಾಸುವೆ ದಕ್ಕುವುದು ಎಷ್ಟು ದುಸ್ತರವೋ ಟಿ.ವಿ.ಇಲ್ಲದ ಮನೆ ಸಿಕ್ಕುವುದೂ ಅಷ್ಟೇ ದುಸ್ತರ. ಬದುಕಿಗೆ ಅನಿವಾರ್ಯವಾದ ಗ್ಯಾಸ್ ಒಲೆಗಳಿಲ್ಲದ ಮನೆಗಳು ಸಿಕ್ಕಾವು, ಆದರೆ ಟಿ.ವಿ. ಇಲ್ಲದ ಮನೆಗಳು ಸಿಕ್ಕಲಾರವು. ಇವಳನ್ನು ಕುರಿತು ಎಷ್ಟೇ ಉಪಮೆಗಳನ್ನು ಕೊಟ್ಟರೂ ಕಡಿಮೆಯೇ. ಒಟ್ಟಿನಲ್ಲಿ ಜೀವನದ ಮೂಲಭೂತ ಅವಶ್ಯಕತೆಗಳಾದ ಗಾಳಿ, ನೀರು, ಬಟ್ಟೆ, ಸೂರು, ಆಹಾರಗಳೊಂದಿಗೆ ಅನಧಿಕೃತವಾಗಿ ಟಿ.ವಿ. ಕೂಡ ಸೇರ್ಪಡೆಯಾಗಿದೆ.

ಈ ಮಾಯಾಂಗನೆಯು ಉಪಯೋಗ-ದುರುಪಯೋಗ, ಅನುಕೂಲ-ಅನಾನುಕೂಲ, ಒಳ್ಳೆಯದು-ಕೆಟ್ಟದ್ದು, ಒಂದುಗೂಡಿಸುವುದು-ದೂರಮಾಡುವಂತಹ ಗುಣಾವಗುಣಗಳೆರಡನ್ನೂ ಹೊಂದಿದ್ದಾಳೆ. ಪಟ್ಟಿ ಮಾಡುತ್ತ ಹೋದರೆ ಒಂದು ಬೃಹದ್ ಗ್ರಂಥವೇ ರಚನೆಯಾದೀತು. ನಮ್ಮೂರಿಗೆ ಟಿ.ವಿ. ಬಂದ ಹೊಸತರಲ್ಲಿ ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಆಗ ನಮ್ಮ ಸುತ್ತ ಮುತ್ತಲಿನ ಸರಹದ್ದಿನಲ್ಲಿ ಒಂದು ಮನೆಯಲ್ಲಿ ಮಾತ್ರ ಟಿ.ವಿ. ವಿರಾಜಮಾನವಾಗಿತ್ತು. ದೇಶ ಕಂಡ ಧೀಮಂತ ರಾಜಕಾರಣಿ ಇಂದಿರಾಜಿಯ ಹತ್ಯೆ ಇದೇ ವೇಳೆಯಲ್ಲಾಗಿತ್ತು. ಅವರ ಕ್ರಿಯಾ-ಕರ್ಮಗಳ ದೃಶ್ಯಗಳನ್ನು ಅಂದು ದಿನವಿಡೀ ಟಿ.ವಿ.ಯಲ್ಲಿ ಪ್ರಸಾರ ಮಾಡುತ್ತಿದ್ದರು. ಸುತ್ತ ಮುತ್ತಲಿನ ಜನರೆಲ್ಲ ತಂಡೋಪತಂಡವಾಗಿ ಆ ದೃಶ್ಯವನ್ನು ನೋಡಲು ಆ ಮನೆಗೆ ಲಗ್ಗೆ ಹಾಕಿದರು. ಹಸಿವು, ನಿದ್ದೆ, ನೀರಡಿಕೆಗಳನ್ನೆಲ್ಲ ಮರೆತು ದೈವವೆಲ್ಲ ಅಲ್ಲಿ ಠಳಾಯಿಸಿಬಿಟ್ಟಿತ್ತು. ಮೊದ ಮೊದಲು ಬಂದವರಿಗೆಲ್ಲ ಆ ಮನೆಯವರು ಜಮಖಾನೆ, ಚಾಪೆಗಳನ್ನು ಹಾಸಿ ಉಪಚರಿಸಿದರು. ಮಧ್ಯಾಹ್ನದ ವೇಳೆಗೆ ಅಲ್ಲಿ ನಿಂತುಕೊಳ್ಳಲೂ ಜಾಗ ಸಾಲದಾಯಿತು. ಅಂದು ಆ ಮನೆಯವರು ಅನ್ನ-ನೀರನ್ನು ಮುಟ್ಟಲಾಗಲಿಲ್ಲ. ಕೊನೆಗೆ ರಾತ್ರಿಗೆ ಆ ಮನೆಯವರು ನಿಟ್ಟುಸಿರು ಬಿಡುವ ಹಾಗಾಗಿದ್ದು. ಉಂಡೂ ಹೋದ, ಕೊಂಡೂ ಹೋದ ಎಂಬಂತೆ ಬರಿಗಾಲಲ್ಲಿ ಬಂದ ಕೆಲವರು ಆ ಮನೆಯವರ ಚಪ್ಪಲಿಗಳನ್ನೇ ಮೆಟ್ಟಿಕೊಂಡು ಹೋಗಿದ್ದರು. ಆಗಿನ ದಿನಗಳಲ್ಲಿ ಪ್ರತಿ ಭಾನುವಾರ ಮಾತ್ರ ಚಲನಚಿತ್ರ ಪ್ರಸಾರವಾಗುತ್ತಿತ್ತು. ಭಾನುವಾರ ಯಾಕಾದರೂ ಬರುತ್ತದೆಯೋ ಎಂದು ಟಿ,ವಿ.ಯುಳ್ಳ ಮನೆಯವರು ಕೈ ಕೈ ಹಿಸುಕಿಕೊಳ್ಳುವಂತಹ ಪರಿಸ್ಥಿತಿ ಆಗ ಇತ್ತು.

ನಮ್ಮ ದೇಶದಲ್ಲಿ ಹೊರಗೆ ಹೋಗಿ ದುಡಿಯುವ ಮಹಿಳೆಯರ ಸಂಖ್ಯೆಗಿಂತ ಮನೆಯಲ್ಲಿಯೇ ದುಡಿಯುವ ಗೃಹಿಣಿಯರ ಸಂಖ್ಯೆಯೇ ಜಾಸ್ತಿ. ನಿತ್ಯ ಯಾಂತ್ರಿಕ ಬದುಕಿನಲ್ಲಿ ಜೀವ ತೇಯುವ ಗೃಹಿಣಿಯರಿಗೆ ಟಿ.ವಿ. ಒಂದು ಸಂಗಾತಿಯಂತಿದೆ. ಮನರಂಜನೆಗೆ, ಹೊಸರುಚಿಗಳನ್ನು ಕಲಿತುಕೊಳ್ಳಲು, ಹೊರ ಜಗತ್ತಿನ ಸುದ್ಧಿಗಳನ್ನು ಮನೆಯಲ್ಲಿಯೇ ಕುಳಿತು ಕಲೆ ಹಾಕಲು ಇದು ಅತ್ಯುತ್ತಮ ಮಾದ್ಯಮವಾಗಿದೆ. ಟಿ.ವಿ. ಮತ್ತು ಗೃಹಿಣಿಯರ ಮಧ್ಯದಲ್ಲಿ ಒಂದು ರೀತಿಯ ಅವಿನಾಭಾವ ಸಂಬಂಧವೇ ಬೆಳೆದಿದೆ..

ಹೀಗೆ ಹೆಂಗಳೆಯರು ಮಾಯಾ ಪೆಟ್ಟಿಗೆಗೆ ಅಧೀನರಾಗಿದ್ದರೆ, ಮಕ್ಕಳದು ಇನ್ನೊಂದು ರೀತಿಯ ಕಥೆ. ಅದೊಂದು ರೀತಿ ಬಿಸಿ ತುಪ್ಪವಿದ್ದಂತೆ. ಮಕ್ಕಳು ಕಿರಿಕಿರಿ ಮಾಡುತ್ತವೆ, ಕೆಲಸವೇ ಸಾಗದೆಂದು ಕಾರ್ಟೂನ್ ಚಾನಲ್ ಹಾಕಿ ಮಕ್ಕಳನ್ನು ಕುರ್ಚಿಗೆ ತಗುಲಿಸಿ ಗೃಹಿಣಿಯರು ಕೆಲಸದಲ್ಲಿ ಮಗ್ನರಾಗಿಬಿಡುತ್ತಾರೆ. ಹೀಗೆ ಮಕ್ಕಳಿಗೆ ಶುರುವಿನಿಂದಲೇ ತಾಯಂದಿರೇ ಟಿ.ವಿ.ಯ ಗೀಳನ್ನು ಅಂಟಿಸಿಬಿಡುತ್ತಾರೆ. ಮಕ್ಕಳು ಶಾಲೆಗೆ ಹೋಗುವಂತಾದಾಗ ಈ ಗೀಳನ್ನು ಬಿಡಿಸಲು ಹರಸಾಹಸ ಪಡುತ್ತಾರೆ. ಶಾಲೆಗೆ ಹೋಗುವವರೆಗೆ ನೋಡಿಕೊಳ್ಳಲಿ ಎಂದು ತಮಗೆ ತಾವೇ ಸಮಜಾಯಿಷಿ ಕೊಟ್ಟುಕೊಂಡು ಮಕ್ಕಳ ಟಿ.ವಿ. ನೋಡುವ ಗೀಳು ಮುಂದುವರೆಯಲು ಪರೋಕ್ಷವಾಗಿ ತಾಯಂದಿರೇ ಕಾರಣರಾಗುತ್ತಾರೆ. ಶಾಲೆಯಿಂದ ಬಂದ ಮಗುವಿನ ಮನಸ್ಸು ಆಟದ ಮೈದಾನಕ್ಕೆಳೆಸದೇ ಪುನ: ಟಿ.ವಿ.ಯ ಕಡೆಗೇ ವಾಲುತ್ತದೆ. ಟಿ.ವಿ. ಸಂಪೂರ್ಣವಾಗಿ ನಮ್ಮ ಮನೆಯಲ್ಲಿ ನಿಷೇಧಗೊಂಡಿದ್ದರೂ , ಟಿ.ವಿ. ಹಾಕಿದರೆ ಮಾತ್ರ ಊಟ ಮಾಡುತ್ತೇನೆಂದು ಮಗಳು ಆಗಾಗ ಬ್ಲ್ಯಾಕ್ ಮೇಲ್ ಮಾಡುತ್ತಿರುತ್ತಾಳೆ. ಎಷ್ಟೆಂದರೂ ತಾಯಿ ಕರುಳು. ಏನೋ ಒಂದರ್ಧ ಗಂಟೆ ನೋಡಿಕೊಳ್ಳಲೆಂದು ನಾನೂ ಕೂಡ ಅನೇಕ ಬಾರಿ ಸಮಜಾಯಷಿ ಮಾಡಿಕೊಂಡದ್ದಿದೆ.

ಈ ಮೂರ್ಖ ಪೆಟ್ಟಿಗೆಯಿಂದ ಅಲ್ಪ ಸ್ವಲ್ಪ ಅಂತರವನ್ನು ಕಾಯ್ದುಕೊಂಡವರೆಂದರೆ ಪಡ್ಡೆ ಹೈಕಳುಗಳು ಎಂಬುದು ನನ್ನ ಅಭಿಪ್ರಾಯ. ಇವುಗಳ ಸಾಮ್ರಾಜ್ಯವೇ ಬೇರೆ. ಸದಾ ಮೊಬೈಲು, ಕಾಲೇಜಿನ ಕ್ಯಾಂಪಸ್ಸಿನಲ್ಲಿ ನಿಂತುಕೊಂಡು ಹುಡುಗಿಯರನ್ನು ಕಿಚಾಯಿಸುವುದು, ಬೈಕ್ ರೈಡಿಂಗ್, ದೇವಸ್ಥಾನಗಳ ಆಸುಪಾಸಿನಲ್ಲಿ ಠಳಾಯಿಸುವುದು ಇಂತಹ ಷಡ್ಯೂಲ್ಗಳ ಮಧ್ಯ ಟಿ.ವಿ. ಇವರಿಗೆ ಅಡಗೂಲಜ್ಜಿಯಂತಾಗಿಬಿಡುತ್ತದೆ. ಆದರೆ ಕ್ರಿಕೆಟ್ ಮ್ಯಾಚ್ ಪ್ರಸಾರವಾಗಲಿದೆ ಎಂದರೆ ಜ್ಞಾನೋದಯವಾಗುವಂತೆ ಇವರಿಗೆ ಟಿ.ವಿ.ಯ ನೆನಪಾಗಿಬಿಡುತ್ತದೆ. ಮ್ಯಾಚ್ ಮುಗಿಯುವವರೆಗೂ ರಿಮೋಟನ್ನು ಗುತ್ತಿಗೆ ಹಿಡಿದುಕೊಂಡು ಕುಳಿತು ಬಿಡುತ್ತಾರೆ. ಹೆಂಗಳೆಯರು ತಪ್ಪಿದ ತಮ್ಮ ಧಾರಾವಾಹಿಗಾಗಿ ಹಪಹಪಿಸುತ್ತ ಶಾಪ ಹಾಕುವುದೇ ಆಗುತ್ತದೆ. ಫೇಸ್ ಬುಕ್, ವಾಟ್ಸ್-ಆಪ್‍ಗಳಂತಹ ಮಾದಕ ಸೆಳೆತಗಳಿರುವಾಗ ಎಂಬತ್ತರ ದಶಕದ ಹೀರೋಯಿನ್‍ನಂತಿರುವ ಟಿ.ವಿ.ಯ ಬಗ್ಗೆ ಇವರಿಗೆಂತ ಆಸಕ್ತಿ ಇರಲು ಸಾಧ್ಯ?

ಇನ್ನು ಈ ಗಂಡಸರ ಕೈಗೆ ರಿಮೋಟನ್ನು ಕೊಡುವುದೂ ಒಂದೇ. ಮಕ್ಕಳ ಕೈಗೆ ರಿಮೋಟ್ ಕೊಡುವುದೂ ಒಂದೇ. ಬರೀ ಚಂಚಲ ಬುದ್ಧಿ. ನಿರಂತರವಾಗಿ ಹೆಬ್ಬೆರಳು ರಿಮೋಟಿನ ಗುಂಡಿಯನ್ನು ಒತ್ತುತ್ತಲೇ ಇರುತ್ತದೆ. ಜಾಹೀರಾತು ಬಂದಾಗ ಮಾತ್ರ ಹೆಬ್ಬೆರೆಳು ತಟಸ್ಥವಾಗಿರುತ್ತದೆ. ಕಾರ್ಯಕ್ರಮ ಆರಂಭಗೊಂಡಾಗ ಮತ್ತೆ ಮುಂದಿನ ಚಾನಲ್‍ನಲ್ಲಿ ಜಾಹೀರಾತನ್ನು ಹುಡುಕುತ್ತ ಹೋಗುತ್ತಾರೆ. ಈ ಜಾಹೀರಾತುಗಳ ಬಗ್ಗೆ ಗಂಡಸರಿಗೆ ಅದೆಂಥ ಆಕರ್ಷಣೆಯೋ ನಾ ಕಾಣೆ. ಅದೊಂದು ಚಿದಂಬರ ರಹಸ್ಯವೇ ಆಗಿದೆ. ಈಗಂತೂ ಬ್ಲೇಡಿಗೂ, ಗಂಡಸರ ಒಳ ಉಡುಪುಗಳ ಜಾಹೀರಾತಿಗೂ ಹೆಂಗಸರೇ ಬೇಕು. ಆ ಆಕರ್ಷಣೆಯೇನಾದರೂ ಇದ್ದೀತೇನೋ. ಕ್ರಿಕೆಟ್ ಜ್ವರ ಮಾತ್ರ ಹದಿಹರೆಯದ ಹುಡುಗರಿಗಿಂತ ಇವರಿಗೆ ಒಂದೆರಡು ಡಿಗ್ರಿ ಜಾಸ್ತಿಯೇ ಎಂದು ನನ್ನ ಅಭಿಪ್ರಾಯ.

ಎಲ್ಲರ ಬಗ್ಗೆ ಹೇಳಿ ಇನ್ನು ವಯಸ್ಸಾದವರ ಬಗ್ಗೆ ಹೇಳದಿದ್ದಲ್ಲಿ ಹೇಗೆ? ಎಲ್ಲ ವಯೋಮಾನದವರಿಗಿಂತ ಈ ಮಯಸ್ಸಾದವರ ಟಿ.ವಿ. ಆಯಣವನ್ನು ಬಲ್ಲವರೇ ಬಲ್ಲರು. ಪಾಪ, ವಯಸ್ಸಾದಂತೆ ಕಿವಿ,ಕಣ್ಣು ಕೈ ಕೊಡುತ್ತವೆ. ಹೊರಗಡೆ ತಿರುಗಾಡಿ ಸಮಯ ಕಳೆಯಬೇಕೆಂದರೆ ದೈಹಿಕ ತೊಂದರೆಗಳು. ಇರುವ ನೂರಾರು ಚಾನೆಲ್‍ಗಳನ್ನು ಬದಲಾಯಿಸಿದರೂ ಒಂದೂ ಚಾನೆಲ್‍ನಲ್ಲಿ ಭಕ್ತಿಪೂರಿತ ಸಿನಿಮಾಗಳಿಲ್ಲ, ಒಂದು ದೇವರ ನಾಮವಿಲ್ಲ, ಒಂದು ಒಳ್ಳೆಯ ಸುದ್ಧಿಯಿಲ್ಲ. ಮೂರೂ ಹೊತ್ತು ಅರೆಬರೆ ಬಟ್ಟೆಯನ್ನು ತೊಟ್ಟು ಕುಣಿಯುವ ದೃಶ್ಯಗಳು, ಇಲ್ಲ, ಡೋಂಗಿ ಬಾಬಾಗಳ ವಿನೋದ ವಿಲಾಸ ಲೀಲಾವಳಿಗಳ ಅನಾವರಣಗಳು, ಪುಟ್ಟ ಕಂದಮ್ಮಗಳ ಮೇಲಾಗುತ್ತಿರುವ ಪೈಶಾಚಿಕ ಕೃತ್ಯಗಳ ನಿರಂತರ ಸುದ್ಧಿಗಳು, ಅದೇ ಜೋತಿಷ್ಯ, ಅದೇ ಭವಿಷ್ಯ ಎಂಬುದು ವಯಸ್ಸಾದವರ ಹಪಾಹಪಿಗಳು.

ನಮ್ಮ ಬದುಕಿನಲ್ಲಿ ಟಿ.ವಿ.ಯ ಪ್ರವೇಶವಾದಾಗಿನಿಂದ ಸಂಬಂಧಗಳಲ್ಲಿ ಅಂತರವೇರ್ಪಟ್ಟಿದೆ. ಮಾತು, ಚರ್ಚೆ, ತಮಾಷೆಗಳೂ ಕಡಿಮೆಯಾಗಿವೆ. ಅಡುಗೆಯ ರುಚಿ ನೀರಸವಾಗಿದೆ. ಸಮಯ ಸಾಲದಾಗಿದೆ. ಹೆಂಗಸರ ಕ್ರಿಯಾತ್ಮಕತೆ ನಶಿಸಿ ಹೋಗುತ್ತಿದೆ. ಕೊಳ್ಳುಬಾಕ ಸಂಸ್ಕೃತಿ, ಅನುಕರಣೆ ಹೆಚ್ಚಾಗಿದೆ. ನೋಡಬಾರದ, ಆಡಬಾರದ, ಕೇಳಬಾರದ ವಿಷಯಗಳು ಬದುಕಲ್ಲಿ ನಿತ್ಯ ತಲೆಹಾಕುತ್ತಿವೆ. ಬದುಕಿಗೆ ಅಗತ್ಯವಿಲ್ಲದ ಕೆಲವು ಪರಿಕರಗಳಿಗೆ ಸಂಪೂರ್ಣ ಅಧೀನರಾಗುವ ಅವಶ್ಯಕತೆ ಇಲ್ಲ. ಮಕ್ಕಳಲ್ಲಿ ಸೃಜನಶೀಲತೆ, ಕ್ರಿಯಾತ್ಮಕತೆಗಳು ವೃದ್ಧಿಯಾಗಬೇಕಾದರೆ ಉತ್ತಮ ಹವ್ಯಾಸಗಳ ಅವಶ್ಯಕತೆ ಇದೆ. ಚಟುವಟಿಕೆಗಳಿರದ ಮಕ್ಕಳ ಬದುಕು ಸದೃಡವಾಗಿರಲು ಹೇಗೆ ಸಾಧ್ಯ? ಕಮಲ ಕೆಸರಿನಲ್ಲಿದ್ದರೂ ಅದನ್ನು ಅಂಟಿಸಿಕೊಳ್ಳದಂತೆ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವ ಅನಿವಾರ್ಯತೆ ಇದೆ.

-ಗೌರಿ. ಚಂದ್ರಕೇಸರಿ, ಶಿವಮೊಗ್ಗ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x