ಬಿಂದಿಗಿ ಭೂತ: ಗುಂಡುರಾವ್ ದೇಸಾಯಿ

ಪದ್ದು ನಿತ್ಯದಂತೆ ವಾಕಿಂಗ್‍ಗೆ ಊರ ಹೊವಲಯದಲ್ಲಿ ಹೋಗಿದ್ದಾಗ ಕಾಲಿಗೆ ಕಲ್ಲುತಾಗಿ ಎಡವಿ ಬಿದ್ದ, ಎಡವಿದ ಸ್ಥಳದಲ್ಲಿ ನೋಡತಾನೆ ಹೊಳೆಯುವ ವಸ್ತುವೊಂದು ಕಾಣಿಸ್ತು.  ಪುರಾತನ ವಸ್ತು ಇರಬಹುದೆಂದು ತೆಗ್ಗು ತೊಡಿ ತೆಗೆದ ಪುಟ್ಟ ಬಿಂದಿಗಿ ತರಹ ಇತ್ತು. ಒಳಗೆ ಏನು ಇರಬಹುದೆಂದು ತೆಗೆದು  ನೋಡಿದ ಬಸ್ ಎಂದು ಹೊಗೆ ಹೊರಗೆ ಬಂದು ದೈತ್ಯಾಕಾರದ ವಿಚಿತ್ರ ಆಕೃತಿ ಕೈಕಟ್ಟಿಕೊಂಡು ದೈನ್ಯತೆಯಿಂದ ‘ಸ್ವಾಮಿ ತಾವು ನನ್ನನ್ನು ಬಂಧ ಮುಕ್ತರನ್ನಾಗಿ ಮಾಡಿದಿರಿ. ನಿಮಗೆ ಏನು ಸಹಾಯ ಬೇಕು ಕೇಳಿ’ ಎಂತು. ಅಲ್ಲಾವುದ್ದೀನನ ಅಧ್ಭುತ ದೀಪದಲ್ಲಿ ಹೊರಬಂದ ಭೂತದಂತೆ ಇದು ಆ ತರಹದ ಕೇಸು ಅಂತ ತಿಳಿದು; ಆಯ್ತು ನಿನಗೆ ಬಿಡುಗಡೆ ಸಿಕ್ಕಿತಲ್ಲ ಹೋಗಿಬಿಡು’ ಎಂದ. ‘ಅಯ್ಯ ಪ್ರಭು ನಾನು ವಿಚಿತ್ರ ಆಕಾರವುಳ್ಳವರು,ಪೀಡಕರು ಆಗಿರಬಹುದು ಆದರೆ ಉಪಕಾರ ಮಾಡಿದವರಿಗೆ ಸಹಾಯ ಮಾಡದೆ ಕದಲಲಾರೆನು’ 

‘ಆಯ್ತು ಮುಂದೆ ಸಮಯ ಬಂದಾಗ ನೋಡೋಣ’ ಅಂತ ಸಾಗ ಹಾಕಿದ.
ಹಿಂಗ ಕೆಲ ದಿನಗಳು ಕಳದವು, ಮತ್ತೆ ಆ ಬಿಂದಿಗಿ ಭೂತ ಪ್ರತ್ಯಕ್ಷ ಆಗಿ ‘ಸ್ವಾಮಿ ಅಪ್ಪಣೆ ಮಾಡಿ, ನನ್ನಿಂದ ಏನು ಸಹಾಯ ಆಗಬೇಕು ಅಂತ’
‘ಅಯ್ಯೋ ಕರ್ಮವೇ? ಯಾರಯ್ಯ ನಿನ್ನ ಕರದದ್ದು! ನನಗೆ ನಿನ್ನ ಅವಶ್ಯಕತೆ ಇದ್ದಾಗ ಕರೆಯುತ್ತೇನೆ’ ಎಂದು ಮತ್ತೆ ಸಾಗಹಾಕಿದ.

ಕೆಲದಿನಗಳು ಸಂದಿರಲಿಲ್ಲ  ಮತ್ತೆ ಆ ಬಿಂದಿಗಿ ಭೂತ ಮುಂದೆ ಬಂತು. ‘ಸ್ವಾಮಿ ನನ್ನಿಂದ ಸಹಾಯ ಪಡೆಯದೆ ವಿಧಿಯಿಲ್ಲ. ನೀವು ಏನಾದರೂ ಹೇಳಲೇಬೇಕು. ನಿಮ್ಮ ನಿಸ್ವಾರ್ಥತೆ ನನಗೆ ತುಂಬಾ ಹಿಡಿಸಿದೆ,  ಆದರೆ ನಿಮ್ಮ ಕೆಲಸ ಮಾಡಿದರೆ ನನಗೆ ಸಮಾಧಾನ ಹಾಗೂ ಮುಕ್ತಿ, ಹೇಳಿ ಬೆಳ್ಳಿ,ಬಂಗಾರ,ವಜ್ರ ವೈಢುರ್ಯ ಬೇಕೆ? ಬಿಲಿಯನ್ ಗಟ್ಟಲೇ ಹಣಬೇಕೆ, ಬಂಗಲೇ ಬೇಕೆ?’ 
‘ಅಯ್ಯೊ ಮಾರಾಯ ನನಗೇನು ಬೇಕಿಲ್ಲ, ನಿನಗೆ ಮುಕ್ತಿ ಕೊಟ್ಟದ್ದ ತಪ್ಪಾತೇನು. ಜಾಗ ಖಾಲಿ ಮಾಡು ಮುಂದೆ ನೋಡೋಣ’

‘ಇಲ್ಲ ಸ್ವಾಮಿ ತಮ್ಮ ಮಾತುಗಳಲ್ಲಿ ನನಗೆ ನಂಬಿಕೆ ಬರ್ತಾ ಇಲ್ಲ. ನಿಮ್ಮ ಕೆಲಸ ಮಾಡದೆ ನನಗೆ ಸಮಾಧಾನವಿಲ್ಲ. ನೀವು ಕೆಲಸ ಹೇಳದೆ ಹೋದರೆ, ನಿಮ್ಮನ್ನೆ ತಿಂದು ಬಿಡುವೆ’ ಎಂದು ಗದರಿಸಿತು.
‘ಶಬಾಷ್ï, ಬೋನಿನಲ್ಲಿದ್ದ ಹುಲಿನ ಬಿಡಿಸಿದ ಬ್ರಾಹ್ಮಣ ಕಥೆಯಾಯಿತು. ನಿನ್ನ ತಪ್ಪಲ್ಲ ಹಿಂಗ ಅನ್ನೊದಕ್ಕೆ. ಈ ಮಣ್ಣಿನ ಮಹಿಮೆ’ ಸ್ವಲ್ಪ ಯೋಚಿಸಿ ‘ಆಯ್ತು, ನಿನಗ ನನಗೆ ಸಹಾಯ ಮಾಡಬೇಕಲ್ಲ. ಸರಿ ಒಂದು ಕೆಲಸ ಮಾಡು, ದೇಶದಾಗ ಭ್ರಷ್ಟಾಚಾರ ಮಿತಿಮೀರಿ ಹೋಗಾಕತದ. ಪ್ರಾಮಾಣಿಕತೆ ಅನ್ನೊದು ಸೊರಗಿ ಹೋಗ್ಯಾದ. ಶಾಂತಿ-ಸೌಹಾರ್ದತೆ  ಅನ್ನೊದು ಪುಸ್ತಕದ ಭಾಷೆ ಆಗಕತಾದ. ನೀನು ಮಾಡಬೇಕಾದು ಇಷ್ಟ. ರಾಜಕೀಯ ನಾಯಕರಲ್ಲಿ ಪ್ರಮಾಣಿಕತೆ, ಒಳ್ಳೆತನ ಬೆಳೆಯುವಾಂಗ ಮಾಡಬೇಕು’ 

‘ಅಯ್ಯೋ ಇಷ್ಟೇ ತಾನೆ? ಆಯ್ತು ಸ್ವಾಮಿ, ಇನ್ನೂ ಕಲವೇ ದಿನಗಳಲ್ಲಿ ಈ ಕಾರ್ಯ ಮಾಡಿಕೊಂಡು ಬಂದು ನಿಮ್ಮ ಗುರುಕಾಣಿಕೆ ಸಲ್ಲಸತೀನಿ’ ಅಂತು. ಸಧ್ಯ ಬದುಕಿದೆಯಾ ಬಡ ಜೀವವೇ ಎಂದು ನಿರಾಳಾದ.
ಕೆಲವೇ ದಿನಗಳಲ್ಲಿ ಪತ್ರಿಕೆಗಳಲ್ಲಿ ರಾಜಕೀಯ ನಾಯಕರಿಗೆ ಗಂಡಾಂತರ ಒದಗುತ್ತಿರುವ, ಕೆಲನಾಯಕರು ವ್ಯಕ್ತಿತ್ವವನ್ನು ಬದಲಿಸಿಕೊಂಡು ಸಜ್ಜನರಾಗುತ್ತಿರುವ ವಿಷಯ ಪ್ರಕಟ ಗೊಳ್ಳಲಾರಂಭಿಸಿದವು. ಮಾಧ್ಯಮಗಳು ಇದರ ಮೇಲೆ ದಿನವಿಡಿ ಚರ್ಚೆ ಆರಂಭಿಸಿದವು.  ದೇಶದಲ್ಲೆ ಒಂದು ಸಣ್ಣಕ್ರಾಂತಿ ಆರಂಭಾದಂಗ ಕಾಣ್ತು. ಕೋಮು ಗಲಭೆಗಳು, ಪರವಿರೋಧದ ಮಾತುಗಳು ಸ್ಥಬ್ಧವಾದವು. ಪದ್ದುಗಾದ ಖುಷಿ ಅಷ್ಟಿಷ್ಟಲ್ಲ. ನಿಜಕ್ಕೂ ಒಳ್ಳೆಯ ಕಾರ್ಯ  ಬಿಂದಿಗಿ ಭೂತ ಮಾಡುತ್ತಿದೆ ಅನಿಸ್ತು. ಈ ವಿಚಾರದ ಬಗ್ಗೆ ದೇಶದ್ಯಾಂತ ವಿಚಾರ ಸಂಕೀರ್ಣಗಳು, ಚರ್ಚೆಗಳು ನಡಿಯಾಕತಿದ್ವು.

ಒಂದು ರಾತ್ರಿ ಆ ಬಿಂದಿಗಿ ಭೂತ ಪದ್ದುನ ಮಂದೆ ಕಾಣಿಸಿಕೊಂತು. ಪದ್ದು ಖುಷಿಯಿಂದ ಮಾಡುತ್ತಿರುವ ಕಾರ್ಯದ ಬಗ್ಗೆ ಮನಸಾರೆ ಹೊಗಳಕಾತಿದ. ಆದರೆ ಆಕೃತಿಯಿಂದ ಯಾವುದೆ ಪ್ರತಿಕ್ರಿಯೆ ಬರಲಿಲ್ಲ. ಬದಲಾಗಿ ಅಡ್ಡಬಿದ್ದು ‘ಸುಮ್ಮನೆ ಇದ್ದ ನಿಮಗ ಪೀಡಿಸಿ ತಪ್ಪು ಮಾಡಿದೆ, ನನಗೆ ಮುಕ್ತಿ ಕೊಡಿ’ ಅಂತ ಬೇಡಾಕತಿತು.

‘ಯಾಕೆ? ಏನಾಯ್ತು? ಒಳ್ಳೆ ಕೆಲಸ ನಿನ್ನಿಂದ ಆಗ್ತಿದಿಯಲ್ಲ’ ಎಂದ.
‘ಇಲ್ಲ ಸ್ವಾಮಿ,  ನೀವು ಬೇಕಾದ್ದು ಕೇಳಿದ್ರು ತಂದುಕೊಡತಿದ್ದೆ. ನೀವು ಹೇಳಿದ ಕೆಲಸ ಸುಲಭ ಅಂತ ಅನುಕೊಂಡಿದ್ದು ಸುಳ್ಳಾತು. ನನ್ನ ಕೆಲಸ ಮಾಡಿಕೊಂತ ಎದುರಾದೋರಿಗೆ ಬುದ್ಧಿ ಕಲಿಸಿಕೊಂತ ನಡದೆ ಖರೆ. ಆದರೆ. ಕೆಲವರು ಇದು ಏನೋ ಯಾವುದೊ ಶಕ್ತಿಯ ಕೆಲಸ ಇರಬೇಕೆಂದು ಬಗೆದು ಮಳಿಯಾಳಿ ಮಾಂತ್ರಿಕರನ್ನ ಕರೆಸಿ, ಇದಕ್ಕೆ ನಾನೆ ಕಾರಣ ಅಂತ ತಿಳಿದು ನನ್ನನ್ನ ಬಂಧಸಾಕ ದೊಡ್ಡ ಯಾಗ ಸುರು ಹಚ್ಚಕೊಂಡಾರ. ಮರಳಿ ನನ್ನ ಲೋಕಕ್ಕ ಹೋಗಬೇಕಾಗಿದೆ. ಆದರೆ ನಿಮ್ಮ ಕೆಲಸ ಮಾಡಿ ಹೋಗದೆ ನನಗ ಪ್ರವೇಶವಿಲ್ಲ. ಅದಕ್ಕೆ ನಿಮ್ಮ ಮಾತುಗಳನ್ನು ಹಿಂದತೆಗೆದುಕೊಂಡು ನನ್ನ ಬಿಡುಗಡೆ ಮಾಡಿ.’
‘ಹೇ ಅದೆಂಗ ಸಾಧ್ಯ ಆಗುತ್ತ. ಕೊಟ್ಟ ಮಾತಿಗೆ ತಪ್ಪಬಾರದು. ಒಳ್ಳೆ ಕೆಲಸನ ಮಾಡತಿದ್ದೀಯ. ಮಾಡು ನಾ ಹಿಂದ ಇರತಿನಿ’

‘ಹಾಗೆನ್ನಬೇಡಿ ಸ್ವಾಮಿ ಈ ರಾಜಕೀಯದ ಜನ ಬದಲಾಗತಾರೆ ಅನ್ನೋದು ಮೂರ್ಖತನದ ಪರಮಾವಧಿ. ನನಗ ನಾನು ಬಂದಿಯಾಗೋದಕ್ಕೆ ಚಿಂತೆ ಇಲ್ಲ, ಪಾಪ ಸ್ವಾರ್ಥವಿರದ ತಮಗೆ ಆ ಮಂದಿಯಿಂದ   ತೊಂದರೆಯಾಗಬಹುದು.  ದಯವಿಟ್ಟು ಆಯ್ತು ಅಂದು ಬಿಡಿ, ಅಗೊ ವೈಬ್ರೇಶನ ಹತ್ರಕ್ಕ ಬರತಾ ಇವೆ.’
ಬಿಂದಿಗಿ ಭೂತ ದಯಾಪರ ಮಾತುಗಳಿಂದ ಪದ್ದುನ ಮನಸ್ಸು ಕರಗಿತು. ತಡಮಾಡಿದ್ರೆ ತನಗೆ ಆಪತ್ತು ಎಂಬ ಭಯ ಸುರವಾಯ್ತು ಹಿಂದೂ ಮುಂದು ನೋಡದೆ  ‘ಅಸ್ತು’ ಅಂದ.
ಆ ಆಕೃತಿ ದಯನೀಯ ಕೃತಜ್ಞತಾ ನೋಟ ಬೀರುತ ಕರಗಿತು.

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Doodbasava
Doodbasava
9 years ago

ನಿಜವಾಗಿಯೂ ರಾಜಕೀಯದ ಜನ ಬದಲಾವಣೆ ಆಗುವುದು ಅಸಾಧ್ಯ

1
0
Would love your thoughts, please comment.x
()
x