ಲೇಖನ

ಬಾ ಗೆಳೆಯಾ ಹಾರಿಸೋಣ ಗಾಳಿಪಟ: ಮಲ್ಲೇಶ ಮುಕ್ಕಣ್ಣವರ


ಹಾಯ್ ಫ್ರೆಂಡ್ … ಈಗೆಲ್ಲಿರುವಿರೋ? ಏನು ಮಾಡುತ್ತಿರುವಿರೋ? ಗೊತ್ತಿಲ್ಲ. ಆದರೆ ನಿನ್ನ ನೋಡಬೇಕು ಅಂತ ನನ್ನ ಮನಸ್ಸು ಪರಿ ಪರಿಯಾಗಿ ಹಂಬಲಿಸುತ್ತಿದೆ. ನಿನಗೆ ನೆನಪಿದೆಯಾ? ಆಗ ನನಗೆ ನಿನೇ ಜಗತ್ತು. ಊಟ, ಆಟ, ಪಾಠ ಎನೇ ಇದ್ದರೂ ಅದರಲ್ಲಿ ನಮ್ಮಿಬ್ಬರದ್ದು ಸಮಪಾಲು ಸಮಬಾಳು.
ಕಿತ್ತು ತಿನ್ನುವ ಬಡತನವಿದ್ದರು ನನಗೆ ಅದ್ಯಾವುದರ ಅರಿವು ಬರದಂತೆ ನೋಡಿಕೊಂಡವನು ನೀನು. ಹಬ್ಬ ಬರಲಿ ಜಾತ್ರೆ ಇರಲಿ ಮನೇಲಿ ಗಲಾಟೆ ಮಾಡಿ ನಿನ್ನಂತ ಬಟ್ಟೆನ ನಂಗೂ ಕೊಡಿಸುವರೆಗೂ ಬಿಡತಾನೇಯಿರಲಿಲ್ಲಾ. ನನ್ನ ಮೇಲೆ ಸಿಟ್ಟು ಇದ್ದರೂ ನಿಮ್ಮ ಅಪ್ಪ ನಿನ್ನ ಹಠಕ್ಕೆ ಬಟ್ಟೆ ತೆಗೆದಕೊಂಡ ಬರೋರು. ಆ ಬಟ್ಟೆ ಹಾಕಿ ನಾವಿಬ್ಬರೂ ಓಣಿಲಿ ನಡಿತಾಯಿದ್ದರೆ ನೋಡಿದವರು ಅಹಾ! ಇವರು ಒಂದೇ ಮನೇಲಿ ಹುಟ್ಟಲಿಲ್ಲಾ ಅಷ್ಟೇ ಅಣ್ಣಾ-ತಮ್ಮನಿಗಿಂತಲೂ ಜಾಸ್ತಿನೇ ಇದಾರೆ ಅಂತ ಹೇಳವರು.

ಶಾಲೆಯಲ್ಲೂ ನಮ್ಮದೆ ದರ್ಬಾರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಶಾಲೆಗೆ ಹೊದ ಉದಾಹರಣೆನೇ ಇಲ್ಲಾ. ನಮ್ಮ ಬೆಂಗಳೂರು ಟೀಚರ್ ಅಂತು ನಮ್ಮಿಬ್ಬರಲ್ಲಿ ಯಾರೇ ತಪ್ಪು ಮಾಡಲಿ ಬರ್ರೇಪ್ಪಾ ಬರ್ರೀ ಕುಚಿಕು ಗೆಳ್ಯಾರ ಬೆಂಕಿ ಇಲ್ಲದ ಹೊಗೆಯಾಡುವದಿಲ್ಲಾ ಹೀಡಿರಿ ಕೈ ಅಂತ ಬಿಸಿ ಬಿಸಿ ಕಜ್ಜಾಯ ಕೊಡೋರು.
ದಿನವೂ ಒಂದಿಲ್ಲಾ ಒಂದು ಕಿತಾಪತಿಯಿದ್ದದ್ದೇ. ಅದರಲ್ಲೂ ರವಿವಾರ ಬಂತೆಂದರೆ ನಮ್ಮಿಬ್ಬರಿಗೂ ಕುದರೆ ಲಗಾಮು ಬಿಚ್ಚಿ ಬಯಲಿಗೆ ಹೊಡೆದಂತೆ. ಅವತ್ತೊಂದಿನಾ ಊರು ಕೇರಿ ಸುತ್ತುವದರ ಜೊತೆಗೆ ಶೆಟ್ಟರ ತೋಟ, ಗೌಡರ ಹೊಲ ಸರ್ವೆ ಮಾಡುವುದೇ  ನಮ್ಮ ಕೆಲಸ.

ಇಂತಹ ಜುಗಲಬಂದಿ ದೋಸ್ತಿ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತು ಗೊತ್ತಿಲ್ಲ. ಅವತ್ತು ಊರ ಜಾತ್ರೆ ಆ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸಲು ಗಾಳಿಪಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಗೆಲ್ಲಲೇಬೆಕೆಂಬ ಹಠದಿಂದ ನೀನು ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಿನ್ನ ಖುಷಿಯನ್ನು ನಾನು ದೂರದಿಂದಲೇ ನೋಡುತ್ತಾ ನಿಂತಿರುವಾಗ ಕೆಲವೇ ಸಮಯದಲ್ಲಿ ಆಕಾಶಕ್ಕೆ ಮುತ್ತಿಡುವಂತೆ  ಗಾಳಿಪಟಗಳು ನೀಲಿ ಬಾನೋಳು ತೇಲಾಡಲು ಪ್ರಾರಂಬಿಸಿದವು.

ಎಲ್ಲರ ಗಾಳಿಪಟಕ್ಕಿಂತ ನಿನ್ನ ಗಾಳಿಪಟ ಅತೀ ಎತ್ತರದಲ್ಲೇ ಹಾರಾಡುತಿತ್ತು. ಸ್ಪರ್ಧೆಯ ಸಮಯ ಮುಗಿಯುತ್ತಾ ಬರುವಾಗ ನನ್ನ ಪಕ್ಕದಲ್ಲೆಯಿದ್ದ ಯಾರು  ನೀನ್ನ ಗೆಳೆಯನ ಗಾಳಿಪಟ ಎಲ್ಲರಗಿಂತ ಮ್ಯಾಲ ಅಯ್ತಿ ಅವನ ಗೆದ್ದ ಬಿಟ್ಟಾ ಬಿಡು ಅನ್ನುವದನ್ನ ಕೇಳಿ ಮನಸ್ಸಿಗೆ ತುಂಬಾ ಖುಷಿಯಾಯ್ತು. ಆ ಸಂಭ್ರಮವನ್ನು  ನಿನ್ನ ಜೊತೆ ಆಚರಿಸಬೇಕು ಅಂತ ಓಡಿ ಬರುವಾಗ ಯಾರು ಅಡ್ಡಗಾಲು ಹಾಕಿದರು ಇನ್ನೇನು  ನಾ ಬಿದ್ದಬಿಡತೇನಿ ಅಂತ ತಿಳಕೊಂಡು ನಿನ್ನ ಕೈಯನ್ನು ಬಲವಾಗಿ ಹಿಡಕೊಂಡೆ ಆ ಪರಿಣಾಮ ಸೂತ್ರದಾರ ಹರಿದು ಗೆಲ್ಲುವ ಹಂತದಲ್ಲಿ ನಿನ್ನ ಗಾಳಿಪಟ ಕಾಣದಂತೆ ಮಾಯವಾಯಿತು. ನಿನ್ನ ಸೋಲಿಗೆ ನಾನೇ ಕಾರಣನೆಂದುಕೊಂಡು ನನ್ನ ಸ್ನೇಹದ ಜುಗಲಬಂದಿಯಿಂದ ದೂರವಾದೆ. ಅಲ್ಲಿಂದ ಹವಳದ ಮುತ್ತಿನಂತ ಸ್ನೇಹ ಒಡೆದು ಚುರು ಚೂರಾಯಿತು. ನಾ ಇಂದಿಗೂ ಅದೇ ನೋವಿನಲ್ಲಿದ್ದೇನೆ.

ಗೆಳೆಯಾ ಮೋಸದ ಆಟಕ್ಕೆ  ಗೆಲವು ಸೋಲಬಹುದು ಆದರೆ ಪವಿತ್ರ ಸ್ನೇಹ ಯಾವತ್ತು ಸೋಲಲಾರದು. ನಮ್ಮಿಬ್ಬರ ಸ್ನೇಹಕ್ಕೆ ಅಲ್ಪವಿರಾಮವಿಟ್ಟ ಅದೇ ಜಾತ್ರೆ ಮತ್ತೇ ಬಂದಿದೆ ಗಾಳಿಪಟ ಹಿಡಿದು ಕಾಯತಾ ಇದೇನಿ ಎಲ್ಲವನ್ನು ಮರೆತು ಬಂದುಬಿಡು ನಾವಿಬ್ಬರು ಸೇರಿ ಬಣ್ಣದ ಗಾಳಿಪಟವನ್ನು ಆಕಾಶದೆತ್ತರಕ್ಕೆ ಹಾರಿಸೋಣ.
ಮಲ್ಲೇಶ ಮುಕ್ಕಣ್ಣವರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *