ಬಾಳೇ ಹಣ್, ಬಾಳೇ ಹಣ್.. ನೇಂದ್ರ ಬಾಳೆ, ಮೈಸೂರ್ ಬಾಳೆ, ಪುಟ್ ಬಾಳೆ, ಏಲಕ್ಕಿ ಬಾಳೆ, ವಾಟ್ ಬಾಳೆ.ಬಾಳೆ ಹಣ್.. ಬಾಳೇ ಹಣ್.. ಬೀದಿ ಬೀದಿ ಕೂಗಿ ಕೂಗಿ ರಂಗಪ್ಪನ ಬಾಳೇ ಹಣ್ಣಾಗಿಹೋಗಿತ್ತು. ಈ ಬಾಳೇ ಹಣ್ಣಿನ ಕೂಗು ಸಂಜೆ ಹೊತ್ತಿಗೆ ಬರ್ತಾ ಇದ್ರೆ ಬೀದಿ ಹುಡುಗ್ರೆಲ್ಲಾ ಆ ಗಾಡಿಗೆ ಮುತ್ತಾ ಇದ್ರು. ರಂಗಪ್ಪನ ಮನೆಯೂ ಈ ಬೀದಿಯ ಹತ್ರವೇ ಇದ್ದಿದ್ರಿಂದಲೋ, ಆ ಬೀದಿಯ ಚಿಳ್ಳೆ ಪಿಳ್ಳೆ ಹುಡುಗ್ರ ಜೊತೆ ಮಾತಾಡೋದ್ರಲ್ಲಿ ಸಿಗೋ ಅದಮ್ಯ ಸುಖಕ್ಕೋಸ್ಕರವೋ ಗೊತ್ತಿಲ್ಲ ಆ ಮಕ್ಕಳ ಶಾಲೆ ಬಿಡುವ ಸಮಯವಾದ ಮೇಲೇ ಆ ಬೀದಿಗೆ ಬರ್ತಿದ್ದ ರಂಗಪ್ಪ. ಆ ಹುಡುಗ್ರಿಗೂ ಅಷ್ಟೆ. ರಂಗಪ್ಪನೆಂದ್ರೆ ಅಚ್ಚುಮೆಚ್ಚು. ಪೇಟೆಗಿಂತ ಸ್ವಲ್ಪ ಕಮ್ಮಿ ಮತ್ತೆ ಒಳ್ಳೆ ಬಾಳೇಹಣ್ಣು ತರ್ತಾನೆ ಅಂತ ಹುಡುಗ್ರರ ಅಮ್ಮಂದಿರು ರಂಗಣ್ಣನ ಇಷ್ಟಪಟ್ರೆ ಹುಡುಗ್ರಿಗೆ ಅವ ಇಷ್ಟ ಆಗ್ತಿದ್ದುದು ಬೇರೆ ಕಾರಣಕ್ಕಾಗಿಯೇ. ಬೆಳಗ್ಗಿಂದ ಬಾಳೇಹಣ್ಣು ಮಾರಲು ತಿರುತಿರುಗಿ ಸುಸ್ತಾದ ರಂಗಣ್ಣ ಈ ಬೀದಿಯ ಮಧ್ಯೆ ಇರೋ ಅರಳೀಮರದ ಕಟ್ಟೆ ಮೇಲೆ ಸ್ವಲ್ಪ ಹೊತ್ತು ವಿಶ್ರಾಂತಿ ತಗೋತಿದ್ದ. ಆ ಸಮಯದಲ್ಲಿ ಹುಡುಗ್ರೆಲ್ಲಾ ರಂಗಣ್ಣ ಕತೆ , ರಂಗಪ್ಪ ಕತೆ ಅಂತ ದುಂಬಾಲು ಬೀಳ್ತಿದ್ರು. ಕೆಲೋ ಸಲ ರಂಗಣ್ಣ ಆ ಬೀದಿಗೆ ಬರೋದು ಲೇಟಾದ್ರೂ ಹುಡುಗ್ರು ಕತೆಗೆಂದು ಕಾಯ್ತಾನೆ ಇರ್ತಿದ್ರು. ಕೆಲೋ ಸಲ ರಂಗಣ್ಣನಿಗೆ ಹುಷಾರಿಲ್ದೇ ಯಾವ ಬೀದಿಗೆ ಬಾಳೇಹಣ್ಣು ಮಾರಲು ಹೋಗದಿದ್ದರೂ ಈ ಬೀದಿಗೆ ಸಂಜೆ ಹೊತ್ತಿಗೆ ಬರಬೇಕೆನಿಸಿಬಿಡುತ್ತಿತ್ತು. ಇವನು ಬರುವವರೆಗೆ ಇರುತ್ತಿದ್ದ ಹುಡುಗರ ಮ್ಲಾನವದನ ಇವನ ಧ್ವನಿ ಕೇಳುತ್ತಿದ್ದಂತೆಯೇ ಅರಳುತ್ತಿದ್ದ ಬಗ್ಗೆ, ನಿಮಿರುತ್ತಿದ್ದ ತಮ್ಮ ಮಕ್ಕಳ ಕಿವಿಯ ಬಗ್ಗೆ ಎಷ್ಟೋ ಅಮ್ಮಂದಿರ ಬಾಯಿಂದ ಕೇಳಿದ್ದ. ಹಾಗಾಗಿ ಆ ಮಕ್ಕಳಿಲ್ಲದ ಒಂದು ಸಂಜೆಯನ್ನು ರಂಗಣ್ಣನಿಗೆ,ರಂಗಣ್ಣನಿಲ್ಲದ ಸಂಜೆಯನ್ನು ಮಕ್ಕಳಿಗೆ ಕಲ್ಪಿಸಿಕೊಳ್ಳೋದೂ ಅಸಾಧ್ಯವಾಗಿತ್ತು.
ಒಂದಿನ ಸಂಜೆ ಈ ಬೀದಿಗೆ ಬರೋ ದಾರಿಯಲ್ಲಿ ತನಗೂ ಈ ಮಕ್ಕಳಿಗೂ ನಂಟು ಬೆಳೆದ ಪರಿಯನ್ನು ರಂಗಣ್ಣ ನೆನೆಯುತ್ತಿದ್ದ.ಬಿರು ಬೇಸಿಗೆಯ ಒಂದಿನದ ಧಗೆ. ಹೊತ್ತು ಮುಳುಗುತ್ತಾ ಬಂದಿದ್ದರೂ ಸೆಖೆ ಇಳಿಯುತ್ತಿರಲಿಲ್ಲ. ತಲೆಗೆ ಸುತ್ತಿದ್ದ ರುಮಾಲನ್ನು ಎಷ್ಟು ಸಲ ಬಿಚ್ಚಿ ಬೆವರೊರೆಸಿ ಪುನಃ ಸುತ್ತಿದ್ದನೋ ಗೊತ್ತಿಲ್ಲ. ಕಟ್ಟೆಯೊಡೆದ ನೀರಿನಂತೆ ಹರಿಯುತ್ತಿದ್ದ ಬೆವರಮುಂದಿನ ಪಂದ್ಯದಲ್ಲಿ ರುಮಾಲು ಸೋತು ಒದ್ದೆಯಾಗಿ ಹಿಂಡಿದರೆ ಲೋಟ ನೀರು ಸಿಗುವಂತಿತ್ತು. ಬಿಸಿಲಲ್ಲಿ ಸುತ್ತಿ ಸುತ್ತಿ ದೇಹದ ನೀರೆಲ್ಲಾ ಬೆವರಾಗಿ ಹೊರಹರಿಯುತ್ತಿದ್ದರೂ ಗಾಡಿಯಲ್ಲಿದ್ದ ಬಾಳೆಹಣ್ಣುಗಳಲ್ಲಿ ಅರ್ಧವೂ ಖಾಲಿಯಾಗದೇ ರಂಗಣ್ಣನ ಕಣ್ಣಂಚು ಒದ್ದೆಯಾಗಿತ್ತು.ತೋಟದಲ್ಲಿ ಬೆಳೆದ ಬಾಳೇಕಾಯಿಗೆ ನಲವತ್ತು ಪೈಸೆಯಂತೆ ಹೊರಗಿನವರಿಗೆ ಕೊಟ್ಟುಬಿಡಬೇಕಿತ್ತು. ಎರಡು ರೂಪಾಯಿ ಸಿಗತ್ತೆ ಅಂತ ಮಾರೋಕೆ ಬರಬಾರದಾಗಿತ್ತು.ಮೊದಲೆರಡು ದಿನ ಸಿಕ್ಕ ದುಡ್ಡು ತಗೊಂಡು ಸುಮ್ಮನಿದ್ದುಬಿಡಬೇಕಾಗಿತ್ತು. ವ್ಯಾಪಾರ ಅಂತ ಇಳಿದು ಪಡುತ್ತಿರೋ ಈ ಪಾಡು ಬೇಕಿತ್ತಾ ಅಂತ ನೊಂದುಕೊಳ್ಳುತ್ತಿದ್ದ. ಹೀಗೇ ಸುಸ್ತಾಗಿ ಒಂದು ಬೀದಿಯ ಅರಳೀಮರದ ಕೆಳಗೆ ಕೂತಿದ್ದ. ಹಾಗೇ ಎಷ್ಟು ಹೊತ್ತು ಕೂತಿದ್ದನೋ ಗೊತ್ತಿಲ್ಲ. ಅಲ್ಲಿನ ನೆರಳಿಗೆ, ತಂಗಾಳಿಗೊಂದು ಜೊಂಪು ಹತ್ತಿತ್ತು. ಯಾರೋ ಬಂದು ತಟ್ಟಿ ಎಬ್ಬಿಸಿದಂತಾಗಿ ಎಚ್ಚರವಾಯಿತು. ಕಣ್ಣು ಬಿಟ್ಟರೆ ಸಣ್ಣ ಹುಡುಗನೊಬ್ಬ ತಟ್ಟಿ ತಟ್ಟಿ ಎಬ್ಬಿಸುತ್ತಿದ್ದ.ಛೇ , ಎಂತಾ ಕೆಲಸವಾಯ್ತು, ಬಾಳೇಹಣ್ಣೆಲ್ಲಾ ಯಾರಾದ್ರೂ ತಗೊಂಡು ಹೋಗಿದಾರಾ ನೋಡಿದ್ರೆ ಏನೂ ಆಗಿರಲಿಲ್ಲ. ಬಾಳೇ ಹಣ್ಣಿಗೆಷ್ಟು ಎಂದವನಿಗೆ ಎರಡು ರೂಪಾಯಿ ಎಂದಿದ್ದ ರಂಗಪ್ಪ. ದೂರದ ಅಂಗಡಿಗೆ ಹೋಗಿ ಹತ್ತಕ್ಕೆ ಮೂರು ಬಾಳೇಹಣ್ಣು ತರಬೇಕಾಗಿದ್ದ ಹುಡುಗನಿಗೆ ಹತ್ತು ರೂಗೆ ಐದು ಬಾಳೇ ಹಣ್ಣು ಸಿಕ್ಕಿತ್ತು. ಆತ ಹಣ್ಣಿನೊಂದಿಗೆ ಮನೆ ಕಡೆ ತಿರುಗಿ ಓಡತೊಡಗಿದ. ಆದ್ರೆ ಕಾಲಿಗೆ ಅವನ ಉದ್ದ ಪ್ಯಾಂಟೇ ತೊಡರಬೇಕೇ ? ನೆಲಕ್ಕೆ ಬಿದ್ದ ರಭಸಕ್ಕೆ ಬಾಳೇಹಣ್ಣುಗಳೆಲ್ಲಾ ರಸಾಯನವಾಗಿತ್ತು. ಕೈಯೂ ಒಂದೆರಡು ಕಡೆ ತರಚಿತ್ತು. ಕೈಗೆ ಆದ ಗಾಯದ ನೋವಿಗಿಂತಲೂ ಬಾಳೇಹಣ್ಣು ತರಲಿಲ್ಲ ಅಂತ ಮನೆಯಲ್ಲಿ ಬಯ್ಯುತ್ತಾರೆನ್ನೋ ಭಯ ಹುಡುಗನನ್ನು ಅಳಿಸತೊಡಗಿತ್ತು. ರಂಗಣ್ಣನಿಗೆ ಅಳುತ್ತಿದ್ದ ಹುಡುಗನನ್ನು ನೋಡಿ ಸುಮ್ಮನಿರಲಾಗಲಿಲ್ಲ. ಅವನನ್ನು ಎಬ್ಬಿಸಿ ಅಲ್ಲೇ ಇದ್ದ ನಲ್ಲಿ ನೀರಲ್ಲಿ ಕೈತೊಳೆದು ಹೋಗಿದ್ದು ಹೋಯ್ತು ಬಿಡು. ತಗೋ ಈ ಐದು ಬಾಳೇಹಣ್ಣು ಕೊಟ್ಟ ಅವನಿಗೆ. ಹುಡುಗನಿಗೆ ತಗೋಬಿಡೋಣ ಅಂತ ಒಂದು ಸಲ ಅನಿಸಿದ್ರೆ ಮತ್ತೊಂದು ಸಲ ಬೇಡ ಅನಿಸಿತು.. ಸಂದಿಗ್ದದಲ್ಲಿದ್ದ ಹುಡುಗನನ್ನು ನೋಡಿ ಏನನ್ನಿಸಿತೋ ಗೊತ್ತಿಲ್ಲ ರಂಗಣ್ಣನಿಗೆ. ಈ ಹಣ್ಣು ನೀನು ತಗೋಳ್ಲೇ ಬೇಕು ಯಾಕೆ ಗೊತ್ತಾ ಅಂದ . ಯಾಕೆ ಅಂದ ಹುಡುಗ. ತಡಿ ಅದ್ರ ಬಗ್ಗೆ ನಿಂಗೊಂದು ಕತೆ ಹೇಳ್ತೀನಿ. ಬಾ ಇಲ್ಲಿ ಕೂತ್ಕೋ ಅಂದ. ಕತೆ ಅಂದ ತಕ್ಷಣ ಆಸೆ ಚಿಗುರಿದ್ರೂ ಪರಿಚಯವಿಲ್ಲದ ವ್ಯಕ್ತಿ ಹತ್ರ ಕೂತ್ಕೋಳೋದಾದ್ರೂ ಹೇಗೆ ಅಂತ ದೂರದಲ್ಲೇ ನಿಂತಿದ್ದ ಹುಡುಗ. ರಂಗಣ್ಣನ ಕತೆ ಶುರುವಾಯ್ತು.
ಒಬ್ಬ ವ್ಯಾಪಾರಿ ತನ್ನ ಬಟ್ಟೆ ಗಂಟುಗಳೊಂದಿಗೆ ವ್ಯಾಪಾರಕ್ಕೆ ಹೊರಟಿದ್ದ. ಹಿಂಗೇ ಒಂದಿನ ಒಂದು ಊರಿನಿಂದ ಹೊರಟ ಮೇಲೆ ಮೈಲುಗಳು ನಡೆದ್ರೂ ಯಾವ ಊರೂ ಸಿಕ್ಕಿರಲಿಲ್ಲ. ಸಿಕ್ಕ ಒಂದೆರಡು ಹಳ್ಳಿಗಳಲ್ಲೂ ಇವನ ಬಟ್ಟೆಗಳನ್ನು ಯಾರೂ ತಗೊಂಡಿರಲಿಲ್ಲ. ಒಂದಿಷ್ಟು ಬಟ್ಟೆ ಮಾರಿಯೇ ಇವತ್ತಿನ ಊಟ ಮಾಡಬೇಕೆನ್ನೋ ಉತ್ಸಾಹದಲ್ಲಿ ನಡೆದೇ ನಡೆದ. ಆದರೆ ಮಧ್ಯಾಹ್ನ ಊಟದ ಹೊತ್ತು ಮೀರೋ ಸಮಯವಾಗಿದ್ರೂ ಬಟ್ಟೆ ವ್ಯಾಪಾರವಾಗಲಿಲ್ಲ. ಹೀಗೇ ನಡೆಯುತ್ತಿರುವಾಗ ಮಾವಿನ ತೋಪೊಂದು ಕಂಡಿತು. ಇಲ್ಲಿ ಮಾವಿನ ಹಣ್ಣು ತಿಂದು , ಇರಬಹುದಾದ ನೀರು ಕುಡಿದು ಸ್ವಲ್ಪ ದಣಿವಾರಿಸಿಕೊಂಡು ಮತ್ತೆ ಮುಂದಿನ ಪಯಣ ಮುಂದುವರೆಸೋಣ ಅಂದುಕೊಂಡ. ಆದರೆ ಒಳಪ್ರವೇಶಿಸದಂತೆ ಆ ತೋಟದ ಮಾಲಿ ತಡೆದ. ವಿಪರೀತ ಹಸಿವಾಗಿರುವುದನ್ನು ತಿಳಿಸಿದಾಗ ನೀನು ತೋಟದ ಮಾವಿನ ಹಣ್ಣು ಕೊಂಡುಕೊಂಡರೆ ಮಾತ್ರ ಒಳಗೆ ಬಿಡುತ್ತೇನೆಂದ ಮಾಲಿ. ಸರಿಯೆಂದು ಒಪ್ಪಿದ ವರ್ತಕ ತನ್ನಲ್ಲಿದ್ದ ಹಣದಲ್ಲಿ ಒಂದಿಷ್ಟು ಮಾವು ಕೊಂಡ. ಕಡಿಮೆ ಬೆಲೆಯಲ್ಲಿದ್ದ ಆ ಮಾವಲ್ಲಿ ಕೆಲವನ್ನು ತಿಂದು ಹಸಿವು ನೀಗಿಸಿಕೊಂಡರೂ ಉಳಿದವನ್ನು ಮಾರಿ ಎರಡರಷ್ಟು ಹಣ ಸಂಪಾದಿಸುವ ಆಲೋಚನೆ ಅವನದು. ಆದ್ರೆ ಸಿಕ್ಕಾಪಟ್ಟೆ ಬಾಯಾರಿಕೆಯೂ ಆಗುತ್ತಿದೆಯೇ. ಕೊಂಡ ಮಾವಿನ ಹಣ್ಣುಗಳನ್ನು, ತನ್ನ ಚೀಲವನ್ನು ಒಂದು ಬದಿಯಿಟ್ಟು ಮಾಲಿ ತೋರಿಸಿದ ನಾಲೆಯ ಬಳಿಗೆ ಹೆಜ್ಜೆ ಹಾಕಿದ. ಬಂದು ನೋಡುತ್ತಾನೆ. ತಾನಿಟ್ಟಿದ್ದ ಜಾಗದಲ್ಲಿ ಮಾವಿನ ಹಣ್ಣುಗಳಿಲ್ಲ. ಅದಿರಲಿ ತನ್ನ ಬಟ್ಟೆ ಚೀಲ ? ಅದೂ ಇಲ್ಲ. ಹೋಗಲಿ ಮಾಲಿಯನ್ನಾದ್ರೂ ಕೇಳೋಣವೆಂದರೆ ಆ ಮಾಲಿಯೂ ಇಲ್ಲ. ಉಕ್ಕೇರುತ್ತಿದ್ದ ಸಿಟ್ಟಿನಲ್ಲಿ ಆ ಮಾಲಿಯೇನಾದ್ರೂ ಅಡ್ಡ ಸಿಕ್ಕಿದ್ರೆ ಕೊಂದೇ ಬಿಡುವಂತಿದ್ದ ಆ ವರ್ತಕ. ಎಷ್ಟು ಹುಡುಕಿದರೂ ಆ ಮಾಲಿ ಸಿಗಲಿಲ್ಲ. ಹಸಿದವನ ಊಟದ ಜೊತೆಗೆ ಅವನ ಜೀವಿತವನ್ನೂ ಕಸಿದುಕೊಂಡ ಪಾಪಿಗೆ ಆ ವರ್ತಕ ಹತಾಶೆಯಿಂದ ಶಪಿಸಿದ. ಮುಂದಿನ ಜನ್ಮದಲ್ಲಿ ನೀನು ಹಣ್ಣಾಗಿ ಹುಟ್ಟು. ದಿನಗಟ್ಟಲೇ ನೀನು ಬಿಸಿಲಲ್ಲಿ ಒಣಗೊಣಗಿ ಯಾರೂ ನಿನ್ನ ಕೊಳ್ಳದಿರಲಿ. ಕೊನೆಗೆ ಕೊಂಡರೂ ನೀನು ಅವರಿಗೆ ದಕ್ಕದೇ ಮಣ್ಣಾಗಿ ಹೋಗು ಎಂದು. ಇನ್ನು ಆ ತೋಟದಲ್ಲಿದ್ದು ಏನು ಮಾಡುವುದು. ಒಳಜೇಬಿನಲ್ಲಿದ್ದ ಒಂದಿಷ್ಟು ದುಡ್ಡಿನಲ್ಲಿ ಮರಳಿ ಊರಿಗೆ ಹೋಗಲಾಗದಿದ್ದರೂ ಅರ್ಧ ದಾರಿಯವರೆಗೆ ಹೋಗಬಹುದು. ಅಲ್ಲಿಂದ ಯಾರಿಗಾದರೂ ಕಾಡಿಬೇಡಿ ಊರಿಗೆ ಹೋದೇನೆಂಬ ಭರವಸೆಯಲ್ಲಿ ತನ್ನೂರ ದಿಕ್ಕಿನಲ್ಲಿ ಹೆಜ್ಜೆ ಹಾಕಿದನು. ದಾರಿಯಲ್ಲಿ ಅರ್ಧಂಬಂರ್ಧ ತಿಂದ ಮಾವಿನ ಹಣ್ಣುಗಳು ಕಂಡವು. ಒಂದೆರಡು ಹೆಜ್ಜೆ ಮುಂದಿಡುವಷ್ಟರಲ್ಲಿ ನಾಯಿಗಳ ಗುಂಪೊಂದು ಚೀಲವೊಂದ ಹಿಡಿದು ಕಚ್ಚಾಡುತ್ತಿದ್ದುದು ಕಂಡಿತು. ಅವುಗಳನ್ನು ಓಡಿಸಿ ನೋಡಿದರೆ ಅದು ತನ್ನದೇ ಚೀಲ. ಛೇ ನಾಯಿಗಳ ದೆಸೆಯಿಂದ ಅಮಾಯಕ ಮಾಲಿಗೆ ಶಪಿಸಿಬಿಟ್ಟೆನಲ್ಲಾ ಎಂಬ ಪಶ್ಚಾತ್ತಾಪವಾಯಿತು. ಮಾಲಿಗೆ ಆದ ವಿಷಯ ತಿಳಿಸೋಣವೆಂದು ತೋಟದತ್ತ ವಾಪಾಸಾದ. ಇವ ಬರೋ ಹೊತ್ತಿಗೆ ಮಾಲಿ ತೋಟದ ಮತ್ತೊಂದು ಮೂಲೆಯಿಂದ ಬರುತ್ತಿದ್ದ. ನಿಮ್ಮ ಹಣ್ಣುಗಳಿಗೆ ನಾಯಿಗಳ ಗುಂಪೊಂದು ದಾಳಿಯಿಟ್ಟಿತ್ತು ಆಗ. ಹೋದದ್ದು ಹೋಯಿತು. ತಗೋಳಿ ಈ ಹಣ್ಣುಗಳನ್ನು. ನಿಮ್ಮ ದುಡ್ಡಿಗ್ಯಾಕೆ ನಾನು ಮೋಸ ಮಾಡಲಿ ಎಂದ ಮಾಲಿ. ವರ್ತಕನ ಕಣ್ತುಂಬಿ ಬಂತು. ನೀನು ಹಣ್ಣಾಗಿ ಹುಟ್ಟಿ ಯಾರಿಗೂ ದಕ್ಕದೇ ಮಣ್ಣಾಗುತ್ತಿದ್ದರೂ ನಿನ್ನನ್ನು ಕಾಪಾಡೋ ಒಬ್ಬ ದಯಾಮಯಿ ಹಣ್ಣು ಮಾರುವವನು ಬರುತ್ತಾನೆ. ಅವನು ಹಾಳಾದ ನಿನ್ನ ಬದಲಿಗೆ ಹೊಸ ಹಣ್ಣುಗಳನ್ನು ಕೊಡುತ್ತಾನೆ. ಅಂದೇ ನಿನಗೆ ಹಣ್ಣ ಜನ್ಮದಿಂದ ಮುಕ್ತಿ ಸಿಗಲಿ ಎಂದು ಮನಸ್ಸಲ್ಲೇ ಆಶೀರ್ವದಿಸಿದ.
ಇಲ್ಲಿಗೆ ತನ್ನ ಕತೆ ಮುಗಿಸಿದ ರಂಗಣ್ಣ. ಆ ಹುಡುಗನಿಗೆ ನೋಡು ಆ ಬಡ ಮಾಲಿ ಇದೇ ಬಾಳೇಹಣ್ಣಾಗಿ ಹುಟ್ಟಿರಬಹುದು. ನಿನ್ನಿಂದ ಅವನಿಗೆ ಒಳ್ಳೆಯದಾದರೆ ಅದು ಒಳ್ಳೇದಲ್ಲವೇ ಅಂದ. ಮಗುವಿನ ಮುಖ ಅರಳಿತು. ಹೌದೌದು ಎಂದು ರಂಗಣ್ಣ ಕೊಟ್ಟಿದ್ದ ಹೊಸ ಬಾಳೆಹಣ್ಣುಗಳನ್ನು ಹಿಡಿದು ಮನೆಯತ್ತ ಧಾವಿಸಿದ. ಬಾಳೇಹಣ್ಣಿನ ವ್ಯಾಪಾರಿಯಾಗಿ ಬದಲಾಗೋ ಮೊದಲಿದ್ದ ತನ್ನ ಪೂರ್ವಾಶ್ರಮವನ್ನೇ ರಂಗಣ್ಣ ಕತೆಯಾಗಿಸಿದ್ದರೂ ಆ ಹುಡುಗನಿಗೆ ಅದು ಇಷ್ಟವಾದಂತೆ ಅವನ ಮೊಗದಲ್ಲಿನ ಮಂದಹಾಸ ಹೇಳುತ್ತಿತ್ತು. ಆ ಘಟನೆಯನ್ನು ಅಲ್ಲೇ ಮರೆತುಬಿಟ್ಟಿದ್ದ ರಂಗಣ್ಣ ಮಾರನೇ ದಿನವೂ ಆಕಸ್ಮಿಕವಾಗಿ ಆ ಬೀದಿಗೇ ಬಂದ ಸಂಜೆಯ ಹೊತ್ತಿಗೆ. ಈತನ ಧ್ವನಿ ಕೇಳುತ್ತಿದ್ದಂತೆಯೇ ಒಬ್ಬ ಹುಡುಗ ಓಡಿ ಬಂದ. ಅವನ ಜೊತೆಗೆ ಇನ್ನೊಬ್ಬ. ನಿಮ್ಮ ಹೆಸರೇನು. ಚೆನ್ನಾಗಿ ಕತೆ ಹೇಳ್ತೀರಂತೆ ಅಂದ ಇಂದು ಬಂದ ಹೊಸ ಹುಡುಗ. ರಂಗಪ್ಪ ಅಂತ ಕಣ್ರಪ್ಪ ಅಂದ ಇವ. ಹೌದು ರಂಗಣ್ಣ ಸಖತ್ತಾಗಿ ಕತೆ ಹೇಳ್ತಾರೆ ಅಂದ ನಿನ್ನೆ ಬಂದವ. ಹೌದಾ ? ಹಂಗಾರಿ ಇವತ್ತೂ ಒಂದು ಕತೆ ಹೇಳಿ ರಂಗಣ್ಣ ಅಂದ ಎರಡನೆಯವ. ಇಂದು ಮುಕ್ಕಾಲಿನಷ್ಟು ಬಾಳೇಹಣ್ಣುಗಳು ಖರ್ಚಾಗಿದ್ದರಿಂದ ರಂಗಣ್ಣನಿಗೂ ಖುಷಿಯಾಗಿ ಮತ್ತೊಂದು ಹೊಸ ಕತೆ ಹೇಳಿದ ಹುಡುಗರಿಗೆ. ಹಿಂಗೇ ದಿನಾ ದಿನಾ ಹೊಸ ಹೊಸ ಹುಡುಗ್ರು ಸೇರ್ಕೊಳ್ತಿದ್ರು. ಯಾರೋ ಮಕ್ಕಳಿಗೆ ಕತೆ ಹೇಳ್ತಾನಂತೆ ಅಂತ ಮೂಗು ಮುರಿದ ಹಿರಿಯರೂ ಒಂದೆರಡು ದಿನ ಮಕ್ಕಳ ಜೊತೆಗೆ ಮಕ್ಕಳಾಗಿ ಕೂತು ರಂಗಣ್ಣನ ಕತೆ ಕೇಳಿ ನಲಿದ್ರು. ಶಹಬ್ಬಾಸ್ಗಿರಿ ಕೊಟ್ರು. ಮಾತು ಕೇಳದ ಮಕ್ಕಳಿಗೆ ಅಮ್ಮಂದಿರು ನೋಡು ನೀ ಹಿಂಗೇ ಮಾಡಿದ್ರೆ ರಂಗಣ್ಣಂಗೆ ಹೇಳ್ತೀನಿ, ಕೊನೆಗೆ ಅವ್ನು ಕತೇನೇ ಹೇಳಲ್ಲ ಅಂತ ಹೆದರಿಸೋ ಮಟ್ಟಿಗೆ ಪ್ರಖ್ಯಾತನಾದ ರಂಗಣ್ಣ.ಮುಂಚಿನ ಬೀದಿಗಳಲ್ಲೆಲ್ಲಾ ಸೇರಿಸಿ ಅರ್ಧ ಗಾಡಿ ಬಾಳೆಹಣ್ಣು ಖಾಲಿಯಾಗಿದ್ರೂ ಇಲ್ಲಿ ಬಂದ ಮೇಲೆ ಒಂದೂ ಹಣ್ಣುಗಳುಳಿಯದಂತೆ ಖಾಲಿಯಾಗಿಬಿಡುತ್ತಿದ್ದವು. ಕೆಲವೊಮ್ಮೆ ಊರೆಲ್ಲಾ ತಿರುಗೋ ಬದಲು ಇಲ್ಲೇ ಒಂದು ಬಾಳೇಹಣ್ಣಿನ ಅಂಗಡಿಯಿಟ್ಟು ಬಿಡಲಾ ಅಂದುಕೊಳ್ಳುತ್ತಿದ್ದ ರಂಗಣ್ಣ. ಆದ್ರೆ ಅಂಗಡಿಯೆಂದು ಇಟ್ಟುಬಿಟ್ರೆ ಹೀಗೆ ಸಂಜೆ ವೇಳೆ ಮಕ್ಕಳ ಜೊತೆ ಕೂರೂಕೆಲ್ಲಾಗತ್ತೆ ? ಸಂಜೆ ವೇಳೆಯೇ ಅಂಗಡಿ ವ್ಯಾಪಾರ ಜಾಸ್ತಿಯಾಗೋದು ಎಂದು ಎಚ್ಚರಿಸಿತು ಮತ್ತೊಂದು ಭಾವ. ಕೊನೆಗೆಆ ಊರಲ್ಲಿ ಆಗಲೇ ಇಟ್ಟಿರೂ ಅಂಗಡಿಯವರ ಹೊಟ್ಟೆ ಮೇಲೆ ಹೊಡೆಯೋಕೆ ಮನಸ್ಸಿರಲಿಲ್ಲ ರಂಗಣ್ಣನಿಗೆ. ಸಂಜೆ ವೇಳೆಗೆ ಅರಳೀಕಟ್ಟೆಯ ಬಳಿ ಹಾಜರಾಗುತ್ತಿದ್ದ ರಂಗಣ್ಣನ ಬಾಳೇಹಣ್ಣಿನ ತಳ್ಳುಗಾಡಿಯ ಬಳಿ ಇವತ್ತು ಒಂದರ ಬದಲು ಎರಡು ಕತೆ ಹೇಳಿದ ಹಾಗೆ, ಅವನ ಬಾಳೇಹಣ್ಣುಗಳಿಗೆ ನಾನು ಮನೆಯಲ್ಲಿ ಶಿಫಾರಸು ಮಾಡಿದ್ದನ್ನ ತಿಳಿದ ರಂಗಣ್ಣ ತನ್ನತ್ತ ಒಂದು ಮೆಚ್ಚುಗೆಯ ನಗೆ ಬೀರಿದಂತೆ .. ಹೀಗೆ ಮಕ್ಕಳ ಕನಸಿನಲ್ಲೂ ರಂಗಣ್ಣ ವಿರಾಜಮಾನನಾಗಿದ್ದ.. ನೆನಪಿನಂಗಳದಿಂದ ಹೊರಬಂದ ರಂಗಣ್ಣ ಎಂದಿನಂತೆ ಆ ಸಂಜೆ ಮತ್ತೆ ಅರಳೀಕಟ್ಟೆಯ ಬುಡದಲ್ಲಿ ತನ್ನ ಬದುಕ ಮತ್ತೊಂದು ಪುಟವನ್ನು ಕತೆಯಾಗಿಸಲು ತಯಾರಾಗಿ ಹಾಜರಾಗಿದ್ದ. ಮಕ್ಕಳ ಸೈನ್ಯ ಒಬ್ಬೊಬ್ಬರಾಗಿ ಅತ್ತ ನೆರೆಯುತ್ತಿತ್ತು..
******
different aagi ide …. 🙂
ಈ ಕತೆ ನಿಜಕ್ಕೂ ತುಂಬಾ ಚನ್ನಾಗಿ ಹಾಗೂ ನೀತಿಯುತವಾದ ಕತೆಯಾಗಿದೆ. ನಿಜಕ್ಕೂ ನನಗೆ ತುಂಬಾ ಸಂತೋಶವಾಗ್ತೀದೆ.
thanks and continue this process always
All the Best
ಶಿಲ್ಪಾ
ಪ್ರಶಸ್ತಿ, ಕತೆಯೊಳಗೊಂದು ಕತೆ! ಚೆನ್ನಾಗಿದೆ!