ಸಾವಕಾರ್ರ ನಂಗ ಐವತ್ತು ರೂಪಾಯಿ ಕೊಡ್ರಿ ಸಾವಕಾರ್ರ… ಮನೀಗಿ ಅಕ್ಕಿ ತಗೊಂಡು ಹೋಗಬೇಕ್ರಿ ಸಾವಕಾರ್ರ, ಐವತ್ತು ರೂಪಾಯಿ ಕೊಡ್ರಿ ಎಂದು ಅಂಗಲಾಚುತ್ತಿದ್ದ ಸಾರಾಯಿಯ ಅರೆ ನಶೆಯಲ್ಲಿದ್ದ ರಾಮಪ್ಪ. ಸಾವಕಾರ್ರ ಸಿದ್ದಪ್ಪನ ಮುಂದೆ. ಅಲ್ಲೋ ರಾಮಾ!? ನೀ ಹೀಂಗ ದುಡದಿದ್ದ ರೊಕ್ಕ ಎಲ್ಲ ತಗೊಂಡು ಹೋಗಿ ಶೆರೇದ ಅಂಗಡ್ಯಾಗ ಇಟ್ಟರ ನಿನ್ನ ಹೆಂಡ್ತಿ ಮಕ್ಕಳ ಗತಿ ಏನಾಗಬೇಕೋ ಖೋಡಿ? ದಾರು ಕುಡ್ಯೋದು ಬಿಟ್ಟಬಿಡೋ! ಸಾವಕಾರ್ರ ಸಿದ್ದಪ್ಪ ಬುದ್ಧಿವಾದ ಹೇಳುತಿದ್ದ. ಏನ್ ಮಾಡಲ್ರೀ ಸಾವಕಾರ್ರ ನಂಗ ಕುಡಿಲಿಕ್ಕಂದ್ರ ನಿದ್ದೀನ ಹತ್ತಂಗಿಲ್ಲ. ಏನೂ ಕೆಲಸಾನೂ ಮಾಡಾಕಾಗುದುಲ್ಲರೀ… ಕೈಯ್ಯಾಗ ಕುರುಪಿ ನಿಲ್ಲುದುಲ್ಲ್ರೀ. ಕೈ ನಡಗಾಕ್ಹತ್ತಾವು.
ಹಂಗಲ್ಲೋ ರಾಮಾ, ನೀ ಹಿಂಗ ಕುಡಕೋಂತ ಹೋದರ ನಿನ್ನ ಹಿಂದ ಇರೋ ಕೂಸ ಕುನ್ನಿ ಏನ್ ಮಾಡಬೇಕೋ? ಹಿಂದ ಹತ್ತ ಎಕರೆ ಹೊಲ ಐತಿ ಹೋಗಲಿ ಬಿಡಪ್ಪಾ ಅನ್ನೂ ಹಂಗರೇ ಐತಿ? ಅದೂ ಇಲ್ಲ. ಮತ್ತ ಹೆಂಗ ಅವರ ಬದುಕಬೇಕು? ವಿಚಾರ ಮಾಡಿದೀಯೇನು ಚೂರರೇ? ಪ್ಯಾಟ್ಯಾಗ ಹೋಗಿ ನೋಡಿದ್ರ ಒಂದೊಂದು ಸಾಮಾನಿನ ರೇಟೂ ನಾ ಮುಂದ ತಾ ಮುಂದ ಅನಕೋಂತ ಥಕ್ ಥೈ ಅಂತ ಕುಣ್ಯಾಕತ್ತಾವು. ಇಂಥಾದ್ರಾಗ ಬರೋ ನಾಕ ರೂಪಾಯಿದಾಗ ಮೂರ ಪಾಲ ನೀ ಕುಡದು ಹಾಳು ಮಾಡಿದ್ರ ಹೆಂಗೋ? ನಿನ್ನಿ ನಿನ್ನ ಹೆಂಡ್ತಿ ಪಾಪ ಮೂರೂ ಮಕ್ಕಳನ್ನ ಕರ್‍ಕೊಂಡ ಬಂದು ಮೂರು ದಿನದಿಂದ ಉಪಾಸ ಅದೇವಿ. ಇಂವ ಮನೀ ಕಡೆ ಬಂದೇ ಇಲ್ಲ ಅಂತ ಗೊಳೋ ಅಂತ ಅತ್ತು ಕಣ್ಣೀರ ಹಾಕಿ ಹೋತು. ನೋಡಪ್ಪಾ ರಾಮಾ ನಿಂಗ ಕುಡುಬ್ಯಾಡ ಅಂತ ಹೇಳಾಕ ನಾ ಯಾರು? ಆದ್ರು ಒಂದು ಮಾತು ಹೇಳ್ತೇನಿ ಕೇಳು. ನಿನ್ನ ಹೆಂಡ್ತಿ ಮಾರಿ ನೋಡದಿದ್ರು ನಿನ್ನ ಮಕ್ಕಳ ಮಾರಿನಾರೆ ನೋಡಿ ವಿಚಾರ ಮಾಡು. ಎಲ್ಲಿ ನೋಡಿದಲ್ಲೆ ಎಲ್ಲಾರ ಹತ್ತ್ಯಾಕನೂ ಸಾಲ ಮಾಡಿದೀಯಂತ. ಸಾಲಗಾರರು ಬಂದು ನಿನ್ನ ಹೆಂಡ್ತಿ ಮಕ್ಕಳಿಗೆಲ್ಲ ಬಾಯಿಗಿ ಬಂದ್ಹಗ ಮಾತಾಡ್ತಾರಂತ. ಮನಕ್ಕ ಅಂಜದಿದ್ರು ಜನಕ್ಕಾದ್ರೂ ಅಂಜಬೇಕೋ ರಾಮಾ!
ಆತ್ರೀಯಪ್ಪ! ಅಂತ ಸಿದ್ಧಪ್ಪನ ಬುದ್ಧಿವಾದದ ಮಾತು ನಿರೀಕ್ಷೆ ಮಾಡಿರದ ರಾಮಪ್ಪ ಬೇರೆ ದಾರಿ ತೋಚದೆ ಮನೆ ಹಾದಿ ತುಳಿದ. ಮನೆ ಮುಂದೆ ಬಂದು ನಿಂತು ನಿಂಗ್ಯಾ…..!? ಏಯ್ ನಿಂಗ್ಯಾ…. ಯಾನ್ ಮಾಡಾತಿ? ಎಲ್ಲಿ ಅದಾಳ ಅಕಿ ನಿಮ್ಮವ್ವ? ಕರಿ ಅಕೀನ. ನನ್ನ ಹೆಸರ ತಗೊಂಡು ಹೋಗಿ ಸಾವಕಾರನ ಮುಂದ ಚಾಡ ಚುಚ್ಚತಾಳ ಅಕಿ? ಆಕೀನ ಒಂದು ಕೈ ನೋಡೇ ಬಿಡತೇನಿ ಇವತ್ತು. ಏನ್ ಇಕಿ ಇವರ ಅಪ್ಪನ ಮನಿಯಿಂದ ತಂದ ಕೊಡ್ತಾಳೇನು ನಂಗ ಕುಡ್ಯಾಕ್? ನಾ ದುಡಿತೇನಿ, ನಾ ಕುಡಿತೇನಿ. ಇಕಿದೇನ್ ನಡಬಾರಕ್ಕ?!
ಮನ್ಯಾಗ ತಣ್ಣಗ ತಿಂದ ಬಿದ್ದಿರ್‍ತಾಳ ಅಷ್ಟರೇ ಏನ್ ಮಾಡ್ಯಾಳ ಭೋ…? ತಂದ ಹಾಕ್ತೇನಲ್ಲ ತಿಂದ ಮದ ಏರೇತಿ ಅಕೀಗಿ. ಎಂದು ಕೂಗಾಡ ಹತ್ತಿದ.
ಅಯ್ಯಯ್ಯಯ್! ನಿನ್ನ ಮಾರಿ ಮಣ್ಣಾಗ ಅಡಗಲೀ, ಇದಿ ಮತ್ತ ಉದಿ ಆತಲ್ಲ…. ಎಲ್ಲಿ ಹೋಗಿದ್ಯss ॒ಮೂರ ದಿನ ಕಣ್ಣ ಮಾರಿ ಮಣ್ಣ ಮಾರಿ ಹೋಗಿದ್ದಿ ಮನೀ ತಣ್ಣಗಿತ್ತು. ಮತ್ತ ಚಾಲೂ ಮಾಡಿದೇನ ನಿನ್ನ ಬೋಂಬಡ…. ಹೆಂಡ್ರ ಮಕ್ಕಳ ಉಂಡ್ರೋ ಉಪಾಸ ಅದಾರೋ ಚಿಂತಿಲ್ಲ ನಿಂಗ. ಕುಡ್ಯಾಕ್ ಅಷ್ಟ ಉಚ್ಚಿ ಆದ್ರ ಸಾಕು. ಬ್ಯಾರೇ ಏನು ಬ್ಯಾಡಾ… ಅಂತ ಗುಡಿಸಲಿನ ಹರಿದು ಹೋದ ತಟ್ಟಿಯ ಸಂದಿಯಿಂದ ರಾಮಪ್ಪನನ್ನು ನೋಡಿದ ಬಾಳವ್ವ ಬೈಯೋದಕ್ಕೆ ಶುರು ಮಾಡಿದಳು.
ಏಯ್ಯೇಯ್ಯಯ್! ಏನ ಏನ್ ಹಚ್ಚಿದೀ? ಗಂಡ ಇದಾನೋ ಸತ್ತಿದಾನೋ ಅನ್ನೋ ಖಬರ್ ಇಲ್ಲ ನಿನಗ. ಮನ್ಯಾಗ ಹೆಜ್ಜಿ ಇಡೂ ತಡ ಇಲ್ಲದ ಚಾಲು ಮಾಡಿದೇನ ಗಯ್ಯಾಳಿ? ನಾ ಹೆಂಗ ಇದ್ರ ನಿಂಗೇನ? ಸಾವಕಾರ ಸಿದ್ಧಪ್ಪನ ಹತ್ತ್ಯಾಕ ಹೋಗಿ ಯಾಕ ಹೇಳಬೇಕಿತ್ತು? ಏರ್ನ ಅಂವೇನ್ ಕುಡತಾನ ಏನ್ ನಂಗ ಕುಡ್ಯಾಕ್, ಏನ್ ನೀ ನಿಮ್ಮ ಅಪ್ಪನ ಮನೀಂದ ತಂದು ಕುಡತೀ? ನಾ ದುಡಿತೇನಿ, ನಾ ಕುಡಿತೇನಿ.
ಹೌದsss! ಚಂದರಾಮಾ…. ನೀ ದುಡಿತೀ ನೀ ಕುಡಿತೀ ಖರೇ. ಇಲ್ಲಿ ಹಿಂದ ಮನ್ಯಾಗ ನನ್ನ ಬೆನ್ನಿಗಿ ಮೂರು ಗುಂಗಿ ಹುಳ ಬಿಟ್ಟಿದೀಯಲ್ಲ ಅವಕೇನ್ ಹಾಕ್ತೀ? ಆಕಡೆಯಿಂದ ಇಕಡೆಯಿಂದ ಬರೋದ ತಡ ಯವ್ವ ಹೊಟ್ಟಿ ಹಸದೈತಿ. ಊಟಕ್ಕ ಏನ್ ಮಾಡಿದೀ ಯವ್ವ ಅಂತಂದ ಕಾಲ ಹಿಡಕೊಂಡು ಸೆರಗೀಗಿ ಜೋತ ಬೀಳತಾವು. ಒಂದಕ್ಕಿಂತ ಒಂದ. ಅಷ್ಟರ ಖಬರ್ ಐತೇನ ನಿಂಗ ಮತ್ತ ದೊಡ್ಡ ಸುದ್ದುಳ್ಳ ಸಾಚಾನ ಹಂಗ ಢರೀ ಹೊಡಕೋತ ಬರತಾನ ಅತ್ತಿಂದ… ಮನ್ಯಾಗ ತಿನ್ನಾಕ್ ನಾಕ ಹಿಡಿ ಜ್ವಾಳ ಇಲ್ಲ. ಸಣ್ಣ ಕೂಸ ಉರಿ ಬಂದು ಎರಡ ದಿನದಿಂದ ನೆಳ್ಳ್ಯಾಡಕತ್ತೈತಿ ದವಾಖಾನೇಕ ತೋರಸಾಕ ತೂತಿನ ನೈಯ್ಯಾ ಪೈಸೆನೂ ಇಲ್ಲ. ಆ ಕೂಸಿನ ಬ್ಯಾನಿ ನೋಡಬೇಕೋ? ಏನ್ ಇವ ಎರಡು ಹಸುವು ಹಸುವು ಅಂತ ಬಡಕೋತಾವು ಇವತರ ಮಾರಿ ನೋಡಬೇಕೋ? ಸುಮ್ನ ಆ ದೇವ್ರ ಕಣ್ಣ ಮುಚ್ಚಿ ಮಣ್ಣ ಮಾಡಿದ್ರ ಭಾಳ ಚಲೋ ಐತಿ. ನನಗ ಈ ಫಜೀತಿ ಇರಾಂಗಿಲ್ಲ.
ಇವರಿಬ್ಬರ ಏರುಧ್ವನಿಗೆ ಜ್ವರ ಬಂದು ಮಲಗಿದ್ದ ಹತ್ತು ತಿಂಗಳ ಹೆಣ್ಣುಮಗು ಅಳೋದಕ್ಕೆ ಶುರು ಮಾಡಿತ್ತು. ಇವರಿಬ್ಬರ ರಾಗಕ್ಕೆ ಎರಡೂವರೆ ವರ್ಷದ ಮಗು ಭರಮಪ್ಪ ಯವ್ವ! ಯವ್ವ!! ಅಂತ ರಾಗ ತೆಗೆದು ಸೋsss ಅಂತ ಜೊತೆಗೂಡಿಸಿತ್ತು. ಈ ಅಳು ನನಗೆ ಸಂಬಂಧಿಸಿದ್ದಲ್ಲ ಅನ್ನೋ ಹಾಗೆ ರಾಮಪ್ಪ ಮನೆಯಲಿ ಕಡಪಡಿಸತೊಡಗಿದ್ದ. ಕುಡಿಯೋದಕ್ಕೆ ಅನಕೂಲ ಆಗೋವಂಥದ್ದು ಏನಾದ್ರು ಸಿಗುತ್ತಾ ಅನ್ನೋ ಆತುರದೊಳಗೆ.
ಯುದ್ಧ ಗೆದ್ದವನಂತೆ ಒಮ್ಮಿಂದೊಮ್ಮೆಲೆ ಕೈಯಾಗ ಒಂದು ಗೊಬ್ಬರ ಚೀಲ ಕತ್ತರಿಸಿ ಹೆಣಿಕೆ ಹಾಕಿ ಹೊಲೆದಿದ್ದ ಕೈಚೀಲ ಹಿಡಕೊಂಡು ದೊಡ್ಡ ದೊಡ್ಡ ಹೆಜ್ಜೆ ಇಟ್ಟು ಹೊರನಡೆದ. ಅದನ್ನು ನೋಡಿದ ಬಾಳವ್ವ ಅಯ್ಯssss! ಇದರ ಬಿಗಿಲೀ… ನಿನ್ನೇರ ಬಸಪ್ಪನ ಅಂಗಡ್ಯಾಗ ಉದ್ರಿ ಮಾಡಿ ಯಾಡ ಸೇರು ಜ್ವಾಳ ತಂದೀನಿ. ಹುಡುಗೂರು ಹೊಟ್ಟಿ ಹೊಟ್ಟಿ ಅಂತ ಬಡಕೋತಾವು ಅಂತ ಕಾಡಿ ಬೇಡಿ ಕಾಲು ಹಿಡಕೊಂಡು. ಇಂವ ಅವ ಜ್ವಾಳ ತಗೊಂಡ ಹೋಗಿ ಮಾರಿ ಕುಡ್ಯಾಕ್ ಹೊಂಟಾನ… ಇದರ ಹೆಣಾ ಎತ್ತಲೀ…! ಯಾಕರ ಜೀವ ಇಟ್ಟಿದೀನೋ ದೇವರ ಇದನೆಲ್ಲ ನೋಡಾಕ?! ಅಂತ ಅಳಕೋಂತ ರಾಮಪ್ಪನ ಕೈಯ್ಯೋಳಗಿನ ಕೈಚೀಲ ಕಸ್ಕೋಬೇಕು ಅಂತ ಬಾಳವ್ವ ಅವನ ಹಿಂದೆ ಓಡಿದಳು.
ಅರೆನಶೆಯಲ್ಲಿದ್ದ ರಾಮಪ್ಪ ಹಿಡಿದಿದ್ದ ಕೈಚೀಲಿನ ಬಿಗಿ ಹಿಡಿತ ಸಡಿಲ ಮಾಡಲೇ ಇಲ್ಲ. ಬಾಳವ್ವ ಎಷ್ಟೇ ಎಳೆದಾಡಿದ್ರು ಫಲ ನೀಡಲಿಲ್ಲ. ಕೊನೆಗೆ ಅವನ ಎಳೆದಾಟಕ್ಕೆ ಸೋತ ಬಾಳವ್ವ ತೊಗೋ! ತಗೊಂಡು ಹೋಗಿ ಕುಡುದು ಹಾಳಾಗಿ ಹೋಗ ಅಕಡೆ. ನಮಗೂ ಸಾಕ ಸಾಕಾಗಿ ಹೋಗೇತಿ ನಿನ್ನ ತೆಳಗ.! ಅಂತ ಹೇಳಿ ಕೈಚೀಲಿನ ಬಿಗಿ ಹಿಡಿತವನ್ನು ಸಡಿಲಗೊಳಿಸಿದ್ದಳು. ರಾಮಪ್ಪ ಆ ಕಡೆಗೆ ಜೋರಾಗಿ ಎಳೆಯುತ್ತಿದ್ದ, ಇತ್ತ ಬಾಳವ್ವ ಹಿಡಿತ ಸಡಿಲಿಸಿದ್ದಕ್ಕೆ ಆಯತಪ್ಪಿದ ರಾಮಪ್ಪ ಧೊಪ್ಪನೆ ಬಿದ್ದು ಬಿಟ್ಟ. ಆತನ ತಲೆಯ ಹಿಂಭಾಗಕ್ಕೆ ನೇರವಾಗಿ ಚೂಪಾದ ಕಲ್ಲೋಂದು ನೆಟ್ಟಿತ್ತು. ನೆತ್ತರು ಒಸರಿತಿತ್ತು.
ಇದನ್ನು ನೋಡಿದ ಬಾಳವ್ವ ಖಾಲಿ ಹೊಟ್ಟೆಯಲ್ಲಿ ಇದ್ದದ್ದಕ್ಕೋ ಅಥವ ಹೊಟ್ಟೆಯಲ್ಲಿ ಇನ್ನೊಂದು ಜೀವ ಮೂಡಿದ್ದಕ್ಕೋ ಏನೋ ಕಣ್ಣಿಗೆ ಕತ್ತಲು ಬಂದು ಕಣ್ಣು ಮುಚ್ಚಿ ತಲೆ ಮೇಲೆ ಕೈಯಿಟ್ಟು ಕುಸಿದು ಬಿಟ್ಟಳು. ಮುಚ್ಚಿದ ಕಣ್ಣಿಂದಲೇ ನೀರು ಧಾರೆಯಾಗಿತ್ತು. ಗುಡಿಸಲಲ್ಲಿ ಸಣ್ಣ ಮಗು ಬೇನೆಯಿಂದ ಒದ್ದಾಡುತ್ತಿತ್ತು. ಓರಿಗೆ ಮಕ್ಕಳ ಜೊತೆಗೆ ಆಡಲು ಹೋಗಿದ್ದ ನಾಲ್ಕು ವರ್ಷದ ನಿಂಗಪ್ಪ ಯವ್ವ…ssss ಹೊಟ್ಟಿ ಹಸದೈತಿ ಊಟಕ್ಕೇನ್ ಮಾಡಿದೀ ಯವ್ವ…! ಅಂತ ಕೇಳುತಿತ್ತು.
ಇತ್ತ ಬಾಳವ್ವನ ಜೊತೆಗೆ ಬಾಳುವೆ ಮಾಡಬೇಕಿದ್ದ ರಾಮಪ್ಪ ಅದು ಯಾವುದೂ ತನಗೆ ಸಂಬಂಧಿಸಿದ್ದಲ್ಲ ಅನ್ನೋ ಹಾಗೆ ಶಾಂತವಾಗಿ ಮಲಗಿದ್ದ.
-ಇಂದುತನಯ.
*****
🙁 duranta 🙁
adu nammooralli nadeda ondu naija ghataneyannadharisida kathe…