ಅಣ್ಣಾ, ಅಣ್ಣಾ ಏನಾದ್ರೂ ಕೊಡಣ್ಣಾ.. ಅಂತ ದೈನ್ಯತೆಯ ದ್ವನಿಯೊಂದು ಅವನ ಹಿಂದಿನಿಂದ ಕೇಳಿ ಬಂತು. ಹಿಂತಿರುಗಿ ನೋಡಿದಾಗ ಕಾಣಿಸಿದ್ದು, ಎಣ್ಣೆಯೇ ಕಾಣದಿದ್ದ ಕೆದರಿದ ಕೂದಲು, ಕಳೆಗುಂದಿದ್ದ ಬೆಂಗಳೂರಿನ ಡಾಂಬರು ರಸ್ತೆಯಂತಾಗಿದ್ದ ಕಣ್ಣು, ಹೊರಗೆ ಮಾಸಿದ ಹರಕಲು ಬಟೆ, ಬಟ್ಟೆಯೊಳಗೆ ಹೊರಗಿಂದಲೇ ಗೋಚರಿಸುವ ಹಸಿದ ಹೊಟ್ಟೆ. ಆ ಹೊಟ್ಟೆಯ ಒಡೆಯ ಸುಮಾರು ೧೦-೧೧ ಪ್ರಾಯದ ಒಬ್ಬ ಹುಡುಗ. ಅವನನ್ನು ನೋಡುತ್ತಲೇ ಈತ ತನ್ನ ಫ್ಲಾಶ್‌ಬ್ಯಾಕ್‌ಗೆ ಜಾರಿದ..!
ಬಹಳ ವರ್ಷಗಳ ಹಿಂದೆ ಈತ ಕೊಳ್ಳೆಗಾಲದಿಂದ ಬೆಂಗಳೂರಿಗೆ ಬಂದಾಗ ಈತನಿಗೂ ಹತ್ತು ವರ್ಷ ಅಷ್ಟೇ. ಆತನ ಹೆಸರು ಪಿಳಾಪಿ. ಹುಟ್ಟುವಾಗಲೇ ತಂದೆ ತಾಯಿ ಮಕಾ ನೋಡದಿದ್ದ ಈತನಿಗೆ ಸರ್ವಸ್ವವೂ ಆಗಿದ್ದು ಮಾತ್ರ ತನ್ನ ಸಾಕು ದೇವತೆ ಭಾನಮ್ಮಜ್ಜಿ ಮಾತ್ರ. ಭಾನಮ್ಮಜ್ಜಿಯ ಹಳೇ ಕನಸೋ ಏನೋ ಆಕೆಯೇ ಅವನಿಗೆ ಹೆಸರಿಟ್ಟಿದ್ದಳು ಪಿಳಾಪಿ ಅಂತ. ಅದರ ಅರ್ಥ ಆಕೆಗೂ ಗೊತ್ತಿದೆಯೋ ಇಲ್ವೋ? ಅದರೆ ಎಲ್ಲರ ಬಾಯಲ್ಲಿ ಪಿಳಾಪಿಯೇ ಆಗಿದ್ದ. ಆಕೆ ತೀರಿಕೊಂಡ ನಂತರ ಮತ್ತೆ ಅನಾಥನಾದ ಈತ ಬೆಂಗಳೂರಿಗೆ ಬಂದದ್ದೂ ಕೂಡಾ ಆಕಸ್ಮಿಕವೇ..! ಭಾನಮ್ಮಜ್ಜಿ ಬದುಕಿರುವಾಗ ಯಾರೂ ಇರದಿದ್ದ ಈಕೆಗೆ ಸಾವಿನ ನಂತರ ಸಂಬಂಧಿಕರು ಹುಟ್ಟಿಕೊಂಡಿದ್ದು ಅಚ್ಚರಿಯೇ ಸರಿ. ಜೋಪಡಿಯ ಹಕ್ಕಿಗಾಗಿ ಬಂದ ಸಂಬಂಧಿಕರು ನಮ್ಮ ಪಿಳಾಪಿಯನ್ನು ರಾತ್ರೋರಾತ್ರಿ ಹೆದರಿಸಿ ಬೆದರಿಸಿ ಬೆಂಗಳೂರು ಲಾರಿ ಹತ್ತಿಸಿದ್ದರು.
ಬೆಂಗಳೂರಿಗೆ ಬಂದ ಪಿಳಾಪಿಗೆ ಮೊದಲು ಇದು ಒಂದು ಅದ್ಭುತ ಮಾಯಾನಗರಿಯೋ ಎಂಬಂತೆ ಭಾಸವಾಗಿತ್ತು. ನಂತರ ಇಲ್ಲಿನ ಆಗು ಹೋಗುಗಳು ಅರ್ಥವಾಗುತ್ತಾ ಆಗುತ್ತಾ ಇಲ್ಲಿನದರ ಬಗ್ಗೆಯೇ ಅಭಾಸವಾಗಹತ್ತಿತು. ಗೊತ್ತು ಗುರಿಯಿಲ್ಲದವರಿಗೆ ಇದೊಂದು ನರಕವೇ ಎಂದು ತೋರಹತ್ತಿತು. ಮೂರನೇ ಕ್ಲಾಸಿನವರೆಗೂ ಓದಿದ್ದ ಪಿಳಾಪಿಗೆ ಮುಂದೆನೂ ಗತಿ.., ಎಲ್ಲಿರಬೇಕು.., ಹೇಗಿರಬೇಕು ಎಂಬ ಯಾವುದೇ ಅರಿವಿಲ್ಲದೇ ಸುಮ್ಮನೇ ತಿರುಗಹತ್ತಿದ. ಸಿಕ್ಕ ಸಿಕ್ಕವರ ಹತ್ರ ಹೊಟ್ಟೆ ತೋರಿಸಿ ಕಾಸು ಕೇಳಿದಾಗ ಬೈದವರೇ ಹೆಚ್ಚು. ಅಂತಹ ಸಮಯದಲ್ಲಿ ಪಿಳಾಪಿ ಪಾಲಿಗೆ ದೇವರಂತೆ ಬಂದವನೇ ಚಹಾ ಅಂಗಡಿಯ ಜಕಾಸ್ ಮಾಬ್ಲ..!
ಜಕಾಸ್ ಮಾಬ್ಲ ಅವನ ಹೆಸರೇಕೆ ಹೀಗಿದೆ? ಹೆಸರಿನ ಅರ್ಥವೇನು ಇತ್ಯಾದಿ ಇತ್ಯಾದಿಗಳನ್ನ ನಮ್ಮ ಪಿಳಾಪಿ ಅವನಿಗೆ ಕೇಳಿಲ್ಲ. ಅವನಿಗೆ ಆಗ ಅದರ ಅಗತ್ಯವೂ ತೋರಿರಲಿಲ್ಲ. ಜಕಾಸ್ ಮಾಬ್ಲಾನೆ ತನ್ನ ಟೀ ಅಂಗಡಿಯಲ್ಲಿ ಪಿಳಾಪಿಯನ್ನು ಕೆಲಸಕ್ಕೆ ಸೇರಿಸಿಕೊಂಡು ಅವನ ಹೊಟ್ಟೆಗೆ, ವಸತಿಗೆ ಜೊತೆಗೆ ಯಾರದ್ದೋ ನಾಲ್ಕನೇ ತರಗತಿಯ ಪುಸ್ತಕಗಳನ್ನು ತಂದು ಕೊಟ್ಟು ಓದುವುದಕ್ಕೂ ದಾರಿ ಮಾಡಿ ಕೊಟ್ಟಿದ್ದ. ಗೊತ್ತು ಗುರಿ ಇರದ ಹತ್ತರ ಆ ಪೋರ ಪಿಳಾಪಿಗೆ ಜೀವನದ ಅಥ ಅರ್ಥವಾಗಹತ್ತಿತ್ತು. ಹಾಗೂ ಹೀಗೂ ಅಲ್ಲಿಯೇ ನೆಮ್ಮದಿಯಾಗಿ ಏಳೇಂಟು ತಿಂಗಳು ಟೀ ಕೊಡೋದು, ಕ್ಲೀನ್ ಮಾಡೋದು ಕೆಲಸ ಮಾಡ್ಕೊಂಡು ಇದ್ದ,, ಆಗ..
ನಮ್ಮ ಪಿಳಾಪಿಯ ಮೇಲೆ ಯಾರ ಕಣ್ಣು ಬಿತ್ತೋ ಏನೋ.., ಸರ್ಕಾರ ಹೊಸ ಕಾಯ್ದೆಯೊಂದನ್ನು ಜಾರಿಗೆ ತಂದಿತ್ತು. ಅದರ ಅನ್ವಯ ೧೪ ವರ್ಷದ ಕೆಳಗಿನ ಮಕ್ಕಳು ಹೋಟೇಲು, ಅಂಗಡಿ, ಕಾರ್ಖಾನೆ ಇತ್ಯಾದಿ ಕಡೆಯಲ್ಲೆಲ್ಲಾ ಕೆಲಸ ಮಾಡುವಂತಿರಲಿಲ್ಲ. ಆಗ ಆ ಕಾಯ್ದೆ ಬಗ್ಗೆ ತುಂಬಾ ಮಾತುಗಳು ನಡೆಯುತ್ತಿದ್ದರೂ ನಮ್ಮ ಜಕಾಸ್ ಮಾಬ್ಲನೂ, ನಮ್ಮ ಪಿಳಾಪಿಯೂ ಯಾವತ್ತೂ ತಲೆಕೆಡಿಸಿಕೊಂಡೇನೂ ಇರಲಿಲ್ಲ. ಯಾಕಂದ್ರೆ ಇಬ್ಬರಿಗೂ ಅದು ಬೇಡವಾಗಿತ್ತು. ಆದರೆ ನಮ್ಮ ಜನ ಸುಮ್ಮನೇ ಬಿಡಬೇಕಲ್ಲ. ಹೆಸರು ಹಾಕಿಸಿಕೊಳ್ಳಲೋ, ಮೇಲಿನವರಿಂದ ಶಹಬ್ಬಾಸ್ ಗಿರಿ ಪಡೆಯಲೋ ಏನೋ ನಮ್ಮ ಜಕಾಸ್ ಮಾಬ್ಲನ ಮೇಲೆ ಬಾಲಕಾರ್ಮಿಕನನ್ನು ಕೆಲಸಕ್ಕೆ ಸೇರಿಸಿಕೊಂಡ ಕಾರಣ ನೀಡಿ ಪೋಲಿಸರೂ ನೋಟಿಸು ನೀಡದೆಯೂ ಅವನ ಅನಕ್ಷರಸ್ಥತೆಯನ್ನು ಬಳಸಿಕೊಂಡು ದಸ್ತಗಿರಿ ಮಾಡಿದರು. ಬಾಲ ಕಾರ್ಮಿಕ ಹುಡುಗನೆಂದು ಪತ್ರಿಕೆಯಲ್ಲಿ ಪಟ ಹಾಕಿಸಿ, ನಂತರ ಅವನನ್ನು ಯಾವುದೋ ಪುನರ್ವಸತಿ ಕೇಂದ್ರಕ್ಕೆ ಹಾಕಿದರು.
ಅಲ್ಲಿ ಇವನಂತಹ ಹುಡುಗರೇ ತುಂಬಿಕೊಂಡಿದ್ದರು. ಎಲ್ಲರೂ ಅನಾಥರೇ ಆಗಿದ್ದರೂ ಎಂಬುದನ್ನೂ ನಮ್ಮ ಪಿಳಾಪಿ ಗಮನಿಸದೇ ಇರಲಿಲ್ಲ. ಹೊರಗೆ ಅರಾಮಾಗಿದ್ದ ಇಂತಹ ಅನೇಕ ಮಕ್ಕಳಿಗೆ ಬಾಲ ಕಾರ್ಮಿಕ ಎಂಬ ಹಣೆಪಟ್ಟಿ ಕಟ್ಟಿ ಹೊರಗೂ ಬಿಡದೆ ಒಳಗೆ ಕೂಡಿಹಾಕಿರುತ್ತಿದ್ದರು. ಸಾಲದ್ದಕ್ಕೆ ಈಗ ನಾವೇನು ಹೆಣ್ಣು ಮಕ್ಕಳ ವಿಷಯದಲ್ಲಿ ನಡೆಯುತ್ತಿದೆ ಎಂದು ಕೇಳುತ್ತಿರುತ್ತೀವಲ್ಲ- ಲೈಂಗಿಕ ದೌರ್ಜನ್ಯ..! ಅಂತಹ ದೌರ್ಜನ್ಯಕ್ಕೆ ಅಲ್ಲಿನ ಹುಡುಗರೂ ಒಳಗಾಗಿದ್ದರು, ಒಳಗಾಗುತ್ತಿದ್ದರೂ ಕೂಡಾ..!
ಅಂತಹ ನರಕದಿಂದ ಹೇಗೋ ತಪ್ಪಿಸಿಕೊಂಡ ನಮ್ಮ ಪಿಳಾಪಿಗೆ ಮತ್ತೆ ಹಳೇ ಜೀವನವೇ ಸಿಕ್ಕಿತು. ಕೈಯಲ್ಲಿ ಕಾಸಿಲ್ಲ. ತನ್ನವರೆಂದು ಹೇಳಿಕೊಳ್ಳಲು ಯಾರೂ ಇಲ್ಲ. ಜಕಾಸ್ ಮಾಬ್ಲನ ಅಂಗಡಿ ಅಂದಿನಿಂದ ಇಂದಿನವರೆಗೂ ಇನ್ನೂ ಬೀಗ ಸಿಕ್ಕಿಸಿಕೊಂಡೇ ಇತ್ತು. ಸಾಲದ್ದಕ್ಕೆ ಅಕ್ಕಪಕ್ಕದವರ ಕಾಟ ಬೇರೆ. ಅದ್ಯಾವುದೂ ಬೇಡವೆಂದು ಆ ಊರನ್ನೇ ತೊರೆಯೋಣವೆಂದುಕೊಂಡ ಪಿಳಾಪಿ ಮತ್ತೆ ಬಸ್ ಸ್ಟಾಪಿಗೆ ಬಂದು ಬೇರೆ ಎಲ್ಲಾದರೂ ಹೋಗಿ ತನ್ನ ಜೀವನ ರೂಪಿಸಿಕೊಳ್ಳಲು ನಿರ್ಧರಿಸಿದ. ಆದರೆ ಅಲ್ಲಿಯೇ ಇದ್ದು ಭಿಕ್ಷೆ ಬೇಡುತ್ತಿದ್ದ ಹುಡುಗನನ್ನೇ ನೋಡಿ, ಅವನ ಮನದಲ್ಲಿ ಅನೇಕ ಪ್ರಶ್ನೆಗಳು, ಗೊಂದಲಗಳು, ವಿಚಾರಗಳು ಹಾಗೇ ಮೂಡಿ ಮೂಡಿ ಮರೆಯಾಗುತಿದ್ವು.
ಒಂದೆಡೆ ತನ್ನದೇ ವಯಸ್ಸಿನ ಹುಡುಗರು, ಅವರ ಮುದ್ದಿಸುವ ತಂದೆತಾಯಿಗಳು, ಅವರ ಸ್ಕೂಲು, ದೊಡ್ಡ ಬ್ಯಾಗು, ಶೋಕಿ, ಹಠ ಇತ್ಯಾದಿ ಇತ್ಯಾದಿ. ಇನ್ನೊಂದೆಡೆ ಗಾರೆ ಕೆಲಸದ ಹುಡುಗರು, ಇಟ್ಟಿಗೆ ಹೋರುವ ಹೈದರು, ಹೊಟೇಲಿನ ಸಪ್ಲೈಯರುಗಳು, ಮಾಲಿಕರ, ಗ್ರಾಹಕರ ಬೈಗುಳಗಳು ಇತ್ಯಾದಿ ಇತ್ಯಾದಿ ಒಮ್ಮೆಲೆ ಅವನ ತುಲನೆಗೆ ಬಂತು. ನಂತರದ ದಿನಗಳಲ್ಲಿ ಪಟ್ಟ ಕಷ್ಟ, ಚಿಂದಿ ಆಯ್ದು ತುಂಬಿಸಿಕೊಂಡ ಹೊಟ್ಟೆ, ಸಹಾಯಕರಾಗಿ ಸಿಕ್ಕ ಹಲವರು.., ಬದುಕೇ ಬೇಸರವಾಗುವಂತೆ ನಡೆದುಕೊಂಡ ಕೆಲವರು.., ಹೀಗೆ ಜೀವನದಿಂದಲೇ ಬಹಳಷ್ಟು ಪಾಠಗಳನ್ನು ಕಲಿಯುತ್ತಾ ಬಂದ ಪಿಳಾಪಿ.
ಹೇಗೋ ಜೀವನದಲ್ಲಿ ನೆಮ್ಮದಿಯಾಗಿದ್ದ ಪಿಳಾಪಿಯನ್ನು ಬಾಲ ಕಾರ್ಮಿಕನೆಂದು ಹಣೆಪಟ್ಟಿ ಕಟ್ಟಿ ಅವನ ಜೀವನವನ್ನೇ ಮೂರಾಬಟ್ಟೆ ಮಾಡಿದ್ದರು. ಅತ್ಲಾಗೆ ವಿದ್ಯೆಯೂ ಇಲ್ಲ, ಇತ್ಲಾಗೆ ನೆಮ್ಮದಿಯೂ ಇಲ್ಲ, ನಮ್ಮಿಷ್ಟದಂತೆ ಬದುಕಲೂ ಬಿಡದ ಜನರ ಮೇಲೆ ಒಂಥರಾ ಜಿಗುಪ್ಸೆ, ಬೇಸರ ಎರಡೂ ಒಟ್ಟೊಟ್ಟಿಗೆ ಮೂಡಿದ್ದರೂ ತನ್ನ ಹಣೆಬರಹವನ್ನು ಹಳಿದುಕೊಳ್ಳೋದೆ ಕ್ಯಾಮೆಯಾಗಿತ್ತು. ಇವೇ ನಮ್ಮ ಪಿಳಾಪಿಗೆ ಜೀವನವನ್ನು ಚಾಲೆಂಜ್ ಆಗಿ ತಗೋಳಕ್ಕೆ ಪ್ರೇರಣೆಯಾಗಿದ್ದು..! ಕಷ್ಟಪಟ್ಟು ಕೆಲಸಮಾಡಿದ, ಇಷ್ಟವನ್ನೆಲ್ಲಾ ಬದಿಗಿಟ್ಟ. ಕಷ್ಟಕ್ಕೂ ಇವನ ಕಷ್ಟ ನೋಡೋಕೆ ಕಷ್ಟವಾಯಿತೂ ಅನ್ನಿಸತ್ತೆ. ಮುಂದೆ ಒಂದು ಗಾರೆ ಕೆಲಸಕ್ಕೆ ಸೇರಿದ. ಮರಳು ಹೊತ್ತ, ಇಟ್ಟಿಗೆ ಕುಟ್ಟಿದ.. ಅದೊಂದು ಸರ್ಕಾರಿ ಕಟ್ಟಡ ಕಾಮಗಾರಿ. ಅಲ್ಲಿ ಅವನಿಗೆ ಯಾರೂ ಬಾಲ ಕಾರ್ಮಿಕ ಹಣೆಪಟ್ಟಿ ಕಟ್ಟಲಿಲ್ಲ. ಕೆಲಸ ಮಾಡಬೇಡಿರೆಂದು ತಡೆಯಲಿಲ್ಲ. ಯಾವ ಕಾಯ್ದೆಯೂ ಅವನಿಗೆ ಉರುಳಾಗಲಿಲ್ಲ ಅಲ್ಲಿ..!
ಇದಾಗಿ ಬಹಳ ವರ್ಷಗಳೇ ಕಳೀತು. ಪಿಳಾಪಿಯೂ ಬೆಳೆದ. ಅವಾ ಪಟ್ಟ ಕಷ್ಟ ಅವನ ಕೈಬಿಡಲಿಲ್ಲ. ಇದೀಗ ಒಂದು ಬಿಲ್ಡಿಂಗ್ ಕಾಮಗಾರಿಯ ಕಾಂಟ್ರಾಕ್ಟರ್ ಆದ ಪಿಳಾಪಿಗೆ ಅಣ್ಣಾ, ಅಣ್ಣಾ ಏನಾದ್ರೂ ಕೊಡಣ್ಣಾ.. ಅನ್ನೋ ಆರ್ತತೆಯ ಧ್ವನಿಯು ಮತ್ತೆ ಅವನನ್ನು ವಾಸ್ತವಿಕತೆಗೆ ಕರೆತಂದಿತು. ಮತ್ತೊಮ್ಮೆ ಅವನನ್ನು ನೋಡಿದಾಗ ಕಾಣಿಸಿದ್ದು, ಕೆಲ ವರ್ಷಗಳ ಹಿಂದಿದ್ದ ತನ್ನದೇ ಆದ ಆ ಜೀವನ, ದಣಿದ ದೇಹದ ಪ್ರತಿಬಿಂಬ.! ಅವನನ್ನು ನೋಡನೋಡುತ್ತಲೇ ತನಗೇ ಅರಿವಿಲ್ಲದಂತೆ…,
ನೂರು ರುಪಾಯಿಯ ನೋಟು ಕೊಡುತ್ತಾ ನಿರ್ವಿಕಾರಭಾವದಲ್ಲಿ ಕೆಲಸವನ್ನೂ ಮರೆತು ಆಕಾಶದತ್ತ ಮುಖ ಮಾಡಿದ ಪಿಳಾಪಿ..!
*****
ಚೆನ್ನಾಗಿದೆ ಸಚಿನ್..:-)
ತಾಂಕ್ಯೂ ಅಕ್ಕಾ..
ವ್ಹಾವ್ ಪ್ಲಾಪಿ…
ತುಂಬಾ ಚೆನ್ನಾಗಿದೆ ಬಾಲ ಕಾರ್ಮಿಕನ ಕಥೆ..
ರುಕ್ಮಿಣಿ ಎನ್.
ಚೆನ್ನಾಗಿದೆ… ಬರಹ…..ಅಭಿನಂದನೆಗಳು. .
ತಾಂಕ್ಸ್ ಸರ್