"Every soul is born divine" ಎನ್ನುತ್ತಾರೆ ವಿವೇಕಾನಂದರು. ಈ ಜಗತ್ತಿನಲ್ಲಿ ಹುಟ್ಟುವ ಪ್ರತಿ ಜೀವಿಯೂ ದೈವೀಕತೆಯ ಅಡಕಮುದ್ರೆಯೇ. ಆದರೆ ಆ ದೈವೀಕತೆಯ ರಾಗ ಸುಶ್ರಾವ್ಯವಾಗಿ ಹೊರಹೊಮ್ಮಿಸಲು ಪ್ರತಿ ಜೀವಿಯೂ ಅದಮ್ಯ ಆತ್ಮವಿಶ್ವಾಸದೊಂದಿಗೆ ಶೃತಿ ಸೇರಿಸಲೇಬೇಕು. ಅದಕ್ಕೆ ಮೊದಲ ಮೆಟ್ಟಿಲೇ ಬಾಲ್ಯ. ಪ್ರತಿ ಮಗುವಿನ ಮನಸ್ಸು ಬಾಲ್ಯದಲ್ಲೇ ಸರ್ವಾಂಗೀಣ ಅಭಿವೃದ್ಧಿ ಹೊಂದಿದರೆ ಮಾತ್ರ ಆ ಮಗು ಮುಂದೆ ಒಂದು ಆರೋಗ್ಯಕರ ಮನಸ್ಸನ್ನು ಹೊಂದಿ ದೈವೀಕತೆಯನ್ನು ಸಾಧಿಸುವೆಡೆ ಎಡೆಯಿಡಬಲ್ಲದೇನೊ ಹಾಗೂ ಪ್ರಸ್ತುತ ಸಮಾಜದ ಸರ್ವತೋಮುಖ ಬೆಳವಣಿಗೆಯ ಕಣ್ಣುಗಳಾಗಿ ರಾಷ್ಟ್ರದ ಶಕ್ತಿಯಾಗಿ ಹೊರಹೊಮ್ಮಬಹುದೇನೋ. ನೀತಿಧನ ಹೇಳುವಂತೆ ಬಾಲಕನಾಗಿದ್ದಾಗಲೇ ಪುತ್ರನಿಗೆ ನೀತಿಯನ್ನು ಹೇಳಿ ಪ್ರತಿಯೊಂದು ಕಾರ್ಯದಲ್ಲಿಯೂ ಶಿಕ್ಷಣವನ್ನು ಕೊಡಬೇಕು. ಹಸಿಯ ಗಡಿಗೆಯಲ್ಲಿ ರಚಿಸಿದ ವಿಚಿತ್ರವಾದ ರೇಖೆಗಳು ಗಡಿಗೆಯನ್ನು ಸುಟ್ಟಾಗಲೂ ಅಳಿಸದೇ ಇರುತ್ತವೆಯಲ್ಲವೇ ಹಾಗೇ. ಆದರೆ ಈ ಬಾಲ ಕಾರ್ಮಿಕ ಪದ್ಧತಿಯೆಂಬ ಅರ್ಬುದವು ಕುಠಾರಪ್ರಾಯವಾಗಿ ಮಕ್ಕಳ ಅಮೂಲ್ಯ ಬಾಲ್ಯದ ಜೀವಕೋಶಗಳನ್ನು ಹಾಳುಗೆಡಹಿ ಅವರ ಮನಸ್ಸನ್ನು ರೋಗಗ್ರಸ್ತವನ್ನಾಗಿಸಿ ಒಂದು ಅನಾರೋಗ್ಯಕರ ಸಮಾಜವನ್ನೇ ಸ್ಥಾಪಿಸುತ್ತಿದೆ.
ಈ ಬಾಲಕಾರ್ಮಿಕ ಪದ್ಧತಿಯ ವ್ಯಾಖ್ಯೆ ತುಂಬಾ ವಿಶಾಲ ಅರ್ಥಗಳನ್ನೂ ಆಯಾಮಗಳನ್ನೂ ಹೊಂದಿದೆ. ನಮ್ಮ ಅನುಕೂಲಕ್ಕಾಗಿ ಹೇಳುವುದೇನೆಂದರೆ, ಬಾಲಕಾರ್ಮಿಕನೆಂದರೆ ಹದಿನಾಲ್ಕು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಯಾವುದೇ ಮಗುವನ್ನು ಶಿಕ್ಷಣವಂಚಿತವನ್ನಾಗಿಸಿ ಬೇರೇ ಕೆಲಸಗಳಿಗಾಗಿ ನೇಮಿಸಿಕೊಳ್ಳುವುದು ಎಂದು. ಈ ಬಾಲಕಾರ್ಮಿಕ ಪದ್ಧತಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮಾರಕ. ಸಂವಿಧಾನ ಕೊಟ್ಟ ತನ್ನ ಹಕ್ಕುಗಳಾದ ಆಟ ಮತ್ತು ಶಿಕ್ಷಣದಿಂದ ವಂಚಿತರಾಗುವ ಈ ಮಕ್ಕಳು ಶೋಷಣೆ ಎಂಬ ಪದದ ಅರ್ಥವನ್ನು ತಿಳಿಯಲೂ ಪಾಪ ಅಸಮರ್ಥರು. ತನಗಾದ ಅನ್ಯಾಯವನ್ನು ಪ್ರತಿಭಟಿಸಲೂ ತಿಳಿಯದ ಈ ಮುಗ್ಧ ಮಕ್ಕಳು ಸತತವಾಗಿ ಶೋಷಿತರಾಗುತ್ತಾ ಮುಂದೆ ಅನ್ಯಾಯ ಮಾಡಿದ ಈ ಸಮಾಜದ ವಿರುದ್ಧ ಮನಸ್ಸಿನಲ್ಲಿ ಆಕ್ರೋಶವನ್ನೇ ತುಂಬಿಕೊಂಡು anti social elemmentsಗಳಾಗಿ ಬೆಳೆದು ನಿಂತುಬಿಡುತ್ತಾರೆ. ಬಡತನವನ್ನೇ ಹಾಸಿ ಹೊದ್ದಿರುವ ಹಳ್ಳಿಗಳ ದೇಶವಾದ ನಮ್ಮ ಭಾರತದಲ್ಲಿ ಈ ಬಾಲಕಾರ್ಮಿಕ ಪದ್ಧತಿ ಅಗಾಧವಾಗಿ ಹರಡಿರುವುದು ಆಶ್ಚರ್ಯವೇನೂ ಅಲ್ಲ. ದಿನದ ತೊತ್ತಿನ ಕೂಳನ್ನು ಸಂಪಾದಿಸಲೋ, ಅಜ್ಞಾನದಿಂದಲೋ, ಅನಕ್ಷರತೆಯ ಕಾರಣಕ್ಕೋ, ಸಂಬಳಕ್ಕೋ, ಅನಿವಾರ್ಯವೋ ಅಥವಾ ಕ್ರೌರ್ಯವೊ, ಒಟ್ಟಿನಲ್ಲಿ ಪೋಷಕರು ಮಕ್ಕಳ ಆದ್ಯ ಹಕ್ಕಾದ ಪ್ರಾಥಮಿಕ ಶಿಕ್ಷಣವನ್ನು ಪಡೆಯಲು ತಮ್ಮ ಚಿಕ್ಕ ಮಕ್ಕಳನ್ನು ಶಾಲೆಗೆ ಕಳುಹಿಸದೇ ವಿಧವಿಧವಾದ ದೈಹಿಕ ಶ್ರಮವಿರುವ, ಮಾನಸಿಕ ಮತ್ತು ದೈಹಿಕ ಆರೋಗ್ಯ ಹದಗೆಡವಂತಹ ಅಪಾಯಕಾರಿ ಕೆಲಸಗಳಿಗೆ ಕಳಿಸುತ್ತಾರೆ. ಸಾಮಾನ್ಯವಾಗಿ ಈ ಬಾಲಕಾರ್ಮಿಕನ್ನು ಕೆಲಸಕ್ಕಾಗಿ ನೇಮಿಸಿಕೊಳ್ಳುವುದು ಬೀಡಿ ತಯಾರಿಕೆಯಲ್ಲಿ, ಅಗರಬತ್ತಿ ತಯಾರಿಕೆಯಲ್ಲಿ, ಗ್ಯಾರೇಜುಗಳಲ್ಲಿ, ಹೋಟೆಲ್ಲುಗಳಲ್ಲಿ, ಕಟ್ಟಡ ಕಾರ್ಮಿಕರಾಗಿ, ಮಿಠಾಯಿ ಅಂಗಡಿ ಮತ್ತು ಬೇಕರಿಗಳಲ್ಲಿ, ಎಮ್ಮೆ ಹಸು ಕಾಯಲು,, ಮನೆಕೆಲಸಕ್ಕಾಗಿ, ರೇಷ್ಮೆ ತಯಾರಿಕೆಯಲ್ಲಿ, ಕರಕುಶಲ ಕೆಲಸಗಳಲ್ಲಿ, ಕೃಷಿ, ಮೀನುಗಾರಿಕೆ, ಮನೆ ಪೈಂಟಿಂಗು, ಸೀಮೆಂಟು ಪ್ಯಾಕ್ಟರಿಗಳಲ್ಲಿ…ಹೀಗೆ ಎಲ್ಲೆಡೆ ಹಾಸುಹೊಕ್ಕಾಗಿರುವ ಈ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಸಾಧುವಾದರೂ ಬಲು ಕಷ್ಟಸಾಧ್ಯವಾದ ಕೆಲಸ. ಹೇಗೋ ದುಡಿದು ಎರಡು ತುತ್ತು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಈ ಮಕ್ಕಳ ಕೆಲಸವನ್ನು "ಬಾಲಕಾರ್ಮಿಕ ನೀನು.. ಕೆಲಸ ಮಾಡಬಾರದು" ಎಂದು ಕಸಿದುಕೊಳ್ಳುವ ಮೊದಲು ಆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಚ್ಯುತಿರಹಿತ ಬದಲೀ ವ್ಯವಸ್ಥೆಯನ್ನು ಮಾಡಿರಬೇಕಾಗುತ್ತದೆ. ಈ ಬಾಲಕಾರ್ಮಿಕರು ಅನಾಥರಾಗಿದ್ರೆ ಅವರನ್ನು ಸೇರಿಸುವ ಕೇಂದ್ರಗಳಲ್ಲಿ ನಡೆಯುತ್ತಿರುವ ಕ್ರೂರ ದುರವಸ್ಥೆಗಳು, ಲೈಂಗಿಕ ಶೋಷಣೆಗಳು ಆ ಮಕ್ಕಳ ಭವಿಷ್ಯವನ್ನು ಅಂಧಕಾರಮಯವಾಗಿಸಿಬಿಡುವುದು. ಆ ಮಕ್ಕಳು ಹೊರಗಿದ್ದಾಗ ಹೋಟೆಲ್ಲಿನಲ್ಲೋ ಎಲ್ಲೋ ಹೇಗೋ ದುಡಿದು ತಿನ್ನುತ್ತಾ ಬಾಳಿನ ಪಾಠವನ್ನು ಚೆನ್ನಾಗಿಯೇ ಕಲಿಯುತ್ತಿದ್ದರೇನೋ ಎನ್ನಿಸಿಬಿಡುತ್ತದೆ ಅಲ್ವೇ.
ಇನ್ನು ಅಪಾಯಕಾರಿ ಕೆಲಸಗಳಾದ ಪಟಾಕಿ ತಯಾರಿಕೆ, ಸಿಮೆಂಟ್ ಪ್ಯಾಕ್ಟರಿಗಳು, ಇಟ್ಟಿಗೆ ತಯಾರಿಕೆ, ಬೀಡಿ ತಯಾರಿಕೆ, ಅಭ್ರಕ ತಯಾರಿಕೆ, ಅಗರಬತ್ತಿ ತಯಾರಿಕೆ, ಇಟ್ಟಿಗೆ ಮತ್ತು ಸುಣ್ಣದ ಗೂಡು..ಈ ಎಲ್ಲಾ ಕೆಲಸಗಳು ಮಕ್ಕಳ ಶ್ವಾಸಕೋಶಗಳ ಆರೋಗ್ಯಕ್ಕೆ ಮಾರಕ. ಹಾಗೆಯೇ ರಾಸಾಯನಿಕಗಳ ತಯಾರಿಕೆಗಳು, ಡೈಯಿಂಗ್, ಚರ್ಮ ಹದಮಾಡುವ ಸ್ಥಳಗಳು, ಫ್ಯಾಬ್ರಿಕೇಷನ್ಸ್, ಮೆಲ್ಟಿಂಗ್ ಮತ್ತು ಪ್ಲೇಟಿಂಗ್, ವೆಲ್ಡಿಂಗ್..ಇವೆಲ್ಲಾ ಕೆಲಸಗಳು ಪುಟ್ಟ ಮಕ್ಕಳ ಚರ್ಮ ಮತ್ತು ಕಣ್ಣುಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ಎಲ್ಲಾ ಕೆಲಸಗಳಿಂದ ಮಕ್ಕಳನ್ನು ಶಾಶ್ವತವಾಗಿ ಹೊರಗಿಡುವ ಕೆಲಸ ಸರ್ಕಾರ ಜರೂರಾಗಿ ಮಾಡಬೇಕಿದೆ. ಪ್ರತಿ ಬಡ ಮಗುವಿನ ಜೀವನ ನಿರ್ವಹಣೆಗೆ ಸರ್ಕಾರ ಕಟಿಬದ್ಧವಾಗಿ ನಿಂತು ವಿಧವಿಧವಾದ ತರ್ಕಬದ್ಧ (Workable solutions) ದೂರದೃಷ್ಟಿಯುಳ್ಳ ಉಪಯೋಗಕಾರಿ ಕಾರ್ಯಕ್ರಮಗಳನ್ನು ರೂಪಿಸಬೇಕು.
ಹಾಗೆಯೇ ಬಾಲಕಾರ್ಮಿಕ ಪದ್ಧತಿಯ ಬಹು ಆಯಾಮಗಳಲ್ಲಿ ಎಲ್ಲರೂ ಒಪ್ಪದ ಹೀಗೂ ಒಂದು ಆಯಾಮವಿದೆ. ಶಾಲೆಗೆ ಸೇರದ ಯಾವುದೇ ಮಗುವನ್ನು ಬಾಲಕಾರ್ಮಿಕ ಎಂದೂ ಪರಿಗಣಿಸಬಹುದು. ಆದರೆ ಶಾಲೆಗೆ ಹೋಗುತ್ತಿರುವ ನೂರಾರು ಮಕ್ಕಳ ಶೋಷಣೆಗಳು ಕಣ್ಮುಂದೆಯೇ ರಾಜಾರೋಷವಾಗಿಯೇ ನಡೆಯುತ್ತಿದ್ದರೂ ನಾವು ನೋಡಿಯೂ ನೋಡದಂತೆ ಇರುವುದೂ ಒಂದು ವಿಕೃತಿಯೇ ಅಲ್ವೇ. ಹೊಟ್ಟೆ ತುಂಬಿದ ಎಷ್ಟೋ ಪೋಷಕರು ತಾವೆಂದೋ ಪೂರೈಸಿಕೊಳ್ಳದಿದ್ದ ತಮ್ಮ ಕನಸುಗಳನ್ನು ತಮ್ಮ ಮಗುವಿನ ಎಳೇ ಭುಜದ ಮೇಲೆ ಹೇರಿ, ಅದರ ಬಾಲ್ಯಸಹಜ ಆಟೋಟಗಳಿಗೂ ಅವಕಾಶ ನೀಡದಂತೆ ಒಂದು ಗಾಣದೆತ್ತೇನೋ ಎಂಬಂತೆ, ಜೀತದಲ್ಲಿರುವ ಬಾಲಕಾರ್ಮಿಕರಂತೆ 24/7 ಪಾಠ, ಐಐಟಿ ಕನಸುಗಳ ಹೇರುವಿಕೆ, ಇಂಜಿನಿಯರ್ ಅಥವಾ ಡಾಕ್ಟರಾಗೆಂಬ ಅತೀ ಬೋಧನೆ, ಸಂಗೀತ, ನೃತ್ಯ, ಚಿತ್ರಕಲೆ ಎಂದು ಮಗುವನ್ನು ಬೀದಿಬೀದಿ ಸುತ್ತಿಸುವುದೂ ಒಂದು ರೀತಿಯ ಶೋಷಣೆಯೇ ಅಲ್ವೇ. ಮಕ್ಕಳಿದಕ್ಕೆ ಒಪ್ಪದಿದ್ದರೆ ಇಮೋಷನಲ್ ಅತ್ಯಾಚಾರ ನಡೆಯುತ್ತದೆ ಈ ಮಕ್ಕಳ ಮೇಲೆ..ಪಾಪ..!! ನನ್ನ ಬಳಿ ಇದನ್ನೆಲ್ಲಾ ಹೇಳಿಕೊಂಡು ಅತ್ತ ನನ್ನ ಸ್ನೇಹಿತೆಯ ಮಗಳ ಅಸಹಾಯಕತೆಯ ಹತಾಶೆಯನ್ನು ನೋಡಿಯೂ ತಿಳಿದೂ ಸ್ನೇಹಿತೆಯನ್ನು ಬಿಟ್ಟುಕೊಡಲಾಗದೇ ಎರಡು ಬಾಯಿಮಾತಿನ ಸಾಂತ್ವನ ಹೇಳಿದ ನನ್ನದು ಒಂದು ತರಹದ ಅಸಹಾಯಕತೆಯೇ.. ಈ ರೀತಿಯ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ ಸಾಧ್ಯವೇ…?!.ಮಕ್ಕಳ ಲಾಲನೆ ಪಾಲನೆಯ ವಿಷಯದಲ್ಲಿ ಪೋಷಕರು ಯಾರ ಮಾತುಗಳನ್ನೂ ಕೇಳಿಸಿಕೊಳ್ಳಲಾರದ ಸಮೂಹಸನ್ನಿಗೆ ಒಳಗಾಗಿರುತ್ತಾರೆ. ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರದೇ ಮಕ್ಕಳನ್ನು ಸ್ನೇಹಿತರಂತೆ ಕಾಣುವ ಪರಿಪಾಠ ನಮ್ಮ ಭಾರತೀಯ ಪೋಷಕರಿಗೆ ಬರಬೇಕೆಂದರೆ ಇನ್ನೂ ಹತ್ತು ಹಲವು (ಆತ್ಮಹತ್ಯೆಗಳ, ಮನೆಬಿಟ್ಟು ಹೋಗುವ) ಜ್ಞಾನೋದಯಗಳು ಬೇಕೇನೋ. ಇನ್ನು ಸಿನೇಮಾ ಮತ್ತು ನಾಟಕಗಳಲ್ಲಿ ನಟಿಸುತ್ತಿರುವ ಬಾಲನಟನಟಿಯರನ್ನೂ ಬಾಲಕಾರ್ಮಿಕರೆಂದೇ ಕರೆಯಬೇಕಾಗುತ್ತದೆ. ತಮ್ಮ ಅಮೂಲ್ಯ ಬಾಲ್ಯವನ್ನು ಆಟವಾಡದೇ ಓದಲು ಸಮಯ ಸಿಗದೇ ಕಳೆಯುತ್ತಾ ತಮ್ಮ ಎಳೇ ಚರ್ಮಗಳಿಗೆ ಮೇಕಪ್ಪಿನ ಲಪ್ಪ ಬಳಿದು ಎಳೇ ತುಟಿಗಳಿಗೆ ಲಿಪ್ ಸ್ಟಿಕ್ಕನ್ನು ಸವರಿ ಬಾರದ ಅಳುನಗು ಬರಿಸಿಕೊಳ್ಳುವ ಈ ಬಾಲಕಲಾವಿದರೂ ಶೋಷಿತರೇ ತಾನೇ. ಇನ್ನೂ ದುರಂತವೆಂದರೆ ಈ ವಿಕೃತಿಯ ಹಿಂದೆ ಆ ಮಗುವನ್ನು ಹೆತ್ತ ತಂದೆತಾಯಿಯರ ಒತ್ತಾಸೆಯೇ ಇರುವುದು. ಸರ್ಕಸ್ಸನ್ನು ಬ್ಯಾನ್ ಮಾಡಿದಂತೆ ದೃಶ್ಯಮಾಧ್ಯಮದಲ್ಲೂ ಬಾಲಕಲಾವಿದರನ್ನು ಮಾಡಲಾಗುತ್ತದೆಯೇ. ಇದು ಸಾಧುವೇ ಎಂದು ನಮ್ಮನ್ನೇ ನಾವು ಕೇಳಿಕೊಂಡರೆ ಖಂಡಿತಾ ಉತ್ತರ ದೊರಕದು. ಬಹುಶಃ ನಾವು ಆಗ ದೃಶ್ಯಮಾಧ್ಯಮವನ್ನೇ ನಿಷೇದಿಸಬೇಕಾಗಬಹುದೇನೋ. ಅದಾಗದ ಕೆಲಸವಾದ್ದರಿಂದ ಪೋಷಕರ ಈ ತಮ್ಮ ಮಕ್ಕಳಿಂದ ತಾವು ಜನಪ್ರಿಯರಾಗುವ ಕ್ರೌರ್ಯವನ್ನು ವಿಕೃತಿಯನ್ನು ಬಿಟ್ಟು ಆ ಮಕ್ಕಳಿಗೆ ಆಟ ಪಾಠಗಳಲ್ಲಿ ನಕ್ಕು ನಲಿಯುವ ಸುಂದರ ಸಾಮಾನ್ಯ ಬಾಲ್ಯವನ್ನು ಕೊಡಬೇಕಿದೆ.
ಇನ್ನು ವಿಧಿಯ ಹೊಡೆತಕ್ಕೆ ಸಿಲುಕಿದ ಬಾಲ್ಯ ವೇಶ್ಯೆಯರು…! ಇದಂತೂ ಅತ್ಯಂತ ಹೀನಾಯ ಬಾಲಕಾರ್ಮಿಕ ಪದ್ಧತಿಯೆಂದೇ ಪರಿಗಣಿಸಲಾಗಿದೆ. ತಂದೆ ತಾಯಿಯರೇ ಮಾರಿಬಿಟ್ಟರೋ, .ವಿಧಿಯ ಕೈಗೊಂಬೆಗಳಾದರೋ, ಯಾರನ್ನೋ ನಂಬಿ ಮೋಸ ಹೋದರೋ..ಒಟ್ಟಿನಲ್ಲಿ ಈ ಬಾಲವೇಶ್ಯೆಯರು ಅನುಭವಿಸುವ ನರಕ ಮನಸ್ಸನ್ನು ತೀವ್ರವಾಗಿ ತಟ್ಟುತ್ತಾ ತಳಮಳಗೊಳಿಸುತ್ತದೆ. ಕಾನೂನಿನಿಂದ ನುಣುಚಿಕೊಂಡು ಜಗತ್ತಿನಾದ್ಯಂತ ನಡೆಯುತ್ತಿರುವ ಈ ಅನಿಷ್ಟ ಇಡೀ ಪ್ರಪಂಚವನ್ನೇ ತಳಮಳಗೊಳಿಸಿದೆ. ಶತಮಾನಗಳಿಂದ ಅನೂಚಾನವಾಗಿ ದೊಡ್ಡವರ ವಿಕೃತ ಲೈಂಗಿಕ ತೆವಲಿಗೆ ತುತ್ತಾಗಿ ಚಿತ್ರಹಿಂಸೆ ಅನುಭವಿಸುತ್ತಿರುವ ಈ ಮಕ್ಕಳ ಶೋಷಣೆಯನ್ನು ಅಂತ್ಯಗೊಳಿಸುವುದು ಖಂಡಿತಾ ಸಾಧು. ಇದು ಸಾಧ್ಯವಾಗಬೇಕಾದರೆ ಇಡೀ ಪ್ರಪಂಚವೇ ಸಮಷ್ಟಿಯಾಗಿ ಎದ್ದು ನಿಂತು ಹೋರಾಡಬೇಕಿದೆ.
ಅರಳುವ ಆಸೆಯಲ್ಲಿರುವ ಮೊಗ್ಗಿಗೆ ಅರಳಿಸಬೇಕಾದ ಆ ರವಿಯೇ ಬಿಸಿಲು ರಾಚಿ ಕೆಂಡದ ಮಳೆ ಸುರಿಸಿ ಮುರುಟಿಸಿದರೆ ಅದು ಅರಳುವುದಾದರೂ ಹೇಗೆ..? ಸುವಾಸನೆ ಬೀರುವುದಾದರೂ ಹೇಗೆ..? ಹೆತ್ತ ತಂದೆತಾಯಂದಿರೇ ತಮ್ಮ ಮಕ್ಕಳ ಬಾಲ್ಯವನ್ನೂ ಶಿಕ್ಷಣವನ್ನೂ ಕಸಿದುಕೊಂಡು ಅವರಿಂದ ದುಡಿಸಿಕೊಂಡು ಹೊಟ್ಟೆ ಹೊರೆಯುತ್ತಿರುವುದಕ್ಕೆ ಅವರ ಬಡತನವೇ ಮುಖ್ಯ ಕಾರಣವಾಗುತ್ತದೆ. ಇನ್ನು ಅಜ್ಞಾನ, ಅನಕ್ಷರತೆಯೂ ಮುಖ್ಯ ಕಾರಣ. ಇನ್ನು ಈ ಸಮಸ್ಯೆಯೆಡೆ ಸಾಮಾಜಿಕ ನಿರಾಸಕ್ತಿಯೂ ತನ್ನ ಕೊಡುಗೆಯನ್ನಿತ್ತಿದೆ. ಇನ್ನು ಕೌಟುಂಬಿಕ ವ್ಯವಹಾರವನ್ನು ಮುಂದುವರಿಯುವಿಕೆ, ಪೋಷಕರು ಮಾಡುತ್ತಿರುವ ಕರಕುಶಲ ಕಾರ್ಯಗಳಿಗೆ ಮನೆಯ ಮಕ್ಕಳನ್ನೇ ಹಣ ಉಳಿಸಲು ಸೇರಿಸಿಕೊಳ್ಳವುದು, ಇನ್ನು ಈ ಬಾಲಕಾರ್ಮಿಕ ಪದ್ಧತಿಯನ್ನು ಅನಿವಾರ್ಯ ಎಂದು ಈ ಸಮಾಜ ಜಾಣಕುರುಡಾಗಿರವುದೂ ಒಂದು ವಿಪರ್ಯಾಸವೇ ಸರಿ. ಆದರೆ ಈ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನ ಮಾಡಬೇಕಾದ್ದು ನಮ್ಮ ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಧುವೂ ಹೌದು. ಹಾಗೇ ಸಾಧ್ಯವೂ ಸಹ. ಈ ಬಾಲಕಾರ್ಮಿಕರನ್ನು ನಮ್ಮ ಭಾರತದ ದೊಡ್ಡ ಮಾನವ ಸಂಪನ್ಮೂಲವಾಗಬೇಕಾದ್ದು ನಮ್ಮ ಸರ್ಕಾರದ ತಕ್ಷಣದ ಜರೂರತ್ತು. ಆದ್ದರಿಂದ ಕೇವಲ ಒಬ್ಬಿಬ್ಬರಿಂದ ಎಳೆಯಲಾಗದ ಈ ಬಾಲ ಕಾರ್ಮಿಕ ವಿರೋಧಿ ರಥವನ್ನು ಮುನ್ನಡೆಸಲು ಇಡೀ ಸಮಾಜವೇ ಸಮಷ್ಟಿಯಾಗಿ, ಜಾಗೃತಿಯಾಗಿ ಮತ್ತು ಒಗ್ಗಟ್ಟಿನಿಂದ ಮುಂದವರೆಯಬೇಕಿದೆ. ಇಡೀ ಸಮಾಜದ ವಿಧವಿಧ ಸ್ತರಗಳಲ್ಲಿರುವ ದೇಶದ ನಾಗರಿಕರು, ಸರ್ಕಾರ ನೇಮಿಸಲ್ಪಟ್ಟ ಅಧಿಕಾರಿಗಳು, ವೈದ್ಯರು, ಆರಕ್ಷಕರು, ಎನ್ ಜಿ ಓ ಗಳು, ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು.. ಹೀಗೇ ಪ್ರತಿಯೊಬ್ಬರು ಸರ್ಕಾರದ ಸಾರಥ್ಯದಲ್ಲಿ ಈ ರಥವನ್ನು ಎಳೆದರೆ ಬಾಲಕಾರ್ಮಿಕ ಪದ್ಧತಿಯನ್ನು ಸಮರ್ಥವಾಗಿ ನಿರ್ಮೂಲನೆ ಮಾಡುವ ದಿಕ್ಕಿನೆಡೆ ಒಂದು ದಿಟ್ಟಹೆಜ್ಜೆಯಿಟ್ಟಂತಾದೀತು.
******
ಉತ್ತಮ ಲೇಖನ ರಜನಿ.ಬಾಲ ಕಾರ್ಮಿಕರನ್ನೇ ಮುಖ್ಯವಾಗಿ ಟಾರ್ಗೆಟ್ ಮಾದುವ ಕೆಲವು ಉದ್ಯಮಗಳು ಇದನ್ನು ಮನಗಾಣಬೇಕು. ಬದಲಾವಣೆಗಳು ಸಾಧ್ಯ. ಪ್ರಾಮಾಣಿಕ ಪ್ರಯತ್ನ ಇರಬೇಕು ಅಷ್ಟೇ.
ಹಳ್ಳಿಗಳ ದೇಶವಾದ ಭಾರತದಲ್ಲಿ ಬಾಲಕಾರ್ಮಿಕರ ವಿಷಯದ ಬಗ್ಗೆ ಬರೆಯಲು ಸಾಕಷ್ಟು ಮಾಹಿತಿ ಸುಲಭವಾಗಿ ದೊರೆಯುತ್ತದೆ.ಇದೊಂದು ಸಂಕೀರ್ಣವಾದ ವಿಷಯ.ಇದಕ್ಕೆ ಶಾಶ್ವತವಾಗಿ ಪರಿಹಾರಗಳು ಸಿಗುವುದು ಕಷ್ಟ ಸಾಧ್ಯ.ಸಾಮಾಜಿಕ ಕಳಿಕಳಿಯಿಂದ ರಚಿತವಾದ ಇಂತಹ ಬರಹಗಳಿಂದ ಜನಮನದಲ್ಲಿ ಸಣ್ಣಪ್ರಮಾಣದಲ್ಲಿ ಜಾಗೃತಿ ಉಂಟಾದರೂ ಸಾಕು ಬಾಲಕಾರ್ಮಿಕರ ಶೋಷಣೆ ಕಡಿಮೆ ಯಾಗುವ ಸಾಧ್ಯತೆಯಿದೆ.
nice 🙂