[ನವಂಬರ್ ೧೪ ಮಕ್ಕಳ ದಿನಾಚರಣೆ. ಸ್ವತಂತ್ರ ಲಭಿಸಿ ೬೬ ವರ್ಷಗಳು ಸಂದರೂ ಭಾರತದಲ್ಲಿ ಹಾಗೂ ವಿಶ್ವದಲ್ಲಿ ಅವಧಿಪೂರ್ವ ವಿವಾಹಗಳು ನಡೆಯುತ್ತವೆ. ಮಕ್ಕಳನ್ನು ಮಧುಮಕ್ಕಳನ್ನಾಗಿ ಮಾಡಿ ಅವರ ಜೀವನವನ್ನು ದುರ್ಭರ ಮಾಡುವ ಪದ್ಧತಿಯಿದೆ. ಸರ್ವರಿಗೂ ಸಮಾನ ಶಿಕ್ಷಣ ಲಭಿಸಿದಾಗ ಈ ಅನಿಷ್ಟ ಪದ್ಧತಿ ನಿಲ್ಲಬಹುದು ಎಂಬ ಆಶಾಭಾವನೆಯೊಂದಿಗೆ ಮಕ್ಕಳ ದಿನಾಚರಣೆ ನಿಮಿತ್ತ ಈ ಲೇಖನ]
ಬಾಲ್ಯ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಸುಂದರವಾದ, ಮಧುರವಾದ ಕ್ಷಣಗಳು. ಬಾಲ್ಯವೆಂಬುದು ಪ್ರಕೃತಿಯ ಪ್ರತಿಯೊಂದನ್ನು ಅಚ್ಚರಿಯಿಂದ ಗಮನಿಸುವ ಹಂತ, ಪ್ರತಿಯೊಂದರಲ್ಲೂ ಕುತೂಹಲವನ್ನು ಕಾಣುವ, ಕಲಿಯುವ ಜೊತೆಯಲ್ಲಿ ಎಣೆಯಿಲ್ಲದಷ್ಟು ನಲಿಯುವ ಸಂತೋಷಭರಿತ ಹಂತ. ಬಾಲ್ಯ ಪ್ರತಿಯೊಬ್ಬರ ಜೀವನದ ಅತಿಮುಖ್ಯವಾದ ಘಟ್ಟ. ಇಲ್ಲಿ ಯಾವುದೇ ಜಂಜಾಟವಿಲ್ಲ, ಜೀವನದ ಅತಿಮುಖ್ಯ ಜವಾಬ್ದಾರಿಗಳಿಲ್ಲ, ಚಿಕ್ಕ-ಪುಟ್ಟ ಘಟನೆಗಳಿಗೂ ಎಣೆಯಿಲ್ಲದ ಸಂತೋಷವನ್ನು ಪಟ್ಟು ಸಂಭ್ರಮವನ್ನು ಹಂಚಿಕೊಂಡು ಖುಷಿಯಾಗಿರಬಹುದಾದ ದಿನಗಳು. ಆಕಾಶಕ್ಕೆ ನೆಗೆದು ನಕ್ಷತ್ರಗಳನ್ನು ಹಿಡಿದು ತರುವಂತಹ ಉತ್ಸಾಹ-ಹುಮ್ಮಸ್ಸು ಬಾಲ್ಯದ ಜೀವನಕ್ಕಿರುತ್ತದೆ. ದಿನವಿಡೀ ಕುಣಿದರೂ ಬತ್ತದ ಉತ್ಸಾಹ ಮತ್ತು ಶಕ್ತಿ ಬಾಲ್ಯಕ್ಕಿದೆ. ಬಾಲ್ಯದ ನೆನಪುಗಳೆಂದರೆ ಮನುಷ್ಯನ ಮುಂದಿನ ಜೀವನದಲ್ಲಿ ಪದೇ ಪದೇ ನೆನಪಿಗೆ ಬಂದು ಪುಳಕಗೊಳ್ಳುವ, ಆ ಮೂಲಕ ವರ್ತಮಾನದ ಕಷ್ಟಕೋಟಲೆಗಳನ್ನು ಮರೆತು ಸಂಕಷ್ಟಗಳನ್ನು ಜಯಿಸಿ ಮತ್ತೆ ಹೋರಾಟಕ್ಕೆ ಸಜ್ಜಾಗುವ ಟಾನಿಕ್ ಇದ್ದಂತೆ. ಇಂತಹ ಸುಂದರವಾದ ಬಾಲ್ಯಕ್ಕೆ ವಿವಾಹವೆಂಬ ಬಂಧನವನ್ನು ತೊಡಿಸಿದರೆ? ಆಡಿಕೊಂಡಿರಬೇಕಾದ ವಯಸ್ಸಿನ ಮಗುವಿಗೆ ಸಂಸಾರದಂತಹ ಮಹತ್ವದ ಜವಾಬ್ದಾರಿಯನ್ನು ಹಚ್ಚಿದರೆ? ಮಗುವಿನ ಗತಿ ಏನಾದೀತು?. ನಾಗರೀಕ ಸಮಾಜದಲ್ಲಿ ವಿವಾಹವೆಂಬುದು ಒಂದು ಸಾಮಾಜಿಕ ಜವಾಬ್ದಾರಿ, ಮನುಷ್ಯನಿಗೆ ತನ್ನ ಸಂತತಿಯನ್ನು ಬೆಳೆಸಿ ಉಳಿಸಿಕೊಂಡು ಹೋಗಲು ಸಮಾಜ ಕಲ್ಪಿಸಿದ ಸುಂದರ ವ್ಯವಸ್ಥೆ. ವಿವಾಹಕ್ಕೆ ಹಲವು ಸಾಮಾಜಿಕ ಕಟ್ಟು-ಪಾಡುಗಳಿವೆ. ಪತಿ-ಪತ್ನಿಯರು ತಮ್ಮ-ತಮ್ಮ ಜವಾಬ್ದಾರಿಯನ್ನು ಅರಿತು ನಡೆದಲ್ಲಿ ಸಂಸಾರ ಸುಖಮಯವಾದೀತು. ಏನೂ ಅರಿಯದ ಮುಗ್ದ ಹಸುಳೆಗೆ ದಾಂಪತ್ಯವನ್ನು ಧಾರೆಯೆರೆದಾಗ ಇದೊಂದು ಪವಿತ್ರ ಬಂಧನವೆನಿಸಿಕೊಳ್ಳುವುದಿಲ್ಲ. ಬದಲಿಗೆ ಸಾಮಾಜಿಕ ಪಿಡುಗು ಎಂದೆನೆಸಿಕೊಳ್ಳುತ್ತದೆ.
ಇತಿಹಾಸವನ್ನು ತಿರುವಿ ಹಾಕಿದಾಗ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಅನೇಕ ಘೋರ ದುರಂತ ಪುಟಗಳು ಕಾಣಸಿಗುತ್ತವೆ. ಇದೀಗ ಬರೀ ೫೦-೬೦ ವರ್ಷಗಳ ಹಿಂದೆ ಹೆಣ್ಣು ಎಂಬುದು ಕುಟುಂಬಕ್ಕೆ ಹೊರೆ ಎನ್ನುವಂತಹ ಸ್ಥಿತಿಯಿತ್ತು. ಆ ಹೊರೆಯನ್ನು ಆದಷ್ಟು ಬೇಗ ಕಳಚಿಕೊಳ್ಳವುದು ಹೇಗೆ ಎಂಬ ಯೋಚನೆಯಲ್ಲಿ ಹೆತ್ತವರು ಹಣ್ಣಾಗುತ್ತಿದ್ದರು. ಆಗೆಲ್ಲಾ ವೈದ್ಯಲೋಕವು ಇಷ್ಟು ಬೆಳೆದಿರಲಿಲ್ಲವಾದ್ದರಿಂದ ಸಾವಿನ ಪ್ರಮಾಣ ಹೆಚ್ಚು ಇರುತ್ತಿತ್ತು. ಕಾಲರಾ – ಪ್ಲೇಗ್‌ಗಳು ತಾಂಡವವಾಡುತ್ತಿದ್ದ ಆ ಕಾಲದಲ್ಲಿ, ಪತ್ನಿ ಏನಾದರೂ ಮರಣ ಹೊಂದಿದರೆ, ಪತಿಗೆ ಪುನರ್‌ವಿವಾಹ ಭಾಗ್ಯವಿರುತ್ತಿತ್ತು. ೫೦-೬೦ ವಯಸ್ಸಿನ ವಿಧುರರು, ೯-೧೦ ವಯಸ್ಸಿನ ಕನ್ಯೆಯನ್ನು ಮದುವೆಯಾಗುತ್ತಿದ್ದರು. ಪ್ರಪಂಚದ ಜ್ಞಾನವೇ ಇರದ ಆ ಬಾಲಕಿ ಸಂಸಾರವೆಂಬ ನೌಕೆಯನ್ನು ನಿಭಾಯಿಸಬೇಕಾಗುತಿತ್ತು. ತನ್ನ ಗಂಡನ ಹಿರಿ ಹೆಂಡತಿಯ ಮಕ್ಕಳು ಈ ಚಿಕ್ಕಮ್ಮನಿಗಿಂತ ಹೆಚ್ಚು ವಯಸ್ಸಿನವರಾಗಿರುತ್ತಿದ್ದರು. ದುರದೃಷ್ಟವಾಶಾತ್ ಅದೇ ಮುದಿಗಂಡ ತೀರಿಕೊಂಡರೆ, ಈ ಕನ್ಯೆಗೆ ಮೊದಲು ವೈಧವ್ಯ ಪ್ರಾಪ್ತಿಯಾಗಿ ಆಮೇಲೆ ಯೌವನ ದಿನಗಳು ಬರುತ್ತಿದ್ದವು. ಮುಂದುವೆರೆದ ಜನಾಂಗದಲ್ಲಿ ಇನ್ನೊಂದು ಅಮಾನುಷ ಪದ್ಧತಿಯಿತ್ತು. ಬಾಲ ವಿಧವೆಯರನ್ನು ಸಕೇಶಿಯರನ್ನಾಗಿ ಇಡುತ್ತಿರಲಿಲ್ಲ. ಅವರ ತಾಳಿ ಕಿತ್ತು, ಬಳೆಯೊಡೆದು, ತಲೆ ಬೋಳಿಸಿ ವಿಕಾರ ಸ್ವರೂಪ ಮಾಡಿ, ಮಡಿ ಮಾಡಿಡುತ್ತಿದ್ದರು. ಈ ತರಹದ ಬಾಲ ವಿಧವೆಯರು ಬಾಳಪೂರ್ತಿ ಸಮಾಜ ದೃಷ್ಟಿಯಿಂದ ಕಡೆಗಣಿಸಲ್ಪಟ್ಟು ಬದುಕುತ್ತಿದ್ದರು. ಅವರನ್ನೊಂದು ವಸ್ತುವಿನಂತೆ ಪರಿಗಣಿಸುತ್ತಿದ್ದರು. ಎಷ್ಟೋ ಮನೆಗಳಲ್ಲಿ ಬೀದಿ ನಾಯಿಗಿರುವ ಸ್ಥಾನವು ಇವರಿಗೆ ಇರುತ್ತಿರಲಿಲ್ಲ. ಇವರು ಎದುರಿಗೆ ಬಂದರೆ ಅಮಂಗಳ ಎಂದು ಭಾವಿಸಲಾಗುತ್ತಿತ್ತು. ಇಂತಹ ಅದೆಷ್ಟೋ ನತದೃಷ್ಟ ಅಮ್ಮಂದಿರು ಇವತ್ತು ಅಳಿದುಹೋಗಿದ್ದಾರೆ. ಒಬ್ಬೊಬ್ಬರ ಕತೆಯೂ ಘೋರ ದುರಂತವೇ. ಪ್ರಪಂಚದ ಯಾವುದೇ ದುರಂತ ಕಾವ್ಯಕ್ಕಿಂತ ಇವರ ಬದುಕು ದುರಂತಮಯವಾಗಿತ್ತು ಎಂದು ಇವತ್ತು ನೆನಪು ಮಾಡಿಕೊಂಡರೆ ಬಾಲ್ಯ ವಿವಾಹ ಪದ ಕೇಳಿದರೆ ರೇಜಿಗೆಯಾಗುತ್ತದೆ. ಮೈಮೇಲೆ ಮುಳ್ಳುಗಳೇಳುತ್ತವೆ.
ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ನಿತ್ಯ ಸುಮಾರು ೩೯೦೦೦ ಸಾವಿರ ಬಾಲ್ಯವಿವಾಹಗಳು ನೇರವೇರುತ್ತವೆ. ಬಾಲ್ಯ ವಿವಾಹವನ್ನು ಸರ್ಕಾರಗಳು ಕಾನೂನುಬದ್ಧವಾಗಿ ನಿಷೇಧಿಸಿದ್ದರೂ ಈ ಮಟ್ಟದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಲೇ ಇರುತ್ತವೆ. ಕೆಲಬಾರಿಯಂತೂ ಮಂತ್ರಿ-ಮಹೋದಯರ ಸಮ್ಮುಖದಲ್ಲೇ ಬಾಲ್ಯ ವಿವಾಹ ನೇರವೇರಿದ್ದನ್ನು ಪತ್ರಿಕೆಗಳು ವರದಿ ಮಾಡಿದ್ದನ್ನು ನಾವು ನೋಡಿದ್ದೇವೆ. ದೈಹಿಕವಾಗಿ ಸಂಪೂರ್ಣವಾಗಿ ಬೆಳೆಯದೇ ಇದ್ದಾಗ ತಾಯ್ತನ ಹೊಂದುವುದು ಅಪಾಯಕಾರಿ. ಹೆಚ್ಚಿನ ಬಾಲ್ಯ ವಿವಾಹದ ವಧುಗಳು ಹೆರಿಗೆ ಸಮಯದಲ್ಲಿ ಮೃತ್ಯು ಹೊಂದುತ್ತಾರೆ. ಕೆಲವರೂ ಬದುಕಿದರೂ ಅವರಿಗೆ ಹುಟ್ಟುವ ಮಕ್ಕಳು ಸಾಯುತ್ತವೆ ಅಥವಾ ಅಂತಹ ಮಕ್ಕಳು ಬದುಕಿದರೂ ದೈಹಿಕವಾಗಿ ಅಶಕ್ತರಾಗಿರುತ್ತಾರೆ. ಇದಲ್ಲದೆ ಅಪ್ಪನ ವಯಸ್ಸಿನ ಗಂಡ ಅಥವಾ ಅಜ್ಜಿಯ ವಯಸ್ಸಿನ ಅತ್ತೆಯರು ನವವಧುವಿನ ಮೇಲೆ ದೌರ್ಜನ್ಯವೆಸಗುತ್ತಾರೆ. ಹೊಡೆಯುವುದು, ಬಡಿಯುವುದು, ಹಂಗಿಸುವುದು, ಬರೆ ಹಾಕುವುದು, ಅಥವಾ ಹುಟ್ಟಿದ ಹೆಣ್ಣು ಮಗುವನ್ನು ಬಲವಂತವಾಗಿ ಸಾಯಿಸಲು ಹೇಳುವುದು ಇತ್ಯಾದಿ ದೌರ್ಜನ್ಯಗಳ ಪಟ್ಟಿಯಲ್ಲಿ ಬರುತ್ತವೆ. ಭಾರತದಲ್ಲಿ ಹೆಚ್ಚಾಗಿ ಆಂಧ್ರಪ್ರದೇಶ, ಮಧ್ಯಪ್ರದೇಶ, ಬಿಹಾರ, ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿ ಹೆಚ್ಚಿನ ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿದೆ ಎಂಬುದಾಗಿ ವರದಿಯಾಗಿದೆ.
ತಮಿಳುನಾಡಿನಲ್ಲಿ ೨೦೦೮ರಲ್ಲಿ ನಡೆದ ಘಟನೆಗಳನ್ನು ಪ್ರಸ್ತಾಪಿಸುವುದು ಸೂಕ್ತವೆನಿಸುತ್ತದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ೫ ಗ್ರಾಮಪಂಚಾಯ್ತಿವ್ಯಾಪ್ತಿಯಲ್ಲಿ (ಕೊಟೈಯೂರು, ಊರಿಗಾಂ, ಧಾಟ್‌ಗಟ್ಟಿ, ಅಂಚಟ್ಟಿ ಮತ್ತು ನಟ್ರಂಪಾಳ್ಯಂ) ೧೪ ವರ್ಷದ ಕೆಳಗಿನ ೪೫ ಹೆಣ್ಣು ಮಕ್ಕಳು ಶಾಲೆಗೆ ಬರುವುದನ್ನು ಬಿಟ್ಟರು. ಕೃಷ್ಣಗಿರಿ ಜಿಲ್ಲೆಯ ಯೂನಿಸೆಫ್‌ನ ಅಧಿಕಾರಿ ಗಣೇಶ್‌ಮೂರ್ತಿಯ ಪ್ರಕಾರ ಅವರನ್ನು ಅದಾಗಲೇ ಮದುವೆ ಮಾಡಲಾಗಿತ್ತು. ಯಾರೂ ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿರಲಿಲ್ಲ. ಅದರಲ್ಲಿ ದೀಪಾ ಎಂಬ ಹುಡುಗಿಯ ಗಂಡ ಮದುವೆಯಾದ ಹದಿನೈದೇ ದಿನದಲ್ಲಿ ತೀರಿಕೊಂಡಿದ್ದ, ವಾಸುಕಿ ಎಂಬ ಹುಡುಗಿಯನ್ನು ಎಂಟೇ ತಿಂಗಳಲ್ಲಿ ಹೊಡೆದು ತವರಿಗೆ ಅಟ್ಟಲಾಗಿತ್ತು. ಲಕ್ಷ್ಮೀ ದೇವಿಯೆಂಬ ಹುಡುಗಿಯ ಮಾವನೇ ಬಲವಂತವಾಗಿ ಅವಳನ್ನು ಮದುವೆ ಮಾಡಿಕೊಂಡಿದ್ದ, ಮದುವೆಗೆ ಒಪ್ಪದಿದ್ದಲ್ಲಿ ಮಾನಭಂಗ ಮಾಡುವುದಾಗಿ ಹೆದರಿಸಿದ್ದ. ಈ ಬಗ್ಗೆ ಅಲ್ಲಿನ ಎಸ್.ಪಿ. ಶ್ರೀ ತೆನ್‌ಮೋಳಿಯವರನ್ನು ವಿಚಾರಿಸಿದಾಗ ೨೦೦೬ ರಿಂದ ೨೦೦೯ರವರೆಗೆ ಒಟ್ಟು ೧೦ ಬಾಲ್ಯ ವಿವಾಹ ವಿರುದ್ದ ಮೊಕದ್ದಮೆ ದಾಖಲಾಗಿದೆ ಎಂದು ತಿಳಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿತ್ತು.
ಬಾಲ್ಯ ವಿವಾಹಕ್ಕೊಂದು ಇತಿಶ್ರೀ ಹಾಡಬೇಕೆಂದರೆ ಬರೀ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದೊಂದೆ ದಾರಿ. ಜೊತೆಗೆ ಜನಜಾಗೃತಿಯೂ ಆಗಬೇಕು. ಜನನಿ-ಮಾತೆ ಎಂದು ಪತ್ರಿಕೆಗಳಲ್ಲಿ ಪುಸ್ತಕದಲ್ಲಿ ಮಾತ್ರ ಕೊಂಡಾಡಲಾಗುವ ಹೆಣ್ಣನ್ನು ಒಂದು ಭೋಗದ ವಸ್ತುವೆಂದು ಪರಿಗಣಿಸುವ ಸಮಾಜ ನಮಗೆ ಬೇಡ. ಬಾಲ್ಯ ವಿವಾಹಕ್ಕೆ ಧಿಕ್ಕಾರವಿರಲಿ. ಜಗತ್ತಿನಿಂದ ಬಾಲ್ಯ ವಿವಾಹ ಪದ್ಧತಿ ತೊಲಗಲಿ.
nice article
nice 🙂
Lekhanadalli tamma Samajik kalakaliya bhavane nodi khushi aytu…
Nivu heluva hage adu kanuninda sadhyavilla..
e abhiyanada shuvatu hennu makkala tande tayandirindane shuru aagbeku..
tamma karula kudigalanna balikodade, aksharabhyasa, matta dnyanada belakininda singarisi sundaravannagisabeku…. chandad lekhana, bhala ishta aaytru..
ಪ್ರತಿಕ್ರಯಿಸಿದ ಸಹೃಯದರಿಗೆ ಧನ್ಯವಾದಗಳು