ನಿಮಗೆ ಬಾಲ್ಯದಲ್ಲಿ ತುಂಬಾ ಇಷ್ಟವಾಗಿದ್ದ ಸಿನಿಮಾಗಳನ್ನ ಜ್ಞಾಪಿಸಿಕೊಳ್ಳಿ. ಈಗ ನಿಮಗೆ ಅವು ಅಂಥ ವಿಶೇಷವೇನಲ್ಲ ಅನ್ನಿಸಬಹುದು, ಆದರೂ ಅವು ಮನಸ್ಸಿಗೆ ಬಹಳ ಹತ್ತಿರವಾಗಿರುತ್ತವೆ. ಅವು ಶ್ರೇಷ್ಠ ಕಲಾಕೃತಿಗಳೇ ಆಗಬೇಕೆಂದಿಲ್ಲ. ನೋಡಿದಾಗಿನ ನಮ್ಮ ಮನಸ್ಥಿತಿಯೋ, ಜೊತೆಗಿದ್ದ ಗೆಳೆಯರೋ, ಇನ್ಯಾವುದೋ ಕಾರಣಗಳಿಂದಲೋ ಅವು ಸ್ಮರಣೀಯವಾಗಿರುತ್ತವೆ. ನನ್ನ ಬಾಲ್ಯದ ಮೆಚ್ಚಿನ ಹತ್ತು ಚಿತ್ರಗಳನ್ನು ಪಟ್ಟಿಮಾಡಲು ಪ್ರಯತ್ನಿಸಿದ್ದೇನೆ. ಇವೇ ಹತ್ತು ಅತ್ಯಂತ ಪ್ರಮುಖ ಚಿತ್ರಗಳಾ ಗೊತ್ತಿಲ್ಲ, ಈ ಕ್ಷಣದಲ್ಲಿ ಜ್ಞಾಪಕ ಬಂದ ಹತ್ತು ಚಿತ್ರಗಳು ಇವು.
ಧ್ರುವತಾರೆ
ನನಗೆ ನೆನಪಿರುವಂತೆ ನಾನು ನೋಡಿದ ಮೊಟ್ಟಮೊದಲ ಚಿತ್ರ ಇದು. ರಾಜಕುಮಾರ್ ಫೈಟಿಂಗ್ ಮತ್ತು “ಆ ಮೋಡ ಬಾನಲ್ಲಿ ತೇಲಾಡುತಾ” ಹಾಡು ಬಿಟ್ಟರೆ ನನಗೆ ಆ ಚಿತ್ರದಲ್ಲಿ ಬೇರೇನೂ ನೆನಪಿಗೆ ಬರುತ್ತಿಲ್ಲ. ಸಿನಿಮಾ ಅಂದರೇನು ಅಂತ ತಿಳಿಯದ ವಯಸ್ಸಿನಲ್ಲೂ, ಖೇಡಿಗಳಿಗೆ ಏಟು ಬಿದ್ದರೆ ಖುಷಿಯಾಗಿದ್ದು, ಆದರೆ ರಾಜಕುಮಾರ್ ಗೆ ಪೆಟ್ಟು ಬಿದ್ದಾಗ ಬೇಸರವಾಗಿದ್ದು ನೆನೆಸಿಕೊಂಡರೆ ಬಹಳ ಅಚ್ಚರಿಯಾಗುತ್ತದೆ.
ಮುಕದ್ದರ್ ಕಾ ಸಿಕಂದರ್
ಇದು ಬಹುಷಃ ನಾನು ನೋಡಿದ ಮೊದಲ ಹಿಂದಿ ಸಿನಿಮಾ ಇರಬೇಕು. ಅಮಿತಾಭ್ ಬಚ್ಚನ್ ಹಾಡು ಹೇಳುತ್ತಾ ಬೈಕ್ ಓಡಿಸಿಕೊಂಡು ಹೋಗುವ ದೃಶ್ಯ ಅದೆಂಥಾ ಥ್ರಿಲ್ ಕೊಟ್ಟಿತ್ತು ಗೊತ್ತಾ? ಆಗ ಹಿಂದಿ ಬರುತ್ತಿರಲಿಲ್ಲವಾದ ಕಾರಣ ಸುಮಾರು ವರ್ಷಗಳವರೆಗೂ ಆ ಸಿನಿಮಾದ ಹೆಸರನ್ನು ಪ್ರಾಸಬದ್ಧವಾಗಿ “ಮುಕಂದರ್ ಕಾ ಸಿಕಂದರ್” ಅಂತಾನೇ ಹೇಳುತ್ತಿದ್ದೆ!
ಕಮಾಂಡೋ
ಚಿಕ್ಕವನಾಗಿದ್ದಾಗ ನನಗೆ ಇಷ್ಟ ಆಗುತ್ತಿದ್ದದ್ದು ಬರೀ ಆಕ್ಷನ್ ಚಿತ್ರಗಳೇ. ಆಗ ಅರ್ನಾಲ್ಡ್ ಶ್ವಾರ್ಜನೆಗರ್ ನನ್ನ ಆರಾಧ್ಯ ದೈವ. ಅವನು ದೊಡ್ಡ ಮರದ ದಿಮ್ಮಿಗಳನ್ನು ಭುಜದ ಮೇಲೆ ಹೊತ್ತು ತಂದು, ಒಂದೇ ಏಟಿನಲ್ಲಿ ಕೊಡಲಿಯಿಂದ ಸೀಳುವುದನ್ನು ಕಂಡು, ನನಗೆ ಆ ಥರ ಬೈಸೆಪ್ಸ್ ಬರುವುದು ಯಾವಾಗ ಅಂತ ಕನ್ನಡಿ ನೋಡಿಕೊಳ್ಳುತ್ತಿದ್ದ ದಿನಗಳು ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ಮೆಕನಾಸ್ ಗೋಲ್ಡ್
ಚಿನ್ನದ ನಿಧಿಯನ್ನು ಹುಡುಕಿಕೊಂಡು ಹೋಗುವ ಗುಂಪಿನ ಅಡ್ವೆಂಚರ್ ಕಥೆ ಹೊಂದಿದ್ದ ಈ ಚಿತ್ರ ನನಗೆ ತುಂಬಾ ಇಷ್ಟವಾಗಿತ್ತು. ಒಂದು ದೃಶ್ಯದಲ್ಲಿ, ಸೂರ್ಯೋದಯದಕ್ಕೆ ಸರಿಯಾಗಿ ಉದ್ದನೆಯ ಕಂಬದಂತಹ ಕಲ್ಲಿನ ನೆರಳು ಚಿನ್ನದ ನಿಧಿಯ ಜಾಗವನ್ನು ತೋರಿಸುತ್ತದೆ. ಆ ನೆರಳು ಬೆಳೆಯುವ ವೇಗ ಜೋರಾಗಿ ಓಡುತ್ತಿರುವ ಕುದುರೆಗಳ ವೇಗಕ್ಕಿಂತಲೂ ಹೆಚ್ಚಿನದ್ದು. ಆ ದೃಶ್ಯವನ್ನು ಕಂಡು ದಂಗಾಗಿದ್ದೆ. ಜೊತೆಗೆ, ನಗ್ನ ದೃಶ್ಯವೊಂದನ್ನು ಮೊಟ್ಟಮೊದಲ ಬಾರಿಗೆ ನೋಡಿದ್ದು ಕೂಡ ಇದೇ ಚಿತ್ರದಲ್ಲಿ!
ಟೆನ್ ಕಮ್ಯಾಂಡ್ಮೆಂಟ್ಸ್
ನನ್ನ ಶಾಲೆಯ ಶಿಕ್ಷಕಿಯೊಬ್ಬರು ಈ ಚಿತ್ರವನ್ನು ತಪ್ಪದೇ ನೋಡಿ ಅಂತ ಎಲ್ಲಾ ವಿದ್ಯಾರ್ಥಿಗಳಿಗೂ ಹೇಳಿದ್ದರು. ತುಂಬಾ ವರ್ಷಗಳ ನಂತರ ಗೊತ್ತಾದದ್ದು ಅವರು ತಮ್ಮ ಧರ್ಮಪ್ರಚಾರಕ್ಕೋಸ್ಕರ ಹಾಗೆ ಶಿಫಾರಸು ಮಾಡಿದ್ದರು ಅಂತ. ಚಿತ್ರ ನೋಡುವಾಗ ದೇವರ ಪವಾಡದ ಮೇಲೆ ನನ್ನ ಗಮನ ಹೋಗಲೇ ಇಲ್ಲ. ಆದರೆ ಮೋಸೆಸ್ ನಡೆದು ಬರುವಾಗ ಸಮುದ್ರ ಇಬ್ಭಾಗವಾಗುವ ದೃಶ್ಯವಿದೆಯಲ್ಲಾ, ಅದನ್ನು ನೋಡಿ ಸಿನಿಮಾ ಎಂಬ “ಪವಾಡ”ಕ್ಕೆ ಶರಣಾಗಿದ್ದೆ.
ರಾಶೋಮೊನ್
ಯಾವುದೋ ಒಂದು ಶನಿವಾರದಂದು ದೂರದರ್ಶನದಲ್ಲಿ ಈ ಜಪಾನಿ ಸಿನಿಮಾ ಹಾಕಿದ್ದರು. ನೋಡಿದ ತುಂಬಾ ದಿನಗಳವರೆಗೆ ಚಿತ್ರ ತುಂಬಾ ಕಾಡಿಬಿಟ್ಟಿತ್ತು. ಆ ರೀತಿಯ ಸಿನಿಮಾದ ಪರಿಚಯವೇ ಇಲ್ಲದಿದ್ದರಿಂದ ಆ ಅನುಭವವನ್ನು ಹೇಗೆ ವಿವರಿಸುವುದು ಅಂತ ಬಹಳ ವರ್ಷಗಳವರೆಗೆ ಗೊತ್ತಿರಲಿಲ್ಲ. ಧೋ ಎಂದು ಸುರಿಯುವ ಆ ಮಳೆಯ ಚಿತ್ರಣ, ಮತ್ತು ಕಥೆಯನ್ನು ಬೇರೆ ಬೇರೆ ಕೋನಗಳಿಂದ ನಿರೂಪಿಸಿರುವ ವಿಧಾನ, ಈಗಲೂ ಆ ಶನಿವಾರದ ಮಧ್ಯಾಹ್ನವನ್ನು ನೆನಪಿಸುತ್ತದೆ!
ಬಬ್ರುವಾಹನ
ಅರ್ಜುನ ಮತ್ತು ಬಬ್ರುವಾಹನನ ನಡುವಿನ ವಾಗ್ಯುದ್ಧದ ಸೀನು ಬಂದರೆ ಈಗಲೂ ಕಣ್ಣು ಮಿಟುಕಿಸದೆ ನೋಡುತ್ತಾ ಕುಳಿತುಬಿಡುತ್ತೀನಿ. ಮೊದಲ ಸಲ “ಆರಾಧಿಸುವೆ ಮದನಾರಿ” ಹಾಡು ನೋಡಿದ್ದಾಗ, ಪ್ರತಿಯೊಂದು ಸಂಗೀತ ವಾದ್ಯವನ್ನು ನುಡಿಸುವಾಗಲೂ ಒಬ್ಬೊಬ್ಬ ರಾಜಕುಮಾರ್ ಬರುವುದನ್ನು ಕಂಡು ಬೆರಗಾಗಿದ್ದೆ. “ಜಾರಿಣಿಯ ಮಗ”, “ನಿಮ್ಮ ಚಿಕ್ಕಪ್ಪ ಚಿಕ್ಕ ಅಪ್ಪನೇ ಹೊರತು, ಇಲ್ಯಾರಿಗೂ ದೊಡ್ಡ ಅಪ್ಪನಲ್ಲ” ಈ ಡೈಲಾಗುಗಳನ್ನೆಲ್ಲಾ ಕೇಳುತ್ತಿದ್ದರೆ ಈಗಲೂ ಮೈ ಜುಮ್ಮೆನ್ನುತ್ತದೆ.
ಗಾಯತ್ರಿ ಮದುವೆ
ನಿಮಗೆ ನೆನಪಿರಬಹುದು. ಟಿವಿ ಬಂದ ಹೊಸತರಲ್ಲಿ ಎಲ್ಲಾ ಊರುಗಳಲ್ಲೂ ಕನ್ನಡ ಚಾನೆಲ್ ಪ್ರಸಾರ ಆಗುತ್ತಿರಲಿಲ್ಲ. ರಾಜ್ಯದಾದ್ಯಂತ ಕನ್ನಡ ದೂರದರ್ಶನ ಪ್ರಸಾರ ಶುರುವಾದ ಮೊದಲ ವಾರ, ಭಾನುವಾರ ಸಂಜೆ ನಾಲ್ಕು ಗಂಟೆಗೆ ಹಾಕಿದ್ದ ಚಿತ್ರ ಇದು. ಅನಂತ್ ನಾಗ್ ದ್ವಿಪಾತ್ರದಲ್ಲಿ ನಟಿಸಿದ್ದ ಈ ಚಿತ್ರ ಅದೆಷ್ಟು ಖುಷಿ ಕೊಟ್ಟಿತ್ತು ಆವಾಗ!
ಶರಪಂಜರ
“ಕಾವೇರಿ ನಾ ಬಂದೆ, ನಾ ನೋಡಿದೆ, ನಾ ಗೆದ್ದೆ” ಅನ್ನುವ ಸಾಲುಗಳು ಅದೆಷ್ಟೋ ತಿಂಗಳುಗಳ ಕಾಲ ನನ್ನನ್ನು ಬೆಚ್ಚಿಬೇಳಿಸಿದ್ದವು. ಹಾಗೆ ನೋಡಿದರೆ ದೃಶ್ಯರೂಪದಲ್ಲಿ ಅಷ್ಟು ಭಯವಾಗುವಂಥದ್ದು ಏನೂ ಇರಲಿಲ್ಲ. ಕೇವಲ ಶಬ್ದದಿಂದ ಎಷ್ಟು ಪರಿಣಾಮಕಾರಿಯಾಗಿ ಹೆದರಿಸಬಹುದು ಅಂತ ಈಗ ಮನವರಿಕೆಯಾಗಿದೆ.
ಲವ್ ಮಾಡಿ ನೋಡು
ಈ ಚಿತ್ರ ನೋಡಿದ ದಿನದಿಂದ “ಎಂತದು ಮಾರಾಯ್ರೇ”, “ಮಂಡೆ ಬಿಸಿ”, “ಭಯಂಕರ ಉಂಟು” ಅಂತ ತಿಂಗಳಾನುಗಟ್ಟಲೆ ಸ್ಕೂಲ್ ಫ್ರೆಂಡ್ಸ್ ಜೊತೆ ಮಾತಾಡಿಕೊಂಡು ನಾವೆಲ್ಲರೂ “ಮಂಗಳೂರು ಮಂಜುನಾಥ” ಆಗಿದ್ದೆವು. ನಮ್ಮ ರಾಜ್ಯದ ಇನ್ನೊಂದು ಭಾಗ, ಅಲ್ಲಿನ ಜನ, ಅವರ ಭಾಷೆಯ ಬಗ್ಗೆ ಪರಿಚಯವೇ ಇಲ್ಲದೆ, ಎಷ್ಟೋ ವರ್ಷ ಅದು ಕೇವಲ ಹಾಸ್ಯದ ವಿಷಯವಾಗಿದ್ದದ್ದು ಮಾತ್ರ ನಿಜಕ್ಕೂ ದಾರುಣ ಪರಿಸ್ಥಿತಿ!
ಸರಿ, ನಿಮ್ಮ ಬಾಲ್ಯದ ಮೆಚ್ಚಿನ ಚಿತ್ರಗಳು ಯಾವುವು?
*****
ಉಪೇ೦ದ್ರರ 'A' ಸಿನೆಮಾ. ನಾನಾವಾಗ ೫ನೆಯೋ ೬ನೆಯೋ ತರಗತಿಯಲ್ಲಿದ್ದೆ.
ಮನೆಯಲ್ಲಿ ಯಾವ ಸಿನೆಮಾ ನೋಡ್ತಾ ಇದ್ದಿ ಎ೦ದು ಕೇಳಿದಾಗ 'A' ಪಿಚ್ಛರ್ ಅ೦ತಾ ಹೇಳಿ ಒದೆ ತಿ೦ದದ್ದು ಇನ್ನೂ ನೆನಪಿದೆ !! 😀
ಸಖತ್
ಎಲ್ಲವು ಅತ್ತ್ಯುತ್ತಮ ಲಿಸ್ಟ್