ಒಂದನೇ ಕ್ಲಾಸಿನಲ್ಲಿ ಮೊದಲ ಬೆಂಚಿನಲ್ಲಿ ಕುಳಿತು ನನ್ನ ಬಳಪವೇ ಉದ್ದವಿದೆ ಎಂದು ಹೇಳುತ್ತಿದ್ದವಳು ನೀನು. ಅಮ್ಮ ಅಪ್ಪನಿಗೆ ಗೊತ್ತಿಲ್ಲದಂತೆಯೇ ಹುಣಸೆ ಹಣ್ಣು ಕದ್ದು, ಕಿಸಿೆಯ ತುಂಬೆಲ್ಲಾ ಹರಡಿಕೊಂಡು ಬರುತ್ತಿದ್ದವಳು ನೀನು. ನಿನಗೆ ಆ ದಿನಗಳು ನೆನಪಿದೆಯೋ ಇಲ್ಲವೋ ನಾಕಾಣೆ. ಆದರೆ ನನ್ನ ಮನದಲ್ಲಿ ಆ ನೆನಪುಗಳು ಇನ್ನೂ ಬೆಚ್ಚಗೆ ಕುಳಿತಿವೆ.
ಮಳೆಗಾಲದಲ್ಲಿ ಜೋರು ಮಳೆ ಬಂದು ಶಾಲೆಯೇ ಬಿದ್ದು ಹೋಗಲಿ ಎಂದು ಕ್ಲಾಸಿನಲ್ಲೆಲ್ಲಾ ಶಾಪ ಹಾಕುತ್ತಿದ್ದ ಕ್ಷಣಗಳನ್ನು ನೆನದರೆ ನಗು ಉಕ್ಕುಕ್ಕಿ ಬರುತ್ತದೆ. ನನ್ನ ಅಕ್ಷರ ದುಂಡಗಿದೆ, ನಿನ್ನ ಅಕ್ಷರ ವಕ್ರವಾಗಿದೆ ಎಂದು ಹೋಲಿಸುತ್ತಿದ್ದಾಗ ಸಿಟ್ಟು ಬರುತ್ತಿದ್ದುದೂ ಸುಳ್ಳಲ್ಲ. ಏಳನೇ ಕ್ಲಾಸನ್ನು ಬಿಟ್ಟು ಬೇರೆ ಕಡೆಗೆ ಹೊರಡುವಾಗ, ನೀನನ್ನ ಮರೀಬೇಡ ಎಂದು ಗಂಗಾ, ಕಾವೇರಿ ನೀರುಗಳು ಕಣ್ಣಲ್ಲಿ ಬುಳುಬುಳನೆ ಹರಿದಿತ್ತು. ಆದರೆ ಅದೆಲ್ಲಾ ಆ ಕ್ಷಣ, ಆ ದಿನಕ್ಕೆ ಘಟಿಸಿದ್ದಷ್ಟೇ. ಕ್ಷಣಿಕ ಅಂತಾರಲ್ಲಾ ಹಾಗೇ.
ನೆಲ್ಲಿಕಾಯಿ ಆಗೋ ಸೀಜನ್ನಿನಲ್ಲಿ ಟೀಚರಿಗೆ ಗೊತ್ತಿಲ್ಲದಂತೆಯೇ ತಿಂದಾಗ, ಅವರಿಗೆ ಹೇಗೋ ಗೊತ್ತಾಗಿ ಹೊರಗೆ ಹೋಗಿ ಉಗಿದು ಬನ್ನಿ ಎಂದು ಅಟ್ಟಿದಾಗ ಅವರ ಮೇಲೆ ಕೋಪ ಉಕ್ಕಿದ್ದು ಅಷ್ಟಿಷ್ಟಲ್ಲ. ಒಂದು ನೆಲ್ಲಿಕಾಯಿ ವೇಸ್ಟ್ ಮಾಡಿದ್ರು ಈ ಟೀಚರ್ರು. ಅಷ್ಟಕ್ಕೂ ನಮಗೆ ಇವರು ನೆಲ್ಲಿಕಾಯಿ ತಂದುಕೊಡುತ್ತಾರಾ? ಎಂದೆಲ್ಲಾ ಸಿಂಡರಿಸಿದ್ದೂ ಇದೆ. ಕೊಟ್ಟಿರೋ ಕಾಪಿ ಪುಸ್ತಕಗಳನ್ನು ಬರೆಯುತ್ತಿದ್ದಾಗೆಲ್ಲಾ ಯಾಕಪ್ಪಾ ಇದೆಲ್ಲಾ ಮಾಡಿಸ್ತಾರೆ? ಎಂದು ಬೇಸರಿಸಿಕೊಳ್ಳುತ್ತಿದ್ದುದು ಉಂಟು. ಗೆಳತಿ ಏಳನೇ ಕ್ಲಾಸಿನಿಂದ ಬಿಟ್ಟು ಹೋದ ಆ ಘಳಿಗೆಯಲ್ಲಿ ಇಬ್ಬರೂ ಅತ್ತಿದ್ದೆವು. ಒಂದಷ್ಟು ದಿನಗಳಲ್ಲಿ ನಮ್ಮ ಸ್ನೇಹವು ಅರಳಿ ನಿಂತಿತ್ತು. ನಾನು ನೀನು ಬೇರೆ ಶಾಲೆಯಾಗುತ್ತಿದ್ದ ದಿನಗಳು ಇನ್ನೂ ಕಣ್ಮುಂದೆ ಸುಳಿದಾಡುತ್ತಿದೆ.
ಅಂದು ಬೆಳಿಗ್ಗೆ ಒಂದು ದಿನ, ನೀವು ಮನೆ ಖಾಲಿ ಮಾಡಿಕೊಂಡು ಬೇರೆ ಯಾವುದೋ ಊರಿಗೆ ಹೋದರಂತೆ ಎಂದು ಅಮ್ಮನು ಬಂದು ತಿಳಿಸಿದಾಗ, ನನ್ನ ಪ್ರೀತಿಯ ಸ್ನೇಹಿತೆಯಾಗಿದ್ದವಳು ನೀನು, ನನಗೆ ಒಂದು ಮಾತನ್ನೂ ಹೇಳದೆಯೇ ಹೋಗಿಬಿಟ್ಟೆಯಾ? ಎಂದು ಕಣ್ಣಂಚಿನಲ್ಲಿ ನೀರು ಜಾರಿತ್ತು. ಅಂದೇ ಕೊನೆ, ಮತ್ತೆ ನೀನೆಂದೂ ಸಿಗಲೇ ಇಲ್ಲ, ನಾವಿಬ್ಬರೂ ಬೆಸ್ಟು ಫ್ರೆಂಡ್ಸು ಎಂದೆಲ್ಲಾ ಹೇಳುತ್ತಿದ್ದವಳು ಇಂದು ಮರೆಯಾಗಿ ಬಿಟ್ಟೆಯಾ? ನಾನು ತುಂಬಾ ಪ್ರಯತ್ನಿಸಿಬಿಟ್ಟೆ, ಭೂಮಿ ದುಂಡಗಿದೆಯಂತೆ ಒಂದಲ್ಲಾ ಒಂದು ದಿನ ಸಿಕ್ಕೇ ಸಿಗುತ್ತೇವೆಂದು ಹಲವು ವಷ೯ಗಳೇ ಹುಡುಕಾಡಿದೆ. ಜಾತ್ರೆಗಳಲ್ಲಿ, ದೊಡ್ಡ ಸಮಾರಂಭಗಳಲ್ಲಿ ಎಲ್ಲಿಯಾದರೂ ಕಾಣುತ್ತೀಯಾ ಎಂದು ಎವೆಯಿಕ್ಕದೆ ಹುಡುಕುತ್ತಿದ್ದೆ.
ನೀನೀಗ ಎಲ್ಲಿ ಇರುವೆ? ಹೇಗೆ ಇರುವೆ? ಎಂಬುದು ಗೊತ್ತಿಲ್ಲ. ನಿನ್ನ ಹೆಸರು ಎಲ್ಲೇ ಕಂಡರೂ ಅದು ನೀನು ಯಾಕೆ ಆಗಿರಬಾರದು ಎಂದೆನಿಸುತ್ತದೆ. ಕ್ರಮೇಣ ಅವಳು ಯಾರೆಂದು ನೋಡುವವರೆಗೂ ಸಮಾಧಾನವಿಲ್ಲ. ಫೇಸ್ ಬುಕ್ ನಲ್ಲಿ ಎಷ್ಟೋ ಬಾರಿ ನಿನ್ನ ಹೆಸರನ್ನು ಹಾಕಿ ಹುಡುಕಿದ್ದೇನೆ. ಊಹುಂ, ನೀನು ಸಿಗಲೇ ಇಲ್ಲ. ನಿನ್ನದೊಂದು ಚಿಕ್ಕ ವಿಳಾಸ ಸಿಕ್ಕಿದ್ದರೆ ಸಾಕಿತ್ತು. ನಿನ್ನ ಫೋನ್ ನಂಬರ್ ಸಿಕ್ಕಿದ್ದರೂ ಸಾಕಿತ್ತು. ಎಲ್ಲಿದ್ದರೂ ಸರಿ, ಒಮ್ಮ ಬಂದು ನೋಡುತ್ತಿದ್ದೆ ನಿನ್ನ. ನನ್ನ ನೆನಪಿದೆಯಾ? ಎಂದು ಕೇಳುತ್ತಿದ್ದೆ. ನೆನಪಿದ್ದರೂ, ನೆನಪಿಲ್ಲದಿದ್ದರೂ ಬಾಲ್ಯದ ನೆನಪುಗಳನೆಲ್ಲಾ ಹರವಿ ನಿನಗೆ ಆ ದಿನಗಳ ನೆನಪು ಮರುಕಳುಹಿಸುವಂತೆ ಮಾಡಿಬಿಡುತ್ತಿದ್ದೆ. ಅಂತಹ ಸುಂದರ ಕ್ಷಣಗಳ ಬರುವಿಕೆಗಾಗಿ ಅಪರಿಚಿತ ಮುಖಗಳನ್ನೂ ಒಮ್ಮೊಮ್ಮೆ ದಿಟ್ಟಿಸಿ ನೋಡುತ್ತೇನೆ. ಅದು ನೀನಾಗಿರಬಹುದು ಎಂಬ ಸಣ್ಣ ಬಯಕೆಯಿಂದ. ಅದು ನೀನಾಗಿರಲು ಸಾಧ್ಯವಿಲ್ಲ ಎಂಬ ಅರಿವು ನನಗಿದೆ. ಆದರೂ ಸಣ್ಣ ಭರವಸೆ. ಇಲ್ಲ, ಸಣ್ಣ ಭರವಸೆಗಿಂತಲೂ ದೊಡ್ಡ ನಿರೀಕ್ಷೆ ಇದೆ. ನೀನು ಸಿಗುತ್ತೀಯ ಎಂದು. ನಾನು ನಿರಾಶಾವಾದಿಯಲ್ಲ. ಎಲ್ಲಾ ಹಂತಗಳಲ್ಲಿಯೂ ಭರವಸೆಗಳೊಂದಿಗೇ ಗುದ್ದಾಡಿ ಬೆಳೆದವಳು ನಾನು.
ಅಂದು ಹೇಗೇಗೋ ಇದ್ದೆವು. ಆದರೆ ಈಗ ಬೆಳೆದು ದೊಡ್ಡವರಾಗಿದ್ದೇವೆ. ದೊಡ್ಡವಳಾಗಿರುವ ನಿನ್ನ ಮುಖವನ್ನು ಒಮ್ಮೆ ನೋಡಲೇ ಏಕು ಎಂಬ ಹಠ ನನ್ನನ್ನು ಆವರಿಸಿಬಿಟ್ಟಿದೆ. ಇಷ್ಟು ದಿನಗಳಲ್ಲಿ ನಿನ್ನನ್ನು ಹುಡುಕಲಾಗಲಿಲ್ಲ ಎಂಬ ಅರಿವಿದೆ. ಆದರೂ ಸೋಲೊಪ್ಪಿಕೊಳ್ಳುವುದಿಲ್ಲ. ನಿನ್ನೊಂದಿಗೆ ಕಳೆದ ಬಾಲ್ಯದ ನೆನಪುಗಳು ಆಗಾಗ ಕಾಡುತ್ತವೆ ಕಣೆ. ಅತಿ ಶೀಘ್ರದಲ್ಲೇ ನೀನು ನನಗೆ ಸಿಗುತ್ತೀಯ. ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆಸುತ್ತಿದ್ದೇನೆ. ನಿನ್ನನ್ನು ಸ್ವಾಗತಿಸಲು. ಅತಿಥಿ ಸ್ಥಾನದಲ್ಲಿ ಕುಳ್ಳಿರಿಸಿ ಸತ್ಕರಿಸಲು. ಬಾಲ್ಯದ ನೆನಪುಗಳನ್ನು ಹರವಲು.
*****
nice one…..
ಆ ಬಾಲ್ಯದ ಗೆಳತಿ ಬೇಗ ಸಿಗಲಿ. ಚೆನ್ನಾಗಿದೆ ಬರಹ
ಚೆನ್ನಾಗಿದೆ.